ಸೋದರ ಸಂಬಂಧಿಯೊಂದಿಗೆ ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿದ್ದಕ್ಕಾಗಿ ವರನೊಬ್ಬ ವಧುವಿಗೆ ಕಪಾಳಮೋಕ್ಷ ಮಾಡಿದ್ದು, ಸ್ಥಳದಲ್ಲೇ ವಧು ಮದುವೆ ಮುರಿದುಕೊಂಡ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ಮದುವೆ ಮುರಿದುಕೊಂಡ ಕೆಲವು ಗಂಟೆಗಳ ಅಂತರದಲ್ಲೇ ನಿಗದಿತ ದಿನಾಂಕ ಮತ್ತು ಸಮಯಕ್ಕೆ ಮತ್ತೊಬ್ಬರನ್ನು ಯುವತಿ ಮದುವೆಯಾಗಿದ್ದಾರೆ.
ತಮಿಳುನಾಡಿನ ಪನ್ರುಟಿಯದ ವಧು ಸ್ನಾತಕೋತ್ತರ ಪದವೀಧರೆ ಮತ್ತು ಚೆನ್ನೈ ಸಂಸ್ಥೆಯೊಂದರಲ್ಲಿ ಹಿರಿಯ ಇಂಜಿನಿಯರ್ ಆಗಿರುವ ಯುವಕರ ಮದುವೆ ನಿಶ್ಚಯವಾಗಿತ್ತು. ನವೆಂಬರ್ 6 ರಂದು ಅವರ ಪೋಷಕರು ಮತ್ತು ಎರಡೂ ಕುಟುಂಬದ ಹಿರಿಯರ ಆಶೀರ್ವಾದದೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜನವರಿ 20 ರಂದು ಮದುವೆ ದಿನಾಂಕ ನಿಗದಿಯಾಗಿತ್ತು. ಆದರೆ, ಮದುವೆಯ ಮುನ್ನ ದಿನದ ಆರತಕ್ಷತೆಯಲ್ಲಿ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ.
ಆರತಕ್ಷತೆಯಲ್ಲಿ ವರ ಮತ್ತು ವಧು ಒಟ್ಟಿಗೆ ಡ್ಯಾನ್ಸ್ ಮಾಡುತ್ತಿದ್ದಾಗ, ವಧುವಿನ ಸೋದರಸಂಬಂಧಿ ಕೂಡ ಸೇರಿಕೊಂಡಿದ್ದಾರೆ. ಸೋದರಸಂಬಂಧಿ ವಧು ಮತ್ತು ವರನ ಭುಜದ ಮೇಲೆ ಕೈಯಿಟ್ಟು ಅವರೊಂದಿಗೆ ನೃತ್ಯ ಮಾಡಲು ಪ್ರಾರಂಭಿಸಿದ್ದಾರೆ. ಇದು ವರನಿಗೆ ಕಿರಿಕಿರಿ ಉಂಟುಮಾಡಿದೆ ಎಂದು ವರದಿಯಾಗಿದೆ. ವರನು ವಧು ಮತ್ತು ಅವಳ ಸೋದರಸಂಬಂಧಿಯನ್ನು ದೂರ ತಳ್ಳಿ, ವಧುವಿನ ಕೆನ್ನೆಗೆ ಎಲ್ಲರ ಮುಂದೆ ಹೊಡೆದಿದ್ದಾರೆ ಎಂದು ವಧುವಿನ ಕುಟುಂಬ ತಿಳಿಸಿದೆ.
ಇದನ್ನೂ ಓದಿ: ಆಂಧ್ರ ಪ್ರದೇಶ: ಠಾಣೆಯಲ್ಲಿ ದಲಿತ ಮಹಿಳೆಯನ್ನು ತೀವ್ರವಾಗಿ ಥಳಿಸಿದ ಪೊಲೀಸರು-ಆರೋಪ
ವರನು ತನ್ನ ಮಗಳಿಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ವಧುವಿನ ತಂದೆ ಕೋಪಗೊಂಡು, ವರ ಮತ್ತು ಆತನ ಕುಟುಂಬವನ್ನು ಸಭಾಂಗಣದಿಂದ ಹೊರಹೋಗುವಂತೆ ಹೇಳಿದ್ದಾರೆ. ಮದುವೆಯನ್ನು ರದ್ದುಗೊಳಿಸುವ ವಧುವಿನ ನಿರ್ಧಾರಕ್ಕೆ ಮನೆಯವರು ಸಹ ಬೆಂಬಲಿಸಿದ್ದಾರೆ. ನಂತರ, ಯುವತಿಯ ಕುಟುಂಬವು ಸಂಬಂಧಿಕರಿಗೆ ಹೇಳಿ ಆಕೆಗೆ ಸೂಕ್ತವಾದ ವರನನ್ನು ಹುಡುಕಿ, ನಿಗದಿತ ದಿನಾಂಕ (ಜನವರಿ 20) ಮತ್ತು ಸಮಯದಲ್ಲಿ ಬೇರೆ ಸ್ಥಳದಲ್ಲಿ ಮದುವೆ ಮಾಡಿದ್ದಾರೆ.
ಇತ್ತ, ವರನು ಪನ್ರುಟಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ವಧುವಿನ ಕುಟುಂಬದ ದೂರು ದಾಖಲಿಸಿ, ಅವರ ಕುಟುಂಬವು ಮದುವೆಯ ಸಿದ್ಧತೆ ಮತ್ತು ಸಮಾರಂಭಗಳಿಗೆ ಖರ್ಚು ಮಾಡಿದ 7 ಲಕ್ಷ ರೂಪಾಯಿ ಹಣವನ್ನು ಪರಿಹಾರವಾಗಿ ಕೇಳಿದ್ದಾರೆ.
“ಸೋದರಸಂಬಂಧಿಯೊಂದಿಗೆ ನೃತ್ಯ ಮಾಡಿದ್ದಕ್ಕಾಗಿ ವರ ವಧುವಿಗೆ ಕಪಾಳಮೋಕ್ಷ ಮಾಡಿದ್ದಾನೆಂದು ಆರೋಪಿಸಲಾಗಿದೆ. ನಂತರ ವಧು ವರನನ್ನು ತಿರಸ್ಕರಿಸಿದ್ದಾರೆ. ಆಕೆಯ ಪೋಷಕರು ಅಕೆಯನ್ನು ಬೇರೆ ಯುವಕನೊಂದಿಗೆ ಮದುವೆ ಮಾಡಿದ್ದಾರೆ. ನಾವು ಎರಡೂ ಕಡೆಯಿಂದ ದೂರುಗಳನ್ನು ಸ್ವೀಕರಿಸಿದ್ದೇವೆ” ಎಂದು ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಎಸ್. ವಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ v/s ಕೇಸರಿ ಶಾಲು: ಮತೀಯ ದ್ವೇಷದ ಹಿಂದೆ ಎಬಿವಿಪಿ ಕೈವಾಡ- ಎಸ್‌ಎಫ್‌ಐ


