Homeಮುಖಪುಟಎಂಡಿಎನ್ ಸಂಸ್ಮರಣಾ ದಿನ; ರೈತರ ಬಾರುಕೋಲಾಗಿದ್ದ ಪ್ರೊಫೆಸರ್

ಎಂಡಿಎನ್ ಸಂಸ್ಮರಣಾ ದಿನ; ರೈತರ ಬಾರುಕೋಲಾಗಿದ್ದ ಪ್ರೊಫೆಸರ್

- Advertisement -
- Advertisement -

ಪ್ರೊ. ನಂಜುಂಡಸ್ವಾಮಿಯವರು ರೈತ ಸಂಘದ ಸಾರಥ್ಯ ವಹಿಸಿದ ಮೇಲೆ ರೈತ ಸಮೂಹಕ್ಕೆ ಭೀಮಬಲ ಬಂದಂತಾಯ್ತು. ಪ್ರೊಫೆಸರ್ ಜಾರಿ ಮಾಡುತ್ತಿದ್ದ ಒಂದೊಂದೇ ಕಾರ್ಯಕ್ರಮಗಳು ರೈತರನ್ನು ಸೆಟೆದು ನಿಲ್ಲಿಸಿದವು. ಆವರೆಗೂ ದರ್ಪದಿಂದ ನಡೆದುಕೊಳ್ಳುತ್ತಿದ್ದ ಅಧಿಕಾರಿಗಳು ಹಸಿರುಟವಲ್ ನೋಡಿದ ಕೂಡಲೇ ಅಳುಕತೊಡಗಿದರು.

ಅಧಿಕಾರಿಗಳಿಗೆ ಸರಕಾರ ವಾಹನ ಕೊಟ್ಟಿರುವುದು ಸರಕಾರದ ಕೆಲಸ ಮಾಡಲು. ಅದನ್ನ ಮರೆತ ಅಧಿಕಾರಿಗಳು ತಮ್ಮ ಕೌಟುಂಬಿಕ ಕೆಲಸಗಳಿಗಾಗಿ, ಮದುವೆ ಮೋಜುಗಳಗಾಗಿ ಬಳಸುತ್ತಿದ್ದರು. ಇಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರೊಫೆಸರ್ ರೈತರಿಗೆ ಹೇಳಿದರು.

ಶಿವಮೊಗ್ಗ ಕೊ ಆಪರೆಟಿವ್ ಡೆಪ್ಯೂಟಿ ರಿಜಿಸ್ಟ್ರಾರ್ ಮತ್ತು ಅಸಿಸ್ಟೆಂಟ್ ರಿಜಿಸ್ಟ್ರಾರ್ ಕುಟುಂಬಸಮೇತ ಜೋಗಕ್ಕೆ ಪ್ರವಾಸ ಹೊರಟು, ಮೀನಾಕ್ಷಿ ಭವನದಲ್ಲಿ ತಿಂಡಿ ತಿನ್ನುತ್ತಿದ್ದರು. ಹೊರಗಡೆ ನಿಂತ ಸರ್ಕಾರಿ ವಾಹನದ ತಪಾಸಣೆಯನ್ನು ಪ್ರೊಫೆಸರ್ ಕಳುಹಿಸಿದ್ದ ಕೆ.ಟಿ ಗಂಗಾಧರ್ ಟೀಮು ನಡೆಸುತ್ತಿತ್ತು. ಅಧಿಕಾರಿಗಳು ಮತ್ತವರ ಮನೆಯವರು ಹೊರ ಬಂದಾಗ ಸರ್ಕಾರಿ ವಾಹನವನ್ನು ರಜಾ ದಿನಗಳಲ್ಲಿ ತೆಗೆದುಕೊಂಡು ಹೋಗಿರುವುದಕ್ಕೆ ದಾಖಲೆ ಕೇಳಿದರು. ಅಧಿಕಾರಿಗಳು ತಬ್ಬಿಬ್ಬಾದಾಗ ಪೊಲೀಸರನ್ನು ಕರೆಸಿ ಕೇಸುಹಾಕಿಸಿದರು. ಇಂತಹ ಘಟನೆಗಳಿಂದ ರಾಜ್ಯಾದ್ಯಂತ ಅಧಿಕಾರಿಗಳು ರೈತ ಸಂಘಕ್ಕೆ ಹೆದರತೊಡಗಿದರು.

ರೈತರ ಆಸ್ತಿಪಾಸ್ತಿಯನ್ನು ಜಪ್ತಿ ಮಾಡಿದರೆ ಮರು ಜಪ್ತಿ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದ ಪ್ರೊಫೆಸರ್ ಹೇಳಿಕೆಯನ್ನ ಧಿಕ್ಕರಿಸಿ ಶಿವಮೊಗ್ಗದ ಎ.ಸಿ ಅನಿತಾ ಕೌರ್ ಎಂಬುವವರು ಹೊನ್ನಟ್ಟಿ ಹೊಸೂರು ಎಂಬ ಹಳ್ಳಿಗೆ ನುಗ್ಗಿ ರೈತನೊಬ್ಬನ ಮನೆ ಜಪ್ತಿ ಮಾಡಿದ್ದರು. ಈ ಸುದ್ದಿ ಗೊತ್ತಾದಕೂಡಲೇ ಪ್ರೊಫೆಸರ್ ಮತ್ತು ಸುಂದರೇಶ್ ಹಾಗೂ ಗಂಗಾಧರ್ ಜೊತೆ ಸ್ಥಳಕ್ಕೆ ಹೋದಾಗ ಎ.ಸಿ ಭದ್ರಾವತಿಗೆ ಹೋಗಿ ತಹಸಿಲ್ದಾರ್ ಆಫೀಸಿನಲ್ಲಿ ಕುಳಿತಿದ್ದರು. ಅಲ್ಲಿಗೆ ದಾಳಿಯಿಟ್ಟ ಪ್ರೊಫೆಸರ್ ಯಾಕೆ ಜಪ್ತಿ ಮಾಡಿದ್ದೀರಿ ಎಂದು ಕೇಳಿದರು? ಅಧಿಕಾರಿಯ ದರ್ಪ ಹೊರಬಂದಿತು. ರೈತನ ಮನೆ ಜಪ್ತಿ ಮಾಡಬೇಕಾದರೆ, ಯಾವಯಾವ ಪದಾರ್ಥ ಮಾಡಬೇಕು ಯಾವುದನ್ನು ಮಾಡಬಾರದು ಅಂತ ನಿಮಗೆ ಗೊತ್ತಿದೆಯಾ? ಸೈಕಲ್ಲು, ಪಾತ್ರೆ, ಹಂಡೆನೂ ಜಪ್ತಿ ಮಾಡಿದ್ದೀರಿ. ಹಂಡೆ ಅಂದ್ರೇನೂ ಗೊತ್ತಾ? ರೈತ ದಿನನಿತ್ಯ ಉಪಯೋಗಿಸೊ ಪದಾರ್ಥ ಜಪ್ತಿ ಮಾಡಂಗಿಲ್ಲ ಗೊತ್ತ? ಯಾರು ನೀವು?

“ನಾನು ಅಸಿಸ್ಟೆಂಟ್ ಕಮೀಷನರ್”

“ಹಾಗಂತ ನಾನು ನಂಬೋದಕ್ಕೆ ಏನಾದ್ರೂ ದಾಖಲೆ ಇದೆಯಾ”

“!?”

“ಪೂಲನ್ ದೇವಿ ತರ ಯಾಕಿರಬಾರದು ನೀವು”

“ರೈತ ಸಂಘದೊರು ನಿಮ್ಮನೀಗ ಅರೆಸ್ಟು ಮಾಡಿದ್ದಾರೆ”

ಪ್ರೊಫೆಸರ್ ಹಾಗೆಂದ ಕೂಡಲೇ ರೈತರು ಸುತ್ತುವರಿದರು. ಅನಿತಾ ಕೌರ್ ಪೊಲೀಸರಿಗೆ ಫೋನ್ ಮಾಡಲು ಕೈ ಹಾಕಿದಾಗ, ರೈತನೊಬ್ಬ ಪಟ್ಟಂತ ಟೆಲಿಫೋನ್ ವೈರ್ ಕಟ್ ಮಾಡಿದ. ಹೆಣ್ಣುಮಗಳು ಅಂತ ಸುಮ್ಮನೆ ಬಿಟ್ಟಿದ್ದೀನಿ, ಈಗ ನೀವು ಹೋಗಬಹುದು ಎಂದರು ಪ್ರೊಫೆಸರ್. ಈ ಘಟನೆಯಿಂದ ತತ್ತರಿಸಿಹೋದ ಅನಿತಾ ಕೌರ್ ಮುಂದೆ ಒಳ್ಳೆ ಅಧಿಕಾರಿಯಾದರು.

ಲೋಕಾಯುಕ್ತರು ಸರಕಾರದಿಂದ ನೇಮಕಗೊಂಡು ಮಾಡುವ ಕೆಲಸವನ್ನ ಪ್ರೊಫೆಸರ್ ಎಂದೋ ಮಾಡಿದ್ದರು. ರೈತರಿಂದ ಅಧಿಕಾರಿಗಳು ಲಂಚ ತೆಗೆದುಕೊಳ್ಳಬೇಕಾದರೆ, ಸುತ್ತಮುತ್ತಲೂ ನೋಡಬೇಕಾಗಿತ್ತು. ಆದರೂ ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ನಾಲ್ಕು ಸಾವಿರ ರೂ ಲಂಚ ತೆಗೆದುಕೊಂಡು ದೇವರ ಧ್ಯಾನದಲ್ಲಿ ಕುಳಿತಿದ್ದ. ಆಗ ಪ್ರೊಫೆಸರ್ ಪ್ರತ್ಯಕ್ಷವಾಗಿ ಎದುರು ನಿಂತು ಎಲ್ಲಿ ದುಡ್ಡು ಎಂದರು. ಅಧಿಕಾರಿ ಬಾಕಿ ಕೊಡುವವನಂತೆ ನಿಷ್ಠೆಯಿಂದ, ಜೇಬಿನಿಂದ ತೆಗೆದು ಟೇಬಲ್ ಮೇಲಿಟ್ಟು, ತಗಳಿ ಸಾರ್ ತಗಳಿ, ನಿಮ್ಮ ದುಡ್ಡು ನನಿಗ್ಯಾಕೆ ಬೇಕು ಎಂದ. ಎಂದೂ ನಗದ ಪ್ರೊಫೆಸರ್ ತುಟಿಯಂಚಿನಲ್ಲಿ ನಗುವಿತ್ತು!

ಭದ್ರಾವತಿಯ ಪಕ್ಕದ ತಳ್ಳಿಕಟ್ಟೆಯಲ್ಲಿ ಡಿ.ಸಿ.ಸಿ ಬ್ಯಾಂಕಿನ ಸಾಲ ವಸೂಲಾತಿ ಅಧಿಕಾರಿಯೊಬ್ಬ 5 ಚೀಲ ಭತ್ತವನ್ನು ರೈತನ ಮನೆಯಿಂದ ಜಪ್ತಿ ಮಾಡಿದ್ದ. ಅಲ್ಲಿಗೆ ಪ್ರೊಫೆಸರ್, ಗಂಗಾಧರ್ ಜೊತೆ ದಾಳಿಯಿಟ್ಟರು. ಬ್ಯಾಂಕ್ ಸೇಲಾಫೀಸರಾದ ಅಯ್ಯಂಗಾರರು ಸಾಹಸ ಮಾಡಿದ ಗತ್ತಿನಲ್ಲಿ ಜಪ್ತಿ ಮಾಲಿನ ಹತ್ತಿರ ನಿಂತಿದ್ದರು. “ನೀವೇನಾ ಜಪ್ತಿ ಮಾಡಿದ್ದು” ಎಂದು ಕೇಳಿದರು ಪೊಫೆಸರ್. ಅಯ್ಯಂಗಾರರು “ಹೌದು” ಎಂದರು. ಪ್ರೊಫೆಸರ್ ಅಯ್ಯಂಗಾರರ ಕೆನ್ನೆಗೆ ಕೈಬೀಸಿದ ಬಿಸಿಗೆ ಕನ್ನಡಕ ಪಕ್ಕದಲ್ಲಿದ್ದ ಸ್ಕೂಲಿನ ಛಾವಣಿ ಮೇಲೆ ಹೋಗಿ ಬಿತ್ತು. ಅಯ್ಯಂಗಾರ್ ಕಣ್ಣಿಗೆ ಕತ್ತಲಾವರಿಸಿದಂತಾಯ್ತು. ಕನ್ನಡಕ ತರಿಸಿಕೊಟ್ಟ ಪ್ರೊಫೆಸರ್ ಇನ್ನ ಮುಂದೆ ಇಂತಹ ಕೆಲಸ ಮಾಡಬಾರದು ಎಂದು ಎಚ್ಚರಿಸಿದರು. ಆಯ್ಯಂಗಾರರು ಯಾವ ಕೇಸನ್ನು ಹಾಕದೆ ಸುಮ್ಮನಾದರು.

ರಾಮಕೃಷ್ಣ ಹೆಗಡೆ

ಜನತಾ ದಳ ಅಧಿಕಾರಕ್ಕೆ ಬಂದರೂ ರೈತ ಚಳವಳಿ ನಿಲ್ಲಲಿಲ್ಲ. ಮುಖ್ಯಮಂತ್ರಿಯನ್ನೆ ಕಂಬಕ್ಕೆ ಕಟ್ಟಿ ಹೊಡೆಯಲು ಪ್ರೊಫೆಸರ್ ಕರೆಕೊಟ್ಟರು. ಅಳುಕಿದ ರಾಮಕೃಷ್ಣ ಹೆಗಡೆಯವರು ರೈತ ನಾಯಕರನ್ನು ಮಾತಿಗೆ ಕರೆದರು. ಪ್ರೊಫೆಸರ್ ಎದುರು ಕುಳಿತು ಮಾತನಾಡಲು ಹೆದರಿದ ಹೆಗಡೆ, ಚಂದ್ರಪ್ರಭಾ ಅರಸು ಜೊತೆ ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಕಳಿಸಿಕೊಟ್ಟು ತಾವು ತಪ್ಪಿಸಿಕೊಂಡರು. ಪ್ರೊಫೆಸರ್, ಚಂದ್ರಪ್ರಭಾ ಅರಸುರನ್ನು ಕರೆದು “ಬಾರಮ್ಮ ನಿಮ್ಮ ತಂದೆ ರೈತರ ಬಗ್ಗೆ ತುಂಬಾ ಕಾಳಜಿ ಇಟ್ಟುಕೊಂಡಿದ್ರು. ನಿಮಗೆಷ್ಟು ಕಾಳಜಿ ಇದೆಯೊ ಗೊತ್ತಿಲ್ಲ. ಇರಲಿ ಕರ್ನಾಟಕ ಸರ್ಕಾರದ ಕಾರಕೂನರೇ ಬನ್ನಿ ಇಲ್ಲಿ” ಎಂದರು. ಮುಖ್ಯ ಕಾರ್ಯದರ್ಶಿ ಹೆದರಿಕೊಂಡು ಹತ್ತಿರ ಬಂದರು. “ಬರಕೊಳಿ ನಾನೇಳದನ್ನ” ಎಂದರು. ಮುಖ್ಯ ಕಾರ್ಯದರ್ಶಿ ಹೆದರಿಕೊಂಡೇ ಪ್ರೊಫೆಸರ್ ಹೇಳಿದನ್ನ ಬರೆದುಕೊಂಡರು.

ಶಿವಮೊಗ್ಗದ ಜಡ್ಜ್ ಒಬ್ಬರು ಭ್ರಷ್ಟರಾಗಿದ್ದಾರೆ. ಇವರಿಂದ ಯಾರಿಗೂ ಸರಿಯಾದ ನ್ಯಾಯ ಸಿಗುವುದಿಲ್ಲವೆಂದು ಕರಪತ್ರ ತೂರಿ ಪ್ರತಿಭಟಿಸಿದರು. ರೈತರು ಅರೆಸ್ಟಾದರು. ಆದರೆ ಅವರ ಪರ ವಾದಿಸಿ ಬಿಡಿಸಿಕೊಳ್ಳುವ ಧೈರ್ಯವನ್ನ ಯಾವ ವಕೀಲರೂ ಮಾಡಲಿಲ್ಲ. ಪ್ರೊಫೆಸರ್ ತಮ್ಮ ಕರಿಕೋಟನ್ನು ರೆಡಿಮಾಡಿಕೊಳ್ಳುವಷ್ಟರಲ್ಲಿ ರೈತ ಹೋರಾಟಗಾರ ವಕೀಲ ರವಿವರ್ಮ ಕುಮಾರ್ ಮತ್ತು ಎಸ್.ಆರ್ ನಾಯಕ್ ಬೆಂಗಳೂರಿಂದ ಶಿವಮೊಗ್ಗಕ್ಕೆ ಬಂದರು. ಅದೊಂದು ಅಪರೂಪದ ಪ್ರಸಂಗವಾಗಿ ಶಿವಮೊಗ್ಗದ ನ್ಯಾಯಾಲಯ ವಕೀಲರು ಮತ್ತು ರೈತರಿಂದ ತುಂಬಿ ಹೋಗಿತ್ತು. ಶಿವಮೊಗ್ಗದ ವಕೀಲರು ಅಸಹಾಯಕರಂತೆ ನಿಂತಿದ್ದರು. ಅಂತೂ ರೈತರ ಬಿಡುಗಡೆ ರೈತ ವಕೀಲರಿಂದಲೇ ನಡೆಯಿತು.

ಇಂತದೇ ಒಂದು ಪ್ರಕರಣದಲ್ಲಿ ಬೆಂಗಳೂರಿನ ಕೋರ್ಟೊಂದರಲ್ಲಿ ಗೋವಿಂದಭಟ್ಟ ಎಂಬ ಜಡ್ಜ್ ಲಂಚ ಪಡೆಯುತ್ತಾರೆಂದು ಕರಪತ್ರ ಹೊರಡಿಸಲಾಯಿತು. ಸಮಾಜವಾದಿ ಯುವ ಜನ ಸಭಾದ ಯುವಕರು ಕೋರ್ಟ್ ಆವರಣದಲ್ಲೇ ಕರಪತ್ರ ಚೆಲ್ಲಿ ಪ್ರತಿಭಟಿಸಿದರು ಮತ್ತು ಅರೆಸ್ಟಾದರು. ಜಡ್ಜ್ ವಿರುದ್ಧವೇ ಪ್ರತಿಭಟಿಸಿದವರ ಪರ ಯಾವ ವಕೀಲರೂ ಬರಲಿಲ್ಲ. ಆಗ ಪ್ರೊಫೆಸರ್ ಕರಿಕೋಟಿನೊಂದಿಗೆ ಕೋರ್ಟಿಗೆ ಬಂದು ಕುಳಿತರು. ಕೋರ್ಟಿನ ಸಿಬ್ಬಂದಿ ಬಂದು “ಸಾರ್‌ಸಾರ್ ಕಾಲಮೇಲೆ ಕಾಲು ಹಾಕಿ ಕೂರಬಾರ್ದು” ಎಂದ. ಆ ಥರ ಕಾನೂನೆಲ್ಲಿದೆ? ಎಂದು ಪ್ರೊ ಅವರನ್ನ ತೀಕ್ಷ್ಣವಾಗಿ ನೋಡಿದರು. ಆತ ಆ ದೃಷ್ಟಿ ಎದುರಿಸಲಾಗದೆ ಸುಮ್ಮನೆ ಹೋದ. ಪ್ರೊಫೆಸರ್ ಪ್ರತಿಭಟನಾಕಾರರನ್ನ ಬಿಡಿಸಿ ತಂದರು.

ಶಿಕಾರಿಪುರದ ಬಳಿ ಜಯಂತಿ ಗ್ರಾಮದಲ್ಲಿ ಬಡವರ ಭೂಮಿಗೆ ನೀಲಗಿರಿ ನೆಟ್ಟ ಸರಕಾರ ಅವರು ಒಕ್ಕಲೇಳುವಂತೆ ಮಾಡಿತ್ತು. ಇದನ್ನ ಕೇಳಿ ಸಿಟ್ಟಾದ ಪ್ರೊಫೆಸರ್ ಸುಂದರೇಶ್, ಷಡಕ್ಷರಪ್ಪ, ಬಸವರಾಜಪ್ಪ, ಗಂಗಾಧರ್ ಜೊತೆ ಹೋಗಿ ನೀಲಗಿರಿ ಸಸಿಗಳನ್ನ ಕಿತ್ತು ಎಸೆದರು. ಅವರನ್ನೆಲ್ಲಾ ಅರೆಸ್ಟು ಮಾಡಿದ ಪೊಲೀಸರು ಶಿಕಾರಿಪುರದ ಕೋರ್ಟಿಗೆ ತಂದರು. ತಪ್ಪನ್ನ ಒಪ್ಪಿಕೊಳ್ಳಬೇಕು, ಶಿಕ್ಷೆಗೆ ರೆಡಿಯಾಗಿ ಜೈಲಿಗೆ ಹೋಗಬೇಕು, ಯಾವುದಕ್ಕೂ ಹೆದರಬಾರದೆಂಬುದು ಪ್ರೊಫೆಸರ್ ಸಿದ್ಧಾಂತವಾಗಿತ್ತು. ಹಾಗೆ ಶಿಕಾರಿಪುರದ ಕೋರ್ಟಿಗೆ ಬಂದಾಗ ಒಬ್ಬ ಓಡಿ ಬಂದು “ನಿಮ್ಮ ಚಪ್ಪಲನ್ನ ಕೋರ್ಟಿನ ಹೊರಗೆ ಬಿಟ್ಟು ಬನ್ನಿ” ಎಂದ ಕೂಡಲೇ ಪ್ರೊಫೆಸರ್ “ನಿಮ್ಮ ಜಡ್ಜುಗಳು ಮೊದಲು ಶೂ ಬಿಟ್ಟು ಬರಲಿ, ಅದರಲ್ಲಿರೊ ಕಾಯಿಲೆ ನಮಗೆ ಹರಡೋದು ಬೇಡ” ಎಂದು ಹೇಳಿ ಕಳಿಸಿದರು.

ಪ್ರೊಫೆಸರ್ ಯಾವುದೇ ಚಳವಳಿಯನ್ನ ಕೈಗೆತ್ತಿಕೊಳ್ಳುವ ಮುನ್ನ ರೈತ ಸಂಘದ ಯುವ ನಾಯಕರನ್ನ ಕೂರಿಸಿಕೊಂಡು ಚಳವಳಿಗೆ ಏನಾದರೂ ಕಾನೂನು ತೊಡಕುಗಳಿವೆಯೆ, ಇದ್ದರೆ ಯಾವ ತರದ ಕೇಸು ಬೀಳುತ್ತವೆ, ಆಗ ಏನು ಮಾಡಬೇಕೆಂದು ಖಚಿತವಾಗಿ ಚರ್ಚಿಸಿ, ಆನಂತರವೇ ಚಳವಳಿಯನ್ನು ಕೈಗೆತ್ತಿಕೊಳ್ಳುತ್ತಿದ್ದರು. ಅದೇ ರೀತಿ ಶುರುವಾದದ್ದು ಮೀಟರ್ ವಾಪಸಾತಿ ಚಳವಳಿ. ಈ ಕೆ.ಇ.ಬಿಯವರು ಕೆ.ಪಿ.ಸಿಯಿಂದ ವಿದ್ಯುತ್ ಕೊಳ್ಳುತ್ತಿರುವ ದರ, ಮಾರುತ್ತಿರುವ ದರ ಎಷ್ಟು? ಅದರಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಒದಗಿಸುತ್ತಿರುವ ಕರೆಂಟು ಎಷ್ಟು? ಅದಕ್ಕಾಗಿ ಅಳವಡಿಸಿರುವ ಮೀಟರಿನ ಗುಣಮಟ್ಟ ಇದನ್ನೆಲ್ಲಾ ಪರಿಶೀಲಿಸಿ ಮೀಟರ್ ವಾಪಸಾತಿ ಚಳವಳಿ ಕೈಗೆತ್ತಿಕೊಂಡರು. ಬೆಂಗಳೂರು ಕಾವೇರಿ ಭವನದ ಎದುರು ಚಳವಳಿ ಆರಂಭವಾಯ್ತು. ಆಗ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಮಾತಿಗೆ ಕರೆದರು. ಅವರು ಕೊಡಬಹುದಾದ ಉತ್ತರವನ್ನು ಮೊದಲೇ ಗ್ರಹಿಸಿದ್ದ ಪ್ರೊಫೆಸರ್, ’ನಾನು ಬರಲ್ಲ, ಆತನ ಕೈಲಿ ಏನೂ ಸಾಧ್ಯವಿಲ್ಲ. ನೀವೆ ಯಾರದ್ರು ಹೋಗಿ ಮಾತನಾಡಿ ಬನ್ನಿ’ ಎಂದು ತಿರಸ್ಕರಿಸಿದರು. ಮೀಟರ್ ವಾಪಸಾತಿ ಚಳವಳಿ ಅರಸೀಕೆರೆಯಲ್ಲಿ ಶುರುವಾಯ್ತು. ಉದಯಕುಮಾರ್ ಎಂಬ ಅಧಿಕಾರಿ ರೈತರ ಮೇಲೆ ಕರೆಂಟು ಕದಿಯುವ ಕೇಸು ಜಡಿದಿದ್ದ. ಆತ ಭ್ರಷ್ಟನೆಂದು ಮೊದಲೇ ತಿಳಿದಿದ್ದ ಪ್ರೊಫೆಸರ್ ಅವನ ಕೆನ್ನೆಗೆ ಬಾರಿಸಿದರು. “ನಾವು ಮೀಟರ್ ವಾಪಸ್ ಮಾಡಿದ್ರೆ, ನೀನು ಕರೆಂಟ್ ಕದ್ದ ಕೇಸಾಕ್ತಿಯಾ ಈಡಿಯಟ್” ಎಂದು ಗದರಿ, “ಮೊದಲು ಚಳುವಳಿಯ ಆಶಯವನ್ನ ಸರಿಯಾಗಿ ಅರ್ಥಮಾಡಿಕೊ. ಅದಕ್ಕೂ ಮೊದ್ಲು ಲಂಚ ತಗೋಳದನ್ನ ನಿಲ್ಸು” ಎಂದು ಹೊರಟರು. ಕೆ.ಇ.ಬಿ ಜನ ಭ್ರಷ್ಟ ಅಧಿಕಾರಿ ಪರ ನಿಂತರು. ಪ್ರೊಫೆಸರ್ ಮೇಲೆ ಕೇಸಾಯ್ತು, ಆದರೆ ಸರಕಾರ ಕೇಸನ್ನ ವಾಪಸ್ ಪಡೆಯಿತು!

ತೆಂಗಿನ ಮರಕ್ಕೆ ನುಸಿರೋಗ ಹಬ್ಬತೊಡಗಿತು, ಎಂದಿನಂತೆ ಸರಕಾರ ನಾಟಕವಾಡತೊಡಗಿತು. ಈ ಬಗ್ಗೆ ತಲೆ ಕೆಡಿಸಿಕೊಂಡ ಪ್ರೊಫೆಸರ್ ರೈತ ಸಂಘದ ಮುಖಂಡರನ್ನ ಕರೆಸಿ “ನೀರಾ ಚಳುವಳಿ ಮಾಡಿದರೆ ಹೇಗೆ” ಎಂದು ಯೋಚಿಸಿದರು. ಎಕ್ಸೈಸ್ ವ್ಯಾಪ್ತಿಗೆ ಬರುವುದರಿಂದ, ನೀರಾ ಇಳಿಸಿದರೆ ರೈತರ ಮೇಲೆ ಕೇಸು ಬೀಳುವ ಅಪಾಯ ಕಾಣಿಸಿತು. ಆದ್ದರಿಂದ ಪ್ರೊಫೆಸರ್ ತೆಂಗಿನ ಉತ್ಪನ್ನಗಳನ್ನ ಪಟ್ಟಿ ಮಾಡಿದರು. ನಂತರ 1968ನೇ ಆಕ್ಟ್ ಪ್ರಕಾರ ಎಕ್ಸೈಸ್ ಡ್ಯೂಟಿಗೆ ಸೇರಿಬಿಟ್ಟಿರುವ ತೆಂಗನ್ನು ಆ ಆಕ್ಟ್‌ನಿಂದ ಹೊರಗಿಡುವ ಚಳುವಳಿಯನ್ನ ಕೈಗೆತ್ತಿಕೊಂಡರು. ನೀರಾ ಹೆಂಡ ಆಗುವುದು ಹತ್ತು ಗಂಟೆ ಮೇಲೆ, ಅದಕ್ಕಿಂತ ಮೊದಲು ಎಂಟು ಗಂಟೆಗೆ ಇಳಿಸಿ ಮಾರಬಹುದು ಎಂದು ಹೇಳಿ ನೀರಾ ಚಳವಳಿ ಆರಂಭಿಸಿದರು. ಪ್ರೊಫೆಸರ್ ಅಷ್ಟು ಹೇಳಿದ್ದೆ ತಡ ಮಂಡ್ಯ ಜಿಲ್ಲೆಯ ರೈತರು ನೀರಾ ಇಳಿಸಿ ಮಾರತೊಡಗಿದರು. ಅಷ್ಟರಲ್ಲಿ ಪ್ರೊಫೆಸರ್ ನೀರಾ ವರ್ಕ್‌ಶಾಪ್‌ಗಳನ್ನ ಮಾಡಿ ಅಧ್ಯಯನ ನಡೆಸಿದ್ದರು.

ಎಸ್.ಎಂ ಕೃಷ್ಣ

ಶಿವಮೊಗ್ಗದಲ್ಲಿ ನಾಣಯ್ಯ ಎಂಬ ಸರ್ಕಲ್ ಇನ್‌ಸ್ಪೆಕ್ಟರ್ ಇದ್ದ. ಆತ ಕುದುರೆ ಮೇಲೆ ಕುಳಿತು ತಿರುಗಾಡುತ್ತ, ರಸ್ತೆ ನಿಯಮ ಮೀರಿದವರಿಗೆ ಚಾಟಿಯಿಂದ ಬಾರಿಸಿ ಹೋಗುತ್ತಿದ್ದ. ಶಿವಮೊಗ್ಗದ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರೊಫೆಸರ್ ಗಮನಕ್ಕೆ ಈ ನಾಣಯ್ಯನ ಕೃತ್ಯವನ್ನ ತರಲಾಯ್ತು. ಆಗ ಅಲ್ಲೇ ನಿಂತಿದ್ದ ನಾಣಯ್ಯನಿಗೆ “ನೀನೇನು ಬ್ರಿಟಿಷರ ಸಂತತೀನಾ, ಮಗನೆ.. ಇನ್ನೊಂದು ಸಲ ನಿನ್ನ ಕೈಲಿ ಚಾವಟಿ ಕಂಡ್ರೆ, ನಮ್ಮ ರೈತರು ಅದನ್ನ ಕಿತ್ತುಕೊಂಡು ನಿನಿಗೇ ಬಾರುಸ್ತಾರೆ. ಈ ಆಜ್ಞೆನ ನಾನೀಗಾಗಲೇ ರೈತರಿಗೆ ಜಾರಿ ಮಾಡಿದ್ದಿನಿ” ಎಂದರು. ಮತ್ತೊಬ್ಬ ಇನ್‌ಸ್ಪೆಕ್ಟರ್‌ಗೆ ನೀನು ರೈತರ ತಂಟೆಗೋದ್ರೆ ತಕ್ಕಶಾಸ್ತಿ ಮಾಡ್ತಿನಿ ಎಂದಿದ್ದರು.

ಪೊಲೀಸರಲ್ಲಿದ್ದ ಈ ಆಕ್ರೋಶ ಚಿಕ್ಕಮಗಳೂರಲ್ಲಿ ಪ್ರೊಫೆಸರ್ ಅರೆಸ್ಟಾದಾಗ ವ್ಯಕ್ತವಾಯ್ತು. ಅಲ್ಲಿನ ರೈತನಾಯಕ ಹೆಚ್.ಹೆಚ್ ದೇವರಾಜ್ ಸಮೇತ ಪ್ರೊಫೆಸರ್‌ಅನ್ನು ಅರೆಸ್ಟು ಮಾಡಿದ ಪೊಲೀಸರು, ಅವರನ್ನ ಅಲ್ಲಿಂದ ಕಾರವಾರದ ಜೈಲಿಗೆ ಸಾಗಿಸುವ ವ್ಯವಸ್ಥೆ ಮಾಡಿದರು. ಇದರಲ್ಲಿ ಪ್ರೊಫೆಸರನ್ನು ಕೊಲ್ಲುವ ಸಂಚಿತ್ತು ಎಂಬ ಆರೋಪವಿದೆ. ಜೀಪಿನ ಡ್ರೈವರ್‌ಗೆ ಕುಡಿಸಿ ದಾರಿಯಲ್ಲಿ ಆಕ್ಸಿಡೆಂಟ್ ಮಾಡುವ ಸಂಚು ರವಿವರ್ಮ ಕುಮಾರ್‌ಗೆ ತಿಳಿದು ಇದನ್ನ ತಡೆ ಹಿಡಿಯಲಾಯ್ತು. ಇದೇನಾದರೂ ಸಂಭವಿಸಿದ್ದರೆ ಕರ್ನಾಟಕ ಹಿಂದೆಂದೂ ಕಂಡರಿಯದ ರೈತರ ದಂಗೆಯನ್ನ ಎದುರಿಸಬೇಕಾಗುತ್ತಿತ್ತು. ಪ್ರೊ. ನಂಜುಂಡಸ್ವಾಮಿಯವರ ಕಾನೂನಿನ ವಿದ್ವತ್ತು ಮತ್ತು ಸಮಾಜವಾದಿ ಚಿಂತನೆಗಳು ರೈತ ಸಂಘದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಂಡವು. ಅದರ ಫಲವಾಗಿ ಅನ್ನಕೊಡುವ ರೈತನಿಗೆ ಆತ್ಮವಿಶ್ವಾಸ ತಂದರು. ಅಧಿಕಾರಿಗಳ ಎದುರು ನಡು ಬಗ್ಗಿಸಿ ನಿಂತ ರೈತ ನೆಟ್ಟಗೆ ನಿಲ್ಲುವಂತೆ ಮಾಡಿದರು.

ಬದಲಾದ ಕಾಲಮಾನ ಮತ್ತು ಅರ್ಥವ್ಯವಸ್ಥೆಯಲ್ಲಿ ಎಲ್ಲರಿಗಿಂತ ಕಷ್ಟಕ್ಕೆ ಸಿಕ್ಕಿಕೊಂಡಿರುವವನು ರೈತ. ಯಾಕೊ ರೈತನ ಸಮಸ್ಯೆ ಎಂದೂ ಮುಗಿಯುವಂತೆ ಕಾಣುತ್ತಿಲ್ಲ. ನಂಜುಂಡಸ್ವಾಮಿಯವರನ್ನ ನೆನೆದೂ ಎಲ್ಲರೂ ಒಟ್ಟಾಗದಿದ್ದರೆ ಉಳಿಗಾಲವಿಲ್ಲ ಎನ್ನುವಂತಾಗಿದೆ. ಸರ್ಕಾರದ ಕರ್ಮಚಾರಿಗಳು ಮತ್ತೆ ದರ್ಪ ತೋರತೊಡಗಿದ್ದಾರೆ. ರೈತ ಸಂಘ ಹಲವು ಬಣಗಳಾಗಿ ಒಡೆದು ಹೋಗಿರುವುದು ರಾಜಕಾರಣಿಗಳಿಗೆ ಸಂತಸದ ಸಂಗತಿಯಾಗಿದೆ. ಹಲವು ರೈತ ಮುಖಂಡರಲ್ಲಿ ಪ್ರೊಫೆಸರ್ ಹಂಚಿ ಹೋಗಿರುವುದರಿಂದ ಅವರೆಲ್ಲಾ ಒಟ್ಟು ಸೇರಿದರೆ ಮಾತ್ರ ಅವರು ರೂಪಿಸಿದ ಚಳುವಳಿ ರೈತರನ್ನ ಪೊರೆಯಬಲ್ಲದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.
ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಕರ್ನಾಟಕವನ್ನಾವರಿಸಿದ ರೈತ ಚಳುವಳಿ; ಮತ್ತಷ್ಟು ಸಂಗತಿಗಳು ಮತ್ತು ನೆನಪುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...