Homeಅಂಕಣಗಳುಹೈಕೋರ್ಟ್ ಹಿರಿಯ ವಕೀಲ ಎಸ್.ಬಾಲನ್ ಅವರೊಂದಿಗೆ ಸಂದರ್ಶನ; ಮನುವಾದಕ್ಕೆ ಅಂಬೇಡ್ಕರ್ ಎಂದರೆ ಅಸಹನೆ

ಹೈಕೋರ್ಟ್ ಹಿರಿಯ ವಕೀಲ ಎಸ್.ಬಾಲನ್ ಅವರೊಂದಿಗೆ ಸಂದರ್ಶನ; ಮನುವಾದಕ್ಕೆ ಅಂಬೇಡ್ಕರ್ ಎಂದರೆ ಅಸಹನೆ

- Advertisement -
- Advertisement -

ಗಣರಾಜ್ಯೋತ್ಸವ ದಿನದಂದು ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಧ್ವಜಾರೋಹಣ ವೇಳೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ತೆರವು ಮಾಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ವಿವಾದ ರಾಜ್ಯಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ಕಾನೂನು ಹೋರಾಟಕ್ಕೂ ಕೆಲವರು ಮುಂದಾಗುತ್ತಿದ್ದಾರೆ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿರುವ ಹೈಕೋರ್ಟ್ ಹಿರಿಯ ವಕೀಲರಾಗಿರುವ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಎಸ್.ಬಾಲನ್ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪ್ರಶ್ನೆ: ಸಂವಿಧಾನವನ್ನು ಅಂಗೀಕರಿಸಿದ ದಿನಕ್ಕೆ ಡಾ. ಅಂಬೇಡ್ಕರ್ ಪ್ರಸ್ತುತತೆ ಹೆಚ್ಚಿರುತ್ತದೆ. ಆದರೆ ಗಣರಾಜ್ಯೋತ್ಸವ ದಿನದಂದು ಗಾಂಧಿ ಫೋಟೋ ಮಾತ್ರ ಇಡಬೇಕು ಅನ್ನುವ ಹೈಕೋರ್ಟ್ ಸುತ್ತೋಲೆ ಇದೆ ಅನ್ನಲಾಗುತ್ತಿದೆ.. ಇದು ಹೀಗೆ ಏಕಾಗುತ್ತಿದೆ?

ಬಾಲನ್: 2009ನೇ ಇಸವಿಯಲ್ಲಿ ಹೈಕೋರ್ಟ್ ಒಂದು ಸುತ್ತೋಲೆ ಹೊರಡಿಸಿದೆ. ಆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ದಿನಕರನ್ ಇದ್ದರು. ಆಗ ಇದ್ದ ರಿಜಿಸ್ಟ್ರಾರ್ ಜನರಲ್ ಅವರು ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಆ ಸುತ್ತೋಲೆಯಲ್ಲಿ, ಅಂಬೇಡ್ಕರ್‌ರವರ ಭಾವಚಿತ್ರವನ್ನು ಬಿಟ್ಟು ಬೇರೆ ಯಾರ ಭಾವಚಿತ್ರವೂ ಇರಬಾರದು ಎಂದಿದೆ. 2011ನೇ ಇಸವಿಯಲ್ಲಿ ಮತ್ತೊಂದು ಆದೇಶ ಬರುತ್ತದೆ. ಬೇರೊಬ್ಬರು ರಿಜಿಸ್ಟ್ರಾರ್ ಜನರಲ್ ಇದ್ದರು. ಅಂಬೇಡ್ಕರ್ ಭಾವಚಿತ್ರವನ್ನು ಆಡಳಿತ ಕಚೇರಿಯಲ್ಲಿ ಮಾತ್ರ ಇಡಬೇಕು ಎಂದು ಅವರು ಆದೇಶಿಸಿದ್ದರು.

ನಮ್ಮ ದೇಶಕ್ಕೆ ಗಾಂಧಿ ಹಾಗೂ ಅಂಬೇಡ್ಕರ್ ಎರಡು ಕಣ್ಣುಗಳಿದ್ದಂತೆ. ಮಹಾತ್ಮ ಗಾಂಧೀಜಿಯವರು ಹಿಂದೂ, ಮುಸ್ಲಿಂ, ಕ್ರಿಸ್ತ ಹೀಗೆ ಎಲ್ಲ ಜನಾಂಗಗಳನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡಿದರು. ಅವರು ಫಾದರ್ ಆಫ್ ದಿ ನೇಷನ್. ಹಾಗೆಯೇ ಈ ದೇಶದ ಸಂವಿಧಾನವನ್ನು ಬರೆದಿದ್ದು, ಸಂವಿಧಾನ ರಚನೆಗಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದು, ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಮಹೋನ್ನತವಾದ ಸಂವಿಧಾನದ ಸೃಷ್ಟಿಗೆ ಕಾರಣರಾದವರು ಡಾ.ಬಿ.ಆರ್.ಅಂಬೇಡ್ಕರ್. ಅಷ್ಟು ಮಾತ್ರವಲ್ಲ ಈ ದೇಶದಲ್ಲಿ ಇರುವ ಎಲ್ಲ ಹೆಣ್ಣು ಮಕ್ಕಳಿಗಾಗಿ ದುಡಿದವರು ಅಂಬೇಡ್ಕರ್. ಅದು ಬ್ರಾಹ್ಮಣ ಹೆಣ್ಣುಮಗಳಿರಲಿ, ಬೇರೆ ಯಾವುದೇ ಜಾತಿಯ ಹೆಣ್ಣು ಮಗಳಿರಲಿ- ಆಸ್ತಿಯಲ್ಲಿ ಭಾಗ, ಶಿಕ್ಷಣದ ಹಕ್ಕು ಸೇರಿದಂತೆ ಹಲವಾರು ಸವಲತ್ತುಗಳನ್ನು ಒದಗಿಸಿದ್ದು ಡಾ.ಅಂಬೇಡ್ಕರ್. ಅಷ್ಟು ಮಾತ್ರವಲ್ಲ. ಶೇ.45ರಷ್ಟು ಮೀಸಲಾತಿ ಪಡೆದಿರುವ ಒಬಿಸಿಗಳಿದ್ದಾರೆ. ಅವರಲ್ಲರಿಗೂ ಮೀಸಲಾತಿ ನೀಡಬೇಕೆಂಬುದು ಅಂಬೇಡ್ಕರ್‌ರವರ ಆಶಯವಾಗಿತ್ತು.

ಗಾಂಧಿ ಮತ್ತು ಅಂಬೇಡ್ಕರ್ ಈ ದೇಶದ ಎರಡು ಕಣ್ಣು. ಒಂದು ಕಣ್ಣನ್ನು ಮುಚ್ಚಿ, ಮತ್ತೊಂದು ಕಣ್ಣನ್ನು ಏಕೆ ತೆಗೆದರು ಎಂಬುದೂ ಪ್ರಶ್ನೆಯಾಗುತ್ತದೆ. ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ಪ್ರಕರಣ ಈಗ ವೈರಲ್ ಆಗಿದೆ. ಎಲ್ಲ ಕಡೆ ಈಗ ಹೋರಾಟ ನಡೆಯುತ್ತಿದೆ. ಆದರೆ ಹದಿನೈದು ದಿನಗಳ ಹಿಂದೆ ಮಹಿಳೆಯೊಬ್ಬರು ಮಾತನಾಡಿದ್ದು ವೈರಲ್ ಆಗಿತ್ತು. ಆ ಮಹಿಳೆ, “ಅಂಬೇಡ್ಕರ್‌ರವರಿಗೆ ಚರಿತ್ರೆ ಗೊತ್ತಿಲ್ಲ, ಮ್ಯಾಕ್ಸ್‌ಮುಲ್ಲರ್ ಬರೆದದ್ದನ್ನು ತಪ್ಪಾಗಿ ಓದಿಕೊಂಡು ತಪ್ಪಾಗಿ ಬರೆದಿದ್ದಾರೆ” ಎಂದು ಅಂಬೇಡ್ಕರ್ ಮೇಲೆ ಅಟ್ಯಾಕ್ ಮಾಡಿದ್ದರು. ಕಳೆದ ವರ್ಷ ನ್ಯಾಯಾಧೀಶೆಯೊಬ್ಬರು ಸಾರ್ವಜನಿಕವಾಗಿ ಮಾತನಾಡುತ್ತಾ, “ಅಂಬೇಡ್ಕರ್ ಸರಿಯಿಲ್ಲ, ಅಂಬೇಡ್ಕರ್ ಬರೆದದ್ದು ಸರಿಯಿಲ್ಲ” ಎಂದಿದ್ದರು. ಪುರಿ ಶಂಕರಾಚಾರ್ಯ, “ಅಂಬೇಡ್ಕರ್ ಬರೆದಿರುವ ಸಂವಿಧಾನದಲ್ಲಿ ಹಲವಾರು ತಪ್ಪುಗಳಿವೆ” ಎಂದಿದ್ದರು. “ಈ ದೇಶದಲ್ಲಿ ಅಂಬೇಡ್ಕರ್‌ವಾದ ಬೆಳೆದರೆ ಸಾವರ್ಕರ್, ಹೆಡ್ಗೇವಾರ್, ಗೋಲ್ವಲ್ಕರ್ ತತ್ವಗಳು ಕೆಳಗಡೆ ತಳ್ಳಲ್ಪಡುತ್ತವೆ. ಅಂಬೇಡ್ಕರ್ ತತ್ವ ಬೆಳೆಯಲೇಬಾರದು” ಎಂದು ಮಧ್ಯಪ್ರದೇಶದಲ್ಲಿ ಬ್ರಾಹ್ಮಣ ಸಂಘವು 1984ನೇ ಇಸವಿಯಲ್ಲಿ ನಿರ್ಣಯ ಅಂಗೀಕಾರ ಮಾಡಿತ್ತು. ಅದು ಕೂಡ ಪತ್ರಿಕೆಗಳಲ್ಲಿ ಬಂದಿದೆ.

ಭಾರತದ ಸಂವಿಧಾನ ರಚನೆಯಾದಾಗ ಈ ಸಂವಿಧಾನವನ್ನು ನಾವು ಒಪ್ಪುವುದಿಲ್ಲ ಎಂದು ಆರ್‌ಎಸ್‌ಎಸ್ ಹೇಳಿತ್ತು. ಈ ಸಂವಿಧಾನದಲ್ಲಿ ನಮ್ಮ ದೇಶದ ಬಗ್ಗೆ ಏನೂ ಇಲ್ಲ. ಅದು ಪಶ್ಚಿಮ ದೇಶದ್ದು ಎಂದು ಆರ್‌ಎಸ್‌ಎಸ್ ಪ್ರತಿಪಾದಿಸಿತು. ಅದೇ ಅಭಿಪ್ರಾಯವನ್ನು ’ಬಂಚ್ ಆಫ್ ಥಾಟ್ಸ್’ (ಗೋಲ್ವಲ್ಕರ್ ಕೃತಿ) ಹೇಳುತ್ತದೆ. ಇವತ್ತು ಕೂಡ ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಆರ್‌ಎಸ್‌ಎಸ್‌ನವರು ಹೇಳುತ್ತಿದ್ದಾರೆ. ಸಂಸದ ಅನಂತಕುಮಾರ್ ಹೆಗಡೆ, ’ನಾವು ಗೆದ್ದು ಬಂದಿರೋದೇ ಸಂವಿಧಾನವನ್ನು ಬದಲಾಯಿಸೋಕೆ’ ಎಂದಿದ್ದರು. ಇವರೆಲ್ಲರಿಗೂ ಕೂಡ ಅಂಬೇಡ್ಕರ್ ಮೇಲೆ ಯಾಕೆ ಸಿಟ್ಟು? ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಪ್ರ: ಅಂಬೇಡ್ಕರ್ ಅವರ ಕುರಿತು ಇವರಿಗೆ ಕೋಪ, ಅಸಹನೆ ಯಾಕೆ?

: ಭಾರತದ ಸಂವಿಧಾನದ 17ನೇ ವಿಧಿಯಲ್ಲಿ ’ಅಸ್ಪೃಶ್ಯತೆ ಯಾವ ರೂಪದಲ್ಲಿ ಆಚರಿಸಿದರೂ ಅಪರಾಧ’ ಎಂದು ಅಂಬೇಡ್ಕರ್ ಬರೆದಿದ್ದಾರೆ. ಆದರೆ ಮನುಸ್ಮೃತಿ, ಬ್ರಾಹ್ಮಣವಾದ, ಕೋಮುವಾದ, ಜಾತಿವಾದ, ಹಿಂದುತ್ವವಾದವು ಅಸ್ಪೃಶ್ಯತೆಯನ್ನೇ ಸನಾತನ ಧರ್ಮವೆಂದು ಹೇಳುತ್ತವೆ. ಅಸ್ಪೃಶ್ಯತೆ ದೇವರ ಸೃಷ್ಟಿ ಎನ್ನುತ್ತವೆ. ಅದನ್ನೇ ಶಂಬೂಕನ ಕತೆ, ಏಕಲವ್ಯನ ಕಥೆಗಳು ಹೇಳುತ್ತವೆ. ಭಗವದ್ಗೀತೆಯಲ್ಲಿ ’ಜಾತಿಗಳನ್ನು ಸೃಷ್ಟಿ ಮಾಡಿದ್ದು ನಾನೇ. ಅದರಲ್ಲಿ ಕೀಳು ಜಾತಿ, ಮೇಲು ಜಾತಿ, ಯಾರ್‍ಯಾರಿಗೆ ಏನು ಕೆಲಸ’ ಎಂದೆಲ್ಲ ವ್ಯಾಖ್ಯಾನ ಇದೆ. ಇಡೀ ಬ್ರಾಹ್ಮಣವಾದಕ್ಕೆ, ಮನುವಾದಕ್ಕೆ, ವೇದಗಳ ವಾದಕ್ಕೆ ವಿರೋಧವಾದ ಮಾನವತಾವಾದವನ್ನು ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಕಾಣಬಹುದು. ಹೀಗಾಗಿ ಅಂಬೇಡ್ಕರ್ ಕಂಡರೆ ಇವರಿಗೆ ಕೋಪ.

ಸಂವಿಧಾನದ 25ನೇ ವಿಧಿ- ನಂಬಿಕೆಯ ಸ್ವಾತಂತ್ರ್ಯ (Freedom of Faith) ಕುರಿತು ಹೇಳುತ್ತದೆ. ಯಾವುದೇ ಧರ್ಮದವರಾಗಿರಬಹುದು- they have freedom of faith. Practicing, propagating their faith is the fundamental right ಎಂದು ಅಂಬೇಡ್ಕರ್ ಬರೆದಿದ್ದಾರೆ. ಅದು ಇವರಿಗೆ ಮೆಣಸಿನಕಾಯಿ ಇಟ್ಟಂತೆ ಆಗಿದೆ. 14ನೇ ವಿಧಿ ಸಮಾನತೆಯನ್ನು ಹೇಳುತ್ತದೆ. ಒಂದು ಹೋಟೆಲ್‌ನಲ್ಲಿ ಯಾರಾದರೂ ಟೀ ಕುಡಿಯಬಹುದು, ಊಟ ಮಾಡಬಹುದು. ಆದರೆ ’ದಲಿತರು ಊರ ಹೊರಗಡೆ ಇರಬೇಕು, ಅವರಿಗೆ ಟೀ ಕೊಡಬಾರದು, ದಲಿತರನ್ನು ಹೋಟೆಲ್ ಒಳಗಡೆ ಸೇರಿಸಬಾರದು’ ಎಂಬುದು ಇವರ ತತ್ವ. ಸಮಾನತೆಯನ್ನು ಇವರು ಒಪ್ಪುವುದಿಲ್ಲ. Right to Live with dignity, association, organisation, freedom of speech and expression- ಎಂದು ಸಂವಿಧಾನ ಹೇಳುತ್ತದೆ. ಆದರೆ ಎಲ್ಲರಿಗೂ ಈ ಸ್ವಾತಂತ್ರ್ಯ ಇರಬಾರದು ಎಂದು ಮನುವಾದ ಹೇಳುತ್ತದೆ. ಈ ಬ್ರಾಹ್ಮಣವಾದ ಜನರ ಮೇಲೆ ಅಧಿಕಾರವನ್ನು ಬಯಸುತ್ತದೆಯೇ ಹೊರತು ಜನರಿಂದ ಅಧಿಕಾರವನ್ನು ಬಯಸುವುದಿಲ್ಲ; ಪ್ರಜಾಪ್ರಭುತ್ವವನ್ನು ಬಯಸುವುದಿಲ್ಲ. ಸಮಾನತೆ, ಸಮಾಜವಾದ ತತ್ವಕ್ಕೆ ವಿರೋಧವಾಗಿರುವುದು ಹಿಂದುತ್ವವಾದ. ಅಂಬೇಡ್ಕರ್ ಈ ಹಿಂದುತ್ವವನ್ನು ಪುಡಿಪುಡಿ ಮಾಡಿದರು. ಎಲ್ಲರಿಗೂ ಎಲ್ಲ ಹಕ್ಕು ಎಂದು ಬರೆದರು. ಹೀಗಾಗಿ ದಲಿತರು, ಶೂದ್ರರು ಅಧಿಕಾರ ಹಿಡಿದರು. ಇದರಿಂದಾಗಿ ಇವರು ಅಸಹನೆಯನ್ನು ಹೊರಹಾಕುತ್ತಿದ್ದಾರೆ.

ಅಂಬೇಡ್ಕರ್

ಮಲ್ಲಿಕಾರ್ಜುನ ಗೌಡರು ಅದೇ ತತ್ವದಿಂದ ಬಂದವರಾಗಿದ್ದಾರೆ. ಮಲ್ಲಿಕಾರ್ಜುನ ಗೌಡರಂತೆಯೇ ಬೇರೆಬೇರೆ ರೀತಿಯಲ್ಲಿ ದೇಶದಲ್ಲಿ ಅನೇಕರು ಹೇಳುತ್ತಿದ್ದರೆ. ಮಠಾಧಿಪತಿಗಳು ಅಂಬೇಡ್ಕರ್‌ರಿಗೆ ವಿರೋಧ ವ್ಯಕ್ತಪಡಿಸುತ್ತಾರೆ. ಹಿಂದುತ್ವವಾದಿಗಳು ಯಾರೂ ಅಂಬೇಡ್ಕರ್‌ರವರನ್ನು ಒಪ್ಪಿಕೊಂಡಿಲ್ಲ. ಅಂಬೇಡ್ಕರ್ ಹೇಳಿದ್ರು- “ಇವರು ನಾಲಿಗೆಯಲ್ಲಿ ರಾಮ್ ಅನ್ನುತ್ತಾರೆ. ಕೈಯಲ್ಲಿ ತ್ರಿಶೂಲ್ ಇಟ್ಟಿರುತ್ತಾರೆ. ಇರುವೆಗೆ ಸಕ್ಕರೆ ಕೊಡ್ತಾರೆ. ಆದರೆ ಮನುಷ್ಯರು ನೀರು ಕುಡಿಯಲು ತಡೆಯುತ್ತಾರೆ. ಇವರನ್ನು ನಂಬಬಾರದು” ಎಂದು. “ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲ್ಲ” ಎಂದು ಅಂಬೇಡ್ಕರ್ ಹೇಳಿದರು. ಬ್ರಾಹ್ಮಣತ್ವವನ್ನು ಸಮುದ್ರಕ್ಕೆ ಬಿಸಾಡುವ ಬೌದ್ಧಧಮ್ಮಕ್ಕೆ ಅಂಬೇಡ್ಕರ್ ಸೇರಿದರು. ಮೊದಲ ದುಂಡು ಮೇಜಿನ ಸಭೆಯಲ್ಲಿ, “ದಲಿತರು ಹಿಂದೂಗಳಲ್ಲ. ನಮ್ಮನ್ನು ಹಿಂದೂ ಎಂದು ಕರೆಯಬಾರದು” ಎಂದರು. ಈ ದೇಶದಲ್ಲಿ ಹಿಂದುಳಿದಿದ್ದ ಶೇ.95ರಷ್ಟು ಜನರೂ ಚೆನ್ನಾಗಿರಬೇಕು ಎಂದು ಹೋರಾಟ ಮಾಡಿದರು. ಚಿಂತಿಸಿ, ಬರೆದರು. ಎಲ್ಲರೂ ಚೆನ್ನಾಗಿ ಇರಬೇಕು ಎಂದರೆ ಸಂಪತ್ತು ಸರ್ಕಾರದ ಕೈಯಲ್ಲಿ ಇರಬೇಕು ಎಂದು ಆಶಿಸಿದರು. ಹೀಗಾಗಿ ಈ ಕೋಮುವಾದಿಗಳಿಗೆ, ಜಾತಿವಾದಿಗಳಿಗೆ ಅಂಬೇಡ್ಕರ್ ಅಂದರೆ ಕೋಪ. ಆ ಕೋಪವನ್ನು ಈ ರೀತಿ ವ್ಯಕ್ತಪಡಿಸುತ್ತಾರೆ. ಇದನ್ನು ನಾವು ಖಂಡಿಸಬೇಕು.

ಪ್ರ: ಅಂಬೇಡ್ಕರ್‌ಗೆ ಅವಮಾನ ಮಾಡಿದಾಗ ಕೇವಲ ದಲಿತರು ಹೋರಾಡುತ್ತಾರಲ್ಲ?

: ರಾಯಚೂರಿನಲ್ಲಿ ನಡೆದ ಘಟನೆಯನ್ನು ಖಂಡಿಸಿ ಇಡೀ ರಾಜ್ಯಾದ್ಯಂತ ಎಲ್ಲ ಕಡೆಯೂ ಹೋರಾಟವಾಗುತ್ತಿದೆ. ಆದರೆ ದುಃಖದ ಸಂಗತಿ ಏನೆಂದರೆ- ಅಂಬೇಡ್ಕರ್ ಅವರ ತತ್ವದ ಫಲಾನುಭವಿಗಳಾದ ಒಬಿಸಿಯವರು ಬೀದಿಗೆ ಬರುತ್ತಿಲ್ಲ. ಮೊನ್ನೆ ವಕೀಲರು ಹೋರಾಟ ಮಾಡಿದರು. ಅದರಲ್ಲಿ ಶೇ.95ರಷ್ಟು ವಕೀಲರು ದಲಿತರಾಗಿದ್ದರು. ಕೆಲವರು ಮುಸ್ಲಿಮರಿದ್ದರು. ಶೂದ್ರರು ತುಂಬಾ ಕಡಿಮೆ ಇದ್ದರು. ಅವರು ಏಕೆ ಬೀದಿಗೆ ಬರಲಿಲ್ಲ? ಎಲ್ಲ ರಾಜಕಾರಣಿಗಳು ವಕೀಲರ ಸಂಘಗಳನ್ನು ಮಾಡಿಕೊಂಡಿದ್ದಾರೆ. ಯಾವ ವಕೀಲರ ಸಂಘವೂ ಹೋರಾಟಕ್ಕೆ ಬರಲಿಲ್ಲ ಏಕೆ? ಅಂಬೇಡ್ಕರ್ ಕೇವಲ ದಲಿತ ನಾಯಕರೇ? ಇಲ್ಲ. ಅವರು ಇಡೀ ದೇಶದ ನಾಯಕ. ಇಡೀ ದೇಶಕ್ಕೆ ಕಾನೂನು ಕೊಟ್ಟ ನಾಯಕ. ಈ ಬ್ರಾಹ್ಮಣತ್ವ ಎಷ್ಟು ಮೋಸದಿಂದ ಕೂಡಿದೆ ಎಂಬುದನ್ನು ಸಂಸ್ಕೃತದಲ್ಲಿಯೇ ಓದಿ, ತಿಳಿದು ಜನರಿಗೆ ತಿಳಿಸಿರುವ ನಾಯಕ. ’ಜಾತಿ ನಿರ್ಮೂಲನೆ’, ’ಶೂದ್ರರು ಯಾರು?’ ಈ ಎಲ್ಲ ಕೃತಿಗಳಲ್ಲಿ ಇದನ್ನು ಬರೆದಿದ್ದಾರೆ. ಇದನ್ನು ತಿಳಿದುಕೊಳ್ಳಬೇಕು.

ಪ್ರ: ಅಂಬೇಡ್ಕರ್ ಅವರ ವಿರುದ್ಧದ ಈ ಅಸಹನೆಯ ಮನಸ್ಥಿತಿಯನ್ನು ಹೋಗಲಾಡಿಸಲು, ರಾಯಚೂರಿನಂಥ ಘಟನೆಗಳನ್ನು ತಡೆಯಲು ಕೋರ್ಟ್‌ಗಳು ಏನು ಮಾಡಬಹುದು?

: ಗಾಂಧೀಜಿಯವರ ಫೋಟೋ ಗಾತ್ರದಲ್ಲಿಯೇ ಅಂಬೇಡ್ಕರ್ ಫೋಟೋ ಎಲ್ಲ ನ್ಯಾಯಾಲಯಗಳಲ್ಲಿ ಇರಬೇಕೆಂದು ಸುತ್ತೋಲೆಯನ್ನು ತಕ್ಷಣ ಹೊರಡಿಸಬೇಕು. ದೇಶದ ಏಕತೆ ಬಗ್ಗೆ ನಂಬಿಕೆ ಇದ್ದರೆ ತಕ್ಷಣ ಈ ಕೆಲಸ ಮಾಡಬೇಕು. ಸುತ್ತೋಲೆ ಬರಲಿಲ್ಲವೆಂದರೆ ಮಹಿಳೆಯರು, ಒಬಿಸಿಗಳು, ದಲಿತರು, ಅಲ್ಪಸಂಖ್ಯಾತರು ಒಗ್ಗಟ್ಟಾಗಿ ಹೋರಾಡಬೇಕು. ಫೋಟೋ ಹಾಕುವುದು ಚಾರಿಟಿ ಏನಲ್ಲ, ಇದು ನಮ್ಮ ಜನ್ಮಸಿದ್ಧ ಹಕ್ಕು.

ಪ್ರ: ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದರಾ ಎಂಬಂತಹ ವ್ಯಂಗ್ಯದ ಮಾತುಗಳನ್ನೂ ಸೇರಿಸಿದಂತೆ ಅಂಬೇಡ್ಕರ್ ಅವರ ಅಪಾರ ಕೊಡುಗೆಯನ್ನು ಮರೆಮಾಚುವ ಹುನ್ನಾರ ನಿರಂತರವಾಗಿ ನಡೆಯುತ್ತಿದೆಯಲ್ಲ?

: ನಿಜ ಏನೆಂದು ತಿಳಿಯಬೇಕಾದರೆ ಸಂವಿಧಾನ ರಚನೆಗೆ ಸಂಬಂಧಿಸಿದ ಚರ್ಚೆಗಳನ್ನು ನೋಡಬೇಕಾಗುತ್ತದೆ. ಸಾವಿರಾರು ಪ್ರಶ್ನೆಗಳಿಗೆ ಯಾರು ಉತ್ತರ ಕೊಟ್ಟರು ಎಂದು ತಿಳಿಯಬೇಕು. ಈ ಡಿಬೇಟ್‌ಗಳೆಲ್ಲ ಪುಸ್ತಕ ರೂಪದಲ್ಲಿ ಬಂದಿವೆ. ಬೇರೆಬೇರೆಯವರು ಸಂವಿಧಾನ ಕರಡು ರಚನಾ ಸಮಿತಿಯಲ್ಲಿ ಇದ್ದರು. ಯಾರ್‍ಯಾರು ಎಷ್ಟು ಸಮಯ ಸಂವಿಧಾನ ರಚನೆಯಲ್ಲಿ ತೊಡಗಿಸಿಕೊಂಡಿದ್ದರು, ತಲೆ ಕೆಡಿಸಿಕೊಂಡು ಬರೆದಿದ್ದರು, ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದರು ಎಂಬುದನ್ನು ಗಮನಿಸಬೇಕು. ರಿಟ್ ಅಧಿಕಾರ, ಮೀಸಲಾತಿ- ಇವೆಲ್ಲವೂ ಅಂಬೇಡ್ಕರ್ ಅವರ ಚಿಂತನೆ. ಇದರ ಬಗ್ಗೆ ಹಲವಾರು ಪ್ರಶ್ನೆಗಳು ಬರುತ್ತವೆ. ಅದಕ್ಕೆಲ್ಲ ಉತ್ತರವನ್ನು ಅಂಬೇಡ್ಕರ್ ನೀಡುತ್ತಾರೆ.

ಪ್ರ: ಸಾಂವಿಧಾನಿಕ ಜೀವನ ವಿಧಾನವನ್ನು ರೂಢಿಸಿಕೊಳ್ಳಲು ಸಾಧ್ಯ ಇದೆಯೇ? ಇದರ ಬಗ್ಗೆ ಜನಸಾಮಾನ್ಯರಿಗೆ ತಿಳಿವು ಮೂಡಿಸಲು ಸಾಧ್ಯವೇ? ನಾಗರಿಕ ಸಮಾಜ ಇದರತ್ತ ಹೇಗೆ ಕೆಲಸ ಮಾಡಬೇಕು?

: ಎಷ್ಟು ಒಳ್ಳೆಯ ಸಂವಿಧಾನ ಇದ್ದರೇನು, ಕೆಟ್ಟ ಮನುಷ್ಯರ ಕೈಗೆ ಕಾನೂನು, ಸಂವಿಧಾನ ಹೋದರೆ ಕೆಟ್ಟದ್ದಾಗುತ್ತದೆ. ನೆಹರೂ ಅವರ ಕೈಗೆ ಸಂವಿಧಾನ ಹೋದಾಗ ಅವರು ಸಾರ್ವಜನಿಕ ಸಂಸ್ಥೆಗಳನ್ನು ಕಟ್ಟಿದರು. ಆಸ್ಪತ್ರೆಗಳು, ಯೂನಿವರ್ಸಿಟಿಗಳನ್ನು ನಿರ್ಮಿಸಿದರು. ಯೋಜನಾ ಆಯೋಗ ಕಟ್ಟಿದರು. ಈ ಮೂಲಕ ಈ ದೇಶಕ್ಕೆ ಒಳ್ಳೆಯದು ಮಾಡಿದರು. 2014ರ ನಂತರದಲ್ಲಿ ಇದೇ ಸಂವಿಧಾನದ ಅಡಿಯಲ್ಲಿ ಸಿಎಎ, ನೋಟು ಅಮಾನೀಕರಣ, ಜಿಎಸ್‌ಟಿ, ತ್ರಿವಳಿ ತಲಾಖ್, ದನದ ಮಾಂಸ – ಮತಾಂತರ ನಿಷೇಧ, ದ್ವೇಷ, ಅಪರಾಧ, ಮಾಬ್ ಲಿಂಚಿಂಗ್ – ಇದೆಲ್ಲವೂ ನಡೆಯುತ್ತಿವೆ. ಸಂವಿಧಾನ ಒಳ್ಳೆಯವರ ಕೈಯಲ್ಲಿದ್ದರೆ ಒಳ್ಳೆಯದಾಗುತ್ತದೆ. ಕೆಟ್ಟವರ ಕೈಯಲ್ಲಿದ್ದರೆ ಕೆಟ್ಟದ್ದಾಗುತ್ತದೆ. ಇದೆಲ್ಲವನ್ನೂ ಸರಿಪಡಿಸಬೇಕಾದರೆ ಇಡೀ ದೇಶದ ಎಲ್ಲಾ ಪ್ರದೇಶಗಳಿಗೂ ಅಂಬೇಡ್ಕರ್ (ನೀಲಿ), ಪೆರಿಯಾರ್ (ಕಪ್ಪು), ಮಾರ್ಕ್ಸ್ (ಕೆಂಪು) ತತ್ವಗಳನ್ನು ತೆಗೆದುಕೊಂಡು ಹೋಗಬೇಕು. ಕೆಂಪು, ನೀಲಿ, ಕಪ್ಪು ಬಣ್ಣಗಳು ಒಂದೆಡೆ ಸೇರಬೇಕು. ಶೇ.95ರಷ್ಟು ಜನರಿಗೆ ಅರಿವು ಮೂಡಿಸಬೇಕು. ನಾವು ಸಾಗುವ ದಾರಿಯಲ್ಲಿ ರೌಡಿಸಂ, ಟೆರರಿಸಂ ಮಾಡುತ್ತಾರೆ. ಅದಕ್ಕೆ ಹೆದರಬಾರದು. ಎದೆಗುಂದದೆ ಹೋರಾಡಬೇಕು. ಈ ಬಣ್ಣಗಳು ಮೂರು ಸೇರಿದ ಜಾಗದಲ್ಲಿ ’ಕೇಸರಿ’ಗೆ ಜಾಗವಿಲ್ಲ.

ಮಲ್ಲಿಕಾರ್ಜುನ ಗೌಡ

ಮಲ್ಲಿಕಾರ್ಜುನ ಗೌಡರು ಅಸ್ಪೃಶ್ಯತೆ ಆಚರಿಸಿದ್ದಾರೆ; ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಲಿ

ಅಂಬೇಡ್ಕರ್ ಫೋಟೋ ಇದ್ದರೆ ನಾನು ಬರುವುದಿಲ್ಲ ಎಂಬುದು ಅಸ್ಪೃಶ್ಯತೆಯ ಆಚರಣೆಯ ಭಾಗವಾಗುತ್ತದೆ. ಸಂವಿಧಾನದ ವಿಧಿ 17ರ ಪ್ರಕಾರ ಇದು ಅಪರಾಧ. ಸಾರ್ವಜನಿಕವಾಗಿ ಅಂಬೇಡ್ಕರ್ ಫೋಟೋವನ್ನು ತೆಗೆಯಲು ಹೇಳುವುದು ಎಸ್.ಸಿ-ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆಯ ಉಲ್ಲಂಘನೆ. ಸಾರ್ವಜನಿಕವಾಗಿ ದಲಿತರಿಗೆ ಮಾಡಿದ ಅವಮಾನ. ಜೊತೆಗೆ ಕ್ಷಮೆ ಕೇಳುವುದಾಗಿಯೂ ಮಲ್ಲಿಕಾರ್ಜುನ ಗೌಡರು ಹೇಳಿರುವುದು ಆಡಿಯೊ ಒಂದರಲ್ಲಿ ದಾಖಲಾಗಿದೆ. ಅಂದರೆ ತಮ್ಮ ತಪ್ಪನ್ನು ಅವರು ಒಪ್ಪಿಕೊಂಡಿದ್ದಾರೆ. ಇವರು ತಪ್ಪನ್ನು ಒಪ್ಪಿಕೊಳ್ಳಬೇಕಾಗಿರುವುದು ಕೋರ್ಟ್ ಮುಂದೆ ಹೊರತು ಮತ್ತ್ಯಾರ ಮುಂದೆಯೂ ಅಲ್ಲ. ಅವರ ಮೇಲೆ ಕೇಸ್ ದಾಖಲು ಮಾಡಬೇಕು, ಬಂಧಿಸಬೇಕು, ಕೋರ್ಟ್ ಮುಂದೆ ನಿಲ್ಲಿಸಬೇಕು.

ಪಂಜಾಬ್ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಿಗೆ ಐವತ್ತು ಲಕ್ಷ ರೂ. ಕೊಡಲು ಹೋಗಿ ಕೆಲವರು ಸಿಕ್ಕಿಬಿದ್ದಿದ್ದರು. ನ್ಯಾಯಾಧೀಶರೇ ದುಡ್ಡು ಕೇಳಿದ್ದರೆಂದು ಆಮೇಲೆ ಗೊತ್ತಾಯಿತು. ನ್ಯಾಯಾಧೀಶರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಇವೆಲ್ಲದ್ದಕ್ಕೆ sanction, permission not necessary. ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಮೊಕದ್ದಮೆ ದಾಖಲಾಗಬೇಕು. ಎಸ್‌ಸಿ-ಎಸ್‌ಟಿ ಕಾನೂನು ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು. ಕಾನೂನು ಕ್ರಮ ಜರುಗಿಸದಿದ್ದರೆ ಏನು ಕ್ರಮ ಜರುಗಿಸಬೇಕೆಂದೂ ಕಾನೂನು ಹೇಳುತ್ತದೆ.

ವಿಡಿಯೋ:

ಸಂದರ್ಶಕ: ಯತಿರಾಜ್ ಬ್ಯಾಲಹಳ್ಳಿ


ಇದನ್ನೂ ಓದಿ: ಬಾಬಾಸಾಹೇಬರ ಫೋಟೋ ತೆರವು ಘಟನೆ; ಈ ಅವಮಾನ ಕೊನೆಯದಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...