ಜನವರಿ 30 ಭಾನುವಾರ ನಡುರಾತ್ರಿ ಸರಿಯಾಗಿ 12.40. ಮೆಲ್ಬರ್ನ್‌ನ ರಾಡ್ ಲೇವರ್ ಅರೆನಾ ಅಂತಾರಾಷ್ಟ್ರೀಯ ಟೆನಿಸ್ ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಸಾವಿರಾರು ಜನ ಟೆನಿಸ್ ಪ್ರೇಮಿಗಳು ಕಿಕ್ಕಿರಿದು ತುಂಬಿದ್ದರು. ಇಡೀ ಟೆನಿಸ್ ಜಗತ್ತು ಎಂದೂ ಸಾಕ್ಷಿಯಾಗದ ಒಂದು ಅಪರೂಪದ ಘಟನೆಗೆ ತಾವಿಂದು ಸಾಕ್ಷಿಯಾಗಲಿದ್ದೇವೆ ಎಂದು ಅಲ್ಲಿ ಸೇರಿದ್ದ ಎಷ್ಟು ಜನ ಭಾವಿಸಿದ್ದರೋ! ಟೆನಿಸ್ ಮಾಂತ್ರಿಕ ರಫೇಲ್ ನಡಾಲ್ ಆ ರಾತ್ರಿ ಭರ್ಜರಿ ಗೆಲುವು ಸಾಧಿಸಿದ್ದು, ಶತಮಾನಗಳ ಟೆನಿಸ್ ಲೋಕದ ಇತಿಹಾಸದಲ್ಲೊಂದು ಅಪರೂಪದ ದಾಖಲೆಯಾಗಿ ಉಳಿದುಹೋಯ್ತ. 21ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯನ್ನು ತನ್ನ ಮುಡಿಗೆ ಏರಿಸಿಕೊಳ್ಳುವ ಮೂಲಕ ನಡಾಲ್ ಸಾರ್ವಕಾಲಿಕ ಶ್ರೇಷ್ಠ ಆಟಗಾರನೆಂದು ಹಲವು ವಲಯಗಳಿಂದ ಕರೆಸಿಕೊಂಡು ಹೊಸ ಇತಿಹಾಸ ಬರೆದಿದ್ದಾರೆ.
ಟೂರ್ನಿಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಓಪನ್ 2022 ಫೈನಲ್ ಪಂದ್ಯದಲ್ಲಿ ರಫೇಲ್ ನಡಾಲ್ ಗೆಲ್ಲುತ್ತಾರೆ ಎಂದು ನಡಾಲ್ ಹೊರತುಪಡಿಸಿದರೆ, ಈ ಜಗತ್ತಿನಲ್ಲಿ ಬಹುಶಃ ಬೇರೆ ಯಾರೂ ನಂಬಿರಲಿಕ್ಕಿಲ್ಲ. ಗಾಯದ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಟೆನಿಸ್ ಆಟದಿಂದ ದೂರ ಉಳಿದಿದ್ದ ನಡಾಲ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 35 ವರ್ಷದ ನಡಾಲ್ ಲೆಜೆಂಡರಿ ಆಟಗಾರನೇ ಆಗಿದ್ದರೂ ಅವರ ವಯಸ್ಸು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಟೂರ್ನಿಯ ಆರಂಭಕ್ಕೆ ಮುನ್ನ ರಫೇಲ್ ನಡಾಲ್ ಎರಡನೇ ಸುತ್ತು ದಾಟುವುದೂ ಕಷ್ಟವಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು.

ಆದರೆ, ಟೀಕಾಕಾರರ ಮಾತಿಗೆ ಕಿವಿಗೊಡದ ನಡಾಲ್ ಇಡೀ ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದರು. ಇನ್ನು ಫೈನಲ್ ಪಂದ್ಯದಲ್ಲಿ 25 ವರ್ಷದ ಡ್ಯಾನಿಯಲ್ ಮಾಡ್ವೆಡೇವ್ ವಿರುದ್ಧ ಗೆಲುವು ಸಾಧಿಸಿದ್ದು ಮಾತ್ರ ಅಮೋಘ ಸಾಧನೆ ಎಂದು ಕೊಂಡಾಡಲಾಗುತ್ತಿದೆ. ಪಂದ್ಯದ ಮೊದಲ ಎರಡು ಸೆಟ್ ಸೋತು ಕೊನೆಯ ಮೂರೂ ಸೆಟ್‌ಗಳಲ್ಲಿ ಸತತ ಗೆಲುವು ಸಾಧಿಸುವುದು ಅಷ್ಟು ಸುಲಭದ ಮಾತಲ್ಲ. ಅಂತಹದ್ದೊಂದು ಅಸಾಧ್ಯ ಸಾಧನೆಯ ಮೂಲಕ 21ನೇ ಗ್ರ್ಯಾಂಡ್‌ಸ್ಲಾಮ್ ನಡಾಲ್‌ಗೆ ಒಲಿದಿರುವುದು ವಿಶೇಷ.
ಅದೊಂದು ನಂಬ ಸಾಧ್ಯವಾದ ಗೆಲುವಾಗಿತ್ತು!
ವಿಶ್ವದ ನಂ.2 ಶ್ರೇಯಾಂಕಿತ ಆಟಗಾರ ರಷ್ಯಾದ 25 ವರ್ಷದ ಡ್ಯಾನಿಯಲ್ ಮಾಡ್ವಡೇವ್ ಪ್ರಸ್ತುತ ಟೆನಿಸ್ ಜಗತ್ತಿನ ಅತಿದೊಡ್ಡ ತಾರೆ. ಆತನನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಕಳೆದ ಒಂದು ವರ್ಷದಿಂದ ಅತ್ಯದ್ಭುತ ಪ್ರದರ್ಶನ ತೋರುತ್ತಿರುವ ಮಾಡ್ವಡೇವ್ ತನ್ನ ಮೊದಲನೇ ಗ್ರ್ಯಾಂಡ್‌ಸ್ಲಾಮ್ ಗೆಲುವಿನ ಭರವಸೆಯಲ್ಲಿದ್ದರು. ಆದರೆ, ಅವರಿಗೆ ನಿರಾಸೆ ಕಾದಿತ್ತು.
ಪಂದ್ಯದ ಆರಂಭದಲ್ಲಿ ಭರವಸೆ ಮೂಡಿಸುವಂತೆ ಆಟವಾಡಿದ ಮಾಡ್ವಡೇವ್ ತನ್ನ ಎಂದಿನ ಪವರ್ಫುಲ್ ಸರ್ವ್ ಮತ್ತು ಫೋರ್‌ಹ್ಯಾಂಡ್, ಬ್ಯಾಕ್‌ಹ್ಯಾಂಡ್ ಶಾಟ್‌ಗಳಿಂದ ನಡಾಲ್ ಅವರನ್ನು ತಬ್ಬಿಬ್ಬು ಮಾಡಿದ್ದು ಸುಳ್ಳಲ್ಲ. ಪರಿಣಾಮ ಮೊದಲ ಸೆಟ್‌ಅನ್ನು 6-2ರ ಅಂತರದಲ್ಲಿ ಸುಲಭವಾಗಿ ಜಯಿಸಿಕೊಂಡಿದ್ದರು. ಇನ್ನು ಎರಡನೇ ಸೆಟ್‌ನ ಮೊದಲ ಪಾಯಿಂಟ್ ಅನ್ನೇ ಸೋತಿದ್ದ ಮಾಡ್ವಡೇವ್ ಮತ್ತೆ ಅದ್ಭುತ ಪ್ರದರ್ಶನ ನೀಡಿ ಟೈ ಬ್ರೇಕ್‌ನಲ್ಲಿ ರಫೇಲ್ ನಡಾಲ್ ಅವರನ್ನು ಸೋಲಿಸಿ ಮೊದಲೆರಡೂ ಸೆಟ್‌ನಲ್ಲಿ ಗೆಲುವು ಸಾಧಿಸಿದ್ದರು.
5 ಸೆಟ್‌ಗಳ ಪಂದ್ಯದಲ್ಲಿ ವಿಶ್ವದ ನಂ.2 ಆಟಗಾರನ ಎದುರು ಮೊದಲ ಎರಡು ಸೆಟ್‌ಅನ್ನು ಕೈಚೆಲ್ಲಿದ್ದ ಆಟಗಾರ ಮತ್ತೆ ಪುಟಿದು ಏಳುವುದು ಅಷ್ಟು ಸುಲಭದ ಮಾತಲ್ಲ. ಇನ್ನು ಆಸ್ಟ್ರೇಲಿಯಾ ಓಪನ್ ಟೂರ್ನಿ ಅಂತಹದ್ದೊಂದು ದಾಖಲೆಗೆ ಸಾಕ್ಷಿಯಾದ ಇತಿಹಾಸವೂ ಇರಲಿಲ್ಲ. ನೋಡುತ್ತಿದ್ದ ಬಹುತೇಕ ಪ್ರೇಕ್ಷಕರು, ಲೆಕ್ಕ ಹಾಕುತ್ತಿದ್ದ ಎಐ ತಂತ್ರಜ್ಞಾನ ಎಲ್ಲವೂ ಮಾಡ್ವಡೇವ್ ಗೆಲುವನ್ನು ಊಹಿಸಿ ಕೂತಿದ್ದರು. ಆದರೆ, ನಡಾಲ್ ಆ ಭಾನುವಾರದ ರಾತ್ರಿ ಅಂತಹದ್ದೊಂದು ನಂಬಲಸಾಧ್ಯ ಎನ್ನುವಂಥ ಗೆಲುವಿಗೆ ಅಂಕಿತ ಹಾಕಿದ್ದರು.
ಮಾಡ್ವಡೇವ್‌ಗೆ ಮಾಸ್ಟರ್ ಸ್ಟ್ರೋಕ್
ರಫೇಲ್ ನಡಾಲ್ ಮೊದಲ ಎರಡೂ ಸೆಟ್‌ಗಳನ್ನು ಸೋಲುತ್ತಿದ್ದಂತೆ ಟೆನಿಸ್ ಪ್ರೇಮಿಗಳಲ್ಲಿ ನಿರಾಸೆ ಮೂಡಿದ್ದು ಸುಳ್ಳಲ್ಲ. ಅಷ್ಟರಲ್ಲೇ ಮಾಡ್ವಡೇವ್ ಸಹ ತನ್ನ ಗೆಲುವು ಇನ್ನು ಖಚಿತ ಎಂದು ನಿರಾಳರಾಗಿದ್ದರು. ಆದರೆ, ನಂತರ ನಡೆದದ್ದೆಲ್ಲವೂ ಪವಾಡ ಎಂಬಂತಿತ್ತು. ಮೂರನೇ ಸೆಟ್ ಅನ್ನು 6-4 ಅಂತರದಲ್ಲಿ ಗೆದ್ದುಕೊಂಡ ನಡಾಲ್ ನಾಲ್ಕನೇ ಸೆಟ್‌ಅನ್ನು ಸಹ 6-4ರ ಅಂತರದಲ್ಲೇ ತನ್ನದಾಗಿಸಿಕೊಂಡರು. ದಶಕಗಳ ಹಿಂದಿನ ನಡಾಲ್ ಮ್ಯಾಜಿಕ್ ಮತ್ತೆ ಮೈಕೊಡವಿ ಎದ್ದಂತ ಕಂಡ ಆ ಪ್ರದರ್ಶನದಲ್ಲಿ, ಮಾಡ್ವಡೇವ್ ಅವರ ಎಲ್ಲಾ ಸರ್ವ್‌ಗಳಿಗೂ ತಕ್ಕ ಉತ್ತರ ಇತ್ತು.
ಐದನೇ ಸೆಟ್ ಅಂತೂ ಸಾಕಷ್ಟು ನಾಟಕೀಯಯತೆಗೆ ಸಾಕ್ಷಿಯಾಯ್ತು. ಮೊದಲ 8 ಗೇಮ್‌ಗಳಲ್ಲಿ ಇಬ್ಬರೂ ಆಟಗಾರರು ತಲಾ ನಾಲ್ಕು ಅಂಕಗಳನ್ನು ಗಳಿಸಿದ್ದರು. ಆದರೆ, 9ನೇ ಗೇಮ್‌ನಲ್ಲಿ ಮಾಡ್ವಡೇವ್ ಅವರ ಸರ್ವೀಸ್‌ಅನ್ನು ಬ್ರೇಕ್ ಮಾಡಿ ಅಂಕ ಗಳಿಸುವಲ್ಲಿ ಸಫಲವಾಗಿದ್ದ ನಡಾಲ್, ಮುಂದಿನ ತನ್ನ ಸರ್ವ್‌ನ ಗೇಮ್ ಗೆದ್ದಿದ್ದರೆ ಸಾಕಿತ್ತು. ಆದರೆ, ಆ ಗೇಮ್‌ಅನ್ನು ಗೆಲ್ಲುವಲ್ಲಿ ಮಾಡ್ವಡೇವ್ ಸಫಲರಾದರು. ಈ ಹಂತದಲ್ಲಿ ಮಾಡ್ವಡೇವ್ ಗೆಲುವು ಶೇ. 76ರಷ್ಟು ಖಚಿತ ಎಂದು ಆಸ್ಟ್ರೇಲಿಯಾ ಓಪನ್ ಎಐ ತಂತ್ರಾಂಶ ಪ್ರಿಡಿಕ್ಷನ್ ಸಹ ಮಾಡಿತ್ತು. ಆದರೆ, ನಂತರ ಸತತ ಎರಡು ಗೇಮ್‌ಗಳನ್ನು ಗೆಲ್ಲುವ ಮೂಲಕ ನಡಾಲ್ 21ನೇ ಗ್ರ್ಯಾಂಡ್‌ಸ್ಲಾಮ್‌ಅನ್ನು ತನ್ನ ಹೆಸರಿಗೆ ಬರೆಸಿಕೊಂಡದ್ದು ಇಂದು ಇತಿಹಾಸ.
21ನೇ ಗ್ರ್ಯಾಂಡ್‌ಸ್ಲಾಮ್‌ಗೆ ಮುತ್ತಿಟ್ಟ ಮೊದಲಿಗ
ರೋಜರ್ ಫೆಡರರ್, ನೊವಾಕ್ ಜಾಕೋವಿಚ್ ಮತ್ತು ರಫೇಲ್ ನಡಾಲ್ ಟೆನಿಸ್ ಲೋಕದ ಸಮಕಾಲೀನ ಲೆಜೆಂಡ್ ಆಟಗಾರರು. ಕಳೆದ ಎರಡು ದಶಕಗಳಿಂದ ಅಮೋಘ ಪ್ರದರ್ಶನ ನೀಡುತ್ತಿರುವ ಈ ಆಟಗಾರರೇ ವರ್ಷದ ಎಲ್ಲಾ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳನ್ನೂ ಒಬ್ಬರ ಹಿಂದೊಬ್ಬರಂತೆ ಜಯಿಸುತ್ತಿರುವುದು ವಿಶೇಷ.
ವಿಂಬಲ್ಡನ್, ಫ್ರೆಂಚ್ ಓಪನ್, ಆಸ್ಟ್ರೇಲಿಯಾ ಓಪನ್ ಮತ್ತು ಅಮೆರಿಕ ಓಪನ್ ವರ್ಷದಲ್ಲಿ ನಡೆಯುವ ನಾಲ್ಕು ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯ ಟೆನಿಸ್ ಟೂರ್ನಿ. ಈ ಟೂರ್ನಿಯ ಅರ್ಹತಾ ಸುತ್ತಿಗೆ ನೂರಾರು ಟೆನಿಸ್ ತಾರೆಯರು ಭಾಗವಹಿಸುತ್ತಾರೆ. ಆದರೆ, 2003ರಿಂದ ಈವರೆಗೆ ಈ ಪ್ರಶಸ್ತಿಯನ್ನು ರೋಜರ್ ಫೆಡರರ್, ನೊವಾಕ್ ಜಾಕೋವಿಚ್ ಮತ್ತು ರಫೇಲ್ ನಡಾಲ್ ಹೊರತುಪಡಿಸಿ ಬೇರೆ ಯಾರೂ ಗೆದ್ದ ಇತಿಹಾಸವೇ ಇಲ್ಲ. ಈ ಪಂದ್ಯಕ್ಕೂ ಮೊದಲು, ಈ ಮೂವರೂ ಆಟಗಾರರು ತಲಾ 20 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಜಯಿಸುವ ಮೂಲಕ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರು.
ಈ ವರ್ಷ ಫೆಡರರ್ ಮತ್ತು ಜೊಕೋವಿಚ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಹೊಸ ಚಾಂಪಿಯನ್ ಒಬ್ಬ ಹೊರಹೊಮ್ಮಲಿದ್ದಾನೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ, ರಫೇಲ್ ನಡಾಲ್ ಈ ಎಲ್ಲಾ ಊಹೆ ಮತ್ತು ವ್ಯಾಖ್ಯಾನಗಳಿಗೆ ಪೂರ್ಣ ವಿರಾಮ ಇಟ್ಟಿದ್ದು, 21ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕುವ ಮೂಲಕ ರೋಜರ್ ಫೆಡರರ್ ಮತ್ತು ನೊವಾಕ್ ಜಾಕೋವಿಚ್ ಅವರನ್ನು ಹಿಂದಿಕ್ಕಿದ್ದಾರೆ.
ಫ್ರೆಂಚ್ ಓಪನ್‌ನಲ್ಲೂ ಮುಂದುವರೆಯುತ್ತಾ ದಾಖಲೆ?
ಆಸ್ಟ್ರೇಲಿಯಾ ಓಪನ್ ಬೆನ್ನಿಗೆ ಮೇ 22ರಿಂದ ಪ್ಯಾರಿಸ್‌ನಲ್ಲಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಆರಂಭವಾಗಲಿದೆ. ಕೆಂಪು ಮಣ್ಣಿನ ಮೇಲೆ ಆಡಲಾಗುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲೂ ನಡಾಲ್ ಹೆಸರಿನಲ್ಲಿ ಸಾಕಷ್ಟು ದಾಖಲೆಗಳಿವೆ. ಕಳೆದ 2005ರಿಂದ ಈವರೆಗೆ ನಡೆದ 17 ಟೂರ್ನಿಗಳ ಪೈಕಿ 13 ಭಾರಿ ಗೆಲುವು ಸಾಧಿಸಿದ್ದಾರೆ. ಯಾವುದೇ ಪ್ರಮುಖ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಟೂರ್ನಿಗಳಲ್ಲಿ ಯಾವುದೇ ಆಟಗಾರ ಈ ಮಟ್ಟದ ಪ್ರಾಬಲ್ಯ ಸಾಧಿಸಿದ ಇತಿಹಾಸವೇ ಇಲ್ಲ. ಅಂತಹದ್ದೊಂದು ಅಪರೂಪದ ದಾಖಲೆಯೂ ನಡಾಲ್ ಹೆಸರಿನಲ್ಲೇ ಇದೆ.
ಇದೇ ಕಾರಣಕ್ಕೆ ಈ ವರ್ಷದ ಫ್ರೆಂಚ್ ಓಪನ್ ಟೂರ್ನಿಯಲ್ಲೂ ರಫೇಲ್ ನಡಾಲ್ ಅವರೇ ಗೆಲ್ಲುವ ಫೇವರಿಟ್ ಎನ್ನಲಾಗುತ್ತಿದೆ. ಒಂದು ವೇಳೆ ನಡಾಲ್ ಗೆಲುವು ಸಾಧಿಸಿದರೆ 22 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಮೊದಲ ಆಟಗಾರ ಎಂಬ ಶ್ರೇಯಕ್ಕೂ ಅವರು ಪಾತ್ರರಾಗಲಿದ್ದಾರೆ.
ಫ್ರೆಂಚ್ ಓಪನ್‌ಗೆ ಜಾಕೋವಿಚ್ ಸ್ಪರ್ಧೆ?
ವಿಶ್ವದ ನಂ.1 ಶ್ರೇಯಾಂಕಿತ ಆಟಗಾರ ಸರ್ಬಿಯಾದ ನೊವಾಕ್ ಜಾಕೋವಿಚ್ ಆಸ್ಟ್ರೇಲಿಯಾ ಓಪನ್‌ನಲ್ಲಿ ಸ್ಪರ್ಧಿಸಬೇಕಿತ್ತು. ಒಂದು ವೇಳೆ ಜಾಕೋವಿಚ್ ಸ್ಪರ್ಧಿಸಿದ್ದರೆ ನಡಾಲ್ ಗೆಲುವು ಅಷ್ಟು ಸುಲಭದ್ದಾಗುತ್ತಿರಲಿಲ್ಲ. ಏಕೆಂದರೆ ರೋಲ್ಯಾಂಡ್ ಗ್ಯಾರೋಸ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಫೈನಲ್‌ನಲ್ಲಿ ನಡಾಲ್‌ರನ್ನು ಎರಡು ಬಾರಿ ಸೋಲಿಸಿದ ದಾಖಲೆ ಜೊಕೋವಿಚ್ ಹೆಸರಿನಲ್ಲಿದೆ.
ಆದರೆ, ಆಸ್ಟ್ರೇಲಿಯಾ ಓಪನ್ ಟೂರ್ನಿ ಆರಂಭದ ಮುನ್ನಾ ದಿನ ಜ.16 ರಂದು ಕೊರೊನಾ ಲಸಿಕೆ ಹಾಕಿಕೊಂಡಿಲ್ಲ ಎಂಬ ಕಾರಣಕ್ಕೆ ಜೊಕೋವಿಚ್ ಅವರ ವೀಸಾವನ್ನು ರದ್ದು ಮಾಡಿದ್ದ ಆಸ್ಟ್ರೇಲಿಯಾ ಸರ್ಕಾರ ಅವರನ್ನು ದೇಶದಿಂದಲೇ ಗಡಿಪಾರು ಮಾಡಿತ್ತು. ಇದೇ ಕಾರಣಕ್ಕೆ ಜೊಕೋವಿಚ್ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಈಗ ಅವರು ಫ್ರೆಂಚ್ ಓಪನ್‌ನಲ್ಲಿ ಪಾಲ್ಗೊಳ್ಳುವ ಕುರಿತು ಯಾವುದೇ ನಿಖರ ಮಾಹಿತಿಗಳು ಇಲ್ಲ. ಒಂದು ವೇಳೆ ಜೊಕೋವಿಚ್ ಫ್ರೆಂಚ್ ಟೂರ್ನಿಯಲ್ಲಿ ಆಡದಿದ್ದರೆ ನಡಾಲ್ ಗರಿಗೆ ಮತ್ತೊಂದು ಪ್ರಶಸ್ತಿ ಸೇರ್ಪಡೆ ಬಹುತೇಕ ಖಚಿತ ಎನ್ನಲಾಗಿದೆ.

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್ ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.
ಇದನ್ನೂ ಓದಿ: ಕಾಮನ್‌ವೆಲ್ತ್ ಕ್ರೀಡಾಕೂಟ- 2022 : 24 ವರ್ಷಗಳ ಬಳಿಕ ಕ್ರಿಕೆಟ್ ಸೇರ್ಪಡೆ


