Homeಮುಖಪುಟಯೋಗಿ ಬಾಬಾ - ಬಿಜೆಪಿ ಸೆರಗಲ್ಲಿ ಕಟ್ಟಿಕೊಂಡ ಕೆಂಡ

ಯೋಗಿ ಬಾಬಾ – ಬಿಜೆಪಿ ಸೆರಗಲ್ಲಿ ಕಟ್ಟಿಕೊಂಡ ಕೆಂಡ

- Advertisement -
- Advertisement -

ಒಂದು ಮಾತನ್ನು ಬರೆದಿಟ್ಟುಕೊಳ್ಳಿ. ಮಾರ್ಚ್ 10ನೇ ತಾರೀಕು ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಈ ಯೋಗಿ ಬಾಬಾನ ರಾಜಕೀಯ ಭವಿಷ್ಯ ಮುಕ್ತಾಯವಾದಂತೆಯೇ ಸರಿ. ಈಗಾಗಲೇ ಉತ್ತರಪ್ರದೇಶದ ಪಶ್ಚಿಮ ಭಾಗದ 20 ಜಿಲ್ಲೆಗಳ ಒಟ್ಟು 113 ಕ್ಷೇತ್ರಗಳಲ್ಲಿ ಎರಡು ಹಂತಗಳ ಚುನಾವಣೆ ಮುಗಿದಿದೆ. ಕಳೆದ ಚುನಾವಣೆಯಲ್ಲಿ ಈ 113 ಕ್ಷೇತ್ರಗಳ ಪೈಕಿ 91 ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಗೋದಿ ಮೀಡಿಯಾದ ಭಜನೆ ಸದ್ಯಕ್ಕೆ ಪಕ್ಕಕ್ಕಿಡೋಣ. ಹತ್ತಾರು ಚುನಾವಣಾ ವಿಶ್ಲೇಷಕರು, ಸ್ವತಂತ್ರ ಪತ್ರಕರ್ತರು ನಡೆಸಿದ ಸರ್ವೆಗಳ ಪ್ರಕಾರ ಈ ಬಾರಿ ಇಲ್ಲಿ ಬಿಜೆಪಿ ನೆಲ ಕಚ್ಚಲಿದೆ. ಕೆಲವು ಜಿಲ್ಲೆಗಳಲ್ಲಿ ಖಾತೆ ತೆರೆಯುವುದೇ ಕನಸಿನ ಮಾತು ಎಂಬುದು ಕೆಲವು ಹಿರಿಯ ಪತ್ರಕರ್ತರ ಅಂಬೋಣ. ಮುಂದಿನ ಹಂತಗಳಿಗೂ ಇದೇ ಹವಾ ಮುಂದುವರೆಯಲಿದೆ ಎಂಬ ನಿರೀಕ್ಷೆ ಇದೆ. ಕಳೆದ ಬಾರಿ ಒಟ್ಟು 403 ಕ್ಷೇತ್ರಗಳ 312 ಸ್ಥಾನಗಳ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ 150 ಸ್ಥಾನಗಳನ್ನು ಗಳಿಸಲೂ ತಿಣುಕಾಡಬೇಕಾದ ಸ್ಥಿತಿಗೆ ತಲುಪಿದೆ. ಹೀಗಾಗಿ ಯೋಗಿ ಬಾಬಾ ಹೇಗೂ ಮೂಲೆಗೆ ಬೀಳೋದು ಗ್ಯಾರಂಟಿ.

ಒಂದು ವೇಳೆ ಗೆದ್ದುಬಿಟ್ಟರೆ? ಹಾಗೆ ಬಿಜೆಪಿ ಗೆಲ್ಲುವ ಸಾಧ್ಯತೆ ತೀರಾ ತೀರಾ ಕಡಿಮೆ. ಹಾಗೊಂದು ವೇಳೆ ಪುಲ್ವಾಮಾ – ಬಾಲಾಕೋಟ್ ಥರದ ಏನಾದರೊಂದು ಸಂಭವಿಸಿ, ನಾಟಕೀಯ ಸನ್ನಿವೇಶವುಂಟಾಗಿ ಬಿಜೆಪಿಯ ಅದೃಷ್ಟ ಖುಲಾಯಿಸಿದರೂ ಈ ಸನ್ಯಾಸಿ ಬಾಬಾನ ಭವಿಷ್ಯ ಮಾತ್ರ ಮಠಕ್ಕೆ ಸೀಮಿತ ಅಷ್ಟೇ. ಮುಖ್ಯಮಂತ್ರಿ ಮಾಡೋದಿರಲಿ, ಯಾವ ಪ್ರಮುಖ ಹುದ್ದೆಯನ್ನೂ ಕೊಡದೆ ಬಿಜೆಪಿಗರು ಈತನನ್ನು ಮೂಲೆಗುಂಪು ಮಾಡೋದು ಶತಸ್ಸಿದ್ಧ!

ಹರಿಶಂಕರ್ ತಿವಾರಿ

ಇದು ಅತಿಶಯದ ಮಾತು ಅನಿಸಬಹುದು. ಆದರೆ ಇದು ಕಟು ವಾಸ್ತವ. ಯೋಗಿ ತನ್ನ ಸುತ್ತಲೂ ಹೆಣೆದುಕೊಂಡ ಜಾತಿವಾದದ, ನಿರಂಕುಶವಾದದ ರಾಜಕೀಯ ಬಲೆಯಲ್ಲಿ ತಾನೇ ಸಿಕ್ಕಿಬಿದ್ದಿರೋದಂತೂ ಸತ್ಯ. ಆತನ ಅಹಂಕಾರದ ಹಸಿಹಸಿ ಪ್ರದರ್ಶನ ಬಹುತೇಕ ಜನರಲ್ಲಿ ಜಿಗುಪ್ಸೆ ಮೂಡಿಸಿದೆ. ಒಂದೊಂದೇ ಅಂಶಗಳನ್ನು ನೋಡೋಣ.

ಸನ್ಯಾಸಿಯ ’ಠಾಕೂರ್‌ವಾದ’

ಈ ವ್ಯಕ್ತಿ ತನ್ನ ಕೈಗೆ ಅಧಿಕಾರ ಸಿಕ್ಕ ಕೂಡಲೇ ಮಾಡಿದ ಮೊದಲ ಕೆಲಸ ಏನು ಗೊತ್ತೆ? ತನಗೆ, ತನ್ನ ಜಾತಿಯ ಠಾಕೂರ್‌ಗಳಿಗೆ ಪ್ರತಿಸ್ಪರ್ಧಿಯಾಗಿದ್ದವರನ್ನು ಮಟ್ಟಹಾಕಲು ತೊಡಗಿಸಿಕೊಂಡಿದ್ದು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬ್ರಾಹ್ಮಣ ಜಾತಿಯ ಪ್ರಶ್ನಾತೀತ ನಾಯಕ ಎಂದೇ ಹೆಸರಾಗಿದ್ದ ಮಾಜಿ ಮಂತ್ರಿ ಹರಿಶಂಕರ್ ತಿವಾರಿಯ ಮನೆಯ ಮೇಲೆ ಪೊಲೀಸ್ ರೈಡ್ ಮಾಡಿಸಿದರು. ಬರೋಬ್ಬರಿ ಸಾವಿರ ಪೊಲೀಸರು ಬ್ರಾಹ್ಮಣ ನಾಯಕನ ಮನೆಯನ್ನು ಸುತ್ತುವರೆದು, ಮನೆಯೊಳಕ್ಕೆ ನುಗ್ಗಿದ ವಿಡಿಯೋಗಳು ವೈರಲ್ ಆಗಿದ್ದವು. ಗೋರಖಪುರ ಹಾಗೂ ಸುತ್ತಣ ಪ್ರದೇಶದಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ಎರಡು ಬಲಾಢ್ಯ ಜಾತಿಗಳಾದ ಬ್ರಾಹ್ಮಣ ಹಾಗೂ ಠಾಕೂರರ ನಡುವೆ ಉದ್ದಕ್ಕೂ ಸಂಘರ್ಷವಿದೆ. ಈ ಪೊಲೀಸ್ ದಾಳಿಯ ಮೂಲಕ ಠಾಕೂರ್ ಆಧಿಪತ್ಯವನ್ನು ಘೋಷಿಸುವುದು ಯೋಗಿಯ ಉದ್ದೇಶವಾಗಿತ್ತು. ಸಹಜವಾಗಿಯೇ ಈ ಘಟನೆ ಬ್ರಾಹ್ಮಣರನ್ನು ಕೆರಳಿಸಿತ್ತು.

ಬ್ರಾಹ್ಮಣ ಜಾತಿ ಹಿನ್ನೆಲೆಯ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಪೊಲೀಸರಿಗೆ ಶರಣಾದ ನಂತರವೂ ಎನ್ಕೌಂಟರ್‌ನಲ್ಲಿ ಕೊಂದಿದ್ದನ್ನು ಕೂಡ ಬ್ರಾಹ್ಮಣರು ತಮ್ಮ ಸಮುದಾಯದ ಮೇಲೆ ಯೋಗಿ ಸರ್ಕಾರ ನಡೆಸುತ್ತಿರುವ ದಾಳಿ ಎಂದೇ ಭಾವಿಸುತ್ತಿದ್ದಾರೆ. ಇದಕ್ಕಿಂತಲೂ ಬ್ರಾಹ್ಮಣರನ್ನು ಭಾವನಾತ್ಮಕವಾಗಿ ಕೆರಳಿಸಿರೋದು ಖುಶಿ ದುಬೆ ಎಂಬ ಯುವತಿಯ ಬಂಧನ ಮತ್ತು ಜೈಲುವಾಸ. ವಿಕಾಸ್ ದುಬೆ ಎನ್ಕೌಂಟರ್ ಹತ್ಯೆಗೆ ಎರಡು ದಿನ ಮುಂಚೆ ಆತನ ಸಹಚರ ಅಮರ್ ದುಬೆ ಎಂಬಾತನನ್ನು ಪೊಲೀಸ್ ಎನ್ಕೌಂಟರ್‌ನಲ್ಲಿ ಕೊಲ್ಲಲಾಯ್ತು. ಆತನ ಪತ್ನಿ ಖುಶಿ ದುಬೆಯನ್ನು ಬಂಧಿಸಿ ಜೈಲಿಗೆ (ವಾಸ್ತವದಲ್ಲಿ ಬಾಲಕಿಯರ ರಿಮ್ಯಾಂಡ್ ಹೋಂಗೆ) ಅಟ್ಟಲಾಯ್ತು. ಆಗಿನ್ನೂ ನವವಿವಾಹಿತೆಯಾಗಿ ಖುಶಿ ಆ ಊರಿಗೆ ಬಂದು ಕೇವಲ ಎರಡು ದಿನಗಳಷ್ಟೇ ಆಗಿತ್ತು. ಮಾತ್ರವಲ್ಲ, ಆಕೆಗೆ ಇನ್ನೂ ಹದಿನೆಂಟು ವರ್ಷ ಕೂಡ ತುಂಬಿರಲಿಲ್ಲ. ಕೊಲೆ, ಸುಲಿಗೆಗಳಂತಹ ಹಲವು ಷಡ್ಯಂತ್ರಗಳಲ್ಲಿ ಆಕೆ ಭಾಗಿಯಾಗಿದ್ದಾಳೆಂಬ ಗುರುತರ ಅಪರಾಧಗಳನ್ನು ಆಕೆಯ ಮೇಲೆ ಹೊರಿಸಲಾಗಿದೆ. ಎರಡು ವರ್ಷಗಳಿಂದಲೂ ಆಕೆ ಜೈಲಿನಲ್ಲಿದ್ದಾಳೆ. ಈ ಪ್ರಕರಣ ಬ್ರಾಹ್ಮಣ ಸಮುದಾಯದಲ್ಲಿ ಯೋಗಿಯ ವಿರುದ್ಧ ಭಾರೀ ಆಕ್ರೋಶ ಹುಟ್ಟುಹಾಕಿದೆ. ಯೋಗಿ ಸರ್ಕಾರ ’500 ಮಂದಿ ಬ್ರಾಹ್ಮಣರ ಹತ್ಯೆ ಮಾಡಿದೆ’ ಎಂಬ ಮಾತು ಬ್ರಾಹ್ಮಣರ ಮಧ್ಯೆ ಜನಜನಿತವಾಗಿದೆ.

ಕುಲದೀಪ್ ಸಿಂಗ್ ಸೆಂಗರ್‌

ಇದೇ ಸಂದರ್ಭದಲ್ಲಿ ಉನ್ನಾವೋ ಅತ್ಯಾಚಾರ ಮತ್ತು ಕೊಲೆಗಳ ಆರೋಪಿ ಈಗ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವ (ಈಗ ಮಾಜಿ) ಶಾಸಕ ಕುಲದೀಪ್ ಸಿಂಗ್ ಸೆಂಗರ್‌ನನ್ನು ರಕ್ಷಿಸಲು ಸಕಲ ಪ್ರಯತ್ನ ನಡೆಸಿದ್ದು, ಹತ್ರಾಸ್‌ನ ಅತ್ಯಾಚಾರಿ ಹಾಗೂ ಕೊಲೆಗಡುಕರನ್ನು ರಕ್ಷಿಸುವ ಉದ್ದೇಶದಿಂದ ಸಾಕ್ಷ್ಯನಾಶ ಮಾಡಲಿಕ್ಕಾಗಿ ಸ್ವಯಂ ಪೊಲೀಸ್ ಅಧಿಕಾರಿಗಳೇ ನತದೃಷ್ಟ ಯುವತಿಯ ಮೃತದೇಹವನ್ನು ನಡುರಾತ್ರಿಯೇ ಸುಟ್ಟುಹಾಕಿದ್ದು, ತನ್ನ ಜಾತಿಯ ಗ್ಯಾಂಗ್ಸ್ಟರ್ ಕಂ ರಾಜಕಾರಣಿ ಧನಂಜಯ್ ಸಿಂಗ್‌ನ ರಕ್ಷಣೆಗೆ ನಿಂತಿದ್ದು – ಹೀಗೆ ಯೋಗಿಯ ಠಾಕೂರ್ ಪ್ರೇಮದ ಹತ್ತಾರು ಉದಾಹರಣೆಗಳನ್ನು ಆತನ ಟೀಕಾಕಾರರು ಪಟ್ಟಿ ಮಾಡುತ್ತಿದ್ದಾರೆ. ಇನ್ನು ಅಧಿಕಾರದ ಮೊಗಸಾಲೆಗಳಲ್ಲಿ, ಸರ್ಕಾರಿ ಗುತ್ತಿಗೆಗಳಲ್ಲಿ ನಡೆಯುವ ಪೈಪೋಟಿ ಇತ್ಯಾದಿಗಳಲ್ಲೂ ಠಾಕೂರ್‌ವಾದದ ಛಾಯೆಯನ್ನು ಎತ್ತಿ ತೋರಿಸುತ್ತಾರೆ.

ಒಟ್ಟಾರೆಯಾಗಿ ಬ್ರಾಹ್ಮಣರು ಯೋಗಿಯ ವಿರುದ್ಧ ತಿರುಗಿ ನಿಂತಿರುವುದಂತೂ ಸತ್ಯ. ಬ್ರಾಹ್ಮಣ ವಿರೋಧದ ಬಿಸಿ ಎಷ್ಟು ಪ್ರಬಲವಾಗಿದೆಯೆಂದರೆ, ಅಯೋಧ್ಯೆಯಿಂದ ಸ್ಪರ್ಧಿಸಲು ಅಣಿಯಾಗಿದ್ದ ಯೋಗಿ ಬಾಬಾ ಮತ್ತೆ ಸುರಕ್ಷಿತ ಕ್ಷೇತ್ರ ಹುಡುಕಿ ವಾಪಸ್ ಗೋರಖ್‌ಪುರಕ್ಕೆ ಬರಲು ಇದೇ ಕಾರಣ. ಅಯೋಧ್ಯೆಯಲ್ಲಿ ಬ್ರಾಹ್ಮಣರ ಮತಗಳೇ ನಿರ್ಣಾಯಕವಾಗಿದ್ದು, ಅಲ್ಲಿ ಯೋಗಿಯನ್ನು ಸೋಲಿಸಲು ಬ್ರಾಹ್ಮಣರು ಸಜ್ಜಾಗಿದ್ದರು. ಸ್ಥಳೀಯ ಸಾಧು-ಸಂತರು ಸರಯೂ ನದಿಯ ಮಧ್ಯೆ ನಿಂತು ಶ್ರೀರಾಮಚಂದ್ರನ ಮೇಲೆ ಪ್ರಮಾಣ ಮಾಡಿ ಈ ಅಧರ್ಮಿ ಯೋಗಿಯನ್ನು ಸೋಲಿಸುತ್ತೇವೆ ಎಂದು ಶಪಥ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

ಬ್ರಾಹ್ಮಣರನ್ನು ಸಮಾಧಾನಪಡಿಸಲು ಹಾಗೂ ಯೋಗಿಯನ್ನು ಅಂಕೆಯಲ್ಲಿಡಲು ಮೋದಿ-ಶಾ ದ್ವಯರು ಕಳೆದ ವರ್ಷ ಜನವರಿಯಲ್ಲಿ ವಿನೂತನ ಪ್ರಯತ್ನಕ್ಕೆ ಕೈಹಾಕಿದರು. ದೆಹಲಿಯಲ್ಲಿ ಉನ್ನತಾಧಿಕಾರಿಯಾಗಿದ್ದ ಎ.ಕೆ.ಶರ್ಮ ಎಂಬ ಮೋದಿ ಭಂಟ ಬ್ರಾಹ್ಮಣ ಅಧಿಕಾರಿಯಿಂದ ರಾಜೀನಾಮೆ ಕೊಡಿಸಿ ಉತ್ತರಪ್ರದೇಶದ ಬಿಜೆಪಿಗೆ ಸೇರ್ಪಡೆ ಮಾಡಲಾಯ್ತು. ಆತನನ್ನು ಎಂಎಲ್‌ಸಿ ಮಾಡಿ ಉಪ ಮುಖ್ಯಮಂತ್ರಿ ಹುದ್ದೆಗೇರಿಸುವ ಮೂಲಕ ಯೋಗಿಯ ಮೇಲೆ ಒಂದಷ್ಟು ನಿಯಂತ್ರಣ ಸಾಧಿಸುವುದು ತಂತ್ರವಾಗಿತ್ತು. ಆದರೆ ಅಂಥಾ ಯಾವ ತಂತ್ರಕ್ಕೂ ಈ ಬಾಬಾ ಸೊಪ್ಪು ಹಾಕಲಿಲ್ಲ. ಕೊನೆಗೆ ಆ ಶರ್ಮರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆಯಷ್ಟೆ.

ದಶಕಗಳ ಕಾಲ ಬಿಜೆಪಿಯ ಪ್ರಬಲ ಸಮರ್ಥಕರಾಗಿದ್ದ ಬ್ರಾಹ್ಮಣರನ್ನು ಸಮಾಧಾನಪಡಿಸಲು ದೆಹಲಿ ಹೈಕಮಾಂಡ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದೇ ಅವಕಾಶ ಬಳಸಿಕೊಂಡ ಎಸ್‌ಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೆಲವು ಬ್ರಾಹ್ಮಣ ಮುಖಂಡರನ್ನು ತಮ್ಮತ್ತ ಸೆಳೆದುಕೊಂಡು ಅಭ್ಯರ್ಥಿಗಳನ್ನಾಗಿಸಿದ್ದಾರೆ. ಹೀಗೆ ಬ್ರಾಹ್ಮಣ ಮತಗಳು ಈ ಬಾರಿ ಚದುರಿಹೋಗುವ ಸಾಧ್ಯತೆ ಕಾಣುತ್ತಿದೆ.

ಕೇಶವಪ್ರಸಾದ್ ಮೌರ್ಯ

ಕೆಲ ದಿನಗಳ ಹಿಂದೆ ಟಿವಿ ಸಂದರ್ಶಕಿಯೊಬ್ಬರು ಯೋಗಿ ಬಾಬಾನಿಗೆ “ತಮ್ಮ ಮೇಲೆ ಠಾಕೂರ್‌ವಾದದ ಆರೋಪ ಇದೆಯಲ್ಲಾ?”ಎಂಬ ಒಂದು ಸರಳ ಪ್ರಶ್ನೆ ಕೇಳಿದರು. ಅದಕ್ಕೆ ಕೊಟ್ಟ ಉತ್ತರ ಬಿಜೆಪಿಗರನ್ನೇ ದಂಗುಬಡಿಸಿತ್ತು. “ನಾನು ಹುಟ್ಟಿದ ಕ್ಷತ್ರಿಯ ಜಾತಿಯ ಬಗ್ಗೆ ನನಗೆ ಅಭಿಮಾನ ಇದ್ದರೆ ತಪ್ಪೇನು? ಸ್ವಯಂ ಭಗವಾನ್(ಶ್ರೀರಾಮ) ನಮ್ಮ ಜಾತಿಯಲ್ಲಿ ಜನ್ಮ ಎತ್ತಿ ಬಂದಿದ್ದಾರೆ, ಒಮ್ಮೆಯಲ್ಲ, ಹಲವು ಬಾರಿ. ಈ ಬಗ್ಗೆ ನನಗೆ ಹೆಮ್ಮೆ ಇದೆ” – ಹೀಗೆ ಸಾಗಿತ್ತು ಅವರ ವಾದ ಸರಣಿ. ಇದು ಜಾತಿವಾದದ ಪರಮಾವಧಿಯಲ್ಲದೆ ಮತ್ತೇನು? ಚುನಾವಣೆ ಸಂದರ್ಭದಲ್ಲೂ ಇಂಥಾ ದಾರ್ಷ್ಟ್ಯದ ಮಾತುಗಳು ಆಳದ ಜಾತಿವಾದವನ್ನು ಎತ್ತಿತೋರಿಸುತ್ತಿದ್ದವು.

ಚುನಾವಣಾ ಪ್ರಚಾರ ಸಭೆಗಳಲ್ಲಿ ಈತನ ಅಹಂಕಾರದ ಮಾತುಗಳಿಂದ ಜನ ಬಿಜೆಪಿಯಿಂದ ಮತ್ತಷ್ಟು ದೂರಸರಿಯುವಂತಾಗಿದೆ. ’ಗರ್ಮಿ ನಿಕಾಲ್ ದೂಂಗಾ’, ’ಬುಲ್ಡೋಜರ್ ಚಲಾ ದೂಂಗಾ’ ಥರದ ಡೈಲಾಗ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸಾರಾಂಶದಲ್ಲಿ ಮತಪೆಟ್ಟಿಗೆಯ ಮೇಲೆ ಈ ಠಾಕೂರ್ ಜಾತಿವಾದದ, ದುರಹಂಕಾರದ ಗಾಢ ಅಡ್ಡಪರಿಣಾಮ ಬೀರುತ್ತಿದೆ.

ಒಬಿಸಿಗಳಿಗೆ ಅನ್ಯಾಯ-ಅವಮಾನ

2014, 2017 ಮತ್ತು 2019ರ ಚುನಾವಣೆಗಳಲ್ಲಿ ಸೋಷಿಯಲ್ ಇಂಜಿನಿಯರಿಂಗ್ ನಡೆಸಿ, ಯಾದವೇತರ ಒಬಿಸಿಗಳನ್ನು ಹಾಗೂ ಜಾಟವೇತರ ದಲಿತರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಬಿಜೆಪಿಯ ಭದ್ರ ಬುನಾದಿಯನ್ನು ಈ ಕಾವಿಧಾರಿ ಬಾಬಾ ಧ್ವಂಸಗೊಳಿಸಿದ್ದಾರೆ. 2017ರಲ್ಲಿ ಉತ್ತರಪ್ರದೇಶದ ಅಧ್ಯಕ್ಷರಾಗಿದ್ದ ಒಬಿಸಿ ಹಿನ್ನೆಲೆಯ ಕೇಶವಪ್ರಸಾದ್ ಮೌರ್ಯ ಸಹಜವಾಗಿ ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದರು. ಒಬಿಸಿಗಳು ಭಾರೀ ಪ್ರಮಾಣದಲ್ಲಿ ಬಿಜೆಪಿಗೆ ಮತ ಚಲಾಯಿಸಲು ಇದೂ ಕೂಡ ಒಂದು ಕಾರಣವಾಗಿತ್ತು. ಆದರೆ ಭರ್ಜರಿ ಬಹುಮತ ಬಂದ ಕೂಡಲೆ ತನ್ನ ನಿಜಬಣ್ಣ ತೋರಿಸಿದ ಕೇಸರಿ ಕೂಟ ಮೌರ್ಯರನ್ನು ಪಕ್ಕಕ್ಕೆ ಸರಿಸಿ ದಿಢೀರನೇ ಯೋಗಿ ಬಾಬಾನನ್ನು ಸಿಎಂ ಗಾದಿಯಲ್ಲಿ ಕೂರಿಸಿಬಿಟ್ಟಿತು. ಹಾಗೆ ನೋಡಿದರೆ ಅವರಿಗೆ ಯೋಗಿಯ ಮೇಲೆ ವಿಶೇಷ ಪ್ರೇಮವೇನೂ ಇರಲಿಲ್ಲ. ಆಕ್ರಮಣಕಾರಿ ಹಿಂದೂ ಸನ್ಯಾಸಿಯ ಚಹರೆಯನ್ನು ಬಳಸಿಕೊಂಡು ಅಖಿಲ ಭಾರತ ಮಟ್ಟದಲ್ಲಿ ’ಹಿಂದೂ ರಾಷ್ಟ್ರ’ದ ನರೆಟಿವ್ ಕಟ್ಟುವ ಲೆಕ್ಕಾಚಾರವಷ್ಟೇ ಅಲ್ಲಿದ್ದುದು.

ಸ್ವಾಮಿ ಪ್ರಸಾದ್ ಮೌರ್ಯ, ದಾರಾಸಿಂಗ್ ಚೌಹಾಣ್, ಧರಂಸಿಂಗ್ ಸೈನಿ

ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಕೇಶವಪ್ರಸಾದ್ ಮೌರ್ಯ ನಂತರ ಸಿಕ್ಕ ಡಿಸಿಎಂ ಹುದ್ದೆಗೆ ತೃಪ್ತಿಪಟ್ಟುಕೊಂಡರು. ಆದರೆ ಹಗೆ ಸಾಧಿಸುತ್ತಿದ್ದ ಈ ಬಾಬಾ ಉದ್ದಕ್ಕೂ ಮೌರ್ಯರಿಗೆ ಅವಮಾನ ಮಾಡುವುದನ್ನೇ ಕಾಯಕ ಮಾಡಿಕೊಂಡರು. ಒಮ್ಮೆಯಂತೂ ಡಿಸಿಎಂಗೆ ಕುರ್ಚಿಯನ್ನೂ ಕೊಡದೆ ಸ್ಟೂಲ್ ಮೇಲೆ ಕೂರಿಸಿ ಅವಮಾನಪಡಿಸಿದ್ದುದು ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಘಟನೆಯ ನಂತರ ಕೇಶವ ಮೌರ್ಯರನ್ನು ’ಸ್ಟೂಲ್ ಡಿಸಿಎಂ’ ಎಂದು ವಿರೋಧಿಗಳು ಲೇವಡಿ ಮಾಡುತ್ತಿದ್ದಾರೆ.

ಯೋಗಿ ಸಂಪುಟದಲ್ಲಿದ್ದ ಸ್ವಾಮಿ ಪ್ರಸಾದ್ ಮೌರ್ಯ, ದಾರಾಸಿಂಗ್ ಚೌಹಾಣ್ ಮತ್ತು ಧರಂಸಿಂಗ್ ಸೈನಿ ಎಂಬ ಮೂವರು ಮಂತ್ರಿಗಳು ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ತೊರೆದು ಎಸ್‌ಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂರೂ ಮಂದಿ ಒಬಿಸಿ ಜಾತಿಗಳಲ್ಲಿ ಬಹಳ ಪ್ರಭಾವ ಹಿಡಿತ ಹೊಂದಿರುವಂಥವರು. ಕೆಲವು ವರ್ಷಗಳ ಹಿಂದೆ ಒಬಿಸಿಗಳಿಗೆ ಉತ್ತಮ ಅವಕಾಶ ಕಲ್ಪಿಸುವ ಭರವಸೆ ನೀಡಿ ಈ ನಾಯಕರನ್ನು ಬಿಜೆಪಿ ತನ್ನತ್ತ ಸೆಳೆದುಕೊಂಡಿತ್ತು. ಅದರಲ್ಲೂ ದಾರಾಸಿಂಗ್ ಚೌಹಾನ್‌ರ ಮಹತ್ವ ಎಷ್ಟಿತ್ತೆಂದರೆ 2015ರಲ್ಲಿ ಅವರು ಬಿಜೆಪಿ ಸೇರ್ಪಡೆಯಾದ ಕೂಡಲೆ ಅವರನ್ನು ರಾಷ್ಟ್ರೀಯ ಒಬಿಸಿ ಮೋರ್ಚಾದ ಚೇರ್ಮನ್ ಮಾಡಲಾಗಿತ್ತು. ಆದರೆ ಈ ಐದು ವರ್ಷಗಳ ಯೋಗಿ ಆಡಳಿತ ಹಿಂದುಳಿದವರನ್ನು, ದಲಿತರನ್ನು ಇನ್ನಿಲ್ಲದಂತೆ ಕಡೆಗಣಿಸಿದೆ. ನೇಮಕಾತಿಗಳಲ್ಲಿ, ಶಿಕ್ಷಣದಲ್ಲಿ, ಮೀಸಲಾತಿ ಜಾರಿ ಮಾಡುವಲ್ಲಿ ಹೀಗೆ ಎಲ್ಲಾ ಕಡೆಯೂ ಅನ್ಯಾಯವಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಸಂಪುಟದ ಸಚಿವರನ್ನಾದರೂ ತಂತಮ್ಮ ಇಲಾಖೆಗಳಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಬಿಡದೆ ತನ್ನ ಅಧಿಕಾರಿ ಭಂಟರ ಮೂಲಕ ನಿಯಂತ್ರಣ ಹೇರುತ್ತಿದ್ದ ಸಿಎಂ ಯೋಗಿಯ ಉಸಿರುಗಟ್ಟಿಸುವ ಆಡಳಿತ ವೈಖರಿಯ ಬಗ್ಗೆ ವ್ಯಾಪಕ ವಿಮರ್ಶೆಗಳಿವೆ.

ಹೀಗೆ ಬಿಜೆಪಿ ತೊರೆದು ಎಸ್‌ಪಿ ಸೇರಿದ ಮಂತ್ರಿಗಳ ಬೆನ್ನಹಿಂದೆಯೇ ಒಂದು ಡಜನ್‌ನಷ್ಟು ಬಿಜೆಪಿ ಶಾಸಕರು ಕೂಡ ಹಿಂಬಾಲಿಸಿಕೊಂಡು ಎಸ್‌ಪಿ ಸೇರಿದ್ದಾರೆ. ಈ ವಿದ್ಯಮಾನಕ್ಕೂ ಮಾನ್ಯ ಯೋಗಿಯವರ ಕೊಡುಗೆ ಸಾಕಷ್ಟಿದೆ. ಯೋಗಿಯ ಹೆಸರು ಹೇಳಿಕೊಂಡು ಓಟು ಪಡೆಯುವುದು ಹಾಗಿರಲಿ, ಇರುವ ಮತಗಳೂ ದೂರವಾಗುವ ಸನ್ನಿವೇಶ ಸೃಷ್ಟಿಯಾಗಿದೆ.

ಉಸಿರುಗಟ್ಟಿಸುತ್ತಿರುವ ಆಡಳಿತ

ಮೋದಿ ಮಾದರಿಯಲ್ಲೇ ಸರ್ಕಾರದ ಎಲ್ಲ ಅಧಿಕಾರವನ್ನು ತನ್ನ ಕೈಯಲ್ಲೇ ಕೇಂದ್ರೀಕರಿಸಿಕೊಂಡಿದ್ದ ಯೋಗಿ ತನ್ನ ಭಂಟರಂತಿರುವ ಕೆಲವು ಅಧಿಕಾರಿಗಳ ಮೂಲಕ ಆಳ್ವಿಕೆ ನಡೆಸುತ್ತಿದ್ದಾರೆ, ತನ್ನ ಸಂಪುಟದ ಯಾವ ಮಂತ್ರಿಯ ಮಾತಿಗೂ ಕವಡೆ ಕಿಮ್ಮತ್ತನ್ನೂ ಕೊಡುವುದಿಲ್ಲ ಎಂಬುದು ಉತ್ತರಪ್ರದೇಶದ ರಾಜಕಾರಣದಲ್ಲಿ ಬಹಿರಂಗ ಸತ್ಯ. ತನ್ನ ನಡೆಗಳನ್ನು ಟೀಕಿಸುವುದಿರಲಿ ಸಣ್ಣ ಅಪಸ್ವರ ತೆಗೆದರೂ ಇವರು ಸಹಿಸಿಕೊಳ್ಳುವ ಜಾಯಮಾನದವರಲ್ಲ. ಪ್ರಶ್ನಿಸಿದವರಿಗೆ ’ಪಾಠ’ ಕಲಿಸುವ ಪ್ರವೃತ್ತಿಯವರು. ಈತನ ಉಪಟಳ ಯಾವ ಹಂತಕ್ಕೆ ಮುಟ್ಟಿತ್ತೆಂದರೆ 2019ರ ಡಿಸೆಂಬರ್ 17ರಂದು ಸುಮಾರು 100ಕ್ಕೂ ಹೆಚ್ಚು ಶಾಸಕರು ತಮ್ಮ ಮುಖ್ಯಮಂತ್ರಿಯ ವಿರುದ್ಧವೇ ವಿಧಾನಸಭೆಯಲ್ಲಿ ಧರಣಿ ನಡೆಸಬೇಕಾಗಿ ಬಂದಿತ್ತು.

ನಂದಕಿಶೋರ್ ಗುರ್ಜರ್

ಇಂಥ ವಿಲಕ್ಷಣ ವಿದ್ಯಮಾನ ವಿಧಾನಸಭೆಯ ಇತಿಹಾಸದಲ್ಲೇ ಮೊದಲ ಬಾರಿ ನಡೆದದ್ದು. ಆದರೆ ಮಾಧ್ಯಮಗಳು ಇಂಥಾ ರೋಚಕ ಸುದ್ದಿಯನ್ನು ಮುಚ್ಚಿಹಾಕಿ ತಮ್ಮ ಸ್ವಾಮಿನಿಷ್ಠೆಯನ್ನು ಮೆರೆದಿವೆಯೆಂಬುದು ಬೇರೆ ವಿಚಾರ.

ಲೋನಿ ಕ್ಷೇತ್ರದ ಶಾಸಕ ನಂದಕಿಶೋರ್ ಗುರ್ಜರ್ ಗಾಜಿಯಾಬಾದ್ ಪೊಲೀಸ್ ಅಧಿಕಾರಿ ತನ್ನ ವಿರುದ್ಧ ತೋರಿದ ದುರ್ವರ್ತನೆ ಬಗ್ಗೆ ಮಾತಾಡಲು ಶುರು ಮಾಡುತ್ತಿದ್ದಂತೆ ಬಿಜೆಪಿಯ ನಾಯಕರು ಅವಕಾಶ ಕೊಡದೆ ಅಡ್ಡಿಪಡಿಸಿದರು. ಅಷ್ಟೇ ನೋಡಿ, ಶಾಸಕರಲ್ಲಿ ಮಡುಗಟ್ಟಿದ್ದ ಆಕ್ರೋಶ ದಿಢೀರನೆ ಸ್ಫೋಟಗೊಂಡಿತ್ತು. ನಂದಕಿಶೋರ್ ಅವರನ್ನು ಬೆಂಬಲಿಸಿ ನೂರಕ್ಕೂ ಹೆಚ್ಚು ಶಾಸಕರು ಪ್ರತಿಭಟನೆಗೆ ಇಳಿದುಬಿಟ್ಟರು. ವಿರೋಧ ಪಕ್ಷದ ಶಾಸಕರೂ ಜೊತೆಯಾದರು. ’ಶಾಸಕರ ಐಕ್ಯತೆಗೆ ಜಯವಾಗಲಿ’, ’ಅಧಿಕಾರಶಾಹಿಗೆ ಧಿಕ್ಕಾರ’ ಘೋಷಣೆಗಳು ಇಡೀ ದಿನ ಸದನವನ್ನು ಸ್ತಬ್ದಗೊಳಿಸಿದ್ದವು. ಶಾಸಕರನ್ನು ಸಾಂತ್ವನಗೊಳಿಸುವ ಕಸರತ್ತು ಫಲಿಸದೆ ಎರಡನೇ ದಿನಕ್ಕೂ ಪ್ರತಿಭಟನೆ ಮುಂದುವರೆಯಿತು. ’ಶಾಸಕರ ಸಂಘಟನೆ’ ಕಟ್ಟಬೇಕೆಂಬ ಪ್ರಯತ್ನಗಳೂ ನಡೆದವು. ಹಲವು ಬಿಜೆಪಿ ಶಾಸಕರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸರ್ಕಾರದ ಕಾರ್ಯವೈಖರಿ ವಿರುದ್ಧ ಬಹಿರಂಗವಾಗಿ ಕಾರಿಕೊಂಡಿದ್ದರು. ಬಿಜೆಪಿ ಶಾಸಕರಿಗೇ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿದ್ದು ಮಾನ್ಯ ಯೋಗಿಯವರ ಮತ್ತೊಂದು ಸಾಧನೆ.

’ಹಿಂದೂ ಯುವ ವಾಹಿನಿ’ಯ ಕತೆ

ಕಳೆದ ಎರಡು ದಶಕಗಳ ಉತ್ತರಪ್ರದೇಶದ ಕರಾಳ ಕೋಮುವಾದಿ ಚರಿತ್ರೆಯಲ್ಲಿ ಗೋರಖ್‌ಪುರ ಕೇಂದ್ರಿತ ’ಹಿಂದೂ ಯುವ ವಾಹಿನಿ’ಯ ಪಾತ್ರ ಎದ್ದುಕಾಣುತ್ತದೆ. ಆರೆಸ್ಸೆಸ್ ಪ್ರಣೀತ ಸಂಘಟನೆಗಳ ಕರಾಳ ಕೃತ್ಯಗಳನ್ನು ಮೀರಿಸುವಂತಹ ಸಾಧನೆಗೈದಿದೆ. ಇದರ ಸಂಸ್ಥಾಪಕ ಸದಸ್ಯ ಹಾಗೂ ಮಾಜಿ ಅಧ್ಯಕ್ಷನಾಗಿದ್ದ ಸುನಿಲ್ ಸಿಂಗ್ ಮೂಲ ಸಂಘಟನೆಯಿಂದ ಬೇರ್ಪಟ್ಟು ’ಹಿಂದೂ ಯುವವಾಹಿನಿ – ಭಾರತ್’ ಎಂಬ ಹೊಸ ಸಂಘಟನೆ ಕಟ್ಟಿಕೊಂಡಿದ್ದಾರೆ. ಯೋಗಿಯ ಬಲಗೈ ಭಂಟನಂತಿದ್ದ ಈತ ಈಗ ಯೋಗಿಯ ಬದ್ಧ ವೈರಿ. ಯೋಗಿಯನ್ನು ರಾಜಕೀಯವಾಗಿ ಎದುರಿಸುವ ಉದ್ದೇಶದಿಂದಲೇ ಕಳೆದ ವರ್ಷ ಸಮಾಜವಾದಿ ಪಕ್ಷ ಸೇರಿದ್ದಾರೆ.

ಆ ವೇದಿಕೆಯಿಂದ ಆತ ಆಡಿದ ಆಕ್ರೋಶಭರಿತ ಮಾತುಗಳನ್ನು ಕೇಳಿ: “ಸೀತಾಮಾತೆಯನ್ನು ಅಪಹರಿಸಲಿಕ್ಕೆ ರಾವಣ ಸನ್ಯಾಸಿಯ ಕಾವಿ ವೇಷ ಧರಿಸಿ ಬಂದಿದ್ದ. ಈಗ ಉತ್ತರಪ್ರದೇಶವನ್ನು ನಾಶಪಡಿಸಲಿಕ್ಕಾಗಿ ಈ ಯೋಗಿ ಕಾವಿ ಧರಿಸಿ ಬಂದಿದ್ದಾರೆ, ನಮ್ಮ ಯುವಕರ ಉದ್ಯೋಗ ನಾಶ ಮಾಡಿದ್ದಾರೆ, ಮಹಿಳೆಯರ ಗೌರವ ಹಾಳು ಮಾಡುತ್ತಿದ್ದಾರೆ. ಈ ಆಧುನಿಕ ರಾವಣನನ್ನು ಅಧಿಕಾರದಿಂದ ತೊಲಗಿಸದಿದ್ದರೆ ಪ್ರಜಾತಂತ್ರ, ಸಂವಿಧಾನ ಯಾವುದೂ ಉಳಿಯೋದಿಲ್ಲ” ಅಂತ ಅಬ್ಬರದ ಭಾಷಣ ಬಿಗಿದಿದ್ದಾರೆ.

ಇದೇನು? ಹಿಂದೂ ಯುವವಾಹಿನಿಯ ಮಾಜಿ ಅಧ್ಯಕ್ಷನಲ್ಲಿ ಎಂಥಾ ಮನಪರಿವರ್ತನೆ ಅಂದುಕೊಳ್ಳಬೇಡಿ. ಅವರಿಬ್ಬರ ನಡುವೆ ಬೆಳೆದು ನಿಂತಿರುವ ವೈಷಮ್ಯದ ಪರಿಣಾಮ ಇದು. ಯೋಗಿಗೆ ಮುಖ್ಯಮಂತ್ರಿ ಪದವಿ ಅಯಾಚಿತವಾಗಿ ಸಿಕ್ಕ ಮೇಲೆ ಅಧಿಕಾರ ಮದ ನೆತ್ತಿಗೇರಿ, ತನ್ನ ವಿರೋಧಿಗಳನ್ನು ಅಥವಾ ಪ್ರತಿಸ್ಪರ್ಧಿಗಳನ್ನು ಮಟ್ಟಹಾಕಲು ಅಧಿಕಾರವನ್ನು ಯದ್ವಾತದ್ವಾ ಬಳಸಿಕೊಂಡಿದ್ದಾರೆ. ಯೋಗಿ ಸಿಎಂ ಆದಮೇಲೆ ತೆರವಾದ ಸಂಸದನ ಸ್ಥಾನಕ್ಕೆ ಸುನಿಲ್ ಸಿಂಗ್ ಸ್ಪರ್ಧಿಸಲು ಬಯಸಿದ್ದರು. ಆದರೆ ಯೋಗಿ ಅವಕಾಶ ಕೊಡಬೇಕಲ್ಲಾ?! ಆತ ಸಲ್ಲಿಸಿದ್ದ ನಾಮಪತ್ರ ವಿನಾಕಾರಣ ತಿರಸ್ಕೃತವಾಗಿತ್ತು. ಪರಿಣಾಮವಾಗಿ ಸುನಿಲ್ ಮತ್ತು ಹಿಂದೂ ಯುವವಾಹಿನಿಯ ಇತರೆ ಸಂಗಡಿಗರು ಬಿಜೆಪಿ ಅಭ್ಯರ್ಥಿಯ ವಿರುದ್ಧ ತಿರುಗಿಬಿದ್ದಿದ್ದರು. ಫಲಿತಾಂಶ ಬಂದಾಗ ಯೋಗಿ ಬಾಬಾ ಬಿಜೆಪಿಯಿಂದ ಸತತ ಐದು ಬಾರಿ ಪ್ರತಿನಿಧಿಸಿದ್ದ ಗೋರಖ್‌ಪುರ ಲೋಕಸಭಾ ಕ್ಷೇತ್ರ ಸಮಾಜವಾದಿ ಪಕ್ಷದ ಪಾಲಾಗಿತ್ತು. ಮೇಲ್ಜಾತಿ ದುರಹಂಕಾರದ ವಿರುದ್ಧ ಒಬಿಸಿಗಳು ಒಗ್ಗೂಡಿದ ಪರಿಣಾಮ ಎಸ್‌ಪಿ ಅಭ್ಯರ್ಥಿ ಪ್ರವೀಣ್ ನಿಷಾದ್ ಆಯ್ಕೆಯಾಗಿದ್ದರು.

ಈಗ ಮಾಡಿದ್ದುಣ್ಣೋ ಮಾರಾಯ ಅನ್ನೋ ಪರಿಸ್ಥಿತಿ ಈ ಸನ್ಯಾಸಿಯದು. ತನ್ನ ಕರ್ಮಭೂಮಿ ಗೋರಖ್‌ಪುರದಲ್ಲೇ ತೀವ್ರ ವಿರೋಧ ಎದುರಿಸುತ್ತಿದ್ದು ಸೋಲನ್ನು ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದೆಲ್ಲಾ ಏನೇ ಇದ್ದರೂ ಚುನಾವಣೆಯ ನಡುವಿನಲ್ಲಿ ಈತನನ್ನು ದೂರ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಈತ ಫ್ಯೂಡಲ್ ಮನಸ್ಥಿತಿಯ ಠಾಕೂರ್‌ಗಳ ಕಣ್ಮಣಿ. ಠಾಕೂರ್‌ಗಳನ್ನು ದೂರ ಮಾಡಿಕೊಂಡರೆ ಬಿಜೆಪಿ ಮತ್ತಷ್ಟು ನೆಲಕಚ್ಚೋದು ಗ್ಯಾರಂಟಿ. ಮೂಲತಃ ಆರೆಸ್ಸೆಸ್ಸಿಗನಲ್ಲದ ಈ ಕಾವಿಧಾರಿಯನ್ನು ಇಷ್ಟುದಿನ ತಲೆಮೇಲೆ ಹೊತ್ತು ಮೆರೆಸಿ, ಈಗ ಆತ ಮಾಡುತ್ತಿರುವ ಡ್ಯಾಮೇಜ್‌ಗಳಿಂದ ಹೈರಾಣಾಗಿರುವ ಕೇಸರಿ ಕೂಟ ಚುನಾವಣೆಯ ನಂತರ ಈ ಸನ್ಯಾಸಿಯನ್ನು ಮಠಕ್ಕೆ ಸೀಮಿತಗೊಳಿಸೋದು ನಿಶ್ಚಿತ.


ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ -2022: ಬಿಜೆಪಿ ಸೋಲಿನ ಭವಿಷ್ಯ ನುಡಿದ ನಾಯಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Excellent news, ಜನ ಸಮಾನ್ಯರಿಗೆ ಹಾಗೂ ಬಹುಮುಖ್ಯ ವಾಗಿ ಹಿಂದುಳಿದ, ಅಲ್ಪಸಂಖ್ಯಾತರ, ಮತ್ತು ದಲಿತರಿಗೆ ಈ ವಾಸ್ತವದ ಅರಿವು ಮೂಡಿಸಬೇಕು. ತಮ್ಮ ಅಮೂಲ್ಯ ವಾದ ಮತಗಳನ್ನು ಕ್ರೊಡಿಕರಿಸುವ ಪ್ರಯತ್ನ ಆಗಬೇಕು.

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...