2020 ರ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು ಗುರುವಾರ ಕೈಕೋಳದಲ್ಲಿ ದೆಹಲಿ ನ್ಯಾಯಾಲಯಕ್ಕೆ ಕರೆತರಲಾಗಿದೆ. ಈ ರೀತಿ ಮಾಡದಂತೆ ನ್ಯಾಯಾಲಯ ಆದೇಶ ನೀಡಿದ್ದರೂ, ಆದೇಶ ಧಿಕ್ಕರಿಸಿ ಪೊಲೀಸರು ಇಂತಹ ಕೃತ್ಯವೆಸಗಿದ್ದಾರೆ.
ಇದರಿಂದ ನ್ಯಾಯಾಲಯವು ಮಹಾನಿರ್ದೇಶಕರಿಗೆ (ಜೈಲುಗಳು) ನೋಟಿಸ್ ಜಾರಿ ಮಾಡಿದ್ದು, ಜೈಲು ಅಧಿಕಾರಿಗಳು ಕೈಕೋಳ ಹಾಕುವಂತೆ ಆದೇಶ ಹೊರಡಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್ಜೆ) ಅಮಿತಾಭ್ ರಾವತ್ “ದೆಹಲಿಯ ಪೊಲೀಸ್ ಆಯುಕ್ತರ ಗಮನಕ್ಕೆ ಈ ವಿಷಯ ತರಲು ಸೂಕ್ತವೆಂದು ಭಾವಿಸುತ್ತೇನೆ. ಆರೋಪಿ ಉಮರ್ ಖಾಲಿದ್ ಅವರನ್ನು ಇಂದು ಕೈಕೋಳದಲ್ಲಿ ಕರೆತರಲಾಗಿದೆ. ಇದು ಯಾವ ಆಧಾರದ ಮೇಲೆ, ಆದೇಶದ ಮೇಲೆ ಎಂಬುದನ್ನು ಜವಾಬ್ದಾರಿಯುತ ಹಿರಿಯ ಅಧಿಕಾರಿಯ ಮೂಲಕ ತನಿಖೆಯ ನಂತರ ವರದಿಯನ್ನು ಸಲ್ಲಿಸಬೇಕು” ಎಂದಿದ್ದಾರೆ.
ಇದನ್ನೂ ಓದಿ: ಜೈಲಿನೊಳಗಿಂದ ಹೋರಾಟಗಾರ ಉಮರ್ ಖಾಲಿದ್ ಬರೆದ ಹೃದಯಸ್ಪರ್ಶಿ ಪತ್ರ
ದೆಹಲಿ ಕಾರಾಗೃಹ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು,“ಅವರು ನಿಜವಾಗಿಯೂ ಕೈಕೋಳ ಹಾಕಿದ್ದರೆ ನಾವು ಅದನ್ನು ಪರಿಶೀಲಿಸುತ್ತಿದ್ದೇವೆ. ಕಾರಣ ತಿಳಿಯಲು ಸತ್ಯಶೋಧನೆ ನಡೆಸಲಾಗುವುದು. ಹಿರಿಯ ಅಧಿಕಾರಿಯೊಬ್ಬರು ಕೈಕೋಳಕ್ಕೆ ಆದೇಶ ನೀಡಿದ್ದಾರೆಯೇ ಅಥವಾ ಹಿಂದಿನ ನ್ಯಾಯಾಲಯದ ಆದೇಶದ ಷರತ್ತುಗಳನ್ನು ಪರಿಶೀಲಿಸುತ್ತೇವೆ” ಎಂದಿದ್ದಾರೆ.
“ಅವರನ್ನು ಏಕೆ ಕೈಕೋಳದಲ್ಲಿ ಕರೆತರಲಾಗಿದೆ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ” ಎಂದು ವಿಶೇಷ ಘಟಕದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಖಾಲಿದ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಘಟಕ ಮತ್ತು ದೆಹಲಿ ಪೊಲೀಸ್ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಗಳು ನೋಟಿಸ್ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
’ನ್ಯಾಯಾಲಯದಿಂದ ಯಾವುದೇ ಆದೇಶವಿಲ್ಲದಿದ್ದರೂ ಮತ್ತು ಎರಡು ಪ್ರತ್ಯೇಕ ನ್ಯಾಯಾಲಯಗಳು ನೀಡಿದ ಎರಡು ವ್ಯತಿರಿಕ್ತ ಆದೇಶಗಳ ಹೊರತಾಗಿಯೂ ಪೊಲೀಸರು ಅವರನ್ನು ಕೈಕೋಳದಲ್ಲಿ ಹಾಜರುಪಡಿಸಿದ್ದಾರೆ’ ಎಂದು ಉಮರ್ ಪರ ಹಿರಿಯ ವಕೀಲ ತ್ರಿದೀಪ್ ಪೈಸ್ ತಿಳಿಸಿದ ನಂತರ ಎಎಸ್‌ಜೆ ರಾವತ್ ಸಂಜೆ ನೋಟಿಸ್ ಜಾರಿಗೊಳಿಸಿದ್ದಾರೆ.
ಇದು ಆರೋಪಿಯ ಹಕ್ಕುಗಳ ಉಲ್ಲಂಘನೆಯಾಗಿದೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ತಪ್ಪುಗಳನ್ನು ಕಂಡುಹಿಡಿಯಲು ತನಿಖೆ ನಡೆಸಬೇಕು ಎಂದು ಹಿರಿಯ ವಕೀಲ ತ್ರಿದೀಪ್ ಪೈಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ದೆಹಲಿ ಗಲಭೆಗೆ ಸಂಬಂಧಿಸಿದಂತೆ, ಉಮರ್ ಖಾಲಿದ್ ಮತ್ತು ಇತರ ಹಲವರ ವಿರುದ್ಧ ಕಠಿಣವಾದ ಭಯೋತ್ಪಾದನಾ ವಿರೋಧಿ ಕಾನೂನಾದ ‘ಯುಎಪಿಎ’ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಅವರನ್ನು ದೆಹಲಿ ಗಲಭೆಯ ‘ಮಾಸ್ಟರ್‌ಮೈಂಡ್‌ಗಳು’ ಎಂದು ಆರೋಪಿಸಲಾಗಿದೆ. ಈ ಗಲಭೆಯಲ್ಲಿ 53 ಜನರು ಮೃತಪಟ್ಟಿದ್ದರು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ: ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಲಾಗಿದೆ: ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್



ಸರ್ ಲಾಯರ್ ಜಗದೀಶ್ ರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ನಿಮ್ಮ ಅನಿಸಿಕೆಗಳು ಅವರ ಹೋರಾಟದ ಬಗ್ಗೆ ತಿಳಿಸಿ ಕಾರ್ಯಂಗ ನ್ಯಾಯಾಂಗ ಕೆಲಸಮಾಡುತ್ತಿಲ್ಲ ಅನಿಸುತ್ತಿದೆ ಸರ್ಕಾರ ಇದ್ದು ಇಲ್ಲದಂತಿದೆ ನಿಮ್ಮ ಹೋರಾಟ ಹೋರಾಟ ಗಾರರು ಜೊತೆಯಲಿ
ಸರ್ವೋಚ್ಚ ನ್ಯಾಯಾಲಯದ ಆದೇಶವನ್ನೂ ದಿಕ್ಕರಿಸಿ ಉಮರ್ ಕಾಲೀದ್ ಅವರಿಗೆ ಕೈಕೋಳ ತೊಡಿಸಿರುವುದು ಕಂಡನಾರ್ಹ.