Homeಮುಖಪುಟಕೇಂದ್ರ ಮುಂಗಡ ಪತ್ರಗಳು; ಸಡಿಲಗೊಳ್ಳುತ್ತಿರುವ ಸಮಾಜವಾದಿ ಚೌಕಟ್ಟು

ಕೇಂದ್ರ ಮುಂಗಡ ಪತ್ರಗಳು; ಸಡಿಲಗೊಳ್ಳುತ್ತಿರುವ ಸಮಾಜವಾದಿ ಚೌಕಟ್ಟು

- Advertisement -
- Advertisement -

ತೊಂಬತ್ತರ ದಶಕದ ಆದಿ ಭಾಗದಿಂದ ಆರಂಭವಾದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನಿತಿಯನ್ನು ಕೇಂದ್ರದಲ್ಲಿ ಸರ್ಕಾರ ನಡೆಸಿದ ಎಲ್ಲ ಪಕ್ಷಗಳು ನಿಷ್ಪಕ್ಷಪಾತವಾಗಿ ಅನುಸರಿಸುತ್ತಾ ಬಂದಿವೆ. ಆರ್ಥಿಕ ಕ್ಷೇತ್ರದಲ್ಲಿನ ಲೈಸನ್ಸ್ ರಾಜ್ ಮತ್ತು ಭ್ರಷ್ಟಾಚಾರಗಳನ್ನು ತಗ್ಗಿಸುವ ಉದ್ಘೋಷದಿಂದ ಆರಂಭವಾದ ಈ ಸುಧಾರಣೆಗಳನ್ನು, ಮುಕ್ತ ಮಾರುಕಟ್ಟೆಯ ನೀತಿಯನ್ನು ವರ್ಷದಿಂದ ವರ್ಷಕ್ಕೆ, ದಶಕದಿಂದ ದಶಕಕ್ಕೆ ಜಾರಿಗೊಳಿಸುತ್ತಾ ಬರಲಾಗಿದೆ. ಇದೀಗ ಬಂಡವಾಳ ಶಕ್ತಿಗಳನ್ನು ’ಸಂಪತ್ತು ಸೃಷ್ಟಿ’ಕಾರರೆಂದು ವೈಭವೀಕರಿಸಿ ಹತ್ತುಹಲವು ಸೌಲಭ್ಯಗಳನ್ನು ನೀಡಿ ಓಲೈಸಲಾಗುತ್ತಿದೆ. ಮುಕ್ತ ಪ್ರವೇಶ ಮತ್ತು ಮುಕ್ತ ನಿರ್ಗಮನದ ಅವಕಾಶವಿರುವ ಮುಕ್ತ ಮಾರುಕಟ್ಟೆಯ ಜಾಗತೀಕರಣ ಈಗ ದೇಶದ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಸಡಿಲಗೊಳಿಸುತ್ತಿದೆ.

ಇಲ್ಲಿ ಉದಾರೀಕರಣ ಎಂದರೆ ಖಾಸಗೀ ಬಂಡವಾಳದಾರರಿಗೆ, ಅದರಲ್ಲೂ ಬೃಹತ್ ಉದ್ದಿಮೆದಾರರ ಸಂಪತ್ತಿನ ಕ್ರೋಢೀಕರಣಕ್ಕೆ ಅನುವು ಮಾಡಿಕೊಡುವುದಾಗಿದೆ. ಆರ್ಥಿಕ ಕ್ಷೇತ್ರದಲ್ಲಿನ ಸರ್ಕಾರದ ಹಸ್ತಕ್ಷೇಪವನ್ನು ಕೊನೆಗೊಳಿಸಿ, ಸುಖೀ ಸಾಮೂಹಿಕ ಬದುಕಿಗಾಗಿ ರೂಪಿಸಿಕೊಂಡಿರುವ ನಿಯಂತ್ರಣಗಳನ್ನು ಕೈಬಿಟ್ಟು, ಖಾಸಗೀ ಕ್ರೋನಿ ಕಾರ್ಪೊರೇಟ್ ವ್ಯವಹಾರಗಳಿಗೆ ಅನುಕೂಲ ಮಾಡಿಕೊಡುವುದೇ ಇದರ ನಿಶ್ಚಿತ ಉದ್ದೇಶ. ತೊಂಬತ್ತರ ದಶಕದ ಆರಂಭದಲ್ಲಿ ಪಿ.ವಿ. ನರಸಿಂಹರಾವ್ ಅವರ ಪ್ರಧಾನ ಮಂತ್ರಿತ್ವದಲ್ಲಿ, ಅರ್ಥಶಾಸ್ತ್ರಜ್ಞರಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ವಿತ್ತ ಮಂತ್ರಿಯಾಗಿ ಉದಾರ ಆರ್ಥಿಕ ನೀತಿಯನ್ನು ಯಾವ ಉದ್ದೇಶಗಳಿಂದ ಜಾರಿಗೊಳಿಸಿದರೋ ಆ ಉದ್ದೇಶಗಳು, ಅವರು ಒಂದು ದಶಕದವರೆಗೆ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದರೂ ವಾಸ್ತವವಾಗಲು ಸಾಧ್ಯವಾಗಲಿಲ್ಲ. ಇವತ್ತು ಅವರನ್ನೇ ಕೇಳದರೂ ಇದನ್ನು ಒಪ್ಪದೇ ಇರಲಾರರು.

ಡಾ. ಮನಮೋಹನ್ ಸಿಂಗ್ ಅವರು ಮುಖ್ಯವಾಗಿ ಆರಂಭಿಸಿದ ಜಾಗತೀಕರಣದ ಹೊಸ ಆರ್ಥಿಕ ನೀತಿಯ ಬಂಡಿ, ನಂತರದ ವಾಜಪೇಯಿಯವರ ಪ್ರಧಾನಿತ್ವದಲ್ಲಿ ಮತ್ತು ಮಾನ್ಯ ಸಿಂಗ್ ಅವರೇ ಪ್ರಧಾನ ಮಂತ್ರಿಯಾಗಿದ್ದ ಸರ್ಕಾರಗಳು ವೇಗಗೊಳಿಸಿ, ಇಂದು ಯಾವ ಹಂತ ತಲುಪಿದೆ ಎಂದರೆ, ಮೋದೀಜಿಯವರ ಸರ್ಕಾರ ಅದಕ್ಕೆ ಜೋಡು ಕುದುರೆಗಳನ್ನು ಕಟ್ಟಿ ಓಡಿಸುತ್ತಿದೆ. ನಮ್ಮ ಯಾವ ಸಂವಿಧಾನದ ಪೀಠಿಕೆಯಲ್ಲಿ, “ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ” ಎಂದು ಮಾಲೆಗಟ್ಟಿಕೊಂಡಿದ್ದೇವೆಯೋ, ಅದರಲ್ಲಿನ ’ಸಮಾಜವಾದಿ’, ’ಜಾತ್ಯತೀತ’, ’ಪ್ರಜಾಪ್ರಭುತ್ವ’ ಮತ್ತು ’ಗಣರಾಜ್ಯ’ ಎನ್ನುವ ಕುಸುಮಗಳು ಉದುರಿ, ಸರ್ವಾಧಿಕಾರ ಮೂಲದ ’ಸಾರ್ವಭೌಮ’ ರಾಜ್ಯವಷ್ಟೇ ಉಳಿಯುವ ಲಕ್ಷಣಗಳು ಕಾಣುತ್ತಿವೆ. ಸ್ವಾತಂತ್ರ್ಯ ಚಳವಳಿಯ ಕನಸುಗಳು ಕಮರಿ, ’ಸ್ವರಾಜ್ಯ’ ಎನ್ನುವುದು ’ಕಾರ್ಪೊರೇಟ್’ ರಾಜ್ಯವಾಗಿ ರೂಪಾಂತರಗೊಳ್ಳುವ ನಿಟ್ಟಿನಲ್ಲಿ ಇವತ್ತಿನ ವಿದ್ಯಮಾನಗಳು ಜರುಗುತ್ತಿವೆ.

ಇದಕ್ಕೆ ಅನುಗುಣವಾಗಿ ರಚನೆಯಾದ ಮತ್ತು ಬದಲಾದ ಕಾನೂನುಗಳು ಹಾಗೂ ನಿಯಮಾವಳಿಗಳ ಜಾರಿ, ಪರಿಣಾಮಗಳನ್ನು ಪ್ರತಿವರ್ಷ ಕೇಂದ್ರ ಸರ್ಕಾರ ರೂಪಿಸಿ ಅನುಷ್ಠನಗೊಳಸುವ ಮುಂಗಡ ಪತ್ರಗಳು ಪ್ರತಿಬಿಂಬಿಸುತ್ತಿವೆ. ಕಳೆದ ಎರಡು ದಶಕಗಳ ಮುಂಗಡ ಪತ್ರಗಳ ಆಯವ್ಯಯಗಳನ್ನು ಮತ್ತು ಅವು ಅನುಷ್ಠಾನಗೊಂಡಿರುವುದರ ಕುರಿತು ವಾಸ್ತವ ಚಿತ್ರಣವನ್ನು ನೀಡುವ ವಾರ್ಷಿಕ ಆರ್ಥಿಕ ಸಮೀಕ್ಷೆಗಳನ್ನು ನೋಡಿದರೆ, ನಮ್ಮ ಅರ್ಥ ವ್ಯವಸ್ಥೆ ಹೇಗೆ ಸಂವಿಧಾನ ಸೂಚಿತ ’ಮಿಶ್ರ ಅರ್ಥ ವ್ಯವಸ್ಥೆ’ಯಿಂದ ’ಬಂಡವಾಳಶಾಹಿ ಅರ್ಥವ್ಯವಸ್ಥೆ’ಯತ್ತ ಸಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಗಳನ್ನು ಸಮತೋಲನದಲ್ಲಿರಿಸಿಕೊಂಡು ಸಾಗಬೇಕಿದ್ದ ಸರ್ಕಾರಗಳು, ಅದರಲ್ಲೂ ಇಂದು ಅಧಿಕಾರದಲ್ಲಿರುವ ಒಕ್ಕೂಟ ಸರ್ಕಾರ, “ವ್ಯವಹಾರದಲ್ಲಿರುವುದು ಸರ್ಕಾರದ ವ್ಯವಹಾರವಲ್ಲ” ಎನ್ನುವ ಅಪ್ಪಟ ಸಂಪತ್ತು ಆಧಾರಿತ ಅರ್ಥಶಾಸ್ತ್ರದ ವ್ಯಾಖ್ಯಾನದ ಕಡೆಗೆ ದಾಪುಗಾಲಿಡುತ್ತಿದೆ. ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಸಿಕೊಂಡಿರುವ, ರಾಷ್ಟ್ರಗಳ ಸಂಪತ್ತನ್ನು ಕುರಿತು ಅಧ್ಯಯನ ಮಾಡುವುದೇ ಅರ್ಥಶಾಸ್ತ್ರ ಎಂದು ಹೇಳಿದ ಆಡಮ್ ಸ್ಮಿತ್ ಅವರ ಆರ್ಥಿಕ ಚಿಂತನೆಗಳನ್ನು ಮತ್ತು ಅದಕ್ಕೂ ಹಿಂದೆ ಇದ್ದರೆನ್ನುವ ಸನಾತನ ಸಂದರ್ಭದ ಚಾಣಕ್ಯ
ಅರ್ಥಾತ್ ಕೌಟಿಲ್ಯ ಪ್ರತಿಪಾದಿತ ರಾಜಕೀಯ ಆರ್ಥಿಕ ನೀತಿಯನ್ನು ಶಿರಸಾವಹಿಸಿ ಜಾರಿಗೊಳಿಸುವ ಬದ್ಧತೆಯನ್ನು ಇತ್ತೀಚಿನ ವರ್ಷಗಳ ಆರ್ಥಿಕ ಸಮೀಕ್ಷೆ ಮತ್ತು ಮುಂಗಡ ಪತ್ರಗಳಲ್ಲಿ ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ. ಇದು ಬರೀ ತೆರೆಮರೆಯ ಅಜೆಂಡಾವಾಗಿರದೆ ಪಕ್ಷ ಪ್ರಣಾಳಿಕೆಗಳಲ್ಲೂ ಸ್ಪಷ್ಟವಾಗಿದೆ.

ಇದರ ಬಗೆಗಿನ ಬದ್ಧತೆಗಳು ಅದೆಷ್ಟು ಗಟ್ಟಿಯಾಗಿವೆ ಎಂದರೆ, 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮತ್ತು ಇದರ ಭಾಗವಾಗಿ ಪುನಾರಚಿತಗೊಂಡಿರುವ ಪದವಿ ತರಗತಿಗಳ ಅರ್ಥಶಾಸ್ತ್ರ ವಿಷಯದಲ್ಲಿ ಇದು ಪಠ್ಯವಾಗಿ ಕುಳಿತಿದೆ. ಚುನಾಯಿತ ಸರ್ಕಾರಗಳು ಬಂಡವಾಳಶಾಹಿ ಅರ್ಥವ್ಯವಸ್ಥೆಯತ್ತ ವಾಲುವುದೆಂದರೆ ಸ್ವಾತಂತ್ರ್ಯ, ಸರ್ವೋದಯ, ನಿಸರ್ಗ ನ್ಯಾಯ, ಸಮತೆ, ಸಹಬಾಳ್ವೆಯ ಜನಜೀವನದಿಂದ ದೂರ ಸರಿಯುವುದಾಗಿದೆ. ಅರ್ಥಶಾಸ್ತ್ರ ನೀತಿಶಾಸ್ತ್ರದಿಂದ ಕಳಚಿಕೊಂಡು ಕತ್ತು ಕೊಯ್ಯುವ ತೀವ್ರತೆಯ ಮಾರುಕಟ್ಟೆ ಮೂಲದ ಪೈಪೋಟಿಯಲ್ಲಿ ಗೆಲ್ಲುವ ಕುತಂತ್ರಗಳನ್ನು ಬೋಧಿಸುವ ಜನವಿರೋಧಿ ಶಾಸ್ತ್ರವಾಗಿ ಪರಿವರ್ತನೆಯಾಗುವುದಾಗಿದೆ. ಪ್ರಜಾಪ್ರಭುತ್ವದ ಆಶಯಗಳಿಗೆ ಇದು ಸರಿಯಲ್ಲ ಎನ್ನುವ ಕಾರಣಕ್ಕೆ ಅಲ್ಫ್ರೆಡ್ ಮರ್ಷಲ್ ಮತ್ತು ಜೆ.ಎಮ್. ಕೇನ್ಸ್ ಮುಂತಾದ ಅರ್ಥಶಾಸ್ತ್ರಜ್ಞರ ಜನಕಲ್ಯಾಣ ಆಧಾರಿತ ’ಸುಖೀ ಅರ್ಥಶಾಸ್ತ್ರ’ ತತ್ವಗಳು ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯವಾದವು.

ಇಂತಹ ಸುಖೀರಾಜ್ಯ ಪರಿಕಲ್ಪನೆಯ ಆರ್ಥಿಕ ತತ್ವಗಳು ಮತ್ತು ವ್ಯವಸ್ಥೆಯಿಂದ ದೂರವಾಗುತ್ತಿರುವ ಸತ್ಯವನ್ನು ಇತ್ತೀಚಿನ ಮುಂಗಡ ಪತ್ರಗಳು ಮತ್ತು ಆರ್ಥಿಕ ಸಮೀಕ್ಷೆಗಳು ಹೇಳುತ್ತವೆ. ಇದನ್ನು ಇಷ್ಟೊಂದು ನಿಖರವಾಗಿ ಇನ್ನಾವ ದಾಖಲೆಗಳೂ ಹೇಳಲಾರವು. ಸುಮ್ಮನೆ ಒಂದಷ್ಟು ಘಟನೆಗಳತ್ತ ಕಣ್ಣು ಹಾಯಿಸುವುದಾದರೆ,

1. ಖಾಸಗೀಕರಣ

ಸಾರ್ವಜನಿಕ ವಲಯದ ಬೃಹತ್ ವ್ಯವಹಾರ ಸಂಸ್ಥೆಗಳನ್ನು ಬೃಹತ್ ಖಾಸಗೀ ಕಂಪನಿಗಳಿಗೆ ವರ್ಗಾವಣೆ ಮಾಡುವುದು. ಮತ್ತು, ಆ ಖಾಸಗೀ ಬಂಡವಾಳದಾರರನ್ನು ’ಸಂಪತ್ತು ಸೃಷ್ಟಿಕಾರ’ರೆಂದು ವೈಭವೀಕರಿಸಿ ಸರ್ಕಾರದ ಸಾರ್ವಭೌಮತ್ವದ ವ್ಯಾಪ್ತಿಯಲ್ಲಿ ಬರುವ ಸಂಪನ್ಮೂಲಗಳನ್ನು ಅವರಿಗೆ ಪರಭಾರೆ ಮಾಡುವಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವುದು. ಅತ್ಯಂತ ಸುಸ್ಥಿರವಾಗಿ ಕಾರ್ಯನಿರ್ವಹಿಸುತ್ತಾ, ಹೆಚ್ಚಿನ ಉದ್ಯೋಗಾಕಾಶಗಳನ್ನು ನೀಡುತ್ತಾ, ಸರ್ಕಾರಗಳಿಗೆ ಹೆಚ್ಚಿನ ತೆರಿಗೆ ಮತ್ತು ಲಾಭವನ್ನು ತಂದುಕೊಡುತ್ತಿರುವ ಹಾಗೂ ’ನವರತ್ನಗಳು’ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಭಾರತ್ ಪೆಟ್ರೋಲಿಯಂ ಮತ್ತು ಕೆಮಿಕಲ್ಸ್ ಲಿ., ಭಾರತ್ ಸಂಚಾರ್ ನಿಗಮ್ ಲಿ., ಭಾರತೀಯ ಜೀವ ವಿಮಾ ನಿಗಮ ಲಿ., ಮುಂತಾದುವುಗಳ ಪರೋಕ್ಷ ಪರಭಾರೆ ಇದಕ್ಕೆ ಸ್ಪಷ್ಟ ಉದಾಹರಣೆಗಳಾಗಿವೆ. ಇಂಡಿಯನ್ ಏ ರ್‌ಲೈನ್ಸ್ ಲಿ., ನಂತಹ ಸಂಸ್ಥೆಗಳು ನಷ್ಟ ಹೊಂದಿದ್ದರೆ ಅದಕ್ಕೆ ಅವುಗಳನ್ನು ನಿರ್ವಹಿಸುವ ಸರ್ಕಾರದ ಉಸ್ತುವಾರಿಯ ಕೆಟ್ಟ ಆಡಳಿತ ಕಾರಣವೇ ಹೊರತು ಇನ್ನಾರೂ ಅಲ್ಲ. ಇನ್ನೇನಾದರೂ ಕಾರಣಗಳನ್ನು ಹೇಳುವುದು ಜವಾಬ್ದಾರಿಯನ್ನು ವರ್ಗಾಯಿಸುವ ಆತ್ಮವಂಚನೆ ಮಾತ್ರ. ಮನೆಯ ಸದಸ್ಯನೊಬ್ಬನಿಗೆ ರೋಗ ತಗುಲಿದರೆ ಅವನಿಗೆ ಸರಿಯಾದ ಚಿಕಿತ್ಸೆ ಕೊಟ್ಟೋ, ಕೊಡಿಸಿಯೋ ಆರೋಗ್ಯವಂತನನ್ನಾಗಿ ಮಾಡಿ ಇಟ್ಟುಕೊಳ್ಳುವುದರ ಬದಲಾಗಿ ಕಂಡವರ ಮನೆಯಲ್ಲಿ ಜೀತಕ್ಕಿಡುವ ಅಥವಾ ಮಾರುವ ಕ್ರಮಗಳು ಇವಾಗಿವೆ. ಬಂಡವಾಳ ಹಿಂತೆಗೆತ ಇದಕ್ಕೆ ಆರಿಸಿಕೊಂಡ ಮಹಾ ಮಂತ್ರ.

ಇದರ ಕಾರ್ಯಾಚರಣೆಯಾಗಿ ಇದೀಗ ನೇಯ್ದಿರುವ ರಾಷ್ಟ್ರೀಯ ನಗದೀಕರಣ ಕೊಳವೆ ಮಾರ್ಗ (ನ್ಯಾಷನಲ್ ಮೊನೆಟೈಸೆಷನ್ ಪೈಪ್ ಲೈನ್-ಎನ್‌ಎಮ್‌ಪಿಎಲ್, ಬಂಡವಾಳ ಹಿಂತೆಗೆತ ಕ್ರಮಕ್ಕೆ ಇಟ್ಟ ಮತ್ತೊಂದು ಹೆಸರು!) ಯೋಜನೆಯ ಅಡಿಯಲ್ಲಿ ದೇಶದಲ್ಲಿನ ಹಲವು ನಗರಗಳ ಏರ್‌ಪೋರ್ಟ್‌ಳನ್ನು ಆದಾನಿ ಸಮೂಹದ ಕಂಪನಿಗಳಿಗೆ ವಹಿಸಿಕೊಡಲಾಗಿದೆ. ಈ ವಿಧಾನವನ್ನು ರೈಲ್ವೆ ಇಲಾಖೆಯೂ ಒಳಗೊಂಡಂತೆ ಎಲ್ಲೆಲ್ಲಿ ಯಾವ ಯಾವ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಗುತ್ತಿಗೆ ಕೊಡಬಹುದಾದ ಆಸ್ತಿಗಳಿವೆಯೋ, ಅವುಗಳನ್ನು ಹುಡುಕಿಹುಡುಕಿ ಗುತ್ತಿಗೆ ಕೊಡುವ ಮೂಲಕ ಮುಂಗಡ ಪತ್ರದ ಕೊರತೆಯನ್ನು ತುಂಬಿಕೊಳ್ಳುವುದು. ಯಾವುದನ್ನು ಖಾಸಗಿಯವರು ಯಶಸ್ವಿಯಾಗಿ ನಿರ್ವಹಿಸುತ್ತಾರೆ ಎನ್ನುವ ನಂಬಿಕೆಯನ್ನು ಸರ್ಕಾರ ಇಟ್ಟಿದೆಯೋ ಅದನ್ನು ತಾನೇ ನಿರ್ವಹಿಸಲು ಸೋತಿರುವುದರ ದಿವ್ಯ ಸಾಕ್ಷಿ. ಸುಲಭವಾಗಿ ವ್ಯವಹಾರವನ್ನು ನಿರ್ವಹಿಸುವಂತಾಗುವ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್) ಕ್ರಮಗಳನ್ನು ಖಾಸಗಿಯವರಿಗೆ ಸೃಷ್ಟಿಸಿಕೊಡುವುದು ತಪ್ಪೇನಲ್ಲ.

ಆದರೆ ಯಾವುದನ್ನು ತಾನು ಜವಾಬ್ದಾರಿಯಿಂದ ನಿರ್ವಹಿಸಿ ಕಾರ್ಮಿಕರ ಹಿತ ಕಾಯುವ ಮೂಲಕ ಪರಿಸರಸ್ನೇಹಿ ಸುಸ್ಥಿರ ಅಭಿವೃದ್ಧಿಗೆ ಖಾಸಗಿಯವರಿಗೂ ಮಾದರಿಯಾಗಬೇಕಿತ್ತೋ, ಅಂತಹ ಗುರುತರ ಹೊಣೆಗಾರಿಕೆಯನ್ನು ಬಿಟ್ಟುಕೊಟ್ಟು, ಶೋಷಣೆ ಮೂಲದ ಲಾಭಗಳಿಕೆಯ ಮಾರ್ಗವನ್ನೇ ದಕ್ಷ ಕಾರ್ಯಕ್ಷಮತೆ ಎಂದು ನಂಬಿರುವ ಬೃಹತ್ ಬಂಡವಾಳದಾರರ ವಶಕ್ಕೆ ಒಪ್ಪಿಸುತ್ತಿರುವುದು, ಎರಡನೇ ಬಹು ದೊಡ್ಡ ಪ್ರಜಾಪ್ರಭುತ್ವ ಎನ್ನುವ ಜಾಗತಿಕ ಮಹತ್ವ ಪಡೆದ ದೇಶಕ್ಕೆ ನಿಜಕ್ಕೂ ಸರಿಯಾದುದಲ್ಲ. ಎನ್‌ಎಮ್‌ಪಿಎಲ್ ಯೋಜನೆಯ ಕೆಳಗೆ ರಾಷ್ಟ್ರೀಯ ಸ್ವತ್ತುಗಳನ್ನು ಪರಭಾರೆ ಮಾಡಲಾಗುತ್ತಿದೆ ಎನ್ನುವ ಟೀಕೆಗೆ ಸರ್ಕಾರದ ವಕ್ತಾರರು ಕೊಟ್ಟಿರುವ ಉತ್ತರ, “ನಿರುಪಯುಕ್ತವಾಗಿರುವ ಸರ್ಕಾರಿ ಆಸ್ತಿಗಳನ್ನು ಉತ್ಪಾದಕ ಆಸ್ತಿಗಳನ್ನಾಗಿಸುವ ಕ್ರಮ ಇದಾಗಿದ್ದು, ಆಸ್ತಿಗಳನ್ನು ಮಾರಾಟ ಮಾಡದೆ ನಿರ್ದಿಷ್ಟ ಅವಧಿಗೆ ಗುತ್ತಿಗೆ ಕೊಡಲಾಗಿದೆ” ಎನ್ನುವುದಾಗಿದೆ. ಈಗ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ, ಬೆಂಗಳೂರಿನ ಬಿಬಿಎಂಪಿ ಮತ್ತು ರಾಜ್ಯಾದ್ಯಂತ ಇರುವ ಸಿಎ ಸೈಟುಗಳನ್ನು ಖಾಸಗಿಯವರಿಗೆ ಸಾರ್ವಜನಿಕ ಉಪಯೋಗಕ್ಕಾಗಿ ಕೊಟ್ಟಂತಹವುಗಳು, ಅವಧಿ ಮುಗಿದಮೇಲೆ ಎಷ್ಟು ವಾಪಾಸು ಬಂದಿವೆ? ಒಟ್ಟಿನಲ್ಲಿ ಇದು ಮಂದಗತಿಯಲ್ಲಿ ಮಾಲೀಕತ್ವವನ್ನು ವರ್ಗಾಯಿಸುವ ಒಂದು ವಿಧಾನವಲ್ಲದೆ ಮತ್ತೇನೂ ಅಲ್ಲ. ಬೃಹತ್ ಖಾಸಗಿ ಉದ್ದಿಮೆದಾರರಿಗೆ ವಾಣಿಜ್ಯ ಬ್ಯಾಂಕುಗಳಿಂದ ನೀಡಿದ ಲಕ್ಷಾಂತರ ಕೋಟಿ ರೂಪಾಯಿಗಳ ಕೆಟ್ಟ ಸಾಲವನ್ನು ರೈಟಾಫ್ ಮಾಡಿದಂತೆಯೇ ಇದೂ ಕೂಡ ಆಗಿದೆ. ತತ್ಸಂದರ್ಭದಲ್ಲಿ ಜನರ ಪ್ರತಿರೋಧಗಳು ಉಲ್ಬಣಗೊಳ್ಳದಂತೆ ಬಂಡವಾಳಾಹಿಗಳಿಗೆ ಅನುಕೂಲ ಮಾಡಿಕೊಡುವ ಇಂತಹ ಹಿಂಬಾಗಿಲ ತಂತ್ರಗಳನ್ನು ಸರ್ಕಾರಗಳಿಗೆ ಹೇಳಿಕೊಡುವುದು ಇದೇ ಕಾರ್ಪೊರೆಟ್ ದಿಗ್ಗಜರು.

ಅಷ್ಟಕ್ಕೂ, ಇವುಗಳ ಪರಭಾರೆಯಿಂದಾಗಿ ಸರ್ಕಾರದ ಹೊರಗಿನ ಅಥವಾ ಒಳಗಿನ ಸಾಲಗಳು ಗುರುತರವಾಗಿ ಕಡಿಮೆಯಾಗಿವೆಯಾ ಎಂದು ನೋಡಿದರೆ, ಅದೂ ಇಲ್ಲ. ವರ್ಷಕ್ಕೊರ್ಷ ಪ್ರತೀ ಮುಂಗಡ ಪತ್ರದಲ್ಲೂ ತರುವ ಸಾಲ ಮತ್ತು ಕೊಡುವ ಬಡ್ಡಿ ಎರಡೂ ಹೆಚ್ಚುತ್ತಿವೆ! ಒಂದರ್ಥದಲ್ಲಿ ಖಾಸಗೀಕರಣ ಮೂಲದ ಕಾರ್ಪೊರೆಟೀಕರಣ ಎಂದರೆ ದೇಶದ ಆಡಳಿತದಲ್ಲಿನ ಸೂತ್ರಗಳನ್ನು ಬೃಹತ್ ಬಂಡವಾಳದಾರರ ಕೈಗೆ ಕೊಡುವುದೇ ಆಗಿದೆ. ಏಕೆಂದರೆ, ಚುನಾವಣೆಗಳಲ್ಲಿ ಗೆದ್ದು ಸರ್ಕಾರ ರಚಿಸಿ ಆಡಳಿತ ನಡೆಸುವ ಪಕ್ಷಗಳಿಗೆ ಬಂಡವಾಳ ಹಾಕುವವರು ಇವರೇ ಆಗಿರುತ್ತಾರೆ. ಹಾಗಾಗಿ, ಇವರಿಂದ ನೆರವು ಪಡೆದವರು ಇವರನ್ನು ಸಂತೃಪ್ತಿಗೊಳಿಸದೆ ಗತ್ಯಂತರವಿಲ್ಲ.

2. ತೆರಿಗೆಗಳು

ತೆರಿಗೆ ಹಾಕುವ ಮೂಲ ಉದ್ದೇಶವೇ ಸಂಪನ್ಮೂಲಗಳ ಕ್ರೋಢೀಕರಣ. ಇವುಗಳನ್ನು ವಿಶಾಲಾರ್ಥದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳೆಂದು ವರ್ಗೀಕರಿಸಲಾಗಿದೆ. ಯಾವ ತೆರಿಗೆ ಭಾರವನ್ನು ಇತರರಿಗೆ ವರ್ಗಾಯಿಸಲು ಬರುವುದಿಲ್ಲವೋ ಅವು ಪ್ರತ್ಯಕ್ಷ ತೆರಿಗೆಗಳು, ಮತ್ತು ಯಾವುಗಳ ಭಾರವನ್ನು ಇನ್ನೊಬ್ಬರಿಗೆ ವರ್ಗಾಯಿಸಲು ಬಾರದೆ ಸ್ವತಃ ಹೊರಬೇಕೋ ಅವು ಪರೋಕ್ಷ ತೆರಿಗೆಗಳು. ಇಲ್ಲಿ ಕಾರ್ಪೊರೆಟ್ ಆದಾಯ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆಗಳು ಪ್ರತ್ಯಕ್ಷ ತೆರಿಗೆಗಳಾದರೆ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ), ಕಸ್ಟಮ್ಸ್ ಡ್ಯೂಟಿ ಮತ್ತು ಕೇಂದ್ರ ಅಬಕಾರಿ ಶುಲ್ಕಗಳು ಪರೋಕ್ಷ ತೆರಿಗೆಗಳಾಗಿವೆ. ಪ್ರತ್ಯಕ್ಷ ಅಥವಾ ನೇರ ತೆರಿಗೆ ಹಾಕುವ ಉದ್ದೇಶ, ಸಂಪನ್ಮೂಲಗಳ ಸಂಗ್ರಹದ ಜೊತೆಜೊತೆಗೆ, ಜನಸಾಮಾನ್ಯರು ಮತ್ತು ಶ್ರೀಮಂತರ ನಡುವಿನ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವುದು ಮತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಕ್ರೋಢೀಕರಣವಾಗದಂತೆ ನೋಡಿಕೊಳ್ಳುವುದಾಗಿದೆ. ಇತ್ತೀಚಿನ ಮುಂಗಡ ಪತ್ರಗಳಲ್ಲಿ ಬಿಂಬಿತವಾಗಿರುವಂತೆ, ಜನಸಾಮಾನ್ಯರಿಗೆ ಹೊರೆಯಾಗುವ ಪರೋಕ್ಷ ತೆರಿಗೆ, ಅದರಲ್ಲೂ ಜಿಎಸ್‌ಟಿ ಹೊರೆ ಹೆಚ್ಚಾಗುತ್ತಿದ್ದು, ಕಾರ್ಪೊರೆಟ್ ಆದಾಯ ತೆರಿಗೆ ದರ ಕಡಿಮೆಯಾಗಿದೆ.

ಪ್ರಸ್ತುತ ಮುಂಗಡ ಪತ್ರವನ್ನು ಮಂಡನೆ ಮಾಡುವ ಸಂದರ್ಭದಲ್ಲಿ ವಿತ್ತ ಸಚಿವರು ತೆರಿಗೆ ಹಾಕುವ ಪ್ರಭುತ್ವದ ಜವಾಬ್ದಾರಿ ಕುರಿತಂತೆ ಮಹಾಭಾರತದ ಶ್ಲೋಕವೊಂದನ್ನು ಉದಾಹರಿಸಿ ತೆರಿಗೆ ಹಾಕುವ ಕ್ರಮ ಧಾರ್ಮಿಕವಾಗಿರಬೇಕು ಎಂದಿದ್ದಾರೆ. ಹಾಗಾದರೆ, ದೊಡ್ಡ ಕಾರ್ಪೊರೇಟ್ ಕಂಪನಿಗಳ ಬೃಹತ್ ಲಾಭದ ಮೇಲೆ ಕಡಿಮೆ ದರದ ತೆರಿಗೆ ವಿಧಿಸಿ, ಜನಸಾಮಾನ್ಯರು ಬಳಸುವ ನಿತ್ಯೋಪಯೋಗಿ ಸರಕು, ಸೇವೆಗಳ ಮೇಲೆ ಹೆಚ್ಚಿನ ಪರೋಕ್ಷ ತೆರಿಗೆ ಹಾಕುವುದು ಯಾವ ಧಾರ್ಮಿಕ ಮಾರ್ಗ ಎನ್ನುವ ಪ್ರಶ್ನೆ ಪಾವತಿದಾರರನ್ನು ಕಾಡದಿರುವುದೇ? ಕೋವಿಡ್19ರ ದುಃಸ್ಥಿತಿಯ ಸಂದರ್ಭದಲ್ಲೂ ದಾಖಲೆ ಪ್ರಮಾಣದ ಜಿಎಸ್‌ಟಿ ಸಂಗ್ರಹವಾಗಿರುವುದನ್ನು ಒತ್ತಿಒತ್ತಿ ಹೇಳಿದ ವಿತ್ತ ಸಚಿವರಿಗೆ, ಅದು ಜನಸಾಮಾನ್ಯರಿಂದ ಬಂದ ಪಾಪದ ಹಣ ಎನ್ನುವುದು ತಿಳಿಯದೇ ಹೋದದ್ದು ಮರುಕಪಡುವಂತಹುದಾಗಿದೆ.

3. ಕೇಂದ್ರೀಕೃತ ಅರ್ಥವ್ಯವಸ್ಥೆಯತ್ತ ದಾಪುಗಾಲು

ಪ್ರಜಾಪ್ರಭುತ್ವಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ವಿಕೇಂದ್ರೀಕೃತ ಅರ್ಥವ್ಯವಸ್ಥೆಯತ್ತ ನಡೆಯಬೇಕಿದ್ದ ಸರ್ಕಾರ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತೆ ಕೇಂದ್ರೀಕೃತ ಅರ್ಥವ್ಯವಸ್ಥೆಯತ್ತ ನಡೆಯುತ್ತಿರುವುದನ್ನು ಮುಂಗಡ ಪತ್ರಗಳು ಕಣ್ಣಿಗೆಕಟ್ಟುವಂತೆ ಕಾಣಿಸುತ್ತಿವೆ. ಜಿಎಸ್‌ಟಿ ಅದರ ಒಂದು ಭಾಗ. ಈ ತೆರಿಗೆ ಸಂಗ್ರಹದಲ್ಲಿ ರಾಜ್ಯಗಳಿಗೆ ಕೊಡಬೇಕಿದ್ದ ನ್ಯಾಯಯುತ ಪಾಲನ್ನು ಕೊಡಲು ಚೌಕಾಶಿ ಮಾಡುತ್ತಿರುವುದು ಮತ್ತು ಅದರ ಬದಲಾಗಿ ರಾಜ್ಯಗಳಿಗೆ ಬಡ್ಡಿರಹಿತ ಸಾಲವನ್ನು ನೀಡಲು ಮುಂದಾಗಿರುವುದು, ಮಾಲಿಕನಾಗುವವನನ್ನು ಸಾಲಗಾರನನ್ನಾಗಿ ಮಾಡುವ ಕ್ರಮವಲ್ಲದೆ ಬೇರಲ್ಲ. ರಾಜ್ಯಗಳಿಗೆ ಬಡ್ಡಿರಹಿತವಾಗಿ ಸಾಲಕೊಡಲು ಕಾಯ್ದಿರಿಸಿರುವ
1 ಲಕ್ಷ ರೂಪಾಯಿಗಳಿಗಿಂತ ಹಲವು ಪಟ್ಟು ಮೊತ್ತದ ಜಿಎಸ್‌ಟಿ ಬಾಕಿಯನ್ನು ಒಕ್ಕೂಟ ಸರ್ಕಾರ ರಾಜ್ಯಗಳಿಗೇ ಕೊಡಬೇಕಿದೆ. ಹೊಸ ಶಿಕ್ಷಣ ನೀತಿ ಮತ್ತು ಮೂರು ಕೃಷಿ ಕಾನೂನುಗಳನ್ನೂ ಒಳಗೊಂಡಂತೆ, ಕಾರ್ಮಿಕರಿಗೆ ಸಂಬಂಧಿಸಿದ ಹಾಗೂ ರಾಜ್ಯಗಳ ವ್ಯಾಪ್ತಿಗೆ ಬರಬಹುದಾದ ಇನ್ನಿತರ ವಿಷಯಗಳ ಕುರಿತಂತೆ ಕೇಂದ್ರ ನೀತಿಯನ್ನು ಪ್ರಕಟಿಸಿ ಜಾರಿಗೊಳಿಸುವುದು ದೇಶದಲ್ಲಿ ಆಂತರಿಕ ಸಂಘರ್ಷಗಳನ್ನು ಹುಟ್ಟು ಹಾಕುತ್ತದೆ ಎನ್ನುವುದನ್ನು ಪರಿಗಣಿಸದ ಸರ್ಕಾರದ ಈ ಧೋರಣೆಯನ್ನು ಸಾಮಾನ್ಯ ಮರೆವು ಎನ್ನುವುದಕ್ಕಿಂತ, ಜಾಣಕುರುಡು ಎನ್ನುವುದೇ ಸೂಕ್ತ.

ಹಾಗೆಯೇ, ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕುಗಳ ಒಗ್ಗೂಡಿಸುವಿಕೆ ಕೂಡ. ಪ್ರಾದೇಶಿಕ ವೈವಿಧ್ಯತೆಗಳನ್ನು ಆಧರಿಸಿದ ಹಣಕಾಸಿನ ಅಗತ್ಯಗಳಿಗೆ ಸ್ಪಂದಿಸುತ್ತಿದ್ದ ಬ್ಯಾಂಕುಗಳನ್ನು ಒಂದೇ ಛತ್ರಿಯ ಅಡಿಯಲ್ಲಿ ತರುವುದರಿಂದ ಅವುಗಳ ದಕ್ಷತೆ ಹೆಚ್ಚುತ್ತದೆ ಎನ್ನುವುದಾಗಿದ್ದರೆ, ಅದೇ ದೊಡ್ಡ ಬ್ಯಾಂಕುಗಳು ದೊಡ್ಡ ಜನರಿಗೆ ದೊಡ್ಡ ಪ್ರಮಾಣದ ಸಾಲಗಳನ್ನು ನೀಡಿ ದಿವಾಳಿಯ ಅಂಚಿಗೆ ತಲುಪುವಂತಾದುದು ಹೇಗೆ? ನಷ್ಟದಲ್ಲಿರುವ ಬ್ಯಾಂಕಿನ ಜೊತೆಗೆ ಲಾಭದಲ್ಲಿದ್ದ ಬ್ಯಾಂಕುಗಳನ್ನು ವಿಲೀನ ಮಾಡುವುದನ್ನ ಯಾವ ದಕ್ಷ ಕ್ರಮ ಎನ್ನಬೇಕು? ಕೋವಿಡ್ ಕಾರಣದ ಲಾಕ್‌ಡೌನ್ ಅವಧಿಯಲ್ಲಿ ಯಾವ ಚಟುವಟಿಕೆಗಳನ್ನೂ ನಿರ್ವಹಿಸದೆ ಬಾಗಿಲಿಗೆ ಬೀಗ ಹಾಕಿಕೊಂಡು ಕುಳಿತಿದ್ದರೂ, ಸಾಲದ ಮೇಲಿನ ಬಡ್ಡಿಯನ್ನು ಯಥಾವತ್ತಾಗಿ ಕಟ್ಟುವ ಸ್ಥಿತಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮದಾರರದ್ದು. ಇದನ್ನು ಒಂದಿಷ್ಟಾದರೂ ಮನ್ನಾ ಮಾಡಿ ನೆರವಾಗಿ ಎಂದು ಗೋಗರೆದರೂ ಅವರಿಗೆ ಸಿಗಲಾರದ ಕರುಣೆ, ವಜ್ರ-ಚಿನ್ನ-ಬೆಳ್ಳಿಯಂತಹ ಆಭರಣಗಳ ವಹಿವಾಟು ನಡೆಸುವವರಿಗೆ ಸಿಕ್ಕಿದೆ. ಅವುಗಳ ಮೇಲಿನ ಆಮದು ಶುಲ್ಕವನ್ನು ಮುಂಗಡ ಪತ್ರದಲ್ಲಿ ಮಾಫ್ ಮಾಡಲಾಗಿದೆ. ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಯಾವ ಮುನ್ಸೂಚನೆಯೂ ಇಲ್ಲದೆ ಒಕ್ಕೂಟ ಸರ್ಕಾರದಿಂದ ರಾತ್ರೋರಾತ್ರಿ ರೂಪಾಯಿ ಅಮಾನ್ಯೀಕರಣವಾಗುತ್ತದೆ, ಲಾಕಡೌನ್ ಘೋಷಣೆಯಾಗುತ್ತದೆ, ಯಾವುದೇ ಚರ್ಚೆ ಇಲ್ಲದೆ ಪ್ರಸ್ತಾವಗಳು ಕಾನೂನುಗಳಾಗುತ್ತವೆ ಎನ್ನುವುದು ಅರಗಿಸಿಕೊಳ್ಳಬಹುದಾದ ವಾಸ್ತವಗಳೇ?

4. ಸರ್ಕಾರದ ನೆರವುಗಳಿಗೆ ಖೋತ

ಅಗತ್ಯ ಸೇವೆಗಳಿಗೆ ಸರ್ಕಾರದ ನೆರವು ಇಲ್ಲ ಎಂದರೆ ಅವುಗಳನ್ನು ಬಳಸುವ ಜನಸಾಮಾನ್ಯರ ಕೈಲಿ ಹಣವಾದರೂ ಇರಬೇಕು. ಇಲ್ಲವಾದಲ್ಲಿ ಅವರಿಗೆ ಅವುಗಳ ನಿರಾಕರಣೆ ಖಚಿತ. ಉಪ್ಪಿನ ಸತ್ಯಾಗ್ರಹವನ್ನು ಯಾಕಾಗಿ ಮಾಡಲಾಯಿತು ಎನ್ನುವುದನ್ನು ಸ್ವಾತಂತ್ರ್ಯ ಚಳವಳಿಯ ಫಲಿತವಾಗಿ ನಡೆಯುತ್ತಿರುವ ಚುನಾವಣೆಗಳಲ್ಲಿ ಗೆದ್ದು ಬಂದಿರುವವರು ಸಂಪೂರ್ಣವಾಗಿ ಮರೆತಿದ್ದಾರೆ ಎನ್ನಿಸುತ್ತಿದೆ. ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದಲೇ ಸೌಲಭ್ಯಗಳನ್ನು ಒದಗಿಸುವುದು ಹೇಗೆ ಸರಿಯಲ್ಲವೋ ಹಾಗೆಯೇ, ಸಂಕಷ್ಟದಲ್ಲಿದ್ದರೂ ಸೌಕರ್ಯಗಳನ್ನು ಒದಗಿಸದಿರುವುದು ಅಕ್ಷಮ್ಯ. ಜಾಗತಿಕ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಓ) ಮತ್ತು ಜಾಗತಿಕ ಬ್ಯಾಂಕ್ (ಐಎಮ್‌ಎಫ್)ಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳಿಗನುಗುಣವಾಗಿ ದೇಶದ ಆರ್ಥಿಕ ನೀತಿ ಇರಬೇಕೆನ್ನುವುದು ನಿಜವಾದರೂ ಅವುಗಳಿಗೆ ಸಂಪೂರ್ಣ ಶರಣಾಗಬೇಕಾಗಿಲ್ಲ. ಇವತ್ತಿನ ವಿದ್ಯಮಾನಗಳು ಅದಕ್ಕಿಂತಲೂ ಹಲವು ಹೆಜ್ಜೆ ಮುಂದೆ ಹೋಗಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಗಳನ್ನು ಜಾರಿಗೊಳಿಸುತ್ತಿರುವುದನ್ನು ಮುಂಗಡ ಪತ್ರಗಳು ತೋರಿಸುತ್ತಿವೆ.

ಪ್ರಸ್ತುತ ಸರ್ಕಾರದ ಯೋಜನೆಗಳು, ’ಸ್ಟಾರ್ಟ್ ಅಪ್’, ’ಮೇಕ್ ಇನ್ ಇಂಡಿಯಾ’, ’ಆತ್ಮನಿರ್ಭರ್ ಭಾರತ’, ’ಸಬ್ ಕಾ ಸಾತ್ ಸಬ್ ಕಾ ವಿಶ್ವಾಸ್’ ಮುಂತಾದ ಬಣ್ಣಬಣ್ಣದ ಹೆಸರುಗಳನ್ನು ಹೊಂದಿದವುಗಳಾಗಿವೆಯೇ ಹೊರತು, ಅವುಗಳ ಹೆಸರಿಗೆ ತಕ್ಕಂತೆ ಅವುಗಳನ್ನು ಅನುಷ್ಠಾನಗೊಳಸಲು ಬೇಕಾದಷ್ಟು ಸಂಪನ್ಮೂಲಗಳನ್ನು ಒದಗಿಸಲಾಗಿಲ್ಲ. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೇ ಸಾಕಾಗುವಷ್ಟು ಹಣಕಾಸು ಸಿಗದಿರುವಾಗ, ಇನ್ನು ಅದೇ ಮಾದರಿಯ ಯೋಜನೆಯನ್ನು ನಗರ ಮತ್ತು ಪಟ್ಟಣಗಳ ನಿರುದ್ಯೋಗಿ ಮತ್ತು ಅರೆ ಉದ್ಯೋಗಿಗಳಿಗೆ ಜಾರಿ ಮಾಡುವುದು ಕನಸಿನ ಮಾತು. ರಸಗೊಬ್ಬರ, ಕ್ರಿಮಿನಾಶಕಗಳು ಮತ್ತು ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿ ಮೊತ್ತ ವರ್ಷವರ್ಷಕ್ಕೆ ಕಡಿಮೆಯಾಗುತ್ತಿದೆ. ಕೊರೊನಾ ಕಾರಣಕ್ಕೆ 2020ರಲ್ಲಿ ಒಂದಷ್ಟು ಮೊತ್ತವನ್ನು ಉದಾರವಾಗಿ ಖರ್ಚುಮಾಡಿರುವುದನ್ನು ಬಿಟ್ಟರೆ ಕಳೆದ ವರ್ಷ ಯಥಾಸ್ಥಿತಿ ಮುಂದುವರೆದಿದೆ. ಹಾಗೆಯೇ ಸಾಮಾಜಿಕ ನ್ಯಾಯ ಮತ್ತು ಭದ್ರತೆಗಳಿಗೆ ಮೊದಲಿನಷ್ಟು ಒತ್ತು ಕೊಡದಿರುವುದನ್ನು ಅಂಕಿ ಸಂಖ್ಯೆಗಳು ಹೇಳುತ್ತಿವೆ.

5. ಚತುರ ಪ್ರದರ್ಶನ (ವಿಂಡೋ ಡ್ರೆಸ್ಸಿಂಗ್):

ಯಾವುದೇ ಚುನಾಯಿತ ಸರ್ಕಾರವಾದರೂ ಅದರ ಹೆಗ್ಗಳಿಕೆಯ ಮತ್ತು ಯಶಸ್ವೀ ಅನುಷ್ಠಾನದ ಕಾರ್ಯಕ್ರಮಗಳನ್ನು ಒಂದಷ್ಟು ವೈಭವೀಕರಿಸಿ ಹೇಳುವುದು ಸರ್ವೇಸಾಮಾನ್ಯ. ಆದರೆ ವಾಸ್ತವತೆಯನ್ನು ಸ್ಪಷ್ಟವಾಗಿ ತೋರಿಸದ ರೀತಿಯಲ್ಲಿ ಅಧಿಕೃತ ವರದಿಗಳ ಅಂಕಿಅಂಶಗಳನ್ನು ನೀಡುವುದು ಪ್ರಜಾಪ್ರಭುತ್ವ ಆಶಿತ ಪಾರದರ್ಶಕತೆ ಅಲ್ಲವೇ ಅಲ್ಲ. ಅಭಿವೃದ್ಧಿ ವಿಷಯಗಳಲ್ಲಿ ಆಡಳಿತಾತ್ಮಕ ಗೌಪ್ಯತೆಯೂ ಬೇಕಿಲ್ಲ. ಕಾರ್ಪೊರೆಟ್ ವ್ಯವಹಾರ ಸಂಸ್ಥೆಯೊಂದು ಕಾಪಾಡಿಕೊಳ್ಳುವ ಗೌಪ್ಯತೆಯ ಮಾದರಿಯಲ್ಲಿ ಪ್ರಭುತ್ವವೊಂದು ಕಾರ್ಯಶೀಲವಾಗಬಾರದು. ಕಳೆದ ದಶಕಗಳಲ್ಲಿನ ಆರ್ಥಿಕ ಸಮೀಕ್ಷೆಗಳ ನಿರೂಪಣೆಗೆ ಹೋಲಿಸಿ, ಆ ವರ್ಷಕ್ಕೆ ಸಂಬಂಧಿಸಿದ ಮುಂಗಡ ಪತ್ರದ ಪ್ರಕಾರ ಹಾಕಿಕೊಂಡ ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಜಾರಿಯಾಗಿವೆ, ಎಲ್ಲಿ ವ್ಯತ್ಯಯಗಳಾಗಿವೆ ಮತ್ತು ಅವಗಳನ್ನು ಗಮನದಲ್ಲಿಟ್ಟುಕೊಂಡು ಬರುವ ವರ್ಷದಲ್ಲಿ ಆಶಿತ ಅಭಿವೃದ್ಧಿ ಸಾಧಿಸಲು ಏನು ಮಾಡಬೇಕೆಂಬುದರ ಬಗ್ಗೆ ಸ್ಪಷ್ಟ ಒಳನೋಟಗಳನ್ನು ಕೊಡುವುದರ ಬದಲಾಗಿ ಆಡಳಿತ ಪಕ್ಷದ ಅಜೆಂಡಾಗಳನ್ನು ಸೂಚಿಸುವತ್ತ ಇತ್ತೀಚಿನ ವರ್ಷದ ಮುಂಗಡ ಪತ್ರಗಳು ಆಸಕ್ತಿ ತೋರುತ್ತಿರುವುದನ್ನು ಗಮನಿಸಬಹುದಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಸಂವಿಧಾನ ಉಲ್ಲೇಖಿತ ಮಿಶ್ರ ಆರ್ಥವ್ಯವಸ್ಥೆಯಿಂದ ಹೊರಬರುವ ಕ್ರಮಗಳು, ಅದರಲ್ಲೂ ಬಂಡವಾಶಾಹಿ ವ್ಯವಸ್ಥೆಯತ್ತ ತಿರುಗುವುದು, ಸುಮಾರು ಮೂರನೇ ಒಂದರಷ್ಟು ಜನಸಂಖ್ಯೆ ಇನ್ನೂ ಅರ್ಥಿಕ ಅಸಮರ್ಥತೆಯಲ್ಲೇ ಇರುವ ಭಾರತಕ್ಕೆ ಸರಿಯಲ್ಲ. ಮುಕ್ತ ಮಾರುಕಟ್ಟೆಯ ಕಾರ್ಯಾಚರಣೆ ಬಯಸುವುದು ಬುದ್ಧಿವಂತ ಮತ್ತು ಸಬಲ ಭಾಗಿದಾರರನ್ನು. ಇಂಥ ಸಬಲತೆಯನ್ನು ಎಲ್ಲರಲ್ಲೂ ಕಾಣುವವರೆಗೆ ಅನುಭೋಗೀ ರಕ್ಷಣೆಗಳು ಬೇಕೇಬೇಕು. ಪಕ್ಕದ ಚೀನಾ ದೇಶದ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಅದು ತನ್ನ ಆಂತರಿಕ ಸಬಲೀಕರಣವನ್ನು ಸಾಧಿಸದೆ ಜಾಗತಿಕ ವ್ಯಾಪಾರ ಸಂಸ್ಥೆಯ ಸದಸ್ಯತ್ವವನ್ನು ಪಡೆಯಲಿಲ್ಲ. ಇವತ್ತು ಜಗತ್ತಿನ ದೊಡ್ಡಣ್ಣನಿಗೆ ಸವಾಲಾಗಿ ಕಾಡುವಷ್ಟರ ಮಟ್ಟಿಗೆ ಬೆಳೆಯಲು ಅದುವೇ ಕಾರಣ. ಭಾರತದ ಭೌಗೋಳಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ವೈವಿಧ್ಯಮಯ ಅಸ್ಮಿತೆಗಳಿಗೆ ಒಗ್ಗುವಂತಹ ಗಾಂಧೀಜಿಯವರ ಪರಿಕಲ್ಪನೆಯ ಸ್ವರಾಜ್ಯ, ಆಸ್ತಿ ಮತ್ತು ಸಂಪನ್ಮೂಲಗಳ ದತ್ತಿ ಮಾಲಿಕತ್ವ ಹಾಗೂ ಹಂಚಿಕೆ, ಸರ್ಕಾರಿ ಮತ್ತು ಸಾರ್ವಜನಿಕ ಉದ್ಯಮಗಳ ಮುಖಾಮುಖಿ, ಅಂಬೇಡ್ಕರ್ ಅವರ ಸಂವಿಧಾನಬದ್ಧ ನಿಯಮಗಳ ಜಾರಿಯಿಂದ ಮಾತ್ರ ಸ್ವಾವಲಂಬಿ, ಸುಸ್ಥಿರ ಹಾಗೂ ಬಹುತ್ವ ಭಾರತವನ್ನು ಕಟ್ಟಲು ಸಾಧ್ಯ ಎನ್ನುವುದು ಆಳುವ ಸರ್ಕಾರಕ್ಕೆ ಮನವರಿಕೆಯಾಗಬೇಕು. ಅರ್ಥವ್ಯವಸ್ಥೆಯನ್ನು ಸ್ವಾತಂತ್ರ್ಯಪೂರ್ವ ಯುಗಕ್ಕೆ ಒಯ್ಯುವಂಥ ’ಯು’ ಟರ್ನ್ ಭಾರತಕ್ಕೆ ನಿಜಕ್ಕೂ ಬೇಡವಾಗಿದೆ.

ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ
ವಿಶ್ರಾಂತ ಪ್ರಾಂಶುಪಾಲರು, ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು. ಆರ್ಥಿಕ ಮತ್ತು ಶೈಕ್ಷಣಿಕ ಚಿಂತಕರು. ಚಿತ್ರದುರ್ಗ ಮೂಲದವರು.


ಇದನ್ನೂ ಓದಿ: ಬಜೆಟ್‌ 2022-23: ಶಿಕ್ಷಣ, ಕೃಷಿ ಕ್ಷೇತ್ರಕ್ಕೆ ವಂಚನೆ; ಖಾಸಗಿ ಪರ ಧೋರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...