ಐದು ರಾಜ್ಯಗಳ ಚುನಾವಣೆ ಪೈಕಿ ಮೂರು ರಾಜ್ಯಗಳಲ್ಲಿ ಮತದಾನ ಮುಗಿದಿದೆ. ಉತ್ತರ ಪ್ರದೇಶದಲ್ಲಿ ಇನ್ನೂ ಮೂರು ಹಂತದ ಮತ್ತು ಮಣಿಪುರದಲ್ಲಿ 2 ಹಂತದ ಮತದಾನ ಬಾಕಿ ಉಳಿದಿವೆ. ಈಗಾಗಲೇ ಚುನಾವಣೆ ಮುಗಿದಿರುವ ಪಂಜಾಬ್, ಉತ್ತರಾಖಂಡ ಮತ್ತು ಗೋವಾ ರಾಜ್ಯಗಳು ಫಲಿತಾಂಶಕ್ಕಾಗಿ ಎದುರು ನೋಡುತ್ತಿವೆ.
ರೈತ ಹೋರಾಟದಲ್ಲಿದ್ದ ಜಾಟ್ ಸಮುದಾಯದ ಪ್ರಾಬಲ್ಯವಿರುವ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಮತದಾನ ಮುಗಿದಿದೆ. ಇದೆಲ್ಲದರ ನಡುವೆ, ಮತದಾನ ಬಾಕಿ ಇರುವ ಪ್ರದೇಶಗಳಲ್ಲಿ ರೈತಾಂದೋಲನದ ಬಿಸಿ ಯಾವ ರೀತಿಯಲ್ಲಿ ಪ್ರಭಾವ ಬೀರಲಿದೆ ಎಂಬುದು ತೀವ್ರ ಚರ್ಚೆಯಲ್ಲಿದೆ.
ಸಾಮೂಹಿಕ ಚಳವಳಿಗಳು ಮತ್ತು ಚುನಾವಣಾ ಯಶಸ್ಸು, ಈ ಎರಡೂ ಕೂಡ ಭಾರತದಲ್ಲಿ ಎಲ್ಲಾ ಸಮಯದಲ್ಲೂ ಹೊಂದಿಕೆಯಾಗುವುದಿಲ್ಲ. ಆದರೆ, ತಮಿಳುನಾಡಿನಲ್ಲಿ ಸ್ವಾತಂತ್ರ್ಯಕ್ಕೂ ಮುನ್ನವೇ ಆರಂಭವಾದ ದ್ರಾವಿಡ ಚಳವಳಿ, ಪಶ್ಚಿಮ ಬಂಗಾಳ ರಾಜ್ಯದ ಭೂ ಹೋರಾಟಗಳು, ಮಂಡಲ್ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕಾಗಿ ನಡೆದ ಸುದೀರ್ಘ ಆಂದೋಲನದಂತಹ ಕೆಲವು ಸಾಮೂಹಿಕ ಚಳವಳಿಗಳು ಚುನಾವಣಾ ರಾಜಕೀಯದ ಮೇಲೆ ಪ್ರಮುಖ ಪ್ರಭಾವ ಬೀರಿವೆ. ಆದರೆ MGNREGS ಅನುಷ್ಠಾನಕ್ಕಾಗಿ ನಡೆದ ತಳಮಟ್ಟದ ಹೋರಾಟದಂತಹ ಹಲವು ಹೋರಾಟಗಳು ಚುನಾವಣೆಗಳ ಮೇಲೆ ರಾಜಕೀಯ ಪ್ರಭಾವ ಬೀರುವಲ್ಲಿ ವಿಫಲವಾಗಿವೆ.
ರೈತಾಂದೋಲನದಿಂದ ಬಿಜೆಪಿಗೆ ನಷ್ಟ
ಮೂರು ಕೃಷಿ ಕಾನೂನುಗಳ ರದ್ದತಿಗಾಗಿ ನಡೆದ ಒಂದು ವರ್ಷಗಳ ಸುದೀರ್ಘ ರೈತ ಹೋರಾಟ ಯಶಸ್ಸನ್ನು ಕಂಡಿದೆ. ಇದು ಭಾರತದಲ್ಲಿ ಅತ್ಯಂತ ಯಶಸ್ವಿ ಸಾಮೂಹಿಕ ಹೋರಾಟಗಳಲ್ಲಿ ಒಂದಾಗಿದೆ. ಚಳವಳಿಯ ಚುನಾವಣಾ ಪ್ರಭಾವದ ಬಗ್ಗೆ ಏನು? ಎಂದು ನೋಡುವ ಒಂದು ಮಾರ್ಗವೆಂದರೆ ಮೊದಲ ಮತ್ತು ಎರಡನೇ ಹಂತಗಳಲ್ಲಿ ಚುನಾವಣೆಗೆ ಹೋದ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಜಾಟ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಂಭವನೀಯ ನಷ್ಟವಾಗಿರುವ ಬಗ್ಗೆ ಕೇಳಿಬರುತ್ತಿದೆ. ಪಂಜಾಬ್‌ನಲ್ಲಿ ರೈತ ಹೋರಾಟದಿಂದಾಗಿ ಬಿಜೆಪಿಯ ಜೊತೆಗಿದ್ದ ಬಹುಕಾಲದ ಮಿತ್ರ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮೈತ್ರಿಯನ್ನು ತೊರೆಯಿತು, ಇದು ಬಿಜೆಪಿಗೆ ನಷ್ಟವನ್ನುಂಟುಮಾಡಿತು. ಆ ನಷ್ಟದ ನಿಖರ ಪ್ರಮಾಣ ಮಾರ್ಚ್ 10ರಂದು ತಿಳಿಯಲಿದೆ.
ಇದನ್ನೂ ಓದಿ: ಯುಪಿ 4ನೇ ಹಂತದ ಚುನಾವಣೆ: ಲಖಿಂಪುರ್‌ಖೇರಿ ಪ್ರಾಂತ್ಯ ಬಿಜೆಪಿಗೆ ಬಿಸಿತುಪ್ಪ!
ಆದರೆ ಪಂಜಾಬ್ ಚುನಾವಣೆಯು ರೈತರ ಪ್ರತಿಭಟನೆಯ ಸಂದರ್ಭದಲ್ಲಿದ್ದ ಬೃಹತ್ ಒಗ್ಗಟ್ಟನ್ನು ದುರ್ಬಲಗೊಳಿಸಿದೆ. ಪಂಜಾಬ್ ಚುನಾವಣಾ ಸಂದರ್ಭದಲ್ಲಾದ ಎರಡು ಬೆಳವಣಿಗೆಗಳು ಪಂಜಾಬ್ ಫಲಿತಾಂಶದಲ್ಲಿ ರೈತ ಹೋರಾಟದ ಬಿಸಿಯಾಗಿ ಕಾಣುವುದಿಲ್ಲ ಎಂಬಂತೆ ಮಾಡಿವೆ.
ಮೊದಲನೆಯದು – ಕಾಂಗ್ರೆಸ್ ಬಿಜೆಪಿಯೊಂದಿಗೆ ತೆರೆಮರೆಯ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂಬುದು. ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಆಮ್ ಆದ್ಮಿ ಪಕ್ಷವನ್ನು (ಎಎಪಿ) ಮೂಲೆಗುಂಪು ಮಾಡುವುದು ಈ ಪತ್ರದ ಉದ್ದೇಶವಾಗಿತ್ತು.
ಎರಡನೆಯದು – ರಾಜ್ಯದಲ್ಲಿ ತಮ್ಮದೇ ಆದ ಅಭ್ಯರ್ಥಿಗಳನ್ನು ಹಾಕಲು ರೈತ ಒಕ್ಕೂಟದ ಕೆಲವು ಸಂಘಟನೆಗಳು ಮುಂದಾಗಿದ್ದು, ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದ ರಾಜಕೀಯ ಪಕ್ಷಗಳ ಮೇಲೂ ನಂಬಿಕೆಯ ಕೊರತೆಯಿಂದಾಗಿ ಅವರು ಈ ನಿರ್ಧಾರ ಮಾಡಿದರು. ಆದರೆ, ಇದು ಸಂಯುಕ್ತ ಕಿಸಾನ್ ಮೋರ್ಚಾದ ರಾಜಕೀಯ ಮಹತ್ವಾಕಾಂಕ್ಷೆಗೆ ವಿರುದ್ಧವಾಗಿತ್ತು.
ರೈತರ ಪ್ರತಿಭಟನೆಗಳ ಹಿಂದಿದ್ದ ದೊಡ್ಡ ಪ್ರಮಾಣದ ರಾಜಕೀಯ ಒಗ್ಗಟ್ಟನ್ನು ಚುನಾವಣಾ ಒಗ್ಗಟ್ಟಿನಲ್ಲಿ ಸಾಧಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಈ ಅಂಶಗಳು ಸೂಚಿಸುತ್ತವೆ.
ರೈತಾಂದೋಲನ ಅಲೆಯ ಹೊರತಾಗಿಯೂ ಬಿಜೆಪಿಗೆ ಲಾಭ..?
ಉತ್ತರ ಪ್ರದೇಶದಲ್ಲಿ ಚುನಾವಣೆಯು ಸಮೃದ್ಧವಾದ ಪಶ್ಚಿಮ ಭಾಗಗಳಿಂದ ಬಡ ಪೂರ್ವ ಪ್ರದೇಶಗಳೆಡೆಗೆ ಚಲಿಸುತ್ತಿದೆ. ಈ ಭಾಗದಲ್ಲಿ ಬಿಜೆಪಿಯ ಅಭಿವೃದ್ದಿ ಭಾಷಣವು ಮಹತ್ವವನ್ನು ಪಡೆಯುವ ಸಾಧ್ಯತೆಯಿದೆ. ಇದಕ್ಕೆ ಉದಾಹರಣೆಯಾಗಿ, ಫೆಬ್ರವರಿ 20 ರಂದು ಹರ್ದೋಯ್‌ನಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಒಕ್ಕೂಟ ಸರ್ಕಾರದ ಉಚಿತ ಪಡಿತರ ಯೋಜನೆಯ ಲಾಭ ಪಡೆದ ವೃದ್ಧೆಯೊಬ್ಬರು ಬಿಜೆಪಿಗೆ ತಮ್ಮ ನಿಷ್ಠೆಯನ್ನು ಪ್ರತಿಜ್ಞೆ ಮಾಡಿದ ವಿಡಿಯೋವನ್ನು ಉಲ್ಲೇಖಿಸಿದ್ದರು. ಇಂತಹ ಭಾಷಣಗಳು ಯುಪಿಯ ಪೂರ್ವ ಭಾಗದಲ್ಲಿ ಬಿಜೆಪಿಗೆ ಫಲ ನೀಡಬಹುದು ಎಂದು ರಾಜಕೀಯ ತಜ್ಞರು ಹೇಳುತ್ತಾರೆ.
ಅಲ್ಲದೆ, ರಾಜ್ಯದ ಪಶ್ಚಿಮ ಭಾಗದ ಹೊರಗೆ, ಕೃಷಿಯಲ್ಲಿ ತೊಡಸಿಕೊಂಡಿರುವ ಪ್ರಬಲ ಜಾತಿಗಳಲ್ಲಿ ಒಂದಾದ ಯಾದವರನ್ನು ಹೊರತುಪಡಿಸಿ ಉಳಿದ ಜಾತಿಗಳು, ಸಮಾಜವಾದಿ ಪಕ್ಷವು (ಎಸ್ಪಿ) ಅಧಿಕಾರಕ್ಕೆ ಬರುವುದನ್ನು ತಡೆಯಲು ಬಿಜೆಪಿ ಜೊತೆಗೆ ಹೋಗುವ ಸಾಧ್ಯತೆಯಿದೆ.
ಉತ್ತರ ಪ್ರದೇಶದಲ್ಲಿ ಮಂಡಲ ರಾಜಕಾರಣ ರಾಜಕೀಯ ಶಕ್ತಿಯಾಗಿದೆ. ವಿಪರ್ಯಾಸವೆಂದರೆ, ಮಂಡಲ್ ರಾಜಕೀಯದ ಸುತ್ತಲಿನ ಬಿರುಕುಗಳು ರೈತರ ನಡುವಿನ ಒಗ್ಗಟ್ಟನ್ನು ಹಾಳುಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ: ರೈತರ ಆಕ್ರೋಶ: ಪೊಲೀಸ್, ಅರೆಸೇನಾ ಸಿಬ್ಬಂದಿ ಬೆಂಗಾವಲಿನಲ್ಲಿ ಮತ ಚಲಾಯಿಸಿದ ಸಚಿವ ಅಜಯ್ ಮಿಶ್ರಾ


