Homeಕರ್ನಾಟಕHijab Live | ಹಿಜಾಬ್ ಲೈವ್‌ | ಮಧ್ಯಂತರ ಆದೇಶ ವಿದ್ಯಾರ್ಥಿಗಳಿಗಷ್ಟೆ ಅನ್ವಯ, ಶಿಕ್ಷಕರಿಗಲ್ಲ: ಮುಖ್ಯ...

Hijab Live | ಹಿಜಾಬ್ ಲೈವ್‌ | ಮಧ್ಯಂತರ ಆದೇಶ ವಿದ್ಯಾರ್ಥಿಗಳಿಗಷ್ಟೆ ಅನ್ವಯ, ಶಿಕ್ಷಕರಿಗಲ್ಲ: ಮುಖ್ಯ ನ್ಯಾಯಮೂರ್ತಿ

- Advertisement -
- Advertisement -

ಕರ್ನಾಟಕ ಹೈಕೋರ್ಟ್ ಪೂರ್ಣ ಪೀಠವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಒಂಬತ್ತನೆ ದಿನದ ವಿಚಾರಣೆಯು ಬುಧವಾರ ನಡೆಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು ಈ ವಿಚಾರಣೆಯನ್ನು ನಡೆಸಿದೆ.


ಅಪ್‌ಡೇಟ್‌‌ – 05:20 PM

 • ಮುಖ್ಯ ನ್ಯಾಯಮೂರ್ತಿ: ಲಿಖಿತ ಸಲ್ಲಿಕೆಗಳನ್ನು ಮಾಡಲು ನಾನು ಎಲ್ಲಾ ಮಧ್ಯಸ್ಥಗಾರರನ್ನು ವಿನಂತಿಸುತ್ತೇನೆ. ನಮಗೆ ಸಹಾಯದ ಅಗತ್ಯವಿಲ್ಲ, ಆದರೆ ಅನೇಕ ಮಧ್ಯಸ್ಥಗಾರರು ಬಂದಿರುವುದರಿಂದ, ಲಿಖಿತ ಸಲ್ಲಿಕೆಗಳನ್ನು ನೀಡಲು ನಾವು ವಿನಂತಿಸುತ್ತೇವೆ. ನಾವು ಆರು ತಿಂಗಳವರೆಗೆ ಈ ಪ್ರಕರಣವನ್ನು ಆಲಿಸುಲು ಸಾಧ್ಯವಿಲ್ಲ.
 • ವಕೀಲ ತಾಹಿರ್‌‌ ಅವರು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪಷ್ಟೀಕರಣವನ್ನು ಕೋರಿರುವ ಅರ್ಜಿಯನ್ನು ಉಲ್ಲೇಖಿಸುತ್ತಾರೆ.
 • ಪೂರ್ಣ ಪೀಠದ ಆದೇಶ ಅನ್ವಯಿಸುತ್ತದೆ ಎಂದು ಏಕ ಪೀಠವು ಮಧ್ಯಂತರ ಪರಿಹಾರವನ್ನು ತಿರಸ್ಕರಿಸಿದೆ ಎಂದು ಅಡ್ವೋಕೇಟ್‌ ಜನರಲ್‌ ಹೇಳುತ್ತಾರೆ.
 • ತಾಹಿರ್: ಸಂಬಂಧಪಟ್ಟ ಕಾಲೇಜಿನಲ್ಲಿ ಸಮವಸ್ತ್ರದ ನಿಯಮವಿಲ್ಲ.
 • ಮುಖ್ಯ ನ್ಯಾಯಮೂರ್ತಿ: ನಮ್ಮ ಆದೇಶವು ಸ್ಪಷ್ಟವಾಗಿದೆ, ಇದು ಸಮವಸ್ತ್ರ ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ.
 • ತಾಹಿರ್: ಈ ಆದೇಶವನ್ನು ಉಲ್ಲೇಖಿಸಿ, ಎಲ್ಲಾ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಹೊರಹಾಕುತ್ತಿವೆ. ಒಂದಿಷ್ಟು ಸ್ಪಷ್ಟನೆ ಬೇಕಿದೆ…
 • ಅಡ್ವೋಕೋಟ್‌ ಜನರಲ್‌: ಸಂಸ್ಥೆಯು ಭಂಡಾರ್ಕಾರ್ ಕಾಲೇಜು ಉಡುಪಿ. ಅವರು ಏಕ ಪೀಠದ ಮುಂದೆ ಬಂದು ಸಮವಸ್ತ್ರವನ್ನು ಸೂಚಿಸುವ ನಿರ್ಣಯವನ್ನು ಅಂಗೀಕರಿಸಿದ್ದೇವೆ ಎಂದು ಹೇಳಿದ್ದಾರೆ.
 • ಮುಖ್ಯ ನ್ಯಾಯಮೂರ್ತಿ: ಸಮವಸ್ತ್ರವನ್ನು ಸೂಚಿಸಿದರೆ ಅದನ್ನು ಪದವಿ ಅಥವಾ ಪಿಯು ಕಾಲೇಜು ಅನುಸರಿಸಬೇಕು.
 • ಸಮವಸ್ತ್ರ ಧರಿಸಬೇಕು ಎಂದು ರಾತ್ರೋರಾತ್ರಿ ನಿರ್ಣಯ ಮಡಲು ಸಾಧ್ಯವಿಲ್ಲ ಎಂದು ತಾಹಿರ್ ವಾದಿಸುತ್ತಾರೆ. ಕಾಲೇಜಿನ ನಿಯಮ ಪುಸ್ತಕದಲ್ಲಿಯೂ ಸ್ಕಾರ್ಫ್‌ ಧರಿಸಲು ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.
 • ಅಡ್ವೋಕೇಟ್‌ ಜನರಲ್‌: ಯಾರಾದರೂ ಆದೇಶವನ್ನು ಉಲ್ಲಂಘಿಸಿದ್ದರೆ, ಅವರು ಅದನ್ನು ಪ್ರಶ್ನಿಸಬೇಕು.
 • ಮುಖ್ಯ ನ್ಯಾಯಮೂರ್ತಿ: ನಾವು ಅದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಯಾವುದೆ ಪದವಿ ಕಾಲೇಜು ಅಥವಾ ಪದವಿಪೂರ್ವ ಕಾಲೇಜು ಆಗಿರಲಿ, ಅಲ್ಲಿ ಸಮವಸ್ತ್ರವನ್ನು ನಿಗದಿಪಡಿಸಲಾಗಿದ್ದರೆ ಅದನ್ನು ಅನುಸರಿಸಬೇಕು.
 • ತಾಹಿರ್: ಇದು ಸಮಾಜದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ.
 • ಮುಖ್ಯ ನ್ಯಾಯಮೂರ್ತಿ: ಇಲ್ಲ
 • ಹಿಜಾಬ್ ಅನ್ನು ತೆಗೆದುಹಾಕಲು ಶಿಕ್ಷಕರನ್ನು ಸಹ ಕೇಳಲಾಗುತ್ತದೆ ಎಂದು ತಾಹಿರ್ ನ್ಯಾಯಾಲಯದ ಗಮನಕ್ಕೆ ತರುತ್ತಾರೆ.
 • ಮುಖ್ಯ ನ್ಯಾಯಮೂರ್ತಿ: ಮಧ್ಯಂತರ ಆದೇಶವು ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
 • ಬುಧವಾರದ ವಿಚಾರಣೆ ಮುಕ್ತಾಯ; ಗುರುವಾರ ಮಧ್ಯಾಹ್ನ 02:30ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ.

ಇದು ಲೈವ್‌ ಪೇಜ್‌ ಆಗಿದ್ದು, ವಿಚಾರಣೆಯ ಹೆಚ್ಚಿನ ಮಾಹಿತಿಗೆ ಪೇಜ್‌ ಅನ್ನು ರೀಫ್ರೆಶ್‌ ಮಾಡಿ


ಧಾರ್ಮಿಕ ಚಿಹ್ನೆಗಳು ಕ್ಯಾಂಪಸ್‌ಗೆ ಪ್ರವೇಶಿಸದಂತೆ ತಡೆಯುವ ಹಕ್ಕು ನನಗಿದೆ: ಶಾಸಕ ರಘುಪತಿ ಭಟ್‌‌ ಪರ ವಕೀಲ

ಅಪ್‌ಡೇಟ್‌‌ – 05:00 PM

 • ವಾದ ಆರಂಭಿಸಿದ ವಕೀಲ ರಾಘವೇಂದ್ರ ಶ್ರೀವತ್ಸ
 • ಶ್ರೀವತ್ಸ: ಭಾರತದಲ್ಲಿ ನಾವು ಆರ್ಟಿಕಲ್ 25 (1) ಸಾರ್ಟ್‌ಗಳನ್ನು ರೆಸ್ಟ್ರಕ್ಟಿವ್ ಷರತ್ತನ್ನು ಹೊಂದಿದ್ದೇವೆ. ಅಮೆರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ, ಸ್ವಾತಂತ್ರ್ಯವು ವಾಸ್ತವಿಕವಾಗಿ ಅನಿಯಂತ್ರಿತವಾಗಿದೆ. ಧಾರ್ಮಿಕ ವಿಷಯಗಳ ಬಗ್ಗೆ ಕಾನೂನು ಮಾಡದಂತೆ ರಾಜ್ಯಕ್ಕೆ ತಡೆಯಾಜ್ಞೆ ಇದೆ.
 • ಶ್ರೀವತ್ಸ: ಪ್ರಸ್ತುತ ಶಿಕ್ಷಣದಲ್ಲಿ, ನಾವು ಸಾರ್ವಜನಿಕ ಸಂಸ್ಥೆಗಳಲ್ಲಿ ಜಾತ್ಯತೀತ ಶಿಕ್ಷಣದೊಂದಿಗೆ ವ್ಯವಹರಿಸುತ್ತಿದ್ದೇವೆ, ಆದ್ದರಿಂದ ವಿಭಿನ್ನ ಪರಿಗಣನೆಯು ಉದ್ಭವಿಸಬಹುದು.
 • ಶ್ರೀವತ್ಸ: ಟರ್ಕಿಯಲ್ಲಿ ಸರ್ಕಾರದ ಅನುದಾನಿತ ಧಾರ್ಮಿಕ ಶಾಲೆಯಲ್ಲಿ ಹಿಜಾಬ್ ಅನ್ನು ಅನುಮತಿಸಲಾಗಿಲ್ಲ. ಮಾನವ ಹಕ್ಕುಗಳ ಯುರೋಪಿಯನ್ ನ್ಯಾಯಾಲಯದಲ್ಲಿ ಅದನ್ನು ಎತ್ತಿಹಿಡಿಯಲಾಯಿತು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಯುರೋಪಿಯನ್ ಕೋರ್ಟ್‌ನ ಈ ತೀರ್ಪುಗಳು ಫ್ರೆಂಚ್‌ನಲ್ಲಿವೆ, ನಾವು ಅನುವಾದವನ್ನು ಒದಗಿಸಿದ್ದೇವೆ.
 • ನ್ಯಾಯಮೂರ್ತಿ ದೀಕ್ಷಿತ್: ಮಲೇಷ್ಯಾ ಕೋರ್ಟ್‌ಗೆ ರೆಫರ್ ಮಾಡಿದಾಗ ನಾವು ಯಾಕೆ ಇಷ್ಟು ದೂರ ಪ್ರಯಾಣಿಸಬೇಕು ಎಂದು ಹೇಳುತ್ತಾ ಬಂದಿದ್ದೇವೆ. ಆದರೂ ನೀವು ಸಲ್ಲಿಸಿದವುಗಳನ್ನು ನಾವು ನೋಡುತ್ತೇವೆ.
 • ಶ್ರೀವತ್ಸ: ಬಹುಸಂಖ್ಯಾತ ಮುಸ್ಲಿಮರಿರುವ ದೇಶಗಳಲ್ಲಿ ಸರ್ಕಾರದ ಅನುದಾನಿತ ಧಾರ್ಮಿಕ ಶಾಲೆಯಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಯುರೋಪಿಯನ್ ನ್ಯಾಯಾಲಯವು ಎತ್ತಿಹಿಡಿದಿದೆ ಎಂದು ತೋರಿಸಲು ನಾನು ಇದನ್ನು ಉಲ್ಲೇಖಿಸುತ್ತಿದ್ದೇನೆ.
 •  ‘ಉದಾತ್ತ ಚಿಂತನೆಗಳು ಎಲ್ಲೆಡೆಯಿಂದ ಬರಲಿ’ ಎಂಬ ಶ್ಲೋಕವನ್ನು ಶ್ರೀವತ್ಸ ಉಲ್ಲೇಖಿಸುತ್ತಾರೆ ಮತ್ತು ಹಿಜಾಬ್ ಅನ್ನು ನಿರ್ಬಂಧಿಸುವಲ್ಲಿ ಯುರೋಪಿಯನ್ ನ್ಯಾಯಾಲಯಗಳು ಸರ್ಕಾರಗಳ ನಿರ್ಧಾರಗಳನ್ನು ಎತ್ತಿಹಿಡಿದಿದೆ ಎಂದು ಹೇಳುತ್ತಾ, ತನ್ನ ವಾದವನ್ನು ಮುಕ್ತಾಯಗೊಳಿಸುತ್ತಾರೆ.
 • ಹಿರಿಯ ವಕೀಲ ಸಾಜನ್ ಪೂವಯ್ಯ ಅವರು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶಾಸಕ ರಘುಪತಿ ಭಟ್ ಮತ್ತು ಯಶಪಾಲ್ ಆನಂದ್ ಸುವರ್ಣ ಪರವಾಗಿ ವಾದ ಪ್ರಾರಂಭಿಸುತ್ತಾರೆ.
 • ಪೂವಯ್ಯ: 2014ರ ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಲಾಗಿಲ್ಲ. ಇದು ಯಾವುದೇ ರಾಜಕಾರಣಿಗೆ ಶಿಕ್ಷಣ ಕಾರ್ಯಗಳನ್ನು ಹೊರಗೆ ಇಡಲಾಗಿಲ್ಲ. ಈ ಕಾಲೇಜು ಸರ್ಕಾರದಿಂದ ಅನುದಾನಿತವಾಗಿದೆ.
 • ಪೂವಯ್ಯ: ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಸಂಸ್ಥೆಯ ಕಲ್ಯಾಣವನ್ನು ಒದಗಿಸಲು ಕಾಲೇಜು ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಗೆ ಅಧಿಕಾರದಲ್ಲಿರುವ ಪಕ್ಷದ ಶಾಸಕರೇ ಮುಖ್ಯಸ್ಥರಾಗಿರುವುದಿಲ್ಲ. ನಾನು ಎಂಎಲ್‌ಎ ಆಗಿರುವುದರಿಂದ ಅಲ್ಲಿರುವುದಲ್ಲ. ಸ್ಥಳೀಯ ಅವಶ್ಯಕತೆಗಳನ್ನು ನೋಡಿಕೊಳ್ಳಲು ಅಲ್ಲಿದ್ದೇನೆ.
 • ಮುಖ್ಯ ನ್ಯಾಯಮೂರ್ತಿ ಅವಸ್ಥಿ: ಹುದ್ದೆಯನ್ನು ಚಲಾಯಿಸಲು ತಮಗೆ ಯಾವ ಅಧಿಕಾರವಿದೆ ಎಂದು ತೋರಿಸುವುದರಿಂದ ಶಾಸಕರಿಗೆ ವಿನಾಯತಿ ನೀಡಬಹುದೇ?
 • ಪೂವಯ್ಯ: ಅದು ಹೇಗೆ ಸಾಧ್ಯ. ಇದು ಹೆಚ್ಚು ಕೃತಕ ಮಾತುಗಳನ್ನು ಆಧರಿಸಿ ರಾತ್ರೋರಾತ್ರಿ ಸಲ್ಲಿಸಿದ ಅರ್ಜಿಯಾಗಿದೆ.
 • ಪೂವಯ್ಯ: ವೇಷಭೂಷಣದ ಸಾಮಾನ್ಯ ಹಕ್ಕನ್ನು 19 ನೇ ವಿಧಿ ಅಡಿಯಲ್ಲಿ ತೆಗೆದುಹಾಕಬಹುದು. (ಆದರೆ) ಧಾರ್ಮಿಕ ಚಿಹ್ನೆ ಅಥವಾ ಉಡುಗೆಯನ್ನು ಧರಿಸುವ ಹಕ್ಕನ್ನು 25 ನೇ ವಿಧಿಗೆ ಸೂಕ್ತವಾಗಿದೆ. 19(1) ನೇ ವಿಧಿಗೆ ಅಲ್ಲ. ಆತ್ಮಸಾಕ್ಷಿಯ ಸ್ವಾತಂತ್ರ್ಯ ಪರಿಪೂರ್ಣವಾಗಿದೆ. ಆದರೆ ಆಚರಣೆಯ ಹಕ್ಕು, ಪ್ರಚಾರ ಮಾಡುವ ಹಕ್ಕು, ನೀವು ಧರ್ಮವನ್ನು ಹೇಗೆ ಪ್ರಕಟಿಸುತ್ತೀರಿ ಎಂಬುದು 25(2)ನೇ ವಿಧಿಗೆ ಒಳಪಟ್ಟಿರುತ್ತದೆ.
 • ಪೂವಯ್ಯ: 25(2)ನೇ ವಿಧಿ ಅಡಿಯಲ್ಲಿ ಧಾರ್ಮಿಕ ಆಚರಣೆಯೊಂದಿಗೆ ಸಂಬಂಧಿಸಬಹುದಾದ ಯಾವುದೇ ಆರ್ಥಿಕ, ಹಣಕಾಸು, ರಾಜಕೀಯ ಅಥವಾ ಇತರ ಜಾತ್ಯತೀತ ಚಟುವಟಿಕೆಗಳನ್ನು ನಿಯಂತ್ರಿಸುವ ಅಥವಾ ನಿರ್ಬಂಧಿಸುವ ಕಾನೂನನ್ನು ರಚಿಸುವುದರಿಂದ ಸರ್ಕಾರವನ್ನು ತಡೆಯುವಂತೆ ಇಲ್ಲ. ದಯವಿಟ್ಟು ಆ ವಿಧಿಯಲ್ಲಿನ “ಜಾತ್ಯತೀತ ಚಟುವಟಿಕೆ” ನೋಡಿ.
 • ಪೂವಯ್ಯ: ಶಿಕ್ಷಣ, ವಿಶೇಷವಾಗಿ ರಾಜ್ಯದಿಂದ ಬರುವ ಸಾರ್ವಜನಿಕ ಶಿಕ್ಷಣದ ರೂಪದಲ್ಲಿನ ಶಿಕ್ಷಣವು ಸಂಪೂರ್ಣವಾಗಿ ಜಾತ್ಯತೀತ ಚಟುವಟಿಕೆಯಾಗಿದೆ. ಮುಸ್ಲಿಮರಾಗುವ ಹಕ್ಕು ಸಂಪೂರ್ಣ ಹಕ್ಕು. ಆದರೆ ನಾನು ಶಾಲೆಗೆ, ಕಾಲೇಜಿಗೆ, ನ್ಯಾಯಾಲಯಕ್ಕೆ ನಿರ್ದಿಷ್ಟ ಉಡುಪನ್ನು ಧರಿಸಬೇಕು ಎಂದು ಹೇಳಲು ಸಾಧ್ಯವಿಲ್ಲ. ಶಿಕ್ಷಣ, ವಿಶೇಷವಾಗಿ ಸರ್ಕಾರದಿಂದ ಬರುವ ಸಾರ್ವಜನಿಕ ಶಿಕ್ಷಣದ ರೂಪದಲ್ಲಿ ಶಿಕ್ಷಣವು ಸಂಪೂರ್ಣವಾಗಿ ಜಾತ್ಯತೀತ ಚಟುವಟಿಕೆಯಾಗಿದೆ. ಜಾತ್ಯತೀತ ಚಟುವಟಿಕೆಯ ವಿಷಯಕ್ಕೆ ಬಂದರೆ, ಧರ್ಮಕ್ಕೆ ಯಾವುದೇ ಆಸ್ಪದವಿಲ್ಲ.
 • ಪೂವಯ್ಯ: 28 ನೇ ವಿಧಿಯಲ್ಲಿ – “ಸರ್ಕಾರದ ನಿಧಿಯಿಂದ ಸಂಪೂರ್ಣವಾಗಿ ನಿರ್ವಹಿಸಲ್ಪಡುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಧರ್ಮದ ಸೂಚನೆಯನ್ನು ನೀಡಲಾಗುವುದಿಲ್ಲ” ಎಂದಿದೆ.
 • ಪೂವಯ್ಯ: ಸಾರ್ವಜನಿಕ ಶಿಕ್ಷಣವನ್ನು ಪಡೆಯುವ ವ್ಯಕ್ತಿಯು ಧಾರ್ಮಿಕ ವೇಷಭೂಷಣವನ್ನು ಧರಿಸಬೇಕೆಂದು ಒತ್ತಾಯಿಸಬಹುದೇ? ಅದು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದ್ದರೂ ಕೂಡಾ ಸಾರ್ವಜನಿಕ ಸಂಸ್ಥೆಯಲ್ಲಿ ಅದನ್ನು ಬಿಡಬೇಕು.
 • ಪೂವಯ್ಯ: ಶಾಲೆಯ ಆವರಣದಲ್ಲಿ ಜಾತ್ಯತೀತ ದೃಷ್ಟಿಕೋನವನ್ನು ಕಾಯ್ದುಕೊಳ್ಳಲಾಗಿದೆ. ಹುಡುಗಿಯರು ಸ್ಕರ್ಟ್ ಮತ್ತು ಹುಡುಗರ ಪ್ಯಾಂಟ್ ಧರಿಸಬೇಕಾದ ಹಂತವನ್ನು ನಾವು ತಲುಪುತ್ತಿದ್ದೇವೆ. ಕೇರಳದ ಶಾಲೆಗಳು ಲಿಂಗ ತಟಸ್ಥತೆಯನ್ನು ತಂದಿವೆ. ಆದರೆ ಇಲ್ಲೊಂದು ಪ್ರಕರಣ…
 • ಪೂವಯ್ಯ: ನನ್ನ ಶಾಲೆಯಲ್ಲಿ 950 ವಿದ್ಯಾರ್ಥಿಗಳಿದ್ದು, ಅದರಲ್ಲಿ 100 ಮಂದಿ ಮುಸ್ಲಿಂ ಧರ್ಮಕ್ಕೆ ಸೇರಿದವರು. ಅದರಲ್ಲಿ ಡಿಸೆಂಬರ್ ವರೆಗೆ ಯಾವೊಬ್ಬ ವಿದ್ಯಾರ್ಥಿಯೂ ಹಿಜಾಬ್‌ ಧರಿಸುತ್ತಿರಲಿಲ್ಲ. ಈ 100 ರಲ್ಲಿ 5 ಮಕ್ಕಳು ಮಾತ್ರ ತಾವು ಹಿಜಾಬ್‌ ಧರಿಸಬೇಕೆಂದು ಕೇಳುತ್ತಿದ್ದಾರೆ.
 • ಜಾತ್ಯತೀತ ದೃಷ್ಟಿಕೋನವನ್ನು ರೂಪಿಸುವುದು ಅದರ ಉದ್ದೇಶ ಎಂದು ಕರ್ನಾಟಕ ಶಿಕ್ಷಣ ಕಾಯ್ದೆಯ ಪೀಠಿಕೆ ಹೇಳುತ್ತದೆ. ಶಾಲೆ ಜಾತ್ಯತೀತವಾಗಿರುವಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ ಎಂದು ಪೂವಯ್ಯ ಹೇಳುತ್ತಾರೆ.
 • ನ್ಯಾಯಮೂರ್ತಿ ಜೆ ಎಂ ಖಾಜಿ: ಇದು ಬಾಲಕಿಯರ ಶಾಲೆಯೇ ಅಥವಾ ಸಯುಕ್ತ ಶಾಲೆಯೆ?
 • ಪೂವಯ್ಯ: ಇದು ಹುಡುಗಿಯರು ಮಾತ್ರ ಇರುವ ಸರ್ಕಾರಿ ಅನುದಾನಿನ ಪಿಯು ಕಾಲೇಜು. ಇಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ.
 • ಮುಖ್ಯ ನ್ಯಾಯಮೂರ್ತಿ: ಈ ಎಲ್ಲಾ ಅರ್ಜಿಗಳಲ್ಲಿನ ಎಲ್ಲರೂ ಬಾಲಕಿಯರ ಶಾಲೆಯಲ್ಲಿ ಕಲಿಯುತ್ತಿದ್ದಾರ ಅಥವಾ ಸಂಯುಕ್ತ ಶಾಲೆಯಲ್ಲಿ ಕಲಿಯುತ್ತಿದ್ದಾರಾ?
 • ಪೂವಯ್ಯ: ನನ್ನದು ಬಾಲಕಿಯರ ಶಾಲೆ ಮತ್ತು ಡಿಸೆಂಬರ್‌ವರೆಗೆ ಅವರು ಹಿಜಾಬ್ ಧರಿಸುತ್ತಿರಲಿಲ್ಲ.
 • ಮುಖ್ಯ ನ್ಯಾಯಮೂರ್ತಿ ಅವಸ್ಥಿ: ಇದನ್ನು ನಾವು ಅರ್ಜಿದಾರರ ಜೊತೆಗೆ ಕೇಳುತ್ತೇವೆ.
 • ಪೂವಯ್ಯ: ಅಪ್ರಾಪ್ತ ಬಾಲಕಿಯರು ಆಚರಣೆಗಳ ಸಂಕೋಲೆ ಹಾಕದಂತೆ ನೋಡಿಕೊಳ್ಳುವುದು ಶಾಲೆಯ ಕರ್ತವ್ಯ. ಜಾತ್ಯತೀತತೆಯನ್ನು ಸಾಧಿಸುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಕರ್ತವ್ಯ.
 • ಪೂವಯ್ಯ: ಶಿಕ್ಷಣದಲ್ಲಿ ಸಮಾನತೆ ಮುಖ್ಯವಗಿದೆ. ಹಿಂದೂ ಅಥವಾ ಕೊಡವ, ಕ್ರಿಶ್ಚಿಯನ್ ಅಥವಾ ಮುಸ್ಲಿಂ-ಶಿಯಾ ಅಥವಾ ಸುನ್ನಿ ಎಂಬುದು ಮುಖ್ಯವಲ್ಲ. ಉಡುಗೆ ಏಕರೂಪವಾಗಿದೆ. ನಾನು ಒಂದು ಸಂಸ್ಥೆಯಾಗಿ ಸಮವಸ್ತ್ರವನ್ನು ಸೂಚಿಸಿದಾಗ, ಧರ್ಮವು ನನಗೆ ಅಪ್ರಸ್ತುತವಾಗುತ್ತದೆ.
 • ಪೂವಯ್ಯ: ಶಬರಿಮಲೆ ತೀರ್ಪಿನಲ್ಲಿ ನ್ಯಾಯಮೂರ್ತಿ ನಾರಿಮನ್ ಅವರು ಶಾಂತಿ ಮತ್ತು ನೆಮ್ಮದಿ ಸಾರ್ವಜನಿಕ ಸುವ್ಯವಸ್ಥೆ ಎಂದು ಹೇಳಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಶಾಂತಿ. ಇದು ಸಾರ್ವಜನಿಕ ಸುವ್ಯವಸ್ಥೆ. ಕಾನೂನು ಮತ್ತು ಸುವ್ಯವಸ್ಥೆ ಸಾರ್ವಜನಿಕ ಸುವ್ಯವಸ್ಥೆಯ ಒಂದು ಸಣ್ಣ ಉಪವಿಭಾಗವಾಗಿದೆ.
 • ಪೂವಯ್ಯ: ಅರ್ಜಿದಾರರು ಎಲ್ಲಾ ಧಾರ್ಮಿಕ ಉಡುಪುಗಳನ್ನು ತರಲು ಕೇಳುತ್ತಿದ್ದಾರೆಯೇ? ಹೀಗಾದರೆ ಅದು ಜಾತ್ಯಾತೀತ ಶಿಕ್ಷಣ ಆಗಿರುವುದಿಲ್ಲ. ಜಾತ್ಯಾತೀತ ಶಿಕ್ಷಣವು ಕೇವಲ ಶೈಕ್ಷಣಿಕ ವಿಷಯವಲ್ಲ. ಶಾಲಾ ಶಿಕ್ಷಣವು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದೆ.
 • ಪೂವಯ್ಯ: ಧಾರ್ಮಿಕ ಉಡುಗೆಯಲ್ಲಿ ಬರಲು ಹೇಳಿ, ಈ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ಭೂಗೋಳ ಮತ್ತು ರಸಾಯನಶಾಸ್ತ್ರವನ್ನು ಕಲಿಸಲು ಸಾಧ್ಯವಿಲ್ಲ.
 • ಮಾನವ ಹಕ್ಕುಗಳ ಯುರೋಪಿಯನ್ ಕನ್ವೆನ್ಷನ್ ಆರ್ಟಿಕಲ್ 25 ಮತ್ತು ಆರ್ಟಿಕಲ್ 9 ಅನ್ನು ಪೂವಯ್ಯ ಹೋಲಿಸುತ್ತಾರೆ.
 • ಪೂವಯ್ಯ: ಇಲ್ಲಿ ಬಹಳಷ್ಟು ಟರ್ಕಿಶ್ ಮತ್ತು ದಕ್ಷಿಣ ಆಫ್ರಿಕಾದ ತೀರ್ಪುಗಳನ್ನು ದಾಖಲೆಯಲ್ಲಿ ತರಲಾಗಿದೆ. ಆದರೆ ಯಾರೂ ವಿಶ್ಲೇಷಣೆಯನ್ನು ನೋಡುವುದಿಲ್ಲ.
 • ಪೂವಯ್ಯ ಅವರು ಲೈಲಾ ಶಹೀನ್‌ v/s TURKEY ಅನ್ನು ಉಲ್ಲೇಖಿಸಿ, ಉನ್ನತ ಶೈಕ್ಷಣಿಕ ಪರಿಸ್ಥಿತಿಯಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿರ್ಬಂಧವನ್ನು ಎತ್ತಿಹಿಡಿದ ಟರ್ಕಿಯ ನಿರ್ಧಾರವನ್ನು ಉಲ್ಲೇಖಿಸುತ್ತಾರೆ.
 • ಟರ್ಕಿಯ ನಿರ್ಧಾರದ ಬಗ್ಗೆ ಪೂವಯ್ಯ ಉಲ್ಲೇಖಿಸುತ್ತಾ: ಶಿಕ್ಷಣ ಸಂಸ್ಥೆಯಲ್ಲಿ ಇಸ್ಲಾಮಿಕ್ ತಲೆ ವಸ್ತ್ರವನ್ನು ಅನುಮತಿಸುವುದು ಆಚರಣೆ ಮಾಡುವ ಮುಸ್ಲಿಮರು, ಆಚರಣೆ ಮಾಡದ ಮುಸ್ಲಿಮರು ಮತ್ತು ನಂಬಿಕೆಯಿಲ್ಲದವರ ನಡುವಿನ ತಾರತಮ್ಯಕ್ಕೆ ಕಾರಣವಾಗುತ್ತದೆ ಎನ್ನುತ್ತದೆ.
 • ಪೂವಯ್ಯ: ನನ್ನ ಶಾಲೆಯಲ್ಲಿ 100 ಮುಸ್ಲಿಂ ಮಕ್ಕಳಿದ್ದಾರೆ. ಐವರು ಹಿಜಾಬ್ ಧರಿಸಲು ಬಯಸುತ್ತಾರೆ. ನಾನು ಅವರಿಗೆ ಅವಕಾಶ ನೀಡಿದರೆ, ಉಳಿದ 95 ಮಂದಿಯನ್ನು ಅಧರ್ಮಿಗಳೆಂದು ಪರಿಗಣಿಸಲಾಗುವುದು. ಹಿಜಾಬ್ ಧರಿಸಿದವರು ಮಾತ್ರ ಧಾರ್ಮಿಕರು ಎಂದು ಅರ್ಥವೇ? ಹಾಗಾದರೆ ಒಗ್ಗಟ್ಟು ಮತ್ತು ಸಾರ್ವಜನಿಕ ಸುವ್ಯವಸ್ಥೆ ಎಲ್ಲಿದೆ?
 • ನ್ಯಾಯಮೂರ್ತಿ ದೀಕ್ಷಿತ್: ಅಂದರೆ, ನೀವು ಅಡ್ವೊಕೇಟ್ ಜನರಲ್ ಅವರ ವಾದವನ್ನೇ ಮಾಡುತ್ತಿದ್ದೀರಾ?
 • ಪೂವಯ್ಯ: ಖಂಡಿತ.
 • ಪೂವಯ್ಯ: ನಾನು ಈಗ ಪ್ರಜಾಪ್ರಭುತ್ವದಲ್ಲಿ ಅಗತ್ಯ ಪರೀಕ್ಷೆಗೆ ಬರುತ್ತೇನೆ. ಒಬ್ಬ ಮಹಿಳೆ ಅಥವಾ ಪುರುಷ ಪ್ರಾರ್ಥನೆಗೆ ಹೋಗುವಾಗ ಧಾರ್ಮಿಕ ಉಡುಗೆಯನ್ನು ಧರಿಸಬಹುದು. ಪೂಜೆ ನಡೆಯುತ್ತಿರುವಾಗ, ವ್ಯಕ್ತಿಯು ಅಂಗವಸ್ತ್ರವನ್ನು ಹೊಂದಿರಬಹುದು. ಆದರೆ ಅದೇ ಸಜ್ಜನ ಜಾತ್ಯತೀತ ಚಟುವಟಿಕೆಗೆ ಬಂದಾಗ.. ಆ ಜಾತ್ಯತೀತ ಚಟುವಟಿಕೆಯಲ್ಲಿ, ಅವರು ತಮ್ಮ ಧಾರ್ಮಿಕ ಅಭಿವ್ಯಕ್ತಿಗಳನ್ನು ಧರಿಸಲು ಸಾಧ್ಯವಿಲ್ಲ.
 • ಪೂವಯ್ಯ: ನಾನು ಹಿಂದೂ ಚಿಹ್ನೆಯನ್ನು ಧರಿಸಲು ವಿದ್ಯಾರ್ಥಿಗಳಿಗೆ ಅನುಮತಿಸುವುದಿಲ್ಲ ಮತ್ತು ಮುಸ್ಲಿಂ ಹುಡುಗಿಗೆ ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ. ನಾನು ಇದನ್ನು ಅನುಮತಿಸಿದರೆ ಅದು ಎಲ್ಲಿ ಕೊನೆಗೊಳ್ಳುತ್ತದೆ.
 • ಪೂವಯ್ಯ ಅವರು ಶಬರಿಮಲೆ ಪ್ರಕರಣದಲ್ಲಿ ನ್ಯಾಯಮೂರ್ತಿ ನಾರಿಮನ್ ಅವರ ತೀರ್ಪಿನಲ್ಲಿ ಉಲ್ಲೇಖಿಸಲಾದ ಅಗತ್ಯ ಧಾರ್ಮಿಕ ಆಚರಣೆಯ ಪರೀಕ್ಷೆಯನ್ನು ಉಲ್ಲೇಖಿಸುತ್ತಾ, ಆಚರಣೆಯನ್ನು ತೆಗೆದುಹಾಕಿದರೆ ಧರ್ಮದಲ್ಲಿ ಬದಲಾವಣೆಯಾಗುತ್ತದೆಯೆ? ಹಿಜಾಬ್‌ ಧರಿಸದಂತೆ ಮಗುವನ್ನು ನಿರ್ಬಂಧಿಸಿದರೆ ಧರ್ಮ ಹಾಗೆಯೇ ಉಳಿಯುವುದಿಲ್ಲವೇ. ಹಿಜಾಬ್‌ ಧರಿಸದ ಮುಸ್ಲಿಮ್‌ ಸಮುದಾಯದ ಮಕ್ಕಳು ಇಸ್ಲಾಮ್‌ ಪಾಲಿಸುತ್ತಿಲ್ಲ ಎಂದರ್ಥವೇ.
 • ಪೂವಯ್ಯ: ಮಹಿಳೆ ಹಿಜಾಬ್‌ ಧರಿಸುವುದರಲ್ಲಿ ಇಸ್ಲಾಮ್‌ನ ಸಾರ ಅಡಗಿದೆಯೇ? ಅದೇ ರೀತಿ ಹಿಂದೂ ನಂಬಿಕೆ ಸಹ. ನಾನು ತಿಲಕ ಅಥವಾ ಕೇಸರಿ ಉಡುಪನ್ನು ಧರಿಸದಿದ್ದರೆ ಮತ್ತು ನಾನು ಡೆನಿಮ್ ಜೀನ್ಸ್ ಮತ್ತು ಟೀ ಶರ್ಟ್‌ನಲ್ಲಿ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋದರೆ, ಹಿಂದೂ ಧರ್ಮದ ಸಾರವು ಹೋಗುತ್ತದೆಯೇ?
 • ಪೂವಯ್ಯ ಅವರು ಶಬರಿಮಲೆ ಪ್ರಕರಣದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರ ತೀರ್ಪನ್ನು ಉಲ್ಲೇಖಿಸುತ್ತಾರೆ.
 • ಪೂವಯ್ಯ: ಶಾಲೆಯಾಗಿ ಮೂಲಭೂತ ಸಾಂವಿಧಾನಿಕ ಮೌಲ್ಯವು ಜಾತ್ಯತೀತ ಶಿಕ್ಷಣವನ್ನು ನೀಡುವುದು ಮತ್ತು ಹೆಣ್ಣು ಮಗುವಿನ ಘನತೆಯನ್ನು ಕಾಪಾಡುವುದು. ನಾವು ನಮ್ಮ ಹೆಣ್ಣು ಮಗುವಿಗೆ ವಿನಮ್ರ ಉಡುಗೆ ತೊಡುಗೆಯನ್ನು ಕಲಿಸುತ್ತೇವೆಯೇ ಹೊರತು ಗಂಡುಮಕ್ಕಳಲ್ಲ ಯಾಕೆ ಹೇಳಲ್ಲ?
 • ಪೂವಯ್ಯ: ಧರ್ಮವು ರೂಪುಗೊಂಡಾಗ ಮತ್ತು ಈ ಸಾಕಾರಗಳು ನಮ್ಮ ಪವಿತ್ರ ಗ್ರಂಥಗಳಲ್ಲಿ ಬಂದಾಗ, ಸಮಾಜವು ಕೆಲವು ಮಾನದಂಡಗಳನ್ನು ಹೊಂದಿದ್ದಿರಬಹುದು. ಬಹುಶಃ ಆ ಸಮಯದಲ್ಲಿ ಮಹಿಳೆಯರು ನಿರ್ದಿಷ್ಟ ಉಡುಪನ್ನು ಧರಿಸಬೇಕಾಗಿತ್ತು. ಇಂದು ಸಮುದಾಯದ ಮಾನದಂಡಗಳು ಧಾರ್ಮಿಕ ಪಠ್ಯಗಳಿಂದಲ್ಲ, ಅವುಗಳು ಕಾನೂನಿನಿಂದ ನಿರ್ವಹಿಸಲ್ಪಡುತ್ತವೆ.
 • ಪೂವಯ್ಯ: ಸಮುದಾಯದ ಮಾನದಂಡಗಳನ್ನು ಕಾನೂನು ನಿರ್ವಹಿಸುವಾಗ ಹೆಣ್ಣನ್ನು ಗಂಡಿನ ನೋಟದಿಂದ ರಕ್ಷಿಸಬೇಕು ಎಂಬ ಆಧಾರದ ಮೇಲೆ ಹೆಣ್ಣಿಗೆ ರಕ್ಷಣಾತ್ಮಕ ಉಡುಗೆಯನ್ನು ಹೊಂದುವ ಅಗತ್ಯವೇನು ಎಂಬುದು ಪ್ರಶ್ನೆ. ನೀವು ಶ್ರೀಮಂತ ಅಥವಾ ಬಡವ, ಹಿಂದೂ ಅಥವಾ ಮುಸ್ಲಿಂ ಎಂಬ ತಾರತಮ್ಯವನ್ನು ಹೋಗಲಾಡಿಸಲು ಒಂದೇ ಸಮವಸ್ತ್ರವನ್ನು ಧರಿಸಬೇಕು.
 • ಪೂವಯ್ಯ: ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಭಾವಿಸಿದರೂ ಶಾಲೆಯೊಳಗೆ ಯಾವುದೇ ಧರ್ಮವನ್ನು ಅನುಮತಿಸಲಾಗುವುದಿಲ್ಲ. ಇದು ಜಾತ್ಯತೀತವಾಗಿ ನಡೆಯುತ್ತದೆ ಎಂದು ಖಚಿತಪಡಿಸಿಕೊಳ್ಳಲು, ಯಾವುದೇ ಧಾರ್ಮಿಕ ಚಿಹ್ನೆಗಳು ನನ್ನ ಶಾಲಾ ಕ್ಯಾಂಪಸ್‌ಗೆ ಪ್ರವೇಶಿಸದಂತೆ ಖಚಿತಪಡಿಸಿಕೊಳ್ಳಲು ನಾನು ಬದ್ಧನಾಗಿರುತ್ತೇನೆ. ಆ ಹಕ್ಕು ನನಗಿದೆ.
 • ಪೂವಯ್ಯ ತನ್ನ ವಾದ ಮುಕ್ತಾಯಗೊಳಿಸುತ್ತಾರೆ.

ಕಾಲೇಜು ಪರವಾಗಿ ವಾದ ಪೂರ್ಣಗೊಳಿಸಿದ ಹಿರಿಯ ವಕೀಲ ಎಸ್. ನಾಗಾನಂದ್

ಅಪ್‌ಡೇಟ್‌‌ – 03:50 PM

 • ನಾಗಾನಂದ್: ಆರ್ಟಿಕಲ್ 25 ರ ಉಲ್ಲಂಘನೆ ಚರ್ಚೆಯಾಗಿದೆ. ಸರ್ಕಾರವು ಯಾವುದೆ ಸಮವಸ್ತ್ರ ಸೂಚಿಸಿಲ್ಲ, ಸಂಸ್ಥೆಯು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ನಮ್ಮ ಪ್ರಕರಣದಲ್ಲಿ ಸಂಸ್ಥೆಯು 2004 ರಿಂದ ಸಮವಸ್ತ್ರದ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿದೆ.
 • ನಾಗಾನಂದ್ : ಆತ್ಮಸಾಕ್ಷಿಯ ಸ್ವಾತಂತ್ರ್ಯವೆಂದರೆ, ಆತ್ಮಸಾಕ್ಷಿ, ನಮ್ಮ ಹೃದಯದ ಅಂತರಾಳದಿಂದ ನಾವು ಕೇಳುವ ಧ್ವನಿಯಾಗಿದೆ… ಆತ್ಮಸಾಕ್ಷಿಯ ಸ್ವಾತಂತ್ರ್ಯ ಎಂದರೆ, ನಿಮ್ಮ ಹೃದಯವು ನಿಮಗೆ ಏನು ಹೇಳುತ್ತದೆ ಎಂಬುವುದು.
 • ನಾಗಾನಂದ್: ಒಬ್ಬ ವ್ಯಕ್ತಿ ತನ್ನದೇ ಆದ ಆಲೋಚನಾ ಪ್ರಕ್ರಿಯೆಯ ಸ್ವಾತಂತ್ರ್ಯವನ್ನು ಹೊಂದಿರಬೇಕೆಂದು ಸಂವಿಧಾನ ರಚನಾಗಾರರು ಬಯಸಿದ್ದರು. ಆದ್ದರಿಂದ ಆತ್ಮಸಾಕ್ಷಿಯ ಸ್ವಾತಂತ್ರ್ಯ ಇದೆ.
 • ನಾಗಾನಂದ್: ಪ್ರಜಾಸತ್ತಾತ್ಮಕ ಸಂಸ್ಥೆಯು ಎಲ್ಲರ ಪ್ರತಿನಿಧಿಗಳನ್ನು ಹೊಂದಿರುವ ನಿರ್ಧಾರವನ್ನು ತೆಗೆದುಕೊಂಡಿದೆ. ಶಾಲೆಯಲ್ಲಿ ಸಾರ್ವಜನಿಕ ಸುವ್ಯವಸ್ಥೆಗಾಗಿ ಉಡುಪಿನಲ್ಲಿ ಏಕರೂಪತೆ ಇರಬೇಕು ಎಂಬ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ. ಸುವ್ಯವಸ್ಥೆಯಿಲ್ಲ ಎಂಬ ಕಾರಣಕ್ಕೆ ಆದೇಶ ಬರುತ್ತಿದೆ ಎಂದು ಅದು ಆಗಬೇಕಿಲ್ಲ.
 • ನಾಗಾನಂದ್‌: ಹಾಲಿ ಪ್ರಕರಣದಲ್ಲಿ ಮಕ್ಕಳು ಸಮವಸ್ತ್ರ ಮಾತ್ರ ಧರಿಸಬೇಕು. ಹಿಜಾಬ್‌ ಧರಿಸುವಂತಿಲ್ಲ ಎಂದು ಹೇಳಿದ್ದಾರೆ. ಶಾಲೆಯ ಅತ್ಯಂತ ಸಂಪ್ರದಾಯಬದ್ಧ ಬ್ರಾಹ್ಮಣರು ಇದ್ದಾರೆ. ಉಪನಯನದ ಬಳಿಕ ಹುಡುಗರು ಹೊಲಿಗೆ ಹಾಕಿರುವ ಬಟ್ಟೆ ಧರಿಸುವಂತಿಲ್ಲ. ಇದು ನನ್ನ ಧರ್ಮ, ಶಾಲೆಗೆ ಷರ್ಟ್‌ ಹಾಕಿ ಬರುವುದಿಲ್ಲ ಎಂದು ಆ ಹುಡುಗ ಹೇಳಿದರೆ ಏನಾಗುತ್ತದೆ. ಎಲ್ಲರೂ ತಮಗೆ ಇಷ್ಟವಾದದ್ದನ್ನು ಮಾಡಬಹುದು. ಅದಕ್ಕೆ ಧರ್ಮ ಸಮರ್ಥನೆ.
 • ನಾಗಾನಂದ್‌: ಕಾಲೇಜು ಅಭಿವೃದ್ಧಿ ಸಮಿತಿಯು ಕಾಲೇಜಿನ ಪರವಾಗಿ ಕಾರ್ಯನಿರ್ವಹಿಸುವ ಸಮಿತಿ. ಅಲ್ಲಿ ಶಾಸಕರಿರುವುದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಯಾವುದಕ್ಕದರೂ ಸಹಿ ಮಾಡುವಂತೆ ಸಮ್ಮತಿಗೆ ಶಾಸಕ ಒತ್ತಡ ಹಾಕಿರುವ ಆರೋಪಗಳಿಲ್ಲ. ನ್ಯಾಯಮೂರ್ತಿಗಳೂ ಕೆಲವು ನಿರ್ಧಾರ ಕೈಗೊಳ್ಳಲು ಆಡಳಿತಾತ್ಮಕ ವಿಭಾಗದಲ್ಲಿ ಕೂರುತ್ತೀರಿ. ಆದರೆ, ನ್ಯಾಯಿಕ ವಿಚಾರ ಬಂದಾಗ ನಿರ್ಧಾರ ಕೈಗೊಳ್ಳುವುದೇ ಬೇರೆ ಇರುತ್ತದೆ. ಯಾವುದಾದರೂ ರೀತಿಯಲ್ಲಿ ಶಾಸಕ, ಸಂಸದರು ಇದ್ದರೆ ಯಾವುದೇ ವ್ಯತ್ಯಾಸ ಆಗದು.
 • ನಾಗಾನಂದ್‌: ಕಾಲೇಜು ಅಭಿವೃದ್ಧಿ ಸಮಿತಿ ಸಮವಸ್ತ್ರ ಸೂಚಿಸಿದೆ. 20 ವರ್ಷಗಳಿಂದ ಯಾವುದೆ ಸಮಸ್ಯೆ ಇರಲಿಲ್ಲ. ಸಿಎಫ್‌ಐ ಮತ್ತು ಇತರೆ ಸಂಘಟನೆಗಳು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಪ್ರಚೋದಿಸಿವೆ. ಇದರಿಂದಾಗಿ ಶೈಕ್ಷಣಿಕ ವ್ಯವಸ್ಥೆ ಮತ್ತು ಎಲ್ಲರೂ ಅದರ ಪರಿಣಾಮ ಅನುಭವಿಸುವಂತಾಗಿದೆ.
 • ನ್ಯಾಯಮೂರ್ತಿ ದೀಕ್ಷಿತ್‌: ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿ ಶಾಸಕರನ್ನು ಸೇರಿಸಲು ಅನುಮತಿ ಎಲ್ಲಿದೆ?
 • ನಾಗಾನಂದ್‌: ಇದನ್ನು ಪ್ರಶ್ನಿಸಿಲ್ಲವಾದ್ದರಿಂದ ಆ ಪ್ರಶ್ನೆ ಉದ್ಭವಿಸುವುದಿಲ್ಲ.
 • ಮುಖ್ಯ ನ್ಯಾಯಮೂರ್ತಿ: ನಮ್ಮ ಮುಂದೆ ಅದನ್ನು ಪ್ರಶ್ನಿಸಲಾಗಿಲ್ಲ.
 • ನಾಗಾನಂದ್‌: ಹಿಂದೂ, ಮುಸ್ಲಿಮ್‌ ಮತ್ತು ಕ್ರಿಶ್ಚಿಯನ್ನರಿಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಧರ್ಮವನ್ನು ಚಲಾಯಿಸುವ ಬೇರೊಬ್ಬರ ಹಕ್ಕಿನಿಂದ ನನ್ನ ಶಾಂತಿಯುತ ಅಸ್ತಿತ್ವದ ಹಕ್ಕಿಗೆ ಬೆದರಿಕೆ ಹಾಕುವಂತಿಲ್ಲ ಎಂದು ಹೇಳಲಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿಯು ತರಗತಿಯಲ್ಲಿ ಏಕತೆ ಇರಬೇಕು ಎಂಬ ದೃಷ್ಟಿಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಇದು ವಿದ್ಯಾರ್ಥಿಗಳ ದೃಷ್ಟಿಯಿಂದ ಉತ್ತಮ ಎಂದು ಅವರು ಭಾವಿಸಿದ್ದಾರೆ.
 • ನಾಗಾನಂದ್‌: ಭಾರತದ ಸಂವಿಧಾನದಲ್ಲಿರುವಂತೆ ನಮ್ಮಲ್ಲಿ ನಿರ್ಬಂಧಗಳಿದ್ದರೆ ಚೆನ್ನಾಗಿತ್ತು ಎಂದು ಅಮೆರಿಕದ ಸುಪ್ರೀಂ ಕೋರ್ಟ್‌ ಹೇಳಿತ್ತು. ಆದರೆ ಅವರಲ್ಲಿ ಆ ನಿಬಂಧನೆಗಳಿಲ್ಲ.
 • ನ್ಯಾಯಮೂರ್ತಿ ದೀಕ್ಷಿತ್‌: ಅಮೆರಿಕಾಕ್ಕೆ ಅಂಬೇಡ್ಕರ್‌ ಅವರಂಥವರು ಸಿಗಲಿಲ್ಲ. ನಮಗೆ ಅವರು ಸಿಕ್ಕಿದರು.
 • ನಾಗಾನಂದ್‌: ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಇರಾನ್‌ನ ಯುವತಿ ಬೆಂಗಳೂರಿಗೆ ಓದಲು ಬಂದಿದ್ದರು. ಅವರು ಹಿಜಾಬ್ ಧರಿಸುತ್ತಿರಲಿಲ್ಲ ಎಂದು ನನಗೆ ನೆನಪಿದೆ. ಅವರು ಅದನ್ನು ನಂಬಲಿಲ್ಲ ಮತ್ತು ಮುಸ್ಲಿಂ ಆಡಳಿತದ ಶಾ ಅವರ ಆಳ್ವಿಕೆಯಲ್ಲಿ ಇದನ್ನು ಜಾರಿಗೊಳಿಸಲಾಗಿಲ್ಲ.
 • ನಾಗಾನಂದ್‌: ನೀವು ನಿರ್ದಿಷ್ಟ ಧರ್ಮವನ್ನು ಅನುಸರಿಸಬಹುದು, ಆದರೆ ಇತರ ಧರ್ಮದ ಆಚರಣೆಗಳು ಮತ್ತು ಪದ್ಧತಿಗಳು ನಿಮ್ಮ ಧರ್ಮದೊಂದಿಗೆ ಸಂಯೋಜಿಸಬಹುದು. ಉದಾಹರಣೆಗೆ ಕ್ರಿಶ್ಚಿಯನ್ನರಲ್ಲಿ ಮಂಗಳಸೂತ್ರ ಇಲ್ಲ ಆದರೆ ಕೇರಳದ ಕ್ರಿಶ್ಚಿಯನ್ನರಲ್ಲಿ ಅದು ಇದೆ. ಅವರು ಅದನ್ನು ಮೈಗೂಡಿಸಿಕೊಂಡಿದ್ದಾರೆ.
 • ನಾಗಾನಂದ್‌: ಮಹಮ್ಮದೀಯ ಕಾನೂನು ಉತ್ತರಾಧಿಕಾರದ ಕೆಲವು ನಿಯಮಗಳನ್ನು ರೂಪಿಸುತ್ತದೆ. ಆದರೆ ಕೆಲವು ವರ್ಗದ ಮುಸ್ಲಿಮರು ಹಿಂದೂ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ ಮತ್ತು ನ್ಯಾಯಾಲಯಗಳು ಅದನ್ನು ಗುರುತಿಸಿವೆ. ಕೊಡಗು ಪ್ರಾಂತ್ಯದ ಸ್ಥಳೀಯ ಕ್ರಿಶ್ಚಿಯನ್ನರನ್ನು ಭಾರತೀಯ ಉತ್ತರಾಧಿಕಾರತ್ವ ಕಾಯಿದೆಯಿಂದ ಅಧಿಸೂಚನೆಯ ಮೂಲಕ ಹೊರಗಿಡಲಾಗಿದೆ. ಆದರೆ ಅವರಿಗೆ ಹಿಂದೂಗಳ ಕಾನೂನುಗಳು ಅನ್ವಯಿಸುತ್ತವೆ. ಇದು ಧಾರ್ಮಿಕ ಆಚರಣೆಗೆ ವಿರುದ್ಧವಾಗಿದೆ ಎಂದರ್ಥವೇ?
 • ನಾಗಾನಂದ್:‌ ರಸ್ತೆಯಲ್ಲಿ ಡೋಲು ಬಾರಿಸುವವರು ಸಮಾಜಕ್ಕೆ ಬೆದರಿಕೆ ಹಾಕದಿರಲಿ. ನಮ್ಮದು ಶಾಂತಿಯುತ ಸಮಾಜ. ಸಮಾಜದಲ್ಲಿ ಸಾಮರಸ್ಯವನ್ನು ಹೊಂದಿದ್ದೇವೆ. ನಾವು ನಮ್ಮ ಮಕ್ಕಳಿಗೆ ಯಾವುದೇ ರೀತಿಯ ವ್ಯತ್ಯಾಸವನ್ನು ಮಾಡಬೇಡಿ ಎಂದು ಹೇಳಬೇಕು, ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೈವಿಕ ಕಿಡಿ ಇರುತ್ತದೆ.
 • ನಾಗಾನಂದ್‌: ಉಡುಪಿ ಅಷ್ಟಮಠದಲ್ಲಿ ಅಲ್ಲಿನ ಮಠಾಧೀಶರಿಗೆ ಅಲ್ಲಿನ ಮುಸ್ಲಿಂ ಬಾಂಧವರು ಬೆಂಬಲ ನೀಡುತ್ತಾರೆ ಎಂಬುದು ನನಗೆ ವೈಯಕ್ತಿಕವಾಗಿ ಗೊತ್ತು. ಅವರು ಉತ್ಸವಗಳಲ್ಲಿ ಭಾಗವಹಿಸಲು ಬರುತ್ತಾರೆ, ಸಹಾಯ ಮಾಡುತ್ತಾರೆ. ನಾವು ನಮ್ಮ ಮಕ್ಕಳಿಗೆ ಯಾವುದೇ ರೀತಿಯ ವ್ಯತ್ಯಾಸವನ್ನು ಮಾಡಬೇಡಿ ಎಂದು ಹೇಳಬೇಕು, ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೈವಿಕ ಕಿಡಿ ಇರುತ್ತದೆ. ನಾವು ಬಣ್ಣ, ಧರ್ಮ, ಭಾಷೆಯ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಿಲ್ಲ.
 • ನಾಗಾನಂದ್‌: ಹಿಂದೂಗಳ ಬಲಪಂಥೀಯ ಬಣವೊಂದು ಕೇಸರಿ ಶಲ್ಯ ಧರಿಸುವುದಾಗಿ ಹೇಳುತ್ತಿದೆ. ನಾಳೆ ಮೊಹಮ್ಮದೀಯ ಹುಡುಗರು ತಲೆಗೆ ಟೋಪಿ ಧರಿಸಬೇಕೆಂದು ಹೇಳುತ್ತಾರೆ, ಇದು ಎಲ್ಲಿ ಕೊನೆಗೊಳ್ಳುತ್ತದೆ, ನಾವು ಸಮಾಜವನ್ನು ಈ ರೀತಿ ಧ್ರುವೀಕರಿಸಬಹುದೇ?
 • ನಾಗಾನಂದ್ ತಮ್ಮ ವಾದ ಮುಕ್ತಾಯಗೊಳಿಸುತ್ತಾರೆ. ವಕೀಲ ರಾಘವೇಂದ್ರ ಶ್ರೀವತ್ಸ ಅವರು ಈಗ ವಿದೇಶಿ ತೀರ್ಪುಗಳ ಅನ್ವಯದ ಬಗ್ಗೆ ವಾದಗಳನ್ನು ಮಾಡುತ್ತಾರೆ.
 • ಮುಖ್ಯ ನ್ಯಾಯಮೂರ್ತಿ: ನಾವು ಸಾಂವಿಧಾನಿಕ ವಿಷಯಗಳಲ್ಲಿದ್ದೇವೆ. ಧರ್ಮದ ಸ್ವಾತಂತ್ರ್ಯವು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ ಮತ್ತು ನಾವು ಅದನ್ನು ಪರಿಗಣಿಸುತ್ತೇವೆ.

ಸಿಎಫ್‌ಐ ಎಂದರೇನು?: ಮುಖ್ಯ ನ್ಯಾಯಮೂರ್ತಿ ಪ್ರಶ್ನೆ

ಅಪ್‌ಡೇಟ್‌‌ – 03:00 PM

 • 9 ನೇ ದಿನದ ವಿಚಾರಣೆ ಪ್ರಾರಂಭ
 • ಮುಖ್ಯ ನ್ಯಾಯಮೂರ್ತಿ: ಈ ವಾರ ತೀರ್ಪು ನೀಡುತ್ತೇವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನೀವು ವಾದಗಳನ್ನು ಪೂರ್ಣಗೊಳಿಸಿಲ್ಲ, ನಾವು ಅದನ್ನು ಹೇಗೆ ತಲುಪಿಸಬಹುದು?
 • ಹಿರಿಯ ವಕೀಲ ಎಸ್. ನಾಗಾನಂದ್ ಅವರು ಹಿಜಾಬ್ ಅನ್ನು ವಿರೋಧಿಸಿ ಪಿಯು ಕಾಲೇಜಿನ ಪರವಾಗಿ ವಾದಗಳನ್ನು ಮುಂದುವರೆಸಿದ್ದಾರೆ.
 • ಹಿಜಾಬ್ ಇಲ್ಲದ ಅರ್ಜಿದಾರರೊಬ್ಬರ ಆಧಾರ್ ಕಾರ್ಡ್ ಫೋಟೋವನ್ನು ಅವರು ನ್ಯಾಯಾಲಯಕ್ಕೆ ತೋರಿಸುತ್ತಾರೆ.
 • ಹಿಜಾಬ್ ಇಲ್ಲದ ಇನ್ನೊಬ್ಬ ಅರ್ಜಿದಾರರ ಆಧಾರ್ ಕಾರ್ಡ್ ಫೋಟೋವನ್ನು ನಾಗನಂದ್‌ ತೋರಿಸುತ್ತಾರೆ.
 • ನಾಗಾನಂದ್ : ಸಾರ್ವಜನಿಕವಾಗಿ ಸದಾ ಹಿಜಾಬ್ ಧರಿಸಿಯೇ ಇರಬೇಕು ಎಂದು ವಿದ್ಯಾರ್ಥಿಗಳು ಪ್ರತಿಪಾದಿಸುತ್ತಿದ್ದಾರೆ.
 • ನಾಗಾನಂದ್: 30.12.2021 ರಂದು, ಮೂಲಭೂತವಾದಿ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವ್ಯಕ್ತಿಗಳು, ಅಧಿಕಾರಿಗಳನ್ನು ಸಂಪರ್ಕಿಸಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಿದರು.
 • ನಾಗಾನಂದ್: ಹಿಜಾಬ್‌ಗೆ ನಿರಾಕರನೆ ಮಾಡಿದ ನಂತರ ವಿದ್ಯಾರ್ಥಿಗಳು ಉದ್ಧಟತನದಿಂದ ವರ್ತಿಸಿದರು. ಸಿಎಫ್‌ಐ ಪ್ರತಿಭಟನೆಗಳನ್ನು ಸಂಘಟಿಸುತ್ತಿದೆ.
 • ಮುಖ್ಯ ನ್ಯಾಯಮೂರ್ತಿ: ಸಿಎಫ್‌ಐ ಎಂದರೇನು?
 • ನಾಗಾನಂದ್: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ. ಇದೊಂದು ಸ್ವಯಂಸೇವಾ ಸಂಸ್ಥೆಯಾಗಿದ್ದು, ಹಿಜಾಬ್‌ನ ಪರವಾಗಿರುವ ವಾದವನ್ನು ಮುನ್ನಡೆಸುತ್ತಿದೆ. ಇದು ಮೂಲಭೂತವಾಗಿ ಸಂಘಟನೆಯಾಗಿದೆ.
 • ನಾಗಾನಂದ್ : CFI ವಿದ್ಯಾರ್ಥಿಗಳ ಸಂಘ ಆಗಿರಬೇಕು, ಆದರೆ ಇದು ಯೂನಿಯನ್ ಮಾನ್ಯತೆ ಪಡೆದಿಲ್ಲ ಇತ್ಯಾದಿ. ಇದೊಂದು ಗಲಾಟೆ ಮಾಡುವ ಸಂಸ್ಥೆಯಾಗಿದೆ.
 • ಮುಖ್ಯ ನ್ಯಾಯಮೂರ್ತಿ: ಈ ಸಂಸ್ಥೆಯ ಬಗ್ಗೆ ಸರ್ಕಾರಕ್ಕೆ ಖಂಡಿತಾ ಆಂತರಿಕ ಮಾಹಿತಿ ಇರಬೇಕು.
 • ನಾಗಾನಂದ್: ಖಂಡಿತಾ ಇಂಟೆಲಿಜೆನ್ಸ್ ಬ್ಯೂರೋ ಹೊಂದಿರಬೇಕು.
 • ಅಡ್ವೊಕೇಟ್‌‌ ಜನರಲ್‌ಗೆ ಮುಖ್ಯ ನ್ಯಾಯಮೂರ್ತಿ: ಈ ಸಂಘಟನೆಯ (ಸಿಎಫ್‌ಐ) ಬಗ್ಗೆ ನಿಮಗೆ ಗುಪ್ತಚರ ಮಾಹಿತಿ ಇದೆಯೇ?
 • ಅಡ್ವೊಕೇಟ್‌‌ ಜನರಲ್‌: ನನ್ನ ಬಳಿ ಕೆಲವು ಮಾಹಿತಿ ಇದೆ, ಅದನ್ನು ಮುಚ್ಚಿದ ಕವರ್‌ನಲ್ಲಿ ಇರಿಸುತ್ತೇನೆ.
 • ಮುಖ್ಯ ನ್ಯಾಯಮೂರ್ತಿ: ಇದ್ದಕ್ಕಿದ್ದಂತೆ … ಇದು ಹೇಗೆ ಸ್ಫೋಟಗೊಂಡಿದೆ.
 • ವಕೀಲ ತಾಹಿರ್: ಈ ಘಟನೆಯ ನಂತರ ಕೇಸರಿ ಶಾಲು ಹಂಚಿರುವ ಬಗ್ಗೆ ವರದಿಗಳು ಬರುತ್ತಿವೆ. ಒಂದು ಸಂಸ್ಥೆಯ ಬಗ್ಗೆ ವರದಿ ಮಾಡಿದರೆ ಇತರ ಸಂಸ್ಥೆಗಳ ಬಗ್ಗೆಯೂ ವರದಿ ನೀಡಬೇಕು.
 • ಮುಖ್ಯ ನ್ಯಾಯಮೂರ್ತಿ: ಸರಿ ನಾವು ಅದರ ಬಗ್ಗೆ ನೋಡೋಣ.
 • ನಾಗಾನಂದ್: ಕೆಲವು ಶಿಕ್ಷಕರಿಗೂ ಅವರ ಸಂಘಟನೆಯಿಂದ ಬೆದರಿಕೆ ಇತ್ತು. ದೂರು ನೀಡಲು ಹೆದರುತ್ತಿದ್ದರು. ನಿನ್ನೆ ಶಿಕ್ಷಕರೊಬ್ಬರು ದೂರು ನೀಡಿದ್ದಾರೆ. ಇನ್ನೂ ಒಂದು ಆರೋಪವೆಂದರೆ ನಾವು ವಿದ್ಯಾರ್ಥಿಗಳನ್ನು ಬೈಯುತ್ತಿದ್ದೆವು ಎಂಬುವುದು. ನಾವು ಅನೇಕ ವರ್ಷಗಳಿಂದ ಶಿಕ್ಷಕರಾಗಿದ್ದೇವೆ. ಈ ವಿದ್ಯಾರ್ಥಿಗಳನ್ನು ತಮ್ಮ ಬಂಧುಗಳಂತೆ ಪರಿಗಣಿಸುತ್ತೇವೆ. ನಾನು ಈ ಆರೋಪಗಳನ್ನು ನಿರಾಕರಿಸುತ್ತೇನೆ.
 • ನ್ಯಾಯಮೂರ್ತಿ ದೀಕ್ಷಿತ್: ದೂರು ಯಾವಾಗ ದಾಖಲಾಗಿದೆ? ಸರ್ಕಾರವು ಅದನ್ನು ನಮಗೆ ಬಹಿರಂಗಪಡಿಸಬೇಕು.
 • ಅಡ್ವೋಕೇಟ್‌ ಜನರಲ್‌: ನನಗೆ ತಿಳಿದಿರಲಿಲ್ಲ. ನಾನು ಕಂಡುಹಿಡಿಯುವೆ.
 • ನ್ಯಾಯಮೂರ್ತಿ ದೀಕ್ಷಿತ್: ನೀವು ಭಯಪಡುತ್ತೀರಾ ಅಥವಾ ಏನು?
 • ಅಡ್ವೋಕೇಟ್‌ ಜನರಲ್‌: ಖಂಡಿತ ಇಲ್ಲ.
 • ನಾಗನಂದ್‌: ಶಿಕ್ಷಕರು ಗದರಿಸುತ್ತಿದ್ದರು ಎಂಬಿತ್ಯಾದಿ ಗಂಭೀರ ಆರೋಪದ ಬಗ್ಗೆ ಅರ್ಜಿದಾರರು ಪುಷ್ಟೀಕರಿಸಿಲ್ಲ. ವಿದ್ಯಾರ್ಥಿಗಳಿಗೆ ಹಾಜರಾತಿ ನೀಡುವುದಿಲ್ಲ ಎಂಬುದು ಬೆದರಿಕೆ. ಅಲ್ಲಿ ಬೆದರಿಕೆ ಏನಿದೆ? ಅವರು ಶಾಲೆಗೆ ಬರದಿದ್ದರೆ ಗೈರು ಹಾಕಲಾಗುತ್ತದೆ. ಇಂಟರನಲ್‌ ಅಂಕ ನೀಡುವುದಿಲ್ಲ ಎಂಬ ಬೆದರಿಕೆ ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಹಾಗೆ ಆಗಿಲ್ಲ. ಇವೆಲ್ಲ ಆಧಾರರಹಿತ ಆರೋಪಗಳು. ಸೆಪ್ಟೆಂಬರ್ 2021 ರಿಂದ ಅರ್ಜಿದಾರರು ತಮ್ಮ ತರಗತಿಗಳಲ್ಲಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂಬ ಸುಳ್ಳು ಆರೋಪವನ್ನೂ ಮಾಡಿದ್ದಾರೆ. ನಾನು ಅದನ್ನು ನಿರಾಕರಿಸಿದ್ದೇನೆ.
 • ನಾಗನಂದ್‌: ನಾನು ಲಗತ್ತಿಸಿರುವ ವಿದ್ಯಾರ್ಥಿಗಳು ನೀಡಿದ ಎರಡು ಮನವಿಗಳಲ್ಲಿ ಈ ಆರೋಪಗಳಿಲ್ಲ. ಸೆಪ್ಟೆಂಬರ್‌ನಲ್ಲಿ ಘಟನೆ ನಡೆದಿದೆ, ವಿದ್ಯಾರ್ಥಿ ಮನೆಗೆ ತೆರಳಿ ಮೂರು ತಿಂಗಳ ಬಳಿಕ ದೂರು ದಾಖಲಿಸುತ್ತಾರೆಯೇ?
 • ಮುಖ್ಯ ನ್ಯಾಯಮೂರ್ತಿ: 2004-05ರಿಂದ ಸಮವಸ್ತ್ರ ಕಡ್ಡಾಯ ಎಂದು ಹೇಳುತ್ತಿದ್ದೀರಾ?
 • ನಾಗಾನಂದ್: ಹೌದು. ಇದು 2004 ರಿಂದ ಸತತವಾಗಿ ಒಂದೇ ಆಗಿರುತ್ತದೆ. ಇಲ್ಲಿಯವರೆಗೂ ಯಾವುದೇ ಸಮಸ್ಯೆ ಇರಲಿಲ್ಲ ಮತ್ತು ವಿದ್ಯಾರ್ಥಿಗಳು ಇದ್ದರು. ಇದು ಯಾವುದೋ ದಾರಿತಪ್ಪಿದ ನಿರ್ಣಯವಲ್ಲ.
 • ನಾಗಾನಂದ್: 25ನೇ ಪುಟದಲ್ಲಿರುವ ಅರ್ಜಿಗೆ ಪೂರಕವಾಗಿ ಸಲ್ಲಿಸಿರುವ ಪ್ರಮಾಣಪತ್ರ ನೋಡಿ. ಅಲ್ಲಿ ಅರ್ಜಿದಾರರ ತಾಯಿ ಮೊದಲ ಅರ್ಜಿದಾರರು. ಅವರ ಹೆಸರು ಆಯೇಷಾ. ಅವರ ಆಧಾರ್‌ ಕಾರ್ಡ್‌ ಇದೆ. ಅವರು ಪ್ರೌಢಾವಸ್ಥೆಗೆ ಬಂದಿದ್ದಾರೆ. ಒಂದು ಪ್ರಮಾಣಪತ್ರ ಮಾತ್ರ ಇದೆ. ಉಳಿದ ಅರ್ಜಿದಾರರು ಪ್ರಮಾಣ ಪತ್ರ ಸಲ್ಲಿಸಿಲ್ಲ. ಇದೆಲ್ಲವನ್ನೂ ನೀವು ನೋಡಿದರೆ ತಾಯಿಯೊಬ್ಬರ ಪರಿಶೀಲನಾ ಪ್ರಮಾಣಪತ್ರ ನೋಡಿದರೆ ತರಗತಿಯ ಇತರೆ ವಿದ್ಯಾರ್ಥಿಗಳಿಗೆ ಏನಾಯಿತು ಎಂದು ಅವರಿಗೆ ಹೇಗೆ ಗೊತ್ತಾಗುತ್ತದೆ.
 • ನಾಗಾನಂದ್: ಪುತ್ರಿ ಪ್ರೌಢಾವಸ್ಥಗೆ ಬಂದಿದ್ದಾರೆ ಎಂದಾಗ ತಾಯಿ ಪ್ರಮಾಣ ಪತ್ರ ಸಲ್ಲಿಸಲಾಗದು. ಅರ್ಜಿಯಲ್ಲಿ ಕನಿಷ್ಠ ಸೂಕ್ತ ವಿದ್ಯಾರ್ಥಿನಿಯನ್ನು ಒಳಗೊಂಡಿಲ್ಲ. ಇಂಥ ಅರ್ಜಿದಾರರಿಂದಾಗಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಲಾಗುತ್ತಿದೆ.
 • ನಾಗಾನಂದ್‌: ಸಮವಸ್ತ್ರ ಸೂಚಿಸುವುದು ಸಂವಿಧಾನದ 25ನೇ ವಿಧುಯ ಉಲ್ಲಂಘನೆಯೇ ಎಂಬ ಪ್ರಶ್ನೆ ಇದೆ. ಅದೇ ಪ್ರಮುಖ ವಿಷಯವಾಗಿ ಚರ್ಚೆಯಾಗುತ್ತಿದೆ. ಸರ್ಕಾರ ಸಮವಸ್ತ್ರ ಸೂಚಿಸಿಲ್ಲ. ಸಂಸ್ಥೆಗಳು ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರ ಹೇಳಿದೆ.

ವಿದ್ಯಾರ್ಥಿನಿಯರ ಅರ್ಜಿ ವಿಚಾರಣೆ ಪ್ರಾರಂಭ

ಅಪ್‌ಡೇಟ್‌‌ – 02:30 PM

ಕರ್ನಾಟಕ ಹೈಕೋರ್ಟ್ ಪೂರ್ಣ ಪೀಠವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಒಂಬತ್ತನೆ ದಿನದ ವಿಚಾರಣೆಯು ಬುಧವಾರ ಮುಂದುವರೆಸಲಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು ಈ ವಿಚಾರಣೆಯನ್ನು ನಡೆಯಲಿದೆ.

ಸೋಮವಾರದಂದು, ಮುಖ್ಯ ನ್ಯಾಯಾಧೀಶರು ಹಿಜಾಬ್ ಅನ್ನು ನಿಷೇಧಿಸುವ ಬಗ್ಗೆ ತನ್ನ ನಿಲುವಿನ ಬಗ್ಗೆ ರಾಜ್ಯದಿಂದ ಸ್ಪಷ್ಟೀಕರಣವನ್ನು ಕೇಳಿದರು. ರಿಟ್ ಅರ್ಜಿಗಳಲ್ಲಿ ಪ್ರಶ್ನಿಸಲಾದ ಫೆಬ್ರವರಿ 5 ರ ಸರ್ಕಾರಿ ಆದೇಶವು ಹಿಜಾಬ್ ಮೇಲೆ ಯಾವುದೇ ನಿಷೇಧವನ್ನು ಸೂಚಿಸುವುದಿಲ್ಲ ಮತ್ತು ಇದು “ನಿರುಪದ್ರವ” ಆದೇಶವಾಗಿದ್ದು ಅದು ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಸಮವಸ್ತ್ರವನ್ನು ಅನುಸರಿಸಲು ಕೇಳುತ್ತದೆ ಎಂದು ರಾಜ್ಯ ಸರ್ಕಾರವು ಹೇಳಿತ್ತು.

“ನಿಮ್ಮ ನಿಲುವು ಏನು? ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ಅನುಮತಿಸಬಹುದೇ ಅಥವಾ ಇಲ್ಲವೇ?” ಎಂದು ಮುಖ್ಯ ನ್ಯಾಯಮೂರ್ತಿ ತೀಕ್ಷ್ಣವಾದ ಪ್ರಶ್ನೆಯನ್ನು ಎತ್ತಿದ್ದರು. ಇದಕ್ಕೆ ಉತ್ತರಿಸಿದ ರಾಜ್ಯ ಸರ್ಕಾರದ ಪ್ರತಿನಿಧಿ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವಡಗಿ, “ಸರ್ಕಾರದ ಆದೇಶದ ಆಪರೇಟಿವ್ ಭಾಗವು ಅದನ್ನು ಸಂಸ್ಥೆಗಳಿಗೆ ಬಿಟ್ಟುಬಿಡುತ್ತದೆ” ಎಂದು ವಾದಿಸಿದ್ದಾರೆ.

ಈ ವೇಳೆ ಮತ್ತೇ ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ, “ಸಂಸ್ಥೆಗಳು ಹಿಜಾಬ್ ಅನ್ನು ಅನುಮತಿಸಿದರೆ, ನಿಮಗೆ ಆಕ್ಷೇಪಣೆಗಳಿವೆಯೇ?” ಎಂದು ಹೇಳಿದ್ದರು. ಇದಕ್ಕೆಲ್ಲಾ ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರ, “ಶಿಕ್ಷಣ ಸಂಸ್ಥೆಗಳು ಅನುಮತಿ ನೀಡಿ, ಸಮಸ್ಯೆ ಉಂಟಾದರೆ, ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ…” ಎಂದು ಹೇಳಿದೆ.

ಇದಕ್ಕೆ ಮುಖ್ಯ ನ್ಯಾಯಮೂರ್ತಿ, “ನೀವು ಒಂದು ನಿಲುವು ತೆಗೆದುಕೊಳ್ಳಬೇಕು” ಎಂದು ಪುನರುಚ್ಚರಿಸಿದ್ದರು.

“ನಾವು ಏನನ್ನೂ ಸೂಚಿಸಿಲ್ಲ ಎಂಬುದು ನನ್ನ ಉತ್ತರ. ಈ ಆದೇಶವು ಸಮವಸ್ತ್ರವನ್ನು ನಿರ್ಧರಿಸಲು ಸಂಸ್ಥೆಗೆ ಸಂಪೂರ್ಣ ಸ್ವಾಯತ್ತತೆಯನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ಧರ್ಮದ ಸಂಕೇತವಾಗಿರುವ ಉಡುಗೆ ಅಥವಾ ಬಟ್ಟೆಗಳನ್ನು ಧರಿಸಲು ಅವಕಾಶ ನೀಡಬೇಕೆ ಎಂಬುದು ಸರ್ಕಾರದ ನಿಲುವು..ಧಾರ್ಮಿಕ ಉಡುಗೆಯನ್ನು ಸಂಕೇತಿಸುವುದು ಸಮವಸ್ತ್ರದಲ್ಲಿ ಇರಬಾರದು. ತಾತ್ವಿಕವಾಗಿ, ಜಾತ್ಯತೀತ ವಾತಾವರಣವನ್ನು ಬೆಳೆಸುವ ಕರ್ನಾಟಕ ಶಿಕ್ಷಣ ಕಾಯ್ದೆಯ ಪೀಠಿಕೆಯಲ್ಲಿ ಉತ್ತರವಿದೆ” ಎಂದು ಸರ್ಕಾರ ನ್ಯಾಯಾಲಯದಲ್ಲಿ ಹೇಳಿದೆ.

“ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂದು ಅರ್ಜಿದಾರರು ಆಧಾರ ನೀಡಿಲ್ಲ. ಆದ್ದರಿಂದ ಸಂವಿಧಾನದ 25 ನೇ ವಿಧಿ ಅಡಿಯಲ್ಲಿ ರಕ್ಷಣೆ ನೀಡುವುದು ಸಾಧ್ಯವಿಲ್ಲ” ಎಂದು ಮಂಗಳವಾರ ರಾಜ್ಯದ ಬಿಜೆಪಿ ಸರ್ಕಾರದ ಪರವಾಗಿ ಅಡ್ವೊಕೇಟ್‌ ಪ್ರಭುಲಿಂಗ ನಾವಡಗಿ ವಾದಿಸಿದ್ದಾರೆ.

ಇದನ್ನೂ ಓದಿ: ಹಿಜಾಬ್ – ಮಧ್ಯಂತರ ಆದೇಶದ ಅತಿಕ್ರಮದ ಬಗ್ಗೆ ಕ್ರಮಕೈಗೊಳ್ಳುತ್ತೇವೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಭರವಸೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...