ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಏಕಾಏಕಿ ಜೇನು ನೊಣಗಳ ದಾಳಿ ನಡೆದಿದ್ದು, ಬಂದೋಬಸ್ತ್‌ನಲ್ಲಿದ್ದ ಸುಮಾರು 10 ಪೊಲೀಸರು ಸೇರಿದಂತೆ ಹಲವರಿಗೆ ಗಾಯಗಳಾಗಿವೆ.
ಘಟನೆಯ ಪರಿಣಾಮ ಪೊಲೀಸರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸೇರಿಸಲಾಗಿದೆ ಎಂದು ವರದಿಯಾಗಿದೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರಿಂದ ಬಂದೋಬಸ್ತ್‌ಗಾಗಿ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಇದ್ದಕ್ಕಿದ್ದಂತೆ ಬಂದ ಸಾವಿರಾರು ಜೇನು ಹುಳುಗಳು ಪೊಲೀಸರು ಹಾಗೂ ಇತರರ ಮೇಲೆ ದಾಳಿ ನಡೆಸಿವೆ.
ಇದನ್ನೂ ಓದಿ: ಬುಲ್ಲಿ ಬಾಯ್, ಸುಲ್ಲಿ ಡೀಲ್ಸ್ ವಿಕೃತಿ: ದೆಹಲಿ ಪೊಲೀಸರಿಂದ ಚಾರ್ಜ್‌ಶೀಟ್ ಸಲ್ಲಿಕೆ
“ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಪ್ರಾರಂಭವಾಗುವ ಮೊದಲು ಈ ಘಟನೆ ನಡೆದಿದೆ. ಇಲ್ಲದಿದ್ದರೆ ಭಾರಿ ಅನಾಹುತವಾಗುತ್ತಿತ್ತು” ಎಂದು ಪೊಲೀಸರು ಹೇಳಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು ಸೇರಿದಂತೆ ‘ಬಂದೋಬಸ್ತ್’ ಸಿಬ್ಬಂದಿ ಮೇಲೆ ಜೇನು ನೊಣಗಳು ದಾಳಿ ನಡೆಸಿವೆ ಎಂದು ಡಿಸಿಪಿ (ಪಶ್ಚಿಮ) ಸಂಜೀವ್ ಪಾಟೀಲ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ನಗರದಲ್ಲಿ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡಿದ್ದಕ್ಕೆ ಕರ್ನಾಟಕ ಹೈಕೋರ್ಟ್ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್ ಆವರಣಕ್ಕೆ ಸೀಮಿತಗೊಳಿಸುವಂತೆ ಮತ್ತು ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹೈಕೋರ್ಟ್ ಸೂಚಿಸಿದೆ.
ಓರ್ವ ಇನ್ಸ್‌ಪೆಕ್ಟರ್ ಹಾಗೂ ಎಂಟು ಮಂದಿ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೇನುನೊಣಗಳು ಸ್ವಾಭಾವಿಕವಾಗಿ ದಾಳಿ ಮಾಡಿವೆಯೇ ಅಥವಾ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯವೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಸಂಜೀವ್ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ತಂದೆಯಿಂದ ಬೆದರಿಕೆ: ಬೆಂಗಳೂರು ಪೊಲೀಸರಿಂದ ರಕ್ಷಣೆ ಕೋರಿದ ತಮಿಳುನಾಡು ಸಚಿವರ ನವವಿವಾಹಿತ ಪುತ್ರಿ!


