“ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಜನಾದೇಶವನ್ನು ಪಡೆದವರಿಗೆ ಶುಭಾಶಯಗಳು. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ, ಸ್ವಯಂಸೇವಕರ ಶ್ರಮ, ಸಮರ್ಪಣೆಗೆ ನನ್ನ ಕೃತಜ್ಞತೆಗಳು. ನಾವು ಫಲಿತಾಂಶದಿಂದ ಪಾಠ ಕಲಿಯುತ್ತೇವೆ. ದೇಶದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ” ಎಂದು ಪಂಚರಾಜ್ಯಗಳ ಚುನಾವಣೆಯ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಾಗಲೂ ಕಾಂಗ್ರೆಸ್ ನಾಯಕರು ಇದೇ ಮಾತನ್ನು ಆಡಿದ್ದರು. ಮತ್ತೆ ಮತ್ತೆ ಇದೇ ಹೇಳಿಕೆ ಪುನರಾವರ್ತನೆಯಾಗುತ್ತಲೇ ಇದೆ.
ಪಂಜಾಬ್‌ನಲ್ಲಿ ಇದ್ದ ಅಧಿಕಾರವನ್ನೂ ಕಳೆದುಕೊಂಡಿರುವ ಕಾಂಗ್ರೆಸ್, ಉತ್ತರ ಪ್ರದೇಶದಲ್ಲಿ ಹೀನಾಯ ಸೋಲುಂಡಿದೆ. ಮಣಿಪುರ, ಉತ್ತರಖಾಂಡ್, ಗೋವಾ ರಾಜ್ಯಗಳಲ್ಲಿಯೂ ಸೋತು ಮುಖಭಂಗ ಅನುಭವಿಸಿದೆ. ಉತ್ತರ ಪ್ರದೇಶದಂತಹ ಬೃಹತ್ ರಾಜ್ಯದಲ್ಲಿ ಕಾಂಗ್ರೆಸ್ ಇಷ್ಟು ಕಳಪೆ ಪ್ರದರ್ಶನ ನೀಡಿದ್ದೇಕೆ? ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಗೆದ್ದಿದ್ದು ಹೇಗೆ? ಪಂಚ ರಾಜ್ಯಗಳ ಚುನಾವಣೆಯಿಂದ ಕಾಂಗ್ರೆಸ್ ಏನಾದರೂ ಹೊಸ ಪಾಠವನ್ನು ಕಲಿಯುವುದೇ? ಮುಂಬರುವ ದಿನಗಳಲ್ಲಿ ಕರ್ನಾಟಕ, ಗುಜರಾತ್ ರಾಜ್ಯಗಳು ಚುನಾವಣೆಯನ್ನು ಇದುರಿಸಲಿದ್ದು, ಕಾಂಗ್ರೆಸ್ ಯಾವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ? ಅರವತ್ತು ವರ್ಷ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಪಕ್ಷವು ಈಗ ಚುನಾವಣಾ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವುತ್ತಿದೆಯೇ?
“ನಾಗರಿಕ ಸಮಾಜ ಮುನ್ನಲೆಗೆ ತರುತ್ತಿರುವ ವಿಷಯಗಳು ಯಾವುದೇ ರಾಜಕೀಯ ಪಕ್ಷಗಳಿಗೆ ಮುಖ್ಯವಾಗಿ ಕಂಡೇ ಇಲ್ಲ” ಎನ್ನುತ್ತಾರೆ ರಾಜಕೀಯ ವಿಶ್ಲೇಷಕ, ಚಿಂತಕ ಕೆ.ಪಿ.ಸುರೇಶ್.
“ಸತತವಾಗಿ ಕೋಮುವಾದ, ನಿರುದ್ಯೋಗದ ಬಗ್ಗೆ ಚುನಾವಣಾ ರಾಜಕಾರಣದ ಆಚೆಗಿರುವವರು ಮಾತನಾಡುತ್ತಲೇ ಇದ್ದೇವೆ. ಈ ವಿಷಯಗಳ ಕುರಿತು ಒಂದೆರಡು ಪೋಸ್ಟರ್ ಹಾಗೂ ಭಾಷಣ ಮಾಡಿದರೆ ಆಗುವುದಿಲ್ಲ ಎಂಬುದನ್ನು ಕಾಂಗ್ರೆಸ್ ಅರ್ಥಮಾಡಿಕೊಂಡಿಲ್ಲ” ಎನ್ನುತ್ತಾರೆ ಸುರೇಶ್.
ಇದನ್ನೂ ಓದಿರಿ: Uttarakhand Election Results | ಉತ್ತರಾಖಂಡ ಮತ್ತೆ ಬಿಜೆಪಿಗೆ; ಕಾಂಗ್ರೆಸ್ ತುಸು ಚೇತರಿಕೆ
ಮುಂದುವರಿದು, “ಕೋಮುವಾದ ಈ ದೇಶದ ಯಾವುದೇ ಪಕ್ಷಕ್ಕೂ ಆತಂಕಕಾರಿ ವಿಷಯವಾಗಿಲ್ಲ. ಆದರೆ ಸಂವಿಧಾನದ ಆಶಯಗಳ ಬಗ್ಗೆ ನಂಬಿಕೆ ಇರುವವರಿಗೆ ಮಾತ್ರ ಈ ಆತಂಕ ಕಾಡುತ್ತಿದೆ. ದಲಿತ ಸಂಘಟನೆಗಳು ಕೋಮುವಾದದ ಬಗ್ಗೆ ದೊಡ್ಡ ಮಟ್ಟದಲ್ಲಿ ಬೀದಿಗಿಳಿಯುತ್ತಿಲ್ಲ. ನಾಮಕಾವಸ್ಥೆಗೆ ಒಂದೆರಡು ಸ್ಟೇಟ್‌ಮೆಂಟ್ ಕೊಡಬಹುದಷ್ಟೇ. ಶೇ. 22ರಷ್ಟಿದ್ದ ಬಿಎಸ್‌ಪಿ ಮತಗಳು ಶೇ. 12ಕ್ಕೆ ಇಳಿಯುತ್ತದೆ ಎಂದರೆ, ಆ ಮತಗಳು ಎಲ್ಲಿಗೆ ಹೋಗಿರಬಹುದು? ಎಸ್‌ಪಿಗಂತೂ ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಎಸ್‌ಪಿ ಹಾಗೂ ಬಿಎಸ್‌ಪಿಗೆ ಭೀಕರವಾದ ವೈರತ್ವವಿದೆ. ಎಸ್‌ಪಿ ಅಧಿಕಾರದಲ್ಲಿದ್ದಾಗ ಆದ ನೋವುಗಳನ್ನು ಮತ್ತೆ ಮತ್ತೆ ನೆನಪಿಸುವ ಕೆಲಸವನ್ನು ಬಿಜೆಪಿ ಈ ಚುನಾವಣೆಯಲ್ಲಿ ಮಾಡಿತು” ಎಂದು ವಿಶ್ಲೇಷಿಸಿದರು.
“ರೈತ ಚಳವಳಿ ನಡೆದಾಗ ರೈತರ ಜೊತೆಗೆ ಪ್ರತಿಪಕ್ಷಗಳು ನಿಲ್ಲಲಿಲ್ಲ. ಉದಾಹರಣೆಗೆ ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ಘಟನೆಗಳನ್ನೇ ನೋಡಿ. ಇಲ್ಲಿನ ನಿರ್ದೇಶಕರಾದ ಅಡ್ಡಡ್ಡ ಸಿ.ಕಾರ್ಯಪ್ಪನವರ ಕೋಮುವಾದಿ ಕಾರ್ಯಸೂಚಿಗೆ ಬೆಂಬಲವಾಗಿ ಬಿಜೆಪಿಯ ಸಣ್ಣಸಣ್ಣ ವಿಭಾಗಗಳೂ ನಿಲ್ಲುತ್ತವೆ. ಕೋಮುವಾದಿ ರಾಜಕಾರಣ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದರೆ ಕಾಂಗ್ರೆಸ್‌ನ ಒಬ್ಬ ನಾಯಕನೂ ಬರುವುದಿಲ್ಲ. ಈ ವಿಷಯದಲ್ಲಿ ನಾವೇಕೆ ಗುರುತಿಸಿಕೊಳ್ಳಬೇಕೆಂದು ದೂರ ಉಳಿಯುತ್ತಾರೆ” ಎಂದು ವಿಷಾದಿಸಿದರು.
“ಕರ್ನಾಟಕದಲ್ಲಿನ ಜೆಡಿಎಸ್‌ನಂತೆ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಕೆಲಸ ಮಾಡುತ್ತಿದೆ. ಜೆಡಿಎಸ್‌ಗೆ ಕಾಂಗ್ರೆಸ್ ವೈರಿಯಾದರೆ, ಬಿಎಸ್‌ಪಿಗೆ ನೇರವಾಗಿ ಸಿಟ್ಟಿರುವುದು ಸ್ಥಳೀಯ ರಾಜಕೀಯ ಪಕ್ಷವಾದ ಎಸ್‌ಪಿ ಮೇಲೆ. ಪ್ರಾದೇಶಿಕ ರಾಜಕೀಯ ಪಕ್ಷಗಳೆಲ್ಲವೂ ಹೀಗೆಯೇ ವರ್ತಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷವು ಯುವಕರನ್ನು ಪಕ್ಷ ಕಟ್ಟುವ ಕೆಲಸಕ್ಕೆ ನೇಮಿಸಿಕೊಳ್ಳುವ ಅಗತ್ಯವಿದೆ” ಎಂದರು.
ಜಾತಿ ಸಮೀಕರಣ, ಸಂಪನ್ಮೂಲಗಳ ಕ್ರೋಢೀಕರಣ ಚುನಾವಣೆಗೆ ಅಗತ್ಯ: ಸಿ.ಎಸ್.ದ್ವಾರಕನಾಥ್
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಾದ ಸಿ.ಎಸ್.ದ್ವಾರಕನಾಥ್ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಸೋಲಿನ ಪರಾಮರ್ಶೆ ಮಾಡಿದರು. “ಕಾಂಗ್ರೆಸ್ ಪಕ್ಷ ಅಸಂಘಟಿತ ಸಮುದಾಯಗಳ ಮೇಲೆ ಗಮನ ಹರಿಸಬೇಕಿದೆ. ಉತ್ತರ ಪ್ರದೇಶದಲ್ಲಿ ಅತಿ ಹಿಂದುಳಿದ ವರ್ಗಗಳನ್ನು ಬಿಜೆಪಿ ಬಹಳ ಗಂಭೀರವಾಗಿ ಪರಿಗಣಿಸಿತು. ಕಾಂಗ್ರೆಸ್ ಆ ಕಡೆ ಗಮನ ಹರಿಸಲಿಲ್ಲ. ಅತಿ ಹಿಂದುಳಿದ ವರ್ಗಗಳು ಶೇ. 12ರಷ್ಟಿದ್ದಾರೆ. ಈ ಸಮುದಾಯದ ಅರ್ಧದಷ್ಟು ಮತಗಳು ಬಂದರೆ ಸಾಕಲ್ಲವೇ? ಈ ಸತ್ಯವನ್ನು ಕಾಂಗ್ರೆಸ್ ತಿಳಿದುಕೊಳ್ಳಲಿಲ್ಲ” ಎಂದು ಹೇಳಿದರು.
“ಅತಿ ಹಿಂದುಳಿದ ವರ್ಗಗಳನ್ನು ಗಂಭೀರವಾಗಿ ಪರಿಗಣಿಸುವ ರಾಜಕಾರಣವನ್ನು ಕಾನ್ಶೀರಾಮ್ ಅವರು ಮಾಡಿದ್ದರು. ಅದನ್ನು ಬಿಜೆಪಿ ಮುಂದುವರಿಸಿತು. ಈ ವಿಷಯವನ್ನು ಕಾಂಗ್ರೆಸ್ ಗಮನಿಸಲಿಲ್ಲ. ಇವತ್ತಿನ ಸೋಲಿಗೆ ಈ ವರ್ಗವನ್ನು ಕಡೆಗಣಿಸಿದ್ದೂ ಒಂದು ಕಾರಣವಾದರೆ, ನಾವು ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಬಗ್ಗೆ ಮಾತನಾಡಿದರೂ, ಅಭಿವೃದ್ಧಿ ಮಾಡಿದರೂ ಅದನ್ನು ಜನ ಗಮನಿಸುವುದಿಲ್ಲ. ಕೋಮುವಾದವನ್ನು ಪ್ರಚೋದಿಸಿದರೆ ಸಾಕು, ನಿಮ್ಮ ಸಾವಿರಾರು ಕೋಟಿ ಅಭಿವೃದ್ಧಿ ನೀರುಪಾಲಾಗುತ್ತದೆ” ಎಂದು ದ್ವಾರಕನಾಥ್ ವಿಷಾದಿಸಿದರು.
ಇದನ್ನೂ ಓದಿರಿ: ಪಂಜಾಬ್‌ನಲ್ಲಿ ಅಭೂತಪೂರ್ವ ಜಯ ದಾಖಲಿಸಿದ ಆಪ್: ಕರ್ನಾಟಕದ ಮುಖಂಡರ ಪ್ರತಿಕ್ರಿಯೆ ಹೀಗಿದೆ…
ಪಂಜಾಬ್ ಫಲಿತಾಂಶದ ಕುರಿತು ಮಾತನಾಡಿದ ಅವರು, “ಪಂಜಾಬ್‌ನಲ್ಲಿ ಸ್ವಯಂಕೃತ ಅಪರಾಧ ಮಾಡಿದ್ದೇವೆ. ಚುನಾವಣೆ ಬಂದಿದೆ ಎನ್ನುವಾಗ ಮುಖ್ಯಮಂತ್ರಿಯನ್ನು ಬದಲಾಯಿಸಲಾಯಿತು. ದಲಿತ ಮುಖ್ಯಮಂತ್ರಿ ಪ್ರಯೋಗ ಯಶಸ್ಸು ತರಲಿಲ್ಲ. ನವಜೋತ್ ಸಿಂಗ್ ಸಿಧು ಹಾಗೂ ಅಮರಿಂದರ್ ಸಿಂಗ್ ನಡುವಿನ ಕಿತ್ತಾಟ ಹೆಚ್ಚಾಗಿ ಪಕ್ಷ ಒಡೆದು ಹೋಯಿತು. ಜೊತೆಗೆ ಎಎಪಿ ಮೊದಲಿನಿಂದಲೂ ಪಂಜಾಬ್ ಮೇಲೆ ಗಮನ ಹರಿಸಿತ್ತು. ಹೀಗಾಗಿ ಗೆಲುವು ಪಡೆಯಿತು” ಎಂದರು.
ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬರುವ ಚುನಾವಣೆಗೆ ಕಾಂಗ್ರೆಸ್ ಇಡಬೇಕಾಗಿರುವ ಹೆಜ್ಜೆಯ ಕುರಿತು ವಿವರಿಸಿದ ಅವರು, “ಬಿಜೆಪಿ ಒಂದು ಸಾವನ್ನಿಟ್ಟುಕೊಂಡು ರಾಜಕಾರಣ ಮಾಡಿಬಿಡುತ್ತದೆ. ಆದರೆ ಕಾಂಗ್ರೆಸ್ ಅಭಿವೃದ್ಧಿ ಬಗ್ಗೆ ಮಾತನಾಡುತ್ತದೆ. ಜನ ಅಭಿವೃದ್ಧಿ ಬಗ್ಗೆ ಯೋಚಿಸುವುದಿಲ್ಲ. ಬೆಲೆ ಏರಿಕೆ ಬಗ್ಗೆ ಮಾತನಾಡಿದರೂ ಅದರ ಬಗ್ಗೆ ಜನ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಪರಿಸ್ಥಿತಿಯಲ್ಲಿದ್ದೇವೆ ನಾವಿದ್ದೇವೆ. ಈ ಸಂದರ್ಭದಲ್ಲಿ ಅಸಂಘಟಿತ ಸಮುದಾಯಗಳ ಮೇಲೆ ನಾವು ಗಮನ ಹರಿಸಬೇಕಿದೆ. ನನ್ನ ಪ್ರಕಾರ ಚುನಾವಣೆ ಎಂದರೆ ಜಾತಿಗಳ ಸಮೀಕರಣ ಮತ್ತು ಸಂಪನ್ಮೂಲಗಳ ಕ್ರೋಢೀಕರಣ. ಈ ಎರಡೂ ಸರಿಯಾಗಿ ಆಗಬೇಕಿದೆ. ಕಾಂಗ್ರೆಸ್‌ನವರೂ ಕೋಮುವಾದಿ ಹೇಳಿಕೆಗಳನ್ನು ನೀಡಬೇಕೆಂದು ಹೇಳುತ್ತಿಲ್ಲ. ಆದರೆ ಸಮುದಾಯಗಳಿಗೆ ಸರಿಯಾದ ಶಿಕ್ಷಣವನ್ನು ನೀಡಬೇಕು. ಬಿಜೆಪಿಯವರು ಮಾಡುತ್ತಿರುವುದೇನು? ಹೇಗೆ ಸುಳ್ಳುಗಳನ್ನು ಹೇಳುತ್ತಿದೆ? ಹಿಂದುಳಿದ ವರ್ಗಗಳನ್ನು ಹೇಗೆ ಪ್ರಚೋದನೆ ಮಾಡುತ್ತಿದೆ ಎಂಬುದನ್ನು ನಾವು ಸರಿಯಾಗಿ ಮನವರಿಕೆ ಮಾಡಿಕೊಡಬೇಕಿದೆ. ನಮಗಿರುವುದು ಇದೊಂದು ಮಾರ್ಗ” ಎಂದು ಅಭಿಪ್ರಾಯಪಟ್ಟರು.
ಪರ್ಯಾಯ ಮಾಧ್ಯಮಗಳನ್ನು ಬೆಳೆಸಬೇಕಿದೆ: ಸೂರ್ಯ ಮುಕುಂದರಾಜ್
ಕಾಂಗ್ರೆಸ್ ಮುಖಂಡರಾದ ಸೂರ್ಯ ಮುಕುಂದರಾಜ್ ಮಾತನಾಡಿ, “ಪಂಜಾಬ್‌ನಲ್ಲಿ ಮಾತ್ರ ನಮ್ಮ ಅಧಿಕಾರವಿತ್ತು. ಗೋವಾ ಹಾಗೂ ಉತ್ತರಖಾಂಡ್‌ನಲ್ಲಿ ನಮ್ಮ ಶಾಸಕರನ್ನೇ ಸೆಳೆದುಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಲಖಿಂಪುರ್‌ಖೇರಿ ಹತ್ಯಾಕಾಂಡ, ಕೋವಿಡ್ ನಿರ್ವಹಣೆ ವೈಫಲ್ಯ ಹಾಗೂ ರೈತ ಚಳವಳಿಯನ್ನು ಜನ ಪರಿಗಣನೆಗೆ ತೆಗೆದುಕೊಳ್ಳುತ್ತಾರೆಂದು ಭಾವಿಸಿದ್ದೆವು. ಬೆಲೆ ಏರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದನ್ನು ಜನರು ತೋರಿಸಿಕೊಟ್ಟಿದ್ದಾರೆ. ನಮ್ಮ ತಪ್ಪುಗಳಿಂದಾಗಿ ಪಂಜಾಬ್ ಕಳೆದುಕೊಂಡಿದ್ದೇವೆ. ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸೈದ್ಧಾಂತಿಕವಾಗಿ ಪಕ್ಷವನ್ನು ಗಟ್ಟಿ ಮಾಡಬೇಕಿದೆ. ಯುವ ತಲೆಮಾರಿಗೆ ಟಿಕೆಟ್ ಕೊಡಬೇಕಿದೆ. ಇಲ್ಲವಾದರೆ ಕಾಂಗ್ರೆಸ್ ಸಿದ್ಧಾಂತ ಹೊಸ ತಲೆಮಾರುಗಳಿಗೆ ದಾಟುವುದೇ ಇಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.
“ಅನೇಕ ವಿಷಯಗಳಲ್ಲಿ ಚದುರಿ ಹೋಗುವ ಬದಲು ಒಂದು ವಿಚಾರದ ಮೇಲೆ ಕಾಂಗ್ರೆಸ್ ಗಮನ ಹರಿಸಬೇಕು. ಮಾಧ್ಯಮಗಳು ನಮ್ಮ ಪರವಾಗಿಲ್ಲ ಎಂದು ದೂಷಿಸುವ ಬದಲು ಜಾತ್ಯತೀತ ಆಲೋಚನೆ ಇರುವ ಮಾಧ್ಯಮಗಳನ್ನು ಬೆಳೆಸಬೇಕು. ಬಿಜೆಪಿ ಆಸ್ತಿ ಐದು ಸಾವಿರ ಕೋಟಿ ರೂ. ಇದೆ. ಕಾಂಗ್ರೆಸ್ ಆಸ್ತಿ 600 ಕೋಟಿ ರೂ. ಮಾತ್ರ ಇದೆ. ಬಿಜೆಪಿ ತನ್ನ ಪೂರ್ಣಾವಧಿ ಕಾರ್ಯಕರ್ತರಿಗೆ ಸಂಬಳ ಕೊಡುತ್ತಿದೆ. ಉಳಿದುಕೊಳ್ಳಲು ವಸತಿ ವ್ಯವಸ್ಥೆ ಮಾಡುತ್ತದೆ. ದಿನದ ಇಪತ್ತುನಾಲ್ಕು ಗಂಟೆಯೂ ರಾಜಕಾರಣದ ಬಗ್ಗೆಯೇ ಯೋಜನೆ ಮಾಡುತ್ತದೆ. ಬಿಜೆಪಿ ಒಂದು ಕಾರ್ಪೊರೇಟಸ್ ಸಂಸ್ಥೆಯಾಗಿ ಬೆಳೆದಿದೆ. ಬಿಜೆಪಿ ಜೊತೆಗೆ ಅದರ ಮೂವತ್ತು ಅಂಗ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದನ್ನು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ಕಾಂಗ್ರೆಸ್ ಬಿಟ್ಟು ಬೇರೆ ಅಂಗಸಂಸ್ಥೆಗಳಿಲ್ಲ. ಪ್ರಗತಿಪರ ಸಂಘಟನೆಗಳಿಗೆ ಕಾಂಗ್ರೆಸ್ ಶಕ್ತಿ ತುಂಬಬೇಕು. ಆಗ ಮಾತ್ರ ಪಕ್ಷ ಮರುಹುಟ್ಟು ಪಡೆಯಬಹುದು” ಎಂದು ವಿವರಿಸಿದರು.
ಇದನ್ನೂ ಓದಿರಿ: Goa Election Results | ಗೋವಾ ಅತಂತ್ರ; ಆದರೆ ಬಿಜೆಪಿಗೆ ಸುಲಭದ ತುತ್ತು!



ನೀವು ಬರೀ ಕೊಮುವಾದಾನ್ನುತ್ತೀರಲ್ಲ ಎಲ್ಲಿದೆ ಕೋಮುವಾದ ಅದರ ಅರ್ಥವೇ ನಿಮಗೆ ಗೊತ್ತಿಲ್ಲ ಕಾಶ್ಮಿರದಲ್ಲಿ ಸಂಪೂರ್ಣ ಪಂಡಿತರನ್ನು ಸರ್ವನಾಶ ಮಾಡಿದವರು ಯಾರು. ದೇಶದಲ್ಲಿ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ಮಾಡತ್ತಿರವರು ಈ ಬಗ್ಗೆ ನೀವು ಮೊದಲು ಯೋಚಿಸಿರಿ