ಮಾರ್ಚ್ 8ನೇ ತಾರೀಖು ಲಂಕೇಶರು ಹುಟ್ಟಿದ ದಿನ. ಅವರಿದ್ದಷ್ಟು ಕಾಲ ಆ ದಿನವನ್ನು ಲಂಕೇಶರ ಆಫೀಸು ಮತ್ತು ತೋಟದ ಮನೆಯಲ್ಲಿ ತುಂಬ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಯ್ತು. ಅವರ ನಿರ್ಗಮನದ ನಂತರ ಅವರ ಅಭಿಮಾನಿಗಳಲ್ಲಿ ಅನೇಕರು ಅಲ್ಲಿಇಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಶಿವಮೊಗ್ಗದಲ್ಲೂ ನಡೆದಿದೆ. ಕಳೆದ ವರ್ಷ ನಾಟಕ ನಿರ್ದೇಶಕ ಸಾಸ್ವೆಹಳ್ಳಿ ಸತೀಶ್ ಸಾಹಿತ್ಯಾಸಕ್ತ ಕಾಲೇಜು ವಿದ್ಯಾರ್ಥಿ(ನಿ)ಗಳನ್ನು ಗುರುತಿಸಿ ಅವರನ್ನ ಕರೆದು ಕಥಾ ಕಮ್ಮಟ ಏರ್ಪಡಿಸಿದ್ದರು ಮತ್ತು ಅವರಿಗೆಲ್ಲಾ ಕಥೆ ಬರೆಯಲು ಪ್ರೇರೇಪಿಸಿದ್ದರು. ಇದರಿಂದ ಹೊಸ ತಲೆಮಾರು ಏನನ್ನ ಬರೆಯಲು ಯೋಚಿಸುತ್ತಿದೆ ಎಂಬುದು ಅರಿವಾಯ್ತು. ಸಂಜೆ ದಿಢೀರನೆ ಪ್ರತ್ಯಕ್ಷವಾದ ನಟರಾಜ್ ಹುಳಿಯಾರ್ ಲಂಕೇಶರನ್ನ ಕುರಿತು ಮಾತನಾಡಿ ಹೊಸ ತಲೆಮಾರಿಗೆ ಲಂಕೇಶ್ ಎಂತಹ ಲೇಖಕ ಎಂಬುದರ ಬಗ್ಗೆ ಒಂದು ಅಪರೂಪದ ವ್ಯಕ್ತಿಚಿತ್ರ ಹಿಡಿದುಕೊಟ್ಟರು. ಸೇರಿದ್ದ 70 ಜನ ವಿದ್ಯಾರ್ಥಿಗಳಿಗೆ ಲಂಕೇಶರ ಒಂದೊಂದು ಕೃತಿಯನ್ನ ಕೊಟ್ಟೆವು. ಅವನ್ನು ಲಂಕೇಶರ ಪತ್ನಿ ಇಂದಿರಮ್ಮ ಒದಗಿಸಿದ್ದರು.

ಈ ವರ್ಷ ಲಂಕೇಶರ ಗದ್ಯ ಸಾಹಿತ್ಯದ ಅಧ್ಯಯನ ಎಂಬ ವಿಷಯವನ್ನಿಟ್ಟುಕೊಂಡು ನಟರಾಜ್ ಹುಳಿಯಾರ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಮಾಡಲು ಹೊರಟೆವು. ಆದರೆ ವಿದ್ಯಾರ್ಥಿಗಳಿಗೆ ಆ ಸಮಯದಲ್ಲಿ ಪರೀಕ್ಷೆ ನಡೆಯುವ ಕಾರಣಕ್ಕೆ ಕೈಬಿಟ್ಟೆವು. ಆದರೆ ಲಂಕೇಶರ ಹುಟ್ಟೂರಾದ ಕೊನಗವಳ್ಳಿಯಲ್ಲಿ ಅವರ ಕುರಿತು ಸಭೆಯಿದೆ ಎಂಬ ಸುದ್ದಿ ಬಂತು. ಕತ್ತಿಗೆ ಚನ್ನಪ್ಪ ಮತ್ತು ಶಂಕರಪ್ಪ ಏರ್ಪಡಿಸಿದ್ದಾರೆ, ಅವರ ಮಗ ಬರುತ್ತಾರೆ ಎಂದು ತಿಳಿದುಬಂತು. ಇನ್ನು ಅಲ್ಲಿ ನಮಗೇನು ಕೆಲಸ ಎಂದು ಸುಮ್ಮನಾದೆ. ಆದರೆ ಲಂಕೇಶರ ಮಗ ಹೈದರಾಬಾದಲ್ಲಿ ಶೂಟಿಂಗ್ ನಡೆಸುತ್ತಿರುವುದರಿಂದ ಬರುವುದಿಲ್ಲವಂತೆ ಎಂಬ ವರ್ತಮಾನ ಬಂತು. ಕೂಡಲೇ ನಾನು ಸಾಸ್ವೆಹಳ್ಳಿ ಸತೀಶ್ ಕೊನಗವಳ್ಳಿಗೆ ಹೊರಟೆವು.
ಕೊನಗವಳ್ಳಿಯಲ್ಲಿ ಕರಿಯವ್ವನ ಗುಡಿ ನೋಡಿ ಲಂಕೇಶರ ಮನೆ ಹಿಂದಿನ ಉಡೇವು ನೋಡಿ ಕಾರ್ಯಕ್ರಮ ನಡೆಯಲಿರುವ ಲಂಕೇಶ್ ಸಮುದಾಯಕ್ಕೆ ಬಂದೆವು. ಸಭೆ ಆರಂಭವಾಯ್ತು. ನಿರೂಪಕ ಪ್ರಸ್ತಾವನೆಯನ್ನ ದೀರ್ಘವಾಗಿ ಮಾಡಿ ನಮಗೆಲ್ಲಾ ಐದು ನಿಮಿಷ ಸಾಕು ಎಂದರು. ಲಂಕೇಶರ ಸಂಬಂಧಿ ಶಂಕರಪ್ಪ ಸುದೀರ್ಘವಾಗಿ ಮಾತನಾಡಿದರು. ಇವರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಜನಗಳೇ ಇಲ್ಲದ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡುವುದು, ಪುಸ್ತಕದ ಮಳಿಗೆಗಳಿಲ್ಲದ ಸಾಹಿತ್ಯ ಸಮಾರಂಭ ಮಾಡುವುದರಲ್ಲಿ ಎತ್ತಿದ ಕೈ. ವೇದಿಕೆ ಮೇಲೆ ಎಷ್ಟು ಜನ ಇರುತ್ತಾರೊ ಅಷ್ಟೇ ಜನ ಸಭಾಂಗಣದಲ್ಲಿದ್ದರೆ ಇವರಿಗೇನೂ ಸಮಾಧಾನ. ಕೇಳಿದರೆ “ಜನ ಬರಲಿಲ್ಲ ಅಂದ್ರೆ ನಾನೇಮಾಡಕ್ಯಾತಿ” ಎನ್ನುತ್ತಿದ್ದರು. ಒಳ್ಳೆಯ ವ್ಯಕ್ತಿಯಾದ್ದರಿಂದ ಸಹಿಸಿಕೊಂಡೆವು. ಆದರೆ ಕಳೆದ ಚುನಾವಣೆಯಲ್ಲಿ ಇವರನ್ನ ಕರೆದುಕೊಂಡು ಹೋದ ಆರ್‌ಎಸ್‌ಎಸ್ಸಿಗರು ತಮ್ಮ ನಡುವೆ ಕೂರಿಸಿಕೊಂಡು ನೀವು ಗೆದ್ದಾಯ್ತು ಎಂದು ಉಬ್ಬಿಸಿದರು. ಲೋಕಸಭಾ ಸದಸ್ಯ ರಾಘವೇಂದ್ರ ಶಂಕರಪ್ಪನಿಗೆ ಮತಹಾಕುವಂತೆ ಸ್ವತಃ ಆಜ್ಞಾಪಿಸಿದರು. ಲಿಂಗಾಯಿತ ಉಪ ಜಾತಿಗಳೆಲ್ಲಾ ಒಟ್ಟಾಗಿ ಶಂಕರಪ್ಪನ ಬೆಂಬಲಕ್ಕೆ ನಿಂತರು. ಇದರಿಂದ ಎಚ್ಚೆತ್ತುಕೊಂಡ ಸಾಹಿತ್ಯ ಪರಿಷತ್ ಮತದಾರರು ಒಟ್ಟಾಗಿ ಡಿ. ಮಂಜುನಾಥರನ್ನ ಬೆಂಬಲಿಸಿ ಗೆಲ್ಲಿಸಿದರು. ಆದರೆ ಶಂಕರಪ್ಪನಿಗೆ ಜ್ಞಾನೋದಯವಾದಂತೆ ಕಾಣಲಿಲ್ಲ.
ಲಂಕೇಶರ ಸಭೆಗೆ ಬಂದು ಮಾತನಾಡುತ್ತ “ಲಂಕೇಶ್ ನನ್ನತ್ರ ಏನೇಳಿದ್ರು ಅಂದ್ರೆ ಈ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಕಣಯ್ಯ ಅಂದಿದ್ರು” ಎಂದರು. ಮೊನ್ನೆಯವರೆಗೂ ಚೆನ್ನಾಗಿದ್ದ ಶಂಕರಪ್ಪ ಒಂದು ಸಭೆಯಲ್ಲಿ ಹೇಳಿದ ಸುಳ್ಳಿಗೆ ಬೆಚ್ಚುವಂತಾಯ್ತು. ಮುಂದುವರಿದ ಶಂಕರಪ್ಪ, “ನಾನು ಸಾಹಿತ್ಯ ಸಮ್ಮೇಳನ ಮಾಡ್ತಿನಿ ದುಡ್ಡು ಕೊಡಿ ಅಂತ ಇಪ್ಪತ್ತೈದು ಲಕ್ಷ ಕೇಳಿದ್ರೆ ಐವತ್ತು ಲಕ್ಷ ಕೊಟ್ರು” ಎಂದರು. ಹೀಗೆ ಶಂಕರಪ್ಪ ಲಂಕೇಶರನ್ನ ಸುಳ್ಳುಸುಳ್ಳೇ ಯಡಿಯೂರಪ್ಪನ ಅಭಿಮಾನಿ ಮಾಡಿಬಿಟ್ಟರು. ಇದಕ್ಕಿಂತ ಮೊದಲು “ಲಂಕೇಶರಿಗೆ ನಮ್ಮ ಜನ ಕಂಡ್ರೆ ಭಾಳ ಪ್ರೀತಿ, ನನ್ನ ತಮ್ಮನಿಗೆ ಎಮ್ಮೆಲ್ಲೆ ಟಿಕೆಟ್ ಕೊಡಿಸಿದ್ರು” ಎಂದಿದ್ದರು. “ನನ್ನ ತಮ್ಮನಿಗೆ ಟಿಕೆಟ್ ಕೊಡಿಸಲು ಸಹಾಯ ಮಾಡಲಿಲ್ಲ, ಮೆಚ್ಚಿ ಬರೆಯಲಿಲ್ಲ. ನಮ್ಮ ಏಳಿಗೆನ ಸಹಿಸಲ್ಲ ನೀವು” ಎಂದು ಟೀಕಿಸಿ ಬರೆದ ಪತ್ರ ಲಂಕೇಶರ ಟೇಬಲ್ ಮೇಲಿದ್ದುದನ್ನ ನಾನು ನೋಡಿದ್ದೆ.
ಅದೇನಾದರೂ ಆಗಲಿ, ನಿನ್ನೆ ಮೊನ್ನೆಯವರೆಗೂ ಚೆನ್ನಾಗಿದ್ದ ಶಂಕರಪ್ಪನವರು ಬಿಜೆಪಿ ಸೇರಿದ ಕೂಡಲೇ ಸುಳ್ಳುಬುರುಕನಾಗಿ ಬದಲಾದದ್ದು ನಮಗಂತೂ ಆಶ್ಚರ್ಯ ಹುಟ್ಟಸಲಿಲ್ಲ. ಆದರೆ ಈತ ’ಯಡಿಯೂರಪ್ಪ ಒಮ್ಮೆ ಮುಖ್ಯಮಂತ್ರಿಯಾಗಬೇಕು ಅಂತ ಲಂಕೇಶ್ ಹೇಳಿದ್ದರು’ ಎಂಬ ಮಾತನ್ನ ಖಂಡಿಸಬೇಕಿದೆ. ಲಂಕೇಶ್ ಎಂದೂ ಯಡಿಯೂರಪ್ಪನ ಪರ ಮಾತನಾಡಿದ್ದಾಗಲಿ, ಒಂದು ಸಾಲನ್ನು ಬರೆದಿದ್ದಾಗಲಿ ಇಲ್ಲ. ಶಂಕರಪ್ಪ ಕನ್ನಡದ ಪ್ರಜ್ಞಾವಂತರ ಮನಸ್ಸಿನ ಒಂದು ಎಚ್ಚರವಾಗಿರುವ ಲಂಕೇಶರ ಬಗ್ಗೆ ಸುಳ್ಳುಗಳನ್ನ ನಿಲ್ಲಿಸುವುದು
ಅವರಿಗೇ ಒಳ್ಳೆಯದು.

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.
ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..
ಇದನ್ನೂ ಓದಿ: ಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್ ಬರಹ


