Homeಕರ್ನಾಟಕಕರ್ನಾಟಕ ರಾಜಕೀಯ ಕ್ಷೇತ್ರಗಳ ಸಮೀಕ್ಷೆ; ಕುಮಟಾ-ಹೊನ್ನಾವರ: ’ಸಂಘ’ಕ್ಕೆ ಶಾಸಕ ಶೆಟ್ಟಿ ಸಹವಾಸ ಸಾಕಾಯಿತೇ?

ಕರ್ನಾಟಕ ರಾಜಕೀಯ ಕ್ಷೇತ್ರಗಳ ಸಮೀಕ್ಷೆ; ಕುಮಟಾ-ಹೊನ್ನಾವರ: ’ಸಂಘ’ಕ್ಕೆ ಶಾಸಕ ಶೆಟ್ಟಿ ಸಹವಾಸ ಸಾಕಾಯಿತೇ?

- Advertisement -
- Advertisement -

ಕಡಲ ತಡಿಯ ಕುಮಟಾ-ಹೊನ್ನಾವರದಲ್ಲಿ ಸದಾ ಅಡಿಕೆ ತಾಂಬೂಲದ ರಂಗು ಮತ್ತು ಹುರಿದ ಮೀನಿನ ಘಮಲು. ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎರಡೂ ತಾಲೂಕುಗಳಲ್ಲಿ ಒಂದೇ ಗುಣಧರ್ಮ. ಕನ್ನಡ ಮತ್ತು ಕೊಂಕಣಿ ಭಾಷಾಸಂಸ್ಕೃತಿಯ ಈ ಕ್ಷೇತ್ರದ ಆರ್ಥಿಕತೆಯ ಜೀವಾಳ ಅಡಿಕೆ ಮತ್ತು ಮೀನುಗಾರಿಕೆ ವಹಿವಾಟು. ಪಟ್ಟಣ-ನಗರಗಳ ವಾಣಿಜ್ಯ ವಹಿವಾಟು ವ್ಯಾಪಾರ ಕಸುಬಿನ ಕೊಂಕಣಿಗರ (ಜಿಎಸ್‌ಬಿ) ಏಕಸ್ವಾಮ್ಯಕ್ಕೊಳಪಟ್ಟಿದೆ. ರಾಜಕೀಯ ಪ್ರಜ್ಞೆ ಮತ್ತು ಶೈಕ್ಷಣಿಕ ಜ್ಞಾನದ ಜಾಣರ ತಾಣ ಎಂಬ ಅನಿಸಿಕೆಯ ಕುಮಟಾ-ಹೊನ್ನಾವರದಲ್ಲಿ ಅಸ್ಪೃಶ್ಯತೆ, ಒಡೆಯ-ಒಕ್ಕಲು ಬ್ರಾಹ್ಮಣಿಕೆ, ವ್ಯಾಪಾರಶಾಹಿ-ಪುರೋಹಿತಶಾಹಿಗಳ ಶೋಷಣೆ ಹಾಗೂ ಬಡತನ ಇಂದಿಗೂ ಮುಂದುವರಿದಿರುವುದು ವಿಪರ್‍ಯಾಸ. ಜಾತಿ, ಧರ್ಮದ ಲೆಕ್ಕಾಚಾರದ ವೃತ್ತಿ
ರಾಜಕಾರಣಿಗಳೇ ಮುಖಂಡರೆನಿಸಿಕೊಳ್ಳುತ್ತಿದ್ದಾರೆಯೆ ಹೊರತು ಅಭಿವೃದ್ಧಿ ರಾಜಕಾರಣದ ದೂರದೃಷ್ಟಿಯ ಸಮರ್ಥ ನಾಯಕತ್ವ ಈ ಕ್ಷೇತ್ರಕ್ಕಿನ್ನೂ ಸಿಕ್ಕಿಲ್ಲ!

ಪ್ರಕೃತಿ ಮತ್ತು ಸಮಾಜ

ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟದ ನಡುವೆ ಹಚ್ಚ ಹಸಿರಿನ ಕಾಡು-ಕಣಿವೆ, ತೋಟ ಪಟ್ಟಿ, ಹೊಲ-ಗದ್ದೆ, ಬೋಟು-ಬಲೆ-ಬಂದರುಗಳ ಹೊನ್ನಾವರ-ಕುಮಟಾದಲ್ಲಿ ಜೀವ ನದಿಗಳಾದ ಅಘನಾಶಿನಿ ಮತ್ತು ಶರಾವತಿ ಮೈದುಂಬಿ ಹರಿಯುತ್ತವೆ. ಕೊಂಕಣ ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿ-66 ನಡುವೆ ಹಾದುಹೋಗಿದೆ. ಕಾಡಿನ ಅಂಚಿನಲ್ಲಿ ಸಾವಿರಾರು ಕುಟುಂಬಗಳು ಮನೆ ಕಟ್ಟಿಕೊಂಡು, ಉಳುಮೆ ಮಾಡಿಕೊಂಡು ಬದುಕುತ್ತಿವೆ. ವಿಶಿಷ್ಟ ಸಂಸ್ಕೃತಿ-ಸಂಪ್ರದಾಯ, ಉಡುಗೆ-ತೊಡುಗೆಯ ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಮಂದಿ ಈ ಕ್ಷೇತ್ರದ ಪ್ರಥಮ ಬಹುಸಂಖ್ಯಾತರು. ಕುಂಬ್ರಿ ಮರಾಠಿ ಎಂಬ ಮತ್ತೊಂದು ಬುಡಕಟ್ಟು ಜನಾಂಗವೂ ಇಲ್ಲಿದೆ. ಹಾಲಕ್ಕಿ ಮತ್ತು ಮರಾಠಿಗಳಂತೆ ದಲಿತ ಸಮುದಾಯದ ಮುಕ್ರಿ ಮತ್ತು ಹಳ್ಳೇರ ಜಾತಿಯವರೂ ಸಾಮಾಜಿಕ ತಾರತಮ್ಯ ಮತ್ತು ರಾಜಕೀಯ, ಶೈಕ್ಷಣಿಕ ಅವಕಾಶ ವಂಚನೆಯಿಂದ ತೀರಾ ಹಿಂದುಳಿದಿದ್ದಾರೆ. ಅಪರೂಪಕ್ಕೆ ಒಬ್ಬರೋ ಇಬ್ಬರೋ ವಿದ್ಯಾಭ್ಯಾಸ ಮಾಡುತ್ತಿದ್ದಾರಾದರೂ ಬಹುತೇಕರಿಗೆ ಹೊಟ್ಟೆಪಾಡಿಗೆ ’ಒಡೆಯ’ನ ಮನೆ-ತೋಟ-ಗದ್ದೆ ಗೇಯ್ಮೆಯೆ ಗತಿಯಾಗಿದೆ. ಬುಡಕಟ್ಟು ಮಂದಿಯ ಮತ್ತು ದಲಿತರ ಕಷ್ಟ-ನಷ್ಟದ ಬಗ್ಗೆ ಇಲ್ಲಿಂದ ಶಾಸಕನಾದವರು ಯಾರೂ ತಲೆ ಕೆಡಿಸಿಕೊಂಡ ಕುರುಹು ಕಾಣಿಸುತ್ತಿಲ್ಲ!

ರಾಮಕೃಷ್ಣ ಹೆಗಡೆ

ಸಾಂಪ್ರದಾಯಿಕ-ಯಾಂತ್ರಿಕ ಮೀನುಗಾರಿಕೆ, ಅಡಿಕೆ ತೋಟಗಾರಿಕೆ, ರೈತಾಪಿ ಕೃಷಿ ಕೂಲಿಯೆ ಜೀವನಾಧಾರವಾದ ಕುಮಟಾ-ಹೊನ್ನಾವರದಲ್ಲಿ ಯುವಕರು ಕೆಲಸವಿಲ್ಲದೆ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಹವ್ಯಕ ಬ್ರಾಹ್ಮಣರ ಕೇರಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂದು ಆ ಸಮುದಾಯದ ಪೀಠಾಧಿಪತಿಗಳೆ ಪ್ರವಚನದಲ್ಲಿ ಬೇಸರಿಸುತ್ತಿದ್ದಾರೆ. ಹವ್ಯಕರಲ್ಲಿ ಹೆಣ್ಣು-ಗಂಡಿನ ಅನುಪಾತವೂ ಏರುಪೇರಾಗಿದ್ದು, ಯುವಕರಿಗೆ ಮದುವೆಯಾಗಲು ಸ್ವಜಾತಿ ಹುಡುಗಿಯರು ಸಿಗುತ್ತಿಲ್ಲ; ಶೂದ್ರ ಸಂಕುಲದ ಕನ್ಯೆ ತಂದು ’ಶುದ್ಧೀಕರಣ’ ಮಾಡಿ ಸಂಸಾರ ಮಾಡುವ ’ಬದಲಾವಣೆ’ ಬ್ರಾಹ್ಮಣರಲ್ಲಿ ಕಂಡುಬರುತ್ತಿದೆಯಾದರೂ ಮಡಿ-ಮೈಲಿಗೆಯ ಮೇಲರಿಮೆ ಕಡಿಮೆಯಾದಂತಿಲ್ಲ. ಯುವಕರು ಸ್ಥಳೀಯವಾಗಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂಥ ಪ್ರವಾಸೋದ್ಯಮ, ಕೈಗಾರಿಕೆ, ನೀರಾವರಿಯಂಥ ಯೋಜನೆ ತರುವ ಬಗ್ಗೆ ಇಲ್ಲಿಯ ಜನಪ್ರತಿನಿಧಿಗಳು ಕನಸು-ಮನಸಿನಲ್ಲೂ ಯೋಚಿಸುತ್ತಿಲ್ಲವೆಂಬ ಆಕ್ಷೇಪ ಕೇಳಿಬರುತ್ತಿದೆ.

ಮನಮೋಹಕ ಕಡಲತೀರಗಳು, ಚಂದದ ಕರ್ವೆಗಳು (ನಡುಗಡ್ಡೆ), ಸಮುದ್ರದ ನಡುವಿನ ದ್ವೀಪ-ಬಸವರಾಜ ದುರ್ಗ, ಕಡಿದಾದ ಕಪ್ಪುಕಲ್ಲಿನ ಶಿಖರಗಳ ರುದ್ರ ರಮಣೀಯ ಯಾಣ, ಆಸ್ತಿಕರ ದಕ್ಷಿಣದ ಕಾಶಿ ಗೋಕರ್ಣಗಳಿಂದ ಪ್ರಸಿದ್ಧವಾಗಿರುವ ಕುಮಟಾ-ಹೊನ್ನಾವರ ಮತಾಂಧ ಆರ್ಭಟ ಹೊರತುಪಡಿಸಿದರೆ ಶಾಂತ ಪ್ರದೇಶ. ಗೋಕರ್ಣ ಸೀಮೆ ಉಪ್ಪಿನ ಆಗರ ಮತ್ತು ತರತರದ ತರಕಾರಿಗಳಿಗೆ ಹೆಸರುವಾಸಿಯಾದರೆ, ಕುಮಟಾದಲ್ಲಿ ಬೆಳೆಯುವ ಸಿಹಿ ಈರುಳ್ಳಿ ತಳಿ ವಿಶಿಷ್ಟವಾದುದು. ಇದೆಲ್ಲ ಬಳಸಿಕೊಂಡು ಪರಿಸರ ಸ್ನೇಹಿಯಾದ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ವಿಪುಲ ಅವಕಾಶ ಕುಮಟಾ-ಹೊನ್ನಾವರದಲ್ಲಿದೆ. ಆದರೆ ಇಲ್ಲಿನ ಜನಪ್ರತಿನಿಧಿಗಳಿಗೆ ಇವೆಲ್ಲಾ ಬೇಕಿಲ್ಲದಾಗಿದೆ ಎಂಬ ಮಾತು ಸರ್ವೇಸಾಮಾನ್ಯವಾಗಿದೆ.

ರಾಜಕಾರಣದ ಕಾಲಚಕ್ರ

ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರವೆಂದರೆ ದೀವರ (ಈಡಿಗರು) ಮತ್ತು ಹೈಗರ (ಹವ್ಯಕ ಬ್ರಾಹ್ಮಣರು) ಪ್ರತಿಷ್ಠೆಯ ಕದನ ಕಣವೆಂಬ ಹೆಸರಾಗಿದ್ದ ಕಾಲ ಒಂದಿತ್ತು. ಬಂಗಾರಪ್ಪ ಮತ್ತು ರಾಮಕೃಷ್ಣ ಹೆಗಡೆ ನಾಮಬಲ ಸ್ಥಳೀಯ ರಾಜಕಾರಣವನ್ನು ಪ್ರಭಾವಿಸುತ್ತಿದ್ದ ಕಾಲವದು. ತಮ್ಮ ಜಾತಿಯವರಲ್ಲದವರನ್ನು ನಿಲ್ಲಿಸಿ ಗೆಲ್ಲಿಸುವ ತಾಕತ್ತು ಬಂಗಾರಪ್ಪ ಮತ್ತು ಹೆಗಡೆಗಿತ್ತು. ಈಗ ಧರ್ಮಕಾರಣದ ಸುಳಿಗೆ ಸಿಲುಕಿರುವ ಕ್ಷೇತ್ರದಲ್ಲಿ ಮೊದಲಿನ ಸ್ವಾಭಿಮಾನದ ಪ್ರಜ್ಞೆ ಇಲ್ಲವಾಗಿದೆಯೆಂದು ಹಳೆ ತಲೆಮಾರಿನ ಹಿರಿಯರು ಬೇಸರಿಸುತ್ತಾರೆ. ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಬಾಹುಳ್ಯದ ಕುಮಟಾ ಕ್ಷೇತ್ರ ಸಣ್ಣ ಜಾತಿಯ ಬಲಾಢ್ಯರ ಆಡಂಬೋಲದಂತಾಗಿದೆ. ಹಾಲಕ್ಕಿಗಳನ್ನು ಓಟ್ ಬ್ಯಾಂಕ್‌ನಂತೆ ಬಳಸಿಕೊಳ್ಳುತ್ತಿರುವ ಎಲ್ಲ ಪಕ್ಷದವರು ಆ ಬುಡಕಟ್ಟು ವರ್ಗದವರಿಗೆ ಮಾತ್ರ ಎಮ್ಮೆಲ್ಲೆ ಟಿಕೆಟ್ ಕೊಡುತ್ತಿಲ್ಲ.

ಸುಮಾರು 1.80 ಲಕ್ಷ ಮತದಾರರಿರುವ ಕುಮಟಾ ಕ್ಷೇತ್ರದಲ್ಲಿ ಹಾಲಕ್ಕಿಗಳು 40 ಸಾವಿರದಷ್ಟಿದ್ದರೆ, ಅಲ್ಪ ಸಂಖ್ಯಾತರು (ಮುಸ್ಲಿಮ್+ಕ್ರಿಶ್ಚಿಯನ್) 30 ಸಾವಿರ ಇದ್ದಾರೆ. ವಿವಿಧ ಮೀನುಗಾರ ಸಮುದಾಯಗಳು 30,000, ದೀವರು 30,000, ಗ್ರಾಮ ಒಕ್ಕಲಿಗರು 20,000 ಮತ್ತು ಹವ್ಯಕರು 18 ಸಾವಿರವಿದ್ದಾರೆ. ದಲಿತ, ನಾಡವ, ಗಾವಡಿ, ಮಡಿವಾಳ, ಭಂಡಾರಿಗಳಂಥ ಸಣ್ಣ ಸಂಖ್ಯೆಯ ಜಾತಿಯವರಿದ್ದಾರೆ. ಸಾರಸ್ವತ ಬ್ರಾಹ್ಮಣ, ಹವ್ಯಕ ಬ್ರಾಹ್ಮಣ, ದೀವರಂಥ ಪ್ರಬಲ ಜಾತಿಯ ವಶವಾಗುತ್ತ ಬಂದಿದ್ದ ಕುಮಟಾ ಶಾಸಕ ಸ್ಥಾನ ಕಳೆದೆರಡು ದಶಕದಿಂದ ತೀರಾ ಸಣ್ಣ ಸಂಖ್ಯೆಯ ಗಾಣಿಗ ಸಮುದಾಯದ ಒಂದೇ ಕುಟುಂಬದ ಪಾಲಾಗುತ್ತಿದೆ. 1957ರ ಚುನಾವಣೆಯಲ್ಲಿ ಸಾರಸ್ವತ ಬ್ರಾಹ್ಮಣ ಸಮುದಾಯದ ವಸಂತಲತಾ ಮಿರ್ಜಾನ್ಕರ್ ಕಾಂಗ್ರೆಸ್ ಪಕ್ಷದಿಂದ ಶಾಸಕಿಯಾಗಿದ್ದರು. ಪ್ರಜಾ ಸೋಷಲಿಸ್ಟ್ ಪಕ್ಷದ (ಪಿಎಸ್‌ಪಿ) ಹುರಿಯಾಳಾಗಿದ್ದ ಸಾಹಿತಿ ದಾಮೋದರ ಚಿತ್ತಾಲ ಸುಮಾರು ಐದು ಸಾವಿರ ಮತದಂತರದಿಂದ ಸೋತಿದ್ದರು. 1962ರಲ್ಲಿ ಮತ್ತೆ ಗೆದ್ದ ವಸಂತಲತಾ ಮಿರ್ಜಾನ್ಕರ್‌ರನ್ನು 1967ರಲ್ಲಿ ಸ್ವತಂತ್ರ ಅಭ್ಯರ್ಥಿ ಆರ್.ಎಂ.ಹೆಗಡೆ ದೊಡ್ಡ ಅಂತರದಲ್ಲಿ ಸೋಲಿಸಿ ಶಾಸನಸಭೆಗೆ ಹೋಗಿದ್ದರು.

ಬಂಗಾರಪ್ಪ

ಪ್ರಬಲ ದೀವರ ಸಮುದಾಯದ ಎಸ್.ವಿ.ನಾಯ್ಕ್ 1972ರಲ್ಲಿ ಕ್ಷೇತ್ರವನ್ನು ವಶಪಡಿಸಿಕೊಂಡರು. ಶಿಕ್ಷಕರಾಗಿದ್ದ ನಾಯ್ಕ್‌ರಿಗೆ ಇಡೀ ಜಿಲ್ಲೆಯ ಇತಿಹಾಸ-ಭೂಗೋಳ-ರಾಜಕೀಯ-ಸಾಮಾಜಿಕ ಸಂಗತಿಗಳ ಆಳ ಜ್ಞಾನವಿತ್ತು. ಊಳಿಗಮಾನ್ಯದ ವಿರುದ್ಧ ಸಮಾಜವಾದಿ ಆಂದೋಲನ ಕಟ್ಟಿದ್ದ ದಿನಕರ ದೇಸಾಯಿಯವರ ಶಿಷ್ಯರಾಗಿದ್ದ ನಾಯ್ಕ್ ಹಣಕಾಸು ಖಾತೆಯ ಉಪ ಮಂತ್ರಿಯಾಗಿದ್ದ ಭಟ್ಕಳದ ಶಂಶುದ್ದೀನ್ ಜುಕಾಕೋ ನಿಧನದ ಬಳಿಕ ನಡೆದ ಚನಾವಣೆಯಲ್ಲಿ ಪಿಎಸ್‌ಪಿಯಿಂದ ಸ್ಪರ್ಧಿಸಿ ಸೋತಿದ್ದರು. ಹಿಂದುಳಿದ ವರ್ಗದ ಪ್ರತಿಭಾವಂತರನ್ನು ದೇವರಾಜ ಅರಸು ಹುಡುಕುತ್ತಿದ್ದ ಸಂದರ್ಭದಲ್ಲಿ ನಾಯ್ಕ್ ಕಾಂಗ್ರೆಸ್ ಸೇರಿದ್ದರು. ನಾಯ್ಕ್ ಎರಡನೆ ಬಾರಿ (1978) ಜನತಾ ಪಕ್ಷದ ಆರ್.ಎಸ್.ನಾಯ್ಕ್ ವಿರುದ್ಧ ಗೆದ್ದು ಎಮ್ಮೆಲ್ಲೆ ಆಗಿದ್ದರು.

ಉತ್ತರ ಕನ್ನಡದ ರಾಜಕಾರಣವನ್ನು ಪ್ರಭಾವಿಸುತ್ತಿದ್ದ ದಿಗ್ಗಜರಾದ ಕ್ರಾಂತಿರಂಗದ ಬಂಗಾರಪ್ಪ ಮತ್ತು ಜನತಾ ಪಕ್ಷದ ರಾಮಕೃಷ್ಣ ಹೆಗಡೆಯವರ ಜನತಾರಂಗದ ಪ್ರಚಂಡ ಅಲೆ 1983ರ ಚುನಾವಣೆಯಲ್ಲಿ ಎದ್ದಿತ್ತು. ಆ ಅಲೆಯಲ್ಲಿ ಕಾಂಗ್ರೆಸ್‌ನ ಎಸ್.ವಿ.ನಾಯ್ಕ್ ಕೊಚ್ಚಿ ಹೋದರು. ಆದರೆ ಅದರ ಲಾಭವಾಗಿದ್ದು ಬಿಜೆಪಿಯ ಡಾ.ಎಂ.ಪಿ.ಕರ್ಕಿಗೆ. ಜನತಾರಂಗದಿಂದ ದೀವರ ಸಮುದಾಯದ ಎಸ್.ಜೆ.ನಾಯ್ಕ್ ನಿಂತಿದ್ದರಿಂದ
ಆ ಜಾತಿಯ ಮತ ಹರಿದು ಹಂಚಿಹೋಗಿ ಡಾ.ಕರ್ಕಿಯವರ ಅದೃಷ್ಟ ಖುಲಾಯಿಸಿತು. ಆದರೆ ಎರಡೇ ವರ್ಷದಲ್ಲಾದ ಮಧ್ಯಂತರ ಚುನಾವಣೆಯಲ್ಲಿ ಡಾ.ಕರ್ಕಿಗೆ ಶಾಸಕ ಸ್ಥಾನ ಉಳಿಸಿಕೊಳ್ಳಲಾಗಲಿಲ್ಲ. ರಾಮಕೃಷ್ಣ ಹೆಗಡೆ ಚರಿಷ್ಮಾದಿಂದ ಜನತಾ ಪಕ್ಷದ ಕ್ಯಾಂಡಿಡೇಟ್ ಹಾಲಕ್ಕಿ ಬುಡಕಟ್ಟಿನ ಎನ್.ಎಚ್.ಗೌಡ ಚುನಾಯಿತರಾದರು.

1988ರಲ್ಲಿ ಆಡಳಿತಾರೂಢ ಜನತಾ ಪಕ್ಷದಲ್ಲಿ ಭುಗಿಲೆದ್ದಿದ್ದ ಭಿನ್ನಮತದ ಸಂದರ್ಭದಲ್ಲಿ ಶಾಸಕ ಎನ್.ಎಚ್.ಗೌಡ ದೇವೇಗೌಡರಿಗೆ ನಿಷ್ಠರಾಗಿದ್ದರು. ಹಾಗಾಗಿ ಎನ್.ಎಚ್.ಗೌಡರು 1989ರ ಇಲೆಕ್ಷನ್‌ನಲ್ಲಿ ದೇವೇಗೌಡರ ಪಕ್ಷದ ಅಭ್ಯರ್ಥಿಯಾದರೆ, ಕಮಲಾಕರ ಗೋಕರ್ಣ ಹೆಗಡೆಯವರ ಜನತಾಪಕ್ಷದ ಹುರಿಯಾಳಾಗಿದ್ದರು. ಬಂಗಾರಪ್ಪ ತಮ್ಮ ನಂಬಿಕಸ್ಥ ಹಾಲಕ್ಕಿ ಒಕ್ಕಲಿಗ ಸಮುದಾಯದ ಕೆ.ಎಚ್.ಗೌಡರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರು. ಈ ಹಣಾಹಣಿಯಲ್ಲಿ ಕಾಂಗ್ರೆಸ್‌ನ ಕೆ.ಎಚ್.ಗೌಡ ಜನತಾ ಪಕ್ಷದ ಕಮಲಾಕರ ಗೋಕರ್ಣರನ್ನು 10,374 ಮತದಂತರದಿಂದ ಪರಾಭವಗೊಳಿಸಿದರು. 1994ರ ಚುನಾವಣೆ ವೇಳೆ ಬಂಗಾರಪ್ಪ ಮತ್ತೆ ಕಾಂಗ್ರೆಸ್‌ನಿಂದ ಸಿಡಿದು ಕೆಸಿಪಿ ಕಟ್ಟಿದ್ದರು. ಬಂಗಾರಪ್ಪರಿಗೆ ನಿಷ್ಠರಾಗಿದ್ದ ಕೆ.ಎಚ್.ಗೌಡ ಕೆಸಿಪಿಯಿಂದ ಅಖಾಡಕ್ಕಿಳಿದಿದ್ದರು. ಕಾಂಗ್ರೆಸ್ ಇಬ್ರಾಹಿಂ ಉಪ್ಪಾರ್‌ಕರ್ ಎಂಬ ಮತ್ಸ್ಯೋದ್ಯಮಿಯನ್ನು ತನ್ನ ಅಭ್ಯರ್ಥಿಯನ್ನಾಗಿಸಿತ್ತು. ದಿನಕರ ಶೆಟ್ಟಿ ಜನತಾದಳದ ಉಮೇದುವಾರರಾಗಿದ್ದರು. ಹಿಂದುಳಿದ ವರ್ಗದ ಮತ ಬ್ಯಾಂಕ್ ಒಡೆದುಹೋಗಿದ್ದರಿಂದ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದ ಬ್ರಾಹ್ಮಣ ಸಮುದಾಯದ ಡಾ.ಎಂ.ಪಿ.ಕರ್ಕಿ ನಿರಾಯಾಸವಾಗಿ ಗೆದ್ದರು. ಕೆ.ಎಚ್.ಗೌಡರ ನಂತರ ಯಾವ ಪಕ್ಷದವರೂ ಹಾಲಕ್ಕಿಗಳಿಗೆ ಅವಕಾಶ ಕೊಡಲಿಲ್ಲ.

ಶೆಟ್ಟಿ ಪರಿವಾರದ ಏಕಸ್ವಾಮ್ಯ!

ಕುಮಟಾದ ಕೆ.ವಿ.ಶೆಟ್ಟಿ ಹೆಸರಾಂತ ಸರಕಾರಿ ಗುತ್ತಿಗೆದಾರರಾಗಿದ್ದರು. ರಾಮಕೃಷ್ಣ ಹೆಗಡೆ, ದೇಶಪಾಂಡೆಯಂಥ ದೊಡ್ಡದೊಡ್ಡ ರಾಜಕಾರಣಿಗಳ ಸಖ್ಯವಿದ್ದವರು. ಅವರ ಸಹೋದರ ಕೇಶವ ಶೆಟ್ಟಿಯವರ ಮಗ ದಿನಕರ ಶೆಟ್ಟಿ ಜನತಾ ಪಕ್ಷ, ಜನತಾ ದಳದಲ್ಲಿ ರಾಜಕಾರಣ ಮಾಡಿಕೊಂಡಿದ್ದರು. ಅಸೆಂಬ್ಲಿಗೆ ಸ್ಪರ್ದಿಸಿದಾಗೆಲ್ಲ ಸೋಲುತ್ತಿದ್ದರು. ಆದರೆ ಅವರ ದಾಯಾದಿ ಅಣ್ಣ ಮೋಹನ ಶೆಟ್ಟಿ (ಕೆ.ವಿ.ಶೆಟ್ಟಿ ಪುತ್ರ) ಮೊದಲ ಪ್ರಯತ್ನದಲ್ಲೆ ಶಾಸಕರಾಗಿದ್ದರು. ಅಣ್ಣ-ತಮ್ಮರ ಕದನ ಕುತೂಹಲಕರವಾಗಿರುತ್ತಿತು. 1999ರಲ್ಲಿ ಕಾಂಗ್ರೆಸ್‌ನ ಮೋಹನ ಶೆಟ್ಟಿ ಬಿಜೆಪಿಯ ಡಾ.ಎಂ.ಪಿ.ಕರ್ಕಿಯವರನ್ನು 12,375 ಮತದ ಅಂತರದಿಂದ ಸೋಲಿಸಿದ್ದರು. ಜನತಾ ದಳದ ದಿನಕರ ಶೆಟ್ಟಿ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. 2004ರಲ್ಲಿ ಮೋಹನ ಶೆಟ್ಟಿ ಮತ್ತೆ ಗೆದ್ದಿದ್ದರು. ಆಗವರಿಗೆ ಸಮೀಪದ ಪ್ರತಿಸ್ಪರ್ದಿಯಾಗಿದ್ದು ಸಿದ್ದಾಪುರದಿಂದ ವಲಸೆ ಬಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ. ಆಗಲೂ ದಿನಕರ ಮೂರನೆ ನಂಬರ್.

ಮಾರ್ಗರೆಟ್ ಆಳ್ವ

ಶಾಸಕ ಮೋಹನ ಶೆಟ್ಟಿ 2008ರ ಚುನಾವಣೆ ಹೊತ್ತಿಗೆ ತಮ್ಮ ವಾಚಾಳಿತನದಿಂದ ಕಾಂಗ್ರೆಸ್‌ನಲ್ಲಿ ವಿರೋಧಿಗಳನ್ನು ಸೃಷ್ಟಿಸಿಕೊಂಡಿದ್ದರು. ಮಾರ್ಗರೆಟ್ ಆಳ್ವ ಬಣದ ಮೋಹನ ಶೆಟ್ಟಿಗೆ ದೇಶಪಾಂಡೆ ಸಹಕಾರವೂ ಸಿಗಲಿಲ್ಲ. ಆರೋಗ್ಯವೂ ಹದಗೆಟ್ಟಿತ್ತು. ಹೀಗಾಗಿ ಕೇವಲ 20 ಮತಗಳ ಅಂತರದಲ್ಲಿ ತಮ್ಮ ದಿನಕರ್‌ಗೆ ಮಣಿಯಬೇಕಾಗಿ ಬಂತು. ಚುನಾವಣೆ ಮುಗಿದ ಕೆಲವೇ ತಿಂಗಳಲ್ಲಿ ಮೋಹನ ಶೆಟ್ಟಿ ನಿಧನರಾದರು.
ರಾಜಕೀಯದ ಗಂಧಗಾಳಿಯಿಲ್ಲದ ಮೋಹನ ಶೆಟ್ಟಿ ಮಗ ರವಿಕುಮಾರ್ ಶೆಟ್ಟಿ ಮಾರ್ಗರೆಟ್ ಆಳ್ವರ ಕೃಪಾಕಟಾಕ್ಷದಿಂದ ಕಾಂಗ್ರೆಸ್‌ನಲ್ಲಿ ಮುಂಚೂಣಿಗೆ ಬಂದರು. ಆದರೆ ಚಿಕ್ಕ ಹುಡುಗನೆಂಬ ಕಾರಣಕ್ಕೆ ಕಾಂಗ್ರೆಸ್ ಟಿಕೆಟ್ 2013ರ ಚುನಾವಣೆಯಲ್ಲಿ ಸಿಗಲಿಲ್ಲ. ಮಾರ್ಗರೆಟ್ ಆಳ್ವ ಹಠ ಹಿಡಿದು ಮೋಹನ ಶೆಟ್ಟಿ ಮಡದಿ ಶಾರದಾ ಶೆಟ್ಟಿಯವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿದರು. ಅನುಕಂಪದ ಅಲೆಯಲ್ಲಿ ತೇಲಿದ ಶಾರದಾ ಶೆಟ್ಟಿ 420 ಮತದಂತರದಿಂದ ದಿನಕರ ಶೆಟ್ಟಿ ಎದುರು ಗೆದ್ದರು!

ದೇವೇಗೌಡ-ಕುಮಾರಸ್ವಾಮಿ ವರ್ಚಸ್ಸು ಮತ್ತು ತನ್ನ ತಾಕತ್ತು ಎರಡೂ ಸೇರಿದರೂ ಜೆಡಿಎಸ್‌ನಿಂದ
ಗೆಲ್ಲುವುದು ಸಾಧ್ಯವಿಲ್ಲವೆಂಬುದು ದಿನಕರ ಶೆಟ್ಟಿಗೆ ಮನದಟ್ಟಾಗಿತ್ತು. ಕಾಂಗ್ರಸ್‌ಗೆ ಹೋಗೋಣವೆಂದರೆ ಬಾಗಿಲಲ್ಲಿ ಅತ್ತಿಗೆ ಮತ್ತವರ ಮಗ ಅಡ್ಡನಿಂತಿದ್ದರು. ಹಾಗಾಗಿ ಬಿಜೆಪಿ ಸೇರಲು ಪ್ಲಾನು ಹಾಕಿದ ದಿನಕರ ಶೆಟ್ಟಿ ಸ್ಥಳೀಯ ಆರ್‌ಎಸ್‌ಎಸ್ ಪ್ರಭಾವಿ ಮುಖಂಡರೊಬ್ಬರಿಗೆ ವಿಧೇಯರಾಗಿ ನಡೆದುಕೊಳ್ಳುತ್ತ ಅತ್ತ ಬೆಂಗಳೂರಲ್ಲಿ ಯಡಿಯೂರಪ್ಪರನ್ನು ಹಿಡಿದುಕೊಂಡು ಯಶಸ್ವಿಯಾದರು. ಹಳೆಯ ನಿಷ್ಠಾವಂತ ಬಿಜೆಪಿಗರನ್ನೆಲ್ಲ ಬದಿಗೆ ಸರಿಸಿ 2018ರ ಚುನಾವಣೆಯಲ್ಲಿ ದಿನಕರ ಶೆಟ್ಟಿ ಬಿಜೆಪಿ ಟಿಕೆಟ್ ಪಡೆದರು!

ಇದು ಬಿಜೆಪಿಯಲ್ಲಿ ದೊಡ್ಡ ಬಂಡಾಯಕ್ಕೆ ಕಾರಣವಾಯಿತಾದರೂ ಚುನಾವಣಾ ಸಮಯದಲ್ಲಾದ ಹೊನ್ನಾವರದ ಹುಡುಗ ಪರೇಶ್ ಮೇಸ್ತನ ನಿಗೂಢ ಸಾವಿನ ನಂತರದ ಮತಾಂಧ ದೊಂಬಿಯಿಂದ ಆದ ಮತ ಧ್ರುವೀಕರಣ ಮತ್ತು ನಾಲ್ವರು ಪ್ರಬಲ ಎದುರಾಳಿಗಳು ಪಡೆದ ಜಿದ್ದಾಜಿದ್ದಿನಿಂದ ದೊಡ್ಡ ಸಂಖ್ಯೆಯ ಅಂತರದಿಂದ ದಿನಕರ ಶೆಟ್ಟಿ ಗೆದ್ದರು. ಕಾಂಗ್ರೆಸ್‌ನ ಶಾರದಾ ಶೆಟ್ಟಿ, ಬಂಡಾಯ ಬಿಜೆಪಿ ಅಭ್ಯರ್ಥಿ ಸೂರಜ್ ನಾಯ್ಕ್, ಜೆಡಿಎಸ್‌ನ ಪ್ರದೀಪ್ ನಾಯಕ್ ಮತ್ತು ಮತ್ತೊಬ್ಬ ಬಿಜೆಪಿ ಬಂಡಾಯಗಾರ ಯಶೋಧರ ನಾಯ್ಕ್ ಪಡೆದ ಒಟ್ಟು ಮತಗಳು (75,189), ದಿನಕರ ಶೆಟ್ಟಿಗೆ ಬಿದ್ದ ಮತಕ್ಕಿಂತ (59,392) ಜಾಸ್ತಿಯೆಂಬುದು ಗಮನಾರ್ಹ!

ಕ್ಷೇತ್ರದ ಸುಖ-ದುಃಖ

ಸಮಕಾಲೀನ ಆಗುಹೋಗುಗಳಿಗೆ ಪ್ರತಿಕ್ರಿಯಿಸುವ ಬುದ್ಧಿವಂತರ ತಾಲೂಕುಗಳೆಂಬ ಹೆಗ್ಗಳಿಕೆಯ ಕುಮಟಾ-ಹೊನ್ನಾವರದಲ್ಲಿ ಒಂದಿಷ್ಟು ಸರಕಾರಿ ಸ್ಥಾವರಗಳು, ರಸ್ತೆ, ಕಾಲು ಸಂಕಗಳಾಗಿವೆಯೇ ಹೊರತು ಜನಸಾಮಾನ್ಯರಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂಥ ದೂರದೃಷ್ಟಿ ಯೋಜನೆಗಳಾವುದೂ ಬಂದಿಲ್ಲ. ಪ್ರತಿಭಾನ್ವಿತ ವಿದ್ಯಾರ್ಥಿ ಸಮೂಹದ ಉನ್ನತ ಶಿಕ್ಷಣಕ್ಕೆ ಈ ಎರಡೂ ತಾಲೂಕುಗಳಲ್ಲಿ ಅವಕಾಶವಿಲ್ಲ. ಕಲಿಕೆಗಾಗಿ ವಿದ್ಯಾರ್ಥಿಗಳು ಹುಬ್ಬಳ್ಳಿ, ಉಡುಪಿ, ದಕ್ಷಿಣ ಕನ್ನಡಕ್ಕೆ ಹೋಗುವುದು ಅನಿವಾರ್ಯವಾಗಿದೆ. ಇದಕ್ಕಿಂತಲೂ ದೊಡ್ಡ ದುರಂತವೆಂದರೆ ಒಂದು ಸುಸಜ್ಜಿತ ಆಸ್ಪತ್ರೆ ಸಹ ಇಲ್ಲ! ಅಪಘಾತದ, ಗಂಭೀರ ಆರೋಗ್ಯ ಸಮಸ್ಯೆಯ ರೋಗಿಗಳನ್ನು ದೂರದ ಮಣಿಪಾಲ, ಮಂಗಳೂರು, ಗೋವಾದ ಕಡೆ ಕೊಂಡೊಯ್ಯಬೇಕಿದೆ. ಬಡ ಡಯಾಲಿಸಿಸ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದಾಗಿದೆ. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹೋಗಲಿ, ಕನಿಷ್ಟ ಅಪಘಾತವಾದಾಗ ಅವಶ್ಯವಾದ ಟ್ರಾಮಾ ಸೆಂಟರ್ ಇಲ್ಲಿಯ ಬಾಯಿಬಡುಕ ಜನಪ್ರತಿನಿಧಿಗಳಿಂದ ತರಲಾಗಿಲ್ಲವೆಂದು ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಮಾಡಿದ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅನಂತ್ ಕುಮಾರ್ ಹೆಗಡೆ

ಪ್ರತಿ ಬೇಸಿಗೆಯಲ್ಲಿ ಕುಮಟಾ-ಹೊನ್ನಾವರದ ನಗರದಲ್ಲಷ್ಟೇ ಅಲ್ಲ, ಹಳ್ಳಿಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಬಾಧಿಸುತ್ತಿದೆ. ಗೋಕರ್ಣದಲ್ಲಿ ರೆಸಾರ್ಟ್, ಹೋಮ್ ಸ್ಟೇಗಳಿವೆಯಾದರೂ ಅಷ್ಟೇ ಸೊಬಗಿನ ಇನ್ನುಳಿದ ಬೀಚ್‌ಗಳಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದರೆ ನಿರುದ್ಯೋಗಿ ಯುವ ಸಮುದಾಯದ ವಲಸೆ ತಪ್ಪುತ್ತಿತ್ತೆಂದು ಜನರು ಹೇಳುತ್ತಾರೆ. ಹಾಗೆಯೆ ವಿಶಿಷ್ಟ ಶಿಲಾರಚನೆಯ ಹೆಬ್ಬಂಡೆ, ಗುಹೆ, ದುರ್ಗಮ ಕಾಡಿನ ಆಕರ್ಷಕ ಯಾಣದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ.

ಹೊನ್ನಾವರದ ಹಳದಿಪುರದಲ್ಲಿ ಖಾಸಗಿ ಬೃಹತ್ ವಾಣಿಜ್ಯ ಬಂದರು ನಿರ್ಮಾಣ ಮಾಡಲಾಗುತ್ತದೆಂದು ಆಳುವ ಪಕ್ಷದ ಘಟಾನುಘಟಿಗಳು ಹೇಳುತ್ತಿದ್ದಾರೆ. ಸಾಗರ ಮಾಲಾ ಯೋಜನೆಯಲ್ಲಿ ಕಟ್ಟಲಾಗುವ ಈ ಬಂದರಿಗೆ
ವಿರೋಧ (ಕಾರವಾರ, ಕಾಸರಗೋಡಲ್ಲಿ ಎದುರಾದಂತೆ) ಬರುವುದು ಗ್ಯಾರಂಟಿ. ಇದು ಮೀನುಗಾರರು ಮತ್ತಿತರ ಅಮಾಯಕರನ್ನು ನಿರಾಶ್ರಿತರನ್ನಾಗಿಸಲಿದೆ ಎಂಬ ಚರ್ಚೆ ನಡೆದಿದೆ. ಕುಮಟಾದ ಅಪರೂಪದ ಸಿಹಿ ಈರಳ್ಳಿ ಮತ್ತು ಗೋಕರ್ಣ ಸೀಮೆಯ ತರಕಾರಿ ಬೆಳೆ ಪ್ರೋತ್ಸಾಹಿಸುವ ಕೃಷಿ ಯೋಜನೆ ಮತ್ತು ಮೀನು ಕೆಡದಂತೆ ಸಂರಕ್ಷಿಸುವ ಶೈತ್ಯಾಗಾರ ಬೇಕಾಗಿದೆ. ಸಾಂಪ್ರದಾಯಿಕ ಮೀನುಗಾರರಿಗೆ ಸಬ್ಸಿಡಿ ದರದ ಸೀಮೆ ಎಣ್ಣೆ ಸಿಗದಂತಾಗಿರುವುದು ಆ ಸಮುದಾಯದ ಹೊಟ್ಟೆ ಮೇಲೆ ಹೊಡೆದಂತಾಗಿದೆ ಎಂಬ ಅಳಲು ಕೇಳಿಬರುತ್ತಿದೆ. ಮತ್ಸ್ಯಾಶ್ರಯ ಯೋಜನೆಯ ಮನೆಗಳು ಬಡ ಬೆಸ್ತರಿಗೆ ದೊರೆಯುತ್ತಿಲ್ಲ. ಚತುಷ್ಪಥವಾಗಿ
ಮಾರ್ಪಾಡಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರ ಅಪೂರ್ಣ, ಅಸಮರ್ಪಕ, ಅವೈಜ್ಞಾನಿಕ
ಕಾಮಗಾರಿಯಿಂದಾಗಿ ಇದೊಂದು ಮೃತ್ಯುಕೂಪವಾಗಿ ಪ್ರಯಾಣಿಕರನ್ನು ಕಾಡುತ್ತಿದೆ. ಅಭಿವೃದ್ಧಿಗೆ ಪೂರಕವಾದ ತಾಳಗುಪ್ಪ-ಹೊನ್ನಾವರ ರೈಲು ಮಾರ್ಗದ ಬೇಡಿಕೆ ಈಡೇರಿಕೆಗೆ ಯಾವ ಜನಪ್ರತಿನಿಧಿಯೂ ಯೋಚಿಸುತ್ತಿಲ್ಲ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.

ಶಾಸಕ ಶೆಟ್ಟಿ ಬಗ್ಗೆ ಸಂಘಕ್ಕಿಲ್ಲ ಸಮಾಧಾನ! ಕರಾವಳಿಯ ಮೂರೂ ಬಿಜೆಪಿ ಶಾಸಕರ ಬಗ್ಗೆ ಸಂಘಪರಿವಾರದ ಸುಪ್ರಿಮೋಗಳಿಗೆ ಸಮಾಧಾನವಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಕುಮಟಾದ ಶಾಸಕ ದಿನಕರ ಶೆಟ್ಟಿ ಮತ್ತು ಮೂಲ ಬಿಜೆಪಿಗರಿಗೆ ಹೊಂದಾಣಿಕೆಯೇ ಆಗುತ್ತಿಲ್ಲ ಎನ್ನಲಾಗಿದೆ. ಶೆಟ್ಟಿ ಸಂಘ ದೀಕ್ಷೆ ಪಡೆದವರಲ್ಲ; ಬಿಜೆಪಿಯ ಸೈದ್ಧಾಂತಿಕ ಬದ್ಧತೆಯಿಲ್ಲದ ವಲಸಿಗ ರಾಜಕಾರಣಿಯೆಂಬ ಅಸಹನೆ ಬಿಜೆಪಿಯಲ್ಲಿದೆ ಎಂಬ ಮಾತು ಸಾಮಾನ್ಯವಾಗಿದೆ. ಶಾಸಕ ಶೆಟ್ಟಿ ಕಂಟ್ರಾಕ್ಟರ್‍ಸ್ ಲಾಬಿ ಪೋಷಿಸಿದ್ದಾರೆಂಬ ಆರೋಪಕ್ಕೆ ತುತ್ತಾಗಿದ್ದಾರೆ.

ಶಾರದಾ ಶೆಟ್ಟಿ

ಕಾರ್ಯಸಾಧುವಲ್ಲದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕುಮಟಾದಲ್ಲಿ ಸ್ಥಾಪಿಸಲಾಗುತ್ತದೆಂದು ಜನರನ್ನು ದಿಕ್ಕು ತಪ್ಪಿಸುತ್ತಿರುವ ಶಾಸಕರು ಕನಿಷ್ಟ ಟ್ರಾಮಾ ಸೆಂಟರ್ ತರಲಿ ಎನ್ನುತ್ತಿದ್ದಾರೆ ಮತದಾರರು. ಇರುವ ಸರಕಾರಿ ಆಸ್ಪತ್ರೆಗಳಿಗೆ ಇನ್ನಷ್ಟು ಸೌಲಭ್ಯ ಒದಗಿಸಬೇಕಾಗಿದೆ. ಅಘನಾಶಿನಿ ನದಿಯಲ್ಲಿ ನಡೆಯುತ್ತಿರುವ ಚಿಪ್ಪಿ ಗಣಿಗಾರಿಕೆ
ಗೊಂದಲದಲ್ಲಿ ಮಗುವಿಗೆ ಚಿವುಟುವುದು ಮತ್ತು ತೊಟ್ಟಿಲು ತೂಗುವುದೆರಡನ್ನೂ ಶಾಸಕ ಶೆಟ್ಟಿ ಮಾಡುತ್ತಿದ್ದಾರೆಂಬ ಅನುಮಾನ ಚಿಪ್ಪಿ ಉದ್ಯಮಿಗಳಿಗೆ ಮತ್ತು ಮೀನುಗಾರ ಸಮುದಾಯವನ್ನು ಕಾಡುತ್ತಿದೆ.

ಕುಮಟಾದ ಮೇಲೆ ಅನಂತ್ ಹೆಗಡೆ ಕಣ್ಣು

ಉತ್ತರ ಕನ್ನಡ ಬಿಜೆಪಿ ಮೇಲೆ ಹಿಡಿತ ಸಾಧಿಸಿರುವ ಸಂಸದ ಅನಂತಕುಮಾರ ಹೆಗಡೆ ಹಾಗು ಶಾಸಕ ದಿನಕರ ಶೆಟ್ಟಿ ಸಂಬಂಧ ಅಷ್ಟಕ್ಕಷ್ಟೆ. ಕಳೆದ ಚುನಾವಣೆಯಲ್ಲಿ ಮೈಸೂರಿನ ಹಣವಂತ ಉದ್ಯಮಿ ಯಶೋಧರ ನಾಯ್ಕ್‌ಗೆ ಬಿಜೆಪಿ ಟಿಕೆಟ್ ಕೊಡಿಸಲು ಹೆಗಡೆ ಕೊನೆಕ್ಷಣದವರೆಗೆ ಶತಾಯಗತಾಯ ಪ್ರಯತ್ನಿಸಿ ವಿಫಲರಾಗಿದ್ದರು. ಯಡಿಯೂರಪ್ಪ ಕೈಮೇಲಾದ್ದರಿಂದ ಶೆಟ್ಟಿಗೆ ಅವಕಾಶವಾಗಿತ್ತು. ತನಗೆ ಅನಂತ್ ಹೆಗಡೆ ಅನ್ಯಾಯ ಮಾಡಿದರೆನ್ನುತ್ತ ಯಶೋಧರ ನಾಯ್ಕ್ ಕಾಂಗ್ರೆಸ್ ಸೇರಿದರೆ, ಅತ್ತ ಅನಂತ್ ಹೆಗಡೆ ಕುಮಟಾ ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳಾಗಲು ಯೋಜನೆ ಹಾಕತೊಡಗಿದ್ದರು. ಕಳೆದ ಚುನಾವಣೆಯಲ್ಲೇ ಅನಂತ್ ಹೆಗಡೆ ಕುಮಟಾದಿಂದ ಸ್ಪರ್ಧಿಸುವ ಪ್ರಯತ್ನ ಮಾಡಿದ್ದರು.

ರಾಜ್ಯ ರಾಜಕಾರಣಕ್ಕೆ ಬಂದು ಮುಖ್ಯಮಂತ್ರಿಯಾಗುವ ಆಸೆಯಲ್ಲಿರುವ ಅನಂತ್ ಹೆಗಡೆ ಮೊದಲ ಆದ್ಯತೆ ಶಿರಸಿ ಕ್ಷೇತ್ರವಾದರೂ ಅಲ್ಲಿಂದ ಸಂಘಪರಿವಾರದಲ್ಲಿ ಪ್ರಬಲವಾಗಿರುವ ಸ್ಪೀಕರ್ ಕಾಗೇರಿಯನ್ನು ದೂರಮಾಡುವುದು ಅಷ್ಟು ಸುಲಭ ಅಲ್ಲವೆಂಬ ಕಾರಣಕ್ಕೆ ಕುಮಟಾದತ್ತ ಚಿತ್ತ ಹೊರಳಿಸಿದ್ದಾರೆ ಎನ್ನಲಾಗುತ್ತಿದೆ. ಈಗ ಹಬ್ಬಿರುವ ವದಂತಿ ಪ್ರಕಾರ ಶಾಸಕ ದಿನಕರ ಶೆಟ್ಟಿ ಬಗ್ಗೆ ಬೇಸರದಲ್ಲಿರುವ ಸಂಘ ಸೂತ್ರಧಾರರಲ್ಲಿ ಬಿ.ಎಲ್.ಸಂತೋಷ್ ಒಬ್ಬರು ಬಿಟ್ಟರೆ ಉಳಿದೆಲ್ಲರೂ ಅನಂತ ಹೆಗಡೆಗೆ ಟಿಕೆಟ್ ಕೊಡಲು ಸಮ್ಮತಿಸಿದ್ದಾರೆನ್ನಲಾಗಿದೆ. ಸಂತೋಷ್‌ಗೆ ಸ್ವಜಾತಿಯ ಅನಂತ್ ಹೆಗಡೆ ರಾಜ್ಯದಲ್ಲಿ ಬೆಳೆಯುವುದು ಬೇಡವಾಗಿದೆಯೆಂದು ಬಿಜೆಪಿಯೊಳಗಿನ ಸಿಎಂ ರೇಸ್ ಸಂಘರ್ಷ ಬಲ್ಲವರು ಹೇಳುತ್ತಾರೆ.

ದೇಶಪಾಂಡೆ

ಸಂಘದವರ ವಿರೋಧ ಮತ್ತು ಆಂಟಿ ಇನ್‌ಕಂಬೆನ್ಸಿಯಲ್ಲಿರುವ ದಿನಕರ ಶೆಟ್ಟಿಗೆ ಬಿಜೆಪಿ ಟಿಕೆಟ್ ಕಳೆದ ಬಾರಿಯಷ್ಟು ಸುಲಭವಾಗಿ ಸಿಗಲಾರದೆಂಬ ಚರ್ಚೆ ರಾಜಕೀಯ ರಂಗಸಾಲೆಯಲ್ಲಿ ನಡೆದಿದೆ. ಇದೆಲ್ಲ ಗೊತ್ತಾಗಿರುವ ದಿನಕರ ಶೆಟ್ಟಿ ತನ್ನ ಹಳೆಯ ಜೆಡಿಎಸ್ ಬೇಸ್ ಚೆಕ್ ಮಾಡುತ್ತ, ಮುಸ್ಲಿಮರನ್ನು ಒಲಿಸಿಕೊಳ್ಳುವ ಕಸರತ್ತು ನಡೆಸಿದ್ದಾರೆನ್ನಲಾಗಿದೆ.

ಕುಮಟಾಕ್ಕೆ ದೇಶಪಾಂಡೆ ಬರ್‍ತಾರ?

ಕುಮಟಾ-ಹೊನ್ನಾವರ ಕಾಂಗ್ರೆಸ್ ಪರಿಸ್ಥತಿ ಹದಗೆಟ್ಟದೆ. ಮಾರ್ಗರೆಟ್ ಆಳ್ವ ಬಣದ ಮಾಜಿ ಶಾಸಕಿ ಶಾರದಾ ಶೆಟ್ಟಿ ಮತ್ತವರ ಮಗ ರವಿಕುಮಾರ್ ಶೆಟ್ಟಿಗೆ ದೊಡ್ಡ ವಿರೋಧವಿದೆ. ಈ ತಂಡದ ಹಿಂದೆ ದೇಶಪಾಂಡೆ ಇದ್ದಾರೆನ್ನಲಾಗುತ್ತಿದೆ. ಶಾರದಾ ಶೆಟ್ಟಿ ಪ್ರಬಲ ವಿರೋಧಿ ಪ್ರದೀಪ್ ನಾಯಕ ದೇಶಪಾಂಡೆ ಮೂಲಕ ಕಾಂಗ್ರೆಸ್
ಸೇರಿದ್ದಾರೆ. ಪತಿ, ಮಾಜಿ ಶಾಸಕ ಮೋಹನ ಶೆಟ್ಟಿ ನಿಧನದ ಅನುಕಂಪದ ಅಲೆಯಲ್ಲಿ ಶಾಸಕಿಯಾಗಿದ್ದ
ಶಾರದಾ ಶೆಟ್ಟಿ ಮಗನ ದರ್ಬಾರಿನಿಂದ ದುರ್ಬಲವಾದರೆನ್ನುವ ಮಾತಿದೆ. ಶಾರದಾ ಶೆಟ್ಟಿಗಿಂತ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ ಹೆಗಡೆ ಕಾಂಗ್ರೆಸ್ಸಿಗೆ ಗಟ್ಟಿ ಹುರಿಯಾಳಾಗಬಲ್ಲರೆಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಕ್ಷೇತ್ರದಲ್ಲಿ ಗಣನೀಯವಾಗಿರುವ ಹವ್ಯಕ ಬ್ರಾಹ್ಮಣ ಸಮುದಾಯದ ಶಶಿಭೂಷಣ ಹೆಗಡೆ ಎರಡು ಬಾರಿ ಕುಮಟಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಣ್ಣ ಅಂತರದಲ್ಲಿ ಸೋತಿದ್ದರು. ಹಾಗಾಗಿ ಅವರಿಗೆ ಕ್ಷೇತ್ರದಲ್ಲಿ ನೆಟ್‌ವರ್ಕ್ ಇದೆ.

ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಾಗಲಿರುವ ದೀವರು ಸಮುದಾಯದ ಮಾಜಿ ಜಿಪಂ ಸದಸ್ಯ ರತ್ನಾಕರ ನಾಯ್ಕ್ ಮತ್ತು ಟ್ರಾನ್ಸ್‌ಪೋರ್ಟ್ ವ್ಯವಹಾರಸ್ಥ ಯಶೋಧರ ನಾಯ್ಕ್ ಕಾಂಗ್ರೆಸ್ ಟಿಕೆಟ್‌ಗೆ ಕಟಿಪಿಟಿ ಮಾಡುತ್ತಿದ್ದಾರೆ. ರತ್ನಾಕರ ನಾಯ್ಕ್ ಇಡೀ ಕ್ಷೇತ್ರಕ್ಕೆ ಪರಿಚಿತ ಮುಖವಲ್ಲ. ಮೈಸೂರಲ್ಲಿ ದೊಡ್ಡ ಉದ್ಯಮ ನಡೆಸುವ ಹೊನ್ನಾವರ ಮೂಲದ ಯಶೋಧರ ನಾಯ್ಕ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ನಿಕಟ ನಂಟು ಹೊಂದಿದ್ದಾರೆನ್ನಲಾಗದೆ. ಎರಡು ಬಾರಿ ಭಟ್ಕಳ ಮತ್ತು ಒಂದು ಸಲ ಕುಮಟಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವ ಯಶೋಧರ ನಾಯ್ಕ್ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದ್ದು, ಅವರಿಗೆ ಸ್ವಜಾತಿ ದೀವರು ಮತ್ತು ಅಲ್ಪಸಂಖ್ಯಾತರು ಒಂದಾಗಿ ಬೆಂಬಲಿಸಿದರೆ ಗೆಲ್ಲಬಹುದೆಂದು ವಿಶ್ಲೇಷಿಸಲಾಗುತ್ತಿದೆ. ಹಾಲಕ್ಕಿ ಒಕ್ಕಲಿಗ ಸಮುದಾಯದ ಮಾಜಿ ಜಿಪಂ ಅಧ್ಯಕ್ಷೆ ಗಾಯತ್ರಿ ಗೌಡ ಪ್ರಬಲ ಪೈಪೋಟಿ ಕೊಡಬಲ್ಲರೆಂದು ಬಿಜೆಪಿಗರೆ ಹೇಳುತ್ತಾರೆ.

ಇಷ್ಟೆಲ್ಲ ರಾಜಕೀಯ ಲೆಕ್ಕಾಚಾರದ ನಡುವೆ ಜಿಲ್ಲಾ ಕಾಂಗ್ರೆಸ್ ಹೈಕಮಾಂಡ್ ಆರ್.ವಿ.ದೇಶಪಾಂಡೆ ಕುಮಟಾಕ್ಕೆ ವಲಸೆ ಬರುತ್ತಾರೆಂಬ ಸುದ್ದಿ ಕುತೂಹಲ ಕರೆಳಿಸಿದೆ. ತಾವೇ ಪೋಷಿಸಿ, ಎರಡು ಸಲ ವಿಧಾನ ಪರಿಷತ್ ಸದಸ್ಯನಾಗಿ ಮಾಡಿದ್ದ ಬಲಗೈ ಬಂಟ ಎಸ್.ಎಲ್.ಘೋಟನೇಕರ್ ತಿರುಗಿಬಿದ್ದಿರುವುದು ದೇಶಪಾಂಡೆಗೆ ತವರು ಕ್ಷೇತ್ರ ಹಳಿಯಾಳದಲ್ಲಿ ಪ್ರತಿಕೂಲವಾಗಿದೆ. ದೇಶಪಾಂಡೆ ಮಗ ಪ್ರಶಾಂತ್ ಪಕ್ಕದ ಮುಂಡಗೋಡ-ಯಲ್ಲಾಪುರ ಕ್ಷೇತ್ರದಿಂದ ಚುನಾವಣೆಗಿಳಿಯುದು ಬಹುತೇಕ ಪಕ್ಕಾ ಆಗಿದೆ. ಅಪ್ಪಮಗ ಅಕ್ಕಪಕ್ಕದ ಕ್ಷೇತ್ರದಿಂದ ಸ್ಪರ್ಧಿಸುವದು ಸರಿಯಲ್ಲವೆಂಬ ಕಾರಣಕ್ಕೆ ಮತ್ತು ಹಳಿಯಾಳದ ಪ್ರಥಮ ಬಹುಸಂಖ್ಯಾತ ಮರಾಠ ಸಮುದಾಯದ ಘೋಟನೇಕರ್ ವಿರೋಧಿಸುತ್ತಿರುವುದರಿಂದ ಡಿಸ್ಟರ್ಬ್ ಆಗಿರುವ ದೇಶಪಾಂಡೆ ಕುಮಟಾದಿಂದ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆಂಬ ತರ್ಕ ಹರಿದಾಡುತ್ತಿದೆ. ಕುಮಟಾದ ಸಂಘ ಪರಿವಾರದ ರಣ ತಂತ್ರಗಾರರಾದ ಸ್ವಜಾತಿ ಕೊಂಕಣಿಗರ ಮೇಲೆ ಪ್ರಭಾವವಿರುವ ದೇಶಪಾಂಡೆ ಕಾಂಗ್ರೆಸ್ ಕ್ಯಾಂಡಿಡೇಟಾದರೆ ಬಿಜೆಪಿಗೆ ಸಮಸ್ಯೆಯಾಗುವುದು ಗ್ಯಾರಂಟಿ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ; ಕಾರವಾರ-ಅಂಕೋಲಾ: ಹಾಲಕ್ಕಿಗಳ ಸೀಮೆಯಲ್ಲಿ ಹಣದವರ ಕಾರುಬಾರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...