Homeಕರ್ನಾಟಕನಿಮ್ಮ ಕಾರ್ಪೊರೇಟರ್ ( ಪಾಲಿಕೆ ಸದಸ್ಯರ) ಕೆಲಸ ಏನೆಂದು ನಿಮಗೆ ಗೊತ್ತೆ?

ನಿಮ್ಮ ಕಾರ್ಪೊರೇಟರ್ ( ಪಾಲಿಕೆ ಸದಸ್ಯರ) ಕೆಲಸ ಏನೆಂದು ನಿಮಗೆ ಗೊತ್ತೆ?

ಕಾರ್ಪೊರೇಟರ್ ಕೆಲಸ - ಬೆಳಗಿನಿಂದ ರಾತ್ರಿಯವರೆಗೆ ತನ್ನ ವಾರ್ಡಿನಲ್ಲಿ ಸಂಚರಿಸಿ, ಪೌರ ಸಮಸ್ಯೆಗಳನ್ನು ಅರಿತು, ಅದನ್ನು ಸರಿಯಾದ ವಿಭಾಗಕ್ಕೆ ನೀಡಿ, ಸಮಸ್ಯೆ ಬಗೆಹರಿಸುವಂತೆ ಮಾಡುವುದು.

- Advertisement -
- Advertisement -

ಇದು ಸಮಾಜ ಸೇವೆಯ ಬಗ್ಗೆ ಬಹಳಷ್ಟು ಕಾಳಜಿ ಮತ್ತು ಬದ್ಧತೆ ಇರುವ ಮಹಿಳೆಯೊಬ್ಬರು ಇತ್ತೀಚೆಗೆ ನನಗೆ ಕೇಳಿದ ಪ್ರಶ್ನೆ. ಜನಸಾಮಾನ್ಯರನ್ನು ಬಿಡಿ, ಎಷ್ಟೋ ಜನ ಹಾಲಿ ಕಾರ್ಪೊರೇಟರ್ ಗಳಿಗೆ ಮತ್ತು ಕಾರ್ಪೊರೇಟರ್ ಆಗಬೇಕು ಎಂದು ಹವಣಿಸಿತ್ತಿರುವ ಅಭ್ಯರ್ಥಿಗಳಿಗೂ ಸಹ ಈ ಪ್ರಶ್ನೆಗೆ ಉತ್ತರ ಬಹುಶಃ ಗೊತ್ತಿರಲಿಕ್ಕಿಲ್ಲ. ನನಗೂ ಸಹ, ನಾನು ಕಲಿತ ಶಾಲೆ/ಕಾಲೇಜಿನಲ್ಲಿ, ಈ ವಿಷಯ ಯಾರೂ ಹೇಳಿಕೊಡಲಿಲ್ಲ. ಸಾರ್ವಜನಿಕ ಆಡಳಿತದಲ್ಲಿ (ಪಬ್ಲಿಕ್ ಅಡ್ಮಿನಿಸ್ಟ್ರೇಷನ್) ಯಾವ ಪದವಿಯೂ ನನಗಿಲ್ಲ. ಆದರೆ ಹಲವಾರು ಸ್ವಯಂಸೇವಕ ಎನ್.ಜಿ.ಒ.ಗಳೊಂದಿಗೆ ನನ್ನ ಕೆಲಸದ ಅನುಭವದಿಂದ ಮತ್ತು ನಗರದ ಜನಪ್ರತಿನಿಧಿಗಳ ನಿಕಟ ಸಂಪರ್ಕದಿಂದ ಹೇಳಬಹುದಾದ ಉತ್ತರ ಇದು. ಒಂದೇ ವಾಕ್ಯದಲ್ಲಿ ಉತ್ತರ ಬೇಕಿದ್ದರೆ – “ಕಾರ್ಪೊರೇಟರ್ ಕೆಲಸ ತನ್ನ ವಾರ್ಡಿನ ಜನರ ಪೌರಸೌಲಭ್ಯಗಳ ಸಮಸ್ಯೆಯನ್ನು ಮುನಿಸಿಪಲ್ ಕಾರ್ಪೊರೇಷನ್ನಿಗೆ ತಲುಪಿಸಿ, ಸಮಸ್ಯೆ ಪರಿಹರಿಸಿಕೊಡುವುದು” ಎನ್ನಬಹುದು.

ನಮ್ಮ ದೇಶದಲ್ಲಿ ಮೂರು ಹಂತದ ಸರಕಾರವಿದೆ – ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರಕಾರ. ದೈನಂದಿನ ಜೀವನದಲ್ಲಿ ಜನರನ್ನು ಅತ್ಯಂತ ಹೆಚ್ಚು ಬಾಧಿಸುವುದು ಸ್ಥಳೀಯ ಸರಕಾರ. ಏಕೆಂದರೆ ಇದರ ಅಡಿಯಲ್ಲಿ ಬರುವುದು ನಗರ ಪೌರ ಸೌಲಭ್ಯಗಳು. ಸಮಸ್ಯೆಗೆ ಯಾವ ಸರಕಾರ ಕಾರಣವೆಂದು ತಿಳಿಯದಿದ್ದರೂ, ಈ ಪೌರ ಸೌಲಭ್ಯಗಳು ಸಮರ್ಪಕವಾಗಿಲ್ಲದಿದ್ದರೆ ಜನರು ಸರಕಾರಕ್ಕೆ ದಿನಾ ಹಿಡಿ ಶಾಪ ಹಾಕುತ್ತಿರುತ್ತಾರೆ. ಮುನಿಸಿಪಲ್ ಕಾರ್ಪೊರೇಷನ್ ಎನ್ನುವುದು ನಗರ ಪ್ರದೇಶದ ಆಡಳಿತದಲ್ಲಿ ಸ್ಥಳೀಯ ಸರಕಾರದ ಒಂದು ಅಂಗ ಮಾತ್ರ. ಹಾಗೆಂದ ಮಾತ್ರಕ್ಕೆ ಎಲ್ಲಾ ಪೌರ ಸೌಲಭ್ಯಗಳು ಇದರಡಿಯಲ್ಲಿ ಬರುತ್ತವೆ ಎಂದಲ್ಲ. ಕೆಲವು ಸೇವೆಗಳ ಜವಾಬ್ದಾರಿಯನ್ನು ರಾಜ್ಯ ಸರಕಾರ ಬೇರೆ ಸಂಸ್ಥೆಗೆ ವರ್ಗಾಯಿಸಿರಬಹುದು, ಉದಾ- ನೀರು ಮತ್ತು ಒಳಚರಂಡಿ ವ್ಯವಸ್ಥೆ (ಬೆಂಗಳೂರಿನಲ್ಲಿ ಬಿ.ಬಿ.ಎಂ.ಪಿ.ಗೆ ಬದಲಾಗಿ ಬಿ.ಡಬ್ಲ್ಯೂ.ಎಸ್.ಎಸ್.ಬಿ.ಗೆ ನೀಡಿರುವಂತೆ). ಅಂತಹ ಸಂದರ್ಭದಲ್ಲಿ ಬಿ.ಡಬ್ಲ್ಯೂ.ಎಸ್.ಎಸ್.ಬಿ. ರಾಜ್ಯ ಮತ್ತು ಸ್ಥಳೀಯ ಸರಕಾರದ ಅಂಗವಾಗಿರುತ್ತದೆಯೇ ವಿನಃ ನೀರಿನ ವಿಷಯ ಕಾರ್ಪೊರೇಷನ್ ವ್ಯಾಪ್ತಿಗೆ ಬರುವುದಿಲ್ಲ, ಆದ್ದರಿಂದ ಬೆಂಗಳೂರಿನ ನೀರಿನ ಅಥವಾ ಒಳಚರಂಡಿಯ ಸಮಸ್ಯೆಗೆ ಕಾರ್ಪೊರೇಷನ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಕೆಲವೆಡೆ ಕೆಲವು ಪೌರ ಸೌಲಭ್ಯ ವ್ಯವಸ್ಥೆ ಕಾರ್ಪೊರೇಷನ್ ವ್ಯಾಪ್ತಿಗೆ ಬಂದರೂ ಸಹ, ಅದರ ನಿರ್ವಹಣೆಯನ್ನು ಬೇರೆ ಕಂಪನಿಗೆ ಹೊರಗುತ್ತಿಗೆ ನೀಡಿರಬಹುದು ಆದರೆ ಅದರ ಜವಾಬ್ದಾರಿ ಮಾತ್ರ ಕಾರ್ಪೊರೇಷನ್ ಬಳಿಯಲ್ಲಿಯೇ ಇರುತ್ತದೆ.

ಇನ್ನು ಆಡಳಿತದ ಬಗ್ಗೆ ಹೇಳುವುದಾದರೆ ಮುನಿಸಿಪಲ್ ಕಾರ್ಪೊರೇಷನ್ ಎನ್ನುವುದು ಮೂರೂ (ಕೇಂದ್ರ, ರಾಜ್ಯ ಮತ್ತು ಸ್ಥಳೀಯ) ಸರಕಾರದ ಆಡಳಿತ ವ್ಯವಸ್ಥೆಗೆ ಒಳಪಟ್ಟಿರುತ್ತದೆ. ಏಕೆಂದರೆ ಇದಕ್ಕೆ ಹಣಕಾಸು, ಸಿಬ್ಬಂದಿ ಒದಗಿಸುವುದು, ಕಾನೂನು/ನಿಯಮ ಅನುಷ್ಠಾನಗೊಳಿಸುವುದು ಮತ್ತು ಮೇಲ್ವಿಚಾರಣೆಯ ಹೊಣೆ ಇವೇ ಮೂರು ಸರಕಾರಗಳು. ಕೇಂದ್ರ ಸರಕಾರ ತನ್ನ ಸಂವಿಧಾನಾತ್ಮಕ ಜವಾಬ್ದಾರಿಯಾದ ಹಲವು ವಿಷಯ (ಒಕ್ಕೂಟ ಮತ್ತು/ಅಥವಾ ಸಮವರ್ತಿ ಪಟ್ಟಿಯ) ಮತ್ತು ಕಾರ್ಯಕ್ರಮಗಳ ಅನುಷ್ಠಾನವನ್ನು ಕಾರ್ಪೊರೇಷನ್ ಗೆ ವರ್ಗಾಯಿಸಿರುತ್ತದೆ. ಅದೇ ರೀತಿ ರಾಜ್ಯ ಸರಕಾರವೂ ತನ್ನ ಹಲವಾರು ಕರ್ತವ್ಯ/ಕಾರ್ಯಕ್ರಮವನ್ನು ಕಾರ್ಪೊರೇಷನ್ನಿಗೆ ವರ್ಗಾಯಿಸಿರುತ್ತದೆ. ಅದಕ್ಕಾಗಿ ಈ ಎರಡೂ ಸರಕಾರ ಕಾರ್ಪೊರೇಷನ್ನಿಗೆ ಅನುದಾನ ನೀಡುತ್ತವೆ. ಅದೇ ರೀತಿಯಾಗಿ ಸಿಬ್ಬಂದಿಯನ್ನೂ ಒದಗಿಸುತ್ತವೆ. ಕೆಲವೊಮ್ಮೆ ಅಧಿಕಾರಿಗಳು ಕೇಂದ್ರದಿಂದ ನೇರವಾಗಿ ನೇಮಿಸಲ್ಪಟ್ಟಿದ್ದರೆ (ಉದಾ: ಐ.ಎ.ಎಸ್.) ಕೆಲವೊಮ್ಮೆ ಡೆಪ್ಯೂಟೇಷನ್ ಮೇಲೆ ನೇಮಕಗೊಂಡಿರಬಹುದು. ಕೆಲವು ಸಿಬ್ಬಂದಿ (ಉದಾ: ಕೆ.ಎ.ಎಸ್./ಕೆ.ಇ.ಎಸ್.) ನೇರವಾಗಿ ರಾಜ್ಯ ಸರಕಾರದಿಂದ ಬಂದಿದ್ದರೆ ಕೆಲವರು ಮುನಿಸಿಪಲ್ ಕಾರ್ಪೊರೇಷನ್ನಿಗೇ ನೇರವಾಗಿ ನೇಮಕಗೊಂಡು ಅಥವಾ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಆಗಿ ಬಂದಿರಬಹುದು. ಈ ರೀತಿ ಕೇಂದ್ರ/ರಾಜ್ಯ/ಸ್ಥಳೀಯ ಸರಕಾರಗಳ ಸೇವಾ ನಿಯಮದ ವ್ಯಾಪ್ತಿಗೆ ಬರುವುದರಿಂದ ಯಾರು ಯಾರ ಮಾತನ್ನು ಕೇಳಬೇಕು ಬಿಡಬೇಕು ಎಂಬುದು ಕೆಲವೊಮ್ಮೆ ಗೊಂದಲಮಯ. ತಪ್ಪು ಮಾಡಿದಲ್ಲಿ ಎಲ್ಲರಿಗೂ ಏಕರೀತಿಯ ದಂಡನೆ ವಿಧಿಸಲು ಬರುವುದಿಲ್ಲ. ಇದು ವ್ಯವಸ್ಥೆಯ ಒಂದು ದೋಷ, ಇದನ್ನು ನಿಯಮಾವಳಿ ಬಲ್ಲ ವ್ಯಕ್ತಿಗಳು ತಮ್ಮ ಪ್ರಯೋಜನಕ್ಕೆ ತಕ್ಕಂತೆ ಬಳಸಿಕೊಂಡು ನುಣುಚಿಕೊಳ್ಳುತ್ತಾರೆ.

ಆಡಳಿತಾತ್ಮಕ ದೃಷ್ಟಿಯಿಂದ ನೋಡುವುದಾದರೆ ಆಯುಕ್ತರು ಮುನಿಸಿಪಲ್ ಕಾರ್ಪೊರೇಷನ್ನಿಗೆ ಮುಖ್ಯಸ್ಥರು. ಅವರ ಕೆಳಗೆ, ಉಪ-ಆಯುಕ್ತರು, ಇತರ ವಲಯ ಆಯುಕ್ತರು, ಅಭಿಯಂತರು, ಅಧಿಕಾರಿಗಳು, ಶಿರಸ್ತೇದಾರರು, ಪ್ರಥಮ/ದ್ವಿತೀಯ ದರ್ಜೆ ಸಹಾಯಕರು, ಗುತ್ತಿಗೆ ನೌಕರರು, ಇತರ ಸಿಬ್ಬಂದಿ ಇತ್ಯಾದಿ ಬರುತ್ತಾರೆ. ಕೆಳ ಹಂತದಲ್ಲಿ ಪೌರಕಾರ್ಮಿಕರು ಸಹ ಕಾರ್ಪೊರೇಷನ್ನಿಂದ ನೇರ ನೇಮಕಾತಿ ಆಗಿರಬಹುದು, ಗುತ್ತಿಗೆ ಆಧಾರದ ಮೇಲಿರಬಹುದು ಅಥವಾ ಕಸ ನಿರ್ವಹಣೆಯ ಗುತ್ತಿಗೆದಾರರ ಖಾಸಗಿ ನಿಯುಕ್ತಿಯಾಗಿರರಬಹುದು. ಎಲ್ಲರಿಗೂ ಬೇರೆ ಬೇರೆ ಸೇವಾ ನಿಯಮ ಅನ್ವಯಿಸುತ್ತದೆ. ಆದರೂ ಸಹ ಮುನಿಸಿಪಲ್ ಕಾರ್ಪೊರೇಷನ್ ತನ್ನ ಸಿಬ್ಬಂದಿಯನ್ನು, ತಕ್ಕಷ್ಟು ಮಟ್ಟಿಗೆ, ತೀರಾ ಅನ್ಯಾಯವಾಗದಂತೆ, ನೋಡಿಕೊಳ್ಳುತ್ತದೆ ಎನ್ನಬಹುದು.

ಇನ್ನು ಕಾರ್ಪೊರೇಷನ್ ಕೆಲಸ/ಆಡಳಿತ ಏನು/ಹೇಗೆ? ಮುಖ್ಯವಾಗಿ ಇದರ ಕೆಲಸ ಮೂರು. ಮೊದಲನೆಯದು ನಿರ್ವಹಣೆ, ಎರಡನೆಯದು ನಿಯಂತ್ರಣ, ಮೂರನೆಯದು ಅಭಿವೃದ್ಧಿ. ಒಂದು ನಗರ ಪ್ರದೇಶವನ್ನು ಅದರ ಅಭಿವೃದ್ಧಿ ಪ್ರಾಧಿಕಾರ (ಉದಾ: ಬಿ.ಡಿ.ಎ., ಮೂಡಾ ಇತ್ಯಾದಿ) ಸಮಗ್ರ ಅಭಿವೃದ್ಧಿ ಯೋಜನೆಯ ನಕ್ಷೆ (ಸಿ.ಡಿ.ಪಿ) ರೂಪಿಸಿ, ಬೇಕಾದ ಜಮೀನು ಅಧಿಗೃಹಣ ಮಾಡಿ/ಖರೀದಿಸಿ, ಅದರಲ್ಲಿ ಮೂಲಭೂತ ಸೌಕರ್ಯ, ರಸ್ತೆ, ಬೀದಿ ದೀಪ, ನೀರು, ಚರಂಡಿ, ಉದ್ಯಾನವನ, ಪೌರ ಸೌಲಭ್ಯ ನಿವೇಶನ, ಇವನ್ನೆಲ್ಲಾ ಕಲ್ಪಿಸಿ, ಮಿಕ್ಕ ನಿವೇಶನವನ್ನು ಜನರಿಗೆ ಹಂಚುತ್ತವೆ ಮತ್ತು ಅದರ ಖಾತೆ ನೀಡಿ, ಕಂದಾಯ ಸಂಗ್ರಹಿಸುತ್ತದೆ. ನಂತರ ಸಿಡಿಪಿಗೆ ಅನುಗುಣವಾಗಿ ಅಲ್ಲಿಯ ನಿರ್ಮಾಣ ಕಾರ್ಯ ನಡೆಯುವಂತೆ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಒಂದು ಬಡಾವಣೆ ಸಾಕಷ್ಟು ಅಭಿವೃದ್ದಿ ಹೊಂದಿದ ನಂತರ ಅದು ಮುನಿಸಿಪಲ್ ಕಾರ್ಪೊರೇಷನ್ ವ್ಯಾಪ್ತಿಗೆ ಬಂದು ಮತ್ತೊಮ್ಮೆ ಅದರ ಖಾತೆ ಆಗಿ, ಕಂದಾಯದ ಅಧಿಕಾರ ಕಾರ್ಪೊರೇಷನ್ನಿಗೆ ಹಸ್ತಾಂತರಗೊಳ್ಳುತ್ತದೆ. ಕಾರ್ಪೊರೇಷನ್ ಕೆಲಸ ಅಂದಿನಿಂದ ಇರುವ ಪೌರ ಸೌಲಭ್ಯಗಳನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗಬೇಕು ಮತ್ತು ನಗರ ಪ್ರದೇಶದ ಬೆಳವಣಿಗೆ ಸಿಡಿಪಿ/ಮಾಸ್ಟರ್ ಪ್ಲಾನ್ /ನಿಯಮಾವಳಿ ಮೀರದಂತೆ ನಿಯಂತ್ರಿಸಬೇಕು.

ನಿಯಂತ್ರಣದ ಅಡಿಯಲ್ಲಿ ವಿವಿಧ ಪರವಾನಗಿ ನೀಡುವುದು (ಉದಾ: ಕಟ್ಟಡ ನಿರ್ಮಾಣ ಪರವಾನಗಿ, ವಾಣಿಜ್ಯ ವ್ಯವಹಾರ ಪರವಾನಗಿ, ರಸ್ತೆ ಅಗೆಯುವ ಪರವಾನಗಿ, ಮುಂತಾದವು) ಬರುತ್ತವೆ. ನಿರ್ವಹಣೆ (ಮೇನ್ಟೆನೆನ್ಸ್) ಅಡಿಯಲ್ಲಿ, ನೀರು, ಒಳಚರಂಡಿ, ಬೀದಿ ದೀಪ, ಉದ್ಯಾನವನ, ಜನನ/ಮರಣ ನೋಂದಣಿ, ಮುಂತಾದವು ಬರುತ್ತವೆ. ಮೂರನೆಯ ಕೆಲಸವಾಗಿ ಸ್ವಲ್ಪ ಮಟ್ಟಿನ ಅಭಿವೃದ್ಧಿ ಕಾರ್ಯವನ್ನೂ ಸಹ ಕಾರ್ಪೊರೇಷನ್ ಮಾಡುತ್ತದೆ ಆದರೆ ಬಹಳ ಕಡಿಮೆ, ಪಾಳು ಬಿದ್ದ ಉದ್ಯಾನವನವನ್ನು ಸ್ವಚ್ಛಗೊಳಿಸಿ ಸುಂದರವಾಗಿ ಕಾಣುವಂತೆ ಮಾಡುವುದು ಅಭಿವೃದ್ಧಿ ಅಲ್ಲ, ಅದು ಕೇವಲ ಸರಿಯಾದ ನಿರ್ವಹಣೆ ಮತ್ತು ಪರಮ ಕರ್ತವ್ಯ. ರಸ್ತೆಯುದ್ದಕ್ಕೂ ವಾಣಿಜ್ಯ ಮಳಿಗೆ, ಬಹುಮಹಡಿ ಕಟ್ಟಡಗಳು ಬಂದಲ್ಲಿ ಅದು ಅಭಿವೃದ್ಧಿ ಅಲ್ಲ, ನಿಯಂತ್ರಣದ ವೈಫಲ್ಯ. ಅಭಿವೃದ್ಧಿಯಲ್ಲಿ ರಸ್ತೆ/ಒಳಚರಂಡಿ ಅಗಲೀಕರಣ, ಕೊಳಗೇರಿ ಅಭಿವೃದ್ಧಿ, ಸಾರ್ವಜನಿಕ  ಶೌಚಾಲಯ ನಿರ್ಮಾಣ ಇತ್ಯಾದಿ ಬರುತ್ತವೆ.

ಕಾರ್ಪೊರೇಷನ್ ಅಧಿಕಾರ/ಜವಾಬ್ದಾರಿ/ಕೆಲಸದ ಪಟ್ಟಿ ಪ್ರಮುಖವಾಗಿ ಸಂವಿಧಾನದಕಲಂ 243ಡಬ್ಲ್ಯೂ ಮತ್ತು ಸಂವಿಧಾನದ 74ನೆಯ ತಿದ್ದುಪಡಿ ಪ್ರಕಾರ ಸೇರಿಸಲ್ಪಟ್ಟ 12ನೆಯ ಅನುಸೂಚಿಯಲ್ಲಿ ಹೆಸರಿಸಿರುವ 18 ಕೆಲಸಗಳಾಗಿರುತ್ತವೆ – ಇದರಲ್ಲಿ ಭೂ ಬಳಕೆ, ಕಟ್ಟಡ ನಿರ್ಮಾಣ, ನಗರ ಯೋಜನೆ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ನಗರ ಬಡತನ ನಿರ್ಮೂಲನೆ, ನೀರು ಸರಬರಾಜು, ಅಗ್ನಿಶಾಮಕ ವ್ಯವಸ್ಥೆ, ಕೊಳಚೆ ಪ್ರದೇಶ ಅಭಿವೃದ್ಧಿ, ಸಮಾಜದ ವಿಕಲಾಂಗರೂ, ಬುದ್ಧಿಮಾಂದ್ಯರೂ ಸೇರಿದಂತೆ, ದುರ್ಬಲ ವರ್ಗದ ಹಿತರಕ್ಷಣೆ, ನಗರ ಅರಣ್ಯ ಮತ್ತು ಪರಿಸರ ಸಂರಕ್ಷಣೆ, ರಸ್ತೆ ಮತ್ತು ಸೇತುವೆ ನಿರ್ಮಾಣ, ಉದ್ಯಾನವನ, ಕ್ರೀಡಾಂಗಣ ಮುಂತಾದ ನಗರ ಸೌಲಭ್ಯ ನೀಡುವುದು, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸೌಂದರ್ಯದ ದೃಷ್ಟಿಯಿಂದ ಅಭಿವೃದ್ಧಿಗೆ ಉತ್ತೇಜನ ನೀಡುವುದು, ಸ್ಮಶಾನ, ರುದ್ರಭೂಮಿ, ಚಿತಾಗಾರ ವ್ಯವಸ್ಥೆ ಕಲ್ಪಿಸುವುದು, ಬಿಡಾಡಿ ರಾಸುಗಳ ದೊಡ್ಡಿ, ಪಶು ಹಿಂಸೆ ತಡೆಯುವುದು, ಕಸಾಯಿಖಾನೆ ಮತ್ತು ಚರ್ಮ ಹದಗೊಳಿಸುವ ವ್ಯವಸಾಯ ನಿಯಂತ್ರಣೆ, ಬೀದಿ ದೀಪ, ವಾಹನ ನಿಲುಗಡೆ, ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮುಂತಾದವು ಆಗಿರುತ್ತದೆ. ಕಾರ್ಪೊರೇಷನ್ ಆಡಳಿತವನ್ನು ಕರ್ನಾಟಕ ಮುನಿಸಿಪಲ್ ಕಾಯಿದೆ 1976 ಮತ್ತು ಇನ್ನೂ ಹಲವಾರು ಕಾಯಿದೆಗಳು ನಿಯಂತ್ರಿಸುತ್ತವೆ.

ಈ ಪೌರ ನಿಗಮ ಸದಸ್ಯರು ಪ್ರತಿ ವರ್ಷ ತಮ್ಮಲ್ಲೇ ಒಬ್ಬರನ್ನು ನಗರದ ಮಹಾಪೌರರಾಗಿ ಮತ್ತು ಉಪ-ಮಹಾಪೌರರಾಗಿ ಇನ್ನೊಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದೂ ಸಹ ಅಲಂಕಾರಿಕ ಹುದ್ದೆ ಆದರೆ ದಿರಿಸು, ಕಾರು, ಮನೆ ಮುಂತಾದ ಸೌಲಭ್ಯಗಳಂತೂ ಸಿಗುತ್ತವೆ. ಕೌನ್ಸಿಲ ಸಭೆಯ ಅಧ್ಯಕ್ಷತೆಯನ್ನು ಮಹಾಪೌರರು, ಅವರ ಅನುಪಸ್ಥಿತಿಯಲ್ಲಿ ಉಪ-ಮಹಾಪೌರರು ಮಾಡುತ್ತಾರೆ. ನಗರ ಸಭೆ ಸದಸ್ಯರು ತಮ್ಮ ಮೇಲುಸ್ತುವಾರಿ ಕೆಲಸ ನಿರ್ವಹಿಸಲು “ಸ್ಥಾಯೀ ಸಮಿತಿ” ಎಂಬ ಹಲವಾರು ಉಪ-ಸಮಿತಿಗಳನ್ನು ರಚಿಸಿಕೊಂಡು ತಮ್ಮಲ್ಲೇ ಒಬ್ಬರನ್ನು ಅದರ ಅಧ್ಯಕ್ಷ, ಮಿಕ್ಕವರನ್ನು ಸದಸ್ಯರನ್ನಾಗಿ ಮಾಡಿಕೊಂಡು, ಸಭೆ ಸೇರಿ, ಸಮಿತಿಯ ಶಿಫಾರಸ್ಸನ್ನು ಮಹಾಪೌರರಿಗೆ ಸಲ್ಲಿಸುತ್ತದೆ. ಇದನ್ನು ತಿಂಗಳ ಸಭೆಯಲ್ಲಿ ಚರ್ಚಿಸಿ, ಅನುಮೋದನೆಗೆ ಇಟ್ಟು, ಒಪ್ಪಿಗೆ ಪಡೆದ ನಂತರ, ಇದನ್ನು ಆಯುಕ್ತರು ಜಾರಿಗೆ ತರುತ್ತಾರೆ. ಬಿಬಿಎಂಪಿ ಯಲ್ಲಿ ಸದ್ಯಕ್ಕೆ 22 ಉಪ-ಸಮಿತಿ (ಸ್ಥಾಯೀ ಸಮಿತಿ) ಗಳಿದ್ದರೆ ಮೈಸೂರಿನಲ್ಲಿ 7 ಉಪ-ಸಮಿತಿಗಳಿರುತ್ತವೆ. ಓರ್ವ ಕಾರ್ಪೊರೇಟರ್ ಮಾಸಿಕ ಸಂಬಳ ಬೆಂಗಳೂರಿನಲ್ಲಿ ರೂ.7,500/- ಮತ್ತು ಇತರ ಮಹಾನಗರದಲ್ಲಿ ರೂ.5,000/- ಎಂದು ಕೇಳ್ಪಟ್ಟಿದ್ದೇನೆ. ಇದಲ್ಲದೆ ಪ್ರತಿ ತಿಂಗಳು ಅವರು ಸಭೆ ಸೇರುವ ಕೌನ್ಸಿಲ್ ಸಭೆಯ ಸಿಟ್ಟಿಂಗ್ ಫೀ ಎಂದು ರೂ. 500 ರಿಂದ – ರೂ.1,000/- ವರೆಗೆ (ವಾಹನ ಭತ್ಯೆ ಸೇರಿದಂತೆ) ಸಿಗುತ್ತದೆ. ಕಾರ್ಪೊರೇಟರ್ ಇತರ ನಿಯಮಿತ ಸಂಬಳದ ಹುದ್ದೆ ಮಾಡುವಂತಿಲ್ಲ. ಇಷ್ಟು ಕಡಿಮೆ ಸಂಬಳಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಯಾವ ವ್ಯಕ್ತಿ ಮುಂದಾಗುತ್ತಾನೆ ನನಗಂತೂ ಗೊತ್ತಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ಕಾರ್ಪೊರೇಟರ್ ಕೆಲಸ – ಬೆಳಗಿನಿಂದ ರಾತ್ರಿಯವರೆಗೆ ತನ್ನ ವಾರ್ಡಿನಲ್ಲಿ ಸಂಚರಿಸಿ, ಪೌರ ಸಮಸ್ಯೆಗಳನ್ನು ಅರಿತು, ಅದನ್ನು ಸರಿಯಾದ ವಿಭಾಗಕ್ಕೆ ನೀಡಿ, ಸಮಸ್ಯೆಯು ಸಮರ್ಪಕವಾಗಿ ಬಗೆಹರಿಸುವಂತೆ ನೋಡಿಕೊಳ್ಳಬೇಕು. ಪ್ರತಿ ತಿಂಗಳು ನಡೆಯುವ ಕೌನ್ಸಿಲ್ ಸಭೆಯಲ್ಲಿ ತನ್ನ ವಾರ್ಡಿನ ಬಗೆಹರಿಯದ ಸಮಸ್ಯೆಯನ್ನು ಅಧ್ಯಕ್ಷರ ಗಮನಕ್ಕೆ ತಂದು, ಆಡಳಿತ ವ್ಯವಸ್ಥೆಯಿಂದ ಅದಕ್ಕೆ ತ್ವರಿತ ಪರಿಹಾರವಾಗುವಂತೆ ನೋಡಿಕೊಳ್ಳಬೇಕು. ತಾನು ಸದಸ್ಯನಾಗಿರುವ ಉಪ-ಸಮಿತಿ ಕಾರ್ಯಕಲಾಪದಲ್ಲಿ ಭಾಗವಹಿಸಿ ಉಪ-ಸಮಿತಿ ವ್ಯಾಪ್ತಿಗೆ ಬರುವ ಇಡೀ ನಗರದ ಸಮಸ್ಯೆಯನ್ನು ಅರಿತು, ವೀಕ್ಷಿಸಿ, ಚರ್ಚಿಸಿ ಸಮಿತಿಯ ಶಿಫಾರಸ್ಸನ್ನು ಮಹಾಪೌರರಿಗೆ ನೀಡಬೇಕು. ತನ್ನ ವಾರ್ಡಿನಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳು/ಕೆಲಸಗಳು ಸಮರ್ಪಕವಾಗಿ ಇರುವಂತೆ ಖಾತ್ರಿಪಡಿಸಿಕೊಳ್ಳಬೇಕು. ತೊಂದರೆ ಏನಾದರೂ ಇದ್ದಲ್ಲಿ ಅದನ್ನು ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು. ತನ್ನ ವಾರ್ಡ್ ಯಾವ ಶಾಸಕರ ವ್ಯಾಪ್ತಿಗೆ ಬರುತ್ತದೋ ಅವರೊಂದಿಗೆ ತಮ್ಮ ವಾರ್ಡಿನ ಸಮಸ್ಯೆಯ ಬಗ್ಗೆ, ಅದಕ್ಕೆ ಬೇಕಾದ ಶಾಸಕರ ಸಹಕಾರ, ಅನುದಾನ, ಕಾನೂನು ತಿದ್ದುಪಡಿ ಇವುಗಳನ್ನು ಚರ್ಚಿಸಬೇಕು. ಇವಿಷ್ಟು ನ್ಯಾಯ-ಸಮ್ಮತವಾದ ಕರ್ತವ್ಯ. ಇದನ್ನು ಹೊರತು ಪಡಿಸಿ ಕಾರ್ಪೊರೇಟರ್ ಬೇಕಾದಷ್ಟು ಕೆಲಸ ಮಾಡುತ್ತಿರಬಹುದು ಅದರ ಬಗ್ಗೆ ಹೇಳಲು ನನಗೆ ಹೆಚ್ಚಿನ ಮಾಹಿತಿ/ಯೋಗ್ಯತೆ ಇಲ್ಲ. ಹಳೆಯ ದ್ವಿಚಕ್ರ ವಾಹನ ಓಡಿಸುತ್ತಿದ್ದ ಕಾರ್ಪೊರೇಟರ್ ಒಂದೆರಡು ವರ್ಷದಲ್ಲಿ ಹತ್ತು ಲಕ್ಷದ ಕಾರು ಖರೀದಿಸಿದ್ದು ಹೇಗೆ ಎಂದು ನನ್ನನ್ನು ಮಾತ್ರ ಕೇಳಬೇಡಿ.

ಇನ್ನು ಜನಸಾಮಾನ್ಯರಿಗೆ ಬಹೂಪಯೋಗಿ ಸಲಹೆ. ನಿಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪೌರ ಸೇವೆ/ಸಮಸ್ಯೆಗಳು ಯಾವುವು ಎಂದು ಪಟ್ಟಿ ಮಾಡಿ (ಉದಾ: ನೀರು, ಒಳ ಚರಂಡಿ, ರಸ್ತೆ ಹೊಂಡಗಳು, ಬಿದ್ದ ಮರ, ಬೀದಿ ದೀಪ, ಸತ್ತುಬಿದ್ದ ನಾಯಿ, ಭಿಕ್ಷುಕರು, ಕಟ್ಟಡ ನಿರ್ಮಾಣ ಪರವಾನಗಿ, ಜನನ-ಮರಣ ಪ್ರಮಾಣಪತ್ರ, ನಿರ್ವಹಣೆ ಇಲ್ಲದೆ ಕೊಂಪೆಯಾದ ಉದ್ಯಾನವನ ಅಥವಾ ಖಾಲಿ ನಿವೇಶನ, ಕುಡುಕರ ಹಾವಳಿ, ಬೀದಿ ನಾಯಿಗಳು, ….ಇತ್ಯಾದಿ). ಇದಕ್ಕೆ ಕಾರಣ ಯಾರು ಮತ್ತು ಪರಿಹಾರ ಒದಗಿಸಬೇಕಾದ ಜವಾಬ್ದಾರಿ ಇರುವ ಸರಕಾರಿ ಕಚೇರಿ/ಅಧಿಕಾರಿ ಯಾರು ಎಂಬುದನ್ನು ಪತ್ತೆ ಹಚ್ಚಿ. ಅವರ ಸಂಪೂರ್ಣ ಸಂಪರ್ಕ ವಿವರ ಹುಡುಕಿ ತೆಗೆದು ಗುರುತು ಹಾಕಿಕೊಳ್ಳಿ ಮತ್ತ ದೂರ ನೀಡಿ. ನಗರ ಪಾಲಿಕೆ ವ್ಯಾಪ್ತಿಗೆ ಬರುವ ವಿಷಯವಾದಲ್ಲಿ, ನಿಮ್ಮ ನಗರದಲ್ಲಿ ಕಾರ್ಪೊರೇಷನ್ ಸಹಾಯವಾಣಿ ಇದೆಯೇ, ಇದ್ದರೆ ಸಂಖ್ಯೆ ಏನು ತಿಳಿಯಿರಿ. (ಉದಾ: ಮೈಸೂರು ನಗರದಲ್ಲಿ ಸಹಾಯವಾಣಿ 1913 ಅಥವಾ 2418800) ಅದೇ ರೀತಿಯಲ್ಲಿ ಇತರ ಸ್ಥಳೀಯ ಸರಕಾರದ ಸಹಾಯವಾಣಿ ಇದ್ದಲ್ಲಿ ಅದನ್ನು ಕೈಗೆಟುಕುವಂತೆ ಇಟ್ಟುಕೊಳ್ಳಿ. (ಉದಾ: ವಿದ್ಯುತ್ಛಕ್ತಿ ಇಲಾಖೆ ಮೈಸೂರು ಚೆಸ್ಕಾಂ ಸಹಾಯವಾಣಿ 1912, ಮೈಸೂರು ವಾಣಿವಿಲಾಸ ನೀರು ಸರಬರಾಜು ಸಂಸ್ಥೆ ಸಹಾಯವಾಣಿ 1916). ಸಹಾಯವಾಣಿಗೆ ಕರೆಮಾಡಿ ಸಂಪೂರ್ಣ ವಿವರ ನೀಡಿ.

ಕೆಲವು ಸಮಸ್ಯೆ ಯಾರ ವ್ಯಾಪ್ತಿಗೆ ಬರುತ್ತದೆ ಎಂಬ ಮಾಹಿತಿ ಸುಲಭವಾಗಿ ದೊರಕದೆ ಇದ್ದರೆ ನಿಮ್ಮ ವಾರ್ಡಿನ ಕಾರ್ಪೊರೇಟರ್ ಕಚೇರಿ ಸಂಪರ್ಕಿಸಿ. ಸಾರ್ವಜನಿಕ ಅಧಿಕಾರಿ ವ್ಯಾಪ್ತಿಯಲ್ಲಿ ಬರುವ ಸಮಸ್ಯೆ ಬಗೆಹರಿಯದಿದ್ದರೆ ಆಗ ಅದನ್ನು ಹಿರಿಯ ಅಧಿಕಾರಿಯ ಗಮನಕ್ಕೆ ತನ್ನಿ. (ಉದಾ: ಕಸದ ಸಮಸ್ಯೆಗೆ ಆರೋಗ್ಯ ನಿರೀಕ್ಷಕ (ಹೆಲ್ತ್ ಇನ್ಸಪೆಕ್ಟರ್), ಮೇಲಧಿಕಾರಿ ವಲಯ ಪರಿಸರ ಅಭಿಯಂತರು, ಅವರ ಮೇಲಧಿಕಾರಿ ವಲಯ ಆಯುಕ್ತರು) ಅಲ್ಲೂ ಕೆಲಸ ಆಗದಿದ್ದಲ್ಲಿ ಕಾರ್ಪೊರೇಟರಿಗೆ ದೂರು ನೀಡಿ. ಕಾರ್ಪೊರೇಟರ್ ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಮಾತ್ರ ಅದನ್ನು ಮುನಿಸಿಪಲ್ ಆಯುಕ್ತರಿಗೋ ಅಥವಾ ಶಾಸಕರಿಗೋ, ನೀವು ಇದುವರೆಗೆ ಮಾಡಿರುವ ಪ್ರಯತ್ನದ ದಾಖಲೆಗಳೊಂದಿಗೆ, ಮನವಿ ಸಲ್ಲಸಿ. ಅವರೂ ಏನೂ ಮಾಡದಿದ್ದಲ್ಲಿ ಮಾಹಿತಿ ಹಕ್ಕು ಕಾನೂನಿನಡಿಯಲ್ಲಿ ಅರ್ಜಿ ಗುಜರಾಯಿಸಿ. ಶಾಸಕರು ಅಥವಾ ಸಂಸದರು ನಿಮ್ಮ ಕೇರಿಗೆ ಬಂದಾಗ ಕಟ್ಟಿಕೊಂಡಿರುವ ಚರಂಡಿಯ ಬಗ್ಗೆ ದೂರು ಸಲ್ಲಿಸಬೇಡಿ. ಅವರ ವ್ಯಾಪ್ತಿಗೆ ಬರುವ ವಿಷಯದ ಬಗ್ಗೆ ಪ್ರಶ್ನೆ ಕೇಳಿ. ಪೌರ ಸೇವೆ ನಿಮ್ಮ ಹಕ್ಕು. ಸರಕಾರಿ ನೌಕರರು ನಿಮ್ಮ ಸೇವಕರು. ಅವರಿಗೆ ಸಂಬಳ ನೀಡುವ ಮಾಲೀಕರು ನೀವು. ಬನ್ನಿ, ಜನಸಾಮಾನ್ಯರೇ, ನಿಮ್ಮ ಹಕ್ಕುಗಳನ್ನು ಚಲಾಯಿಸಿ. ನೀವೇ ಈ ದೇಶದ ಪ್ರಭು.


ಇದನ್ನೂ ಓದಿ: ಹವಾಮಾನ ಬಿಕ್ಕಟ್ಟು; ಇಡೀ ಭೂಮಿ ಧಗಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...