ಒಂದು ಟೊಟಾಲಿಟೇರಿಯನ್ ಅಂದರೆ ನಿರಂಕುಶ ಆಂದೋಲನದ ಸಂಕೇತವಾಗಿ ಹೊರಹೊಮ್ಮಿದ್ದು ಏನೆಂದರೆ ಅದು ಮಾಬ್‌ನ ಅಂದರೆ ಉಪಟಳ ನೀಡುವ ಜನರ ಉಪಸ್ಥಿತಿ. ಈ ಗುಂಪಿಗೆ ಕಾನೂನಿನ ಬಗ್ಗೆ ತಿರಸ್ಕಾರ ಇದ್ದು, ತನಗೆ ತೋಚಿದಂತೆ ಮಾಡುತ್ತದೆ, ಇದು ಕೊಲೆಗಳನ್ನು ಬಲಾತ್ಕಾರಗಳನ್ನು ಮತ್ತು ಆಸ್ತಿಪಾಸ್ತಿ ನಾಶಗೊಳಿಸುತ್ತ ಮುಂದುವರೆಯುತ್ತದೆ. ನಾಜಿ ಜರ್ಮನಿ ಮತ್ತು ಫ್ಯಾಸಿಸ್ಟ್ ಇಟಲಿ ಎರಡಕ್ಕೂ ಇದ್ದ ಒಂದು ಸಂಕೇತವೆಂದರೆ ಈ ಜನರ ಗುಂಪು, ಮಾಬ್ ಎಂಬುದು. ನಾಜಿ ಸಮಯದಲ್ಲಿ ಇಡೀ ವಿಶ್ವದ ಅಂತಸ್ಸತ್ವದಲ್ಲಿ ಅಚ್ಚಳಿಯದೇ ಉಳಿದ ಚಿತ್ರವೆಂದರೆ ಅದು, ಅಲ್ಲಿಯ ಸ್ಟಾರ್ಮ್ ಟ್ರೂಪರ್ ಎಂಬ ಹೆಸರಿನಿಂದ ಕರೆಯಲ್ಪಟ್ಟ ಜನರು ಗುಂಪು ಬೇಕಾಬಿಟ್ಟಿಯಾಗಿ ಯಾವುದೇ ಶಿಕ್ಷೆಯ ಭಯವಿಲ್ಲದೇ ಯಹೂದಿಗಳ ಅಂಗಡಿಗಳನ್ನು, ಪ್ರಾರ್ಥನೆ ಮಾಡುವ ಸ್ಥಾನಗಳನ್ನು ಮತ್ತು ಮನೆಗಳನ್ನು ನಾಶಪಡಿಸಿದ್ದು.
ಭಾರತದಲ್ಲಿ ರಾಮನವಮಿಯ ಸಂದರ್ಭದಲ್ಲಿ ಕಂಡಿದ್ದೂ ಈ ಮಾಬ್‌ನ ಆಳ್ವಿಕೆ. ದೇಶದಲ್ಲಿ ದೆಹಲಿ, ಗುಜರಾತ್, ಪಶ್ಚಿಮ ಬಂಗಾಳ, ರಾಜಸ್ಥಾನ, ಕರ್ನಾಟಕ, ಆಂಧ್ರ ಪ್ರದೇಶ, ಝಾರ್ಖಂಡ ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯವನ್ನು ಕೆರಳಿಸಲು ತೆರಳಿದ ಯುವಜನರ ಗುಂಪುಗಳಿಂದ ರಾಮನವಮಿಯ ಪವಿತ್ರ ದಿನವು ಕಳಂಕಿತವಾಯಿತು. ರಾಮನವಮಿಯ ಸಂಭ್ರಮಾಚರಣೆಯ ಅರ್ಥವನ್ನು ಆಕ್ರಮಣಕಾರಿ ಮೆರವಣಿಗೆಗಳು, ಖಡ್ಗ ಮತ್ತು ಇತರ ಆಯುಧಗಳನ್ನು ಹಿಡಿದು ಪ್ರದರ್ಶಿಸುವುದು, ಮಸೀದಿಗಳು ಹೊರಗೆ ನಿಂತು ಪ್ರಚೋದನಾಕಾರಿ ಘೋಷಣೆಗಳನ್ನು ಕೂಗುವುದು, ಮಸೀದಿಗಳ ಒಳನುಗ್ಗುವ ಪ್ರಯತ್ನ ಇತ್ತು ಅಲ್ಲಿ ಕೇಸರಿ ಧ್ವಜ ನೆಡುವ ಕ್ರಿಯೆಗಳು ಎಂದು ಈ ಮಾಬ್ ಬದಲಿಸಿಬಿಟ್ಟಿತು. ಈ ಯಾರಿಗೂ ಬೇಕಾಗಿಲ್ಲದ ಪ್ರಚೋದನೆಯಿಂದ ಕೆಲವು ಕಡೆ ಪ್ರತಿಕ್ರಿಯೆ ಕಾಣಿಸಿಕೊಂಡು, ಅಲ್ಲಿ ಕೋಮು ಗಲಭೆಗಳೂ ನಡೆಯುವಂತಾಯಿತು.
ಗಲಭೆಗಳ ನಂತರ, ಪೊಲೀಸರಾಗಲಿ ಅಥವಾ ಆಡಳಿತವಾಗಲೀ ನ್ಯಾಯಯುತವಾದ ರೀತಿಯಲ್ಲಿ ವರ್ತಿಸಲಿಲ್ಲ ಹಾಗೂ ಬಹುತೇಕ ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಲಾಯಿತು ಆದರೆ, ಹಿಂದೂ ಪ್ರಚೋದನಾಕಾರರ ಕಾನೂನಿನ ಕೈಯಿಂದ ತಪ್ಪಿಸಿಕೊಂಡರು. ಮಧ್ಯಪ್ರದೇಶದ ಪೊಲೀಸರು ಹಿಂದೆಂದೂ ಕೇಳದಂತಹ ಪಕ್ಷಪಾತಿ ನಿಲುವು ತೆಗೆದುಕೊಂಡು, ಕಲ್ಲು ಎಸೆದಿದ್ದಾರೆ ಎಂದು ಪರಿಗಣಿಸಲಾದ ಮನೆಗಳನ್ನು ಕಾನೂನುಬಾಹಿರವಾಗಿ ಧ್ವಂಸಗೊಳಿಸಿದರು.
ಯಾವಾಗ ಪ್ರಭುತ್ವವು ಇಂತಹ ವಿಜಿಲಾಂಟೆ ಗುಂಪುಗಳಿಗೆ ಹಿಂಸೆಗೆ ಪ್ರಚೋದಿಸಲು, ಶುರು ಮಾಡಲು ಅನುವು ಮಾಡಿಕೊಡುತ್ತದೋ ಆಗ ಆ ಪ್ರಭುತ್ವ ಕಾನೂನು ಸುವ್ಯವಸ್ಥೆಯ ಮೇಲೆ ತನಗಿರುವ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಅದು ತನ್ನ ಸಂವಿಧಾನಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದೆ ಎಂದರ್ಥ. ಯಾವಾಗ ಪ್ರಭುತ್ವವೇ ಆಸ್ತಿಪಾಸ್ತಿ ಧ್ವಂಸ ಮಾಡಿ ಈ ಮಾಬ್‌ಗಳ ಒಂದು ಅಂಗವಾಗಿ ಕೆಲಸ ಶುರು ಮಾಡುತ್ತದೆಯೋ, ಆಗ ಅದು ಒಂದು ಅಪರಾಧೀ ಪ್ರಭುತ್ವವಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹಿಂದುತ್ವ ಸಂಘಟನೆಗಳ ಪ್ರಚೋದನಾಕಾರಿ ಮತ್ತು ಅಸಂವಿಧಾನಿಕ ಕ್ರಮಗಳು ಹಾಗೂ ಅದರಲ್ಲಿ ಪ್ರಭುತ್ವವೂ ಕೈಜೋಡಿಸಿರುವುದು ಹಿಂದೂ ಸಮಾಜವನ್ನು ಇನ್ನಷ್ಟು ರ್‍ಯಾಡಿಕಲ್ ಸಮಾಜವನ್ನಾಗಿಸುತ್ತವೆ. ಅನುಭೂತಿ, ಸಹಾನುಭೂತಿ ಮತ್ತು ಭ್ರಾತೃತ್ವದ ಭಾವನೆಗಳು ದ್ವೇಷ ಭಾಷಣಗಳ ದೊಡ್ಡ ಅಲೆಗಳಲ್ಲಿ ಮುಳುಗಿಹೋಗುತ್ತಿವೆ. ಹಾಗೂ ಈ ದ್ವೇಷ ಭಾಷಣಗಳು ಮುಸ್ಲಿಂ ಸಮುದಾಯವನ್ನು ಅಮಾನವೀಯಗೊಳಿಸುತ್ತಿವೆ. ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ ಎಲ್ಲರಿಗೂ ಸಮಾನತೆಯಿಂದ ಕಾಣಬೇಕೆನ್ನುವ ಸಂವಿಧಾನಿಕ ಮೌಲ್ಯಕ್ಕೆ ಬದ್ಧರಾಗಿರಬೇಕಾದ ಪ್ರಭುತ್ವವು ಕಾನೂನಿನ ಆಳ್ವಿಕೆಯ ಪರಿಕಲ್ಪನೆಯನ್ನು ಪದೇಪದೇ ತುಳಿದು ಹೊಸಕಿಹಾಕುತ್ತಿರುವುದು ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಲಿದೆ.
ಇಯಾನ್ ಕೆರ್ಶಾ, ಹಿಟ್ಲರ್‌ನ ಎರಡು ಸಂಪುಟಗಳ ಜೀವನ ಚರಿತ್ರೆ ಬರೆದವರು, ಅಲ್ಲಿ ನಡೆದ ನರಮೇಧ ಬೀಜಗಳು ಎಲ್ಲಿ ಕಾಣಿಸಿಕೊಂಡವು ಎಂದು ಸರಿಯಾಗಿ ಗುರುತಿಸುತ್ತಾರೆ; ಯಹೂದಿಗಳ ವ್ಯಾಪಾರಗಳಿಗೆ ಬಹಿಷ್ಕಾರ ಹಾಕುವ ಯಹೂದಿ ವಕೀಲರ ನೋಂದಣಿ ರದ್ದುಪಡಿಸುವ, ಈಜುಕೊಳಗಳಲ್ಲಿ, ಸಾರ್ವಜನಿಕ ಪಾರ್ಕ್‌ಗಳಲ್ಲಿ, ಗ್ರಂಥಾಲಯ ಮುಂತಾದ ಸ್ಥಳಗಳಲ್ಲಿ ಅವಕಾಶ ನೀಡಬಾರದು ಎಂಬಂತಹ ಯಶಸ್ವಿ ಕರೆಗಳಿಂದ ಜರ್ಮನ್ ಸಮಾಜವು ಆಗಲೇ ರ್‍ಯಾಡಿಕಲೈಸ್ ಆಗಿತ್ತು. ಅಲ್ಲಿಯೇ ಮುಂದೆ ಆಗುವ ನರಮೇಧದ ಬೀಜಗಳಿದ್ದವು. ಬಹಿಷ್ಕಾರದ ಕರೆಗಳಿಗೆ ಜರ್ಮನ್ ಸಮಾಜದಲ್ಲಿ ಯಾವುದೇ ಪ್ರತಿರೋಧ ಕಾಣದೇ ಇದ್ದಾಗ ಜರ್ಮನ್ ಜನರು ಇನ್ನಷ್ಟು ರ್‍ಯಾಡಿಕಲೈಸ್ ಆಗುವುದಕ್ಕೆ ಕಾರಣವಾಯಿತು. ಇದರಿಂದ ಆಗಿದ್ದೇನೆಂದರೆ, ’ಯಹೂದಿಗಳೆಂದರೆ ಅದು ಇನ್ನೊಂದು ಬೇರೆಯ ಜನಾಂಗ’ ಎಂಬ ಕಲ್ಪನೆ ಜರ್ಮನ್ ಜನರಲ್ಲಿ ಬೀರುಬಿಟ್ಟಿತು. ಯಾವಾಗ ಯಹೂದಿಗಳು ಮತ್ತೊಂದು ರೇಸ್ ಅಥವಾ ಜನಾಂಗ ಎಂತಲೂ ಹಾಗೂ ಅವರು ಜರ್ಮನಿಯ ಸಂಸ್ಕೃತಿ ಮತ್ತು ನಾಗರಿಕತೆಯ
ಭಾಗವಲ್ಲ ಎಂದು ಕಾಣಲಾಯಿತೋ, ಆಗ ನರಮೇಧ ಕೇವಲ ಆಲೋಚನೆಯಾಗಿ ಉಳಿಯಲಿಲ್ಲ, ಅದು ಸಾಧಿಸಬಹುದಾದ ವಿಷಯವಾಯಿತು.
ನಿಸ್ಸಂಶಯವಾಗಿ, ಭಾರತದ ಈ ಗುಂಪುಗಳು, ಅವರ ವಿರುದ್ಧ ತಾರತಮ್ಯ ಮಾಡಿ ಎಂಬ ಕರೆಗಳೊಂದಿಗೆ ಮುಸ್ಲಿಂ ಸಮುದಾಯವನ್ನು ಸತತವಾಗಿ ಅಮಾನವೀಯಗೊಳಿಸುವುದು ಭಾರತವನ್ನು ಅಂತಹದ್ದೇ ಒಂದು ಅಪಾಯಕಾರಿ ದಾರಿಯಲ್ಲಿ ಕೊಂಡೊಯ್ಯುತ್ತಿವೆ. ಹಿಂದೂ ಸಮಾಜದ ರ್‍ಯಾಡಿಕಲೈಸೇಷನ್ ಪ್ರಕ್ರಿಯೆಯನ್ನು ನಿಲ್ಲಿಸಬೇಕಾದರೆ ನಮ್ಮೆದುರಿಗಿರುವ ದಾರಿ ಯಾವುದು?
ನಾಜಿ ಉದಾಹರಣೆಗೆ ಮರಳಿದರೆ, ಅಲ್ಲಿ ಆ ರೀತಿಯ ಯಶಸ್ವಿಯಾಗಿ ರ್‍ಯಾಡಿಕಲೈಸೇಷನ್ ಹೇಗಾಯಿತು ಎಂದು ನೋಡಿದರೆ ಅದಕ್ಕೆ ಕಾರಣ, ಬಹುಸಂಖ್ಯಾತರ ಮೌನವಾಗಿದೆ. ನಾವೂ ಆ ದಾರಿಯನ್ನು ತುಳಿಯಬಾರದು ಎಂತಾದರೆ, ಹಿಂದೂ ಸಮಾಜದ ಬಹುಸಂಖ್ಯಾತರು ಗಟ್ಟಿಯಾಗಿ ಮಾತನಾಡಲು ಶುರುಮಾಡುವುದು ಅತ್ಯಗತ್ಯವಾಗಿದೆ. ಹಿಂಸೆಯ ಈ ಅವಧಿಯಲ್ಲಿಯೂ, ಹಲವಾರು ಸಭ್ಯತೆಯ ಮತ್ತು ವಿವೇಕದ ಧ್ವನಿಗಳು ಕಂಡುಬಂದವು. ಈ ಧ್ವನಿಗಳನ್ನು ಎಲ್ಲೆಡೆ ಪ್ರತಿಧ್ವನಿಸುವಂತೆ ಮಾಡಬೇಕಿದೆ. ಪಿಎಸ್ ಡಾಂಗೆ ಎಂಬ ಜಹಾಂಗೀರಪುರಿಯ ವ್ಯಾಪಾರಿಯೊಬ್ಬರು, ಕೋಮುಗಲಭೆಗೆ ಸಾಕ್ಷಿಯಾದ ನಂತರ ಹೀಗೆ ಹೇಳಿದರು, “ನಾವು ಅನೇಕ ಕಾಲದಿಂದ ಶಾಂತಿಯಿಂದ ಜೀವಿಸುತ್ತಿದ್ದೇವೆ. ಶೋಭಾಯಾತ್ರೆಯಲ್ಲಿ ಖಡ್ಗಗಳನ್ನು ಮತ್ತು ಆಯುಧಗಳನ್ನು ತೆಗೆದುಕೊಂಡು ಬರುವ ಅವಶ್ಯಕತೆ ಏನಿದೆ ಎಂಬುದು ನನಗೆ ತಿಳಿಯುತ್ತಿಲ್ಲ. ಹಾಗೂ ಮಸೀದಿಯ ಎದುರಿನ ರಸ್ತೆಯಲ್ಲಿಯೇ ಹಾದುಹೋಗಿ, ಅಲ್ಲಿ ಪ್ರಚೋದನಾಕಾರಿ ಘೋಷಣೆ ಕೂಗುವ ಅವಶ್ಯಕತೆ ಏನಿದೆ ಎಂಬುದು ಗೊತ್ತಾಗುತ್ತಿಲ್ಲ. ಇದು ಸರಿ ಅಲ್ಲ.” ಸಾಮಾನ್ಯ ಜನರ ಇಂತಹ ಧ್ವನಿಗಳಿಗೆ ಮಾಧ್ಯಮಗಳು ಹೆಚ್ಚಿನ ಸಮಯ ಮತ್ತು ಸ್ಥಳಾವಕಾಶ ನೀಡಬೇಕಿದೆ.
ಹಿಟ್ಲರ್‌ನ ಆರಂಭಿಕ ದಿನಗಳಲ್ಲಿ ಮೌನ ವಹಿಸಿದ ಜನರಿಗೆ ಇದ್ದ ಭ್ರಮೆ ಏನೆಂದರೆ, ಇವರ ಗುರಿ ಯಹೂದಿಗಳಷ್ಟೇ ಆಗಿದ್ದು ಬೇರೆ ಯಾವ ಗುಂಪೂ ಅಲ್ಲ ಎಂದು. ಯಹೂದಿಗಳ ಮೇಲಿನ ಯುದ್ಧದಲ್ಲಿ ತಮ್ಮ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ ಎಂದುಕೊಂಡಿದ್ದರು. ಜರ್ಮನಿಯಲ್ಲಿ ಮೌನವಾಗಿದ್ದವರಲ್ಲಿ ಬುದ್ಧಿಜೀವಿಗಳು, ಧಾರ್ಮಿಕ ನಾಯಕರು ಮತ್ತು ಕೈಗಾರಿಕೋದ್ಯಮಗಳನ್ನು ಒಳಗೊಂಡ ಶಕ್ತಿಶಾಲಿ ವಲಯವೂ ಇತ್ತು.
ಬುದ್ಧಿಜೀವಿಗಳ ಕೆಲವು ವಲಯಗಳು ನಾಜಿಗಳನ್ನು ಬೆಂಬಲಿಸಿದರು. ಹಿಟ್ಲರ್‌ನನ್ನು ವಿರೋಧಿಸಿದವರನ್ನು ಒಂದೋ ಕೊಲ್ಲಲಾಯಿತು ಅಥವಾ ದೇಶದಿಂದ ಹೊರದಬ್ಬಲಾಯಿತು. ಬಹುತೇಕರು ಮೌನವಾಗಿದ್ದರು. ಆದರೆ ಇತಿಹಾಸ ಮುಂದೆ ತೋರಿಸಿದ್ದೇನೆಂದರೆ, ಈ ಬುದ್ಧಿಜೀವಿಗಳ ಮೌನಕ್ಕೆ ಅತ್ಯಂತ ದೊಡ್ಡ ಬೆಲೆ ತೆರಬೇಕಾಯಿತು. ಭಾರತ ನಾಜಿ ಜರ್ಮನಿ ತುಳಿದ ದಾರಿಯನ್ನು ತುಳಿಯಬಾರದು ಎಂದಿದ್ದಲ್ಲಿ, ಭಾರತದಲ್ಲಿ ಬುದ್ಧಿಜೀವಿಗಳು ಗಟ್ಟಿಯಾಗಿ ಮಾತನಾಡಲು ಶುರು ಮಾಡಬೇಕು. ಕರ್ನಾಟಕದಲ್ಲಿ ದೇವನೂರ ಮಹಾದೇವರಂತಹ ಲೇಖಕರು ಮತ್ತು ಚೇತನ್‌ನಂತಹ ನಟರು ಮಾತನಾಡುತ್ತಲೇ ಇದ್ದಾರೆ. ಅದೇ ಸಮಯದಲ್ಲಿ ಇತರ ಅನೇಕ ಲೇಖಕರು, ನಟರು, ಶಿಕ್ಷಕರು ಮತ್ತು ವಿಜ್ಞಾನಿಗಳ ಮೌನವು ಕೆಟ್ಟ ಪರಿಣಾಮ ಬೀರುತ್ತಿದೆ. ಸಂವಿಧಾನಿಕ ಮೌಲ್ಯಗಳ ಪರವಾಗಿ ಇವರೆಲ್ಲರೂ ಮಾತನಾಡಬೇಕಿದೆ.
ಕೈಗಾರಿಕೋದ್ಯಮಿಗಳ ಮೌನ ಅಥವಾ ಅದಕ್ಕಿಂತ ಹೆಚ್ಚಾಗಿ ಕೈಗಾರಿಕೋದ್ಯಮಗಳು ನಾಜಿ ಆಳ್ವಿಕೆಯೊಂದಿಗೆ ಶಾಮೀಲಾಗಿದ್ದ ಕಾರಣಕ್ಕೂ ಅತ್ಯಂತ ದೊಡ್ಡ ಬೆಲೆ ತೆರಬೇಕಾಯಿತು. ಐ.ಜಿ. ಫಾರ್ಬೆನ್, ಕ್ರಪ್ ಮತ್ತು ತ್ಸೆನ್ ಹಾಗೂ ಡ್ಯೂಷ್ ಬ್ಯಾಂಕ್‌ನಂತಹ ದೊಡ್ಡ ಬ್ಯಾಂಕಗಳು ಅದರೊಂದಿಗೆ ಅನೇಕ ಸಣ್ಣ ವ್ಯಾಪಾರಿ ಸಂಸ್ಥೆಗಳು ಯಹೂದಿಗಳ ವ್ಯಾಪಾರವನ್ನು ಕಬಳಿಸಿಕೊಂಡು, ಅವರಿಗೆ ಬಹಿಷ್ಕಾರ ಹಾಕಿ, ಅವರ ಸ್ಥಾನಗಳನ್ನು ಕಬಳಿಸಿಕೊಂಡು, ಆ ಸಮಯದ ಅತ್ಯಂತ ದೊಡ್ಡ ಫಲಾನುಭವಿಗಳಾಗಿದ್ದವು. ಭಾರತದಲ್ಲೂ, ಒಂದೆಡೆ ಈ ಆಳ್ವಿಕೆಯ ನೀತಿಗಳಿಂದ ಲಾಭ ಗಳಿಸಿಕೊಳ್ಳುವ ಅತಿ ದೊಡ್ಡ ಕಾರ್ಪೊರೆಟ್ ವ್ಯಾಪಾರಿ ಸಂಸ್ಥೆಗಳು ಮತ್ತು ಸಣ್ಣ ವ್ಯಾಪಾರಿ ಸಂಸ್ಥೆಗಳಿದ್ದರೂ, ಹೆಚ್ಚಿನ ವ್ಯಾಪಾರಗಳಿಗೆ ಸಾಮಾಜಿಕ ಸಾಮರಸ್ಯ ಕೆಡುವುದರಿಂದ ಅವರಿಗೆ ನಷ್ಟವೇ ಆಗಲಿದೆ. ಇದನ್ನು ಅರಿತ ಉದ್ದಿಮೆದಾರರಲ್ಲಿ ಒಬ್ಬರು ಬಯಾಕಾನ್‌ನ ಕಿರಣ್ ಮಜುಮದಾರ್ ಶಾ. ಅವರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಈ ರೀತಿ ಹೇಳಿಕೆ ನೀಡಿದರು: “ಕರ್ನಾಟಕವು ಎಂದಿಗೂ ಎಲ್ಲರನ್ನು ಒಳಗೊಳ್ಳುವ ಆರ್ಥಿಕ ಅಭಿವೃದ್ಧಿಯನ್ನು ಪಾಲಿಸಿದೆ ಹಾಗೂ ನಾವು ಇಂತಹ ಕೋಮುವಾದಿ ಬಹಿಷ್ಕಾರಕ್ಕೆ ಅನುವು ಮಾಡಿಕೊಡಬಾರದು.’ ಹಾಗೂ ’ಒಂದು ವೇಳೆ ಐಟಿಬಿಟಿ ಕೋಮುವಾದಿಯಾದರೆ ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಗೊಳಿಸಲಿದೆ’ ಎಂದರು. ’ಚಿಂತನಶೀಲ ನಾಯಕರು’ ಎಂದು ಕರೆದುಕೊಳ್ಳುವ ಉದ್ಯಮದ ಇತರ ಹಿರಿಯರೂ ಇತಿಹಾಸದ ಈ ನಿರ್ಣಾಯಕ ಗಳಿಗೆಯಲ್ಲಿ ಧ್ವನಿ ಎತ್ತುವುದು ಬಹುಮುಖ್ಯವಾಗಿದೆ.
ಕೊನೆಯದಾಗಿ, ಹೊಲೊಕಾಸ್ಟ್ ಅಂದರೆ ಯಹೂದಿಗಳ ಮಾರಣಹೋಮಕ್ಕೆ ಕಾರಣವಾಗಿದ್ದು ಮುಖ್ಯವಾಹಿನಿಯ ಧಾರ್ಮಿಕ ನಾಯಕರ ಮೌನ. ಕ್ರಿಶ್ಚಿಯನ್ ಧರ್ಮದ ಮೂಲ ತತ್ವಗಳ ವಿರುದ್ಧವೇ ಹಿಟ್ಲರ್ ಎಲ್ಲವನ್ನೂ ಮಾಡಿದರೂ ಆಗಿನ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್ ಚರ್ಚ್‌ಗಳು ಪ್ರತಿರೋಧ ತೋರಲಿಲ್ಲ. ಭಾರತದಲ್ಲಿಯೂ ಧಾರ್ಮಿಕತೆಯನ್ನು ತೀವ್ರವಾದಿ ಶಕ್ತಿಗಳು ಹೈಜಾಕ್ ಮಾಡಲು ಅನುವು ಮಾಡಿಕೊಟ್ಟು, ಇಲ್ಲಿನ ಧಾರ್ಮಿಕ ನಾಯಕರು ಮೌನವಹಿಸಿರುವುದು ಸಮಾಜವನ್ನು ಕಾಡುತ್ತಿದೆ. ಧ್ರುವೀಕರಣದ ನಿಲುವಿಗೆ ವಿರುದ್ಧವಾಗಿ ಬುದ್ಧನ ಮತ್ತು ಬಸವಣ್ಣನ ವಿಚಾರಗಳನ್ನು ಎತ್ತಿಹಿಡಿದು ಧಾರ್ಮಿಕ ನಾಯಕರು ನಿಲುವು ತೆಗೆದುಕೊಂಡು ಮಾತನಾಡಬೇಕಿದೆ.
ಭಾರತೀಯ ಸಂವಿಧಾನದಲ್ಲಿ ನಂಬಿಕೆ ಇರುವ ಭಾರತೀಯ ಸಮಾಜದ ಎಲ್ಲಾ ವಲಯಗಳೂ ತಡವಾಗುವುದಕ್ಕೂ ಮುನ್ನ ಮಾತನಾಡಬೇಕಿದೆ. ನಾಜಿಗಳಿಂದ ಶಿಕ್ಷೆಗೊಳಗಾಗಿದ್ದ ಖ್ಯಾತ ಪ್ರತಿರೋಧದ ಪ್ರೀಸ್ಟ್, ಪ್ಯಾಸ್ಟರ್ ನೀಮೊಲರ್ ಹೇಳಿದ ಮಾತುಗಳು ಇನ್ನಷ್ಟು ಪ್ರಸ್ತುತ ಎನಿಸುತ್ತವೆ:
ಮೊದಲವರು
ಸಮಾಜವಾದಿಗಳನ್ನು
ಹುಡುಕಿ ಬಂದರು
ನಾನು ಸುಮ್ಮನಿದ್ದೆ
ಏಕೆಂದರೆ
ನಾನು ಸಮಾಜವಾದಿ ಆಗಿರಲಿಲ್ಲ ..
ನಂತರ ಅವರು
ಟ್ರೇಡ್ ಯೂನಿಯನಿಸ್ಟ್‌ರನ್ನು
ಹುಡುಕಿ ಬಂದರು
ನಾನು ಸುಮ್ಮನಿದ್ದೆ
ಏಕೆಂದರೆ
ನಾನು ಟ್ರೇಡ್ ಯೂನಿಯನಿಸ್ಟ್ ಆಗಿರಲಿಲ್ಲ ..
ನಂತರ ಅವರು
ಯಹೂದಿಗಳನ್ನು
ಹುಡುಕಿ ಬಂದರು
ನಾನು ಸುಮ್ಮನಿದ್ದೆ
ಏಕೆಂದರೆ
ನಾನು ಯಹೂದಿಯಾಗಿರಲಿಲ್ಲ.
ಕೊನೆಗೆ ಅವರು
ನನ್ನನ್ನೇ
ಹುಡುಕಿ ಬಂದರು
ಆಗ ನನಗಾಗಿ
ಧ್ವನಿ ಎತ್ತುವವರು
ಯಾರೂ ಇರಲಿಲ್ಲ………
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆ ನ ರಾಜ್ಯಾಧ್ಯಕ್ಷರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಕರ್ನಾಟಕದಲ್ಲಿ ಮುಸ್ಲಿಮರ ವಿರುದ್ಧ ಶತಮಾನದ ಕೋಮು ದಾಳಿಗಳು


