ಇಂಗ್ಲಿಷಿನಲ್ಲಿ ಒಂದು ಗಾದೆ ಮಾತಿದೆ- “Taste Yours Words Before Spitting”- “ಉಗುಳುವ ಮೊದಲು ನೀನಾಡುವ ಶಬ್ದಗಳ ರುಚಿ ನೋಡು” ಎಂದು. ಅತ್ಯಂತ ಸರಳವಾಗಿ ಮಾತಿನಿಂದಾಗುವ ಅನಾಹುತಗಳ ಬಗ್ಗೆ ಎಚ್ಚರಿಸಲು ಬಳಸಬಹುದಾದ ಗಾದೆ. ಆದರೆ ಇಂದಿನ ವಿಪರ್ಯಾಸವೆಂದರೆ ಮಾತಾಡುವ ಮೊದಲು ಯೋಚಿಸುವ ವ್ಯವಧಾನ ಯಾರಿಗೂ ಇಲ್ಲ ಅಥವಾ ಅಗತ್ಯ ಅವರಿಗೆ ಕಂಡು ಬರುತ್ತಿಲ್ಲ.
ದ್ವೇಷದ ಭಾಷೆ ಅಥವಾ ಹಗೆನುಡಿಯ ಪ್ರತಿಪಾದಕರು ಶೀಘ್ರ ಖ್ಯಾತಿಹೊಂದುವ ಅತ್ಯಂತ ಸುಲಭವಾಗಿ ಸುದ್ದಿ ಮಾಧ್ಯಮಗಳಲ್ಲಿ ಮಿಂಚುವ ಖಯಾಲಿಯಿಂದ ಆಡುವ ಮಾತುಗಳು ಒಂದು ಇಡೀ ಸಮಾಜದ ಸ್ವಾಸ್ಥ್ಯವನ್ನು ಅದೆಷ್ಟು ಹದಗೆಡಿಸಬಹುದು ಎಂಬುದು ಇಂದು ಕಾಣದಿದ್ದರೂ ಭವಿಷ್ಯದ ದಿನಗಳಲ್ಲಿ ಹೆಚ್ಚು ಸ್ಪಷ್ಟವಾಗಲಿದೆ. ಜಗತ್ತಿನಾದ್ಯಂತ ಇಂಥದೇ ಜನಾಂಗೀಯ ಭೇದ ಅಥವಾ ಕೋಮುದ್ವೇಷ ಕಾರುವ ರಾಜಕೀಯದಿಂದ ಅನೇಕ ದೊಡ್ಡ ಮತ್ತು ಚಿಕ್ಕ ದೇಶಗಳು ನಮ್ಮ ಕಣ್ಣೆದುರೇ ಹಾಳಾಗುತ್ತಿರುವುದನ್ನು ನೋಡಿಯೂ ನಾವು ಕಣ್ಣು ತೆರೆಯದಿದ್ದರೆ ಇತಿಹಾಸ ಈ ಹೊಣೆಗೇಡಿತನವನ್ನು ಎಂದಿಗೂ ಕ್ಷಮಿಸದು.

Hate Speech ಎಂಬುದು ಹೊಸದೇನಲ್ಲ ಅಥವಾ ನಮ್ಮ ದೇಶಕ್ಕೆ ಮಾತ್ರ ಸೀಮಿತವಾದದ್ದೂ ಅಲ್ಲ. ಹಿಟ್ಲರ್, ಮುಸಲೋನಿ, ಈದಿ ಅಮೀನರಂತಹ ಜನಾಂಗ ದ್ವೇಷದ ಹರಿಕಾರರು ಲಕ್ಷಾಂತರ ಜನರ ಮೆದುಳುಗಳನ್ನು ನಿಷ್ಕ್ರಿಯಗೊಳಿಸಲು ಯಶಸ್ವಿಯಾಗಿದ್ದು, ಜನರು ತಮ್ಮತಮ್ಮಲ್ಲೇ ಹೊಡೆದಾಡಿ ಸಾಯುವಂತೆ ಮಾಡಲು ಸಾಧ್ಯವಾದದ್ದು ಈ Hate Speech ಅಥವಾ ಹಗೆನುಡಿಯಿಂದಲೇ. ಇಂದು ಶ್ರೀಲಂಕಾದ ಜನತೆ ಊಟಕ್ಕೂ ಗತಿ ಇಲ್ಲದೆ ದೋಣಿಗಳಲ್ಲಿ ಅಕ್ರಮವಾಗಿ ಭಾರತ ಅಥವಾ ಇತರ ದೇಶಗಳಿಗೆ ತೆರಳಿ ನಿರಾಶ್ರಿತರ ಕ್ಯಾಂಪ್‌ಗಳಲ್ಲಿ ಬದುಕುವಂತೆ ಮಾಡುತ್ತಿರುವುದು ಇಂಥದೇ ಜನಾಂಗ ದ್ವೇಷದ ಕಾರಣದಿಂದ.
ಈ ಮೊದಲು ಈ ದೇಶದಲ್ಲಿದ್ದ ಹಗೆನುಡಿಯ ಕಾರಣದಿಂದ ಅನೇಕ ಬಾರಿ ದಂಗೆಗಳಾಗಿವೆ, ಹತ್ಯಾಕಾಂಡಗಳು ನಡೆದಿವೆ. ಆದರೆ ಸುರಂಗದಾಚೆಗಿನ ಬೆಳಕಿನಂತೆ ಅವೆಲ್ಲ ಅಂದಿನ ಮುತ್ಸದ್ಧಿ ನಾಯಕರು ಅಥವಾ ನಿಷ್ಟುರ ನ್ಯಾಯಾಂಗದ ಮಧ್ಯಸ್ಥಿಕೆಯಿಂದ ಅಂತ್ಯ ಕಂಡಿವೆ. ಸ್ವಾತಂತ್ರ್ಯಾನಂತರ ನಡೆದ ನೌಖಾಲಿ ಗಲಭೆಗಳ ಸಮಯದಲ್ಲಿ ಗಾಂಧೀಜಿ ಸ್ವತಃ ಅಲ್ಲಿಗೆ ತೆರಳಿ, ಗಲಭೆ ನಿಲ್ಲುವವರೆಗೂ ಉಪವಾಸ ಇರುವುದಾಗಿ ಹೇಳಿ ಕೊನೆಗೂ ಶಾಂತಿ ನೆಲೆಸುವಂತೆ ಮಾಡಿದರು. ಆದರೆ ಇವತ್ತು ಅದೇ ಗಾಂಧೀಜಿ ಭಾವಚಿತ್ರಕ್ಕೆ ಚುನಾಯಿತ ಜನಪ್ರತಿನಿಧಿ ಗನ್ ಹಿಡಿದು ಅಣಕು ಕೊಲೆ ಮಾಡುತ್ತಾಳೆ, ಸುತ್ತನೆರೆದ ಜನರು ನಗುತ್ತಾ ಚಪ್ಪಾಳೆ ತಟ್ಟುತ್ತಾರೆ, ಇನ್ನೊಬ್ಬ ಸಂತನೆನೆಸಿಕೊಂಡ ಕಾವಿಧಾರಿ ವ್ಯಕ್ತಿ ಧರ್ಮದ ಹೆಸರಲ್ಲಿ ನಡೆದ ಸಂಸತ್ತಿನಲ್ಲಿ ಗಾಂಧೀಜಿಯನ್ನು “ಹರಾಮ್ ಖೋರ್” ಎನ್ನುತ್ತಾನೆ.
ಗಾಂಧಿ ಹತ್ಯೆ ಮಾಡಿದ ಗೋಡ್ಸೆ ಇವತ್ತು ಅನೇಕರಿಗೆ ಹೀರೋ ಆಗಿ ಕಾಣುತ್ತಾನೆ. ಅವನಿಗೆ ಸೈದ್ಧಾಂತಿಕ ಗುರುಗಳಾದವರು ಭಾರತಕ್ಕೆ ದಾವೆದಾರರಾಗುತ್ತಾರೆ. ಒಟ್ಟಿನಲ್ಲಿ ಜನಾಂಗೀಯ ಅಥವಾ ದ್ವೇಷದ ಉರಿಯಲ್ಲಿ ಅಧಿಕಾರದ ಬೇಳೆ ಬೇಯಿಸುಕೊಳ್ಳುವ ಕೆಲಸ ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ.

ಭಾರತದಲ್ಲಿ ಪ್ರಸಕ್ತ ದಿನಗಳಲ್ಲಿ ಹೆಚ್ಚಾಗುತ್ತಿರುವ Hate Speech ಬಗೆಗಿನ ಬಿಬಿಸಿ ವರದಿಯಲ್ಲಿ NDTV ಸರ್ವೇ ರೀಪೋರ್ಟನ್ನು ಉಲ್ಲೇಖಿಸಿ “ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದ್ವೇಷದ ಭಾಷೆಯ ಪ್ರಯೋಗ ಅತ್ಯಂತ ಹೆಚ್ಚಾಗಿದೆ” ಎಂದು ಹೇಳುತ್ತದೆ. ಅಲ್ಲದೆ ಇಲ್ಲಿ ಕಾನೂನುಗಳು ಇದ್ದಾಗ್ಯೂ ಹಗೆನುಡಿಯಾಡುವವರು ಹೇಗೆ ಸುಲಭವಾಗಿ ಬಚಾವಾಗುತ್ತಾರೆ ಎಂಬುದನ್ನೂ ಹೇಳುತ್ತದೆ. ನಮ್ಮ ದೇಶದ ಕಾನೂನಿನಲ್ಲಿ ಹಗೆನುಡಿ Hate Speech ಎಂಬ ಶಬ್ದದ ಉಲ್ಲೇಖ ಎಲ್ಲೂ ಇಲ್ಲ ಆದರೆ ’Speech’ ಎಂದರೆ ಎಂಥ ಮಾತು ಎಂಬುದನ್ನು ಅರ್ಥಮಾಡಿಕೊಳ್ಳಲು ಪರಿಶಿಷ್ಟ ಜಾತಿ/ ಜನಾಂಗ ದೌರ್ಜನ್ಯ ನಿಷೇಧ ಕಾಯ್ದೆಯನ್ನು ನೋಡಬಹುದು. “ಅಪಮಾನ ಮಾಡುವ, ಅವಹೇಳನಕಾರಿಯಾದ ಮಾತು” ಇದನ್ನು ಅಪರಾಧ ಸಂಹಿತೆಯ (Penal Code) 153ಎ, 153ಬಿ, 295ಎ, 298, 505(1) ಅಡಿಯಲ್ಲಿ ಸಮಾಜದ ಶಾಂತಿ ಕದಡುವ, ದ್ವೇಷ ಉಂಟುಮಾಡುವ ಎಲ್ಲ ಮಾತುಗಳನ್ನೂ ಅಪರಾಧದ ವ್ಯಾಖ್ಯಾನದಲ್ಲಿ ತರಬಹುದು.
ಆದರೆ ವಿಚಿತ್ರವೆಂದರೆ ನಿರಂತರವಾಗಿ ಸಂವಿಧಾನವನ್ನು ವಿರೋಧಿಸುವ ಈ ವಿಚ್ಛಿದ್ರಕಾರಿ ಶಕ್ತಿ ಮತ್ತು ವ್ಯಕ್ತಿಗಳು ಇದೇ ಸಂವಿಧಾನದ ಮೂಲಭೂತ ಹಕ್ಕಿನ ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಗುರಾಣಿ ಹಿಡಿದು ತಪ್ಪಿಸಿಕೊಳ್ಳುತ್ತಾರೆ. ಅದೇ ಗುರಾಣಿ ಈ ವಿಚ್ಛಿದ್ರಕಾರಿ ವ್ಯಕ್ತಿಗಳನ್ನು ವಿರೋಧಿಸಿದವರಿಗೆ ಅನ್ವಯವಾಗುವುದಿಲ್ಲ. ಅವರು ಸುಧಾ ಭಾರದ್ವಾಜ್, ಗೌತಮ್ ನೌಲಖಾ ಅಥವಾ ಜೈಲಿನಲ್ಲೇ ಸತ್ತುಹೋದ ಸ್ಟ್ಯಾನ್ ಸ್ವಾಮಿ ಇರಬಹುದು ಅಥವಾ ಪ್ರಜಾತಂತ್ರದಲ್ಲಿ ಜನರಿಂದ ಆಯ್ಕೆಯಾದ ಜಿಗ್ನೇಶ್ ಮೇವಾನಿ ಇರಬಹುದು. ಕೇವಲ ಟ್ವೀಟ್ ಮಾಡಿದ್ದಕ್ಕೆ ಒಂದು ರಾಜ್ಯದ ಶಾಸಕರನ್ನು ಇನ್ನೊಂದು ರಾಜ್ಯದ ಪೊಲೀಸರು ಅರೆಸ್ಟ್ ಮಾಡಿ ಕರೆದೊಯ್ಯುತ್ತಾರೆ. ಶಾಂತಿಯ ಅಪೀಲ್ ಮಾಡಿದ ಉಮರ್ ಖಾಲಿದ್‌ನನ್ನು ಬಂಧಿಸಿ ಜೈಲಿಗೆ ಹಾಕುತ್ತಾರೆ. ಆದರೆ ಮಾಧ್ಯಮಗಳು ಪ್ರಜಾಪ್ರಭುತ್ವದ ಸತ್ವವನ್ನು ಎತ್ತಿಹಿಡಿಯುವವರನ್ನು ವಿಲನ್‌ಗಳನ್ನಾಗಿ ಮಾಡುತ್ತದೆ. ಅದಕ್ಕಿಂತಲೂ ದುಃಖಕರವಾದದ್ದೆಂದರೆ ಈ ಸುದ್ದಿ ನೋಡುವ ಜನ ನಿಜ ಎಂದು ಅದನ್ನು ನಂಬುತ್ತಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯೇ ಜನರಲ್ಲಿ ಮೂಡುವುದಿಲ್ಲ. ಕಾರಣ ಇಷ್ಟೆ ನಿಜವಾದ ಸಮಸ್ಯೆಗಳಿಂದ ದೂರಮಾಡಿ ಕಲ್ಪಿತ ಶತ್ರುಗಳನ್ನು ನಿರ್ಮಾಣ ಮಾಡಿ ಜನರನ್ನು ನಿರಂತರವಾಗಿ ಮರಳು ಮಾಡುವ ಕೆಲಸ ಭರದಿಂದ ನಡೆದಿದೆ.
ಕೇಂದ್ರದ ಮಂತ್ರಿ ಅನುರಾಗ್ ಠಾಕೂರ್ “ಗೋಲಿಮಾರೋ ಸಾಲೋಂಕೀ” ಎಂದರು, ಆದರೆ ಕೋರ್ಟು “ನಗುತ್ತಾ ದ್ವೇಷದ ಮಾತು ಹೇಳಿದ್ದರೆ ಅದು ಅಪರಾಧ ಅಲ್ಲ” ಎಂದಿತು.
ದೇಶದ ಪ್ರಧಾನಿ ಮೋದಿ “ದೇಶದ್ರೋಹಿಗಳನ್ನು ಅವರು ಹಾಕಿಕೊಳ್ಳುವ ಬಟ್ಟೆಯಿಂದಲೇ ಕಂಡು ಹಿಡಿಯಬಹುದು” ಎಂದರು. ಅಲ್ಲೊಬ್ಬ ಕೇಸರಿ ಹಾಕಿಕೊಂಡ ವಿಭೃತಿ ಮುಸ್ಲಿಂ ಹೆಣ್ಣುಮಕ್ಕಳನ್ನು ರೇಪ್ ಮಾಡಲು ಕರೆಕೊಟ್ಟ. ಇನ್ನೊಬ್ಬ ಧರ್ಮದ ಉಳಿವಿಗಾಗಿ ಹಿಂದೂಗಳೆಲ್ಲ ಹೆಚ್ಚುಹೆಚ್ಚು ಮಕ್ಕಳನ್ನು ಹೆರಬೇಕು ಎನ್ನುತ್ತಾನೆ. ಇನ್ನೊಬ್ಬ ಕಾವಿ ಮುಖ್ಯಮಂತ್ರಿ ಹೆಚ್ಚು ಮಕ್ಕಳಿದ್ದವರ ಹಕ್ಕು ಕಿತ್ತುಕೊಳ್ತೀವಿ ಅಂತಾನೆ. ಈ ಇಬ್ಬರ ಟಾರ್ಗೆಟ್ ಕಮ್ಯೂನಿಟಿಗಳೇ ಬೇರೆ, ಆದರೆ ಈ ಎಲ್ಲದರ ನಡುವೆ ಕುಟುಂಬ ಯೋಜನೆ ಎಂಬ ದೇಶದ ವ್ಯವಸ್ಥೆ ಅತಂತ್ರವಾಗುತ್ತದೆ.
Hate Speechಗೆ ವ್ಯವಸ್ಥೆಯ ರಕ್ಷಣೆ ಸಿಕ್ಕಾಗ ಅದು ನಿಧಾನವಾಗಿ ಸಾಂಸ್ಥೀಕರಣಗೊಳ್ಳುತ್ತ ಸಾಗುತ್ತದೆ. ಹರಿದ್ವಾರ ಮತ್ತು ದೆಹಲಿಯ ಧರ್ಮ ಸಂಸತ್ತುಗಳಲ್ಲಿ ಸಂತರೆನಿಸಿಕೊಂಡವರು “ಹೊಡಿ, ಬಡಿ, ಕಡಿ” ಎಂಬ ಕರೆಕೊಟ್ಟಿದ್ದು ಎಲ್ಲರಿಗೂ ಕಂಡಿದ್ದರೂ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಇತ್ತೀಚೆಗೆ ಸುಪ್ರೀಂಕೋರ್ಟ್‌ನ ಜಡ್ಜ್ ಖಾನ್‌ವಿಲ್ಕರ್ ಮತ್ತು ಎ.ಎಸ್ ಓಕಾ ಅವರ ಪೀಠ ದೆಹಲಿಯ ಡೆಪ್ಯುಟಿ ಕಮೀಷನರ್ ಆಫ್ ಪೊಲೀಸ್‌ಗೆ ಮಾಹಿತಿ ಕೇಳಿದಾಗ ಅವರು ಅಫಿಡವಿಟ್ ಸಲ್ಲಿಸಿ “ಅಂಥ ಮಾಹಿತಿಗಳು ಸಿಕ್ಕಿಲ್ಲ” ಎಂದಿದ್ದು ನ್ಯಾಯಮೂರ್ತಿಗಳಿಗೆ ಸಿಟ್ಟು ತಂದು ಅದಕ್ಕೆ ವಿವರಣೆ ಕೇಳಿದ್ದಾರೆ. ಸರ್ಕಾರಿ ವಕೀಲರು ಇವರ ಮರುವಿಚಾರಣೆ ಮಾಡುವ ಭರವಸೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ಮುಂದಿನ ದಿನಗಳಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಧರ್ಮ ಸಂಸತ್ತಿನಲ್ಲಿ ಯಾವುದೇ Hate Speech ಆಗದಂತೆ ನಿಗಾವಹಿಸಲು ಸೂಚಿಸಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಈ ಕುರಿತು ಒಪ್ಪಿ ಅಫಿಡವಿಟ್ ಸಲ್ಲಿಸಬೇಕು, ಮುಂದೇನಾದರೂ ಉಲ್ಲಂಘನೆಗಳಾದರೆ ಅವರೇ ಹೊಣೆಗಾರರು ಎಂದಿದೆ. ಈ ನಿಟ್ಟಿನಲ್ಲಿ ನೋಡಿದಾಗ ಇದೊಂದು ಒಳ್ಳೆಯ ಬೆಳವಣಿಗೆ, ಇಲ್ಲದಿದ್ದರೆ ಸುಪ್ರೀಂಕೋರ್ಟಿಗೆ ಸುಳ್ಳು ಮಾಹಿತಿ ನೀಡುವ ಈ ಪ್ರವೃತ್ತಿ ದೇಶದ ಕಾನೂನು ವ್ಯವಸ್ಥೆಯನ್ನು ಕೇವಲ ಅಣಕು ಮಾದರಿ ಮಾಡುವ ದಿನಗಳು ದೂರವಿಲ್ಲ.

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: 8 ತಿಂಗಳ ಅವಧಿಯ ಬೊಮ್ಮಾಯಿ ಆಡಳಿತದಲ್ಲಿ ಕರ್ನಾಟಕ ಕಂಡ 7 ಕೋಮುದ್ವೇಷ ಪ್ರಕರಣಗಳು


