Homeಅಂಕಣಗಳುಜಗತ್ತಿನ ಅತಿ ದೊಡ್ಡ ಶ್ರೀಮಂತ ಇಲಾನ್ ಮಸ್ಕ್‌ನ ಫ್ರೀ ಸ್ಪೀಚ್ ವಾದದ ಹುಳುಕು

ಜಗತ್ತಿನ ಅತಿ ದೊಡ್ಡ ಶ್ರೀಮಂತ ಇಲಾನ್ ಮಸ್ಕ್‌ನ ಫ್ರೀ ಸ್ಪೀಚ್ ವಾದದ ಹುಳುಕು

- Advertisement -
- Advertisement -

ಕಳೆದ ವರ್ಷ ಡಿಸೆಂಬರ್‌ನಲ್ಲಿ ’ಟೈಮ್’ ಪತ್ರಿಕೆ ಇಲಾನ್ ಮಸ್ಕ್ ಅವರನ್ನು ವರ್ಷದ ವ್ಯಕ್ತಿಯಾಗಿ ಗುರುತಿಸಿತ್ತು. ಜಗತ್ತಿಗೆ ಒಳ್ಳೆಯ ಅಥವಾ ಕೆಟ್ಟ ರೀತಿಯಲ್ಲಿ ಅತಿ ಹೆಚ್ಚು ಪರಿಣಾಮ ಬೀರಬಲ್ಲ ವ್ಯಕ್ತಿಯನ್ನು ಪ್ರತಿ ವರ್ಷ ಗುರುತಿಸುವ ಪರಿಪಾಠವನ್ನು ಟೈಮ್ ಪತ್ರಿಕೆ ಮಾಡಿಕೊಂಡು ಬರುತ್ತಿದೆ. ಇದರ ಭಾಗವಾಗಿ ನಡೆದ ಸಂದರ್ಶನದಲ್ಲಿ, ’ವಿಶ್ವದ ಅತಿ ದೊಡ್ಡ ಶ್ರೀಮಂತನಾಗಿರುವ’ ಬಗ್ಗೆ ಇಲಾನ್ ಮಸ್ಕ್ ಅವರಿಗೆ ಕೇಳಿದ ಪ್ರಶ್ನೆಗೆ “ಸರಿ, ಆದರೆ ನನಗನ್ನಿಸುತ್ತೆ, ಕೆಲವು ಸಾರ್ವಭೌಮರು ಇದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ನನಗಿಂತ ದೊಡ್ಡ ಮಟ್ಟದಲ್ಲಿ ಶ್ರೀಮಂತ. ನಾನು ದೇಶಗಳ ಮೇಲೆ ಆಕ್ರಮಣವನ್ನು ನಡೆಸುವಂತಹ ಕೆಲಸಗಳನ್ನು ಮಾಡುವುದಕ್ಕೆ ಆಗುವುದಿಲ್ಲ” ಎಂದಿದ್ದರು.

ಇತ್ತೀಚೆಗೆ ಈ ಶ್ರೀಮಂತ ಮಸ್ಕ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸಂಸ್ಥೆಯನ್ನು 44 ಬಿಲಿಯನ್ ಡಾಲರ್‌ಗಳನ್ನು ವ್ಯಯಿಸಿ ಕೊಂಡುಕೊಳ್ಳುವ ಯೋಜನೆಯನ್ನು ಮುಂದಿಟ್ಟಿದ್ದನ್ನು ಮತ್ತು ಅದು ಸಾಕಾರಗೊಳ್ಳುತ್ತಿರುವುದನ್ನು, ಮೇಲಿನ ಸಂದರ್ಶನದಲ್ಲಿ ’ದೇಶಗಳ ಮೇಲೆ ಆಕ್ರಮಣ ಮಾಡುವ ಅಧಿಕಾರ ನನಗಿಲ್ಲ’ ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಮಾಧ್ಯಮಗಳು ಯುದ್ಧಗಳನ್ನು ಪ್ರಚೋದಿಸುವ, ಸುಳ್ಳು ಮಾಹಿತಿ ಮತ್ತು ನಕಲಿ ಸುದ್ದಿಗಳಿಂದ ಯುದ್ಧಗಳಿಗೆ ಸಮ್ಮತಿಯನ್ನು ಉತ್ಪಾದಿಸುವ ಕೆಲಸಗಳಿಗೆ ಇಳಿದು ದೀರ್ಘ ಸಮಯವಾಗಿದೆ. ಇದೀಗ ಜಗತ್ತಿನಾದ್ಯಂತ ನೂರಾರು ಕೋಟಿ ಬಳಕೆದಾರರನ್ನು ಹೊಂದಿರುವ ಟ್ವಿಟ್ಟರ್‌ನಂತಹ ಸಾಮಾಜಿಕ ಮಾಧ್ಯಮಗಳು ಇಂದು ಬಂಡವಾಳಶಾಹಿಗಳಿಗೆ, ಅಧಿಕಾರ ವರ್ಗಕ್ಕೆ, ಪ್ರಭುತ್ವಗಳಿಗೆ ಮಿಲಿಟರಿ ಶಕ್ತಿಯಂತೆಯೇ ಬಲಶಾಲಿಯಾದ ಪರಿಕರಗಳಾಗಿವೆ. ಎಲ್ಲೋ ಕೆಲವು ಸಂದರ್ಭಗಳನ್ನು ಹೊರತುಪಡಿಸಿದರೆ, ಲಾಭದ ಕಾರಣಕ್ಕಾಗಿ ಪ್ರಭುತ್ವಗಳ ತಾಳಕ್ಕೆ ಕುಣಿಯುವ, ಅವುಗಳಿಗೆ ಬೇಕಾದಂತೆ ಡಿಸ್‌ಇನ್ಫರ್ಮೇಶನ್‌ಅನ್ನು ಪಸರಿಸುವ ಕೆಲಸವನ್ನು ಹಲವು ಸಾಮಾಜಿಕ ಮಾಧ್ಯಮಗಳು ಮಾಡಿಕೊಂಡು ಬಂದಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸುಧಾರಣೆಯ ಆ ’ಕೆಲವು’ ಸಂದರ್ಭಗಳಿಗೆ ಒಂದು ಉದಾಹರಣೆ: ಅಮೆರಿಕದ ಪ್ರಜಾಸತ್ತಾತ್ಮಕ ಚುನಾವಣೆಗಳನ್ನೆ ಧಿಕ್ಕರಿಸಿ ಗೆಲುವನ್ನು ಕದಿಯಲು ಪ್ರಯತ್ನಿಸಿದ (ಕ್ಯಾಪಿಟಲ್ ಹಿಲ್ ದಾಳಿಯನ್ನು ಸಮರ್ಥಿಸಿಕೊಂಡ) ಅಲ್ಲಿನ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಟ್ವಿಟ್ಟರ್ ನಿರ್ಬಂಧ ಹೇರಿತ್ತು. ಸಾಮಾಜಿಕ ಮಾಧ್ಯಮಗಳು ಇಂತಹ ಸಣ್ಣ-ಸೂಜಿಮೊನೆಯಷ್ಟು ಜವಾಬ್ದಾರಿಯುಳ್ಳ ಸುಧಾರಣೆಯನ್ನು ಅಳವಡಿಸಿಕೊಳ್ಳುವಂತೆ ಸಾಧ್ಯವಾಗಲು ನಡೆಸಿದ ಅಭಿಯಾನಗಳು, ಸವೆಸಿದ ಹಾದಿ ಕೂಡ ಸುದೀರ್ಘವಾದದ್ದು. ಇದಕ್ಕಾಗಿ ನಾಗರಿಕ ಸಮಾಜದ ಹಲವು ಸಂಘಟನೆಗಳು, ಪ್ರಜ್ಞಾವಂತ ವ್ಯಕ್ತಿಗಳು, ಸಾಮಾಜಿಕ ಕಾರ್ಯಕರ್ತರು, ಅಕೆಡೆಮಿಕ್‌ಗಳು, ಸರ್ಕಾರಗಳ ನೀತಿಗಳನ್ನು ಪ್ರಭಾವಿಸಬಲ್ಲವರು ಸಾರ್ವಜನಿಕ ಸಂವಾದಗಳನ್ನು ನಡೆಸಿ, ನಕಲಿ ಸುದ್ದಿಗಳ ಬಗ್ಗೆ, ದ್ವೇಷ ಭಾಷಣಗಳ ಬಗ್ಗೆ ಅರಿವು ಮೂಡಿಸಿ ತಿಳಿವಳಿಕೆಯನ್ನು ಸ್ಥಾಪಿಸಲು ಶ್ರಮಿಸಿದ್ದಾರೆ. ಆದರೆ ಈಗ ಈ ಶ್ರೀಮಂತ ಮಸ್ಕ್ ತನ್ನ ತಿರುಚಿದ ಮುಕ್ತ ಅಭಿವ್ಯಕ್ತಿಯ ವ್ಯಾಖ್ಯಾನದಲ್ಲಿ ಟ್ವಿಟ್ಟರ್ ಸಾಮಾಜಿಕ ಜಾಲತಾಣವನ್ನು ಅದೇ ನಕಲಿ ಮತ್ತು ಡಿಸ್‌ಇನ್ಫರ್ಮೇಶನ್ ಎಕೋಸಿಸ್ಟಮ್‌ಗೆ ಮರಳಿಸುವ ಅಪಾಯ ಒಡ್ಡಿದ್ದಾರೆ.

ಇಲಾನ್ ಮಸ್ಕ್‌ನ ಮುಕ್ತ ಅಭಿವ್ಯಕ್ತಿ ಕಲ್ಪನೆಯ ಹುಳುಕು

ಟ್ವಿಟ್ಟರ್‌ಅನ್ನು ಕೊಂಡುಕೊಳ್ಳುವ ಯೋಜನೆಯನ್ನು ಮುಂದಿಟ್ಟ ಮಸ್ಕ್ ಏಪ್ರಿಲ್ 25ರಂದು ಟ್ವೀಟ್ ಮಾಡಿದ್ದು ಹೀಗೆ: “ನನ್ನು ಕೆಟ್ಟದಾಗಿ ಟೀಕಿಸುವವರು ಕೂಡ ಟ್ವಿಟ್ಟರ್‌ನಲ್ಲಿ ಉಳಿಯಬೇಕು ಎಂದು ನಂಬುತ್ತೇನೆ, ಏಕೆಂದರೆ ಮುಕ್ತ ಅಭಿವ್ಯಕ್ತಿ ಅಂದರೆ ಅದೇ”. ನಂತರ ಏಪ್ರಿಲ್ 27ರಂದು ಮಾಡಿದ ಟ್ವೀಟ್‌ನಲ್ಲಿ “ಟ್ರುಥ್ ಸೋಶಿಯಲ್ (ಭಯಾನಕ ಹೆಸರು) ಅಸ್ತಿತ್ವದಲ್ಲಿರುವುದಕ್ಕೆ ಕಾರಣ ಟ್ವಿಟ್ಟರ್ ಮುಕ್ತ ಅಭಿವ್ಯಕ್ತಿಯನ್ನು ನಿರ್ಬಂಧಿಸಿದ್ದು” ಎಂದು ಬರೆದರು. ಹೀಗೆ ಟ್ವಿಟ್ಟರ್ ನಿರ್ಬಂಧಕ್ಕೆ ಒಳಪಟ್ಟಿದ್ದ ಟ್ರಂಪ್ ಪ್ರಾರಂಭಿಸಿದ ಟ್ರುಥ್ ಸೋಶಿಯಲ್ ಹುಟ್ಟುವುದಕ್ಕೆ ನಕಲಿ ಸುದ್ದಿಗಳನ್ನು, ಸುಳ್ಳು ಕಥಾನಕಗಳನ್ನು ಟ್ವಿಟ್ಟರ್ ನಿಯಂತ್ರಿಸಿದ ಕಾರಣವನ್ನು ಸೆನ್ಸಾರ್ ಎಂದು ಬಗೆದು ಟ್ವಿಸ್ಟ್ ಕೊಟ್ಟರು.

ಇಲ್ಲಿ ಮಹಾನ್ ಸಂತನಂತೆ, ದಾರ್ಶನಿಕನಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಬೋಧನೆ ನೀಡುತ್ತಿರುವ ಮಸ್ಕ್ ಮರೆಮಾಚುತ್ತಿರುವ ಹಲವು ಸಂಗತಿಗಳಿವೆ. ಟ್ವಿಟ್ಟರ್‌ನಲ್ಲಿ ಆಗಲೀ ಅಥವಾ ಯಾವುದೇ ಸಾಮಾಜಿಕ ಜಾಲತಾಣವಾಗಲೀ, ಯಾವ ಪೋಸ್ಟ್ ಯಾರಿಗೆ ತೋರಿಸಬೇಕು, ಯಾರಿಗೆ ಮರೆಮಾಚಬೇಕು, ಎಷ್ಟು ಕಾಲದವರೆಗೆ ಕಾಣಿಸಬೇಕು, ಯಾವುದು ಮಾತ್ರ ವೈರಲ್ ಆಗಬೇಕು ಎಂದೆಲ್ಲಾ ನಿರ್ಧರಿಸುವ ಅಲ್ಗಾರಿದಮ್ ಪಾರದರ್ಶಕವಾದುದಲ್ಲ. ಆ ನಿಟ್ಟಿನಲ್ಲಿ ವಾಕ್ ಸ್ವಾತಂತ್ರ್ಯವನ್ನು ನಿಜವಾಗಲೂ ಆಚರಿಸಬೇಕು ಅಂದರೆ ಮಸ್ಕ್ ಈಗ ಕೊಂಡುಕೊಳ್ಳಲಿರುವ ಟ್ವಿಟ್ಟರ್‌ನ ಮನೆ ಬಾಗಿಲಿನಿಂದ ಆಚರಿಸಬೇಕು. ಅಂದರೆ ಇಡೀ ಟ್ವಿಟ್ಟರ್ ಅಲ್ಗಾರಿದಮ್ ಕೆಲಸ ಮಾಡುವ ರೀತಿಯನ್ನು ಮುಕ್ತಗೊಳಿಸಬೇಕು! ಇದರ ಬಗ್ಗೆ ಅವರು ಮಾತನಾಡಿದ್ದಾರಾದರೂ, ಒಂದು ಪಕ್ಷ ಟ್ವಿಟ್ಟರ್ ಓಪನ್ ಸೋರ್ಸ್‌ ಅಡಿ ಬರಲು ಸಾಧ್ಯವಾದರೂ, ಅದರ  ಲಾಭ ಪಡೆಯುವುದರಲ್ಲಿಯೂ ಅಧಿಕಾರದ ಅಸಮತೋಲನ ಕೆಲಸ ಮಾಡುತ್ತದೆ. ಅಧಿಕಾರಸ್ಥರು, ಸಿರಿವಂತರು ಅದರ ಸುಲಭ ಉಪಯೋಗ ಪಡೆದುಕೊಳ್ಳುತ್ತಾರೆ. ಟ್ರಂಪ್‌ನಂತಹ ಬಲಪಂಥೀಯ ತೀವ್ರಗಾಮಿಗಳು ಜಗತ್ತಿನೆಲ್ಲೆಡೆ ಅಂತಹ ಎಕೋಸಿಸ್ಟಮ್‌ನ ಲಾಭ ಪಡೆದು ಇನ್ನೂ ಹೆಚ್ಚುಚ್ಚು ಸುಳ್ಳುಸುದ್ದಿಗಳನ್ನು ಹಂಚುತ್ತಾರೆ. ಅಪಾರ ಸಂಪನ್ಮೂಲಗಳನ್ನು ಹೊಂದಿರುವ ಇಲಾನ್ ಮಸ್ಕ್ ಪ್ರತಿಪಾದಿಸುವ ಹಲವು ಸಾಮಾಜಿಕ ತಪ್ಪು ಸಂಗತಿಗಳನ್ನು, ನರೆಟಿವ್‌ಗಳನ್ನು ಕೌಂಟರ್ ಮಾಡುವುದು ಕೂಡ ಅಸಮತೋಲನ ಸನ್ನಿವೇಶದಲ್ಲಿ ಸುಲಭಕ್ಕೆ ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಅವರು ಮಾಡಿದ ಇತ್ತೀಚಿನ ಟ್ವೀಟ್ ಚಿತ್ರವೊಂದನ್ನು ಗಮನಿಸಬಹದು.

ಅವರ ಈ ಮೀಮ್ ಪ್ರಸ್ತಾಪಿಸುವ ವಾದವನ್ನು ವಿಸ್ತರಿಸಿ ನೋಡುವುದಾದರೆ, ಮಸ್ಕ್ ವಾಸಿಸುತ್ತಿರುವ ದೇಶವಾದ ಅಮೆರಿಕದಲ್ಲಿ ಟ್ರಂಪ್ ದುರಾಡಳಿತಕ್ಕೆ ಎಡಪಂಥೀಯರು ಕಾರಣ ಎಂದು ವಾದಿಸುವುದು ಹೊಣೆಗೇಡಿತನವಲ್ಲದೆ ಮತ್ತೇನು? ಮೇಲಿನ ಚಿತ್ರದಲ್ಲಿ ಎಡಪಂಥೀಯರು ತೀವ್ರವಾದಕ್ಕೆ ಹೊರಳುತ್ತಿದ್ದಾರೆ ಎಂಬುದನ್ನು ಚಿತ್ರಿಸಿ, ಬಲಪಂಥೀಯ ಅಧಿಕಾರದಲ್ಲಿ ನಡೆದ ಧ್ರುವೀಕರಣ, ಬಿಳಿ ಶ್ರೇಷ್ಠತೆಯ ಜನಾಂಗೀಯವಾದ, ಹಿಂಸೆ, ವಲಸೆಯ ವಿರುದ್ಧದ ಅಮಾನವೀಯತೆ, ತೀವ್ರ ಆರ್ಥಿಕ ಅಸಮಾನತೆ, ಕ್ಲೈಮೇಟ್ ಚೇಂಜ್ ನಿರಾಕರಣೆ ಇವನ್ನೆಲ್ಲಾ ಮರೆಮಾಚುವುದು ಒಂದು ರೀತಿಯಲ್ಲಿ ಫ್ಯಾಸಿಸ್ಟ್ ಆಡಳಿತಕ್ಕೆ ಇಂಬು ನೀಡುವ ವಿಧಾನ. ಇದನ್ನು ಮಸ್ಕ್‌ನಂತಹವರು ನಾಜೂಕಾಗಿ ಮಾಡುತ್ತಾರೆ ಎಂಬುದಷ್ಟೇ ಇಲ್ಲಿ ವ್ಯತ್ಯಾಸ.

2021ರಲ್ಲಿ ಅಮೆರಿಕದ ಡೆಮಾಕ್ರಟಿಕ್ ಮುಖಂಡ, ಆರೆಗನ್ ರಾಜ್ಯದ ಗವರ್ನರ್ ರಾನ್ ವೈಡೆನ್ ಅತಿ ದೊಡ್ಡ ಶ್ರೀಮಂತರಿಗೆ ಹೆಚ್ಚಿನ ಮತ್ತು ವಿವಿಧ ಬಗೆಯ ತೆರಿಗೆ ವಿಧಿಸುವ ಬಗ್ಗೆ ಮಾತನಾಡಿದಾಗ, ಅವರ ಬಾಹ್ಯ ರೂಪವನ್ನು ಹಳಿಯುವ ’ಬಾಡಿ ಶೇಮಿಂಗ್’ಗೆ ಇದೇ ಮಸ್ಕ್ ಇಳಿದಿದ್ದರು. ಅಲ್ಲದೆ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸುವುದರ ವಿರುದ್ಧ ಹಲವು ವೇದಿಕೆಗಳಲ್ಲಿ ತೀವ್ರವಾಗಿ ಪ್ರಚಾರ ಮಾಡುವುದರಲ್ಲಿ ಮಸ್ಕ್ ನಿರತರಾಗಿದ್ದಾರೆ. ಸಮಾನತೆಯ ಕಲ್ಪನೆಯ ಬಗ್ಗೆ ಆಡುವ ಮಾತುಗಳು ಈ ನವಯುಗದ ಬಂಡವಾಳಶಾಹಿಗೆ ಲೆಫ್ಟ್ ಎಕ್ಸ್ಟ್ರೀಮ್‌ನಂತೆ ಕಾಣುತ್ತದೆ. ಕೆಲವು ತಿಂಗಳ ಹಿಂದೆ ಪ್ರೊಪಬ್ಲಿಕಾ ಎಂಬ ಅಮೆರಿಕದ ಸ್ವತಂತ್ರ ಮಾಧ್ಯಮ ಈ ಬಿಲಿಯನೇರ್‌ಗಳು ತಮ್ಮ ಗಳಿಕೆಯನ್ನು ಸಾಮಾನ್ಯವಾಗಿ ಶೇರ್ ಒಡೆತನದ ಮೂಲಕ ಹೊಂದಿರುವುದರಿಂದ ಮತ್ತು ನೇರವಾದ ಗಳಿಕೆಯನ್ನು ಅವಾಯ್ಡ್ ಮಾಡುವುದರಿಂದ ಹೇಗೆ ತೆರಿಗೆಯನ್ನು ವಂಚಿಸುತ್ತಾರೆ ಎಂಬ ತನಿಖಾ ವರದಿಯನ್ನು ಪ್ರಕಟಿಸಿತ್ತು. ಇಂತಹ ಬೆರಳೆಣಿಕೆಯ ಬಿಲಿಯನೇರ್‌ಗಳು ಶೇಖರಿಸಿಕೊಳ್ಳುತ್ತಿರುವ ಸಂಪನ್ಮೂಲದಿಂದ ಬಹುಸಂಖ್ಯಾತ ಜನಸಾಮಾನ್ಯರ ಜೀವನೋಪಾಯಕ್ಕೆ ಕುತ್ತು ತರುತ್ತಿರುವುದು ಇಂದು ಬಹು ಚರ್ಚಿತ ವಿಷಯ. ಈ ನಿಟ್ಟಿನಲ್ಲಿ ಪ್ರಭುತ್ವಗಳು ಆರ್ಥಿಕ ಸಂಪನ್ಮೂಲಗಳ ಸಮಾನ ಹಂಚಿಕೆಯಲ್ಲಿ ಹಸ್ತಕ್ಷೇಪ ಮಾಡಬೇಕೆಂಬ ವಾದವನ್ನು ಮಸ್ಕ್‌ನಂತವರು ತೀವ್ರ ಎಡಪಂಥೀಯವಾದ ಎಂದು ಅಲ್ಲಗೆಳೆದು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ವ್ಯವಹಾರದಲ್ಲಿ ಮತ್ತು ಲಾಭ ಗಳಿಕೆಯಲ್ಲಿ ತಾವೇನು ಮಾಡಿದರೂ ಪ್ರಭುತ್ವದ ಅಥವಾ ಇನ್ಯಾರದ್ದೇ ಹಸ್ತಕ್ಷೇಪ ಇರಬಾರದು ಎಂಬ ’ಕ್ಲಾಸಿಕಲ್ ಲಿಬರಲ್’ ವಾದದ ಇವರ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ, ಸಮ ಸಮಾಜದ ಜವಾಬ್ದಾರಿ, ದಮನಿತರ-ಹಿಂದುಳಿದವರ ಮತ್ತು ಇವರ ಆರ್ಥಿಕ ಏಳಿಗೆಗಾಗಿ ಕಡೆಗಣಿಸಲ್ಪಟ್ಟವರ ಬಗೆಗಿನ ಕಾಳಜಿ ಸೊನ್ನೆಯಾಗಿರುತ್ತದೆ!

ಟೆಸ್ಲಾ ಕಂಪನಿಯ ಒಡೆಯರಾಗಿ ಇಲೆಕ್ಟ್ರಿಕ್ ಕಾರುಗಳ ಉತ್ಪನ್ನಗಳನ್ನು ಕೂಡ ತನ್ನ ಬ್ರಾಂಡ್ ಇಮೇಜ್ ವೃದ್ಧಿಗಾಗಿಯೇ ಬಳಸಿಕೊಳ್ಳುವ ಇಲಾನ್ ಮಸ್ಕ್ ಆಗಾಗ ಕ್ಲೈಮೇಟ್ ಚೇಂಜ್ ಅಪಾಯ, ಕಾರ್ಬನ್ ಹೊರಸೂಸುವಿಕೆಯ ನಿಯಂತ್ರಣದ ಬಗ್ಗೆ ಮಾತನಾಡುವುದಿದೆ. ಆದರೆ ಇಲ್ಲಿ ಕೂಡ ತನ್ನ ಉತ್ಪನ್ನದ ಸಲುವಾಗಿ ಅಥವಾ ತನ್ನ ಇಮೇಜ್ ವೃದ್ಧಿಗಾಗಿ ಇದನ್ನು ಮಾಡುತ್ತಾರೆಯೇ ಹೊರತು ಸಮಗ್ರವಾದ ಇಕಲಾಜಿಕಲ್ ಕಾಳಜಿ ಅವರಲ್ಲಿ ವ್ಯಕ್ತವಾಗಿಲ್ಲ. ಇಲೆಕ್ಟ್ರಿಕ್ ಕಾರುಗಳಿಗೆ ಬಳಸುವ ಲಿಥಿಯಂಅನ್ನು ಗಣಿಕಾರಿಕೆ ಮಾಡುವ ಎಷ್ಟೋ ಪ್ರದೇಶಗಳಲ್ಲಿ ಜಲಸಂಪನ್ಮೂಲಗಳು ವಿಷಕಾರಿಯಾಗಿರುವ ಬಗ್ಗೆ ’ದ ವೈಯರ್‍ಡ್’ ಪತ್ರಿಕೆ ಕೆಲವು ತಿಂಗಳುಗಳ ಹಿಂದೆ ವರದಿ ಮಾಡಿತ್ತು. ಅಲ್ಲದೆ ಕೆಲವೇ ಕೆಲವು ಪ್ರದೇಶಗಳಲ್ಲಿ ಸಿಗುವ ಈ ಲಿಥಿಯಂ ಮತ್ತು ಇಲೆಕ್ಟ್ರಿಕ್ ಬ್ಯಾಟರಿಗಳಿಗೆ ಬೇಕಾದ ಇತರ ಇನ್ನಿತರ ವಿರಳ ಲೋಹಗಳು ದೊರಕುವೆಡೆ ಜನರ ಪರಸ್ಥಿತಿ ಶೋಚನೀಯವಾಗಿರುವುದಲ್ಲದೆ, ಅಲ್ಲಿಂದ ಇವುಗಳು ಸಾಗಾಣಿಕೆಯಾಗುವ ಸಮಯದಲ್ಲಿ ಹೊರಸೂಸುವ ಕಾರ್ಬನ್ ಡೈ ಆಕ್ಸೈಡ್ ಬಗ್ಗೆ ಮಸ್ಕ್ ಮಾತನಾಡುವುದಿಲ್ಲ! ಅಲ್ಲದೆ ಚಾಲಕರಹಿತ ಆಟೋಮೇಟೆಡ್ ಕಾರುಗಳ ಪ್ರಯೋಗದಲ್ಲಿ ಆಗಿರುವ ಅಪಘಾತಗಳು, ಒಂದು ಸಾವಿಗೆ ಮತ್ತು ಹಲವರು ಗಾಯಗೊಳ್ಳುವುದಕ್ಕೂ ಕಾರಣವಾದ ವರದಿಗಳಿವೆ. ಇವೆಲ್ಲವನ್ನು ಅವಲೋಕಿಸಿ ಸಮಷ್ಠಿ ಪ್ರಜ್ಞೆಯನ್ನು ತನ್ನದಾಗಿಸಿಕೊಳ್ಳದೆ ’ಎಲ್ಲ ಕೆಲಸವನ್ನೂ ಮುಂದೆ ರೋಬೋಟ್‌ಗಳು ಮಾಡುತ್ತವೆ, ಆಗ ಜನ ತಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡುವ ಪ್ರಮೇಯವೇ ಇರುವುದಿಲ್ಲ’ ಎಂಬಂತಹ ಮಾತುಗಳನ್ನಾಡುವ ಮಸ್ಕ್‌ನ ದೃಷಿಕೋನ ಸಮಾಜದ ಬಗೆಗಿನ ಅವಜ್ಞೆಗೆ ಸಾಕ್ಷಿಯಾಗಿದೆ.

 

ಇನ್ನು ಯುವಜನರಲ್ಲಿ ಮಸ್ಕ್ ಅತಿ ಹೆಚ್ಚು ಜನಪ್ರಿಯರಾಗಿರುವುದು ಸ್ಪೇಸ್‌ಗೆ ರಾಕೆಟ್‌ಗಳನ್ನು ಕಳುಹಿಸುವ, ಅಮೆರಿಕದ ಸಾರ್ವಜನಿಕ ಸಂಸ್ಥೆ ನಾಸಾದಿಂದ ಹೂಡಿಕೆ ಪಡೆದು ಚಂದ್ರನ ಮೇಲೆ ಮನುಷ್ಯನನ್ನು ಕಳುಹಿಸುವ ಯೋಜನೆ ಸಿದ್ಧಪಡಿಸಿರುವ, ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳುಹಿಸುವ ಆಲೋಚನೆಗೆ ಹಾಗೂ ಕೃತಕ ಉಪಗ್ರಹಗಳನ್ನು ಉಡಾವಣೆ ಮಾಡಿ ಅಂತರ್ಜಾಲದ ವ್ಯವಹಾರವನ್ನು ಕುದುರಿಸುವ ’ಜಾಣತನ’ಕ್ಕೆ. ಇವೆಲ್ಲವನ್ನೂ ಆವಿಷ್ಕಾರದ ಲೆನ್ಸ್‌ನಲ್ಲಿ ನೋಡಿದಾಗ ದೂರದೃಷ್ಟಿಯುಳ್ಳ ಮಸ್ಕ್‌ಆಗಿ ಈ ಶ್ರೀಮಂತ ಕಂಡರೂ, ಯಾವುದೇ ಒಬ್ಬ ವ್ಯಕ್ತಿಗೆ ಬಾಹ್ಯಾಕಾಶವನ್ನು ಆಕ್ರಮಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವುದು ಜಗತ್ತಿನಲ್ಲಿ ಸಮಾನತೆ ಕಲ್ಪಿಸಬೇಕೆಂಬ ಹಿನ್ನೆಲೆಯಲ್ಲಿ ಮಾರಕವಾದದ್ದು. ಅಷ್ಟೇ ಅಲ್ಲದೆ ಸ್ಪೇಸ್ ವೇಸ್ಟ್‌ಗೂ ಈತನ ಸಂಸ್ಥೆ ಅಪಾರ ಕೊಡುಗೆ ನೀಡುವುದರಲ್ಲಿ ನಿರತವಾಗಿದೆ ಎಂಬ ಆರೋಪಗಳಿವೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳು ಹಸ್ತಕ್ಷೇಪ ಮಾಡಿ, ಜಗತ್ತಿನ ಎಲ್ಲಾ ದೇಶಗಳಿಗೂ ಒಳಿತಾಗುವ ನಿಟ್ಟಿನಲ್ಲಿ, ಎಲ್ಲ ಜನರಿಗೂ ಅದರಲ್ಲಿ ಪಾಲಿದೆ ಎಂಬ ನಿಟ್ಟಿನಲ್ಲಿ ಬಾಹ್ಯಾಕಾಶ ನೀತಿಗಳನ್ನು ರೂಪಿಸುವುದಕ್ಕೆ ಮುಂದಾಗಬೇಕು.

ಇತಿಹಾಸದಲ್ಲಿ ಬಂಡವಾಳಶಾಹಿಗಳು ಸಾರ್ವಜನಿಕರ ಒಳಿತಿಗಾಗಿ ಉದ್ದಿಮೆ-ವ್ಯವಹಾರಗಳನ್ನು ನಡೆಸಿದ ಉದಾಹರಣೆಗಳು ಇಲ್ಲವೇಇಲ್ಲ ಎನ್ನುವಷ್ಟು ವಿರಳ. ಈ ಬಂಡವಾಳಶಾಹಿಗಳ ವಾಕ್ ಸ್ವಾತಂತ್ರ್ಯದ ತಿರುಳು ಇಷ್ಟೇ: ಎಂದಿಗೂ ತಮ್ಮ ಲಾಭಕ್ಕೆ ಅಡ್ಡಿಪಡಿಸದೆ ಜಗತ್ತು ಮುಂದುವರಿಯಬೇಕು ಎಂಬ ಇರಾದೆ. ಆ ನಿಟ್ಟಿನಲ್ಲಿ ಇಲಾನ್ ಮಸ್ಕ್ ಟ್ವಿಟ್ಟರ್‌ಅನ್ನು ಕೊಂಡುಕೊಂಡು ಅದರ ಸುತ್ತ ಕಟ್ಟುತ್ತಿರುವ ವಾಕ್ ಸ್ವಾತಂತ್ರ್ಯ ಉಳಿಸುವ ವಾದವೂ ಪೊಳ್ಳುತನದಿಂದ ಕೂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಬುಲ್ಡೋಜರ್ ರಾಜಕಾರಣ: ’ಜಹಾಂಗೀರ್ ಪುರಿ’ಯಿಂದ ದೇಶದ ವಿನಾಶಕ್ಕೆ ಮುಂದಾದ ಬಿಜೆಪಿ-ಸಂಘ ಪರಿವಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...