(ಸೂಚನೆ: ಪಠ್ಯಪುಸ್ತಕ ತಿರುಚೀಕರಣ ವಿವಾದಕ್ಕೆ ಸಂಬಂಧಿಸಿದ ಸುದ್ದಿಗಳ ಅಪ್‌ಡೇಟ್‌ಗಾಗಿ ಆಗಾಗ್ಗೆ ರೀಫ್ರೆಶ್ ಮಾಡಿ. ಪಠ್ಯಪುಸ್ತಕಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಇಲ್ಲಿ ಓದಬಹುದು.)
ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2ರಲ್ಲಿದ್ದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆಯವರಿಗೆ ಸಂಬಂಧಿಸಿದ ವಿವರಣೆಗಳನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕಿತ್ತು ಬಿಸಾಕಿದೆ.
ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2ರಲ್ಲಿ ಮೊದಲ ಪಾಠವಾಗಿ ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು’ ಪಾಠವನ್ನು ಇಡಲಾಗಿದೆ. ಭಾರತದ ಸಮಾಜ ಸುಧಾಕರ ಪರಿಚಯವನ್ನು ಈ ಪಾಠವು ಮಕ್ಕಳಿಗೆ ಮಾಡಿಕೊಡುತ್ತದೆ. ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಾಠದಲ್ಲಿ- ಬ್ರಹ್ಮ ಸಮಾಜದ ಸ್ಥಾಪಕ ರಾಜರಾಮ ಮೋಹನ್ ರಾಯ್, ಪ್ರಾರ್ಥನಾ ಸಮಾಜದ ಆತ್ಮಾರಾಮ್ ಪಾಂಡುರಂಗ, ಮಹಾದೇವ ಗೋವಿಂದ ರಾನಡೆ, ಸತ್ಯಶೋಧಕ ಸಮಾಜದ ಮಹಾತ್ಮ ಜ್ಯೋತಿಬಾ ಫುಲೆ, ಆರ್ಯ ಸಮಾಜದ ಸ್ವಾಮಿ ದಯಾನಂದ ಸರಸ್ವತಿ, ರಾಮಕೃಷ್ಣ ಮಿಷನ್‌ನ ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರ ಪರಿಚಯ ಸೇರಿದಂತೆ ಥಿಯಸಾಫಿಕಲ್ ಸೊಸೈಟಿ, ಅಲಿಘರ್ ಚಳವಳಿ ಮತ್ತು ಸರ್ ಸಯ್ಯದ್ ಅಹ್ಮದ್ ಖಾನ್, ಶ್ರೀ ನಾರಾಯಣಗುರುಗಳ ಕುರಿತು ತಿಳಿಸಿಕೊಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ರೂಪಿಸಲಾದ ಏಳನೇ ತರಗತಿಯ ಸಮಾಜ ವಿಜ್ಞಾನ ಭಾಗ 2ರ ಪುಸ್ತಕದ ಪಾಠ ನಾಲ್ಕು “ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ”ಯಲ್ಲಿ ಸಮಾಜ ಸುಧಾರಕರನ್ನು ಪರಿಚಯಿಸಲಾಗಿತ್ತು. ಈಗ ಉಳಿಸಿಕೊಳ್ಳಲಾಗಿರುವ ಪಠ್ಯದ ಜೊತೆಗೆ ಮಹಿಳಾ ಸಮಾಜ ಸುಧಾರಕಿಯರ ಪರಿಚಯವನ್ನೂ ಮಕ್ಕಳಿಗೆ ಮಾಡಿಕೊಡಲಾಗಿತ್ತು. ಸಾವಿತ್ರಿಬಾಯಿ ಫುಲೆ, ತಾರಾಬಾಯಿ ಶಿಂದೆ, ಪಂಡಿತ್ ರಮಾಬಾಯಿ ಅವರ ವಿವರಗಳಿದ್ದವು. ಮಹಿಳಾ ಸಮಾಜ ಸುಧಾರಕಿಯರ ಪಠ್ಯವನ್ನು ಚಕ್ರತೀರ್ಥ ಸಮಿತಿ ಕಿತ್ತು ಬಿಸಾಡಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ, ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ತಾಯಂದಿರ ಮಾಹಿತಿಯನ್ನು ತೆರವು ಮಾಡಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ.
ನಾರಾಯಣಗುರುಗಳ ವಿವರಣೆ ಆದ ಮೇಲೆ “ಮಹಿಳಾ ಸಮಾಜ ಸುಧಾರಕಿಯರು” ಉಪಶೀರ್ಷಿಕೆಯಲ್ಲಿ ಸಾವಿತ್ರಿಬಾಯಿ ಫುಲೆ, ತಾರಾಬಾಯಿ ಶಿಂದೆ, ಪಂಡಿತ್ ರಮಾಬಾಯಿ ಅವರ ಪರಿಚಯಗಳನ್ನು ಮಾಡಿಕೊಡಲಾಗಿತ್ತು. (ಹಳೆಯ ಪಠ್ಯದಲ್ಲಿ ಏನಿತ್ತು? ವಿವರಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ)
ಕೇರಳ ಹಾಗೂ ಕರಾವಳಿ ಕರ್ನಾಟಕದಲ್ಲಿ ಬಹುಸಂಖ್ಯಾತ ಹಿಂದುಳಿದ ಸಮುದಾಯಗಳನ್ನು ಜಾಗೃತಗೊಳಿಸಿದ ಕೀರ್ತಿ ನಾರಾಯಣಗುರುಗಳಿಗೆ ಸಲ್ಲುತ್ತದೆ. ತಮಿಳುನಾಡಿನಲ್ಲಿ ನಡೆದ ದ್ರಾವಿಡ ಚಳವಳಿಯ ನೇತಾರ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಇತಿಹಾಸವನ್ನು ಯಾರೂ ಮುಚ್ಚಿಹಾಕಲು ಸಾಧ್ಯವಿಲ್ಲ.
ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ನೀಡಲಾಗಿದ್ದ ಸಮಾಜ ಸುಧಾರಕ ನಾರಾಯಣಗುರು ಹಾಗೂ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಕುರಿತ ಪಾಠವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕೈಬಿಟ್ಟಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಇತಿಹಾಸವನ್ನು ನೋಡಿ ವರ್ತಮಾನವನ್ನು ತಿದ್ದಬೇಕಾದವರು, ಇತಿಹಾಸವನ್ನೇ ಮುಚ್ಚಿ ಹಾಕುತ್ತಿರುವ ಉನ್ನಾರವೇನು ಎಂಬ ಪ್ರಶ್ನೆಗಳು ಮೂಡಿವೆ.
ಹತ್ತನೇ ತರಗತಿಯಲ್ಲಿ ಕೈಬಿಟ್ಟಿರುವ ನಾರಾಯಣಗುರು ಹಾಗೂ ಪೆರಿಯಾರ್ ಪಾಠದಲ್ಲಿ ಅಂತಹದ್ದೇನಿದೇ? ಈ ಇಬ್ಬರು ಸಮಾಜ ಸುಧಾರಕರು ಇಟ್ಟ ಕ್ರಾಂತಿಕಾರಿ ಹೆಜ್ಜೆಗಳೇನು? ಪಠ್ಯದಿಂದ ಕೈಬಿಡಲಾದ ಪುಟಗಳನ್ನು ನೋಡಿರಿ.


ಪಠ್ಯ ಕೈಬಿಟ್ಟಿಲ್ಲ ಎಂದಿದ್ದ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ
ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು, “ನಾರಾಯಣಗುರು ಪಾಠವನ್ನು ಕೈಬಿಟ್ಟಿಲ್ಲ. ಏಳು ಮತ್ತು ಎಂಟನೇ ತರಗತಿ ಎರಡೂ ಕಡೆಯೂ ಉಳಿಸಿಕೊಳ್ಳಲಾಗಿದೆ” ಎಂದು ಹೇಳುತ್ತಾ ಬಂದಿದ್ದರು. ಆದರೆ ಹತ್ತನೇ ತರಗತಿ ಸಮಾಜ ವಿಜ್ಞಾನದಲ್ಲಿ ನಾರಾಯಣ ಗುರುಗಳ ಪಾಠ ಇಲ್ಲ ಎಂಬುದು ಕರ್ನಾಟಕ ಪಠ್ಯ ಪುಸ್ತಕ ಸಂಘದ ವೆಬ್‌ಸೈಟ್‌ನಲ್ಲಿರುವ ಪಿಡಿಎಫ್‌ಗಳಿಂದ ಸ್ಪಷ್ಟವಾಗುತ್ತದೆ.
7ನೇ ತರಗತಿಯಲ್ಲಿ ಅಳವಡಿಸಲಾಗಿರುವ ‘ಸಮಾಜ ಸುಧಾರಕರ ಕುರಿತ ಪಾಠ’ವನ್ನು 10ನೇ ತರಗತಿಯಲ್ಲಿ ವಿಸ್ತರಿಸಲಾಗಿದೆ. 7ನೇ ತರಗತಿಯಲ್ಲಿ ಇದ್ದ ಅನೇಕ ಮಹನೀಯರ ವಿವರಗಳನ್ನು ಹತ್ತನೇ ತರಗತಿಯಲ್ಲಿ ಮುಂದುವರಿಸಲಾಗಿದ್ದರೂ ಮಹಾನ್ ಮಾನವತಾವಾದಿ ನಾರಾಯಣಗುರುಗಳ ವಿವರಗಳನ್ನು ಸಮಿತಿ ಕೈಬಿಟ್ಟಿದೆ.
ನೂತನ ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿಯು ಹತ್ತನೇ ತರಗತಿ ಸಮಾಜ ವಿಜ್ಞಾನ ಭಾಗ -1ರಲ್ಲಿ ಐದನೆಯ ಪಾಠವಾಗಿ ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣ ಚಳುವಳಿಗಳು’ ಭಾಗವನ್ನು ಇರಿಸಿದೆ. ಏಳನೇ ತರಗತಿಯಲ್ಲಿದ್ದ ಪಠ್ಯವನ್ನು ಹತ್ತನೇ ತರಗತಿಯಲ್ಲಿ ವಿಸ್ತರಿಸಲಾಗಿದೆ ಎನ್ನುವ ಚಕ್ರತೀರ್ಥ ಅವರು, ಏಳನೇ ತರಗತಿಯಲ್ಲಿ ನೀಡಲಾಗಿದ್ದ ಅನೇಕ ಸಮಾಜ ಸುಧಾರಕರ ವಿವರಗಳನ್ನು ಉಳಿಸಿಕೊಂಡು ನಾರಾಯಣಗುರುಗಳ ಪಾಠವನ್ನು ತೆಗೆದುಹಾಕಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)
ದುರುಳರು ಪಠ್ಯದಲ್ಲಿ ಕೈಕಾಲಾಡಿಸಿದ್ದಾರೆ: ಡಾ.ಎಚ್.ಎಸ್.ಅನುಪಮಾ
ಪಠ್ಯ ವಾಪಸಾತಿ ಚಳವಳಿಗೆ ಖ್ಯಾತ ಲೇಖಕಿ ಡಾ.ಎಚ್.ಎಸ್.ಅನುಪಮಾ ಅವರು ಬೆಂಬಲ ಸೂಚಿಸಿದ್ದು, ಪಠ್ಯದ ಕೋಮುವಾದೀಕರಣದ ವಿರುದ್ಧ ಧ್ವನಿ ಎತ್ತಿದ್ದಾರೆ ಮತ್ತು ತಮ್ಮ ಪಾಠಗಳಿಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿರುವ ಅವರು, “7ನೇ ತರಗತಿಯ ಕನ್ನಡ ಭಾಷಾ (ಪ್ರಥಮ) ಪಠ್ಯ ಪಸ್ತಕದಲ್ಲಿ ನನ್ನ ‘ಸಾವಿತ್ರಿಬಾಯಿ ಫುಲೆ’ (ಗದ್ಯ) ಬರಹವನ್ನು 7ನೇ ತರಗತಿಯ ಕನ್ನಡ ಭಾಷಾ (ತೃತೀಯ) ಪಠ್ಯಪುಸ್ತಕದಲ್ಲಿ ನನ್ನ ‘ನೆನೆವುದೆನ್ನ ಮನ’ವನ್ನು ಅಳವಡಿಸಲು ಈ ಮೊದಲು ಒಪ್ಪಿಗೆ ನೀಡಿದ್ದೆ. ಆದರೆ ಶಿಕ್ಷಣದ ಬಗೆಗಾಗಲೀ, ಕನ್ನಡಿಯಂತಹ ಮನಸ್ಸಿನ ಮಕ್ಕಳ ಭವಿಷ್ಯದ ಬಗೆಗಾಗಲೀ ಕಿಂಚಿತ್ತೂ ಕಾಳಜಿಯಿರದ ದುರುಳರು ಪಠ್ಯಪುಸ್ತಕಗಳಲ್ಲಿ ಕೈಕಾಲಾಡಿಸಿ ಮಾಡಿರುವ ಅವಾಂತರ ತುಂಬ ಬೇಸರ ತಂದಿದೆ. ಈ ಕಾರಣದಿಂದ ನನ್ನ ಬರಹಗಳನ್ನು ಅಳವಡಿಸಿಕೊಳ್ಳಲು ಈ ಮೊದಲು ನೀಡಿದ ಅನುಮತಿಯನ್ನು ಹಿಂತೆಗೆದುಕೊಳ್ಳಬಯಸುತ್ತೇನೆ. ನೀವು ಈ ಸಂಗತಿಯನ್ನು ಗಮನಿಸಿ ಪಠ್ಯಪುಸ್ತಕ ರಚನಾ ಸಮಿತಿಗೆ ಸೂಕ್ತ ನಿರ್ದೇಶನ ನೀಡಿ ಕನ್ನಡದ, ಕನ್ನಡ ನುಡಿಯ ಘನತೆ ಎತ್ತಿಹಿಡಿಯುವಿರಾಗಿ ಇನ್ನೂ ವಿಶ್ವಾಸವಿರಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಬಸವಣ್ಣನವರ ಪಾಠ ವೈದೀಕರಣ; ಲಿಂಗಾಯತ ಮಠಾಧೀಶರ ಒಕ್ಕೂಟ ಆಕ್ರೋಶ
ಪಠ್ಯ ಪರಿಷ್ಕರಣೆ ವಿವಾದ ಮುಗಿಯುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಲೇ ಇದೆ. ಇದೀಗ ಬಸವಣ್ಣನವರ ಪಠ್ಯ ತಿರುಚುವಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಬಹಿರಂಗ ಪತ್ರ ಬರೆದಿದೆ.
ನೂರಾರು ಲಿಂಗಾಯಿತ ಮಠಾಧೀಶರು ಇರುವ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ಬಸವಣ್ಣನವರ ಪಠ್ಯವನ್ನು ತಿರುಚಿರುವ ಕುರಿತು ಗಂಭೀರವಾದ ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನು ಸರಿಪಡಿಸದೇ ಹೋದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ಅನಿವಾರ್ಯ ಎಂಬ ಎಚ್ಚರಿಕೆಯನ್ನೂ ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು ಮತ್ತು ಹಂದಿಗುಂದದ ವಿರಕ್ತಮಠದ ನೇತೃತ್ವದಲ್ಲಿ ಶ್ರೀ ಶಿವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಪತ್ರ ಬರೆದಿದ್ದು, ಲಿಂಗಾಯತ ಧರ್ಮಗುರು ಬಸವಣ್ಣನವರ ಕುರಿತು ಪಠ್ಯದಲ್ಲಿ ಬದಲಾವಣೆ ಮಾಡಿರುವುದು ಕುಚೋದ್ಯದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಮಸ್ತಕದಲ್ಲಿ ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು ಎಂದು ಬರೆಯಲಾಗಿದೆ. ಇದು ತಪ್ಪು. ಬಸವಣ್ಣನವರು ತಮ್ಮ ಸಹೋದರಿ ಅಕ್ಕನಾಗಾಯಿಗೆ ಇಲ್ಲದ ಉಪನಯನ ನನಗೇಕೆ? ಎಂದು ಧಿಕ್ಕರಿಸಿ ಕೂಡಲಸಂಗಮಕ್ಕೆ ಹೋದುದು ಐತಿಹಾಸಿಕ ಸಂಗತಿ ಎಂದು ಪತ್ರದಲ್ಲಿ ಬರೆಯಲಾಗಿದೆ.
ಅದೇ ರೀತಿ “ಶೈವ-ಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು” ಎಂದು ಬರೆಯಲಾಗಿದೆ. ಇದು ಸಹ ತಪ್ಪು. ಶೈವಗುರುಗಳು ಗುಡಿ-ಗುಂಡಾರಗಳಲ್ಲಿರುವ ಸ್ಥಾವರ ಲಿಂಗಾರಾಧಕರು, ಅವರು ಹೇಗೆ ಇಷ್ಟಲಿಂಗ ದೀಕ್ಷೆ ಮಾಡಬಲ್ಲರು. ಇಷ್ಟಲಿಂಗ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿಬಂದದು. ಅವರೇ ಇಷ್ಟಲಿಂಗದ ಜನಕರು. ಅಲ್ಲಮಪ್ರಭುದೇವರಾದಿಯಾಗಿ ಎಲ್ಲ ಶರಣರು ತಮ್ಮ ವಚನಗಳಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ‘ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ’ ಎಂದು ಚನ್ನಬಸವಣ್ಣನವರು ಉಲ್ಲೇಖಿಸಿದ್ದಾರೆ. ‘ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ? ಎನ್ನೊಳಗಿದ್ದು ನಿನ್ನ ತೋರಲಕೆ ನೀನೆ ರೂಪಾದೆ’ ಎಂದು ಬಸವಣ್ಣನವರು ಸ್ವತಃ ತಮ್ಮ ವಚನದಲ್ಲಿ ಹೇಳಿದ್ದಾರೆ” ಎಂದು ಬಹಿರಂಗ ಪತ್ರದಲ್ಲಿ ತಿಳಿಸಲಾಗಿದೆ.
“ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂದು ಈಗ ಪಠ್ಯದಲ್ಲಿ ಸೇರಿಸಲಾಗಿದೆ. ಇದು ಕೂಡ ಶುದ್ಧ ತಪ್ಪು. ವೀರಶೈವ ಶೈವದ ಶಾಖೆ. ಅದು ಮತವಿರಬಹುದು ಈಗ ಅದನ್ನು ಅಂಗಾಯತ ಧರ್ಮದ ಒಂದು ಪಂಗಡ ಎಂದು ಹೆಸರಿಸಲಾಗಿದೆ. ಸರಕಾರದ ದಾಖಲೆಗಳಲ್ಲಿ ಕ್ರಿ.ಶ.1871 ರಿಂದಲೂ ಇದನ್ನು ಕಾಣಬಹುದು. ಆದರೆ ಬಸವಣ್ಣನವರು ಅಂಗಾಯತ ಧರ್ಮದ ಸ್ಥಾಪಕರು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಶೈವದಲ್ಲಿ ವರ್ಣಾಶ್ರಮದ ಆಚರಣೆ ಇದೆ. ಅಂಗಾಯತರಲ್ಲಿ ವರ್ಣಾಶ್ರಮ ಭೇದಗಳಲ್ಲ. ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂಬುದು ಶುದ್ಧ ಅನೈತಿಹಾಸಿಕ” ಎಂದು ಮಠಾಧಿಪತಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಪಠ್ಯದಲ್ಲಿದ್ದ ವೈದಿಕ ಧರ್ಮದ ಆಚರಣೆಗಳ ನಿರಾಕರಣೆ, ಮಾನವೀಯ ಮಾಲ್ಯಗಳಿಂದ ಕೂಡಿದ ಸಿದ್ಧಾಂತದ ಪ್ರತಿಪಾದನೆ, ಅನಿಷ್ಟ ಪದ್ಧತಿಗಳ ವಿರುದ್ಧದ ಹೋರಾಟ, ಸ್ವಾವಲಂಬನೆ, ದೇಹವೇ ದೇಗುಲ ತತ್ವಗಳ ಬೋಧನೆ ಮುಂತಾದವುಗಳ ಜೊತೆಗೆ ಅವರು ಕನ್ನಡವನ್ನು ಬಳಸುವ ಮೂಲಕ ತಮ್ಮ ಚಳುವಳಿಯನ್ನು ಜನಮುಖಿಯಾಗಿಸಿದರು ಎನ್ನುವಂತಹ ಸಾಲುಗಳನ್ನು ಕೈಬಿಟ್ಟಿರುವುದು ದುರ್ದೈವದ ಸಂಗತಿ ಎಂದು ಮಠಾಧಿಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯದಲ್ಲಿ ಆಗಿರುವ ಈ ಎಲ್ಲ ದೋಷಗಳನ್ನು ನಿವಾರಿಸಿ ಪಠ್ಯಪುಸ್ತಕ ಮುದ್ರಿಸಬೇಕು. ಅನ್ಯಥಾ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುವುದಲ್ಲದೆ ವೈಶಿಷ್ಟ್ಯಪೂರ್ಣವಾದ ಲಿಂಗಾಯತ ಧರ್ಮಕ್ಕೆ ಮತ್ತು ಬಸವಣ್ಣನವರಿಗೆ ಅಪಚಾರವೆಸಗಿದಂತಾಗುತ್ತದೆ. ಲಿಂಗಾಯತ ಧರ್ಮದ ಅನುಯಾಯಿ ಮತ್ತು ಬಸವಣ್ಣನವರ ಹೆಸರಿನವರಾದ ತಾವು ಮುಖ್ಯ ಮಂತ್ರಿಯಾಗಿರುವ ಸಮಯದಲ್ಲಿ ಇಂತಹ ಅಪಚಾರವಾಗಿರುವುದು ನಮಗೆ ಆಘಾತಕಾರಿಯಾಗಿದೆ. ಬಹುಸಂಖ್ಯಾತ ಲಿಂಗಾಯತರು ಮತ್ತು ಲಿಂಗಾಯತ ಮಠಾಧಿಪತಿಗಳು ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸುವ ಮೊದಲು ಈ ತಪ್ಪು ಸರಿಪಡಿಸಿ ಪಠ್ಯ ಪುಸ್ತಕಗಳನ್ನು ಪ್ರಕಟಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಸೂಕ್ತ ಸಂದರ್ಭದಲ್ಲಿ ಹೋರಾಟ ಮಾಡುವುದು ನಮಗೆ ಅನಿವಾರ್ಯವಾಗುತ್ತದೆ” ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಫೇಸ್‌ಬುಕ್, ಟ್ವಿಟರ್‌ನಲ್ಲಿ ಮೊಗೆದಷ್ಟೂ ಅವಾಂತರಗಳು ಬಯಲು
ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆ ತಿರುಚಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದ ರೋಹಿತ್ ಚಕ್ರತೀರ್ಥನನ್ನು ಪಠ್ಯಪುಸ್ತಕ ಪರಿಶೀಲನೆಗೆ ನೇಮಿಸಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು ಗೊತ್ತೇ ಇದೆ. ಅಷ್ಟೇ ಅಲ್ಲದೆ ರೋಹಿತ್ ಚಕ್ರತೀರ್ಥ ಮಾಡಿದ್ದ ಹಳೆಯ ಟ್ರೋಲ್‌ಗಳು, ಅಸಂಬಂಧ ಪೋಸ್ಟ್‌ಗಳು, ಕಮೆಂಟ್‌ಗಳು ಈಗ ಒಂದಾದಾಗಿ ಚರ್ಚೆಯ ಮುನ್ನೆಲೆಗೆ ಬರುತ್ತಿವೆ. ಸಾರ್ವಜನಿಕ ಜೀವನದಲ್ಲಿ ಹೀಗಿದ್ದ ವ್ಯಕ್ತಿಯನ್ನು ಮಕ್ಕಳ ಭವಿಷ್ಯ ನಿರ್ಧರಿಸುವ ಪಠ್ಯಪುಸ್ತಕ ಪರಿಶೀಲಿಸಲು ನೇಮಿಸಿದ್ದು ಏತಕ್ಕೆ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಭೆಯನ್ನು ಅಣಕಿಸಿ ಚಕ್ರತೀರ್ಥ ಮಾಡಿದ್ದ ಕಮೆಂಟ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಹಳೆಯ ಕಮೆಂಟ್ ಈಗ ವಿವಾದಕ್ಕೆ ಕಾರಣವಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ರೋಹಿತ್ ಚಕ್ರತೀರ್ಥನನ್ನು ಐಐಟಿ ಪ್ರೊಫೆಸರ್ ಎಂದು ಸುಳ್ಳು ಎಂದಿದ್ದರು. ಆದರೆ ಐಐಟಿ ಪ್ರೊಫೆಸರ್ ಪೋಸ್ಟ್‌ಗಳು ಹೀಗಿದ್ದವು ಎಂದು ಜನರು ಟೀಕಿಸುವಂತಾಗಿದೆ.

“ಸಿ.ಎಸ್.ದ್ವಾರಕಾನಾಥ್ ಬರೆದ ‘ಸರ್ ಎಂ.ವಿ.ಸುತ್ತ ಹೆಣೆದ ಕತೆಗಳು ಮತ್ತು ಸತ್ಯ’ ಎಂಬ ಲೇಖನಕ್ಕೆ ಚಕ್ರತೀರ್ಥ ಮಾಡಿದ ಕಮೆಂಟ್‌ನಲ್ಲಿ ಅಂಬೇಡ್ಕರ್ ಕುರಿತ ಕೆಟ್ಟ ವ್ಯಂಗ್ಯ” ಎಂದು ಶಶಿಧರ್ ಹೆಮ್ಮಾಡಿಯವರು 2016ರಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಈಗ ಲಭ್ಯವಾಗಿದೆ.
“ಅಂಬೇಡ್ಕರ್ ಜಗತ್ತಿನ ಅತಿದೊಡ್ಡ ಜಲತಂತ್ರಜ್ಞರು, ವಾಯುತಂತ್ರಜ್ಞರು, ವೈದ್ಯರು, ಕಂಪ್ಯೂಟರ್ ತಜ್ಞರು, ಪ್ರಾಧ್ಯಾಪಕರು, ವಕೀಲರು, ರಾಕೆಟ್ ತಂತ್ರಜ್ಞರು ಆಗಿದ್ದರು. ಪ್ರಪಂಚದಲ್ಲಿ ಚಕ್ರ ಮತ್ತು ಬೆಂಕಿಯ ಉಪಯೋಗವನ್ನು ಕಂಡುಹಿಡಿದವರು ಇವರೇ- ಜೈ ಭೀಮ್” ಎಂದು ಹೀಯಾಳಿಸಿರುವುದು ಇಲ್ಲಿ ಕಾಣಬಹುದು.
ಕೆಟ್ಟದ್ದಾಗಿ ಬರೆದ ಮತ್ತೊಂದು ಹಳೆಯ ಪೋಸ್ಟ್ ಈಗ ಹರಿದಾಡಿದೆ.

ಸರಜೂ ಕಾಟ್ಕರ್ ಕವಿತೆ ವಾಪಸ್
ಪಠ್ಯ ಪುಸ್ತಕ ವಾಪಸಾತಿ ಪ್ರತಿರೋಧ ಮುಂದುವರಿದಿದೆ. ಖ್ಯಾತ ಕವಿ ಸರಜೂ ಕಾಟ್ಕರ್, ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿದ್ದು ತಮ್ಮ ಪದ್ಯವನ್ನು ವಾಪಸ್ ಪಡೆದಿರುವುದಾಗಿ ತಿಳಿಸಿದ್ದಾರೆ.
“ಈಗಿನ ಪಠ್ಯಪುಸ್ತಕ ಪುನರ್ ರಚನಾ ಸಮಿತಿ ಮತ್ತು ಅದರ ನಿಲುವುಗಳ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಲಿದ್ದು ವಿದ್ಯಾರ್ಥಿಗಳಲ್ಲಿ, ಶೈಕ್ಷಣಿಕ ಕ್ಷೇತ್ರದಲ್ಲಿ ಪಾಲಕರಲ್ಲಿ ಹಾಗೂ ಇಡೀ ಜನ ಸಮೂಹದಲ್ಲಿ ಒಂದು ರೀತಿಯ ಗೊಂದಲಕ್ಕೆ ಕಾರಣವಾಗಿದೆ. ಈ ಹಿಂದೆ ಒಂಬತ್ತೆಯ ತರಗತಿ ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕದಲ್ಲಿ ನನ್ನ ‘ಶಬ್ದಗಳು’ ಎಂಬ ಕವಿತೆಯನ್ನು ಅಳವಡಿಸಲಾಗಿತ್ತು. ನನ್ನ ನಂಬುಗೆ ಮತ್ತು ಇಷ್ಟು ವರ್ಷಗಳ ಕಾಲದ ಬದ್ಧತೆಯ ಕಾರಣಕ್ಕೆ ನನ್ನ ಕವಿತೆಗೆ ಈ ಹಿಂದೆ ಕೊಟ್ಟ ಒಪ್ಪಿಗೆಯನ್ನು ಹಿಂದೆ ಪಡೆಯುತ್ತಿದ್ದೇನೆ” ಎಂದು ಸರಜೂ ಕಾಟ್ಕರ್ ತಿಳಿಸಿದ್ದಾರೆ.
ಮುಂದುವರಿದ ರಾಜೀನಾಮೆ, ಪಠ್ಯ ವಾಪಸಾತಿ ಪರ್ವ
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿ ಪಠ್ಯ ಕೋಮುವಾದೀಕರಣ ಮಾಡಿರುವುದನ್ನು ವಿರೋಧಿಸಿ ಪಠ್ಯ ಅನುಮತಿ ನಿರಾಕರಣೆ ಪರ್ವ ಮುಂದುವರೆದಿದೆ. ಹಿರಿಯ ಸಾಹಿತಿ ದೇವನೂರ ಮಹಾದೇವರಿಂದ ಆರಂಭಗೊಂಡ ನನ್ನ ಪಠ್ಯ ಕೈಬಿಡಿ ಹೋರಾಟಕ್ಕೆ ಚಂದ್ರಶೇಖರ ತಾಳ್ಯ, ಪ್ರೊ.ಮಧುಸೂದನರವರು ಸಹ ಕೈ ಜೋಡಿಸಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರಿಗೆ ಪತ್ರ ಬರೆದಿರುವ ಪ್ರೊ. ಕೆ.ಎಸ್ ಮಧುಸೂದನರವರು, “ಕರ್ನಾಟಕ ರಾಜ್ಯದ 9ನೇ ತರಗತಿಯ ದ್ವೀತಿಯ ಭಾಷಾ ಕನ್ನಡ ಪುಸ್ತಕ “ತಿಳಿಗನ್ನಡ” ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷನಾಗಿ ನಾನು ಕಾರ್ಯ ನಿರ್ವಹಿಸಿದ್ದೆನು. ಈಗಲೂ ನನ್ನ ಅಧ್ಯಕ್ಷತೆಯಲ್ಲಿ ಅದೇ ಪಠ್ಯ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಕರ್ನಾಟಕದ ನಾಡು ನುಡು ಸಂಸ್ಕೃತಿಯ ಅಂತಃಸಾಕ್ಷಿಯಂತಿರುವ ಮಾನ್ಯ ಕುವೆಂಪುರವರನ್ನು ಈಗನ ಪಠ್ಯ ಪರಿಷ್ಕರಣ ಸಮಿತಿಯ ಅಧ್ಯಕ್ಷರು ಲಘುವಾಗಿ ಗೇಲಿ ಮಾಡಿದ್ದಕ್ಕೆ ಮನನೊಂದು ಹಾಗೂ ಪ್ರತಿಭಟಿಸುತ್ತಾ ಭಾಷಾ ಪಠ್ಯಪುಸ್ತಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
ಮುಂದುವರಿದು, “ಪಠ್ಯದಲ್ಲಿ ನನ್ನ ಹೆಸರು ಮತ್ತು ನಾನು ಬರೆದ ಪಾಠ ಮುನ್ನ ಪ್ರಸ್ತಾವನೆಯನ್ನು ಸೇರಿಸಬಾರದು” ಎಂದು ಮನವಿ ಮಾಡಿದ್ದಾರೆ.
ಅದೇ ರೀತಿಯಾಗಿ ನಿವೃತ್ತ ತರ್ಕ ಶಾಸ್ತ್ರ ಉಪನ್ಯಾಸಕರಾದ ಚಂದ್ರಶೇಖರ ತಾಳ್ಯರವರು 6ನೇ ತರಗತಿಯ ದ್ವಿತೀಯ ಭಾಷಾ ಪಠ್ಯದಲ್ಲಿ ನನ್ನ ಒಂದು ಸೋಜಿಗದ ಪದ್ಯ ಎಂಬ ಕವಿತೆ ಸೇರ್ಪಡೆಯಾಗಿದೆ. ಅದನ್ನು ಪಠ್ಯವಾಗಿ ಬೋಧಿಸಲು ನನ್ನ ಅನುಮತಿಯನ್ನು ವಾಪಸ್ ಪಡೆಯುತ್ತಿರುವೆ ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಪತ್ರದಲ್ಲಿ “ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಶಿಕ್ಷಣ ಕ್ಷೇತ್ರದ ಮೇಲಿನ ಸಾಂಸ್ಕೃತಿಕ ಹಲ್ಲೆ ಮಿತಿ ಮೀರುತ್ತಿದೆ. ಅದೀಗ ಪಠ್ಯಕ್ರಮದ ಮೇಲೂ ತನ್ನ ಕರಿನೆರಳು ಚಾಚುತ್ತಿದೆ. ಅಸಾಂವಿಧಾನಿಕ ನಿರ್ಧಾರಗಳಿಂದ ಇಡೀ ಶೈಕ್ಷಣಿಕ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಅನೈತಿಕ ನಡೆ ನನ್ನಂಥ ಲೇಖಕನನ್ನು ಅಧೀರನನ್ನಾಗಿ ಮಾಡುತ್ತದೆ. ಇದು ಕನ್ನಡ ಪರಂಪರೆಯನ್ನು ಕುಬ್ಜಗೊಳಿಸುವ ಅಕ್ರಮ ನಡೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಪಠ್ಯ ಪರಿಷ್ಕರಣೆಯ ನೆಪದಲ್ಲಿ ನಡೆಯುತ್ತಿರುವ ಈ ಸಂಸ್ಕ್ರತಿ ತಿರುಚೀಕರಣ ನಮ್ಮ ಪರಂಪರಾಗತ ಸಂಸ್ಕೃತಿಯನ್ನೇ ವಿರೂಪಗೊಳಿಸವಂತಿಹುದು. ಇದನ್ನು ತಾವು ಗಮನಿಸಬೇಕು ಎನ್ನುವುದು ನನ್ನ ಆಗ್ರಹ” ಎಂದು ಅವರು ತಿಳಿಸಿದ್ದಾರೆ.
ಪದ್ಯ ಹಿಂಪಡೆಯುವ ಬಗ್ಗೆ ಕವಿ ಮೂಡ್ನಾಕೂಡು ಪತ್ರ
“ಕರ್ನಾಟಕ ಘನ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಮಿತಿಯನ್ನು ನೇಮಿಸಿ ಶಾಲಾ ಪಠ್ಯಗಳನ್ನು ಕೇಸರೀಕರಣಗೊಳಿಸುತ್ತಿರುವ ಬಗ್ಗೆ ಕನ್ನಡ ಸಾರಸ್ವತ ಲೋಕ ವಿಚಲಿತಗೊಂಡಿದೆ. ಬಸವಣ್ಣನವರ ಕುರಿತು ತಪ್ಪು ಮಾಹಿತಿ ನೀಡುವುದು, ಮಹಾನ್ ದಾರ್ಶನಿಕ ಕವಿ ಕುವೆಂಪು ಅವರನ್ನು ಅವಮಾನಿಸುವುದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಾಡುವ ಅಪಚಾರ. ಜಾತಿ ವ್ಯವಸ್ಥೆಯಿಂದ ಕಲುಷಿತಗೊಂಡಿರುವ ನಮ್ಮ ಸಮಾಜವನ್ನು ಜಾತ್ಯತೀತತೆಯಿಂದ ಮಾತ್ರ ಸರಿಪಡಿಸಲು ಸಾಧ್ಯ. ಸ್ವಸ್ಥ ಸಮಾಜಕ್ಕಾಗಿ ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರ ಅನವಶ್ಯಕ ವಿದ್ಯಮಾನಗಳಿಂದ ದಾಳಿಗೊಳಗಾಗಿರುವುದು ವಿಷಾದನೀಯ. ಪ್ರಗತಿಪರತೆಯನ್ನು ಪ್ರತಿಪಾದಿಸುವವರನ್ನು ಎಡಪಂಥೀಯರು ಎಂದು ದೂರುವುದು, ದೂರ ಮಾಡುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಈ ಹಿನ್ನೆಲೆಯಲ್ಲಿ ಐದನೇ ತರಗತಿಗೆ ಪಠ್ಯವಾಗಿರುವ “ನನ್ನ ಕವಿತೆಗೆ” ಎಂಬ ಕವಿತೆಗೆ ನೀಡಿರುವ ನನ್ನ ಅನುಮತಿಯನ್ನು ಈ ಮೂಲಕ ಹಿಂಪಡೆಯುತ್ತಿದ್ದೇನೆ” ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
ಲೇಖಕ ಈರಪ್ಪ ಎಂ.ಕಂಬಳಿ ಅವರ ಪತ್ರದಲ್ಲೇನಿದೆ?
ತಮ್ಮ ಪಾಠವನ್ನು ಹಿಂಪಡೆಯುವುದಾಗಿ ಸಚಿವರಿಗೆ ಪತ್ರ ಬರೆದಿರುವ ಲೇಖಕ ಈರಪ್ಪ ಎಂ.ಕಂಬಳಿ, “ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅನಾರೋಗ್ಯಕರ ಬೆಳವಣಿಗೆಯನ್ನು ಕಂಡ ನನಗೆ ತೀವ್ರ ಅಸಮಾಧಾನವಾಗಿದೆ. ಈ ಕಾರಣಕ್ಕೆ ಕಳೆದ ಸಾಲಿನಲ್ಲಿ ಹತ್ತನೆಯ ತರಗತಿಯ ನುಡಿ ಕನ್ನಡ ತೃತೀಯ ಭಾಷಾ ಕನ್ನಡ ಪಠ್ಯಪುಸ್ತಕದಲ್ಲಿ ‘ಹೀಗೊಂದು ಟಾಪ್ ಪ್ರಯಾಣ’ ಶೀರ್ಷಿಕೆಯ ನನ್ನ ಲಲಿತ ಪ್ರಬಂಧವನ್ನು ಮುಂದುವರಿಸಬಾರದೆಂದೂ, ಈ ಹಿಂದೆ ನೀಡಿದ್ದ ನನ್ನ ಅನುಮತಿಯನ್ನು ಈ ಮೂಲಕ ವಾಪಸ್ ಪಡೆದಿರುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಸರ್ಕಾರದ ಎಡವಟ್ಟುಗಳನ್ನು ಎತ್ತಿ ಹಿಡಿದು ಪಠ್ಯ ಹಿಂಪಡೆದ ಲೇಖಕಿ ರೂಪ ಹಾಸನ
“ಈ ವರ್ಷ ಶಾಲಾ ಪಠ್ಯಪುಸ್ತಕಗಳು ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ಮರುಪರಿಷ್ಕರಣೆಗೊಂಡಿರುವುದು ಖೇದನೀಯ. ಅದನ್ನು ಈಗಾಗಲೇ ಕೆಲವು ಹಿರಿಯ ಗೌರವಾನ್ವಿತ ಸಾಹಿತಿಗಳು ಖಂಡಿಸಿ, ಪಠ್ಯದಲ್ಲಿ ತಮ್ಮ ಬರಹವನ್ನು ಸೇರ್ಪಡೆಗೊಳಿಸಲು ಹಿಂದಿನ ಸಮಿತಿಗೆ ಕೊಟ್ಟ ಅನುಮತಿಯನ್ನು ಹಿಂಪಡೆಯುವ ಮೂಲಕ ತಮ್ಮ ನೈತಿಕ ಹಾಗೂ ಸಾತ್ವಿಕ ಪ್ರತಿರೋಧ ತೋರಿದ್ದಾರೆ. ಆದರೆ ಆದ ತಪ್ಪನ್ನು ಸರಿಪಡಿಸಿ, ತಕ್ಷಣವೇ ಕ್ರಮ ಕೈಗೊಳ್ಳಬೇಕಾದ ಸರ್ಕಾರ, ಈ ಕುರಿತು ನಿರ್ಲಕ್ಷ್ಯ ವಹಿಸಿರುವುದು ಹಾಗೂ ಸರ್ಕಾರದ ಜನಪ್ರತಿನಿಧಿಗಳಿಂದಲೇ ಅಂತಹ ಘನತೆಯುತ ಸಾಹಿತಿಗಳನ್ನು ಇನ್ನಷ್ಟು ಅವಮಾನಿಸುವ ಸಂಗತಿಗಳು ನಡೆಯುತ್ತಿರುವುದು ಖಂಡನೀಯ” ಎಂದು ಲೇಖಕಿ ರೂಪ ಹಾಸನ ಅವರು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
“ಈಗಿನ ಪಠ್ಯ ಮರು ಪರಿಷ್ಕರಣಾ ಸಮಿತಿಯಲ್ಲಿ ಒಬ್ಬೇ ಒಬ್ಬ ಮಹಿಳಾ ಸದಸ್ಯರಿಲ್ಲದಿರುವುದು, ಹತ್ತನೆಯ ತರಗತಿಯ ಕನ್ನಡ ಪಠ್ಯದಲ್ಲಿ ಒಬ್ಬ ಮಹಿಳೆಯದೂ ಗದ್ಯ-ಪದ್ಯವಿಲ್ಲದಿರುವುದೂ, ಒಬ್ಬೇ ಒಬ್ಬ ಸಾಧಕಿಯ ಕುರಿತೂ ಪಠ್ಯವಿಲ್ಲದಿರುವುದೂ ಸರ್ಕಾರ ಮಹಿಳಾ ಸಂಕುಲಕ್ಕೆ ಮಾಡಿದ ಅವಮಾನವೆಂಬುದು ನೋವಿನ ಸಂಗತಿಯಾಗಿದೆ” ಎಂದು ತಿಳಿಸಿರುವ ಅವರು, “ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 ಸಂವಿಧಾನದ ಮೂಲತತ್ವಗಳಿಗೆ ಬದ್ಧವಾಗಿ ರೂಪುಗೊಂಡಿದೆ. ಪ್ರಜಾಪ್ರಭುತ್ವದ ಆಶಯಗಳನ್ನೊಳಗೊಂಡು ಸಮಾನತೆ, ಧರ್ಮನಿರಪೇಕ್ಷತೆ, ಲಿಂಗಸಮಾನತೆ, ಸಾಮಾಜಿಕ ನ್ಯಾಯ, ತಾರತಮ್ಯ ನಿರ್ಮೂಲನೆ, ಹಕ್ಕುಗಳ ಬಗ್ಗೆ ಗೌರವವನ್ನು ಪಠ್ಯದ ಆದ್ಯತೆಯಾಗಿ ಪರಿಗಣಿಸಬೇಕೆಂದು ಅದು ಘೋಷಿಸಿದೆ. ಆದರೆ ಪರಿಷ್ಕೃತ ಪಠ್ಯಗಳು ಆ ನೀತಿ ನಿಯಮಗಳಿಗೆ ಅನುಗುಣವಾಗಿ ರೂಪಿತವಾಗಿಲ್ಲದಿರುವುದು ಎದ್ದು ಕಾಣುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಮಗುವಿನ ಬುದ್ಧಿ ಮತ್ತು ಮನಸುಗಳು ನಮ್ಮ ಬಹುತ್ವ ಭಾರತದ ಬಹುಸಂಸ್ಕೃತಿಗಳ ಬಹು ಆಯಾಮಗಳನ್ನು ಒಳಗೊಳ್ಳುವಂತಿರಬೇಕು. ಪಠ್ಯಗಳು ವಿಶಾಲ, ಉದಾತ್ತ, ವೈಚಾರಿಕ, ವೈಜ್ಞಾನಿಕ, ಸಹಬಾಳ್ವೆ, ಸಾಮರಸ್ಯದ ಉದ್ದೇಶ ಹೊಂದಿರಬೇಕು. ಪ್ರತಿ ಮಗುವೂ ಪ್ರೀತಿ, ಆಹಿಂಸೆ ಮತ್ತು ಐಕ್ಯತೆದಿಂದ ಬೆಳೆಯುವಂತೆ, ಮುಕ್ತಚಿಂತನೆಯಿಂದ ಕೂಡಿದ ಸಮಚಿತ್ತದ ಪಠ್ಯವನ್ನು ರೂಪಿಸಲು ಆದ್ಯತೆ ನೀಡಬೇಕಿದ್ದುದು ಅತ್ಯಂತ ಮುಖ್ಯವಾಗಿತ್ತು. ಆದರೆ ಈ ಚೌಕಟ್ಟಿನ ಆಶಯಕ್ಕನುಗುಣವಾಗಿ ಮರು ಪರಿಷ್ಕರಣೆ ನಡೆದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಒಂಬತ್ತನೆಯ ತರಗತಿ ತೃತೀಯ ಭಾಷಾ ಕನ್ನಡ ಪಠ್ಯಪುಸ್ತಕ ‘ನುಡಿಕನ್ನಡ’ ಪಠ್ಯದಲ್ಲಿ ಅಳವಡಿಕೆಯಾಗಿದ್ದ ನನ್ನ ‘ಅಮ್ಮನಾಗುವುದೆಂದರೆ’ ಕವಿತೆಯನ್ನು ಬೋಧಿಸಲು ಹಿಂದಿನ ಸಮಿತಿಗೆ ನೀಡಿದ್ದ ಅನುಮತಿಯನ್ನು ಈ ಮೂಲಕ ಹಿಂಪಡೆಯುತ್ತಿದ್ದೇನೆ” ಎಂದು ರೂಪ ಹಾಸನ ತಿಳಿಸಿದ್ದಾರೆ.
ದೇವನೂರು ಮಹಾದೇವರವರು ಆರಂಭಿಸಿದ ಈ ಪಠ್ಯ ವಾಪ್ಸಿ ಚಳವಳಿಗೆ ವ್ಯಾಪಕ ಬೆಂಬಲ ದೊರಕಿದೆ. ಅವರ ಹಾದಿಯಲ್ಲಿಯೇ ಹಿರಿಯ ಸಾಹಿತಿಗಳಾದ ಜಿ.ರಾಮಕೃಷ್ಣ, ಎಸ್.ಜಿ.ಸಿದ್ದರಾಮಯ್ಯ, ಚಂದ್ರಶೇಖರ ತಾಳ್ಯ ಸೇರಿದಂತೆ ಅನೇಕ ಲೇಖಕರು ಹೆಜ್ಜೆ ಇರಿಸಿದ್ದಾರೆ.
(ಸುದ್ದಿಗಳು ಅಪ್‌ಡೇಟ್ ಆಗಲಿವೆ. ಪಠ್ಯಪುಸ್ತಕ ವಿವಾದ ಸಂಬಂಧದ ಕ್ಷಣಕ್ಷಣದ ಮಾಹಿತಿಗಾಗಿ ರೀಫ್ರೆಶ್ ಮಾಡಿರಿ.)



ಈ ವ್ಯಕ್ತಿಯ ಪೋಸ್ಟ್ ನೋಡಿದರೆ, ಪುಂಡ ಫೋಕರಿ ಯ ಹಾಗಿದ್ದಾನೆ.
Baredavinge nija hesaru haklijke dammilla!?