ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಶೂಟರ್ ಸಂತೋಷ್ ಜಾಧವ್ ಮತ್ತು ಪ್ರಕರಣದ ಶಂಕಿತ ಆರೋಪಿ ಜಾಧವ್ ಅವರ ಸಹಾಯಕ ನವನಾಥ್ ಸೂರ್ಯವಂಶಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಆರೋಪಿ ಸಂತೋಷ್ ಜಾಧವ್ ತನ್ನ ಗುರುತನ್ನು ಮರೆಮಾಚಲು ತಲೆ ಬೋಳಿಸಿಕೊಂಡಿದ್ದರು. ಆತನನ್ನು ಗುಜರಾತ್‌ನ ಕಚ್ ಜಿಲ್ಲೆಯ ಮಾಂಡವಿಯಿಂದ ಪುಣೆ ಪೊಲೀಸರು ಬಂಧಸಿ, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಮಂಚಾರ್ ಪೊಲೀಸ್ ಠಾಣೆಯಲ್ಲಿ 2021 ರಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನಾಗಿರುವ ಸಂತೋಷ್ ಜಾಧವ್ ಮತ್ತು ಸಹಾಯಕ ಸೂರ್ಯವಂಶಿಯನ್ನು ಪೊಲೀಸರ ತಂಡ ಬಂಧಿಸಿದೆ ಎಂದು ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಯುಪಿ: ಪ್ರತಿಭಟನಾಕಾರರ ಮನೆ ಮೇಲೆ 2ನೇ ದಿನವೂ ಮುಂದುವರೆದ ಬುಲ್ಡೋಜರ್ ದಾಳಿ
ಬಂಧಿತ ಜಾದವ್ ಮತ್ತು ಸೂರ್ಯವಂಶಿ ಅವರನ್ನು ಭಾನುವಾರ ಮಧ್ಯರಾತ್ರಿ ಪುಣೆಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಜೂನ್ 20 ರವರೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಕಳೆದ ವಾರ, ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಸಂತೋಷ್ ಜಾಧವ್ (23) ಮತ್ತು ಪುಣೆ ನಿವಾಸಿ ಸಿದ್ಧೇಶ್ ಕಾಂಬ್ಳೆ ಅಲಿಯಾಸ್ ಸೌರವ್ ಅಲಿಯಾಸ್ ಮಹಾಕಾಲ್ ಹೆಸರುಗಳು ಕೇಳಿಬಂದಿದ್ದವು.
“ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ ಈ ಎಲ್ಲಾ ಶಂಕಿತ ಆರೋಪಿಗಳಾದ ಕಾಂಬ್ಳೆ, ಜಾಧವ್ ಮತ್ತು ಸೂರ್ಯವಂಶಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಮೂಸೆವಾಲಾ ಪ್ರಕರಣದಲ್ಲಿ ಅವರ ಪಾತ್ರವಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಕುಲವಂತ್ ಕುಮಾರ್ ಸಾರಂಗಲ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಮತ್ತು ಗಾಯಕ ಶುಭದೀಪ್ ಸಿಂಗ್ ಸಿಧು ಅಲಿಯಾಸ್ ಸಿಧು ಮೂಸೆವಾಲಾ ಅವರನ್ನು ಮೇ 29 ರಂದು ಮಾನ್ಸಾ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪಂಜಾಬ್ ಸರ್ಕಾರ ಅವರ ಭದ್ರತೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ ಈ ಘಟನೆ ನಡೆದಿತ್ತು.
ಇದನ್ನೂ ಓದಿ: ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಮತ್ತೊಬ್ಬ ಶಂಕಿತ ಆರೋಪಿ ಬಂಧನ


