2016 ರಿಂದ 2019ರವರೆಗೆ ಮೂರು ವರ್ಷಗಳಲ್ಲಿ ಭಾರತೀಯ ಸೇನೆಗೆ 1.54 ಲಕ್ಷ ಯುವಜನರು ಸೇರಿದ್ದಾರೆ. ಅಂದರೆ ವರ್ಷಕ್ಕೆ ಸರಾಸರಿ 51 ಸಾವಿರ ಜನರು ಸೇನೆಗೆ ಆಯ್ಕೆಯಾಗುತ್ತಿದ್ದರು. ಆದರೆ ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಿಂದ ಸೇನಾ ನೇಮಕಾತಿ ನಡೆದಿಲ್ಲ. ಒಂದು ವೇಳೆ ನಡೆದಿದ್ದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಸೇನೆಯಲ್ಲಿ ಉದ್ಯೋಗ ಪಡೆದಿರುತ್ತಿದ್ದರು. ಹಾಗಾಗಿ ಹಲವು ಲಕ್ಷ ಯುವಜನರು ನೇಮಕಾತಿಗಾಗಿ ಕಾದು ಕುಳಿತಿದ್ದರು. ಇಂತಹ ಸಂದರ್ಭದಲ್ಲಿ ಜೂನ್ 14 ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಮತ್ತು ಮೂವರು ಸೇನಾ ಮುಖ್ಯಸ್ಥರು ಕೇಂದ್ರ ಸರ್ಕಾರದ ನೂತನ ’ಅಗ್ನಿಪಥ್’ ಎಂಬ ರಕ್ಷಣಾ ನೇಮಕಾತಿಯ ಯೋಜನೆ ಘೋಷಿಸಿದರು. ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗೆ ನಾಲ್ಕು ವರ್ಷಗಳ ಅಲ್ಪ ಅವಧಿಗೆ ಈ ವರ್ಷ ’ಅಗ್ನಿವೀರ್’ ಹೆಸರಿನ ಯೋಜನೆಯಡಿ 46,000 ಯುವ ಸೈನಿಕರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದರು. 17.5ರಿಂದ 21 ವರ್ಷದವರೆಗಿನ ಬುದ್ಧಿವಂತ, ತಂತ್ರಜ್ಞಾನ ತಿಳಿವಳಿಕೆಯುಳ್ಳ ಯುವಜನರು ಸೇನೆಗೆ ಸೇರ್ಪಡೆಯಾಗುವ ಮೂಲಕ ಭಾರತೀಯ ಸೇನೆಗೆ ತಾರುಣ್ಯ ತಂದುಕೊಡಲಿದ್ದಾರೆ ಎಂದರು.
ಸದ್ಯದ ಭಾರತೀಯ ಸೈನಿಕರ ಸರಾಸರಿ ವಯಸ್ಸು 32 ವರ್ಷ ಇದ್ದು, ಅದನ್ನು 24-26 ವರ್ಷಕ್ಕೆ ಇಳಿಸುವ ಮತ್ತು ಪಿಂಚಣಿ-ಗ್ರಾಚ್ಯುಟಿ, ಸಂಬಳ ಸೇರಿದಂತೆ ಇತರ ಭತ್ಯೆಗಳನ್ನು ಕಡಿತಗೊಳಿಸುವುದು ಈ ಯೋಜನೆಯ ಗುರಿ ಎಂದು ಸರ್ಕಾರ ಹೇಳಿಕೊಂಡಿದೆ.
ಮತ್ತೊಂದೆಡೆ ಈ ಘೋಷಣೆಯಾದಾಗಿನಿಂದ ಸೇನೆ ಸೇರುವ ಆಕಾಂಕ್ಷಿಗಳು ದುಃಖಿತರಾಗಿದ್ದಾರೆ ಮತ್ತು ಆಕ್ರೋಶಗೊಂಡಿದ್ದಾರೆ. ಸೇನೆ ಸೇರಿ ದೀರ್ಘಾವಧಿ ರಾಷ್ಟ್ರಸೇವೆ ಮಾಡಬೇಕೆಂಬ ಅವರು ಕನಸು ನುಚ್ಚುನೂರಾಗಿದೆ. ಕಾಯಂ ಉದ್ಯೋಗದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಯುವಜನರು ಆಕ್ರೋಶಿತರಾಗಿ ದೇಶಾದ್ಯಂತ ಬೀದಿಗಿಳಿದು ತೀವ್ರರೂಪದಲ್ಲಿ ಪ್ರತಿಭಟಿಸುತ್ತಿದ್ದಾರೆ. 8 ರಾಜ್ಯಗಳಲ್ಲಿ ಸತತ ಒಂದು ವಾರದಿಂದ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಗಳು ತಾರಕಕ್ಕೇರಿ ಹಿಂಸಾಚಾರಕ್ಕೆ ತಿರುಗಿದೆ. ಯುವಜನರು ಭಾರತ್ ಬಂದ್ ಆಚರಿಸಿ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ಪ್ರತಿಪಕ್ಷಗಳು ಮತ್ತು ನಿವೃತ್ತ ಸೈನ್ಯಾಧಿಕಾರಿಗಳು ಸಹ ಅಗ್ನಿಪಥ್ ಯೋಜನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಸೈನಿಕರ ವೃತ್ತಿಪರತೆ, ನೈತಿಕತೆ ಮತ್ತು ಹೋರಾಟದ ಮನೋಭಾವವನ್ನು ಛಿದ್ರಗೊಳಿಸಬಹುದು ಮತ್ತು ನಾಗರಿಕ ಸಮಾಜದ ಮಿಲಿಟರೀಕರಣಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಸಮರ್ಥನೆಯೇನು?
2022ರ ವರ್ಷದಲ್ಲಿ ಅಗ್ನಿವೀರರ ವಯೋಮಿತಿಯನ್ನು 23 ವರ್ಷದವರೆಗೆ ವಿಸ್ತರಿಸಿದ್ದೇವೆ; 6 ತಿಂಗಳ ತರಬೇತಿಯೊಂದಿಗೆ 4 ವರ್ಷ ಸೇವೆ ಸಲ್ಲಿಸಲು ಅವಕಾಶವಿದೆ; ಆ ನಂತರ ಅಗತ್ಯಕ್ಕೆ ತಕ್ಕಂತೆ ಶೇ.25ರವರೆಗೆ ಅಗ್ನಿವೀರರು ರೆಗ್ಯುಲರ್ ಕೇಡರ್ ಆಗಿ ಮುಂದಿನ 15 ವರ್ಷಗಳಿಗೆ ಆಯ್ಕೆಯಾಗಲು ಅರ್ಜಿ ಸಲ್ಲಿಸಬಹುದು.
ಉಳಿದ 75% ಅಗ್ನಿವೀರರು ನಿವೃತ್ತಿಯಾಗುತ್ತಾರೆ. ಅವರಿಗೆ 11.71 ಲಕ್ಷ ರೂ ಸೇವಾ ನಿಧಿ ಪ್ಯಾಕೇಜ್ ನೀಡಲಾಗುತ್ತದೆ. ಅದು ತೆರಿಗೆಯಿಂದ ವಿನಾಯಿತಿ ಪಡೆಯುತ್ತದೆ. (ಪ್ರತಿ ತಿಂಗಳು ಅಗ್ನಿವೀರರ ಸಂಬಳದಿಂದ 30% ಹಣವನ್ನು ಕಡಿತ ಮಾಡಿ ಅಷ್ಟೇ ಪ್ರಮಾಣದ ಹಣವನ್ನು ಸರ್ಕಾರದಿಂದ ಹಾಕಿ ಅದಕ್ಕೆ ಬಡ್ಡಿ ಸೇರಿಸಿ ಕೊನೆಯಲ್ಲಿ ಕೊಡುವುದೆ ಸೇವಾನಿಧಿ ಪ್ಯಾಕೇಜ್ ಆಗಿದೆ. ಇದಕ್ಕೆ ಹತ್ತಾರು ಷರತ್ತುಗಳಿವೆ)
ಅಗ್ನಿವೀರರು ಶಿಸ್ತು, ಸ್ಫೂರ್ತಿ, ಸ್ಕಿಲ್ ಮತ್ತು ದೈಹಿಕ ಸ್ಥಿರತೆ ಪಡೆಯುತ್ತಾರೆ. ಅವರಿಗೆ ಪಿಯುಸಿಗೆ ಸಮನಾದ ಶೈಕ್ಷಣಿಕ ಕೋರ್ಸ್ ಸರ್ಟಿಫಿಕೇಟ್ ನೀಡಲಾಗುತ್ತದೆ.
ಅಗ್ನಿವೀರರಿಗೆ 48 ಲಕ್ಷ ರೂಗಳ ಜೀವವಿಮೆ ಇರುತ್ತದೆ. ಸೇನಾಕರ್ತವ್ಯದಲ್ಲಿ ವೈ ಮತ್ತು ಝಡ್ ವರ್ಗದ ಅಗ್ನಿವೀರರು ಮೃತಪಟ್ಟರೆ 44 ಲಕ್ಷ ರೂಗಳ ಪರಿಹಾರ ನೀಡಲಾಗುತ್ತದೆ. (ಎಕ್ಸ್ ವರ್ಗದವರಿಗೆ ಇಲ್ಲ.)
ಮಾಜಿ ಅಗ್ನಿವೀರರಿಗೆ ಸ್ವಯಂ ಉದ್ಯೋಗ ಮಾಡಲು ಬ್ಯಾಂಕ್ ಸಾಲ ಸೌಲಭ್ಯ ನೀಡಲಾಗುತ್ತದೆ. ಸರ್ಕಾರದ ಇತರ ಉದ್ಯೋಗಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುತ್ತದೆ.
ಪ್ರತಿಭಟನಾನಿರತ ಯುವಜನರ ಆಕ್ರೋಶವೇನು?
ಮೊದಲ ವರ್ಷ ಅಗ್ನಿವೀರರಿಗೆ ಕೇವಲ 21,000 ರೂ ಸಂಬಳ (9,000 ರೂ ಸೇವಾನಿಧಿಗೆ ಕಡಿತ) ನೀಡಲಾಗುತ್ತದೆ. ಕೇವಲ 4 ವರ್ಷ ಸೇವೆ ಇದ್ದು, 21 ವರ್ಷಕ್ಕೆ ನಿವೃತ್ತರಾದ ನಂತರ ಮಾಜಿ ಅಗ್ನಿವೀರರು ಏನು ಮಾಡಬೇಕು? ಒಂದು ಕಡೆ ಸಮರ್ಪಕ ಶಿಕ್ಷಣವೂ ಇಲ್ಲದ, ಸುಭದ್ರ ಉದ್ಯೋಗವು ಇಲ್ಲದೆ ಅಲೆಯಬೇಕಾಗುತ್ತದೆ.
ಯುವಜನರ ಬೇಡಿಕೆಯೇನು?
ಅಗ್ನಿಪಥ್ ಯೋಜನೆ ಕೈಬಿಟ್ಟು ಈ ಹಿಂದೆ ಜಾರಿಯಲ್ಲಿದ್ದ ಕಾಯಂ ಸೈನಿಕರ ನೇಮಕಾತಿ ವಿಧಾನವನ್ನೇ ಜಾರಿಗೊಳಿಸಬೇಕು;
ಕೊರೊನಾ ನೆಪದಲ್ಲಿ ಎರಡು ವರ್ಷದಿಂದ ನೇಮಕಾತಿ ನಡೆದಿಲ್ಲ. ಹಾಗಾಗಿ ಕೂಡಲೇ ಹೆಚ್ಚಿನ ಸೈನಿಕರ ನೇಮಕಾತಿ ಮಾಡಿಕೊಳ್ಳಬೇಕು. ಪೂರ್ಣಾವಧಿ ಸೈನಿಕರಾಗಿ ಕೆಲಸ ಮಾಡಲು ಅವಕಾಶ ನೀಡಬೇಕು. ಯೋಧರಿಗೆ, ಮಾಜಿ ಯೋಧರಿಗೆ ಸಿಗುವ ಸೌಲಭ್ಯಗಳು ತಮಗೂ ಸಿಗಬೇಕು.
ನಿವೃತ್ತ ಸೈನ್ಯಾಧಿಕಾರಿಗಳ ಆತಂಕವೇನು?
ಪಿಂಚಣಿ ಮತ್ತು ಗ್ರಾಚ್ಯುಟಿಯಂತಹ ಹಣ ಉಳಿಸಲು ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದು ಸರಿಯಲ್ಲ.
ಈ ಯೋಜನೆಯಿಂದ ಅಗ್ನಿವೀರರ ಮುಂದಿನ ಭವಿಷ್ಯ ಅನಿಶ್ಚಿತತೆಯಿಂದ ಕೂಡಿರುವುದರಿಂದ ಸೈನಿಕರ ದಕ್ಷತೆ, ಕಾರ್ಯಕ್ಷಮತೆ, ಹೋರಾಟದ ಮನೋಭಾವವನ್ನು ಕುಂದಿಸುತ್ತದೆ. ಅವರು ಸದಾ ತಮ್ಮ ಮುಂದಿನ ಉದ್ಯೋಗದ ಬಗ್ಗೆ ಯೋಚಿಸುವುದರಿಂದ ನಿಶ್ಚಿಂತೆಯಿಂದ ಪೂರ್ಣಪ್ರಮಾಣದಲ್ಲಿ ದೇಶಸೇವೆ ಮಾಡಲು ಸಾಧ್ಯವಿಲ್ಲ.
ಮುಂದೊಂದು ದಿನ ಸೇನೆಯಲ್ಲಿ ಶೇ.75ರಷ್ಟು ಗುತ್ತಿಗೆ ಸೈನಿಕರು ಮತ್ತು ಯುವಜನರೆ ತುಂಬಿರುತ್ತಾರೆ. ಆಗ ಅನುಭವಿಗಳ ಮತ್ತು ವೃತ್ತಿಪರರ ಕೊರತೆ ಬೀಳುತ್ತದೆ. ಪಾಕ್ ಮತ್ತು ಚೀನಾದಂತಹ ಎದುರಾಳಿಗಳ ಜೊತೆ ಗಡಿ ಹಂಚಿಕೊಂಡಿರುವ ಭಾರತಕ್ಕೆ ಇದು ಒಳ್ಳೆಯದಲ್ಲ.
ಸೇನೆಯಲ್ಲಿ ಎರಡು ವರ್ಗಗಳು ರೂಪುಗೊಂಡು ಅಸಮಾನತೆ ಬೆಳೆಯುತ್ತದೆ. ಶೇ.25ರ ರೆಗ್ಯುಲರ್ ಕೇಡರ್ ಆಗಿ ಆಯ್ಕೆಯಾಗಲು ಅಗ್ನಿವೀರರಲ್ಲೆ ಪೈಪೋಟಿ ನಡೆಯುತ್ತದೆ. ಇದು ಅವರಲ್ಲಿನ ಐಕ್ಯತೆ, ತ್ಯಾಗ, ಪರಸ್ಪರ ಬದ್ಧತೆಯನ್ನು ಹಾಳು ಮಾಡಬಹುದು.
ತರಬೇತಿ ಪಡೆದು ನಿವೃತ್ತಿಯಾದ ಭಾರೀ ನಿರುದ್ಯೋಗ ಪಡೆಯನ್ನು ಸಂಭಾಳಿಸುವುದು ಕಷ್ಟ. ಅವರನ್ನು ಆಡಳಿತ ಪಕ್ಷಗಳು, ಕೆಲ ಸಂಘಟನೆಗಳು ದುರುಪಯೋಗಪಡಿಸಿಕೊಳ್ಳಬಹುದು. ಇದು ನಾಗರಿಕ ಸಮಾಜದ ಮಿಲಿಟರೀಕರಣಕ್ಕೆ, ದೇಶದಲ್ಲಿ ಆಂತರಿಕ ಗಲಭೆಗೆ ಕಾರಣವಾಗಬಹುದು.
ಇತರ ದೇಶಗಳಲ್ಲಿ ನೇಮಕಾತಿ ಪದ್ಧತಿ ಹೀಗಿದೆ
ಸರ್ಕಾರವು ಅಗ್ನಿಪಥ ಯೋಜನೆ ಘೋಷಿಸುವ ವೇಳೆ ರಷ್ಯಾ, ಅಮೆರಿಕ, ಚೀನಾ, ಇಸ್ರೇಲ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿಯೂ ಇದೇ ಮಾದರಿ ಅನುಸರಿಸಲಾಗುತ್ತಿದೆ ಎಂದು ಹೇಳಿದೆ. ಆದರೆ ಆ ಎಲ್ಲಾ ದೇಶಗಳಿಗಿಂತ ಭಾರತವು ಅತಿ ಹೆಚ್ಚಿನ ಜನಸಂಖ್ಯೆ ಮತ್ತು ಮಿತಿ ಮೀರಿದ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದೆ ಎಂಬುದನ್ನು ಸರ್ಕಾರ ಮರೆಮಾಚುತ್ತಿದೆ. ಭಾರತದಲ್ಲಿ ಅಗ್ನಿಪಥ ಯೋಜನೆಗೆ ವಿರೋಧ ಬರುವುದಕ್ಕೆ ಮೂಲ ಕಾರಣ ಇದುವರೆಗೂ ಸಮರ್ಪಕವಾಗಿ ಉದ್ಯೋಗ ಸೃಷ್ಟಿಸದಿರುವುದೇ ಆಗಿದೆ.
ಅಮೆರಿಕ: 4 ವರ್ಷಗಳಿಗೆ ಸೈನಿಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಜೊತೆಗೆ ನಾಲ್ಕು ವರ್ಷಗಳ ಮೀಸಲು ಕರ್ತವ್ಯ ಪದ್ಧತಿ ಇರುತ್ತದೆ. ಆ ನಂತರ ಸೈನಿಕರು ಪೂರ್ಣಾವಧಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು. (ಇಲ್ಲಿ ಅವರನ್ನು ತೆಗೆಯುವುದಿಲ್ಲ ಬದಲಿಗೆ ಪೂರ್ಣಾವಧಿಗೆ ಮುಂದುವರೆಯಲು ಉತ್ತೇಜಿಸಲಾಗುತ್ತದೆ.) 20 ವರ್ಷ ಸೇವೆ ಸಲ್ಲಿಸಿದವರಿಗೆ ಪಿಂಚಣಿ ಮತ್ತಿತರ ಸೌಲಭ್ಯಗಳು ದೊರಕುತ್ತವೆ.
ಚೀನಾ: ಚೀನಾದಲ್ಲಿ ಸೇನೆಗೆ ಸೇರುವ ಕಡ್ಡಾಯ ಪದ್ದತಿಯಿದೆ. ಪ್ರತಿ ವರ್ಷ 4.5 ಲಕ್ಷ ಕಡ್ಡಾಯ ಸೈನಿಕರನ್ನು ನೇಮಿಸಿಕೊಂಡು ಒಂದು ವರ್ಷದ ತರಬೇತಿ ನೀಡಲಾಗುತ್ತದೆ. ಅವರು ಕನಿಷ್ಟ 2 ವರ್ಷ ಕಡ್ಡಾಯ ಸೇವೆ ನೀಡಬೇಕಿದೆ. ಇಸ್ರೇಲ್ ಕೂಡ ಇದೇ ಮಾದರಿಯನ್ನು ಅನುಸರಿಸುತ್ತಿದೆ.
ರಷ್ಯಾ: ರಷ್ಯಾದಲ್ಲಿ ಹೈಬ್ರಿಡ್ ಕಡ್ಡಾಯ ಮಾದರಿಯ ಕಾಂಟ್ರಾಕ್ಟ್ ಪದ್ದತಿ ಅಳವಡಿಸಿಕೊಂಡಿದೆ. ಕಡ್ಡಾಯ ಪದ್ಧತಿಯಡಿ ನೇಮಕಗೊಂಡವರಿಗೆ ಒಂದು ವರ್ಷದ ತರಬೇತಿ ನೀಡಿ ಅವರನ್ನು ಮೀಸಲಾಗಿರಿಸುತ್ತದೆ. ಅವರಿಂದಲೇ ಸೈನ್ಯಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸೈನಿಕರು ಕಾಲೇಜಿಗೆ ದಾಖಲಾಗಲು, ಮಿಲಿಟರಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಅವಕಾಶವಿದೆ.
ಫ್ರಾನ್ಸ್: ಇಲ್ಲಿ ಗುತ್ತಿಗೆ ಆಧಾರದಲ್ಲಿ ಹಲವಾರು ವಿಧಾನಗಳಲ್ಲಿ ಸೈನಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಒಂದು ವರ್ಷದಿಂದ 5 ವರ್ಷದವರೆಗೆ ವಿಸ್ತರಿಸಬಹುದಾದ ಪದ್ಧತಿ ಅಲ್ಲಿದೆ.
ಈ ಎಲ್ಲಾ ದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ಕೂಡ ಭಾರತಕ್ಕಿಂತ ತೀರಾ ಕಡಿಮೆಯಿದೆ. ಅಲ್ಲಿ ಸೈನಿಕರಾಗಲು ಪ್ರೋತ್ಸಾಹ ನೀಡಲಾಗುತ್ತಿದೆಯೆ ಹೊರತು ಬೇಡ ಎನ್ನುತ್ತಿಲ್ಲ. ಬದಲಿಗೆ ಭಾರತದಲ್ಲಿ ಲಕ್ಷಾಂತರ ಜನರು ಸೈನ್ಯಕ್ಕೆ ಸೇರಲು ದಂಡು ನೆರೆದಿದ್ದಾಗಲೂ ಕೆಲವರನ್ನಷ್ಟೇ ಕೇವಲ 4 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಉಳಿದುಹೋದ ಪ್ರಶ್ನೆಗಳು
ಈಗಿನ ಭಾರತೀಯ ಸೇನೆಯ ಸರಾಸರಿ ವಯಸ್ಸು 32 ಇರುವುದು ತಾರುಣ್ಯ, ಯೌವ್ವನದ ಸಂಕೇತವಲ್ಲವೇ?
ಬಿಜೆಪಿಯಲ್ಲಿ ಅಧಿಕಾರಕ್ಕೆ 75 ವರ್ಷಕ್ಕೆ ನಿವೃತ್ತಿಯಿದೆ. ಉಳಿದಂತೆ ಸರ್ಕಾರಿ ಹುದ್ದೆಗಳಲ್ಲಿ ಸರಾಸರಿ ನಿವೃತ್ತಿ ವಯಸ್ಸು 60 ಇದೆ. ನಮಗೆ ಮಾತ್ರ 25 ವರ್ಷದ ಒಳಗೆ ನಿವೃತ್ತಿ ಏಕೆ? ಇದು ಯಾವ ನ್ಯಾಯ ಎನ್ನುವುದು ಯುವಜನರ ಪ್ರಶ್ನೆ
ಆರ್ಥಿಕ ಮುಗ್ಗಟ್ಟು ಇದ್ದರೆ ಶಾಸಕರು, ಸಂಸದರು ತಮ್ಮ ಪಿಂಚಣಿ ಬಿಡಲಿ. ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರ ಜೇಬಿಗೆ ಕತ್ತರಿ ಹಾಕುವುದು ಏಕೆ?
ನಿಜವಾಗಿಯೂ ಆರ್ಥಿಕ ಸಂಕಷ್ಟವಿದ್ದರೆ ಅದಾನಿ, ಅಂಬಾನಿ ಥರದ ದೊಡ್ಡ ಬಂಡವಾಳಿಗರಿಗೆ ಲಕ್ಷಾಂತರ ಕೋಟಿ ರೂ ರೈಟ್ ಆಫ್, ಎನ್‌ಪಿಎ (ಸಾಲ ಮನ್ನ) ಮಾಡುವುದೇಕೆ? ಇಂತಹ 1% ಅತಿ ದೊಡ್ಡ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸಬಾರದೇಕೆ?
ಇದನ್ನೂ ಓದಿ: ಅಗ್ನಿಪಥ್ ಹಿಂಪಡೆಯುವ ಪ್ರಶ್ನೆಯೆ ಇಲ್ಲ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್



Exam