Homeಮುಖಪುಟಜೂನ್ ’ಸ್ವಾಭಿಮಾನದ ತಿಂಗಳು’: ಎಲ್‌ಜಿಬಿಟಿಕ್ಯೂ ಸಮುದಾಯದ ಬಗ್ಗೆ ತಿಳಿವಳಿಕೆ ಹೆಚ್ಚಿದೆಯೇ?

ಜೂನ್ ’ಸ್ವಾಭಿಮಾನದ ತಿಂಗಳು’: ಎಲ್‌ಜಿಬಿಟಿಕ್ಯೂ ಸಮುದಾಯದ ಬಗ್ಗೆ ತಿಳಿವಳಿಕೆ ಹೆಚ್ಚಿದೆಯೇ?

- Advertisement -
- Advertisement -

ಜೂನ್ ಬಂತೆಂದರೆ- ಜಗತ್ತಿನ ಪ್ರಮುಖ ನಗರಗಳಲ್ಲಿ ಕಾಮನಬಿಲ್ಲಿನ ಬಾವುಟಗಳು ಹಾರಾಡತೊಡಗುತ್ತವೆ. ಜೀವನ ಪ್ರೀತಿ, ಲೈಂಗಿಕತೆ, ಆರೈಕೆ, ಸೂರ್ಯನ ರಶ್ಮಿ, ಪ್ರಕೃತಿ, ಕಲೆ, ಸಹಬಾಳ್ವೆ, ಸ್ಫೂರ್ತಿಯನ್ನು ಈ ಬಣ್ಣಗಳು ಧ್ವನಿಸುತ್ತವೆ. ಈ ಬಾವುಟ ಹಿಡಿದು ಸಾಗುವುದೆಂದರೆ ಎಲ್ಲ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಗಳಿಗೆ ಹೆಮ್ಮೆಯ ಸಂಗತಿ, ಸ್ವಾಭಿಮಾನದ ಸಂಕೇತ. ಜೂನ್ ತಿಂಗಳೆಂದರೆ ಎಲ್‌ಜಿಬಿಟಿಕ್ಯೂ+ (ಲೆಸ್ಬಿಯನ್, ಗೇ, ಬೈಸೆಕ್ಷುವಲ್ ಟ್ರಾನ್ಸ್‌ಜೆಂಡರ್, ಕ್ವೀರ್ ಮುಂತಾದ ಲೈಂಗಿಕತೆ) ಸಮುದಾಯಕ್ಕೆ Pride Month’ (ಸ್ವಾಭಿಮಾನದ ತಿಂಗಳು).

1960ರ ದಶಕದಲ್ಲಿ ಅಮೆರಿಕದಲ್ಲಿನ ಸಲಿಂಗಾಸಕ್ತರ ಬಾರ್‌ಗಳು ಮತ್ತು ಕ್ಲಬ್‌ಗಳ ಮೇಲೆ ಪೊಲೀಸರು ರೈಡ್ ಮಾಡಲು ಆರಂಭಿಸುತ್ತಾರೆ. ’ಗೇ’ಗಳ ಬಾರ್ ಎಂದೇ ಜನಪ್ರಿಯವಾಗಿದ್ದ ಮ್ಯಾನ್‌ಹ್ಯಾಟನ್‌ನ ’ಸ್ಟೋನ್‌ವಾಲ್ ಇನ್’ ಮೇಲೆ 1969ರ ಜೂನ್ 28ರಂದು ದಾಳಿ ನಡೆಯುತ್ತದೆ. ಗೇ ಸಮುದಾಯದ ಸದಸ್ಯರ ಬಂಧನವನ್ನು ವಿರೋಧಿಸಿ ಪ್ರತಿಭಟನೆಗಳು ಶುರುವಾಗುತ್ತವೆ. ಮೂರು ದಿನಗಳ ಕಾಲ ಗಲಭೆಗಳು ನಡೆಯುತ್ತವೆ. ಇದು ’ಸ್ಟೋನ್‌ವಾಲ್ ಗಲಭೆಗಳು’ ಎಂದೇ ಇತಿಹಾಸದಲ್ಲಿ ದಾಖಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಒಂದು ವರ್ಷದ ನಂತರದಲ್ಲಿ ಸ್ಟೋನ್‌ವಾಲ್ ದಂಗೆಯ ನೆನಪಿಗಾಗಿ ಮೊದಲ ಬಾರಿಗೆ ಸ್ವಾಭಿಮಾನದ ಮೆರವಣಿಗೆ (Pride March) ಹಮ್ಮಿಕೊಳ್ಳಲಾಗುತ್ತದೆ. ಕ್ರಿಸ್ಟೊಫರ್ ಸ್ಟ್ರೀಟ್ ಲಿಬರೇಷನ್ ಡೇ ಮಾರ್ಚ್ ಎಂದೂ ಇದನ್ನು ಕರೆಯಲಾಗಿದೆ. ಅಂದಿನಿಂದ ಇಂದಿನವರೆಗೂ ಸ್ವಾಭಿಮಾನದ ನಡಿಗೆ ಮುಂದುವರಿದಿದೆ.

1999ರಲ್ಲಿ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಜೂನ್ ತಿಂಗಳನ್ನು ’ಗೇ ಮತ್ತು ಲೆಸ್ಬಿಯನ್ ಸ್ವಾಭಿಮಾನದ ತಿಂಗಳು’ ಎಂದು ಘೋಷಿಸುತ್ತಾರೆ. ಇದರ ಮುಂದುವರಿದ ಭಾಗವಾಗಿ 2011ರಲ್ಲಿ ಅಧ್ಯಕ್ಷ ಬರಾಕ್ ಒಬಾಮ ಮರು ನಾಮಕರಣ ಮಾಡಿ ’ಲೆಸ್ಬಿಯನ್, ಗೇ, ಬೈಸೆಕ್ಷುವಲ್ ಟ್ರಾನ್ಸ್‌ಜೆಂಡರ್ ಪ್ರೈಡ್ ಮಂತ್ (ಎಲ್‌ಜಿಬಿಟಿ ಸ್ವಾಭಿಮಾನದ ತಿಂಗಳು)’ ಎಂದು ಕರೆಯುತ್ತಾರೆ.

ಹಾರ್ವೇ ಮಿಲ್ಕ್ ಎಂಬವರು ಅಮೆರಿಕದ ರಾಜಕಾರಣಿ ಹಾಗೂ ಗೇ ಎಂದು ಘೋಷಿಸಿಕೊಂಡ ಚುನಾಯಿತ ಪ್ರತಿನಿಧಿಯೂ ಹೌದು. ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಒಂದು ಧ್ವಜವನ್ನು ರೂಪಿಸಲು ಕಲಾವಿದ ಗಿಲ್‌ಬರ್ಗ್ ಬೇಕರ್ ಅವರಲ್ಲಿ ಮಿಲ್ಕ್ ಕೋರಿದಾಗ ಹುಟ್ಟಿಕೊಂಡಿದ್ದೇ ಈ ಕಾಮನಬಿಲ್ಲಿನ ಧ್ವಜ. ಜೀವನ ಪ್ರೀತಿಯ ಸಂಕೇತ.

 ಇದನ್ನೂ ಓದಿರಿ: ನಾವು ಯಾರಂತ ಜನರೇ ನಮಗೆ ಪರಿಚಯಿಸುತ್ತಾರೆ: ಟ್ರಾನ್ಸ್‌ಜೆಂಡರ್‌ ‘ಶಬ್ಬು’ ಜೀವನಗಾಥೆ

1999ರ ಜುಲೈ 2ರಂದು ಭಾರತದಲ್ಲಿ ಮೊಟ್ಟಮೊದಲ ’ಸ್ವಾಭಿಮಾನ ನಡಿಗೆ’ ನಡೆಯುತ್ತದೆ. ಕೊಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ದಕ್ಷಿಣ ಏಷ್ಯಾದಲ್ಲಿ ನಡೆದ ಮೊದಲ ಸ್ವಾಭಿಮಾನದ ನಡಿಗೆಯೂ ಹೌದು. ಇಲ್ಲಿಯವರೆಗೆ ಭಾರತದ 21 ನಗರಗಳಲ್ಲಿ ಪ್ರೈಡ್ ಮಾರ್ಚ್‌ಗಳು ನಡೆದಿವೆ. ಎಲ್‌ಜಿಬಿಟಿಕ್ಯೂ+ ಸಮುದಾಯದ ನಿರಂತರ ಹೋರಾಟದ ಫಲವಾಗಿ ಸಾಂವಿಧಾನಿಕ ಹಕ್ಕುಗಳು ದೊರೆತಿವೆ. ಲೈಂಗಿಕ ಅಲ್ಪಸಂಖ್ಯಾತರಿಗೆ ಮಾರಕವಾಗಿದ್ದ ಐಪಿಸಿ ಸೆಕ್ಷನ್ 377 ಅಸಂವಿಧಾನಿಕ ಎಂದು 2018ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಅಂದಹಾಗೆ ತೀರ್ಪು ಬಂದು ನಾಲ್ಕು ವರ್ಷಗಳಾಗಿವೆ. ಆದರೆ ಎಲ್‌ಜಿಬಿಟಿಕ್ಯೂ ಸಮುದಾಯವು ಸಮಾನ ಹಕ್ಕುಗಳಿಗಾಗಿ, ಸಮುದಾಯವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕೆಂಬ ಬದಲಾವಣೆಗಾಗಿ ಹೋರಾಡುತ್ತಲೇ ಇದೆ. ಸ್ವಾಭಿಮಾನದ ತಿಂಗಳ ನೆಪದಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಅಲ್ಲಲ್ಲಿ ಕಾಣುತ್ತಿದ್ದೇವೆ. ನಿಂತ ನೀರಾಗಿದ್ದ ಸಮಾಜದಲ್ಲಿ ಒಂದಿಷ್ಟು ಚಲನಶೀಲತೆ ಕಂಡುಬರುತ್ತಿರುವುದನ್ನೂ ಎಲ್‌ಜಿಬಿಟಿಕ್ಯೂ ಸಮುದಾಯದ ಜನರೂ ಒಪ್ಪಿಕೊಳ್ಳುತ್ತಾರೆ.

’ಮೋಹನಸ್ವಾಮಿ’ಯ ಮನದಾಳದ ಮಾತು: ಹತ್ತನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಎಲ್‌ಜಿಬಿಟಿಕ್ಯೂ ಪಾಠ ಅಗತ್ಯವಿದೆ

ತಾನೊಬ್ಬ ’ಗೇ’ ಎಂದು ಸಾರ್ವಜನಿಕವಾಗಿ ಹೊರಬಂದು ಹೇಳಿಕೊಂಡವರು ಸಾಹಿತಿ ವಸುಧೇಂದ್ರ. ’ಮೋಹನಸ್ವಾಮಿ’ ಕೃತಿಯ ಮೂಲಕ ಕನ್ನಡ ಸಾಹಿತ್ಯಕ್ಕೆ ಗೇ ಸಮುದಾಯದ ಭಾವನೆಗಳು, ತಲ್ಲಣಗಳನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ’ಪ್ರೈಡ್ ಮಂತ್’ ಹಿನ್ನೆಲೆಯಲ್ಲಿ ’ನ್ಯಾಯಪಥದ’ ಜೊತೆ ಮಾತನಾಡಿದ ಅವರು, “ಎಲ್‌ಜಿಬಿಟಿಕ್ಯೂ ಸಮುದಾಯದ ಬಗ್ಗೆ ಜನರಲ್ಲಿ ಸಾಮಾನ್ಯವಾಗಿ ಹೋಮೋಫೋಬಿಯಾ ಮತ್ತು ಅರಿವಿನ ಕೊರತೆ ಇರುತ್ತದೆ. ಶಿಕ್ಷಣದ ಮೂಲಕ ಅರಿವು ಮೂಡಿಸಬೇಕಿದೆ. ಸಾಕಷ್ಟು ಶಾಲೆಗಳಿಗೆ ಭೇಟಿ ನೀಡಿ ಲೈಂಗಿಕ ಅಲ್ಪಸಂಖ್ಯಾತರ ಕುರಿತು ಮಾತನಾಡುತ್ತಿದ್ದೇನೆ. ಪ್ರೈಡ್ ತಿಂಗಳನ್ನು ಆಚರಿಸುವುದರಿಂದ, ಎಲ್‌ಜಿಬಿಟಿಕ್ಯೂ ಸಮುದಾಯದ ಕುರಿತ ಪುಸ್ತಕಗಳನ್ನು ಓದುವುದರಿಂದ ಸಮಾಜದಲ್ಲಿ ಆವರಿಸಿರುವ ಭಯ ಕಡಿಮೆಯಾಗುತ್ತದೆ. ಭಯವನ್ನು ಹೋಗಲಾಡಿಸುವುದು ಬಹಳ ಮುಖ್ಯವಾಗಿದೆ” ಎಂದರು.

“ಸ್ವಾಭಿಮಾನದ ತಿಂಗಳು ಬಂತೆಂದರೆ ನನ್ನ ’ಮೋಹನಸ್ವಾಮಿ’ ಕೃತಿ ಇಂಗ್ಲಿಷ್ ಆವೃತ್ತಿಗೆ ಸಿಕ್ಕಾಪಟ್ಟೆ ಪ್ರಚಾರ ಸಿಗುತ್ತದೆ. ಮತ್ತೆಮತ್ತೆ ಜನರು ಓದುತ್ತಾರೆ. ಆದರೆ ದೇಸೀಯ ಭಾಷೆಗಳಲ್ಲಿ ಈ ರೀತಿಯ ಆಸಕ್ತಿ ಕಂಡುಬರುತ್ತಿಲ್ಲ. ಕನ್ನಡ ಶಾಲೆಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಆಯೋಜನೆಯಾಗಬೇಕು. ನಮ್ಮ ಸಮುದಾಯದಲ್ಲಿದ್ದ ಭಯ ನಾನು ಮೋಹನಸ್ವಾಮಿ ಬರೆದ ನಂತರದಲ್ಲಿ ಸ್ವಲ್ಪ ಕಡಿಮೆಯಾಗಿದೆ. ಕನ್ನಡಿಗರೂ ಒಂದಿಷ್ಟು ಮಾತನಾಡುತ್ತಿದ್ದಾರೆ” ಎಂದು ತಿಳಿಸಿದರು.

“ಸರ್ವೋಚ್ಚ ನ್ಯಾಯಾಲಯವು ಸೆಕ್ಷನ್ 377 ತೆರವು ಮಾಡಿದ್ದು ಮಹತ್ವದ ಬೆಳವಣಿಗೆ. ತನ್ನ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ನೆರವೇರಿಸಿದೆ. ಆದರೆ ಸಮಾಜದಲ್ಲಿ ಬದಲಾವಣೆಗಳು ಆಗಬೇಕಿದೆ. ಸಮುದಾಯದ ಮೇಲೆ ಗೌರವ ಹೆಚ್ಚಾಗುವ, ಗೆಳೆತನ ಬೆಳೆಯುವ, ತಮ್ಮ ಲೈಂಗಿಕತೆಯನ್ನು ಧೈರ್ಯವಾಗಿ ಹೇಳಿಕೊಳ್ಳುವ ಸಮಾಜ ನಿರ್ಮಾಣ ಆಗಬೇಕಿದೆ. ಎಷ್ಟೋ ಜನ ಸೆಲೆಬ್ರಿಟಿಗಳು ಗೇಗಳಾಗಿದ್ದಾರೆ. ಆದರೆ ಅವರು ಯಾರೂ ತಮ್ಮ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅರಿವು ಮೂಡಿಸುವುದು ಹೆಚ್ಚಾದಾಗ ಉಳಿದವರಿಗೂ ಧೈರ್ಯ ಬರುತ್ತದೆ. ತನ್ನ ಇಚ್ಛೆಗೆ ವಿರುದ್ಧವಾಗಿ ಯಾವುದೋ ಒತ್ತಡದಲ್ಲಿ ಮದುವೆಯಾಗಿ ಒದ್ದಾಡುವ ಬೇಕಾದಷ್ಟು ಜನರನ್ನು ನೋಡಿದ್ದೇನೆ. ಈ ಶೋಷಣೆ ನಿಲ್ಲಬೇಕು. ಈ ನಿಟ್ಟಿನಲ್ಲಿ ಸ್ವಾಭಿಮಾನದ ತಿಂಗಳು ಮುಖ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಎಲ್‌ಜಿಬಿಟಿಕ್ಯೂ ಸಮುದಾಯದ ಬಗ್ಗೆ ಪ್ರೌಢಾವಸ್ಥೆಯಲ್ಲಿಯೇ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಒಂಬತ್ತು ಮತ್ತು ಹತ್ತನೇ ತರಗತಿಯ ವೇಳೆಗೆ ಗೇ ಮತ್ತು ಲೆಸ್ಬಿಯನ್ ಮಕ್ಕಳಲ್ಲಿ ಸಂಶಯಗಳು ಬರಲಾರಂಭಿಸುತ್ತವೆ. ತಮ್ಮ ಭಾವನೆಗಳ ಕುರಿತು ಪಾಪಪ್ರಜ್ಞೆ ಆವರಿಸುತ್ತದೆ. ಎಲ್ಲ ಹುಡುಗರು ಹುಡುಗಿಯರ ಬಗ್ಗೆ ಯೋಚಿಸುತ್ತಿದ್ದರೆ ನಾನ್ಯಾಕೆ ಹುಡುಗರ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಗೇ ಹುಡುಗ; ಎಲ್ಲ ಹುಡುಗಿಯರು ಹುಡುಗರ ಬಗ್ಗೆ ಯೋಚಿಸುತ್ತಿದ್ದರೆ ನಾನ್ಯಾಕೆ ಹುಡುಗಿಯರ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಲೆಸ್ಬಿಯನ್ ಹುಡುಗಿ ಗೊಂದಲಕ್ಕೊಳಗಾಗುತ್ತಾಳೆ. ಹೀಗಾಗಿ ಹತ್ತನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಈ ಸಮುದಾಯದ ಕುರಿತು ಪಾಠವನ್ನು ಅಳವಡಿಸುವುದು ಅಗತ್ಯವಾಗಿದೆ” ಎನ್ನುತ್ತಾರೆ ವಸುಧೇಂದ್ರ.

ವಸುಧೇಂದ್ರ

“ಎಲ್‌ಜಿಬಿಟಿಕ್ಯೂ ಕುರಿತು ಬೋಧಿಸಿದಾಗ ಇತರ ಮಕ್ಕಳೂ ಜಾಗೃತರಾಗಿ ತನ್ನ ಸಹಪಾಠಿಯ ಕುರಿತ ಗೇಲಿ ಮಾಡುವುದನ್ನು ನಿಲ್ಲಿಸುತ್ತಾರೆ. ಶಿಕ್ಷಕರ ಬಾಯಿಂದ ಈ ವಿಚಾರಗಳನ್ನು ಕೇಳಿದಾಗ ಲಿಂಗತ್ವ ಅಲ್ಪಸಂಖ್ಯಾತ ಮಗುವಿಗೆ ಧೈರ್ಯ ಬರುತ್ತದೆ. ನನ್ನದೇನೂ ತಪ್ಪಿಲ್ಲ, ನನ್ನ ಮೇಷ್ಟ್ರೇ ಇದರ ಬಗ್ಗೆ ಹೇಳುತ್ತಿದ್ದಾರೆ ಎಂದು ಯೋಚಿಸುತ್ತದೆ. ಯಾವ ನಂಬರ್‌ಗೆ ಕರೆ ಮಾಡಿದರೆ ಹೆಚ್ಚಿನ ನೆರವು ಸಿಗುತ್ತದೆ? ಯಾವ ವೆಬ್‌ಸೈಟ್‌ನಲ್ಲಿ ಮಾಹಿತಿಗಳಿವೆ ಎಂದು ಪಠ್ಯದಲ್ಲಿ ನಮೂದಿಸಿದರೆ ಅಗತ್ಯವಿರುವ ಮಕ್ಕಳು ಸರ್ಚ್ ಮಾಡಿ ಓದಿಕೊಳ್ಳುತ್ತಾರೆ.

ಆಗೊಮ್ಮೆ ಈಗೊಮ್ಮೆ ನಮ್ಮಂಥವರನ್ನು ಕರೆಸಿ ಶಾಲೆಗಳಲ್ಲಿ ಮಾತನಾಡಿಸಬಹುದು. ಶಾಲಾ ಹಂತದಲ್ಲೇ ಅರಿವು ಮೂಡಿಸಿದರೆ ಕಾಲೇಜು ಮೆಟ್ಟಿಲೇರುವ ವೇಳೆಗೆ ಹೋಮೋಫೋಬಿಯಾದಿಂದ ಮುಕ್ತರಾಗಬಹುದು. ಹಲವು ದೇಶಗಳ ಶಾಲಾಪಠ್ಯದಲ್ಲಿ ಎಲ್‌ಜಿಬಿಟಿಕ್ಯೂ ಕುರಿತು ಪಾಠಗಳಿವೆ. ಇಂಗ್ಲಿಷ್ ವೆಬ್‌ಸೈಟ್‌ಗಳಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದೆ. ಆದರೆ ಕನ್ನಡದಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಇಂಟರ್‌ನೆಟ್‌ನಲ್ಲಿ ಸಿಗಬೇಕಿದೆ” ಎಂದು ಆಶಿಸಿದರು.

ಗೇ ಮತ್ತು ಲೆಸ್ಬಿಯನ್, ಟ್ರಾನ್ಸ್‌ಜೆಂಡರ್ ಸಮುದಾಯದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಆಗಿರುವ ಪ್ರಯೋಗಗಳ ಕುರಿತು ವಿವರಿಸಿದ ಅವರು, “ಗೇ ಸಮುದಾಯದ ಕುರಿತು ನಾನು ಮೋಹನಸ್ವಾಮಿ ಬರೆದ ಬಳಿಕ ಬಹಳಷ್ಟು ಕೃತಿಗಳು ಈ ವಿಷಯಗಳ ಕುರಿತು ಬರಬಹುದೆಂದು ನಿರೀಕ್ಷೆ ಮಾಡಿದ್ದೆ. ಆದರೆ ನಿರೀಕ್ಷೆ ಹುಸಿಯಾಯಿತು. ತಾನು ಗೇ ಎಂದು ಹೇಳಿಕೊಂಡು ಕಥೆ, ಕಾದಂಬರಿ, ಆತ್ಮಕತೆಗಳನ್ನು ಯಾರೂ ಬರೆಯುತ್ತಿಲ್ಲ. ಟ್ರಾನ್ಸ್‌ಜೆಂಡರ್‌ಗಳು ತಮ್ಮ ಐಡೆಂಟಿಟಿಯನ್ನು ನೇರವಾಗಿ ಹೇಳಿಕೊಳ್ಳುತ್ತಾರೆ. ಜಗತ್ತಿಗೆ ಹೇಳಿಕೊಳ್ಳದೆ ಹೊರಗೆ ಬರಲು ಅವರಿಗೆ ಸಾಧ್ಯವಾಗುವುದೇ ಇಲ್ಲ. ಆದರೆ ಗೇ ಮತ್ತು ಲೆಸ್ಬಿಯನ್ ಸಮಸ್ಯೆ ಗೌಪ್ಯವಾದದ್ದು. ಒಳಗೊಳಗೆ ಭಾವನೆಗಳನ್ನು ಇಟ್ಟುಕೊಂಡು ಮುಖವಾಡ ಹಾಕಿಕೊಂಡು ಬದುಕಬೇಕಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಗೇ ಮತ್ತು ಲೆಸ್ಬಿಯನ್ ಸಾಕಷ್ಟು ಜನ ಇದ್ದಾರೆಂಬುದು ನನ್ನ ಗಮನಕ್ಕೆ ಬಂದಿದೆ. ಸೋಷಿಯಲ್ ಫೋಬಿಯಾ ಇನ್ನೂ ಇದೆ. ಸಮುದಾಯದ ವ್ಯಕ್ತಿಯೆಂದು ಗುರುತಿಸಿಕೊಳ್ಳದೆ ಸಾಕಷ್ಟು ಮಂದಿ ಬರೆದಿದ್ದಾರೆ. ಆದರೆ ಕಮ್ಯುನಿಟಿ ಮೆಂಬರ್ ಎಂದು ಹೇಳಿಕೊಂಡು ಬರೆಯುವುದು ನಿಜವಾದ ಬಂಡಾಯವಾಗುತ್ತದೆ. ಆ ಮಟ್ಟದ ಧೈರ್ಯ ನನಗೆ ಹೊಸ ಹುಡುಗರಲ್ಲಿ ಕಾಣಿಸುತ್ತಿಲ್ಲ” ಎಂದು ವಿಷಾದಿಸಿದರು.

ರಾಷ್ಟ್ರಮಟ್ಟದಲ್ಲಿ ಸುಧಾರಣೆ ಅಗತ್ಯ: ಅಕ್ಕಯ್

“ಸ್ವಾಭಿಮಾನ ತಿಂಗಳ ಆಚರಣೆ ಕಳೆದ ಹತ್ತುವರ್ಷಗಳಿಂದ ಭಾರತದಲ್ಲಿ ಆಚರಣೆಗೆ ಬರುತ್ತಿದೆ. ಕಾರ್ಪೊರೇಟ್ ಜಗತ್ತು ಭಾರತಕ್ಕೆ ಕಾಲಿಟ್ಟ ಬಳಿಕ ಪ್ರೈಡ್ ತಿಂಗಳನ್ನು ಬಹಳ ಶಿಸ್ತುಬದ್ಧವಾಗಿ ಆಚರಿಸಲಾಗುತ್ತಿದೆ. ಎಲ್ಲರನ್ನೂ ಒಳಗೊಳ್ಳುತ್ತಿದ್ದೇವೆ ಎಂದು ತೋರಿಸುವುದು ಈ ಕಂಪನಿಗಳ ಉದ್ದೇಶವಾಗಿರುತ್ತದೆ. ಆದರೆ ದೇಶದಲ್ಲಿ ಸಾಮಾಜಿಕ ಪರಿಸ್ಥಿತಿ ಸುಧಾರಿಸಿದೆಯಾ?” ಎಂದು ಪ್ರಶ್ನಿಸುತ್ತಾರೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ದಿಟ್ಟದನಿ, ಕಾಂಗ್ರೆಸ್ ಪಕ್ಷದ ನಾಯಕಿ ಅಕ್ಕಯ್ ಪದ್ಮಶಾಲಿ.

“ಲಿಂಗತ್ವ ಅಲ್ಪಸಂಖ್ಯಾತರ ವಿಚಾರದಲ್ಲಿ ಕರ್ನಾಟಕ ರಾಜ್ಯದಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ. ಪೊಲೀಸ್ ಅಕಾಡೆಮಿಗೆ ಹೋಗಿ ನಮ್ಮ ಸಮುದಾಯದ ಕುರಿತು ತರಬೇತಿ ನೀಡುತ್ತಿದ್ದೇವೆ. 25 ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಆದರೆ ಬೇರೆ ರಾಜ್ಯಗಳಲ್ಲಿ ಎಲ್‌ಜಿಬಿಟಿಕ್ಯೂ ಸಮುದಾಯದ ಸ್ಥಿತಿ ಶೋಚನೀಯವಾಗಿದೆ. ಈ ಸಮಸ್ಯೆಯ ಮೂಲಕಾರಣ- ಜನರ ಮನಸ್ಥಿತಿ, ವ್ಯವಸ್ಥೆಯ ದುರಾಡಳಿತ” ಎಂದರು.

“ಇಡೀ ದೇಶವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಪರಿಸ್ಥಿತಿ ಸುಧಾರಿಸಿಲ್ಲ. ತಾರತಮ್ಯ, ಹಿಂಸೆ, ದೌರ್ಜನ್ಯಗಳು ನಡೆಯುತ್ತಲೇ ಇವೆ. ಸಾಮಾಜಿಕವಾಗಿ ನಮ್ಮನ್ನು ಒಪ್ಪಿಕೊಂಡಿಲ್ಲ. ಸಾಂಸ್ಕೃತಿಕವಾಗಿ ಹಿಜರಾ ಸಮುದಾಯವನ್ನು ಮಾತ್ರ ಸ್ವೀಕರಿಸುತ್ತಿದ್ದಾರೆ. ಇನ್ನುಳಿದ ಎಲ್ಲರ ಬದುಕೂ ದುರಂತಮಯವಾಗಿದೆ” ಎನ್ನುತ್ತಾರೆ ಅಕ್ಕಯ್.

ಅಕ್ಕಯ್ ಪದ್ಮಶಾಲಿ

“ಸಾಮಾಜಿಕ, ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ನಮಗೆ ಅವಕಾಶವನ್ನು ಮಾಡಿಕೊಡಲಿಲ್ಲ. ಸಾಂಸ್ಕೃತಿಕವಾಗಿ ಕೆಲವು ಕಡೆ ಅವಕಾಶಗಳಿದ್ದರೂ ಅದು ಗಟ್ಟಿಯಾಗಿಲ್ಲ. ರಾಜಕೀಯವಾಗಿ ಪ್ರಾತಿನಿಧ್ಯವಂತೂ ತುಂಬಾ ಕಡಿಮೆ ಇದೆ. ಇದೆಲ್ಲವನ್ನೂ ಒಟ್ಟಾರೆಯಾಗಿ ನೋಡುವುದಾದರೆ ಲೈಂಗಿಕ ಅಲ್ಪಸಂಖ್ಯಾತರ ಬದುಕು ಶೋಚನೀಯವಾಗಿದೆ. ಈ ಕುರಿತು ಗಂಭೀರ ಚರ್ಚೆಗಳಾಗಬೇಕು” ಎಂದು ಆಶಿಸಿದರು.

“ಎಲ್‌ಜಿಬಿಟಿಕ್ಯೂ ಆಗಿ ಹುಟ್ಟಿದ ಮಗುವಿನ ಕುರಿತು ಪೋಷಕರು ಪ್ರೀತಿ ಬೆಳೆಸಿಕೊಳ್ಳಬೇಕು. ಪೋಷಕರು, ಶಿಕ್ಷಕರು ಹಾಗೂ ಇಡೀ ಸಮಾಜ ಅರಿವು ಬೆಳೆಸಿಕೊಳ್ಳಬೇಕು. ಮನೆಗಳಲ್ಲಿ ಜಾಗೃತಿ ಮೂಡುವ ಜೊತೆಗೆ ಶೈಕ್ಷಣಿಕ ವಲಯದಲ್ಲಿ ಬದಲಾವಣೆಗಳಾಗಬೇಕು” ಎಂದು ಆಗ್ರಹಿಸಿದರು.

ಸುಪ್ರೀಂಕೋರ್ಟ್ ನೀಡಿದ ಮಹತ್ವದ ಸೂಚನೆಗಳ ಕುರಿತು ಮಾತನಾಡಿದ ಅವರು, “ಸೆಕ್ಷನ್ 377 ರದ್ದುಗೊಳಿಸಿದ ತೀರ್ಪು ಬಂದ ಬಳಿಕ ಯಾವುದೀ ಎಲ್‌ಜಿಬಿಟಿಕ್ಯೂ ಸಮುದಾಯ ಎಂದು ಯೋಚಿಸಲು ಸಮಾಜ ಶುರುಮಾಡಿದೆ. ಭಾರತದ ನ್ಯಾಯಾಂಗ ಇರದೆ ಇದ್ದಿದ್ದರೆ ನಮ್ಮ ಸಮುದಾಯ ಮುಖ್ಯವಾಹಿನಿಗೆ ಬರುತ್ತಿರಲಿಲ್ಲ. ನಮ್ಮ ಕಮ್ಯುನಿಟಿ ಸುಪ್ರೀಂ ಕೋರ್ಟ್‌ನ ಋಣವನ್ನು ತೀರಿಸಲಿಕ್ಕೆ ಸಾಧ್ಯವಾಗುವುದಿಲ್ಲ” ಎಂದು ಭಾವುಕರಾಗಿ ನುಡಿದರು.

“ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಕುರಿತು ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಬೇಕು, ಈ ಸಮುದಾಯಕ್ಕೆ ಅವಕಾಶಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಆದರೆ ಸರ್ಕಾರಗಳು ಕ್ರಮ ಜರುಗಿಸುತ್ತಿಲ್ಲ” ಎಂದರು.

ನಾವು ಸಮುದಾಯವಾಗಿ ಇನ್ನೂ ಬಹಳ ದೂರ ಕ್ರಮಿಸಬೇಕಿದೆ: ಶೈಲಜಾ

ಎಲ್‌ಜಿಬಿಟಿಕ್ಯೂ+ ಸಮುದಾಯದವರಾದ ಫಿಲ್ಮ್ ಮೇಕರ್ ’ಶೈಲಜಾ ಪಡಿಂದಲ’ ಮೂಲತಃ ಬೆಂಗಳೂರಿನವರು. ಲೆಸ್ಬಿಯನ್ ಪ್ರೇಮದ ಕುರಿತು ಕನ್ನಡದಲ್ಲಿ ’ನಾನು ಲೇಡೀಸ್’ ಸಿನಿಮಾ ನಿರ್ದೇಶಿಸಿರುವ ಶೈಲಜಾ ತಮ್ಮನ್ನು ’ಕ್ವೀರ್ ವುಮೆನ್’ ಎಂದು ಗುರುತಿಸಿಕೊಳ್ಳುತ್ತಾರೆ. (ಒಂದು ಹೆಣ್ಣು ಮತ್ತೊಂದು ಹೆಣ್ಣಿನ ಪ್ರೀತಿ ಬಯಸುವ, ಸಮಾಜದ ಸಿದ್ಧಮಾದರಿಯ ಚೌಕಟ್ಟನ್ನು ಪ್ರಶ್ನಿಸುವಂತಹ ಲೈಂಗಿಕ ದೃಷ್ಟಿಕೋನದವರನ್ನು ಕ್ವೀರ್ ಅಂತ ಕರೆಯಬಹುದು.) ’ನಾನು ಲೇಡೀಸ್’ ಸಿನಿಮಾ ’ತಸ್ವೀರ್’ ಎಂಬ ದಕ್ಷಿಣ ಏಷ್ಯಾ ಚಿತ್ರೋತ್ಸವದಲ್ಲಿ ಮೆಚ್ಚುಗೆಯನ್ನೂ ಪಡೆದಿದೆ.

’ನ್ಯಾಯಪಥ’ದೊಂದಿಗೆ ’ಸ್ವಾಭಿಮಾನ ತಿಂಗಳ’ ಬಗ್ಗೆ ಹಾಗೂ ತಮ್ಮ ಜೀವನಾನುಭವವನ್ನು ಶೈಲಜಾ ಹಂಚಿಕೊಂಡರು. “1969 ಜೂನ್ 28ರಂದು ಸ್ಟೋನ್ ವಾಲ್ ಎಂಬ ಗೇ ಬಾರ್‌ನಲ್ಲಿ ಪೊಲೀಸ್ ದೌರ್ಜನ್ಯ ನಡೆದಿತ್ತು. ಆ ಘಟನೆಗೆ ನೆನಪಿಗಾಗಿ, ಪ್ರೀತಿಯ ಅಡೆತಡೆಗಳನ್ನು ಮುರಿಯಲು, ಸಾಂಸ್ಕೃತಿಕ ಮತ್ತು ಕಾನೂನು ವ್ಯವಸ್ಥೆಯಲ್ಲಿ ಪ್ರಗತಿಯನ್ನು ತರಲು ಜೂನ್ ತಿಂಗಳಿನಲ್ಲಿ ವಿಶ್ವದಾದ್ಯಂತ ’ಸ್ವಾಭಿಮಾನ’ ಮೆರೆಯಲಾಗುತ್ತದೆ. ಭಾರತವು ಕೂಡ ಈ ಸ್ವಾಭಿಮಾನ ತಿಂಗಳನ್ನು ಆಚರಿಸುತ್ತಿದೆ. ಈ ಆಚರಣೆಯ ಪ್ರಾಮುಖ್ಯತೆ ಏನೆಂದರೆ, ಇದು ಕ್ವೀರ್ ಸಮುದಾಯಕ್ಕೆ ಸ್ವಾತಂತ್ರ್ಯವನ್ನು ಸಂಭ್ರಮವನ್ನು ಹೊತ್ತುತರುವುದು ಮಾತ್ರವಲ್ಲದೆ ಸ್ತ್ರೀವಾದವನ್ನು ವಿಸ್ತರಿಸುವ ಕೆಲಸ ಮಾಡುತ್ತದೆ. ಇದು ಒಟ್ಟಾರೆ ಪ್ರಗತಿಗೆ ಒಂದು ದಾರಿದೀಪವಾಗಿದೆ” ಎಂದರು.

ಶೈಲಜಾ ಪಡಿಂದಲ

“ನಾನು ಕ್ವೀರ್ ಫಿಲ್ಮ್ ಮೇಕರ್ ಅಷ್ಟೇ ಅಲ್ಲ, ಹುಟ್ಟಿದಾಗಿನಿಂದಲೂ ಕ್ವೀರ್ ಆಗಿದ್ದೇನೆ. ನಾನು ಜೈವಿಕವಾಗಿ ಮಹಿಳೆಯಾಗಿದ್ದು, ’ಆಕೆ’, ’ಅವಳು’ ಎಂದು ಗುರುತಿಸಿಕೊಳ್ಳುತ್ತೇನೆ. ನನ್ನ ಹದಿಹರೆಯದ ಮತ್ತು ಯೌವನದ ದಿನಗಳಲ್ಲಿ ಕ್ವೀರ್ ಆಗಿ ಹೊರಬರಲು ನನಗೆ ದೊಡ್ಡ ಸವಾಲು ಇತ್ತು. ನನ್ನ ಸ್ವಾತಂತ್ರ್ಯದ ಅಭಿವ್ಯಕ್ತಿ ನಿಷಿದ್ಧವಾಗಿತ್ತು. ಹಾಗಾಗಿ ಸಮಾಜದಲ್ಲಿ ಕ್ವೀರ್ ಮತ್ತು ಮಹಿಳೆಯರ ಬದುಕಿನಲ್ಲಿ ಬದಲಾವಣೆಯನ್ನು ತರುವುದಕ್ಕಾಗಿ ನಾನು ಸಂಗೀತ, ನೃತ್ಯ ಮತ್ತು ಚಲನಚಿತ್ರಗಳನ್ನು ಮಾಧ್ಯಮವಾಗಿ ಬಳಸಿದೆ” ಎಂದು ತಿಳಿಸಿದರು.

“ಹತ್ತು ವರ್ಷಗಳ ಹಿಂದೆ ಕ್ವೀರ್ ನಿಷಿದ್ಧವಾಗಿತ್ತು. ಈಗ ಅದು ಬದಲಾಗುತ್ತಿದೆ. ಆದರೆ ಇನ್ನೂ ಬಹಳ ದೂರ ಸಾಗಬೇಕಾಗಿದೆ. ಈಗ ನಮ್ಮ ಕ್ವೀರ್ ಪ್ರೇಮಿಗಳು ಮದುವೆಯಾಗಲು ಸಾಧ್ಯವಿದೆ. ಭಿನ್ನರೂಪದ ವಿವಾಹಿತ ದಂಪತಿಗಳಿಗೂ ಎಲ್ಲ ಸೌಲಭ್ಯಗಳು ದೊರಕಬೇಕು. ಕರ್ನಾಟಕದ ಮೊದಲ ಲೆಸ್ಬಿಯನ್ ಪ್ರೇಮಕಥೆಯಾದ ’ನಾನು ಲೇಡೀಸ್’ ಸಿನಿಮಾ ಮಾಡಿದೆ. ಈ ಚಲನಚಿತ್ರವು ಕೇವಲ ಇಬ್ಬರು ಮಹಿಳೆಯರ ನಡುವಿನ ಪ್ರೇಮವನ್ನು ಮಾತ್ರವಲ್ಲದೆ ಕ್ವೀರ್ ಜೀವನಶೈಲಿ, ಸಂತಾನೋತ್ಪತ್ತಿ ತಂತ್ರಜ್ಞಾನ ಮತ್ತು ಸಂತಾನೋತ್ಪತ್ತಿ ಹಕ್ಕುಗಳ ಸುತ್ತಲಿನ ಸಾಮಾಜಿಕ ರಾಜಕೀಯ ರಚನೆಗಳ ಕುರಿತು ಚರ್ಚಿಸುತ್ತದೆ” ಎಂದು ವಿವರಿಸಿದರು.

ಇದನ್ನೂ ಓದಿ: ಲಿಂಗತ್ವ ತಟಸ್ಥ ನಿರೂಪಣೆಯ ಜೊತೆಗೆ ಲಿಂಗತ್ವ ಸಮಾನ ಸಂವೇದನೆಯನ್ನು ರೂಪಿಸಬೇಕಾಗಿದೆ

“ಚೆನ್ನೈನಲ್ಲಿ ನಡೆದ ಪ್ರೈಡ್ ಕಾರ್ಯಕ್ರಮದಲ್ಲಿ ಹಾಜರಾಗಿದ್ದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ನನ್ನ ಸಮುದಾಯ ಸೇರಿತ್ತು. ಅದೇ ಹತ್ತು ವರ್ಷಗಳ ಹಿಂದೆ ಕೇವಲ 50 ಜನರು ಸೇರಿ ರ್‍ಯಾಲಿ ನಡೆಸುತ್ತಿದ್ದರು. ನಾವು ಸಮುದಾಯವಾಗಿ ಇನ್ನೂ ಬಹಳ ದೂರ ಕ್ರಮಿಸಬೇಕಿದೆ” ಎಂದು ಅಭಿಪ್ರಾಯಪಟ್ಟರು.

ಪ್ರೈಡ್ ತಿಂಗಳು ಎಲ್‌ಜಿಬಿಟಿಕ್ಯೂ+ ಸಮುದಾಯದ ಬಗೆಗಿನ ಜನಸಾಮಾನ್ಯರ ತಿಳಿವಳಿಕೆ ಹೆಚ್ಚಲು ಹಾಗೂ ತಪ್ಪು ಕಲ್ಪನೆಯಿಂದ ಸಮಾಜದಲ್ಲಿ ಮನೆಮಾಡಿರುವ ಕಳಂಕ ದೂರವಾಗಬೇಕು ಎಂಬುದು ಲೈಂಗಿಕ ಅಲ್ಪಸಂಖ್ಯಾತ ಕಾರ್ಯಕರ್ತರ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...