ಚಾಮರಾಜನಗರ ಜಿಲ್ಲೆಯ ನಂಜುಂಡಸ್ವಾಮಿ ಕೆರೆಹಳ್ಳಿಯವರು ಒಂದು ಕಾಲಕ್ಕೆ ‘ಮೂರೂವರೆ’ ಮರ್ಡರ್ ಎಂದೇ ಕುಖ್ಯಾತಿ ಪಡೆದವರು. ಅತ್ತೆ, ಭಾವ, ಭಾಮೈದ, ಹೆಂಡತಿ ವಿಚಾರವಾಗಿ ಗಲಾಟೆ ನಡೆದು, ತನಗೆ ಹೊಡೆಯಲು ಬಂದವನಿಂದ ಮಚ್ಚು ಕಿತ್ತುಕೊಂಡು ನಂಜುಂಡಸ್ವಾಮಿ ಪ್ರತಿದಾಳಿ ನಡೆಸಿದಾಗ ಅತಾಚುರ್ಯ ನಡೆದೇ ಬಿಟ್ಟಿತ್ತು. ‘ಮೂರೂವರೆ ಮರ್ಡರ್’ ಎಂಬ ಅಪಖ್ಯಾತಿ ಅವರ ತಲೆಗೆ ಕಟ್ಟಿತು. ಹೀಗೆ ಜೈಲು ಸೇರಿದ ನಂಜುಂಡಸ್ವಾಮಿ ಸನ್ನಡತೆಯ ಆಧಾರದಲ್ಲಿ ಹೊರಗಡೆ ಬಂದಾಗ ಮಾತ್ರ ಸಂಪೂರ್ಣ ಬದಲಾಗಿದ್ದರು. ರಂಗಭೂಮಿ ಹಾಗೂ ಟೆರ್‍ರಾಕೋಟ ಕಲಾಕೃತಿಗಳ ಕಲಾವಿದರಾಗಿ ಹೊಮ್ಮಿದ್ದರು.
ರಂಗಭೂಮಿ ಮೂಲಕ ಅನೇಕ ಕೈದಿಗಳ ಮನಪರಿವರ್ತನೆ ಮಾಡಿದ ಹೆಗ್ಗಳಿಕೆ ಮೈಸೂರು ರಂಗಾಯಣದ ಹಿರಿಯ ಕಲಾವಿದ ಹುಲುಗಪ್ಪ ಕಟ್ಟೀಮನಿಯವರಿಗೆ ಸಲ್ಲುತ್ತದೆ. 1999ರಿಂದ 2017ರವರೆಗೆ ಸುಮಾರು ಹದಿನೇಳು ವರ್ಷಗಳ ಕಾಲ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ನಂಜುಂಡಸ್ವಾಮಿ, ಸನ್ನಡತೆಯ ಆಧಾರದಲ್ಲಿ ಹೊರಬಂದಿದ್ದರ ಹಿಂದೆ ರಂಗಭೂಮಿ ಎಂಬ ದಾರಿದೀಪ, ಹುಲುಗಪ್ಪ ಕಟ್ಟೀಮನಿ ಎಂಬ ಮಹಾನ್ ಗುರು ಇದ್ದರು. ಹಲವಾರು ನಾಟಕಗಳನ್ನು ಕೈದಿಗಳಿಗೆ ಕಲಿಸಿದ್ದ ಹುಲುಗಪ್ಪ ಅವರು, ಈಗ ವಿವಾದದ ಕೇಂದ್ರ ಬಿಂದುವಾಗಿರುವ ‘ಜೊತೆಗಿರುವನು ಚಂದಿರ’ ನಾಟಕವನ್ನೂ ಕೈದಿಗಳಿಂದ ಪ್ರದರ್ಶನ ಮಾಡಿಸಿ ಯಶಸ್ಸಿಯಾಗಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಜೋಸೆಫ್ ಸ್ಟೀನ್ ಅವರ ‘ಪಿಡ್ಲರ್ ಆನ್ ದಿ ರೂಫ್’ ನಾಟಕವನ್ನು ಸಾಹಿತಿ, ಕಥೆಗಾರ ಜಯಂತ ಕಾಯ್ಕಿಣಿ ಅವರು ಕನ್ನಡಕ್ಕೆ ‘ಜೊತೆಗಿರುವನು ಚಂದಿರ’ ಎಂಬ ಹೆಸರಲ್ಲಿ ರೂಪಾಂತರ ಮಾಡಿದ್ದಾರೆ. ಆ ನಾಟಕ ಹಲವು ವರ್ಷಗಳಿಂದ ರಂಗಪ್ರದರ್ಶನಗೊಳ್ಳುತ್ತಲೇ ಇದೆ. ಕಳೆದ ಭಾನುವಾರ ಶಿವಮೊಗ್ಗದ ರಂಗಬೆಳಕು ತಂಡವು ಆನವಟ್ಟಿಯಲ್ಲಿ ಈ ನಾಟಕದ ಪ್ರದರ್ಶನ ಹಮ್ಮಿಕೊಂಡಿತ್ತು. ಈ ವೇಳೆ ಆರ್‌ಎಸ್‌ಎಸ್ ಮತ್ತು ಬಜರಂಗದಳದ ಮುಖಂಡರು (ಸಂಘ ಪರಿವಾರದ ಫ್ರಿಂಜ್ ಎಲಿಮೆಂಟ್‌ಗಳು) ಬಂದು ಗಲಾಟೆ ಮಾಡಿ ನಾಟಕವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. “ದೇಶದಲ್ಲಿ ಹಿಂದೂ- ಮುಸ್ಲಿಂ ಗಲಾಟೆ ನಡೆಯುತ್ತಿರುವಾಗ ಮುಸ್ಲಿಮರೇ ಪ್ರಧಾನವಾಗಿರುವ ಕಥಾವಸ್ತು ಇಟ್ಟುಕೊಂಡು ನಾಟಕ ಮಾಡಿರುವುದು ಬೇಸರದ ಸಂಗತಿ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದನ್ನೂ ಇವರು ಆಕ್ಷೇಪಾರ್ಹ ನಾಟಕ ಎನ್ನುತ್ತಿದ್ದಾರೋ ಅದೇ ನಾಟಕ ಅನೇಕ ಕೈದಿಗಳ ಬದುಕಿನಲ್ಲಿ ಬೆಳಕಾಗಿದೆ. ಹೊಸ ದಿಕ್ಕನ್ನು ತೋರಿದೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕಲಾವಿದ ನಂಜುಂಡಸ್ವಾಮಿ ಕೆರೆಹಳ್ಳಿ, “ರಂಗಭೂಮಿ ನನ್ನ ಬದುಕಿನಲ್ಲಿ ತಂದ ಬದಲಾವಣೆಯನ್ನು ನಾನೆಂದೂ ಮರೆಯುವುದಿಲ್ಲ. ಜೊತೆಗಿರುವನು ಚಂದಿರ ನಾಟಕದ- ಕಾಣದಿರದ ಹಾದಿಗಳಲಿ, ದೀಪವಿರದ ರಾತ್ರಿಗಳಲಿ, ಚಂದಿರ ನಮ್ಮ ಕೈಬಿಡದಿರಲಿ- ಹಾಡನ್ನು ಕೇಳುತ್ತಿದ್ದರೆ ನಾವು ಅತ್ತುಬಿಡುತ್ತಿದ್ದೆವು. ಕಿಡಿಗೇಡಿಗಳು ಈ ನಾಟಕದ ಬಗ್ಗೆ ಏನೋ ಹೇಳಿಬಿಡಬಹುದು. ಈ ನಾಟಕದ ಸಾಲುಗಳೇನು? ಆ ಮಾತಿನ ಅರ್ಥಗಳೇನು? ಎಂಬುದನ್ನು ತಿಳಿಯಬೇಕು. ಜಯಂತ ಕಾಯ್ಕಿಣಿಯವರು ಬರೆದಿರುವ ಮಾತುಗಳಂತೂ ಅದ್ಭುತವಾಗಿವೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಹೋಗಿ ನಾಟಕ ಮಾಡಿದ್ದೆವು. ಕಾಯ್ಕಿಣಿಯವರೂ ಈ ನಾಟಕವನ್ನು ನೋಡಲು ಬಂದು ನಮ್ಮನ್ನು ಪ್ರೋತ್ಸಾಹಿಸಿದ್ದರು” ಎಂದು ನೆನೆದರು.

ವೀರಪ್ಪನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದವರು ಅಂಬುರಾಜ್. ‘ಮಾಜಿ ಜೀವಾವಧಿ ಕೈದಿ’ಯಾಗಿರುವ ಅವರು, ‘ರಂಗಭೂಮಿಯ ಸ್ಪರ್ಶ ಸಿಗದಿದ್ದರೆ ನಾನು ಟೆರರಿಸ್ಟ್ ಆಗುತ್ತಿದ್ದೆ’ ಎಂದು ಭಾವುಕವಾಗಿ ನುಡಿಯುತ್ತಾರೆ.
“ಯಾವುದೇ ಧರ್ಮದವರಾದರೂ ಈ ದೇಶದ ಮಣ್ಣಿನ ಬಗ್ಗೆ ಇರುವ ವಿಶ್ವಾಸವನ್ನು ತೋರಿಸುವ ನಾಟಕ- ಜೊತೆಗಿರುವನು ಚಂದಿರ. ಕೋಮು ಆಧಾರದಲ್ಲಿ ದೇಶ ವಿಭಜನೆಯಾದಾಗ ಸಾಮಾನ್ಯರ ಭಾವನೆಗಳು ಹೇಗಿದ್ದವು, ಈ ಮಣ್ಣಿನ ಬಗ್ಗೆ ಇರುವ ಪ್ರೀತಿ ಎಂಥದ್ದು ಎಂಬುದನ್ನು ಬಹಳ ಭಾವನಾತ್ಮಕವಾಗಿ ಕಟ್ಟಿಕೊಟ್ಟ ನಾಟಕವಿದು. ಇದು ಧರ್ಮಕ್ಕಿಂತ ಮನಸ್ಸುಗಳ ವಿಚಾರವನ್ನು ತೆರೆದಿಡುವ ನಾಟಕ” ಎನ್ನುತ್ತಾರೆ ಅಂಬುರಾಜ್.

“ನಾಟಕದ ಮುಖ್ಯ ಪಾತ್ರವಾದ ಬಡೇಮಿಯನ ಮಗಳು ಹಿಂದೂ ಹುಡುಗನನ್ನು ಕರೆದುಕೊಂಡು ಹೋಗಿಬಿಡುತ್ತಾಳೆ. ಹಿಂದೂ ಮುಸ್ಲಿಂ ಮದುವೆಯಾಗುತ್ತಾರೆ. ಇದೇ ಭಾರತದ ಸಂಸ್ಕೃತಿ ಎಂದು ಹೇಳುವ ನಾಟಕವಿದು. ಕೋಮು ದೃಷ್ಟಿಕೋನ ಇಟ್ಟುಕೊಂಡು ಸಮಾಜವನ್ನು ನೋಡಿದರೆ, ಎಲ್ಲವೂ ಕೇಸರಿಯಾಗಿಯೇ ಕಾಣುತ್ತದೆ” ಎಂದು ವಿಷಾದಿಸಿದರು.
“ನನಗೆ ರಂಗಭೂಮಿಯ ನಂಟು ಸಿಗದೇ ಹೋಗಿದ್ದರೆ, ಕಟ್ಟೀಮನಿ ಥರದ ವ್ಯಕ್ತಿಗಳು ಪರಿಚಯವಾಗದೇ ಹೋಗಿದ್ದರೆ ನಾನು ಜೈಲಲ್ಲಿ ದೊಡ್ಡ ಟೆರರಿಸ್ಟ್ ಆಗ್ತಾ ಇದ್ದೆ. ನನ್ನ ಬದುಕನ್ನು ಸುಧಾರಿಸಿದ್ದು ರಂಗಭೂಮಿ. ವೀರಪ್ಪನ್ ಕೇಸ್ ಕಾರಣಕ್ಕೆ ನನಗೆ ಚಿತ್ರಹಿಂಸೆಯನ್ನೂ ನೀಡಿದರು. ಹೀಗಾಗಿ ಅಧಿಕಾರಿಗಳ ಮೇಲೆ, ಸಮಾಜದ ಮೇಲೆ ನನಗೆ ಸಿಟ್ಟಿತ್ತು. ಅದೆಲ್ಲವೂ ಕರಗಿಹೋಗಿ, ನನ್ನನ್ನು ಮನುಷ್ಯನನ್ನಾಗಿ ಮಾಡಿದ್ದು ರಂಗಭೂಮಿ” ಎಂದರು.

“ಜೊತೆಗಿರುವನು ಚಂದಿರ – ಮಾನವ ಮೌಲ್ಯಗಳನ್ನು ಬೆಳೆಸುವಂತಹ ನಾಟಕ. ಜೈಲಿನಲ್ಲಿ ಹಿಂದೂ ಮುಸ್ಲಿಂ ಹಬ್ಬಗಳನ್ನು ಒಟ್ಟಾಗಿ ಕೈದಿಗಳು ಆಚರಿಸುತ್ತಾರೆ. ಈ ನಾಟಕ ಹಿಂದೂ- ಮುಸ್ಲಿಂ ನಡುವೆ ಭೇದ ತರುವಂತಿದ್ದರೆ ಕೈದಿಗಳು ಈ ನಾಟಕವನ್ನು ಮಾಡಲು ಸಾಧ್ಯವಾಗುತ್ತಿತ್ತೇ?” ಎಂದು ಪ್ರಶ್ನಿಸಿದರು.
‘ಜೊತೆಗಿರುವನು ಚಂದಿರ’ ನಾಟಕದಲ್ಲಿ ಬಡೇಮಿಯ ಪಾತ್ರದಲ್ಲಿ ಅಭಿನಯಿಸಿದ್ದ ರಮೇಶ್ ಆಡುವಳ್ಳಿ ಅವರು ಸುಮಾರು ಹದಿನೈದು ವರ್ಷಗಳ ಕಾಲ ಜೈಲಿನಲ್ಲಿದ್ದವರು. ರಾಜಕೀಯ ಪ್ರಕರಣವೊಂದರಲ್ಲಿ ನನ್ನ ಹೆಸರು ಸಿಕ್ಕಿಕೊಂಡಿತು. ತಪ್ಪು ಮಾಡದೆಯೇ ಶಿಕ್ಷೆ ಅನುಭವಿಸಿದೆ ಎನ್ನುವ ರಮೇಶ್ ಅವರು, ಕಟ್ಟೀಮನಿಯವರ ತಂಡದೊಂದಿಗೆ ಕೆಲಸ ಮಾಡಿದವರು. “‘ತಲೆದಂಡ’ ನಾಟಕದಲ್ಲಿ ಬಸವಣ್ಣ ಪಾತ್ರದಲ್ಲಿ, ‘ಕಸ್ತೂರಬಾ ಗಾಂಧಿ’ ನಾಟಕದಲ್ಲಿ ಗಾಂಧಿಯಾಗಿ ಅಭಿನಯಿಸಿದ್ದಾರೆ. ‘ಮಾಧವಿ’ ನಾಟಕದಲ್ಲಿ ‘ಗಾಲವ’ನಾಗಿ ಅಭಿನಯಿಸಿದ್ದೇನೆ. ನನಗೆ ತುಂಬಾ ಇಷ್ಟವಾದ ನಾಟಕವೆಂದರೆ ಜಯಂತ್ ಕಾಯ್ಕಿಣಿಯವರು ಬರೆದ- ಜೊತೆಗಿರುವನು ಚಂದಿರ ನಾಟಕ. ಅದ್ಭುತವಾದ ಕಥೆ ಇದು. ಇದನ್ನು ನೋಡಿದವರು ಹಿಂದೂ- ಮುಸ್ಲಿಂ ವಿವಾದವನ್ನು ಮಾಡಲೇಬಾರದು” ಎಂದು ಅಭಿಪ್ರಾಯಪಟ್ಟರು.

“ಕೈದಿಗಳ ಮೇಲೆ ತಪ್ಪು ಅಭಿಪ್ರಾಯ ಹೊಂದಿದ್ದ ಕಾರಾಗೃಹ ಇಲಾಖೆಯ ಮೇಲಧಿಕಾರಿಗಳೇ ನಮ್ಮ ನಾಟಕ ನೋಡಿ ಅಚ್ಚರಿ ಪಟ್ಟರು. ನಮ್ಮ ನಾಟಕ ನೋಡಿ ಅಧಿಕಾರಿಗಳ ಮನಸ್ಸೇ ಪರಿವರ್ತನೆಯಾಗಿತ್ತು” ಎಂದು ತಿಳಿಸಿದರು.
ಇದನ್ನೂ ಓದಿರಿ: ಮುಸ್ಲಿಂ ಪ್ರಧಾನ ಕಥೆ ಹೊಂದಿದೆ ಎಂದು ನಾಟಕಕ್ಕೆ ಅಡ್ಡಿಪಡಿಸಿದ RSS-ಬಜರಂಗದಳದ ದುಷ್ಕರ್ಮಿಗಳು
ರಂಗಕರ್ಮಿ ಹುಲುಗಪ್ಪ ಕಟ್ಟೀಮನಿಯವರನ್ನು ಈ ಕುರಿತು ಮಾತನಾಡಿಸಲು ‘ನಾನುಗೌರಿ.ಕಾಂ’ ತಂಡ ಪ್ರಯತ್ನಿಸಿತು. ನಾಟಕದ ಹೆಸರು ಹಾಗೂ ವಿವಾದದ ಕುರಿತು ಕೇಳಿದ ತಕ್ಷಣ ಕಟ್ಟೀಮನಿಯವರು ಭಾವುಕರಾದರು. “ನನ್ನದೇ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ, ಈ ಕುರಿತು ಬರೆಯುತ್ತೇನೆ” ಎಂದರು.



