ಕಳೆದ ತಿಂಗಳು ಬಂಧನಕ್ಕೊಳಗಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಕ್ಟ್‌ಚೆಕ್ಕರ್, ಪತ್ರಕರ್ತ ಮೊಹಮ್ಮದ್ ಜುಬೇರ್ ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಸುಪ್ರೀಕೋರ್ಟ್ ಬುಧವಾರ ಜಾಮೀನು ನೀಡಿದ್ದು, ಅವರನ್ನು ಬಿಡುಗಡೆ ಮಾಡುವಂತೆ ಹೇಳಿದೆ. ಇಂದು ಸಂಜೆ 6 ಗಂಟೆಯೊಳಗೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿದೆ.
“ಎಲ್ಲಾ ಎಫ್‌ಐಆರ್‌ಗಳಲ್ಲಿ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ನಾವು ಅಭಿಪ್ರಾಯಪಡುತ್ತೇವೆ. ಇದು ಕಾನೂನಿನ ಒಂದು ಸೆಟ್ ತತ್ವವಾಗಿದ್ದು, ಬಂಧನದ ಅಧಿಕಾರವನ್ನು ಮಿತವಾಗಿ ಅನುಸರಿಸಬೇಕು” ಎಂದು ಸುಪ್ರೀಂಕೋರ್ಟ್ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಪ್ರಸ್ತುತ ಪ್ರಕರಣದಲ್ಲಿ ಅವರನ್ನು ನಿರಂತರ ಬಂಧನದಲ್ಲಿ ಇರಿಸಲು ಮತ್ತು ವಿವಿಧ ನ್ಯಾಯಾಲಯಗಳಲ್ಲಿ ಅಂತ್ಯವಿಲ್ಲದ ಸುತ್ತಿನ ವಿಚಾರಣೆಗೆ ಒಳಪಡಿಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: ಜುಬೇರ್ ಪ್ರಕರಣಗಳ ‘ವಿಷ ವರ್ತುಲ’ದಲ್ಲಿ ಸಿಲುಕಿದ್ದಾರೆ: ಸುಪ್ರೀಂಕೋರ್ಟ್ ಹೇಳಿಕೆ
ಯುಪಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಮೊಹಮ್ಮದ್ ಜುಬೇರ್ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ದು ಇಂದು ಆದೇಶಿಸಿದ್ದು, “ಎಲ್ಲಾ ಪ್ರಕರಣಗಳಲ್ಲಿನ ಎಫ್‌ಐಆರ್‌ಗಳನ್ನು ಒಟ್ಟಿಗೆ ಸೇರಿಸಿ, ಒಂದು ತನಿಖಾ ಪ್ರಾಧಿಕಾರದಿಂದ ಅವುಗಳನ್ನು ನಿರ್ವಹಿಸಬೇಕು” ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಉತ್ತರ ಪ್ರದೇಶದಲ್ಲಿ ತನ್ನ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ಜುಬೇರ್ ಸುಪ್ರೀಂಕೋರ್ಟ್‌ಗೆ ಕೋರಿದ್ದರು. ಆದರೆ ಸುಪ್ರೀಂಕೋರ್ಟ್ ಎಫ್‌ಐಆರ್‌ಗಳನ್ನು ರದ್ದುಗೊಳಿಸದೆ, ಎಲ್ಲಾ ಪ್ರಕರಣಗಳ ವಿರುದ್ಧ ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು ಎಂದು ಹೇಳಿದೆ.
ಉತ್ತರ ಪ್ರದೇಶದಲ್ಲಿ ದಾಖಲಾದ 6 ಎಫ್‌ಐಆರ್‌ಗಳು ಸೇರಿದಂತೆ ಅರ್ಜಿದಾರರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರು ತನಿಖೆಗೆ ವರ್ಗಾಯಿಸಬೇಕು ಆದೇಶಿಸಿರುವ ಸುಪ್ರೀಂಕೋರ್ಟ್, “ಮೊಹಮ್ಮದ್ ಜುಬೈರ್ ವಿರುದ್ಧದ ಎಫ್‌ಐಆರ್‌ಗಳ ತನಿಖೆಗಾಗಿ ಯುಪಿ ಪೊಲೀಸರು ರಚಿಸಿದ್ದ ಎಸ್‌ಐಟಿಯನ್ನು ವಿಸರ್ಜಿಸಬೇಕು” ಎಂದು ತಿಳಿಸಿದೆ.
ಇದನ್ನೂ ಓದಿ: ಜುಬೇರ್ ಪ್ರಕರಣ: ಜಾಮೀನು ನೀಡಲು ನ್ಯಾಯಾಧೀಶರು ಹೆದರುತ್ತಿದ್ದಾರೆ- ಜಸ್ಟೀಸ್ ದೀಪಕ್ ಗುಪ್ತಾ
ದೆಹಲಿ ಹೈಕೋರ್ಟ್‌ನಲ್ಲಿ ಎಫ್‌ಐಆರ್‌ಗಳನ್ನು ರದ್ದುಪಡಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜಾಮೀನು ಬಾಂಡ್‌ಗಳನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು ಸಂಜೆ 6 ಗಂಟೆಯೊಳಗೆ ಮೊಹಮ್ಮದ್ ಜುಬಿಯಾರ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಈ ನಡುವೆ ಉತ್ತರ ಪ್ರದೇಶ ಸರ್ಕಾರವು ಜುಬೇರ್ ಅವರು ಯಾವುದೇ ಟ್ವೀಟ್‌ಗಳನ್ನು ಪೋಸ್ಟ್ ಮಾಡದಂತೆ ಅವರನ್ನು ತಡೆಯುವಂತೆ ನ್ಯಾಯಾಲಯವನ್ನು ಕೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಇಂತಹ ಆದೇಶ ನೀಡುವುದಿಲ್ಲ ಎಂದು ಹೇಳಿದೆ.
“ಇದು ವಕೀಲರಿಗೆ ಮುಂದೆ ನೀವು ವಾದಿಸಬೇಡಿ ಎಂದು ಹೇಳುವಂತಿದೆ. ಪತ್ರಕರ್ತನಿಗೆ ಬರೆಯಬೇಡಿ ಎಂದು ನೀವು ಹೇಗೆ ಹೇಳಲು ಸಾಧ್ಯ? ಅವರು ಕಾನೂನನ್ನು ಉಲ್ಲಂಘಿಸುವ ಕೆಲಸವನ್ನು ಮಾಡಿದರೆ, ಅದಕ್ಕೆ ಅವರು ಜವಾಬ್ದಾರನಾಗಿರುತ್ತಾರೆ. ಆದರೆ ನಾಗರಿಕನ ವಿರುದ್ಧ ನಾವು ನಿರೀಕ್ಷಿತ ಕ್ರಮವನ್ನು ತೆಗೆದುಕೊಳ್ಳುವುದು ಹೇಗೆ? ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಅವರು ಏನು ಮಾಡುತ್ತಾರೆ ಎಂಬುದಕ್ಕೆ ಪ್ರತಿಯೊಬ್ಬ ನಾಗರಿಕನು ಜವಾಬ್ದಾರನಾಗಿರುತ್ತಾನೆ. ನಾವು ಅಂತಹ ಯಾವುದೇ ಆದೇಶವನ್ನು ನೀಡುವುದಿಲ್ಲ” ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಉತ್ತರ ಪ್ರದೇಶ ಸರ್ಕಾರಕ್ಕೆ ಹೇಳಿದ್ದಾರೆ.
ಇದನ್ನೂ ಓದಿ: ಜುಬೇರ್ ಬಂಧನದ ಐದು ದಿನದ ನಂತರ ದೂರುದಾರನನ್ನು ಹುಡುಕುತ್ತಿರುವ ದೆಹಲಿ ಪೊಲೀಸರು!
ಜುಬೇರ್ ಅವರು 2018 ರಲ್ಲಿ ಮಾಡಿದ್ದ ಟ್ವೀಟ್ ಒಂದರ ಆಧಾರ ಮೇಲೆ ದೆಹಲಿ ಪೊಲೀಸರು ಜೂನ್ 28 ರಂದು ಬಂಧಿಸಿದ್ದರು. ಉತ್ತರ ಪ್ರದೇಶದಲ್ಲಿ ಅವರ ವಿರುದ್ಧ ಇನ್ನೂ ಏಳು ಎಫ್‌ಐಆರ್‌ಗಳು ದಾಖಲಾಗಿವೆ.


