Homeಮುಖಪುಟಹಿಂಗಿದ್ದ ನಮ್ಮ ರಾಮಣ್ಣ-2; ಮಂಡ್ಯಜಿಲ್ಲೆ ಒರಟುತನ ಇಲವಲ್ಲಾ, ಇಷ್ಟು ನಯವಂತಿಕೆ ಯಂಗೆ ಬತ್ತೂ ಅನ್ನಕಂಡೆ!

ಹಿಂಗಿದ್ದ ನಮ್ಮ ರಾಮಣ್ಣ-2; ಮಂಡ್ಯಜಿಲ್ಲೆ ಒರಟುತನ ಇಲವಲ್ಲಾ, ಇಷ್ಟು ನಯವಂತಿಕೆ ಯಂಗೆ ಬತ್ತೂ ಅನ್ನಕಂಡೆ!

- Advertisement -
- Advertisement -

ಡಾ.ಬೆಸಗರಹಳ್ಳಿ ರಾಮಣ್ಣನ ವಿಷಯ ಇನ್ನೂ ವಿಸ್ತಾರವಾಗಿ ಬೇಕಾದ್ರೆ ನಮ್ಮೂರಿಗೆ ಬಾ; ನಮ್ಮ ಮನೆ ಹಿಂದಿರೋ ಮಾವಿನ ಮರದ ಕ್ಯಳಗೆ ಕೂತಗಂಡು ಹೇಳ್ತಿನಿ ಎಂದು ಡಾ. ಕಮಲಾಕ್ಷಣ್ಣ ಕೊಟ್ಟಿದ್ದ ಆಶ್ವಾಸನೆ ನೆನಸಿಕೊಂಡು ಹೆರಗನಹಳ್ಳಿ ತಲುಪಿದೆ. ಈ ಊರು ನನಗೆ ಅರ್ಧ ಶತಮಾನದಿಂದ ಪರಿಚಯ. ಕದಬಹಳ್ಳಿಯಲ್ಲಿ ಹೈಸ್ಕೂಲ್ ಓದುವಾಗ ಸಹಪಾಠಿಗಳು ಕರೆದ ಕೂಡಲೇ ಹೆರಗನಹಳ್ಳಿಗೆ ಹೋಗುತ್ತಿದ್ದೆ. ಆ ಊರಲ್ಲಿ ನಡೆಯುವ ನಾಟಕ, ಗೊಂಬೆ ನಾಟಕ ಮತ್ತು ಹಬ್ಬಗಳಿಗೆ ತಪ್ಪದೆ ಹೋಗುತ್ತ ಅಲ್ಲಿ ನಾಗೇಗೌಡರ ದೊಡ್ಡಮನೆ ಮತ್ತು ನಿಂಗೇಗೌಡರ ಸಮಾಧಿ, ಹೆಚ್.ಟಿ ಕೃಷ್ಣಪ್ಪನವರ ಮನೆ, ಊರಕೆರೆ ಎಲ್ಲವನ್ನು ನೋಡಿದ್ದೆ; ಅದು ಬಾಲ್ಯಕಾಲ. ಎಲ್ಲವೂ ದೊಡ್ಡದಾಗಿ ವಿಸ್ಮಯಕರವಾಗಿ ಕಂಡಿದ್ದವು. ಆದರೆ ದಶಕಗಳ ನಂತರ ಹೋಗಿ ನೋಡಿದರೆ ಆ ಊರು ತಾರುಣ್ಯದಲ್ಲಿರದೆ ಮುದುಕಿಯಾದಂತೆ ಕಂಡಿತು. ನಾಟಕ ನೋಡಿದ ಮೈದಾನ ಚಿಕ್ಕದಾಗಿತ್ತು, ರಸ್ತೆಯೂ ಚಿಕ್ಕದಾಗಿ, ಮನೆಗಳು ಸಣ್ಣದಾಗಿ ಕಂಡವು. ಸಹಪಾಠಿಗಳು ಮುದುಕರಾದಂತೆ ಕಂಡು ಮನಸ್ಸಿನಾಳದಲ್ಲಿ ವಿಶಾದ ಆವರಿಸಿತು. ಕಾಲ ಪುರುಷನನ್ನು ಒಪ್ಪಿಕೊಳ್ಳುವುದು ಅನಿವಾರ್ಯ ಎಂದುಕೊಂಡು ಕಮಲಾಕ್ಷಣ್ಣನ ಮನೆ ಹುಡುಕುತ್ತ ಹೊರಟೆ. ಒಂದು ಸಂತೋಷದ ವಿಷಯವೆಂದರೆ ಅಂದು ಬೋಳಾಗಿದ್ದ ರಸ್ತೆ ಬದಿಯಲ್ಲಿ ಇಂದು ಬೃಹತ್ತಾದ ಆಲದ ಮರ- ಗೋಣಿ ಮರಗಳು ನಿಂತಿದ್ದವು. ಇಂತಹ ಮರಗಳ ಎದುರೇ ಕಮಲಾಕ್ಷಣ್ಣನ ಮನೆಯಿತ್ತು. ತನ್ನ ವೈದ್ಯವೃತ್ತಿಯ ಸೇವಾ ಅವಧಿಯನ್ನ ಬೆಂಗಳೂರಲ್ಲಿ ಕಳೆದ ಕಮಲಾಕ್ಷಣ್ಣ, ವಾಪಸು ಊರಿಗೆ ಬಂದ ನೆಲೆಸಿದ್ದ. ಅದೂ ಸಹ ತನ್ನ ಇಷ್ಟವಾದ ಆವರಣ ನಿರ್ಮಿಸಿಕೊಂಡು. ಪುಟ್ಟದಾದ ತೋಟ; ಒಳ್ಳೆಯ ಹಿತ್ತಿಲು; ಅಲ್ಲಿ ಮಾವಿನ ಮರ; ಮನೆಮುಂದೆ ಜಗಲಿ; ಇವೆಲ್ಲಾ ಕಮಲಾಕ್ಷಣ್ಣನ ಅಭಿರುಚಿಯ ಪ್ರತೀಕವಾಗಿದ್ದವು.

ಹೆರಗನಹಳ್ಳಿಯ ಡಾ. ಹೆಚ್.ಎಲ್.ನಾಗೇಗೌಡರು ಕರ್ನಾಟಕ ಕಂಡರಿಯದ ಅಪರೂಪದ ವ್ಯಕ್ತಿ. ಅವರು ಜಿಲ್ಲಾಧಿಕಾರಿ ಮತ್ತಿತರ ಹುದ್ದೆಗಳಲ್ಲಿದ್ದು ಮಾಡಿದ ಸಾಧನೆಯ ಜೊತೆಗೆ ಅಪರೂಪದ ಜಾನಪದ ಸಂಗ್ರಹಕಾರರು ಮತ್ತು ಲೇಖಕರು. ದಿನದ ಹದಿನೆಂಟು ಗಂಟೆ ದುಡಿಯುವ ಸಾಮರ್ಥ್ಯದ ಈ ಅಧಿಕಾರಿಯನ್ನು ಕಂಡ ಕುವೆಂಪು ನಾಗೇಗೌಡರ ಮೇಲೆ ಪ್ರವಾಸಿಕಂಡ ಇಂಡಿಯಾ ಸಂಪುಟ ರಚನೆ ಜವಾಬ್ದಾರಿ ವಹಿಸಿದ್ದರು. ಇನ್ನು ರಾಜಕಾರಣದಲ್ಲಿ ಹೆಚ್.ಟಿ ಕೃಷ್ಣಪ್ಪನವರ ಸಾತ್ವಿಕ ಸ್ವಭಾವ ಮತ್ತು ದೊಡ್ಡತನ ಮೆಚ್ಚಿಕೊಂಡಿದ್ದ ರಾಮಕೃಷ್ಣ ಹೆಗಡೆಯವರು ಬೃಹತ್ ಖಾತೆಗಳನ್ನ ಕೊಟ್ಟಿದ್ದರು. ಅದರಲ್ಲಿ ಅಬಕಾರಿಯೂ ಸೇರಿತ್ತು. ಆ ಸಮಯದಲ್ಲಿ ಮನೆಗೆ ಬಂದ ಖೋಡೆ ಸಾಮ್ರಾಜ್ಯದ ಅಧಿಪತಿಗಳು ನಾವು ನಿಮಗೊಂದು ಮನೆ ಕಟ್ಟಿಸಿಕೊಡುತ್ತೇವೆ ಅಂದರು. ಗಲಿಬಿಲಿಯಾದ ಕೃಷ್ಣಪ್ಪನವರು “ಅಯ್ಯೋ ಎಲ್ಯಾರುಂಟೆ. ಆ ಮನೇಲಿ ನೆಮ್ಮದಿಯಾಗಿರಕ್ಕಾಗತ್ತ.. ರಾಮಕೃಷ್ಣ ಹೆಗಡೆಯವರು ನನ್ನ ಮೇಲೆ ಭಾಳ ನಂಬಿಕೆಯಿಟ್ಟಿದಾರೆ, ಆ ನಂಬಿಕೆಗೆ ದ್ರೋಹ ಬಗಿಯಕ್ಕಾಗತ್ತ, ದಯವಿಟ್ಟು ಹೋಗಿ” ಅಂತ ವಿನಂತಿ ಮಾಡಿಕೊಂಡಿದ್ದರು. ಇದರಿಂದ ಅವರ ಹೆಂಡತಿ ಜಯಮ್ಮ ಸಿಟ್ಟಾಗಿದ್ದರು. ಯಾವುದಕ್ಕೂ ಕೃಷ್ಣಪ್ಪನವರು ಕೇರ್ ಮಾಡಿದ್ದಿಲ್ಲ. ಇಂತಹ ಪ್ರಾಮಾಣಿಕ ರಾಜಕಾರಣಿಯ ತಮ್ಮ ಡಾ. ಕಮಲಾಕ್ಷಣ್ಣ ಕೂಡ ಅದೇ ಮಾರ್ಗದಲ್ಲಿ ಬದುಕಿದವರು. ತಮ್ಮಿಷ್ಟದಂತೆ ಬದುಕುವ ಸ್ವತಂತ್ರಜೀವಿ. ರಾಶಿಗುಣದ ಕಮಲಾಕ್ಷಣ್ಣ ಹಳ್ಳಿಯ ಭಾಷೆ ಬಾಂಧವ್ಯ ಮರೆಯದವರು. ಮೈಸೂರಿನಲ್ಲಿ ಓದುವಾಗ ಪರಿಚಯವಾದ ಡಾ. ಬೆಸಗರಹಳ್ಳಿ ರಾಮಣ್ಣನ ಸ್ನೇಹವನ್ನು ಕಡೆಯವರೆಗೂ ಉಳಿಸಿಕೊಂಡು ಬಂದವರು. ಅವರೇ ಹೇಳುವಂತೆ ಅವರು ಮೈಸೂರಿನಲ್ಲಿ ಓದುವಾಗಿನ ಸಮಯ ಸುವರ್ಣಯುಗ. ಆ ಯುಗದ ಸಂಗತಿಗಳನ್ನು ಕೇಳುವ ಸಂಭ್ರಮದಿಂದಲೇ ನಾನು ಹೆರಗನಹಳ್ಳಿ ತಲುಪಿದೆ.

ಹೆಚ್.ಟಿ ಕೃಷ್ಣಪ್ಪ

ನನ್ನನ್ನು ನೋಡಿದ ಕೂಡಲೇ, “ಹೇಳಿದಂಗೆ ಬಂದುಬುಟ್ಯಲ್ಲಾ ನೀನು” ಎಂದರು. ರಾಮಣ್ಣನ ವಿಷಯ ಕೇಳಲು ನಾನು ಶಿವಮೊಗ್ಗದಿಂದ ಬರುವುದು ಸುಳ್ಳು ಎಂದುಕೊಂಡಿದ್ದರೋ ಏನೋ, ನನ್ನನ್ನು ಕಂಡು ಅಚ್ಚರಿಗೊಂಡಿದ್ದರು.

“ಚನ್ನಾಗ್ಯೆದೆ ಕಣಣ್ಣ ನಿನ್ನ ಮನೆ ಆವರಣ. ಕೋಳಿನೂ ಸಾಕಿದ್ದೀಯಲ್ಲಣ್ಣ, ಜೀವನ ಅಂದ್ರೆ ಇದು” ಅಂದೆ.

“ಹಳ್ಳಿಲ್ಲಿದ್ದ ಮ್ಯಾಲೆ ಕೋಳಿ ಸಾಕಬೇಕು ನೋಡು. ಯಲ್ಲ ಈಗ ಫಾರಂಕೋಳಿ ಬಾಯ್ಲರ್ ಕೋಳಿ ತಂದು ತಿಂತರೆ. ಅಂಗಾಗಿ ಯಾರ ಮನೆಮುಂದು ಕೋಳಿಲ್ಲ” ಎಂದುಕೊಂಡು ಎರಡು ಕುರ್ಚಿತಂದು ಮಾವಿನ ಮರದ ಕೆಳಗೆ ಹಾಕಿದರು. “ಅಕ್ಕಾರಿಲ್ಲವೆ” ಅಂದೆ.

“ಯಿಲ್ಲ, ಬೆಂಗಳೂರಲ್ಲವುರೆ. ನಾನಿಲ್ಲಿದ್ದಿನಿ.”

“ಮತ್ತೆ ಹೊಟ್ಟಿಗೇನ್ ಮಾಡ್ತೀ.”

“ನಾನೆ ಮಾಡಿಕತ್ತಿನಿ. ಕೆಲಸದೊರು ಅವುರೆ, ಯೇನೇಚನೆ ಮಾಡಂಗಿಲ್ಲ.”

“ನಿಂದೆ ಒಂಥರ ಅರಾಮು ಬುಡಣ್ಣ. ವಯಿಸಾದ ಮ್ಯಾಲೆ ಯಲ್ಲ ಹೆಂಡತಿ ಆಶ್ರಯಿಸಿದ್ರೆ, ನೀನವುರಿಲ್ದೆ ಆರಾಮಾಗಿದ್ದಿ.”

“ಏ ಅಂಗೇನುಯಿಲ್ಲ. ಬಂದು ಹೋಗಿ ಮಾಡ್ತರೆ. ಹೆಂಡತಿಯಿಲ್ದಂಗೆ ಇರಕ್ಕೆ ನಾನೇನು ಶ್ರೀರಾಮಚಂದ್ರನೆ.”

“ಶ್ರೀರಾಮಚಂದ್ರನಿಗೆ ಸೀತೆ ಇದ್ಲಲ್ಲಣ್ಣ.”

“ಇದ್ಲು, ಹನ್ನೆರಡೊರ್ಸ ವನವಾಸ. ಇನ್ನ ಹನ್ನೆರಡೊರ್ಸ ವಾಲ್ಮೀಕಿ ಆಶ್ರಮ. ಒಟ್ಟು ಇಪ್ಪತ್ತನಾಕೊರ್ಸ ರಾಮ ವಬ್ನೆಯಿದ್ದ. ಅಂಗೇನು ನಾನಿಲ್ಲ, ಆದ್ರು ಮನುಷ್ಯ ಯಾರಿಗೂ ಜೋತುಬೀಳಬಾರ್ದು. ವಯೋಮಾನಕೆ ತಕ್ಕಂಗೆ ನಮ್ಮ ನಮ್ಮ ಜವಾಬ್ದಾರಿ ಅರತಗಂಡು ನ್ಯಡಕಬೇಕು. ಇನ್ನೊಬ್ಬರ ಅಭಿಪ್ರಾಯಕ್ಕೆ ಗೌರವಕೊಡಬೇಕು. ವ್ಯಕ್ತಿತ್ವಕ್ಕೂ ಗೌರವ ಕೊಡಬೇಕು. ಅಂಗಿದ್ರೆ ಚಂದ. ನಮ್ಮುದ್ನೆ ಹೇರಕ್ಕೋದ್ರೆ ಸರಿಯಾಗದೆ ಜಗಳಾಯ್ತ. ನನಗೆ ಈ ವಾತಾವರಣ ಇಷ್ಟ. ಬಾಲ್ಯದಲ್ಲಿ ಇಲ್ಯಲ್ಲ ಓಡಾಡಿದ್ದೀನಿ, ಇಲ್ಲಿನ ಗಾಳಿ ಕುಡದಿದ್ದಿನಿ. ಅಂಗಾಗಿ ಈ ವಾತಾವರಣ ಇಷ್ಟ, ಇಲ್ಲಿದೀನಿ. ಹೆಂಡತಿ ಮಕ್ಕಳಿಗೆ ಬೆಂಗಳೂರಿಷ್ಟ, ಅಲ್ಲವುರೆ. ಬಂದು ಹೋಯ್ತರೆ. ನಾನೂ ಹೋಗಿ ಬತ್ತಿನಿ. ಸದ್ಯಕ್ಕೆ ಯಾವ ಸಮಸ್ಯೆನೂ ಇಲ್ಲ.”

“ರಾಮಣ್ಣನೂ ನಿನ್ನಂಗೆ ಇರತಾಯಿದ್ದ ಅಲವೆ.”

“ವಬ್ಬರಂಗೆ ಇನ್ನೊಬ್ಬರು ಇರಕ್ಕಾದತೆ. ಆದರಲ್ಲೂ ಅವುನು ಸಂತೆ ಗಿರಾಕಿ. ಮನಿಗೆ ಜನ ಬತ್ತಾಯಿರರಬೇಕು, ಕ್ವಾಣೆ ವಳಗೆ ಬಾಡು ಬೇಯ್ತಾಯಿರಬೇಕು. ನಡುಮನೆಲಿ ಸಾಹಿತ್ಯದ ಚರ್ಚೆ ನ್ಯಡಿತಾಯಿರಬೇಕು. ಅಂಗಿದ್ದೊನು ಸಾಯೋ ವಯಿಸಲ್ಲ, ನ್ಯನಿಸಿಗಾಂಡ್ರೆ ಬೇಜಾರಾಯ್ತದೆ.”

“ನೀವು ಜೋಡೆತ್ತಿನಂಗಿದ್ರಲ್ವೆ.”

“ಜೋಡೆತ್ತಾದ್ರು ನಾನೊಂಥರ ಅಮೃತ್ ಮಹಲ್, ಅವುನು ಹಳ್ಳಿಕಾರ್ ತಳಿ. ಅಮೃತ್ ಮಹಲ್ ಬಿಳಿ ಬಣ್ಣ. ಹಳ್ಳಿಕಾರ್ ರೂಪಾಯ್ ಬಣ್ಣ. ನೋಡಿದ್ದಿಯಾ?”

“ಸರಿಯಾದ್ ಹೋಲ್ಕೆ ಕಣಣ್ಣ. ಆದ್ರೆ ಬೀಜದ ಹೊರಿ ಕಟ್ಟೊರು ಹಳ್ಳಿಕಾರ್‌ನೆ ಕಟ್ಟತರೆ. ಕ್ಯಲಸಕ್ಕೆ ಅಮೃತ್ ಮಹಲ್ ಸರಿ.”

“ನಮ್ಮನ್ನು ದನಿಗೋಲುಸ್ತಿಯಾ?”

“ನೀನೆ ಅಲವಣ್ಣ ಹೇಳಿದ್ದು. ಮನುಸುರ್‌ನ ದನಿಗೋಲಿಸಿ ದನಗಳ ಮನುಸುರಿಗೋಲಿಸಿ ಮಾತಾಡದು ರೈತಾಪಿ ಜನಗಳು ಮಾಡತಿದ್ದ ತಮಾಸಿ, ಈಗವ್ಯಲ್ಲ ನಿಂತೋದೂ, ದನಗಳೇಯಿಲ್ಲ ಈಗ.”

“ನಾವೇನು ಮಾಡಕ್ಕಾಯ್ತದೆ ಬುಡು. ನಾನು ರೈತಾಪಿ ಕುಟುಂಬದಿಂದ ಬಂದೋನು, ಅಂಗೆ ರಾಮಣ್ಣನೂ ರೈತಾಪಿ ಕುಟುಂಬದಿಂದ್ಲೇ ಬಂದಿದ್ದ. ರಾಮಣ್ಣನ ಪೂರ್ವಿಕರ ಇತಿಹಾಸ ನನಿಗೊತ್ತಿಲ್ಲಾ. ನಮ್ಮ ಪೂರ್ವಿಕರು ತಿರುಪ್ತಿ ಕಡಿಂದ ಬಂದೋರು. ನಮ್ಮ ಬುಡಕಟ್ಟಿನ ನಾಯಕನಿಗೆ ಪ್ರಾಣಾಪಾಯ ಅದೆ ಅಂತ ಗೊತ್ತಾದಾಗ ಯಲ್ಲ ಸೇರಿ ತಮ್ಮ ಸಂಸಾರನ ದನ ಕರ ಕತ್ತೆ ಕುದುರೆ ಮ್ಯಾಲೇರಿಕಂಡು, ಮೈಸೂರು ರಾಜ್ಯ ಪ್ರವೇಶಮಾಡಿ ಶಿವನ ಸಮುದ್ರದತ್ರ ನೆಲೆನಿಂತ್ರು. ಆ ನಂತ್ರ ಹೋಗಿ ಮೈಸೂರು ಮಹಾರಾಜರನ್ನ ಬೇಟಿಮಾಡಿ ’ಅಲ್ಲಿ ನೆಲೆಸಬೋದೆ ಮಹಾಪ್ರಭು’ ಅಂದ್ರಂತೆ. ಮಹಾರಾಜರು ಒಪ್ಪಿಗೆ ಕೊಟ್ಟು ಕಳಿಸಿದ್ರು. ಆದ್ರೆ ಸ್ಥಳೀಯದಾಗ ಜನ ನೀವಿಲ್ಲಿ ಇರುಕೂಡದು ಅಂತ ಹೆದರಿಸಿ ಓಡಿಸಿದ್ರು. ಸರಿ ಅಲ್ಲಿಂದ ಹೊಂಟುಬರಬೇಕಾದ್ರೆ ಇದೇ ಹುಲಿಕ್ಯೆರೆ ತಿಂಗಳ ಬೆಳಕಲ್ಲಿ ಕಣದಲ್ಲಿದ್ದ ರಾಗಿ, ಭತ್ತ, ಕಾಳುಕಡ್ಡಿ ರಾಶಿ ನೋಡಿದ್ರು. ಸರಿ ಕತ್ತೆ ಕುದುರೆ ಮ್ಯಾಲೆ ಹೇರಿಕಂಡು ವಂಟ್ರು. ಅಷ್ಟರಲ್ಲಿ ಕಾವಲಿದ್ದೋನು ಊರಿಗೋಗಿ ಜನ ಏಳಿಸಿಗಂಡು ಬಂದ. ಹುಲಿಕ್ಯರೆ ಜನ ಹುಲಿಯಂಗೆ ನುಗ್ಗಿ ಬಂದು, ಯಲ್ಲಾರ್‍ನ ಹಿಡಕಂಡೋಗಿ, ಗುಡಿಮುಂದೆ ತಪ್ಪು ಕಾಣಿಕೆ ಕಟ್ಟಿಸಿದ್ರು. ಯಲ್ಲಾರ್‍ನು ಹುಲಿಕೆರಮ್ಮನ ಒಕ್ಕಲು ಮಾಡಿ ಕಳಿಸಿದ್ರು. ಇವುರು ಆಯ್ತು ಅಂತ ಒಪ್ಪಿಗಂಡು, ನಿಮ್ಮೂರತ್ರ ಯಿರೊ ಕುಪ್ಪಕಲ್ಲು ಹಿಂಭಾಗದಲ್ಲಿರೋ ಮೈದಾನದಲ್ಲಿ ನ್ಯಲಸಿದ್ರು. ಅತ್ತಗೆ ಆಯಿರಳ್ಳಿ ಇತ್ತಗೆ ಚನ್ನಾಪುರದ ಮಧ್ಯದಲ್ಲಿದ್ದು, ಅದೇನಾಯ್ತೋ ಏನೂ ಆ ಜಾಗ ಬುಟ್ಟು ನಾಗ್ತಳ್ಳಿಗೆ ಬಂದು ಸೇರಿಗಂಡು ಅಭಿವೃದ್ದಿಯಾಯ್ತು.”

“ಓ ಅಂಗರಿಲ್ಲಿಯವರಲ್ಲ ನೀವು.”

“ಯಾರಿಲ್ಲಿಯವರೇಳು, ಯಲ್ಲಾರ ಮೂಲ ಕೆದಕಿದ್ರು ಹಿಂಗೆ ಇರತವೆ.”

“ಆದ್ರು ನಾಗ್ತಳ್ಳಿಯೋರು ಬ್ಯಾರೆ ತರನೆ ಅವುರೆ ಕಣಣ್ಣ. ಯಾರು ನೋಡು ವಿದ್ಯಾವಂತ. ಅಪ್ಪ ಮಕ್ಕಳ್ಯಲ್ಲ ಮೇಷ್ಟು. ತುಂಬಾ ಜನ ಸರಕಾರಿ ಕ್ಯಲಸದಲ್ಲವುರೆ. ಕಿತ್ತ ನೆಟ್ಟ ಸಸಿ ಕದರ್ರೆ ಬ್ಯಾರೆ ಅನ್ನಾಂಗವುರೆ. ಈಗ ನೀನೆ ನೋಡು. ಆಕಾಲ್ದಲ್ಲಿ ನಮ್ಮ ಪ್ರಾಂತ್ಯಕ್ಕೆ ನೀನೆ ಯಂಬಿಬಿಎಸ್ ಮಾಡಿದ್ದೆ.”

“ಅದಕೂ ಮದ್ಲು ಕೃಷ್ಣ ಇದ್ರು. ಅವುರೀಗ ಅಮೆರಿಕದಲ್ಲವುರೆ. ನಮ್ಮಪ್ಪ ನಾಗತಳ್ಳಿಯಾದ್ರು, ಹ್ಯರಗನಳ್ಳಿಗೆ ದತ್ತು ಬಂದ. ನಾವು ನಾಕು ಜನ ಗಂಡು ಮಕ್ಕಳು. ನಾನೇ ಮೂರನೇ ಗಿರಾಕಿ. ಹ್ಯರಗನಹಳ್ಳಿ, ಅಳೀಸಂದ್ರ, ಹಿರಿಸ್ಯಾವೆ ಹಿಂಗೆ ಮೂರು ಹಂತ ಮುಗಿಸಿ ಇಂಟರ್ ಮೀಡಿಯೆಟ್ ಮಾಡಕ್ಕೋದೆ. ಅಲ್ಲಿ ಹಂ.ಪ ನಾಗರಾಜಯ್ಯ ಕನ್ನಡ ಮೇಷ್ಟ್ರು. ಭಾಳ ಮಜವಾಗಿದ್ರು. ಟೈ ಕಟ್ಟಿಕೊಂಡು ಸ್ಕೂಟ್ರಲ್ಲಿ ಬರೋರು. ಮಾತ್ರ ಚನ್ನಾಗಿ ಪಾಠ ಮಾಡೋರು. ಭಾಷಣನೂ ಅಂಗೆ ಮಾಡೋರು. ಇಂಡರ್ ಮೀಡಿಯೆಟ್ ಎರಡೊರ್ಸ ಇಂಗ್ಲಿಷ್ ಮೀಡಿಯಂ ಭಾಳ ಕಷ್ಟ ಆಯ್ತು. ನಿನಗೇ ಗೊತ್ತಲ್ಲ. ಇಂಗ್ಲೀಸು ಮ್ಯಾಥಮ್ಯಾಟಿಕ್ಸು ನಮ್ಮ ಹುಡುಗರಿಗೆ ಕಬ್ಬಿಣದ ಕಡ್ಲೆ. ಅದ್ಕೆ ಉರುಹೊಡೆದು ಪಾಸಾಯ್ತಿದ್ದೊ. ಈ ಉರು ಹೊಡಿಯೊ ಸಮಸ್ಯೆ ಏನಪ್ಪಾ ಅಂದ್ರೆ, ಬರಕಂಡೊಯ್ತಾ ಏನಾರ ಜರ್‌ಕೊಡಿತು ಅನ್ನ, ತಿರಗ ಮದ್ಲಿಂದ ಶುರುಮಾಡಬೇಕು. ನೆನಪಿನ ಸಗತಿ ಇದ್ದೋರು ತಡಾಯ್ಸ್ತಿದ್ರು, ಇಲ್ದವು ಅಲ್ಲೆ ಉದ್ದಿರೋಯ್ತಿದ್ದೊ. ಆಗ ಯಾವ ಹುಡುಗರ ಕೇಳು ಇಂಗ್ಲಿಸು ಮ್ಯಥಮ್ಯಾಟಿಕ್ಸಲ್ಲಿ ಫೇಲಾಯ್ತಿದ್ದೊರೆ ಜಾಸ್ತಿ.”

“ಅಂತೂ ನಾನೂ ಇಂಟರ್‌ಮೀಡಿಯೆಟ್ ಮುಗಿಸಿ 1963ರಲ್ಲಿ ಮೆಡಿಕಲ್ ಕಾಲೇಜ್ ಸೇರಿಕಂಡೆ. ಒಂದು ವರ್ಷ ಪ್ರೊಮೋಷನಲ್ ಕೋರ್ಸನ ಸೆಂಟ್ರಲ್ ಕಾಲೇಜಿನಲ್ಲಿ ಮುಗಿಸಿ ಅಲ್ಲಿಂದ ಮೈಸೂರು ಮೆಡಿಕಲ್ ಕಾಲೇಜಿಗೋದೆ. ಅಲ್ಲಿ 1964ರಲ್ಲಿ ಹಾಸ್ಟೆಲ್ ಸೇರಿಕೊಂಡೆ. ಹಾಸ್ಟೆಲೊಂತರ ಚೆನ್ನಾಗಿತ್ತು. ವಿರಳವಾದ ಜನ. ಮೈಸೂರಿನ ಅರಮನೆ ಸುತ್ತ ಊರು ಹಬ್ಬ ಕಂಡಂಗೆ ಕಾಣುದು. ಈಗ ಬುಡು ಯರಡು ಮೂರು ಮೈಸೂರು ಬಂದು ಸೇರಿಕಂಡವೆ. ದೂರದಲ್ಲಿ ತಾಜಮಹಲ್‌ನಂಗೆ ಕಾಣತಿದ್ದ ಲಲಿತ ಮಹಲ್ಲೇ ಕಾಣದಂಗಾಗ್ಯದೆ. ಅವತ್ತಿನ ಮೈಸೂರು ತುಂಬ ಸುಂದರವಾಗಿತ್ತು. ಶ್ರೀಮಂತರ ಮಕ್ಕಳು, ಮೇಷ್ಟ್ರು ಮಕ್ಕಳು, ಜಮೀನ್ದಾರು ಮಕ್ಕಳು ಓದಕ್ಕೆ ಅಂತ ಮೈಸೂರಿಗೆ ಬಂದು ಕಳೆತಂದಿತ್ತು. ನಾನು ಗಮನಿಸಿದಂಗೆ ಮೈಸೂರು ವಿದ್ಯಾದಾನದ ಊರು. ಓದಕ್ಕೆ ಅಂತ ಬಂದ ಬಡ ಹುಡುಗರಿಗೆ ಅವರ ಸಂಬಂಧಿಕರು ಆಶ್ರಯಕೊಟ್ಟು, ಸಹಾಯ ಮಾಡಿದ್ದನ್ನ ನಾನು ನೋಡಿದ್ದೆ. ಆ ಸಂಸ್ಕೃತಿ ಈಗ ಹ್ವಂಟೋಗ್ಯದೆ.”

“ನಮ್ಮ ಹಾಸ್ಟಲಿಗೆ ಆಲನಳ್ಳಿ ಕೃಷ್ಣ ಬರೋನು. ಅವುನಾಗ್ಲೆ ಪರಿಚಯ ಆಗಿದ್ದ. ಹಿರಿಸ್ಯಾವೆಲಿ ಹಳ್ಳಿ ಮರದತ್ರ ಬಸವಯ್ಯ ಕೃಷ್ಣಪ್ಪ ಅಂತ ಅವುರೆ ನೋಡು. ಅವುರು ನೀಲಗಿರಿ ಸಂಬಂದ ಮಾಡಿದ್ರು.”

“ಗೊತ್ತು ಕಣಣ್ಣ, ಆ ಮದುವೆ ಬೀಗರೂಟಕ್ಕೆ ನಾನು ಬಂದಿದ್ದೆ. ಆಗ ನಮ್ಮ ಹೈಸ್ಕೂಲಟೆಂಡ್ರು ರಾಮಣ್ಣನಂಗೇ ಯಾರೂ ಮಾಂಸದಡಗೆ ಮಾಡತಿರಲಿಲ್ಲ. ಅದರಲ್ಲೂ ಚಾಪೀಸು ತಿಂದ ಕೈಯ್ಯ ದಿನವ್ಯಲ್ಲ ಮೂಸಬಹುದಿತ್ತು. ನಿನಗೂ ಗೊತ್ತಲ್ಲ. ಬೀಗರೂಟ ಮಾಡೋರು ಅವುನ್ನೆ ಕರಿಯೋರು. ಅವುನ ಸಹಾಯಕ್ಕೆ ನನ್ನ ಕರಕೊಂಡೋಗನು. ಅಂಗೆ ಹಿರಿಸ್ಯಾವೆಯ ಮದುವೆ ಬೀಗರೂಟಕ್ಕೆ ನನ್ನ ಕರಕೊಂಡೋಗಿದ್ದ. ಸಂಜಿಕೆ ನಾನು ಕದಬಳ್ಳಿಗೆ ಬರಬೇಕಾದ್ರೆ, ನೀನು ಹಿರಿಸ್ಯಾವೆದಿಂದ ಒಂದುಡುಗನ್ನ ಸೈಕಲ್ ಮ್ಯಾಲೆ ಕರಕೊಂಡು ಬಂದೆ ನೋಡು, ಅದೇ ಹುಡುಗ ನಾನು.”

ಡಾ. ಕಮಲಾಕ್ಷಣ್ಣ

“ಓಹೊಹೊ ಎಷ್ಟು ಚನ್ನಾಗಿ ನ್ಯನಪಿಟಗಂಡಿದ್ದಿಯೋ. ಆಗ ಈಟುದ್ದಕೆ ಕುರಿಮರಿಯಂತಿದ್ದೆ ನೀನು, ಸೈಕಲ್ ಮ್ಯಾಲೆ ಕುಂಡ್ರಿಸಿಗಂಡು ಬಂದಿದ್ದೆ ಅಲವೆ.”

“ಊಕಣಣ್ಣ ಕದಬಳ್ಳಿನಲ್ಲಿ ಒಂದು ಗೌರಮೆಂಟು ಬಸ್ಸು ಬಂದು ಉಯಿಲುಕೊಡ್ತು, ಇಬ್ರು ಹೆದರೋಗಿದ್ದೊ. ಇವತ್ತು ನ್ಯನಿಸಿಗಂಡ್ರೂ ಬೆಚ್ಚದಂಗಾಯ್ತದೆ”

“ನಿಜ, ನೀನೆ ಹೆದರಿ ಹ್ಯಾಂಡಲೆಳದೋನು. ಆ ಹಿರಿಸ್ಯಾವೆಗೆ ಹೆಣ್ಣು ಕೊಟ್ಟೋರು ಆಲನಹಳ್ಳಿ ಹೆಂಡತಿಗೆ ಸಂಬಂದ ಆಗಬೇಕು. ಹಂಗಾಗಿ ಆಲನಳ್ಳಿ ನನಿಗೆ ಪರಿಚಯಾದ. ತಲಿಯೆಲ್ಲ ಮಾತು. ಪರಿಚಯಾದ ಯರಡೇ ಮಾತಿಗೆ ಏಕವಚನ ಶುರುಮಾಡೋನು. ವಳ್ಳೆ ಕತೆಗಾರ ಅಂತ ಹೆಸರು ಮಾಡಿದ್ದ. ಕತೆಗಳಿಗಿಂತ ಅವುನ ಸುದ್ದಿನೆ ಹೆಚ್ಚು ಪ್ರಚಾರ ಪಡಕಂಡಿದ್ದೊ. ನಮಿಗೂ ಬಾಯದೆ ಅಂತ ತಿಳಿಕಂಡೇಯಿರಲಿಲ್ಲ. ಬರಿ ಅವುಂದ್ನೆ ಊದಿ ವಂಟೋಗನು. ಅವುನು ಇನ್ನೊಬ್ಬ ಕತೆಗಾರ ರಾಮಣ್ಣನ್ನ ಹುಡಿಕಂಡು ಹಾಸ್ಟಲಿಗೆ ಬರೋನು. ಅಂಗೆ ಒಂದಿನ ಬಂದಾಗ ರಾಮಣ್ಣನ್ನ ಪರಿಚಯ ಮಾಡಿದ. ರಾಮಣ್ಣ ಭಾಳ ವಿನಯವಾಗಿ ಪರಿಚಯ ಮಾಡಿಕಂಡ. ಬೆಸಗರಹಳ್ಳಿ ಅಂತ ಗೊತ್ತಾದಾಗ, ಇದೇನು ಮಂಡ್ಯಜಿಲ್ಲೆ ಒರಟತನ ಇಲವಲ್ಲಾ, ಇಷ್ಟು ನಯವಂತಿಕೆ ಯಂಗೆ ಬತ್ತೂ ಅನ್ನಕಂಡೆ. ಸಾಮಾನ್ಯವಾಗಿ ಆಗಿನ ಹಳ್ಳಿ ಹುಡುಗ್ರು ಸಿಟಿ ಓದಕ್ಕೆ ಬಂದೇಟಿಗೆ ನಡವಳಿಕೆಲಿ ಬದ್ಲಾಗೋರು. ಆ ಬದ್ಲಾವಣಿನೂ ಎದ್ದು ಕಾಣದು. ಅಂಗೆ ನಮ್ಮ ರಾಮಣ್ಣ ವಳಗಿದ್ದ, ಯಲ್ಲೇಗೌಡನುಡುಗನ್ನ ಅದುಮಿ. ಮಡಿಕಲ್ ಓದಕ್ಕೆ ಬಂದ ವಿದ್ಯಾವಂತನ ವಿನಯತೋರಿದ್ದ. ಅವುನಾಗ್ಲೆ ಫೈನಲ್ ಇಯರಲ್ಲಿದ್ದ, ನಾನು ಸೆಕೆಂಡಿಯರಲ್ಲಿದ್ದೆ. ಆದ್ರು ನಮ್ಮ ಬೇಟಿ ನಿರಂತರವಾಗಿ ನ್ಯಡಿತು. ಭಾಳ ಬೇಗ ಒಂದೇ ಅವಿಭಕ್ತ ಕುಟುಂಬದಿಂದ ಬಂದ ದೊಡಪ್ಪ ಚಿಗಪ್ಪನ ಮಕ್ಕಳಂಗಾದೊ. ಅವುರಪ್ಪ ಯಲ್ಲೇಗೌಡ ಅಂತ, ಯದಿಯಾದಾಳು. ಅವುರಿಗೋಲಿಸಿದ್ರೆ ಇವನೆ ಪೀಚು. ಆದ್ರು ಬೀಜದೋರಿ ಕರಿನಂಗಿದ್ದ. ಕ್ರಮೇಣ ಏಕವಚನದಲ್ಲಿ ಬೈಯಕ್ಕು ಶುರುಮಾಡಿಕಂಡಿದ್ದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ನೆಲದ ಸೌಹಾರ್ದಕ್ಕೆ ಸರಣಿ ಕೊಲೆಗಳ ಕೊಡಲಿಯೇಟು; ಸಾಂಸ್ಕೃತಿಕ ಕ್ರಾಂತಿಗೆ ಓಗೊಡಬೇಕಿದೆ ಯುವಜನತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...