Homeಕರ್ನಾಟಕನೆಲದ ಸೌಹಾರ್ದಕ್ಕೆ ಸರಣಿ ಕೊಲೆಗಳ ಕೊಡಲಿಯೇಟು; ಸಾಂಸ್ಕೃತಿಕ ಕ್ರಾಂತಿಗೆ ಓಗೊಡಬೇಕಿದೆ ಯುವಜನತೆ

ನೆಲದ ಸೌಹಾರ್ದಕ್ಕೆ ಸರಣಿ ಕೊಲೆಗಳ ಕೊಡಲಿಯೇಟು; ಸಾಂಸ್ಕೃತಿಕ ಕ್ರಾಂತಿಗೆ ಓಗೊಡಬೇಕಿದೆ ಯುವಜನತೆ

- Advertisement -
- Advertisement -

ಮಂಗಳೂರಿನ ಮಲ್ಲೂರು ಜುಮಾದಿ ದೈವದ ದೈವಸ್ಥಾನಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಬೇಟಿ ನೀಡಿದಾಗ ದೈವ ಅವರಿಗೆ ಹೂವಿನ ಹಾರವನ್ನು ಹಾಕಿ, ಪ್ರಸಾದ ನೀಡಿ ಗೌರವಿಸುತ್ತದೆ. ಇದಕ್ಕೆ ಕೆಲವು ಯುವಕರು ಆಕ್ಷೇಪ ಎತ್ತಿದಾಗ ದೈವಕ್ಕೆ ಕೋಪ ಬರುತ್ತದೆ. ದೈವ ತನ್ನ ಕಣ್ಣಲ್ಲಿ ಎಲ್ಲಾ ಧರ್ಮ, ಜಾತಿಯವರೂ ಸಮಾನರು ಎನ್ನುತ್ತಾ ತನ್ನ ಕೈಯಲ್ಲಿದ್ದ ಆಯುಧ ಕಡ್ಸಲೆಯನ್ನು ನೆಲಕ್ಕೆ ಮೂರು ಬಾರಿ ಊರಿ ಆಕ್ರೋಶ ವ್ಯಕ್ತಪಡಿಸುತ್ತದೆ.

ತುಳುನಾಡು ಎಂದು ಕರೆಯಲ್ಪಡುವ ಅವಿಭಜಿತ ದಕ್ಷಿಣ ಕನ್ನಡವನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿನ ಶಾಲಾ ಕಾಲೇಜುಗಳು ಎಸ್.ಎಸ್.ಎಲ್.ಸಿ, ಪಿಯುಸಿಗಳಲ್ಲಿ ರಾಜ್ಯದಲ್ಲಿ ಟಾಪ್ ರ್‍ಯಾಂಕ್ ಬರುವ ಕಾರಣಕ್ಕಾಗಿ ಅಲ್ಲ ಅಥವಾ ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಕಾರಣಕ್ಕೂ ಅಲ್ಲ. ತುಳುನಾಡು ನೂರಾರು ಬುದ್ಧಿವಂತರಿಗೆ, ವಿದ್ವಾಂಸರಿಗೆ, ಸಾಹಿತಿಗಳಿಗೆ ಜನ್ಮ ನೀಡಿದೆ. ಕುದ್ಮಲ್ ರಂಗರಾವ್, ಪಂಜೆ ಮಂಗೇಶರಾಯರು, ಮುದ್ದಣ್ಣ, ಕುಶಿ ಹರಿದಾಸ ಭಟ್ಟರು, ಗೋವಿಂದ ಪೈ, ಪಾದೂರು ಗುರುರಾಜ ಭಟ್ಟರು, ಬಿಎ ಸಾಲೆತ್ತೂರು ಹೀಗೆ ಸಾಲುಸಾಲು ವಿದ್ವಾಂಸರು ಈ ನೆಲವನ್ನು ಬುದ್ಧಿವಂತರ ನೆಲವಾಗಿಸಲು ಕೆಲಸ ಮಾಡಿದ್ದಾರೆ. ಪ್ರಖ್ಯಾತ ಕಾದಂಬರಿಕಾರ ಶಿವರಾಮ ಕಾರಂತರ ಕಾರ್ಯಕ್ಷೇತ್ರ ತುಳುನಾಡೇ ಆಗಿತ್ತು.

ಮೊಯಿದ್ದೀನ್ ಬಾವ

ಆಳುವ ಧನಿಕ ವರ್ಗವನ್ನು ತೊಡೆತಟ್ಟಿ ಮಟ್ಟ ಹಾಕಿದ ಅವಳಿ ವೀರರಾದ ಕೋಟಿ-ಚೆನ್ನಯರು, ತನ್ನ ಗಂಡನನ್ನು ತಿರಸ್ಕರಿಸಿ ವಿಚ್ಛೇದನೆಗೊಂಡು ಪ್ರತಿಭಟಿಸಿದ ಅಕ್ಕೆರಸು ಸಿರಿ, ತನ್ನ ಊರಿನ ರಕ್ಷಣೆಗಾಗಿ ಪ್ರಾಣವನ್ನು ನೀಡಿದ ಮಮ್ಮಾಲಿ ಬ್ಯಾರಿ- ಇಂತಹ ಶೂರರಿಂದ ಹಿಡಿದು 1834ರಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ದ ದಂಡು ಕಟ್ಟಿ ಹೋರಾಡಿ, ಪ್ರಾಣ ನೀಡಿ ಮಂಗಳೂರನ್ನು ಸ್ವತಂತ್ರಗೊಳಿಸಿದ ಕಲ್ಯಾಣಸ್ವಾಮಿ, ಗುಡ್ಡೆಮನೆ ಅಪ್ಪಯ್ಯ ಗೌಡ, ಕೆದಂಬಾಡಿ ರಾಮೇಗೌಡ, ಚೌಟ ಅರಸರು, ಬಂಗಾಡಿಯ ಅರಸು ಲಕ್ಷ್ಮಪ್ಪ ಬಂಗರಸ ಮುಂತಾದವರ ಕ್ರಾಂತಿಯ ನೆತ್ತರು ಈ ನೆಲದಲ್ಲಿ ಹರಿದಿದೆ.

ಇಲ್ಲಿನ ದೈವಗಳು “ಪತ್ತ್ ಜನ ಕೂಡಿನಲ್ಪ ಮುತ್ತುಂಡು ಪನ್ಪಿ ಕಟ್ಟ್!” – ಹತ್ತು ಜನ ಕೂಡಿದ ಸ್ಥಳದಲ್ಲಿ ಮುತ್ತುಂಟು ಎಂದು ನುಡಿದು ಎಲ್ಲರನ್ನೂ ಒಳಗೊಂಡು ಸಲಹುತ್ತವೆ. ದೈವದ ಮುಂದೆ ಭಿನ್ನ ನಂಬಿಕೆಯ ಮೊಯಿದೀನ್ ಬಾವನನ್ನೂ ಗೌರವಿಸುವುದು ತುಳುನಾಡಿನ ಮಣ್ಣಿನ ಹಿರಿಮೆ. ಉದ್ಯಾವರದ ಅರಸು ದೈವಗಳು ಉದ್ಯಾವರದ ಮಾಡದಿಂದ ಪಕ್ಕದ ಮಸೀದಿಗೆ ಹೋಗಿ ಸೇಕಮಾರನನ್ನು ಭೇಟಿ ಮಾಡುವಾಗ ಮುಸ್ಲಿಂ ಬಾಂಧವರು ದೈವಗಳಿಗೆ ಗೌರವ ನೀಡುತ್ತಾರೆ.

ಇಂತಹ ತುಳುನಾಡು ದಿನೇದಿನೇ ತನ್ನ ಪರಂಪರೆ ಕಟ್ಟಿಕೊಟ್ಟ ಸೌಹಾರ್ದತೆಯ ಕೊಂಡಿಗಳನ್ನು ಕಳಚಿಕೊಂಡು ಪತನಮುಖಿಯಾಗುತ್ತಿರುವ ಸಂದರ್ಭದಲ್ಲಿ ಇಂದು ಬದುಕಿದ್ದೇವೆ. ಚುನಾವಣೆಗಳು ಸನ್ನಿಹಿತವಾಗುತ್ತಿದ್ದಂತೆ ಹಿಂದೂ-ಮುಸ್ಲಿಂ ಯುವಕರ ಹೆಣಗಳು ಬೀಳುತ್ತಿವೆ. ಒಂದು ಕಿಡಿಗೆ ಸ್ಫೋಟಗೊಳ್ಳಬಹುದಾದ ಕೋಮುದ್ವೇಷ ಇಂದು ತುಳುನಾಡಿನ ಮೂಲೆಮೂಲೆಗಳಲ್ಲಿ ಬೇರೂರಿದೆ.

ಕನ್ನಡದ ಮೊದಲ ಪತ್ರಿಕೆ ’ಮಂಗಳೂರ ಸಮಾಚಾರ’ದ (1844) ಹದಿಮೂರನೇ ಸಂಚಿಕೆಯಲ್ಲಿ ಇರುವ ಮತಾಂತರದ ಒಂದು ವರದಿ ಅತ್ಯಂತ ಮುಖ್ಯವಾದದ್ದು. ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದ ಮೂವರು ಬ್ರಾಹ್ಮಣ ವಿದ್ಯಾರ್ಥಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ವಾಗುತ್ತಾರೆ. ಇದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಗುತ್ತದೆ ಮತ್ತು ಮತಾಂತರ ಹೊಂದಿದ ವಿದ್ಯಾರ್ಥಿಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಬರಲು ಮನವೊಲಿಸಿದರೂ ಸಾಧ್ಯವಾಗುವುದಿಲ್ಲ.

ಇದರಿಂದ ಕ್ರೈಸ್ತರ ಹಾಗೂ ಮುಸಲ್ಮಾನರ ನಡುವೆ ಒಡಕುಂಟು ಮಾಡಲು ಮುಸಲ್ಮಾನ ಬ್ಯಾರಿಗಳ ಕೇರಿಯಲ್ಲಿ ಹಂದಿಯನ್ನು ಕೊಂದು ಹಾಕಲಾಗುತ್ತದೆ. ಇದನ್ನು ಮಂಗಳೂರ ಸಮಾಚಾರ ಹೀಗೆ ವರದಿ ಮಾಡಿದೆ.

“ಈ ದುಷ್ಟ ಜನರು ಊರಲ್ಲಿ ಏನಾದರೂ ಗುಬಾರು ಎಬ್ಬಿಸಬೇಕೆಂಬ ಉಮೇದಿನಿಂದ ಮುಸಲ್ಮಾನದವರಿಗೆ ಅತೀ ವಿರೋಧವಾಗಿರುವಂಥ ಹಂದಿಯನ್ನು ರಾತ್ರಿಯಲ್ಲಿ ಕೊಂದು ಹಾಕಿದರು. ಆಗ ಜಿಲ್ಲಾ ಮೆಜಿಸ್ಟ್ರೇಟ್ ಸಾಹೇಬನು ಕೂಡಲೇ ಈ ರೀತಿಯ ಪ್ರಕಟನೆಯನ್ನು ಹೊರಡಿಸಿದನು. ಮುಸಲ್ಮಾನ ಜನರಿಗೆ ಚಾಳಿಸುವ ಇರ್ಯಾದೆಯಿಂದ ಈ ಕೆಟ್ಟ ಕೃತ್ಯ ಮಾಡಿರುತ್ತಾರೆ ಎಂಬುದರಲ್ಲಿ ಏನೂ ಅನುಮಾನವಿಲ್ಲ. ಈ ವಿಷಯದಲ್ಲಿ ಕೂಲಂಕಷ ತನಿಖೆ ಕೂಡ್ಲೆ ಮಾಡಲಾದಿತ್ತು.”

“ಈ ದುಷ್ಕೃತ್ಯ ನಡೆಸಿದ ವಾ ತಲಾಕಿಗೆ ಸಾಕಾಗುವ ವರ್ತಮಾನ ಯಾರಾದರೂ ಕೊಟ್ಟಿದ್ದಾದರೆ, ಅಂಥ ಮನುಷ್ಯನಿಗೆ ಐದು ನೂರು ರೂಪಾಯಿ ಕೊಡಲಾದೀತು. ಆದುದರಿಂದ ಮುಸಲ್ಮಾನ ಯಾವುತ್ತೂ ಜನರು ದುರಾಲೋಚನೆ ಜನರ ದಗೆ ಬೋಧನೆಗೆ ಒಳಗಾಗದೆ ನಿಧಾನದಲ್ಲಿ ಇರಬೇಕು ಎಂತ ಅಪೇಕ್ಷಿಸುತ್ತೇವೆ, ಈ ಪ್ರಕಾರ ಸಮಾಧಾನ ಮಾಡದೆ ತಂಟೆ ಏನಾದರೂ ನಡೆಸಿದ್ದಾದರೆ ವ್ಯರ್ಥ ಬಹಳ ದಣಿಕೊಳ್ಳಬೇಕಾದೀತು.”

“ಮೆಜಿಸ್ಟ್ರೇಟ್ ಬ್ಲೆಅರ್ ಸಾಹೇಬರು ಅಷ್ಟಕ್ಕೆ ಮುಗಿಸದೆ, ಮುಸಲ್ಮಾನರ ಹಾಗೂ ಮಾಪಿಳ್ಳೆಯವರ ಮುಖಂಡರನ್ನು ಕರೆದು, ಅಪರಾಧಿಯನ್ನು ಎಂತಿದ್ದರೂ ಹುಡುಕುವೂದಾಗಿಯೂ, ಆ ಕೆರೆಯನ್ನೂ ಸರಕಾರದ ವದಿಯಿಂದ, ಸಾಪು ಮಾಡಿಸಿ ಕೊಡುವುದಾಗಿಯೂ ಆಶ್ವಾಸನವಿತ್ತರು.”

ಇದೇ ತಂತ್ರ ಸ್ವಾತಂತ್ರೋತ್ತರ ತುಳುನಾಡಿನಲ್ಲಿಯೂ ನಡೆಯುತ್ತಿದೆ. ಕಾಟಿಪಳ್ಳದ ಕೋಮು ಗಲಭೆಯಲ್ಲಿ ಸತ್ತ ಉದಯ ಪೂಚಾರಿಯಿಂದ ಹಿಡಿದು ಇದೇ ತಿಂಗಳು ಕೊಲೆಯಾದ ಪ್ರವೀಣ್‌ವರೆಗೆ ಕೊಮುಗಲಭೆಗಳಲ್ಲಿ ಸತ್ತ ಬಹುತೇಕರು ಬಿಲ್ಲವರು. ಬಿಲ್ಲವರು ಶೌರ್ಯಕ್ಕೆ ಹೆಸರಾದವರು. ಬಹುಸಂಖ್ಯಾತರಾಗಿರುವ ಇವರನ್ನು ಬ್ಯಾರಿಗಳ ವಿರುದ್ಧ ಎತ್ತಿಕಟ್ಟಿದರೆ ಸುಲಭವಾಗಿ ಕೋಮುಗಲ ಭೆಯನ್ನು ಹುಟ್ಟಿಸಬಹುದು ಎಂಬ ತಂತ್ರ 1844ರಲ್ಲಿ ಮಂಗಳೂರ ಸಮಾಚಾರದಲ್ಲಿ ವರದಿಯಾದ ತಂತ್ರವೇ ಆಗಿದೆ.

ದಕ್ಷಿಣ ಕನ್ನಡದಲ್ಲಿ ದೀರ್ಘ ಕಾಲ ವರದಿ ಮಾಡಿರುವ ಪತ್ರಕರ್ತ ನವೀನ್ ಸೂರಿಂಜೆ ತಮ್ಮದೊಂದು ಬರಹದಲ್ಲಿ ಒಂದು ಘಟನೆಯನ್ನು ಉಲ್ಲೇಖಿಸುತ್ತಾರೆ. ’ಡಿಸೆಂಬರ್ 1, 2006ರಲ್ಲಿ ನಡೆದ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಸಂದರ್ಭದಲ್ಲಿ ನಾಗರಾಜ ಶೆಟ್ಟಿಯವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಶವದ ಮೆರವಣಿಗೆ ಮಾಡುವುದಕ್ಕೆ ಮಂಗಳೂರಿನ ಎಸ್ಪಿಯಾಗಿದ್ದ ದಯಾನಂದರವರು ನಿಷೇಧ ಹೇರಿದ್ದರು. ಆದರೆ ಇದನ್ನು ಲೆಕ್ಕಿಸದೆ ಮೆರವಣಿಗೆ ನಡೆಸಲಾಯಿತು. ಶವಯಾತ್ರೆ ಸುರತ್ಕಲ್ ದಾಟಿ ಮೂಲ್ಕಿಯನ್ನು ಪ್ರವೇಶಿಸುವಾಗ ಜನಸಂಖ್ಯೆ ಹೆಚ್ಚಾಯಿತು. ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಯಿತು. ಜನರು ಉದ್ವಿಗ್ನಗೊಂಡಿದ್ದರು. ಈ ಮಧ್ಯೆ ದಿನೇಶ್ ಪೂಜಾರಿ ಮತ್ತು ಪ್ರೇಮ್ ಕೋಟ್ಯಾನ್ ಎಂಬ ಬಿಲ್ಲವ ಹುಡುಗರ ಮೇಲೆ ಎಸ್ಪಿಯವರ ಗನ್ ಮ್ಯಾನ್ ಅರುಣ್ ಆಳ್ವ ಗುಂಡು ಹಾರಿಸಿದರು. ಒಂದು ಶವಯಾತ್ರೆಯಲ್ಲಿ ಇನ್ನೆರಡು ಶವಗಳು ಉದುರಿದವು. ಆದರೆ ಜನರು ಸುಖಾನಂದ ಶೆಟ್ಟಿಯನ್ನು ನೆನೆಸಿಕೊಳ್ಳುವಂತೆ ಈ ಇಬ್ಬರು ಬಿಲ್ಲವ ಹುಡುಗರನ್ನು ನೆನಸಿಕೊಳ್ಳುವುದಿಲ್ಲ.

ಪ್ರವೀಣ್ ಹತ್ಯೆಯ ಸಂದರ್ಭದಲ್ಲಿ ಮುಖ್ಯವಾಗಿ ಎರಡು ಚರ್ಚೆಗಳು ನಡೆದವು.

1. ಕಾಂಗ್ರೆಸ್ ಸರ್ಕಾರದಲ್ಲಿ ನೆಡೆಯುತ್ತಿದ್ದ ಸಂಘಪರಿವಾರದ ಹುಡುಗರ ಹತ್ಯೆಯನ್ನೇ ಬಂಡವಾಳವಾಗಿಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿಯ ಬಗ್ಗೆ ಹಿಂದುತ್ವದ ಹುಡುಗರಲ್ಲಿ ವ್ಯಕ್ತವಾದ ಆಕ್ರೋಶ.

2. ಬಿಲ್ಲವ ಹಾಗೂ ಇತರ ಹಿಂದುಳಿದ ಸಮುದಾಯಗಳ ಹುಡುಗರನ್ನು ಕೋಮುಗಲಭೆಗೆ ಬಳಸಿಕೊಂಡು ಅವರ ಸಾವನ್ನೇ ಮತ್ತೆಮತ್ತೆ ಬಂಡವಾಳವಾಗಿಸಿಕೊಳ್ಳುತ್ತಿರುವ ಬಗ್ಗೆ ಆ ಸಮುದಾಯಗಳಲ್ಲಿ ಎದ್ದಿರುವ ಅಸಹನೆ.

ಪ್ರವೀಣ್ ಅವರ ಶವಸಂಸ್ಕಾರದ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಇತರ ಬಿಜೆಪಿ ಮುಖಂಡರಿಗೆ ಬಿಜೆಪಿ ಹಾಗೂ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಒಡ್ಡಿರುವ ಪ್ರತಿರೋಧ ಹಾಗೂ ಇದರ ನಂತರ ನಡೆಯುತ್ತಿರುವ ಸಾಲುಸಾಲು ರಾಜೀನಾಮೆಗಳಿಂದ ಬಿಜೆಪಿ ಕಂಗೆಟ್ಟಿದೆ. ಆದರೆ ಇದನ್ನು ಶಮನ ಮಾಡಿಕೊಳ್ಳುವ ಸಲುವಾಗಿ, ಕಾಂಗ್ರೆಸ್, ಎಡಪಕ್ಷಗಳು ಹಾಗೂ ಬುದ್ಧಿಜೀವಿಗಳು ಬಿಜೆಪಿಯ ಒಗ್ಗಟ್ಟನ್ನು ಮುರಿಯಲು ತಂತ್ರ ಮಾಡುತ್ತಿದ್ದಾರೆ ಎಂಬ ನರೆಟಿವ್ ಹಬ್ಬಿಸಲಾಯಿತು.
ಆದರೆ ಪದೇಪದೇ ಬಿಲ್ಲವ ಯುವಕರೇ ಕೋಮುಗಲಭೆಗಳಿಗೆ ತುತ್ತಾಗುತ್ತಿರುವ ಬಗ್ಗೆ ಬಿಲ್ಲವ ಸಮುದಾಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಗೋಚರಿಸುತ್ತದೆ. ಬಿಲ್ಲವ ಸಮುದಾಯಕ್ಕೆ ಸೇರಿದ ಸತ್ಯಜೀತ್ ಸುರತ್ಕಲ್ ಮೊದಲಾದ ಹಿಂದುತ್ವದ ನಾಯಕರು ಮೈತುಂಬಾ ಕೇಸು ದಾಖಲಿಸಿಕೊಂಡು ಬಿಜೆಪಿ ಹಾಗೂ ಹಿಂದುತ್ವದ ಚಟುವಟಿಕೆಗಳಲ್ಲಿಯೇ ಮೂಲೆಗುಂಪಾಗಿದ್ದಾರೆ. ಸ್ವತಃ ಸತ್ಯಜೀತ್ ಸುರತ್ಕಲ್ ತಮ್ಮ ಒಂದು ಸಂದರ್ಶನದಲ್ಲಿ ಬಿಜೆಪಿ ತನ್ನ ರಾಜಕೀಯ ತಂತ್ರಗಳ ಅಂಗವಾಗಿ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐಗಳಿಗೆ ಹಣ ನೀಡಿದೆ ಎಂದು ನೇರ ಆರೋಪ ಮಾಡಿದ್ದಾರೆ.

ಈ ನೇರಾನೇರ ಬಿಜೆಪಿ ಮೇಲಿನ ಆರೋಪಗಳ ಯಾವ ಮಟ್ಟಕ್ಕೆ ಬೆಳೆದಿವೆಯೆಂದರೆ ಈಗ ಬಿಜೆಪಿ ಸ್ವತಃ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐಗಳನ್ನು ಬೆಳೆಸಿದೆ ಎಂಬ ಚರ್ಚೆ ಕೂಡ ಬಿರುಸಾಗಿ ನಡೆಯುತ್ತಿದೆ. ಈ ಸಂಘಟನೆಗಳ ಮಧ್ಯೆ ಯಾವುದೇ ನೇರ ಸಂಪರ್ಕ ಇಲ್ಲವೆಂದೇ ಭಾವಿಸಿದರೂ ಹಿಂದುತ್ವವಾದಿ ಸಂಘಟನೆಗಳು ಹಾಗೂ ಪಿ.ಎಫ್.ಐನಂತಹ ಮುಸ್ಲಿಂ ಸಂಘಟನೆಗಳ ವೈರತ್ವ ಮತ್ತು ಘರ್ಷಣೆಯಿಂದ ಬಡ ಹಿಂದೂ ಹಾಗೂ ಮುಸಲ್ಮಾನ ಯುವಕರು ಬೀದಿ ಹೆಣಗಳಾಗುತ್ತಿರುವುದಂತೂ ಸತ್ಯ. ಇದರ ಮುಂದುವರಿದ ಭಾಗವೆಂಬಂತೆ ಒಂದು ಕೊಲೆಗೆ ಎರಡು ಕೊಲೆ ಎಂಬ ಅಮಾನವೀಯ ನಡೆಯನ್ನೂ ಇವು ನಡೆಸುತ್ತಿವೆ. ಈಗ ಹಿಂದುತ್ವವನ್ನು ಪೋಷಿಸಿ ಬೆಳೆಸುವ ಉಮೇದಿನಲ್ಲಿರುವ ಸರ್ಕಾರ ಅಧಿಕಾರದಲ್ಲಿರುವುದರಿಂದ- ಹಿಂದುತ್ವವನ್ನು ಪ್ರತಿಪಾದಿಸುವ ಸಂಘಟನೆಗಳಿಗೆ ಪರೋಕ್ಷ ಬೆಂಬಲ ನೀಡುವ, ಸಂವಿಧಾನದ ತತ್ವಾದರ್ಶಗಳು ಹಾಗೂ ನೆಲದ ಕಾನೂನುಗಳನ್ನು ಗಾಳಿಗೆ ತೂರಿ ಅಂತಹ ಸಂಘಟನೆಗಳನ್ನು ಓಲೈಸಿ ತುಷ್ಠೀಕರಿಸುವ ಕೆಲಸಕ್ಕೆ ನಿಂತಿರುವದರಿಂದ ಸಂಘರ್ಷಗಳು ತಾರಕಕ್ಕೇರುತ್ತಿವೆ.

ತುಳುನಾಡಿನ ಭವಿಷ್ಯವೇನು?

ಕಳೆದ ಒಂದು ದಶಕದಿಂದ ತುಳುನಾಡು ಪಥನಮುಖಿ ಲಕ್ಷಣಗಳನ್ನು ತೋರಿಸುತ್ತಿದೆ. ಇಲ್ಲಿಂದ ಆರಂಭವಾಗುವ ಕೋಮು ಸಂಘರ್ಷ ಇಡೀ ಕರ್ನಾಟಕವನ್ನು ವ್ಯಾಪಿಸಲು ಆರಂಭವಾಗಿದೆ. ತುಳುನಾಡಿಗೆ ಎಷ್ಟೇ ಹೋರಾಟದ ಚರಿತ್ರೆ ಇದ್ದರೂ ವಚನ ಚಳುವಳಿಯಂತಹ ಒಂದು ಪರಿಣಾಮಕಾರಿಯಾದ ಕ್ರಾಂತಿ ಆ ನೆಲದಲ್ಲಿ ನಡೆದಿಲ್ಲ. ವಿಷಕಾರಿಯಾದ ಚಿಂತನೆಯನ್ನು, ಜಾತೀವಾದವನ್ನು, ಕೋಮುವಾದವನ್ನು ಪ್ರಶ್ನಿಸುವ ಕ್ರಾಂತಿಕಾರಿ ನಡೆಗಳು ತುಳುವಿನ ಸಂಸ್ಕೃತಿಯಲ್ಲಿ ಬೆಳೆದುಬಂದಿಲ್ಲ. ಬಹುಶಃ ಈ ಕಾರಣದಿಂದಾಗಿ ಕೋಮುವಾದದ ಬೀಜ ಈ ನೆಲದಲ್ಲಿ ಸಮೃದ್ಧವಾಗಿ ಬೆಳೆಯಿತು ಮತ್ತಿಂದು ಫಲನೀಡುವ ಮರವಾಗಿದೆ.

ತುಳುನಾಡಿಗೆ ಇದ್ದ ಒಂದು ಬೌದ್ಧಿಕ ಪರಂಪರೆ ಈ ಕೋಮುವಾದದಿಂದಾಗಿ ನಶಿಸಿ ಹೋಗುತ್ತಿದೆ. ಕಳೆದ ಒಂದು ದಶಕಗಳಿಂದೀಚೆಗೆ ತುಳುನಾಡಿನಲ್ಲಿ ಒಂದೊಳ್ಳೆ ಗಂಭೀರ ಎನ್ನಬಹುದಾದ ಅಧ್ಯಯನ ಅಥವಾ ಚರ್ಚೆ ನಡೆಯುತ್ತಿಲ್ಲ. ಐದಾರು ದಶಕಗಳಿಂದ ಹೆಚ್ಚೆಚ್ಚು ವಿದ್ವಾಂಸರನ್ನು ಸೃಷ್ಟಿ ಮಾಡುವಲ್ಲಿ ತುಳುನಾಡು ಸೋತಿದೆ. ಇದರ ನೇರ ಹೊಣೆಯನ್ನು ಹಿಂದುತ್ವದ ಚಟುವಟಿಕೆಗಳು ಹೊರುತ್ತವೆ.

ಸದ್ಯ ಕೋಮುವಾದವನ್ನು ಎದುರಿಸಲು ಪ್ರಜ್ಞಾವಂತ ತುಳುವರು ತಮ್ಮ ಪರಂಪರೆ, ಸಂಸ್ಕೃತಿಯನ್ನೇ ಆಯುಧವಾಗಿ ಬಳಸುತ್ತಿದ್ದಾರೆ. ದೈವದ ಕಣ್ಣಲ್ಲಿ ಎಲ್ಲಾ ಧರ್ಮದವರೂ ಒಂದೇ ಎಂದಾದರೆ ಕೋಮುದ್ವೇಷ ದೈವಗಳಿಗೆ ಮಾಡಿದ ಅವಮಾನ ಎಂದೇ ಬಗೆಯಬೇಕಾಗುತ್ತದೆ. ತುಳುನಾಡಿನ ದೈವಗಳಿಗೆ ಮಸೀದಿಗಳಲ್ಲಿ ಗೌರವ ಸಿಗುತ್ತದೆ, ಬೊಬ್ಬರ್ಯ, ಆಲಿಭೂತ ಮೊದಲಾದ ಮುಸ್ಲಿಂ ಮೂಲದ ದೈವಗಳನ್ನು ಹಿಂದೂಗಳು ಆರಾಧಿಸುತ್ತಾರೆ. ಜುಮಾದಿಗೆ ಮುಸಲ್ಮಾನರೂ ಹರಕೆ ಹೊರುತ್ತಾರೆ. ಹೀಗೆ ಸಾಲುಸಾಲು ಸೌಹಾರ್ದತೆಯ ಕಥನಗಳು ತುಳುನಾಡನ್ನು ಉಳಿಸಿವೆ. ಕೋಮುವಾದವನ್ನು ಎದುರಿಸಲು ಸೌಹಾರ್ದತೆಯ ಗುರಾಣಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಿಡಿದು ಬಳಸಬೇಕಿದೆ.

ಆದರೆ ಕೋಮುವಾದಿ ಶಕ್ತಿಗಳು ಇದಕ್ಕೂ ಒಂದು ಹೆಜ್ಜೆ ಮುಂದೆಹೋಗಿವೆ. ಯಾವ ಸಂಕೋಚವೂ ಇಲ್ಲದೆ ನಿರ್ಭಯವಾಗಿ ತುಳುನಾಡಿನ ಕಥನಗಳನ್ನು ತಿರುಚಿ ದ್ವೇಷದ ಕಥನಗಳನ್ನು ಹರಡುತ್ತಿದ್ದಾರೆ. ಓರ್ವ ವೈದಿಕ ತಂತ್ರಿ ಬೊಬ್ಬರ್ಯನನ್ನು ಮಹಾಭಾರತದ ಅರ್ಜುನನ ಮಗ ಬಬ್ರುವಾಹನ ಎಂದು ಕರೆದು ಸುಳ್ಳು ಕತೆಗಳನ್ನು ಕಟ್ಟಿದ. ಇಂತಹ ತಂತ್ರಗಳು ಮುಂದೆ ಹೆಚ್ಚುತ್ತಲೇ ಹೋಗುತ್ತವೆ. ಇಂತಹ ತಂತ್ರದಿಂದ ನಿಧಾನವಾಗಿ ಬಹುಮುಖಿ ಸಂಸ್ಕೃತಿಯ ತುಳುನಾಡು ಏಕರೂಪದ ಹಿಂದುತ್ವದ ಶಕ್ತಿಗಳ ಮೂಲಕ ನಾಶವಾಗುತ್ತಾ ಹೋಗುತ್ತದೆ. ಇದಕ್ಕೆ ಪೂರಕವೆಂಬಂತೆ ಒಂದು ವರ್ಗದ ಎಲೀಟ್ ಮುಸಲ್ಮಾನ ಸಮುದಾಯದಿಂದ ಇಸ್ಲಾಂ ಕೋಮುವಾದ ರಾಜಕೀಯ ಭೂಮಿಕೆಯನ್ನು ಸಿದ್ಧಪಡಿಸಿಕೊಡುತ್ತದೆ.

ಇರುವುದು ಒಂದೇ ಮಾರ್ಗ. ತುಳುನಾಡಿನ ಎಲ್ಲಾ ಧರ್ಮದ ಪ್ರಜ್ಞಾವಂತ ಮನಸ್ಸುಗಳು ಒಂದಾಗಿ ಕೋಮುವಾದವನ್ನು ಎದುರಿಸುವುದು. ತುಳುನಾಡಿನ ಪ್ರತಿಯೊಬ್ಬ ಯುವಕನೂ ತನ್ನ ಭವಿಷ್ಯವನ್ನು ಗಟ್ಟಿಗೊಳಿಸಿಕೊಳ್ಳಲು, ಸೃಜನಶೀಲವಾಗಿ ಯೋಚಿಸಿ ಸೌಹಾರ್ದದ ಭೂಮಿಕೆಗಳನ್ನು ಸಿದ್ಧಪಡಿಸುವುದು. ಇದಕ್ಕಾಗಿ ತುಳುನಾಡಿನ ಒಳಗಡೆ ಒಂದು ಸಾಂಸ್ಕೃತಿಕ ಕ್ರಾಂತಿಯೇ ನಡೆಯಬೇಕಿದೆ.

ಚರಣ್ ಐವರ್ನಾಡು

ಚರಣ್ ಐವರ್ನಾಡು
ಯುವ ಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳು ಇವರ ಬರವಣಿಗೆಯ ಕ್ಷೇತ್ರಗಳು.


ಇದನ್ನೂ ಓದಿ: “ಬಸವರಾಜ ಬೊಮ್ಮಾಯಿ ಎಂಬ ಹೆಸರಿನ ನಾನು…” ಸ್ವೀಕರಿಸಿದ ಪ್ರಮಾಣವಚನ ಮರೆತುಹೋಯಿತೇ ಮುಖ್ಯಮಂತ್ರಿಗಳಿಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...