ಬಿಜೆಪಿ ಮತ್ತು ಜೆಡಿಯು ನಡುವಿನ ಮೈತ್ರಿಯಲ್ಲಿ ಬಿರುಕುಬಿಟ್ಟಿದ್ದು ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ಮತ್ತೊಮ್ಮೆ ಮಗ್ಗಲು ಬದಲಿಸುತ್ತಾರೆಯೇ? ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ನಿತೀಶ್ ಕುಮಾರ್ ಅವರು ದುಡುಕಿನ ರಾಜಕಾರಣಿಯೇನೂ ಅಲ್ಲ. ಹೀಗಾಗಿ ಅವರ ಮುಂದಿರುವ ಆಯ್ಕೆಗಳನ್ನು ಅವರು ಅವಲಂಬಿಸಬಹುದು. ವಿಶೇಷವಾಗಿ ಬಿಜೆಪಿ, ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ನಿತೀಶ್ ಅವರನ್ನು ಹೇಗೆ ನೋಡುತ್ತವೆ ಎಂಬುದು ನಿತೀಶ್ ಅವರ ಮುಂದಿನ ನಡೆಯನ್ನು ನಿರ್ಧರಿಸಬಹುದು.
ನಿತೀಶ್ ಅವರ ಮುಂದಿರುವ ಮೂರು ಆಯ್ಕೆಗಳ ಕುರಿತು ‘ದಿ ಕ್ವಿಂಟ್’ ಜಾಲತಾಣ ವಿಸ್ತೃತವಾಗಿ ವಿಶ್ಲೇಷಣೆ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆಯ್ಕೆ 1: ಎನ್‌ಡಿಎ ತೊರೆದು ಮಹಾಘಟಬಂಧನ್‌ಗೆ ಹಿಂತಿರುಗಿ ಸಿಎಂ ಆಗಬಹುದು
ಇದರರ್ಥ ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಜೊತೆಗಿನ 2015-2017ರ ವ್ಯವಸ್ಥೆಗೆ ಹಿಂತಿರುಗುವುದಾಗಿದೆ. ಎಡಪಕ್ಷಗಳಾದ ಸಿಪಿಐ-ಎಂಎಲ್, ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಕೂಡ ಈ ಮೈತ್ರಿಕೂಟದ ಭಾಗವಾಗಿವೆ.
ಆದಾಗ್ಯೂ, 2015-17 ಅವಧಿಗಿಂತ ಈಗ ಸಾಕಷ್ಟು ಬದಲಾವಣೆಗಳು ಆಗಿರುವುದರಿಂದ ನಿತೀಶ್ ಕುಮಾರ್ ಅವರು ಮಹಾಘಟಬಂಧನ್‌ಗೆ ಹಿಂತಿರುಗುವುದು ಅಷ್ಟು ಸುಲಭವಲ್ಲ. ನಿತೀಶ್ ಅವರೇ ಈ ಸಮಸ್ಯೆಯನ್ನು ಸೃಷ್ಟಿಸಿಕೊಂಡಿದ್ದಾರೆ.
2017ರಲ್ಲಿ ಅವರು ಎನ್‌ಡಿಎಗೆ ನಿಷ್ಠೆ ತೋರಿದ ರೀತಿಯನ್ನು ಗಮನಿಸಿದರೆ, ಮಹಾಘಟಬಂಧನ್ ಘಟಕಗಳಲ್ಲಿ ನಿತೀಶ್ ಕುಮಾರ್ ಅವರ ಬಗ್ಗೆ ಹೆಚ್ಚಿನ ನಂಬಿಕೆಯೂ ಇಲ್ಲ.
ಇದನ್ನೂ ಓದಿರಿ: ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು ಮಹಿಳೆಯರು; ಪ್ರಮಾಣ ವಚನ ಸ್ವೀಕರಿಸಿದ್ದು ಅವರ ಗಂಡಂದಿರು!
ಜೆಡಿಯು 2017ರಲ್ಲಿದ್ದ ಸ್ಥಿತಿಗಿಂತ ಈಗ ಹೆಚ್ಚು ದುರ್ಬಲವಾಗಿ ಕಾಣುತ್ತಿದೆ. ಆಗ 71 ಸ್ಥಾನಗಳನ್ನು ಹೊಂದಿತ್ತು, ಈಗ ಕೇವಲ 45 ಸ್ಥಾನಗಳನ್ನು ಹೊಂದಿದೆ. ಮತ್ತೊಂದೆಡೆ, ಆರ್‌ಜೆಡಿ ಬಲಶಾಲಿಯಾಗಿದೆ. ಈಗ 80 ಸ್ಥಾನಗಳನ್ನು ಹೊಂದಿದೆ.
ನಿತೀಶ್ ಕುಮಾರ್ ವಿರುದ್ಧದ ಆಡಳಿತ ವಿರೋಧಿ ನಿಲುವು ಈಗ ಹೆಚ್ಚಾಗಿ ಕಾಣುತ್ತಿದೆ. ಈ ಹಿಂದೆ ಇಷ್ಟು ಪ್ರಮಾಣದ ವಿರೋಧ ಇರಲಿಲ್ಲ. ಆದ್ದರಿಂದ, ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು ಆರ್‌ಜೆಡಿ ಬೆಂಬಲಿಸಿದರೆ ಆರ್‌ಜೆಡಿಗೆ ತೊಂದರೆಯಾಗಬಹುದು. ಏಕೆಂದರೆ ಆಡಳಿತ ವಿರೋಧಿ ಹೊರೆಯನ್ನು ಆರ್‌ಜೆಡಿಯೂ ಹೊರಬೇಕಾದೀತು.
ಆಯ್ಕೆ 2: ಕೆಲವು ರಿಯಾಯಿತಿಗಳಿಗಾಗಿ ಬಿಜೆಪಿಯೊಂದಿಗೆ ಉಳಿಯುವುದು
ಬಿಜೆಪಿಯು ನಿತೀಶ್ ಕುಮಾರ್ ಅವರನ್ನು ಚುನಾವಣಾ ಕಣಕ್ಕಿಳಿಸಲು ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ರಾಜ್ಯದ ಉಳಿದ ಭಾಗಗಳಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಿರುವ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ಜೆಡಿಯು ಪಕ್ಷವನ್ನು ಸೋಲಿಸಲು ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ರೀತಿ ಕಾಣುತ್ತಿದೆ. ಇದು ಬಿಜೆಪಿಯ ಯೋಜನೆಯಂತೆ ಸ್ಪಷ್ಟವಾಗಿ ಕಾಣುತ್ತಿದೆ.
ಜೆಡಿಯು ಪಕ್ಷವನ್ನು ಸ್ವಾಧೀನಪಡಿಸಿಕೊಳ್ಳಲು ಬಿಜೆಪಿಯು ‘ಏಕನಾಥ್ ಶಿಂಧೆ’ ರೀತಿಯ ಮುಖವನ್ನು ಹುಡುಕುತ್ತಿದೆ ಎಂದು ಜೆಡಿಯು ಒಳಗಿನವರು ಆರೋಪಿಸುತ್ತಾರೆ. ಆದರೆ ಜೆಡಿಯುವಿನಲ್ಲಿದ್ದು ಬಿಜೆಪಿಯ ಪರವಿದ್ದ ಆರ್‌ಸಿಪಿ ಸಿಂಗ್ ವಿರುದ್ಧ ನಿತೀಶ್ ಕುಮಾರ್ ಸಮಯೋಚಿತ ಕ್ರಮ ಜರುಗಿಸಿ, ತಂತ್ರಗಾರಿಕೆಯನ್ನು ವಿಫಲಗೊಳಿಸಿದರು.
“ಶಿವಸೇನೆ ನಮಗೆ ಪಾಠ ಕಲಿಸುವ ಅಗತ್ಯವಿಲ್ಲ. ಜೆಡಿಯು ಅನ್ನು ನಾಶಪಡಿಸುವುದು ಅವರ ಅಂತಿಮ ಯೋಜನೆ ಎಂದು ನಮಗೆ ಯಾವಾಗಲೂ ತಿಳಿದಿತ್ತು. ಆದರೆ ಅವರು ನಿತೀಶ್ ಕುಮಾರ್ ಅವರನ್ನು ಸರಿಯಾಗಿ ಗ್ರಹಿಸಿಲ್ಲ. ನಿತೀಶ್ ಕುಮಾರ್ ಉದ್ಧವ್ ಠಾಕ್ರೆಯಂತಲ್ಲ” ಎಂದು ಜೆಡಿಯು ಹಿರಿಯ ನಾಯಕರೊಬ್ಬರು ಎಂದು ‘ದಿ ಕ್ವಿಂಟ್’ಗೆ ತಿಳಿಸಿದ್ದಾರೆ.
ಆದರೆ, 2024ರ ಲೋಕಸಭೆ ಚುನಾವಣೆಗೂ ಮುನ್ನ ನಿತೀಶ್ ಕುಮಾರ್ ಅವರನ್ನು ಚುನಾವಣಾ ಕಣಕ್ಕಿಳಿಸುವುದು ಬಿಜೆಪಿಗೆ ತೊಂದರೆಯೂ ಆಗಬಹುದು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಎನ್‌ಡಿಎಗೆ ಭಾರಿ ಜಯ ದೊರೆತ್ತಿತ್ತು. ಮೈತ್ರಿಕೂಟವು 40 ರಲ್ಲಿ 39 ಸ್ಥಾನಗಳನ್ನು ಗೆದ್ದಿತ್ತು.
ಆರ್‌ಜೆಡಿಯ ಮುಸ್ಲಿಂ-ಯಾದವ್ ಓಟ್‌ಬ್ಯಾಂಕ್, ಜೆಡಿಯುಗೆ ಮಹಾದಲಿತ್, ಎಂಬಿಸಿಗಳು, ಕುರ್ಮಿಗಳ ಬೆಂಬಲ, ಕಾಂಗ್ರೆಸ್, ಸಿಪಿಐ-ಎಂಎಲ್ ಪ್ರಭಾವ ಮಹಾಘಟಬಂಧನ್ ಮೈತ್ರಿಯನ್ನು ಗಟ್ಟಿಗೊಳಿಸುತ್ತದೆ. ಇದು ಎನ್‌ಡಿಎಗೆ ನಷ್ಟ ಉಂಟು ಮಾಡಬಹುದು. ಹೀಗಾಗಿ ಈ ಮೈತ್ರಿಯಾಗದಂತೆ ಬಯಸುವ ಬಿಜೆಪಿಯ ಮೇಲೆ 2024ರವರೆಗೆ ನಿತೀಶ್ ಹಿಡಿತ ಸಾಧಿಸಲೂಬಹುದು. 2024ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ತನ್ನ ಪಕ್ಷದ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಬಯಸಬಹುದು. 2025ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್, ಆಡಳಿತ ವಿರೋಧಿ ಆಡಳಿತಕ್ಕೆ ಸಿಲುಕಿಕೊಳ್ಳಬಾರದು. ಈಗಲೇ ಬಿಜೆಪಿಯೊಂದಿಗೆ ಸಮಾಧಾನ ಮಾಡಿಕೊಂಡರೆ ನಿತೀಶ್ ಕುಮಾರ್ ಅವರು ಇನ್ನೂ ಎರಡು ವರ್ಷ ಸಿಎಂ ಆಗಬಹುದು.
ಆಯ್ಕೆ 3: ಬಿಹಾರವನ್ನು ತೇಜಸ್ವಿ ಯಾದವ್‌ಗೆ ನೀಡಿ, ರಾಷ್ಟ್ರೀಯ ರಾಜಕೀಯಕ್ಕೆ ತೆರಳುವುದು
ಈ ಚಿಂತನೆಗೆ ಸ್ವಲ್ಪ ಧೈರ್ಯವೂ ಬೇಕಾಗುತ್ತದೆ. ಆದರೆ ಈ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ನಿತೀಶ್ ಕುಮಾರ್ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ತ್ಯಜಿಸಿ, ಬಿಹಾರದ ಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಅವರನ್ನು ಬೆಂಬಲಿಸಿ, ಎನ್‌ಡಿಎಯೇತರ ಪಕ್ಷಗಳ ಪ್ರಮುಖ ನಾಯಕರಾಗಿ ರಾಷ್ಟ್ರೀಯ ರಾಜಕೀಯಕ್ಕೆ ನಿತೀಶ್ ಕಾಲಿಡಬಹುದು.
ಒಂದು ರೀತಿಯಲ್ಲಿ ಇದು ನಿತೀಶ್ ಕುಮಾರ್ ಅವರಿಗೆ ಆಸಕ್ತಿದಾಯಕ ಆಯ್ಕೆಯಾಗಿದೆ. ಬಿಜೆಪಿ, ಆರ್‌ಜೆಡಿ ಪ್ರಾಬಲ್ಯಕ್ಕೆ ಹೋಲಿಸಿದರೆ ನಿತಿಶ್‌ಕುಮಾರ್ ಅವರ ಹಿಡಿತ ದುರ್ಬಲಗೊಂಡಿದೆ. ಮತ್ತೊಂದೆಡೆ ಬಿಜೆಪಿ ಮತ್ತು ಆರ್‌ಜೆಡಿ ಬಲಗೊಂಡಿವೆ.
ಇದನ್ನೂ ಓದಿರಿ: ಬಿಹಾರ ಬಿಕ್ಕಟ್ಟು: ಬಿಜೆಪಿ ವಿರುದ್ಧ ನಿತೀಶ್ ಬಂಡೇಳಲು ಕಾರಣವಾದ ಐದು ಈ ಅಂಶಗಳು…
2025ರ ವಿಧಾನಸಭಾ ಚುನಾವಣೆಯ ವೇಳೆಗೆ, ನಿತೀಶ್ ಕುಮಾರ್ ಅವರು 75ನೇ ವರ್ಷಕ್ಕೆ ಕಾಲಿಡುತ್ತಾರೆ. ಐದನೇ ಅವಧಿಗೆ ಅಧಿಕಾರಕ್ಕಾಗಿ ಹೋರಾಡುವುದು ಅವರಿಗೆ ಹೆಚ್ಚು ಆಕರ್ಷಕವಾದ ನಿರೀಕ್ಷೆಯಲ್ಲ. ಹಾಗಾಗಿ ರಾಷ್ಟ್ರ ರಾಜಕಾರಣ ಅವರಿಗೆ ಗೌರವವನ್ನು ತಂದುಕೊಡಬಹುದು.
ಪ್ರಸ್ತುತ, ನಿತೀಶ್ ಕುಮಾರ್ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಗೌರವಾನ್ವಿತ ಉತ್ತೇಜನ ನೀಡಬಲ್ಲ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್. 2017ರ ಸಮಯದಲ್ಲಿ ಕೆಲವು ಮಾತುಗಳು ಕೇಳಿಬಂದಿದ್ದವು. ನಿತೀಶ್ ಕುಮಾರ್ ಅವರು ಜೆಡಿ(ಯು) ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುತ್ತಾರೆ, ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಿ ಅಂತಿಮವಾಗಿ ಕಾಂಗ್ರೆಸ್ ನಾಯಕರಾಗಿ ಹೊಮ್ಮಿ ರಾಷ್ಟ್ರ ರಾಜಕಾರಣಕ್ಕೆ ತೆರಳುತ್ತಾರೆ ಎಂಬ ಮಾತುಗಳು ಹರಿದಾಡಿದ್ದವು. ಅಂತಿಮ ಹಂತದಲ್ಲಿ ಮಾತುಕತೆಗಳು ಮುರಿದುಬಿದ್ದಿದ್ದವು. ಆದರೆ ಈ ಹಾದಿ ಮತ್ತೆ ತೆರೆದುಕೊಂಡರೆ ಆಶ್ಚರ್ಯಪಡಬೇಕಾಗಿಲ್ಲ.



ಕ್ವಿಂಟ್ ನ್ನ ರಾಘವ ಬೆಹ್ಲ್ ಅದಾನಿ ಗುಂಪಿಗೆ ಮೂರು ತಿಂಗಳ ಹಿಂದೆ ಮಾರಿದ್ದಾರೆ ಆದ್ದರಿಂದ ಅದು ತನ್ನ ದನಿಯನ್ನ ಬದಲಿಸಿ ಮೋದಿ ರಾಗ ಹಾಡುತ್ತಿದೆ ಅಂತ ಕೆಲವರು ಹೇಳುತ್ತಿದ್ದಾರೆ.ನನಗೂ ಅನುಮಾನ ಶುರುವಾಗಿದೆ.
ನಿಜ ಏನು ಎಂಬುದನ್ನ ತಿಳಿಸಬಲ್ಲಿರಾ?