Homeಮುಖಪುಟಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು ಮಹಿಳೆಯರು; ಪ್ರಮಾಣ ವಚನ ಸ್ವೀಕರಿಸಿದ್ದು ಅವರ ಗಂಡಂದಿರು!

ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು ಮಹಿಳೆಯರು; ಪ್ರಮಾಣ ವಚನ ಸ್ವೀಕರಿಸಿದ್ದು ಅವರ ಗಂಡಂದಿರು!

ಈ ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಧಿಕಾರಿಯ ಬದಲು ಬಿಜೆಪಿ ಮುಖಂಡನೊಬ್ಬ ಪ್ರಮಾಣವಚನ ಬೋಧಿಸಿರುವುದು ಟೀಕೆಗೆ ಗುರಿಯಾಗಿದೆ.

- Advertisement -
- Advertisement -

ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಸುಮಾರು ಹದಿನೈದು ಮಹಿಳೆಯರ ಬದಲಿಗೆ ಅವರ ಗಂಡಂದಿರು ಪ್ರಮಾಣ ವಚನ ಸ್ವೀಕರಿಸಿರುವ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿರುವ ಕುರಿತು ‘ಟೈಮ್ಸ್‌ ಆಫ್‌ ಇಂಡಿಯಾ’ ವರದಿ ಮಾಡಿದೆ.

ಧಾರ್ ಮತ್ತು ದಾಮೋಹ್ ಜಿಲ್ಲೆಗಳಲ್ಲಿ ಪಂಚ್ ಹಾಗೂ ಸರಪಂಚ್ ಆಗಿ ಆಯ್ಕೆಯಾಗಿದ್ದ ಕನಿಷ್ಠ ಹದಿನೈದು ಮಹಿಳೆಯರು ಸಭಿಕರ ಸ್ಥಾನದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರೆ ಅವರ ಗಂಡಂದಿರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದಕ್ಕೆ ಅಧಿಕಾರಿಗಳೇ ಅವಕಾಶ ನೀಡಿದ್ದಾರೆಂಬ ಆರೋಪಗಳು ಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಘಟನೆಯು ಚುನಾವಣಾ ರಾಜಕೀಯದಲ್ಲಿ ಮಹಿಳಾ ಮೀಸಲಾತಿಯನ್ನು ಅಪಹಾಸ್ಯ ಮಾಡುತ್ತಿವೆ. ಅದಕ್ಕಿಂತ ಹೆಚ್ಚಾಗಿ, ಧಾರ್‌ನಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಪ್ರಮಾಣ ವಚನ ಬೋಧಿಸುತ್ತಿರುವಾಗ ನಿಯೋಜಿತ ಸರ್ಕಾರಿ ಅಧಿಕಾರಿ ಪಕ್ಕದಲ್ಲೇ ಇದ್ದದ್ದು ಟೀಕೆಗೆ ಗುರಿಯಾಗಿದೆ.

ಈ ಸುದ್ದಿ ಹೊರಬಿದ್ದ ಬಳಿಕ ದಾಮೋಹ್‌ನಲ್ಲಿ ಪಂಚಾಯತ್ ಕಾರ್ಯದರ್ಶಿಯನ್ನು ಅಮಾನತುಗೊಳಿಸಲಾಯಿತು. ಧಾರ್ ಜಿಲ್ಲೆಯ ಸುಂದ್ರೇಲ್‌‌ ಗ್ರಾಮ ಪಂಚಾಯತ್ ಮತ್ತು ದಾಮೋಹ್‌ನ ಗೈಸಾಬಾದ್ ಪಂಚಾಯತ್‌ನಲ್ಲಿ ಘಟನೆಗಳು ನಡೆದಿವೆ.

ಗುರುವಾರ ಸುಂದ್ರೇಲ್‌ನಲ್ಲಿ, ಸ್ಥಳೀಯ ಬಿಜೆಪಿ ಮುಖಂಡ ರಾಧೇಶ್ಯಾಮ್ ಕಾಸರವಾಡಿಯ ಅವರು ವೇದಿಕೆಯ ಮೇಲೆ ಪ್ರಮಾಣ ವಚನ ಬೋಧಿಸುತ್ತಿರುವಾಗ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ರಾಧಾಬಾಯಿ, ಲಕ್ಷ್ಮೀಬಾಯಿ ಮತ್ತು ಕಿರಣ್ ಬಾಯಿ ಪ್ರೇಕ್ಷಕರಾಗಿ ಕುಳಿತುಕೊಂಡಿದ್ದರು. ಇವರ ಬದಲಿಗೆ ಲಖನ್, ದಿಲೀಪ್ ಮತ್ತು ಜೀವನ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ವೇದಿಕೆಯ ದೂರದ ಮೂಲೆಯಲ್ಲಿ ನಿಂತು ಐವರು ಮಹಿಳೆಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮೇಲಧಿಕಾರಿಗಳು ಇದನ್ನು ‘ಕಾರ್ಯವಿಧಾನದ ಲೋಪ’ ಎಂದು ಕರೆದಿದ್ದಾರೆ. “ಮಹಿಳೆಯರು ದೂರು ನೀಡಿದರೆ, ಅವರ ಹಕ್ಕುಗಳನ್ನು ಪ್ರತಿಪಾದಿಸಲಾಗುವುದು” ಎಂದಿದ್ದಾರೆ.

“ನಮಗೆ ವಿಷಯ ತಿಳಿಯಿತು. ಘಟನೆಯನ್ನು ಗಂಭೀರವಾಗಿ ತೆಗೆದಕೊಂಡಿದ್ದೇವೆ. ಇದು ಕಾರ್ಯವಿಧಾನದ ಲೋಪವಾಗಿದೆ” ಎಂದು ಧಾರ್ ಜಿಲ್ಲಾ ಪಂಚಾಯತ್ ಸಿಇಒ ಕೆ.ಎಲ್.ಮೀನಾ ಅವರು ಟೈಮ್ಸ್‌ ಆಫ್‌ ಇಂಡಿಯಾಕ್ಕೆ ತಿಳಿಸಿದ್ದಾರೆ.

ಸುಂದ್ರೇಲ್ ಗ್ರಾಮ ಪಂಚಾಯತ್ ಕಾರ್ಯದರ್ಶಿ ಬಾದಮ್ ಸಿಂಗ್ ನಿಂಗ್ವಾಲ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಸ್ಥಳೀಯ ರಾಜಕಾರಣಿಯೊಬ್ಬರು ಹೇಗೆ ಪ್ರಮಾಣ ವಚನ ಬೋಧಿಸಿದರು ಎಂದು ನಾವು ಅವರನ್ನು ಕೇಳಿದ್ದೇವೆ ಎಂದು ಮೀನಾ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿರಿ: ಬಿಹಾರ ಬಿಕ್ಕಟ್ಟು: ಬಿಜೆಪಿ ವಿರುದ್ಧ ನಿತೀಶ್‌ ಬಂಡೇಳಲು ಕಾರಣವಾದ ಐದು ಈ ಅಂಶಗಳು…

ಶೋಕಾಸ್ ನೋಟೀಸ್ ಕುರಿತು ಪ್ರತಿಕ್ರಿಯೆ ನೀಡಿರುವ ನಿಂಗ್ವಾಲ್‌, “ಸ್ಥಳೀಯ ನಾಯಕನೇ ಪ್ರಮಾಣ ವಚನ ಬೋಧಿಸಬೇಕೆಂದು ಪ್ರೇಕ್ಷಕರು ಒತ್ತಾಯಿಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಹಳ್ಳಿಯ ಗಂಡಸರೆಲ್ಲರೂ ಮಹಿಳೆಯರು ಪ್ರಮಾಣ ವಚನ ಸ್ವೀಕರಿಸುವುದನ್ನು ಒಪ್ಪಲು ಸಿದ್ಧರಿರಲಿಲ್ಲ. ಕೌಟುಂಬಿಕ ಪದ್ಧತಿಯನ್ನು ಮೀರಲು ಅವರು ಮುಂದಾಗಲಿಲ್ಲ” ಎಂದಿದ್ದಾರೆ.

“ಪಂಚಾಯತ್ ಚಟುವಟಿಕೆಗಳಲ್ಲಿ ಅವರ ಗಂಡಂದಿರು ಭಾಗವಹಿಸಲು ನಾವು ಅನುಮತಿಸುವುದಿಲ್ಲ ಎಂಬ ಭರವಸೆಯನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ” ಎಂದಿದ್ದಾರೆ.

“ಯಾವುದೇ ವಿಜೇತ ಅಭ್ಯರ್ಥಿಯು ಆಕ್ಷೇಪಣೆಯನ್ನು ಎತ್ತಿದರೆ ಅಥವಾ ಅವರ ಹಕ್ಕುಗಳ ಉಲ್ಲಂಘನೆಯ ಬಗ್ಗೆ ದೂರು ಸಲ್ಲಿಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಗೆದ್ದ ಅಭ್ಯರ್ಥಿಗಳಿಗೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ನೀಡಲು ನಾವು ತರಬೇತಿಗಳನ್ನು ಆಯೋಜಿಸುತ್ತಿದ್ದೇವೆ” ಎಂದು ಅಧಿಕಾರಿ ಮೀನಾ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read