Homeಕರ್ನಾಟಕಶ್ರದ್ಧಾಂಜಲಿ: ದುರಿತ ಕಾಲದ ಎಚ್ಚರದ ದನಿಯೊಂದು ಕರಗಿ...

ಶ್ರದ್ಧಾಂಜಲಿ: ದುರಿತ ಕಾಲದ ಎಚ್ಚರದ ದನಿಯೊಂದು ಕರಗಿ…

- Advertisement -
- Advertisement -

ಜಿ ರಾಜಶೇಖರ್‌ರನ್ನು ನಾನು ಯಾವತ್ತೂ ಭೇಟಿಯಾಗಿಲ್ಲ. ಅವಕಾಶ ಬರಲಿಲ್ಲ. ಅಥವಾ ಅವಕಾಶ ಮಾಡಿಕೊಳ್ಳಲಿಲ್ಲ. ಆದರೆ ಜಿ ರಾಜಶೇಖರ್ ಹತ್ತಿರ ಅನ್ನಿಸುತ್ತಿದ್ದರು. ಪರಿಚಿತರು ಅನ್ನಿಸುತ್ತಿತ್ತು. ಅವರ ಬಿಡಿ ಬರಹಗಳನ್ನು, ಲೇಖನಗಳನ್ನು ಓದಿಕೊಂಡ ನನಗೆ ಮತ್ತು ನನ್ನಂತಹ ಅನೇಕರಿಗೆ ಹೀಗೆ ಅನ್ನಿಸಿರುವುದರಲ್ಲಿ ಅಚ್ಚರಿಯೇನಾದರೂ ಉಂಟೆ. ಚೆ ಗುವೆರಾ ಹೇಳುತ್ತಾನಲ್ಲ, “ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಿನ್ನ ಎದೆ ಕಂಪಿಸಿದರೆ ನೀನು ನನ್ನ ಸಂಗಾತಿ”, ಹಾಗೇ ಅನ್ಯಾಯವೊ, ಅಹಿತಕರವಾದದ್ದೊ, ಜೀವವಿರೋಧಿಯಾದದ್ದೊ ನಡೆದಾಗ ಮಾತನಾಡುವವರು ನಮ್ಮದೆ ಮಾತನ್ನು ಮಾರ್ದನಿಸಿದಂತೆ ಇರುತ್ತದೆ ನೋಡಿ, ಹಾಗೇ ಅವರು ನಮ್ಮವರಾಗಿಬಿಡುತ್ತಾರೆ.

ಎಡಪಂಥೀಯ ಸಂಘಟನೆಯೊಳಗಿದ್ದು, ಅದರ ತಪ್ಪುಗಳನ್ನು ಕಟುವಾಗಿ ಟೀಕಿಸಬಲ್ಲವರಾಗಿದ್ದರು ಎಂಬುದೇ ಜಿಆರ್ ಬದ್ಧತೆ ಮತ್ತು ನ್ಯಾಯಕ್ಕೆ, ಸತ್ಯಕ್ಕೆ ಹೊರತಾದ ಚೌಕಟ್ಟುಗಳು ಅವರ ಬಳಿ ಸುಳಿಯಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಶಾಲೆಯ ಮೇಷ್ಟ್ರಾಗಿ, ವಿಮಾ ಸಂಸ್ಥೆಯ ಉದ್ಯೋಗಿಯಾಗಿ ಜನರೊಂದಿಗೆ ಬೆರೆತ ಜಿಆರ್ ಜೀವಪರ ಜೀವವಾಗಿ ಅಸಂಖ್ಯರ ಪ್ರೀತಿಗೆ ಪಾತ್ರರಾಗಿದ್ದನ್ನು ನಾನು ತಿಳಿದೆ.

ಅವರು ನಿಧನರಾದಾಗ ಫೇಸ್‌ಬುಕ್ಕಿನಲ್ಲಿ ಬಹಳಷ್ಟು ಮಂದಿ ಅವರನ್ನು ನೆನೆದು ತಮ್ಮ ನೆನಪು, ವಿದಾಯದ ಸಂಕಟಗಳನ್ನು ಹಂಚಿಕೊಂಡರು. ಕರಾವಳಿಯ ಕೋಮುವಾದದ ಬಗ್ಗೆ ಹಲವರು ಪ್ರಸ್ತಾಪಿಸಿದ್ದನ್ನು ಓದಿದೆ. ನನಗೂ ಜಿಆರ್ ಹೆಚ್ಚು ಪರಿಚಯವಾಗಿದ್ದು ಅದೇ ಕಾರಣಕ್ಕೆ. ದಕ್ಷಿಣ ಕನ್ನಡದವರೇ ಆದ ಹಿರಿಯ ಪತ್ರಕರ್ತರೊಂದಿಗೆ ಮಾತನಾಡುತ್ತಾ, ’ನೀವೂ ಕೋಮುವಾದದ ಬಗ್ಗೆ ಗಟ್ಟಿಯಾಗಿ ಮಾತನಾಡಿದಿರಿ. ಅವರೂ ಕೋಮುವಾದ ವಿರೋಧಿಸಿದವರು’ ಎಂದು ಮೆಲುಕು ಹಾಕಿದೆ.

ಕೋಮುವಾದದ ಬಗ್ಗೆ ಈಗಂತೂ ಮಾತನಾಡಿ ಅರಗಿಸಿಕೊಳ್ಳುವುದು ಸುಲಭವಲ್ಲ. ವ್ಯವಸ್ಥೆಯೇ ಬೇಟೆಗೆ ಸೀಳುನಾಯಿಗಳನ್ನು ಛೂ ಬಿಡುವಷ್ಟು ಪರಿಸ್ಥಿತಿ ಹದಗಟ್ಟಿದೆ. ಆದರೂ ಜಿಆರ್ ಕೋಮುವಾದ ಕುಲುಮೆಯಲ್ಲಿ ನಿಂತು ಕೆಂಡವನ್ನು ಆರಿಸುವ ಛಾತಿ ತೋರಿದರು.

ಕೋಮುವಾದದ ವಿರುದ್ಧ ಹೋರಾಡುತ್ತಾ, ಕೋಮುವಾದಕ್ಕೆ ಜೀವತೆತ್ತ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಕೊಡಿಸುವುದಕ್ಕೆ ಅವರು ಸದಾ ಓಡಾಡಿದ್ದನ್ನು ಕೇಳಿದೆ. ಅವರ ಕೋಮುವಾದದ ಹೋರಾಟ ಬಾಬ್ರಿ ಮಸೀದಿ ಧ್ವಂಸಕಾಲದಿಂದಲೂ ನಡೆಯುತ್ತಾ ಬಂದಿದೆ. ಇದೇ ಕಾರಣಕ್ಕೆ ಅವರು ಲಂಕೇಶ್ ಪತ್ರಿಕೆಗೆ ಬರೆಯುವುದಕ್ಕೂ ಶುರು ಮಾಡಿದ್ದು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕನ್ನಡದ ಬಹುತೇಕ ಬುದ್ಧಿಜೀವಿಗಳು, ಚಿಂತಕರು ಬಾಯಿಮುಚ್ಚಿಕೊಂಡಿದ್ದಾಗ, ಲಂಕೇಶ್ ದೇಶ ಒಡೆದ ಘಟನೆಯನ್ನು ಖಂಡಿಸಿದ್ದರು ಎಂಬ ಕಾರಣಕ್ಕೆ ಜಿಆರ್ ಅವರ ಪತ್ರಿಕೆಗೆ ಬರೆಯಲಾರಂಭಿಸಿದ್ದರಂತೆ.

ಲಂಕೇಶರಿಗೆ ಜಿಆರ್ ಎಂದರೆ ಅಷ್ಟೇ ಪ್ರೀತಿ. “ನಮ್ಮ ರಾಜಶೇಖರ ಎಷ್ಟು ಒಳ್ಳೆಯ ವಿಚಾರವಂತ. ನಿಷ್ಠುರತೆ ಮತ್ತು ಬದುಕಿನ ಬಗ್ಗೆ ಪ್ರೀತಿಯನ್ನು ಇಟ್ಟುಕೊಂಡ ಆತ ಶ್ರೇಷ್ಠ ಚಿಂತನಕಾರ ಎನ್ನುವುದು ನನಗೆ ಹೆಮ್ಮೆಯನ್ನುಂಟು ಮಾಡಿದೆ” ಎಂದು ಸ್ವತಃ ಲಂಕೇಶ್ ಹೇಳಿದ್ದರಂತೆ. ಆದರೆ ಅದೇ ಲಂಕೇಶ್ ಅವರನ್ನು ಟೀಕಿಸುವುದಕ್ಕೆ ಅವರ ಸ್ನೇಹ ಅಡ್ಡಿಪಡಿಸಿರಲಿಲ್ಲ. ಲಂಕೇಶ್ ಪ್ರಗತಿರಂಗ ಎಂಬ ಪಕ್ಷ ಕಟ್ಟಿ ರಾಜಕೀಯಕ್ಕೆ ಇಳಿದಾಗ ಅದರ ಪ್ರಣಾಳಿಕೆಯನ್ನು ಗಂಭೀರವಾಗಿ ವಿಮರ್ಶಿಸಿದ್ದರು ಜಿಆರ್.

ಸದಾ ಕಾಲ ತಮ್ಮನ್ನು ಕೇಳಿಕೊಳ್ಳುತ್ತಾ, ಸ್ಥಾಪಿತ ಮೌಲ್ಯಗಳನ್ನು ಪ್ರಶ್ನಿಸುತ್ತಾ ತತ್ವಕ್ಕಿಂತ ಜೀವಕ್ಕೆ ಬೆಲೆ ಕಟ್ಟಿ ಬದುಕಿದವರು ಜಿಆರ್ ಎಂಬುದನ್ನು ಅವರ ಬದುಕೇ ಹೇಳುತ್ತದೆ. ಕೋಮುವಾದದ ವಿರುದ್ಧದ ಹೋರಾಟದ ಜೊತೆಜೊತೆಗೇ ಅವರು ಪ್ರಭುತ್ವದ ಕ್ರೌರ್ಯಗಳನ್ನು ಟೀಕಿಸಿದ್ದಾರೆ. ಆದರೆ ಅವರ ಆತಂಕ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೋಮುವಾದದ ಕಡೆಗಿತ್ತು. ಈ ದೇಶದಲ್ಲಿ ಹಿಂದೂ ಕೋಮುವಾದ ಅಧಿಕಾರ ಹಿಡಿಯಬಹುದು ಎಂದು ಹೇಳಿದ್ದವರಲ್ಲಿ ಜಿಆರ್ ಕೂಡ ಒಬ್ಬರು. ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಅಸಹಿಷ್ಣುತೆ ನುಸುಳಿದ್ದಾಗ ಕನಲಿ ಎಚ್ಚರಿಸಿದವರು. ಜಿಆರ್ ಗಟ್ಟಿಯಾಗಿ ಕೋಮುವಾದದ ಕುರಿತು ಮಾತನಾಡುತ್ತಾ ಬಂದಿದ್ದರಿಂದಲೇ ಜೀವಪರವಾಗಿ ಮಿಡಿಯುವ ಯುವಪಡೆಯೊಂದು ಬೆಳೆದು
ನಿಂತಿದ್ದು ಎನ್ನುತ್ತಿದ್ದರು ಅಲ್ಲಿಯ ಗೆಳೆಯರು.

ಎಪ್ಪತ್ತರ ದಶಕದಿಂದ ಬೀದಿ ಹೋರಾಟಗಳಲ್ಲಿ ಭಾಗವಹಿಸುತ್ತಾ ಅದೆಷ್ಟು ಮನಸ್ಸುಗಳನ್ನು ಹುರಿದುಂಬಿಸುತ್ತಾ ಬಂದಿದ್ದಾರೊ ಲೆಕ್ಕವಿಲ್ಲ. “ಸಂವಿಧಾನವನ್ನು ಬದಲಾಯಿಸಲು ಅದನ್ನೆನು ಜನಿವಾರವೆ?” ಎಂಬ ಘೋಷಣೆಯ ಪ್ಲಕಾರ್ಡ್ ಹಿಡಿದು ನಿಂತ ಜಿಆರ್ ಅವರ ಕುಬ್ಜ ದೇಹ ಎಷ್ಟು ಅಗಾಧ ಆತ್ಮಶಕ್ತಿಯನ್ನು ಹೊಂದಿತ್ತು ಮತ್ತು ಅದು ಎಚ್ಚರವಾಗಿ ಕರಾವಳಿಯನ್ನು, ಈ ನಾಡನ್ನು ಹೇಗೆ ಆವರಿಸಿಕೊಂಡಿರಬಹುದು ಎಂಬುದು ಸಾಮಾನ್ಯದ ಬೆರಗಲ್ಲ.

ಎಲ್ಲೇ ಏನೇ ಗಲಭೆ, ಅಹಿತಕರ ಘಟನೆಗಳು ನಡೆದರೆ ಅಲ್ಲಿಗೆ ಖುದ್ದು ಭೇಟಿ ನೀಡಿ ಸತ್ಯಶೋಧನೆ ನಡೆಸಿ ಸಿದ್ಧಪಡಿಸಿದ ವರದಿಗಳು ಬಹುಶಃ ಯಾವ ಪತ್ರಕರ್ತನೂ, ಸತ್ಯಶೋಧನಾ ತಂಡಗಳು ಮಾಡಿರಲಾರವು. ಸುರತ್ಕಲ್ ಗಲಭೆ, ಮಂಗಳೂರಿನ ಪಬ್‌ದಾಳಿ, ಹೋಮ್‌ಸ್ಟೇ ದಾಳಿ, ಕುಂದಾಪುರದಲ್ಲಿ ನಡೆದ ಗಲಭೆ, ಆದಿ ಉಡುಪಿಯ ಬೆತ್ತಲೆ ಪ್ರಕರಣ ಹೀಗೆ ಹಲವು ಘಟನೆಗಳ ಹಿಂದಿನ ಅಮಾನವೀಯ, ಜೀವವಿರೋಧಿ ಶಕ್ತಿ ಮತ್ತು ಉದ್ದೇಶಗಳನ್ನು ಬೆತ್ತಲು ಮಾಡಿದವರು ಜಿಆರ್.

ಸಾಮಾಜಿಕ, ರಾಜಕೀಯ ವಿದ್ಯಮಾನಗಳಿಗೆ ಸ್ಪಂದಿಸಿ ನೂರಾರು ಲೇಖನಗಳನ್ನು ಬರೆದು, ಬಹುತ್ವದ ಚಿಂತನೆಗಳ ಮೂಲಕ ಈ ದೇಶ, ಈ ನಾಡು ಎದುರಿಸಿದ ಹಿಂಸೆಯ ವಿಕೃತಿಗಳನ್ನು ಅಕ್ಷರಗಳ ರೂಪದಲ್ಲಿ ಎಚ್ಚರಿಸಿದವರು ಜಿಆರ್.

ನಿರಂಕುಶತೆ, ಮತಾಂಧತೆ ಹಲವು ರೂಪಗಳಲ್ಲಿ ಆವರಿಸಿಕೊಳ್ಳುತ್ತಿರುವಾಗ, ಜಿಆರ್ ಹಾಕಿಕೊಟ್ಟಿರುವ ಹೋರಾಟದ ಮಾರ್ಗದಲ್ಲಿ ಬೆಳಕಿದ್ದು, ಆ ಮಾರ್ಗದಲ್ಲಿ ನಡೆಯುವುದು ಅವರಿಗೆ ಸಲ್ಲಿಸುವ ನಿಜ ಶ್ರದ್ಧಾಂಜಲಿಯಾಗಬಹುದು.

ಎಸ್ ಕುಮಾರ್
ಸಂಪಾದಕರು, ಈದಿನ.ಕಾಂ


ಇದನ್ನೂ ಓದಿ: “ಜನಪ್ರಿಯತೆಯನ್ನು ನಾವು ಸಾಹಿತ್ಯಿಕ ಅರ್ಹತೆಯೆಂದು ಗೊಂದಲಿಸಬಾರದು” – ಜಿ. ರಾಜಶೇಖರ್ ಸಂದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...