Homeಮುಖಪುಟ"ಜನಪ್ರಿಯತೆಯನ್ನು ನಾವು ಸಾಹಿತ್ಯಿಕ ಅರ್ಹತೆಯೆಂದು ಗೊಂದಲಿಸಬಾರದು" - ಜಿ. ರಾಜಶೇಖರ್ ಸಂದರ್ಶನ

“ಜನಪ್ರಿಯತೆಯನ್ನು ನಾವು ಸಾಹಿತ್ಯಿಕ ಅರ್ಹತೆಯೆಂದು ಗೊಂದಲಿಸಬಾರದು” – ಜಿ. ರಾಜಶೇಖರ್ ಸಂದರ್ಶನ

The Hindu ಪತ್ರಿಕೆಗಾಗಿ 2010ರಲ್ಲಿ ಶಿವಸುಂದರ್ ಅವರು ನಡೆಸಿದ ಸಂದರ್ಶನವಿದು. ಈ ಸಂದರ್ಶನಕ್ಕೆ ಕೆ. ಫಣಿರಾಜ್ ನೆರವಾಗಿದ್ದಾರೆ. ನಿಖಿಲ್ ಕೋಲ್ಪೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

- Advertisement -
- Advertisement -

ಕನ್ನಡದ ಸಾಕ್ಷಿಪ್ರಜ್ಞೆಯಂತಿದ್ದ ಲೇಖಕ, ಹೋರಾಟಗಾರ ಜಿ.ರಾಜಶೇಖರ್ ನಮ್ಮನ್ನು ಅಗಲಿದ್ದಾರೆ. 2010ರಲ್ಲಿ ಕನ್ನಡ ಸಾಹಿತ್ಯದ ಕುರಿತು ಅವರು ಚಿಂತಕ ಶಿವಸುಂದರ್‌ರವರಿಗೆ ಸಂದರ್ಶನ ನೀಡಿದ್ದರು. ರಾಜಶೇಖರ್‌ರವರ ಗೌರವಾರ್ಥ ಆ ಮಹತ್ವದ ಸಂದರ್ಶನವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಿದ್ದೇವೆ. 

ಕನ್ನಡ ಸಾಹಿತ್ಯ ರಂಗವು ಅತ್ಯುನ್ನತ ಸೃಜನಶೀಲ ಪ್ರತಿಭೆಗಳು ಮತ್ತು ಮಹಾನ್ ಸಾಂಸ್ಕೃತಿಕ ವಿಮರ್ಶಕರ ಅಪರೂಪದ ಕೊಡುಗೆಯನ್ನೂ ಪಡೆದುಕೊಂಡಿದೆ. ಅದು ಕುವೆಂಪು, ಬೇಂದ್ರೆ, ಕಾರಂತ ಮುಂತಾದ ಮಹಾನ್ ಸಾಹಿತಿಗಳ ಪಡೆಯ ಜೊತೆಗೆ ನಂತರದ ತಾರೆಯರಾದ ಲಂಕೇಶ್, ಅನಂತಮೂರ್ತಿ, ತೇಜಸ್ವಿಯವರನ್ನೂ ಹೊಂದಿರುವಂತೆಯೇ, ಡಿ.ಆರ್. ನಾಗರಾಜ್, ಕಿ.ರಂ. ನಾಗರಾಜ್ ಮುಂತಾದ ಉನ್ನತ ಮಟ್ಟದ ಮತ್ತು ನಿಷ್ಟಾವಂತ ವಿಮರ್ಶಕರನ್ನೂ ಹೊಂದಿದೆ. ಇನ್ನೊಬ್ಬ ಬಹುಮುಖ್ಯ ಸಾಂಸ್ಕೃತಿಕ ಮತ್ತು ರಾಜಕೀಯ ವಿಮರ್ಶಕರಾದ ಜಿ. ರಾಜಶೇಖರ್ ಅವರು ಯಾವತ್ತೂ ಪ್ರಚಾರದಿಂದ ದೂರವೇ ಉಳಿದವರು. ಆದರೆ, ಅವರ ಸಾಹಿತ್ಯ, ರಾಜಕೀಯ ಮತ್ತು ಕೋಮುವಾದ ಇತ್ಯಾದಿಗಳ ಕುರಿತ ನಿರಂತರವಾದ ಚಿಂತನಶೀಲ ಬರಹಗಳು ನಮ್ಮ ಕಾಲದ ಸಾಂಸ್ಕೃತಿಕ ಮತ್ತು ರಾಜಕೀಯ ಚಿಂತನೆಗಳನ್ನು ರೂಪುಗೊಳಿಸುವಲ್ಲಿ ಮಹತ್ತಾದ ದೇಣಿಗೆ ಸಲ್ಲಿಸಿವೆ. ಅವರ ಲೇಖನಗಳ ಸಂಗ್ರಹವಾದ “ಮೊದಲ ಓದು” ಸರಣಿಯ ಕೃತಿಯನ್ನು ಅಕ್ಷರ ಪ್ರಕಾಶನವು ಪ್ರಕಟಿಸಿದ್ದು, ಅದು ಒಂದು ರೀತಿಯ ಮೊದಲ ಪುಸ್ತಕವಾಗಿದೆ. ಈ ಸಂದರ್ಭದಲ್ಲಿ ಒಂದು ಸಂದರ್ಶನ ನೀಡಿ ಅವರ ಸಾಹಿತ್ಯಿಕ ಮತ್ತು ರಾಜಕೀಯ ಚಿಂತನೆಗಳು ಮತ್ತು ಪ್ರಭಾವಗಳ ಕುರಿತ ವಿಚಾರಗಳನ್ನು ಹಂಚಿಕೊಳ್ಳುವಂತೆ ಮನವೊಲಿಸಲಾಯಿತು. The Hindu ಪತ್ರಿಕೆಗಾಗಿ 2010ರಲ್ಲಿ ಶಿವಸುಂದರ್ ಅವರು ನಡೆಸಿದ ಸಂದರ್ಶನದ ಆಯ್ದ ಭಾಗಗಳು ಕೆಳಗಿವೆ. ಈ ಸಂದರ್ಶನಕ್ಕೆ ಕೆ. ಫಣಿರಾಜ್ ಅವರು ನೆರವಾಗಿದ್ದಾರೆ. ನಿಖಿಲ್ ಕೋಲ್ಪೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

**

ಶಿವಸುಂದರ್: ಸಮಾಜದಲ್ಲಿ ಏನೆಲ್ಲಾ ನಡೆಯುತ್ತವೆಯೋ ಅವುಗಳಿಗೆಲ್ಲ ಪ್ರಖ್ಯಾತ ಬರಹಗಾರರ ಅಭಿಪ್ರಾಯಗಳನ್ನು ಅವಲಂಬಿಸುವ ವಿಶಿಷ್ಟ ಪರಂಪರೆಯೊಂದು ಕರ್ನಾಟಕದಲ್ಲಿದೆ- ಅದು ಸಾಹಿತ್ಯ ಕ್ಷೇತ್ರದಿಂದ ಹಿಡಿದು ರಾಜಕೀಯ, ಆರ್ಥಿಕ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ತನಕ ಇರಬಹುದು. ಈ ಪ್ರಕ್ರಿಯೆಯನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?

ಜಿ. ರಾಜಶೇಖರ್: ಇದು ಕನ್ನಡ ಪರಂಪರೆಗೆ ಹೊಸದಲ್ಲ. ಕನ್ನಡ ಸಮಾಜವು ಸಾರ್ವಜನಿಕ ಅಥವಾ ಸಾಮಾಜಿಕ ಚಿಂತಕರ ಮಹಾನ್ ಪರಂಪರೆಯನ್ನೇ ಹೊಂದಿದ್ದು, ಇದು ವಚನಕಾರರಷ್ಟು ಹಿಂದಕ್ಕೆ ಹೋಗುತ್ತದೆ ಎಂದು ನಾನು ಹೇಳುತ್ತೇನೆ. ಕನ್ನಡ ಸಾಹಿತಿಗಳು ಬದಲಿ ವಿಶ್ವಾಸಾರ್ಹ ಮೂಲಗಳು ಇಲ್ಲದ ಸಂದರ್ಭದಲ್ಲಿ- ಹವ್ಯಾಸಿ- ಸೈದಿಯನ್ ಅರ್ಥದಲ್ಲಿ ಹವ್ಯಾಸಿ- ರಾಜಕೀಯ ಮತ್ತು ಸಮಾಜಶಾಸ್ತ್ರಜ್ಞರು, ಮುಂತಾದವರಾಗಿದ್ದಾರೆ. ಮೊದಲ ಕನ್ನಡ ಕಾದಂಬರಿಕಾರರಾದ ಗುಲ್ವಾಡಿ ವೆಂಕಟರಾಯರಿಂದ ಹಿಡಿದು ಕನ್ನಡ ಸಾಹಿತಿಗಳು ಸಾಮಾಜಿಕ ವಿಮರ್ಶಕರ ಪಾತ್ರವಹಿಸಿದ್ದಾರೆ. ಅವರ “ಇಂದಿರಾಬಾಯಿ” ಮತ್ತು “ಸದ್ಧರ್ಮ ವಿಜಯ” ಮುಂತಾದ ಕೃತಿಗಳು ಕೋಮುವಾದಿ ಶಕ್ತಿಗಳ ನಡುವೆ ಇಂದಿಗೂ ತಲ್ಲಣಗಳನ್ನು ಉಂಟುಮಾಡುತ್ತವೆ. ಈ ಪರಂಪರೆಯನ್ನು ಡಿವಿಜಿ, ಅನಕೃ, ಕಟ್ಟಿಮನಿ, ಚದುರಂಗ, ಮಾಸ್ತಿ, ಕಾರಂತ, ಕುವೆಂಪು, ಬೇಂದ್ರೆ ಮತ್ತು ಉಳಿದೆಲ್ಲರೂ ಅನುಸರಿಸಿದ್ದಾರೆ. ಆದುದರಿಂದ, ಒಟ್ಟಾಗಿ ಹೇಳುವುದಾದರೆ, ಕನ್ನಡ ಸಾಹಿತ್ಯ ಪರಂಪರೆಯು ಯಾವತ್ತೂ ಸಾಮಾಜಿಕ ಒಲವು ಹೊಂದಿದ್ದು, ವಿಶಾಲವಾದ ಮಾನವೀಯತೆಯಿಂದ ಪ್ರೇರಿತವಾಗಿದೆ.

ಶಿವಸುಂದರ್: ಆದರೆ, ಅಡಿಗ ಮತ್ತು ಕಾರಂತರಂತ ಮಹಾನ್ ಲೇಖಕರ ಕೆಲವು ಕೃತಿಗಳು ಅಂತರ್ಗತವಾದ ಪಕ್ಷಪಾತ ಹೊಂದಿದ್ದವು ಮತ್ತು ಅವು ಅಭಿವ್ಯಕ್ತಗೊಳಿಸಿದ ರಾಜಕೀಯ ನಿಲುವುಗಳು ಉದಾರವಾದಿ ಮಾನವೀಯತೆಯಿಂದ ಪ್ರೇರಿತವಾದವುಗಳು ಎಂದು ಹೇಳಲು ಸಾಧ್ಯವಿಲ್ಲ ಎಂಬುದಾಗಿ ಕೆಲವು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ನಿಮ್ಮ ಅಭಿಪ್ರಾಯ ಏನು?

ಜಿ. ರಾಜಶೇಖರ್: ಇದು ನಿಜ. ಭಾರತ ಮತ್ತು ಕರ್ನಾಟಕದ 20ನೇ ಶತಮಾನದ ಬೆಳವಣಿಗೆಗಳು ಸಮಾಜದ ಎಲ್ಲಾ ರಂಗಗಳಲ್ಲೂ ಶೂದ್ರ ಶಕ್ತಿಗಳ ಹಕ್ಕೊತ್ತಾಯವನ್ನು ಗುರುತಿಸಿದಂತವುಗಳು. ಆದರೆ, ನಮ್ಮ ಮಹಾನ್ ಲೇಖಕರಾದ ಅಡಿಗ ಮತ್ತು ಕಾರಂತರು ನನ್ನ ಅಭಿಪ್ರಾಯದಲ್ಲಿ ಇದನ್ನೊಂದು ಪ್ರಗತಿಪರ ಬೆಳವಣಿಗೆ ಎಂಬುದಾಗಿ ಅರ್ಥಮಾಡಿಕೊಳ್ಳಲಿಲ್ಲ. ಅವರು ಈ ಶಕ್ತಿಗಳ ಬಗ್ಗೆ ಭಯಹೊಂದಿದ್ದರು ಮತ್ತು ತಾವು ಈ ತನಕ ಪವಿತ್ರ ಎಂದು ಭಾವಿಸಿದ್ಧ ವಲಯವನ್ನು ಅವು ಕಲುಷಿತಗೊಳಿಸುತ್ತವೆ ಎಂದು ಆತಂಕಗೊಂಡಿದ್ದರು ಎಂದು ನಾನು ಹೇಳುತ್ತೇನೆ. ಉದಾಹರಣೆಗೆ, ಅಡಿಗರ “ನೆಹರೂ ನಿವೃತ್ತರಾಗುವುದಿಲ್ಲ” ಅಥವಾ ಬಿಜಿಎಲ್ ಸ್ವಾಮಿಯವರ “ಕಾಲೇಜು ರಂಗ” ಇತ್ಯಾದಿಗಳು ಶೂದ್ರ ಪ್ರತಿಪಾದನೆಯ ಕುರಿತ ಭಯದಿಂದ ಹುಟ್ಟಿದ ಕೀಳು ವ್ಯಂಗ್ಯ ಮತ್ತು ಹಾಸ್ಯಗಳಾಗಿವೆ. ಗೋರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಶ್ರೀರಂಗರಂತ ಕೆಲವರು ಇದಕ್ಕೆ ಅಪವಾದ. ಕಾರಂತರ ಕಾದಂಬರಿಗಳಲ್ಲಿ ಬರುವ ಎಲ್ಲಾ ಬ್ರಾಹ್ಮಣೇತರ ಪಾತ್ರಗಳು ಬರೇ ವ್ಯಂಗ್ಯಚಿತ್ರಣಗಳು. ಇದಕ್ಕೆ ಹೊರತಾಗಿ ಬಾಬ್ರಿ ಮಸೀದಿ ಧ್ವಂಸ ಮತ್ತು ಮುಂಬಯಿ ಗಲಭೆಗಳ ನಂತರವೂ ಬಿಜೆಪಿಯ ಜೊತೆ ಕಾರಂತರು ಮತ್ತು ಅಡಿಗರ ಮುಂದುವರಿದ ಸಂಬಂಧ ಇಂದಿಗೂ ನನಗೆ ಒಗಟಾಗಿ ಉಳಿದಿದೆ. ಕಾರಂತರು ಭಾಗವಹಿಸಿದ ಕೊನೆಯ ಕಾರ್ಯಕ್ರಮ ಒಂದು ಆರೆಸ್ಸೆಸ್ ಕಾರ್ಯಕ್ರಮವಾಗಿತ್ತು. ಆವರು ಮುಂಬಯಿಯ ಆತ್ಮವನ್ನು ಅರ್ಥಮಾಡಿಕೊಂಡಿದ್ದರು ಮತ್ತದು “ಅಳಿದ ಮೇಲೆ” ಕೃತಿಯಲ್ಲಿ ಸುಂದರವಾಗಿ ಮೂಡಿಬಂದಿದೆ. ಆದರೂ, ಮುಂಬಯಿ ಗಲಭೆಗಳು ಅವರನ್ನು ವಿಚಲಿತಗೊಳಿಸಲಿಲ್ಲ. ಇದು ಕೂಡಾ ನನಗೊಂದು ಬಹುದೊಡ್ಡ ಒಗಟು. ಇವೆಲ್ಲವುಗಳ ಹೊರತಾಗಿಯೂ ನಿಸ್ಸಂಶಯವಾಗಿ ಮಹಾನ್ ಎನಿಸುವ ಅವರ ಸಾಹಿತ್ಯ ಸೃಷ್ಟಿಯ ಬಗ್ಗೆ ನನಗೆ ಅಪಾರ ಗೌರವವಿದೆ. ಹಾಗಾಗಿ ಅವರ ರಾಜಕೀಯವು ಬೇರೆಯಾಗಿದ್ದಿದ್ದರೆ, ಅವರ ಸಾಹಿತ್ಯವು ಬೇರೆಯಾಗಿರುತ್ತಿತ್ತೆ ಎಂದು ನನ್ನನ್ನು ಆಗಾಗ ಅಣಕಿಸಲಾಗುತ್ತದೆ.

ಶಿವಸುಂದರ್: ಕುವೆಂಪು ಕುರಿತು ಏನು? ರಹಮತ್ ತರೀಕೆರೆ ಅವರಂತ ವಿಮರ್ಶಕರು ಕುವೆಂಪು ಕಾದಂಬರಿಗಳ ಎಲ್ಲಾ ಮುಸ್ಲಿಂ ಪಾತ್ರಗಳು ವ್ಯಂಗ್ಯಚಿತ್ರಗಳಾಗಿವೆ ಎನ್ನುತ್ತಾರಲ್ಲ?

ಜಿ. ರಾಜಶೇಖರ್: ಅದು ಭಾಗಶಃ ನಿಜ. ಮುಸ್ಲಿಂ ಪಾತ್ರಗಳು ಅಣಕುಚಿತ್ರಗಳಾಗಿವೆ ಆದರೆ, ಅವು ನಾನು ಈಗಾಗಲೇ ಹೇಳಿದ ಲೇಖಕರ ಹಾಗೆ ಪ್ರಜ್ಞಾಪೂರ್ವಕವಾದ ನಂಬಿಕೆ ಮತ್ತು ರಾಜಕೀಯದ ಕಾರಣದಿಂದ ಅಲ್ಲ. ತೇಜಸ್ವಿಯವರ “ಡೇರ್ ಡೆವಿಲ್ ಮುಸ್ತಾಫ” ಹೊರತಾಗಿ, ಉಳಿದ ಮುಸ್ಲಿಮರು ಕೂಡಾ ಅಣಕುಚಿತ್ರಗಳೇ. ಆದರೆ, ಅದು ಮುಸ್ಲಿಮರ ಕುರಿತ ಭಯದಿಂದಾಗಿ ಅಲ್ಲ. ಬದಲಾಗಿ ಅದು ಒಂದು ರೀತಿಯ ಉಡಾಫೆಯ ಮೇಲು ಜಾತಿಯ ಪೂರ್ವಗ್ರಹವು ಅವರ ಕೃತಿಗಳಿಗೆ ವರ್ಗಾಯಿಸಿದ್ದಾಗಿದೆ. ನಾವು ಕುವೆಂಪು ಅವರ ಬಗ್ಗೆ ಮಾತನಾಡುವಾಗ, ಕುವೆಂಪು ಯಾವತ್ತೂ ಇತರ ಸಂಸ್ಕೃತಿಗಳಿಗೆ ಗೌರವ ತೋರಿದ್ದಾರೆ ಮತ್ತು ತಾನು ಸ್ವತಃ ಎಂದೂ ಗೋಮಾಂಸ ತಿನ್ನದೇ ಇದ್ದರೂ, ಸಹ ಮಾನವರು ಅನುಸರಿಸುವ ಆಹಾರವಾಗಿ ಗೋಮಾಂಸ ಸೇವನೆಯನ್ನು ಎತ್ತಿಹಿಡಿದಿದ್ದರು. ಇದನ್ನು ತೇಜಸ್ವಿಯವರ “ಅಣ್ಣನ ನೆನಪು” ಕೃತಿಯಲ್ಲಿ ಚೆನ್ನಾಗಿ ದಾಖಲಿಸಲಾಗಿದೆ. ಆದರೆ, ಕಾರಂತ ಮತ್ತು ಅಡಿಗರಿಗೆ ಜನರು ಒಂದು ಸಮುದಾಯ ಅಥವಾ ಸಮಾಜವಾಗಿ ಅರ್ಥವಾಗಿರಲಿಲ್ಲ. ಅವರಿಗೆ ಜನರೆಂದರೆ ಗುಂಪು ಅಥವಾ ಜನಸಂದಣಿ. ಆದರೆ, ಕೇವಲ ದೈಹಿಕ ಬಲವಿರುವ ಜನರು ರೋಡ್ ರೋಲರುಗಳಂತೆ ಬರುತ್ತಾರ ಮತ್ತು ನೆಲಸಮ ಸಮಾನತೆಯನ್ನು ತರುತ್ತಾರೆ ಎಂಬ ಭಯ ಅಡಿಗರಿಗೆ ಯಾವತ್ತೂ ಇತ್ತು. ಅದು ಬಿಟ್ಟರೆ ಅವರೆಲ್ಲರೂ ಉದಾರ ಪ್ರಜಾಪ್ರಭುತ್ವವಾದಿಗಳಾಗಿದ್ದರು. ನೀವು ಸ್ವಲ್ಪವೇ ಅವರ ಈ ಉದಾರತೆಯನ್ನು ಕೆರೆದು ನೋಡಿದರೆ ಸಮುದಾಯಗಳ ಕುರಿತ ಅವರ ಭಯ ಅವರನ್ನು ಕಾಡುತ್ತಿತ್ತು. ಈ ಮಿತಿಯನ್ನು ಮೀರಿ ಬೆಳೆದವರು ವಿಪರ್ಯಾಸ ಎಂಬಂತೆ ಲಂಕೇಶ್, ಅನಂತಮೂರ್ತಿ ಮತ್ತು ತೇಜಸ್ವಿ ಮುಂತಾದ ನವ್ಯ ಪರಂಪರೆ. ಲಂಕೇಶ್ ಅವರಿಗೆ ಜನರು ಒಂದು ಗುಂಪಾಗುವ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇತ್ತು. ಆದುದರಿಂದಲೇ ಅವರು ಯಾವತ್ತೂ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯರಾದವರನ್ನು ಸಂಶಯದಿಂದಲೇ ನೋಡುತ್ತಿದ್ದರು. ತನ್ನ ಸಮಾಜವಾದಿ ಆದರ್ಶಗಳು ಜನಪ್ರಿಯವಾಗಬೇಕಾದರೆ, ತಾನೂ ಜನಪ್ರಿಯ ಆಗುವಂತ ಚಟುವಟಿಕೆಗಳಲ್ಲಿ ತೊಡಗಬೇಕು ಎಂಬ ಆಳವಾದ ತಿಳುವಳಿಕೆಯನ್ನು ಲಂಕೇಶ್ ಹೊಂದಿದ್ದರು. ಅದನ್ನು ಅವರು ಪತ್ರಿಕೋದ್ಯಮದಲ್ಲಿಯೂ ಅನುಸರಿಸುತ್ತಿದ್ದರು. ಲಂಕೇಶ್ ಅವರಿಗೆ ಅವರ ಎಲ್ಲಾ ಕೊಡುಗೆಗಳ ಶ್ರೇಯವನ್ನು ಅವರ ಮರಣದ ಬಳಿಕ ಕೊಡಲಾದರೆ, ತೇಜಸ್ವಿಯವರನ್ನು ಅದೇ ಸ್ಥಾಪಿತ ಹಿತಾಸಕ್ತಿಗಳು, ಅವರ ಇತರ ಸಮಾಜವಾದಿ ಕೆಲಸಗಳನ್ನು ಹೊರತುಪಡಿಸಿ ಕೇವಲ “ಮೊಬೈಲ್ ನ್ಯಾಷನಲ್ ಜಿಯೋಗ್ರಾಫಿಕಾ” ಎಂಬಂತೆ ಮಾತ್ರ ನೆನಪಿಟ್ಟವು.

ಶಿವಸುಂದರ್: ಈಗಿನ ಕನ್ನಡ ರಾಷ್ಟ್ರೀಯತೆಯ ಮುಖ್ಯ ವಾಹಿನಿಯು ಹೆಚ್ಚು ಒಳಗೊಳ್ಳುವಿಕೆಯನ್ನು ಹೊಂದಿರುವ ತಮಿಳು ಅಥವಾ ತೆಲುಗು ರಾಷ್ಟ್ರಿಯತೆಗಿಂತ ಹೆಚ್ಚು ತಿಲಕ್ ಶ್ರೀ ಮಾದರಿಯ ಹಿಂದೂ ರಾಷ್ಟ್ರೀಯತೆಯಾಗಿದೆ ಎಂಬ ಆರೋಪವಿದೆ.

ಜಿ. ರಾಜಶೇಖರ್: ಕನ್ನಡ ರಾಷ್ಟ್ರೀಯತೆಯ ಆರಂಭ ಕಾಲದ ಮುಂಗೋಳಿಗಳಾಗಿದ್ದ ಗಳಗನಾಥ ಮುಂತಾದವರು ಹಿಂದೂ ಬ್ರಾಂಡಿನ ಕನ್ನಡ ರಾಷ್ಟ್ರೀಯತೆಯನ್ನು ಪ್ರಚಾರ ಮಾಡಿದರು ಎಂಬುದು ನಿಜ. ಅವರ “ಕನ್ನಡಿಗರ ಕರ್ನಾಟಕತೆ”ಯು ಇದಕ್ಕೆ ಸಾಕ್ಷಿ ಒದಗಿಸುತ್ತದೆ. ಆದರೆ, ಕನ್ಡಡ ರಾಷ್ಟ್ರೀಯತೆಯ ಮುಖ್ಯವಾಹಿನಿಯು ಗುಲ್ವಾಡಿ ವೆಂಕಟರಾಯ, ಎಂ.ಎಸ್. ಪುಟ್ಟಣ್ಣ ಮುಂತಾದವರ ಎಲ್ಲರನ್ನೂ ಒಳಗೊಂಡ ಕನ್ನಡ ರಾಷ್ಟ್ರೀಯತೆಯಾಗಿದೆ. ಆಲೂರು ವೆಂಕಟರಾಯರು ಕೂಡಾ ಎಲ್ಲರನ್ನೂ ಒಳಗೊಂಡ ಕನ್ನಡ ರಾಷ್ಟ್ರೀಯತೆಯ ದೃಷ್ಟಿಕೋನ ಹೊಂದಿದ್ದರು. ಆದರೆ, ಹಿಂದೂಯೇತರರು ಆರಾಮವಾಗಿರಬಹುದಾದ ಕನ್ನಡ ರಾಷ್ಟ್ರೀಯತೆಯನ್ನು ಕಟ್ಟುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ನಾನಿಲ್ಲಿ ಹೇಳಬೇಕು. ಈಗ ಪ್ರಬಲವಾಗಿರುವ ವಾಹಿನಿಯು ಹಿಂದೂಗಳಲ್ಲದ ಕನ್ನಡಿಗರ ಕುರಿತು ಅಸೂಕ್ಷ್ಮತೆ ಹೊಂದಿದೆ. ನಾವು ಪ್ರತೀ ವರ್ಷವೂ ಹೈದರಾಬಾದ್ ವಿಮೋಚನೆಯನ್ನು ಆಚರಿಸುತ್ತೇವೆ. ಆದರೆ, ತಥಾಕಥಿತ ಹೈದರಾಬಾದ್ ವಿಮೋಚನೆಯ ವೇಳೆ ಹಿಂದೂ ಗ್ಯಾಂಗುಗಳು ಆ ಪ್ರದೇಶದಲ್ಲಿ ಪೊಲೀಸರು ಮತ್ತು ನೆಹರೂ ಅವರ ಮಿಲಿಟರಿ ನೆರವಿನಿಂದ 50,000 ಮುಸ್ಲಿಮರ ಹತ್ಯಾಕಾಂಡ ನಡೆಸಿದವು ಎಂಬುದನ್ನು ಕನ್ನಡದ ಲೇಖಕರು ಮತ್ತು ಎಡದವರು ಅನುಕೂಲಶಾಸ್ತ್ರದಂತೆ ಹೇಗೆ ಮರೆತುಬಿಡಲು ಸಾಧ್ಯವಾಯಿತು ಎಂದು ನಾನು ಯಾವಾಗಲೂ ಅಚ್ಚರಿಪಡುತ್ತೇನೆ. ಕನ್ನಡಿಗನಾಗಿರಲು ಏನು ಬೇಕು? ಭಾರತೀಯನಾಗಿರಲು ಏನು ಬೇಕು? ಯಾವ ಬೆಲೆತೆತ್ತು, ರಕ್ತಪಾತ, ಸಂಕಷ್ಟ ಮತ್ತು ಹಿಂಸಾಚಾರದ ಮೂಲಕವೆ? ಈ ಪ್ರಶ್ನೆಗಳನ್ನು ಕನ್ನಡ ಲೇಖಕ ಎಂದೂ ಎದುರಿಸಿಲ್ಲ. ನಮ್ಮ ಲೇಖಕರ ಅಂತರರಾಷ್ಟ್ರೀಯತೆಯು ತುರ್ಕಿಯ ಓರಾನ್ ಪಾಮುಕ್ ಮತ್ತು ಅವರಂತ ಪ್ರಸಿದ್ಧ ಅಂತರರಾಷ್ಟ್ರೀಯ ಲೇಖಕರ ಬೌದ್ಧಿಕ ದಮನದ ವಿರುದ್ಧ ಧ್ವನಿ ಎತ್ತುವಂತೆ ಪ್ರೇರೇಪಿಸುತ್ತದೆ. ಅದೇ ಹೊತ್ತಿಗೆ ಅವರಿಗೆ ತಾವು ವಾಸಿಸುವ ಸ್ಥಳದ ಬಗ್ಗೆಯೇ ಸಂಪೂರ್ಣ ಅಜ್ಞಾನವಿದೆ. ಅದೇ ಹೊತ್ತಿಗೆ ನಮ್ಮ ಲೇಖಕರ ದೇಶೀಯತೆಯು ಅವರನ್ನು ಆಂತರಿಕ ಮತ್ತು ಬಾಹ್ಯ ಎರಡಕ್ಕೂ ಕಟ್ಟಿಹಾಕುತ್ತದೆ. ನನಗೆ ಎರಡರ ಕುರಿತೂ ದೊಡ್ಡ ಗೌರವವಿಲ್ಲ.

ಫಣಿರಾಜ್: ಇದು ನಮ್ಮನ್ನು ಒಂದು ಮುಖ್ಯ ಪ್ರಶ್ನೆಗೆ ತಂದು ನಿಲ್ಲಿಸುತ್ತದೆ. ಅದೆಂದರೆ, ಇಂದು ಜನರ ಜೀವನವನ್ನು ಅರ್ಥ ಮಾಡಿಕೊಳ್ಳಲು ಯಾವುದೇ ರೀತಿಯ ಸಾಮಾಜಿಕ ಆಕ್ಟಿವಿಸಂನ ಹಿನ್ನೆಲೆಯ ಅಗತ್ಯವಿದೆಯೇ ಎಂಬುದು. ನಿಮ್ಮ ಬರಹಗಳು ಕೂಡಾ ಕಾರಂತ ಮತ್ತು ಅಡಿಗರಿಂದ ಪ್ರೇರೇಪಿತವಾಗಿವೆ. ಆದರೆ, ನಿಮ್ಮ ಬರಹಗಳ ತೀಕ್ಷ್ಣತೆಯನ್ನು ಕಾರಂತ ಮತ್ತು ಅಡಿಗರ ಬರಹಗಳಲ್ಲಿ ಕಾಣಲು ಸಾಧ್ಯವಿಲ್ಲ. ಅದು ಸಾಮಾಜಿಕ ಚಳುವಳಿಗಳಲ್ಲಿ ನಿಮ್ಮ ಭಾಗವಹಿಸುವಿಕೆಯ ಕಾರಣದಿಂದ ಅಲ್ಲವೆ?

ಜಿ. ರಾಜಶೇಖರ್: ಸಾಹಿತ್ಯ ಮತ್ತು ಸಾಹಿತಿಯನ್ನು ನಾವು ಆ ರೀತಿಯಲ್ಲಿ ನೋಡಬಹುದು ಎಂದು ನನಗನಿಸುವುದಿಲ್ಲ. ನೀವೊಬ್ಬ ಅರ್ಥಶಾಸ್ತ್ರಜ್ಞನನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು. ನೀವು ಅದೇ ಮಾನದಂಡವನ್ನು ಒಬ್ಬ ಲೇಖಕನಿಗೆ ಅನ್ವಯಿಸಲು ಸಾಧ್ಯವಿಲ್ಲ. ನಾನು ಕಾರಂತ ಮತ್ತು ಅಡಿಗರ ರಾಜಕೀಯವನ್ನು ಒಪ್ಪುವುದಿಲ್ಲ. ಅವರ ಸಾಹಿತ್ಯವನ್ನು ಓದುವಾಗ ಅವರ ರಾಜಕೀಯವನ್ನು ಮರೆತುಬಿಡಲೂ ನನಗೆ ಸಾಧ್ಯವಿಲ್ಲ. ಆದರೆ, ಅದು ಅವರ ಕೃತಿಗಳನ್ನು ಮೆಚ್ಚದಂತೆ ನನ್ನನ್ನು ತಡೆಯುವುದಿಲ್ಲ. ವಾಸ್ತವದಲ್ಲಿ ನಾನು ಕನ್ನಡ ಸಮಾಜದ ವಿಮರ್ಶೆ ಮಾಡುವುದನ್ನು ಆಕ್ಟಿವಿಸ್ಟ್ ಬರಹಗಾರ ನಿರಂಜನರಿಗಿಂತ ಹೆಚ್ಚಾಗಿ ಕಾರಂತ ಮತ್ತು ಅಡಿಗರಿಂದ ಕಲಿತೆ.

ಶಿವಸುಂದರ್: ಏನಿದ್ದರೂ, ತೇಜಸ್ವಿ, ಅನಂತಮೂರ್ತಿ ಮತ್ತು ಲಂಕೇಶ್ ಅವರ ಆಕ್ಟಿವಿಸ್ಟ್ ಪಾತ್ರಗಳು ಕೂಡಾ ಯಾವತ್ತೂ ಅಣಕುಚಿತ್ರಗಳಂತೆಯೇ ಚಿತ್ರಿತವಾಗಿವೆ. ಉದಾರವಾದ, ಖಾಸಗೀಕರಣ, ಎಸ್ಇಝಡ್ ಮುಂತಾದ ಜಾಗತೀಕರಣದ ಅಸ್ತ್ರಗಳ ಹೊಸ ರೀತಿಯ ಹೊರತುಪಡಿಸುವಿಕೆಯನ್ನು ಅವು ಹಿಡಿದಿಡುವುದಿಲ್ಲ. ಲಂಕೇಶ್, ತೇಜಸ್ವಿ ಮತ್ತು ಅನಂತಮೂರ್ತಿ ಕೂಡ ಈ ಸಮಸ್ಯೆಯನ್ನು ತಮ್ಮ ಕೃತಿಗಳಲ್ಲಿ ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ? ಇಂತಾ ಹೊರತುಪಡಿಸುವಿಕೆಯ ಕುರಿತ ಅವರ ನಿಲುವು ದೋಷಪೂರಿತವಾಗಿದೆ ಎಂದು ನಿಮಗೆ ಅನಿಸುವುದಿಲ್ಲವೇ?

ಜಿ. ರಾಜಶೇಖರ್: ಒಬ್ಬ ಸೃಜನಶೀಲ ಲೇಖಕ ಸಮಾಜದ ಕುರಿತು ಹೆಚ್ಚು ಸೂಕ್ಷ್ಮತೆ ಮತ್ತು ವಿವೇಚನೆ ಹೊಂದಿರಬೇಕು ಎಂದಷ್ಟೇ ನಾನು ಹೇಳಬಲ್ಲೆ. ನಮ್ಮ ಕಾಲದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ನಾನು ಅರುಂಧತಿ, ಕಮೂ, ಕಾಫ್ಕ ಅಥವಾ ಮಾಂಟೋ ಮೇಲೆ ಕೂಡಾ ನಾನು ಹೆಚ್ಚು ಅವಲಂಬಿಸಿದ್ದೇನೆ ಎಂದೂ ಹೇಳಬಹುದು.

ಫಣಿರಾಜ್: ಇಂದಿನ ಹೊಸ ಲೇಖಕರು ತಾವು ಸಮಾಜಕ್ಕೆ ಏನನ್ನೂ ಕೊಡಬೇಕಾಗಿಲ್ಲ: ತಮ್ಮ ಸಾಹಿತ್ಯ ಕೃತಿಗಳು ಯಾವುದೇ ಸಾಮಾಜಿಕ ಬದ್ಧತೆಯಿಂದ ಸ್ವತಂತ್ರವಾಗಿರಬೇಕು ಎಂದು ಭಾವಿಸಿದ್ದಾರೆ. ನೀವು ಇಲ್ಲಿ ಏನು ಕಾಣುತ್ತೀರಿ?

ಜಿ. ರಾಜಶೇಖರ್: ಇಂದಿನ ಲೇಖಕರು ಹೆಚ್ಚು ಪ್ರತಿಭಾವಂತರು ಮತ್ತು ವೃತ್ತಿಪರರು. ಅವರು ಈ ಮಿತಿಯನ್ನು ಅರಿತುಕೊಂಡು ಅದನ್ನು ಮೀರಿ ಬೆಳೆಯುತ್ತಾರೆ ಎಂದು ಆಶಿಸುತ್ತೇನೆ.

ಶಿವಸುಂದರ್: ಇಂದು ಎಸ್. ಎಲ್. ಭೈರಪ್ಪನವರ “ಆವರಣ” ಕಾದಂಬರಿಯು ಅತ್ಯಂತ ಹೆಚ್ಚು ಮಾರಾಟವಾದ ಕೃತಿ ಎಂದು ಹೇಳಲಾಗುತ್ತದೆ. ಈ ಕುರಿತು ನಿಮಗೆ ಏನನಿಸುತ್ತದೆ?

ಜಿ. ರಾಜಶೇಖರ್: ಅಡ್ವಾಣಿ ರಥಯಾತ್ರೆಯಿಂದ ಪಡೆದ ಜನಪ್ರಿಯತೆಗೂ, “ಆವರಣ”ದ ಜನಪ್ರಿಯತೆಗೂ ಹೆಚ್ಚಿನ ವ್ಯತ್ಯಾಸ ನನಗೆ ಕಾಣುವುದಿಲ್ಲ. ನಾವು ಜನಪ್ರಿಯತೆಯನ್ನು ಸಾಹಿತ್ಯಿಕ ಅರ್ಹತೆಯೆಂದು ಗೊಂದಲಿಸಬಾರದು. ಹೀಗಿದ್ದರೂ ಜನಪ್ರಿಯತೆಯು ಒಂದು ತೀರಾ ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ. ಅದನ್ನು ಕುರಿತು ಎಡವು ಗಂಭೀರವಾಗಿ ಚಿಂತಿಸಬೇಕು. ಕರ್ನಾಟಕದಲ್ಲಿ ಎಡವು ತೀರಾ ಸರಳೀಕೃತವೂ ಮೊದಲೇ ಊಹಿಸಬಹುದಾದಂತದ್ದೂ, ಸುಲಭವಾಗಿ ತಳ್ಳಿಹಾಕಬಹುದಾದಂತದ್ದೂ ಆಗಿದೆ. ಇದು ಯುರೋಪಿನಲ್ಲಿ ಫ್ಯಾಸಿಸಮನ್ನು ಎದುರಿಸಿದ ಅಥವಾ ಚೆಟ್ಟಿನಾಡ್ ಮತ್ತು ಜಾರ್ಖಂಡ್‌ನಲ್ಲಿ ಸರಕಾರಿ ದಮನವನ್ನು ಎದುರಿಸಿದ ರೀತಿಯ ಎಡವಲ್ಲ. ಮೇಧಾ ಎದುರಿಸಿದ ಅಪಾಯವನ್ನು ಕೂಡಾ ಎದುರಿಸಿದಂತದ್ದೂ ಅಲ್ಲ. ಭೈರಪ್ಪ ಅವರು ಅವಲಂಬಿಸಿರುವುದು ನಕಲಿ. ಇದನ್ನು ಹೊರತಾಗಿ ಆ ಕಾದಂಬರಿಗೆ ತನ್ನಿಂದ ತಾನಾಗಿ ಯಾವ ಸಾಹಿತ್ಯಿಕ ಮೌಲ್ಯವೂ ಇಲ್ಲ. ಅದು ಕಾದಂಬರಿಯ ರೂಪಕ್ಕೆ ಹೊಂದುವಂತೆ ಕೂರಿಸಿಕೊಂಡ ಆರೆಸ್ಸೆಸ್ಸಿನ ಪ್ರಚಾರವಷ್ಟೇ. ಆದರೆ, ಕಾದಂಬರಿಯ ಪ್ರಕಾರಕ್ಕೆ ಅದರ ಪಾತ್ರಗಳು ಕಾಲ, ದೇಶ, ಜಾತಿ, ವರ್ಗ ಇತ್ಯಾದಿಗಳಲ್ಲಿ ಇರಬೇಕಾದ ಅಗತ್ಯವಿರುವುದರಿಂದ ಅವುಗಳೇ ಲೇಖಕರ ಮೇಲೆ ಸೇಡು ತೀರಿಸಿಕೊಂಡಿವೆ!

ಶಿವಸುಂದರ್: ಮೌಲ್ಯ ವ್ಯವಸ್ಥೆ, ವೈಯಕ್ತಿಕತೆ, ವೃತ್ತಿವಾದ, ಸಾಮಾಜಿಕ ಡಾರ್ವಿನ್‌ವಾದ, ವ್ಯಕ್ತಿಯ ಅಣುವೀಕರಣ, ನ್ಯಾಯ ಪ್ರಜ್ಞೆಯ ನಾಶ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಇಂದಿನ ಲೇಖಕರ ಮೇಲೆ ಜಾಗತೀಕರಣ ಮತ್ತು ಹಿಂದೂತ್ವದ ಪ್ರಭಾವವನ್ನು ಗಮನಿಸಿದ್ದೀರಾ?

ಜಿ. ರಾಜಶೇಖರ್: ಈ ಅಂಶಗಳು ಖಂಡಿತವಾಗಿಯೂ ಮಾಧ್ಯಮದ ಮೇಲೆ ಪರಿಣಾಮ ಬೀರಿವೆ. ಮುದ್ರಿತ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳೆರಡೂ ವೀಕ್ಷಕರು ಮತ್ತು ಓದುಗರ ವಿವೇಚನೆಯ ಮೇಲೆ ನಿತ್ಯವೆಂಬಂತೆ ದಾಳಿ ನಡೆಸುತ್ತಿವೆ. ಪತ್ರಿಕೆಗಳು ಕೂಡಾ ಇಲೆಕ್ಟ್ರಾನಿಕ್ ಮಾಧ್ಯಮಗಳು ನಿಗದಿಪಡಿಸಿದ ಕಳಪೆ ಗುಣಮಟ್ಟವನ್ನು ಅನುಸರಿಸುತ್ತಿವೆ. ಆದರೆ, ಈ ಮೌಲ್ಯಗಳು ಇಂದಿನ ನಮ್ಮ ಸೃಜನಶೀಲ ಲೇಖಕರ ತನಕ ಕೆಳಗಿಳಿದಿವೆ ಎಂದು ನನಗನಿಸುವುದಿಲ್ಲ. ಕನಿಷ್ಟ ಇಲ್ಲಿಯ ತನಕವಂತೂ ಇಲ್ಲ.

ಕೃಪೆ: ದಿ ಹಿಂದೂ


ಇದನ್ನೂ ಓದಿ: ಜಿ ರಾಜಶೇಖರ್‌ರವರಿಗೆ ಎಪ್ಪತ್ತೈದು; ರಾಜಶೇಖರರ ‘ತಿರುಕನ ಕನಸು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...