Homeಕರ್ನಾಟಕ‘ನಮ್ಮನ್ನು ನೀರಿಗೆ ತಳ್ಳಿದ್ದೇ ಸರ್ಕಾರದ ಸಾಧನೆ!’: ಪ್ರವಾಹದಲ್ಲಿ ನೊಂದ ಕಾರ್ಮಿಕರ ಅಳಲು

‘ನಮ್ಮನ್ನು ನೀರಿಗೆ ತಳ್ಳಿದ್ದೇ ಸರ್ಕಾರದ ಸಾಧನೆ!’: ಪ್ರವಾಹದಲ್ಲಿ ನೊಂದ ಕಾರ್ಮಿಕರ ಅಳಲು

- Advertisement -
- Advertisement -

“ರೋಡಿಗೆ ಬಂದು ಮೂರು ದಿನ ಆಯ್ತು. ಸರ್ಕಾರದವರು ಯಾರು ಕೇಳಲು ಬಂದಿಲ್ಲ. ಇಲ್ಲಿನ ಹೆದ್ದಾರಿ ಬಳಿಗೆ ಸಿಎಂ ಬಂದಿದ್ದರು. ಹೆದ್ದಾರಿಯಿಂದ ಸ್ವಲ್ಪ ಒಳಕ್ಕೆ ಬಂದಿದ್ದರೆ ನಮ್ಮ ಕಷ್ಟ ಅವರಿಗೆ ತಿಳಿಯುತ್ತಿತ್ತು. ರಸ್ತೆ ಬದಿಯ ಕಂಪನಿಗಳ ದೂರು ಕೇಳಿ, ಆನಂತರ ಹೊರಟುಬಿಟ್ಟರು. ಈಗ ನಮಗೆ ಊಟಕ್ಕೂ ದಿಕ್ಕಿಲ್ಲ. ನಮ್ಮನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ಓನರ್ ಎರಡು ಹೊತ್ತು ಊಟ ಕೊಡುತ್ತಿದ್ದಾರೆ. ಇಲ್ಲಿ ತುಂಬಿಕೊಂಡಿರುವ ನೀರು ಯಾವತ್ತು ಖಾಲಿಯಾಗುತ್ತೋ ಗೊತ್ತಿಲ್ಲ. ಈಗಲೂ ಸೊಂಟದವರೆಗೆ ನಿಂತಿದೆ. ಇಲ್ಲಿನ ಒಂದೊಂದು ಲೈನ್ ಮನೆಯಲ್ಲೂ ಮೂರ್ನಾಲ್ಕು ಮಂದಿ ವಾಸವಿದ್ದೆವು. ಪುಟ್ಟ ಮಕ್ಕಳಿವೆ. ಏನೋ ಸಾಧನೆ ಮಾಡಿದ್ದೇವೆ ಅಂತ ಸರ್ಕಾರ ಹೇಳಿಕೊಳ್ಳುತ್ತಿದೆ. ಅದೇನು ಸಾಧನೆ ಮಾಡಿದ್ದಾರೋ, ಬಡವರಿಗಾಗಿ ಏನು ಮಾಡಿದ್ದಾರೋ ಗೊತ್ತಿಲ್ಲ” ಎನ್ನುತ್ತಾರೆ ಕಲಬುರಗಿ, ಯಾದಗಿರಿ ಭಾಗದ ವಲಸೆ ಕಾರ್ಮಿಕರಾದ ಸಂಜೀವ್‌ಕುಮಾರ್, ಶರಣಬಸಪ್ಪ, ಚಾಮರಾಜಪ್ಪ.

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯ ಕಾರಣಕ್ಕೆ, ಅದರಲ್ಲೂ ಬೆಂಗಳೂರಿನ ಪೂರ್ವ ಭಾಗದಲ್ಲಿ ಇರುವ ಜನರು ಹೈರಾಣಾಗಿದ್ದಾರೆ. ತಗ್ಗು ಪ್ರದೇಶದಲ್ಲಿದ್ದ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಗಳ ಅಕ್ಕಪಕ್ಕದಲ್ಲಿ ನೆಲೆಸಿದ್ದ ಬಡವರ ಸ್ಥಿತಿಯಂತೂ ಶೋಚನೀಯವಾಗಿದೆ.

ಭಾನುವಾರ ರಾತ್ರಿ ಸುಮಾರು 140 ಮಿ.ಮೀ. ಮಳೆ ಸುರದಿತ್ತು. ಬೆಂಗಳೂರು ಪೂರ್ವ ಭಾಗದ ರಸ್ತೆಗಳು, ಬಡಾವಣೆಗಳು, ಕೆರೆಗಳು, ರಾಜಕಾಲುವೆಗಳು ಉಕ್ಕಿ ಹರಿದವು. ಮಹದೇವಪುರ ಭಾಗದ ಮಾರತಹಳ್ಳಿ, ಬೆಳ್ಳಂದೂರು, ಯಮಲೂರು, ಸರ್ಜಾಪುರ, ಎಚ್‌ಎಸ್.ಆರ್. ಲೇಔಟ್ ಸುತ್ತಮುತ್ತಲಿನ ಪ್ರದೇಶಗಳ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಮಳೆ ಎಂದರೆ ಸಾಕು, ಸಾಕಪ್ಪ ಎನ್ನುತ್ತಿದ್ದಾರೆ. ಇದರ ಜೊತೆಗೆ ಬಂಡವಾಳಶಾಹಿ ಕಂಪನಿಗಳು ಬೆಂಗಳೂರು ತೊರೆಯುವ ಮಾತನಾಡುತ್ತಿವೆ. ಯದ್ವಾತದ್ವಾ ಬೆಳೆದ ನಗರದ ಸಮಸ್ಯೆಗಳಿಗೆ ಈ ಕಂಪನಿಗಳ ಕೊಡುಗೆಯೆಷ್ಟು ಎಂಬುದು ಮತ್ತೊಂದು ಗಂಭೀರವಾದ ಸಂಗತಿ. ಶ್ರೀಮಂತರಿಗೆ ಬಂದೊದಗುವ ಕಷ್ಟಗಳಿಗೆ ಪ್ರಭುತ್ವದ ಸ್ಪಂದನೆಯಂತೂ ಇರುತ್ತದೆ. ಸರ್ಕಾರಗಳು ಕಂಪನಿಗಳ ಬೇಡಿಕೆಯನ್ನು ಈಡೇರಿಸುವ ಮಾತುಗಳನ್ನಾಡುತ್ತವೆ. ಆದರೆ ಈ ಭೀಕರ ಪ್ರಹಾದಲ್ಲಿ ನಲುಗಿ ಹೋಗಿರುವ ಬಡಪಾಯಿಗಳ ಕೂಗು ಕೇಳುವವರು ಯಾರು?

ತಾರಾಬಾಯಿ

ಬಿಬಿಎಂಪಿಯಲ್ಲಿ ಕಸ ನಿರ್ವಹಣೆ ಮಾಡುತ್ತಲೋ, ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡೋ, ಯಾವುದೋ ಕಂಪನಿಯಲ್ಲಿ ಸೆಕ್ಯುರಿಟಿಯಾಗಿಯೋ, ಹೌಸ್‌ಕೀಪಿಂಗ್ ಮಾಡುತ್ತಲೋ ಬೆಂಗಳೂರು ನಗರದ ಅಲ್ಲಲ್ಲಿ ಸಾವಿರಾರು ವಲಸೆ ಕಾರ್ಮಿಕರು ವಾಸವಿದ್ದಾರೆ. ತೂಬರಹಳ್ಳಿ, ಮುನ್ನೇಕೊಳಲು, ಬೆಳ್ಳಂದೂರು ಮೊದಲಾದ ಕಡೆ ಸಾವಿರಾರು ಕುಟುಂಬಗಳು ರಾಜಕಾಲುವೆಗಳ ಸಮೀಪದಲ್ಲಿ ಜೀವಿಸುತ್ತಿವೆ. ವಲಸೆ ಬಂದ ಕಾರ್ಮಿಕರನ್ನು ಕೊಳಚೆ ಪ್ರದೇಶಗಳಿಗೆ ದೂಡಿ, ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುವ ಬಲಾಢ್ಯರ ಜಾಲ ಒಂದು ಕಡೆಯಾದರೆ, ಪ್ರಕೃತಿ ವಿಕೋಪದಿಂದ ಎದುರಾದ ದುರಂತ ಮತ್ತೊಂದು ಕಡೆ.

May be an image of 3 people and body of water

ರಾಜಕಾಲುವೆಯ ನೀರು ಹೆದ್ದಾರಿಗೂ ನುಗ್ಗಿ, ಸಂಚಾರ ಅಸ್ತವ್ಯಸ್ತವಾಗಿದೆ. ದುರ್ವಾಸನೆ ಬರುತ್ತಿರುವ ನೀರಿನಲ್ಲಿಯೇ ವಾಹನಗಳು ಸಾಗಿ ಬೆಳ್ಳಂದೂರು ದಾಟಬೇಕಿದೆ. ಮಳೆಯಿಂದಾಗಿ ಅಲ್ಲಲ್ಲಿ ರಸ್ತೆಗಳು ಕಿತ್ತುಹೋಗಿವೆ. ಹೆದ್ದಾರಿಯ ಇಕ್ಕೆಲಗಳಲ್ಲಿ ದೊಡ್ಡದೊಡ್ಡ ಕಂಪನಿಗಳಿವೆ. ತಗ್ಗು ಪ್ರದೇಶಗಳಲ್ಲಿ ನೀರು ಈ ಕಂಪನಿಗಳ ಒಳಗೂ ನುಗ್ಗಿದೆ. ಪಂಪ್‌ಸೆಟ್ ಬಳಸಿ ನೀರನ್ನು ಹೊರಹಾಕುವ ಕೆಲಸ ನಿರಂತರವಾಗಿ ಸಾಗಿದೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ಪಂಪ್‌ಸೆಟ್ ಸದ್ದು ಮಾಡುತ್ತಲೇ ಇವೆ. ಆದರೆ ಅದೇ ಕಂಪನಿಗಳ ಹಿಂದೆ ಜೋಪಡಿಗಳಲ್ಲಿ ವಾಸವಿದ್ದವರ ಕಷ್ಟ ಕೇಳುವವರು ಯಾರು? ಸೊಂಟಮಟ್ಟದ ನೀರನ್ನು ಖಾಲಿಮಾಡಲು ಇವರ ಬಳಿ ಯಾವ ಪಂಪ್‌ಸೆಟ್ ಇದೆ?

ಬೆಳ್ಳಂದೂರಿನ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿದಾಗ ಕಂಡ ಸತ್ಯಗಳು ಅನೇಕ. ಯಾರಾದರೂ ನೆರವಿಗೆ ಧಾವಿಸುತ್ತಾರೋ, ಏನಾದರೂ ಪರಿಹಾರ ನೀಡುತ್ತಾರೋ ಎಂಬ ನಿರೀಕ್ಷೆಯಲ್ಲಿ ಕಾದಿದ್ದಾರೆ ಇಲ್ಲಿನ ಕಾರ್ಮಿಕರು. ರಾಯಚೂರು, ಕಲಬುರಗಿ, ಯಾದಗಿರಿ ಸೇರಿದಂತೆ ಪಶ್ಚಿಮ ಬಂಗಾಳದಿಂದ ಬಂದು ನೆಲೆಸಿರುವ ಹಲವಾರು ವಲಸೆ ಕುಟುಂಬಗಳು ಇಲ್ಲ್ಲಿವೆ. ಹರಿಯಾಣ ಗ್ರೂಪ್ ಅಪಾರ್ಟ್‌ಮೆಂಟ್ ಎದುರಿಗಿನ ರಾಜಕಾಲುವೆ ಬದಿಯಲ್ಲಿ ಸುಮಾರು 150 ಜೋಪಡಿಗಳಿದ್ದು, ಎಲ್ಲವೂ ಜಲಾವೃತವಾಗಿವೆ. ಕೈಗೆ ಸಿಕ್ಕಷ್ಟು ಬಟ್ಟೆ, ಪಾತ್ರೆ ಪಗಡೆಗಳನ್ನು ಜೋಪಡಿಯಿಂದ ಹೊರಗೆಳೆದುಕೊಂಡು ಬದುಕುಳಿದಿದ್ದಾರೆ ಕಾರ್ಮಿಕರು.

May be an image of 1 person, standing and body of water

ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ದಾನಿಗಳು ತಂದುಕೊಡುವ ಊಟ ಸೇವಿಸಿ ಜೀವನ ತಳ್ಳುತ್ತಿದ್ದಾರೆ. ಕೆಲಸ ಹುಡುಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದ್ದಬದ್ದ ದಾಖಲೆಗಳೆಲ್ಲ ನೀರು ಪಾಲಾಗಿವೆ. ರೇಷನ್ ಕಾರ್ಡ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್- ಯಾವೊಂದು ಈಗಿಲ್ಲ!

ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಗುಲ್ಬರ್ಗದ ತಾರಾಬಾಯಿ ತಮ್ಮ ಸಂಕಟ ವ್ಯಕ್ತಪಡಿಸುತ್ತಾ, “ಡಾಕ್ಯುಮೆಂಟು ಹೋದ್ವು, ಮನೆಯಲ್ಲಿಟ್ಟಿದ್ದ ದುಡ್ಡು ಹೋದ್ವು, ಎಲ್ಲಿಯಾದರೂ ಹೋಗಿ ಜೀವ ಕೊಡೋದು ಬಾಕಿ ಉಳಿದಿದೆ ಅಷ್ಟೇ. ಊಟ ಮಾಡಲು ಒಂದು ಬೋಗುಣಿ ಇಲ್ಲ, ತಂಬಿಗೆ ಇಲ್ಲ. ಹಾಸಿಕೊಳ್ಳಲು ಒಂದು ಬೆಡ್‌ಶೀಟ್ ಇಲ್ಲ. ನಿಮ್ಮಂಥವರಿಗೆ ಸಾಲ ವಾಪಸ್ ಕೊಡಬೇಕಿತ್ತು. ಹೊಟ್ಟೆಬಟ್ಟೆ ಕಟ್ಟಿ ದುಡ್ಡು ಇಟ್ಟಿದ್ವಿ. ಆ ದುಡ್ಡು ಹರಿದುಕೊಂಡು ಹೋಯ್ತು. ಕಿವಿಯೋಲೆ, ಕೊರಳ ಸರ, ಸಾಲ ತೀರಿಸಲು ಇಟ್ಟಿದ್ದ ಹಣ, ಡಾಕ್ಯುಮೆಂಟು ಎಲ್ಲಾ ಹೋದ್ವು. ಎಲ್ಲಾದರೂ ಕೆಲಸ ಕೇಳಲು ಹೋದರೆ ನಿಮ್ಮ ಡಾಕ್ಯುಮೆಂಟು ಎಲ್ಲಿವೆ ಅಂತ ಕೇಳ್ತಾರೆ. ನಾವು ಏನಂತ ಹೇಳಬೇಕು? ಒಂದ್ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕಿನ ಪಾಸ್‌ಬುಕ್- ಏನಂದ್ರೆ ಏನೂ ಇಲ್ಲ. ಬದುಕೋದು ಹೇಗೆ ಅಂತ ಯೋಚನೆ ಮಾಡುತ್ತಿದ್ದೇವೆ” ಎಂದರು.

May be an image of 1 person, body of water and tree

ಮುಂದುವರಿದು, “ಹನ್ನೆರಡು ವರ್ಷದ ಮೇಲಾಯಿತು. ಇಲ್ಲೇ ಇದ್ದೇವೆ. ಇಷ್ಟು ವರ್ಷದಲ್ಲಿ ಏನೂ ಆಗಿರಲಿಲ್ಲ. ನಮ್ ತಕ್ಲೀಫ್ ಯಾರ್ ನೋಡ್ತಾರೋ? ರೇಷನ್ನಾ, ಪೀಷನ್ನಾ ಎಲ್ಲಾ ಹಳ್ಳಕ್ಕೆ ಹರಿದುಕೊಂಡು ಹೋಯ್ತು. ಇತ್ತ ಮಕ್ಕಳನ್ನು ಹೊತ್ತುಕೊಂಡು ಬರೋದ್ರೊಳಗೆ ಅತ್ತ ಎಲ್ಲ ಹರಿದುಕೊಂಡು ಹೋಯ್ತು. ಮಕ್ಕಳನ್ನು ಹಿಡ್ಕೋಬೇಕಾ? ರೇಷನ್ ಹಿಡ್ಕೋಬೇಕಾ? ನಮ್ಮ ಮನೆಗೆ ರಾತ್ರಿ ಹತ್ತು ಗಂಟೆ ವೇಳೆಗೆ ನೀರು ಬಂತು. ಏನೋ ಸ್ವಲ್ಪ ಬರುತ್ತದೆ ಅಂತ ಸುಮ್ಮನಾದೆವು. ಆದರ ಬರುಬರುತ್ತಾ ಹೆಚ್ಚಾಯ್ತು. ಮೊದಲು ಮಕ್ಕಳನ್ನು ಎತ್ತಿಕೊಂಡು ಬನ್ನಿ ಎಂದೆ. ಮತ್ತೆ ಹುಟ್ಟೋಕೆ ಮಕ್ಕಳೇನು ಹುಲ್ಲು ಬೀಜನಾ? ಜೀವ ಬದುಕಿದರೆ ಸಾಕು ಅನಿಸಿತು” ಎಂದು ಆ ಹಿರಿಜೀವ ಮರುಗಿತು.

ಹನುಮಂತ

ಇದೇ ಭಾಗದಲ್ಲಿ ಕಳೆದ ಏಳು ವರ್ಷಗಳಿಂದ ವಾಸವಿರುವ, ಸೈಬರ್ ಕೆಫೆಯೊಂದನ್ನು ನಡೆಸುತ್ತಿರುವ ಪಶ್ಚಿಮ ಬಂಗಾಳದ ನೂರ್ ಇಸ್ಲಾಂ ಮಾತನಾಡಿ, “ಇದೇ ಮೊದಲ ಬಾರಿಗೆ ಈ ರೀತಿಯ ಅವಘಡ ನೋಡುತ್ತಿದ್ದೇನೆ. ಸಣ್ಣ ಸೈಬರ್ ಕೆಫೆ ನಡೆಸಿಕೊಂಡು ಇಲ್ಲಿ ಜೀವನ ನಡೆಸುತ್ತಿದ್ದೆ. ನಾವು ಇರುವ ಜಾಗಕ್ಕೂ ನೀರು ನುಗ್ಗಿದೆ. ಇಲ್ಲಿನ ಕಾರ್ಮಿಕರು ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ದಿಕ್ಕು ತೋಚದಾಗಿದ್ದಾರೆ. ಸರ್ಕಾರದಿಂದ ಯಾವುದೇ ಸಹಕಾರ ದೊರೆತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ನಮ್ಮ ಪರವಾಗಿ ಯಾವ ಬೊಮ್ಮಾಯೂ ಕೆಲಸ ಮಾಡಲ್ಲ, ಸಿಮ್ಮಾಯಿಯೂ ಮಾಡಲ್ಲ” ಎಂದು ಬೇಸರದಿಂದ ಮಾತನಾಡುತ್ತಾರೆ ಮತ್ತೊಬ್ಬ ಯಾದಗಿರಿ ಕಾರ್ಮಿಕ ಬಸವನಗೌಡ.

“ಇಲ್ಲಿಗೆ ಬಂದು ಹತ್ತು ವರ್ಷವಾಯಿತು. ಎಲ್ಲ ದಾಖಲೆಗಳು ನೀರುಪಾಲಾದವು. ಊರಿಗೆ ಹೋಗಲು ಮನಸ್ಸಿಲ್ಲ. ಇಲ್ಲಿ ಇದ್ದರೆ ಒಂದು ಹೊತ್ತು ಊಟನಾದರೂ ಕೊಡುತ್ತಾರೆ. ಊರಿಗೆ ವಾಪಸ್ ಹೋಗಿ ಏನ್ ಮಾಡಲಿ” ಎಂದು ಪ್ರಶ್ನಿಸುತ್ತಾರೆ ಅವರು.

May be an image of 3 people and body of water

ಮತ್ತೊಬ್ಬ ಕಾರ್ಮಿಕ ಹನುಮಂತ ಅವರು ವಿಷಾದ ಹಾಗೂ ವ್ಯಂಗ್ಯದಿಂದ ಮಾತನಾಡಿದರು. “ನಮ್ಮನ್ನು ಒಳ್ಳೆಯ ಜಾಗಕ್ಕೆ ತಂದು ಕೂರಿಸಿದ್ದಾರೆ. ಒಳ್ಳೆಯ ಸರ್ಕಾರವಿದು. ಇನ್ನು ಹತ್ತು ವರ್ಷ ಇವರೇ ಅಧಿಕಾರದಲ್ಲಿ ಇರಬೇಕು. ಇಲ್ಲಿ ಆರಾಮವಾಗಿ ಇದ್ದೇವೆ. ಒಂದು ತೊಟ್ಟು ವಿಷ ತಂದುಕೊಟ್ಟುಬಿಡಿ. ಇಲ್ಲೇ ಸತ್ತು ಹೋಗಿಬಿಡುತ್ತೇವೆ. ಬದುಕಬೇಕೋ ಸಾಯಬೇಕೋ ಅನಿಸಿಬಿಟ್ಟಿದೆ” ಎಂದು ಹೇಳಿದರು.

May be an image of 3 people and body of water

ಬೊಮ್ಮಾಯಿ ಸರ್ಕಾರ ’ಜನೋತ್ಸವ’ ಎಂದು ಮಾತನಾಡುತ್ತಿದೆ. ಏನೋ ಸಾಧನೆ ಮಾಡಿರುವುದಾಗಿ ಬಿಂಬಿಸಿಕೊಳ್ಳುತ್ತಿದೆ. ಇದರ ಕುರಿತು ಕಾರ್ಮಿಕ ಹನುಮಂತ ಅವರ ಬಳಿ ಕೇಳಿದರೆ, “ನೀವು ಆ ಭವ್ಯ ದೃಶ್ಯವನ್ನು ನೋಡಬಹುದು. ಇದಕ್ಕಿಂತ ಒಳ್ಳೆಯ ಕೆಲಸವನ್ನು ಇನ್ಯಾರು ಮಾಡಲು ಸಾಧ್ಯ? ಮನೆಯಲ್ಲೆಲ್ಲ ನೀರು ನಿಂತಿದೆ. ಮಕ್ಕಳು ಮರಿಯೆಲ್ಲ ರೋಡಿಗೆ ಬಂದು ಕುಳಿತ್ತಿದ್ದೇವೆ. ಇಷ್ಟು ಸಾಕು” ಎಂದು ಅಸಹಾಯಕ ನಗೆ ಬೀರಿದರು.

ಕಾರ್ಮಿಕ ಸಂಜೀವ್‌ಕುಮಾರ್ ಮಾತು ಮುಂದುವದರು. “ಮೇನ್ ರೋಡ್ ಕ್ಲಿಯರ್ ಮಾಡಿಬಿಟ್ಟು ಮುಖ್ಯಮಂತ್ರಿ ಹೋದರು. ದೊಡ್ಡವರಿಗೆ ಸಪೋರ್ಟ್ ಮಾಡುತ್ತಾರೆ. ದೊಡ್ಡೋರು ಕಂಪ್ಲೇಟ್ ಮಾಡಿದರು. ಭಯಪಟ್ಟು ಇಲ್ಲಿಗೆ ಬಂದರು. ನಮ್ಮಲ್ಲಿಗೆ ಯಾರು ತಾನೇ ಬರುತ್ತಾರೆ?” ಎಂದು ಪ್ರಶ್ನಿಸಿದರು. “ಬೇರೆ ಎಲ್ಲಿಯಾದರೂ ಉಳಿದುಕೊಳ್ಳೋಣ, ಬಾಡಿಗೆ ಮನೆಯನ್ನು ಹುಡುಕೋಣವೆಂದು ಹೋದರೆ, ಒಂದೊಂದು ಮನೆಗೆ ಹತ್ತರಿಂದ ಹದಿನೈದು ಸಾವಿರ ತಿಂಗಳ ಬಾಡಿಗೆ ಕೇಳುತ್ತಾರೆ. ಅಡ್ವಾನ್ಸ್ ಐವತ್ತು ಸಾವಿರ ಕೊಡಿ ಎನ್ನುತ್ತಾರೆ. ನನಗೆ ಹದಿನಾಲ್ಕು ಸಾವಿರ ಸಂಬಳ ಬರುತ್ತದೆ. ಹತ್ತು ಸಾವಿರ ಕೊಟ್ಟು ಜೀವನ ನಡೆಸಲು ಸಾಧ್ಯವಾ? ಇನ್ನು ಕೆಲವರ ಸಂಬಳ ಹತ್ತು, ಹನ್ನೆರಡು ಸಾವಿರ ಇದೆ. ಅಷ್ಟಾದರೂ ಐವತ್ತು ಸಾವಿರ ಅಡ್ವಾನ್ಸ್ ಎಲ್ಲಿ ತರಲಿ?” ಎಂದು ಕೇಳುತ್ತಾರೆ ಬೀದಿಗೆ ಬಿದ್ದ ಕಾರ್ಮಿಕ ಸಂಜೀವ್‌ಕುಮಾರ್.

ಸಂಜೀವ್ ಕುಮಾರ್

ಇಲ್ಲಿನ ಜನರ ಆರೋಗ್ಯ ಬಿಗಡಾಯಿಸಿದ್ದು, ಆರೋಗ್ಯ ಕಾರ್ಯಕರ್ತೆಯರನ್ನು ಕಳುಹಿಸಿ ಔಷಧಿ ವಿತರಣೆ ಮಾಡುತ್ತಿರುವ ದೃಶ್ಯಗಳು ಕಂಡುಬಂದವು. ರಾಜಕಾಲುವೆಗೆ ಅಂಟಿದ ದೊಡ್ಡದೊಡ್ಡ ಅಪಾರ್ಟ್‌ಮೆಂಟ್‌ಗಳಿವೆ. ಹರಿವ ನೀರಿಗೆ ಅಡ್ಡಲಾಗಿ ನಿಂತಿರುವ ಭಾರೀ ಜೊಂಡುಗಳನ್ನು ಬದಿಗೆ ಸರಿಸಲು ಕೆಲವು ಬುಲ್ಡೋಜರ್‌ಗಳನ್ನು ಸರ್ಕಾರ ಕಳಹಿಸಿದೆ. ಮಳೆ ನಿಂತರೂ ರಾಜಕಾಲುವೆಗಳಲ್ಲಿ ನೀರಿನ ಭೀಕರ ಹರಿವು ಕಡಿಮೆಯಾಗುವ ಸೂಚನೆ ಇಲ್ಲ. ಸುಸಜ್ಜಿತ ಮನೆಗಳನ್ನು ತೊರೆದು ಕೆಲವರು ಜಾಗ ಖಾಲಿ ಮಾಡುತ್ತಿದ್ದಾರೆ.

ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶಗಳ ಪರಿಸ್ಥಿತಿ ನೋಡಿದರೆ ಆತಂಕವಾಗುತ್ತದೆ. ಸಿಎಂ ಬೊಮ್ಮಾಯಿಯವರೇನೋ ಮುನ್ನೂರು ಕೋಟಿ ಪರಿಹಾರ ಬಿಡುಗಡೆ ಮಾಡುವ ಮಾತನಾಡಿದ್ದಾರೆ. ನಿಜದ ಸಂತ್ರಸ್ತರಿಗೆ ಪರಿಹಾರ ದೊರಕುತ್ತದೆಯೋ ಅಥವಾ ಈ ಹಿಂದೆ ಆದಂತೆಯೇ ಪ್ರವಾಹದ ಹೆಸರಲ್ಲಿ ಪ್ರಭಾವಿಗಳು ’ಗುಳುಂ’ ಮಾಡುತ್ತಾರೋ ನೋಡಬೇಕಿದೆ.


ಇದನ್ನೂ ಓದಿ: ಬೆಂಗಳೂರು ವಿ.ವಿ ಕ್ಯಾಂಪಸ್‌ನೊಳಗೆ ದೇವಸ್ಥಾನ ನಿರ್ಮಾಣದ ವಿರುದ್ಧ ಭಾರಿ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...