ಇಂಗ್ಲೇಂಡ್ ರಾಣಿ 2ನೇ ಎಲಿಜಬೆತ್ ಅವರ ನಿಧನದ ಹಿನ್ನಲೆಯಲ್ಲಿ ಅವರ “ಗೌರವದ ಸಂಕೇತವಾಗಿ” ಸೆಪ್ಟೆಂಬರ್ 11 ರಂದು ದೇಶದಾದ್ಯಂತ ಶೋಕಾಚರಣೆ ಮಾಡುವುದಾಗಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಘೋಷಿಸಿದೆ. ಇಷ್ಟೆ ಅಲ್ಲದೆ, ರಾಷ್ಟ್ರಧ್ವಜವನ್ನು ದೇಶದಾದ್ಯಂತ ಅರ್ಧಕ್ಕೆ ಹಾರಿಸಲಾಗುತ್ತದೆ ಎಂದು ಸರ್ಕಾರ ಹೇಳಿದ್ದು, ಭಾನುವಾರದಂದು ಯಾವುದೇ ಅಧೀಕೃತ ಮನರಂಜನೆ ಕಾರ್ಯಕ್ರಮ ಇರುವುದಿಲ್ಲ ಎಂದು ತಿಳಿಸಿದೆ.
ಸರ್ಕಾರ ಈ ನಿರ್ಧಾರವನ್ನು ಹಲವಾರು ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದಾರೆ. “ಬ್ರಿಟೀಷ್ ಗುಲಾಮಗಿರಿಯ ಸಂಕೇತ ಎಂದು ದೆಹಲಿಯ ರಾಜಪಥದ ಹೆಸರನ್ನು ಬದಲಾಯಿಸಿದ ಬಿಜೆಪಿ ಸರ್ಕಾರ, ಕೆಲವೇ ದಿನದಲ್ಲಿ ಬ್ರಿಟೀಷ್ ಗುಲಾಮಗಿರಿಗೆ ಇಳಿದಿದೆ” ಎಂದು ಸಾಮಾಜಿಕ ಹೋರಾಟಗಾರ್ತಿ ಕೌಶಲ್ಯ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಯುನೈಟೆಡ್ ಕಿಂಗ್‌ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್‌ನ ಹರ್ ಮೆಜೆಸ್ಟಿ ಕ್ವೀನ್ 2ನೇ ಎಲಿಜಬೆತ್ ಅವರು ಸೆಪ್ಟೆಂಬರ್ 8, 2022 ರಂದು ನಿಧನರಾದರು. ಅಗಲಿದ ಗಣ್ಯರಿಗೆ ಗೌರವ ಸೂಚಕವಾಗಿ ಭಾರತ ಸರ್ಕಾರವು ಸೆಪ್ಟೆಂಬರ್ 11 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ” ಎಂದು ಒಕ್ಕೂಟ ಸರ್ಕಾರದ ಪತ್ರಿಕಾ ಪ್ರಕಟಣೆ ಹೇಳಿದೆ.
ಇದನ್ನೂ ಓದಿ: ದೀರ್ಘಾವಧಿ ಬ್ರಿಟನ್ ಆಳಿದ ರಾಣಿ 2ನೇ ಎಲಿಜಬೆತ್ ನಿಧನ
ರಾಣಿ 2ನೇ ಎಲಿಜಬೆತ್ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
“ಅವರು ನಮ್ಮ ಕಾಲದ ಧೀಮಂತ ಮಹಿಳೆಯಾಗಿದ್ದು, ಸಹಾನುಭೂತಿಯ ವ್ಯಕ್ತಿತ್ವ ಹೊಂದಿದ್ದರು. ಅವರ ರಾಷ್ಟ್ರ ಮತ್ತು ಜನರಿಗೆ ಸ್ಪೂರ್ತಿದಾಯಕ ನಾಯಕತ್ವವನ್ನು ಒದಗಿಸಿದ್ದಾರೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.
ಎಲಿಜಬೆತ್ ಅವರು ಬ್ರಿಟನ್‌ನ ದೀರ್ಘಾವಧಿಯಾಗಿ ಆಳಿದ ರಾಣಿಯಾಗಿದ್ದಾರೆ. ಅವರ ಆರೋಗ್ಯ ಹದಗೆಟ್ಟ ನಂತರ ರಾಜಮನೆತನದ ಸದಸ್ಯರು ಬಲ್ಮೋರಲ್‌ನಲ್ಲಿರುವ ಕುಟುಂಬದ ಬೇಸಿಗೆ ನಿವಾಸಕ್ಕೆ ಧಾವಿಸಿದ್ದರು. ಬಕಿಂಗ್ಹ್ಯಾಮ್ ಅರಮನೆಯು ಹೊಸ ರಾಜ ಚಾರ್ಲ್ಸ್ ಮತ್ತು ರಾಜಮನೆತನದ ಇತರ ಸದಸ್ಯರು ರಾಣಿಯ ಅಂತ್ಯಕ್ರಿಯೆಯ ನಂತರ ಏಳು ದಿನಗಳವರೆಗೆ ವಿಸ್ತೃತ ಶೋಕಾಚರಣೆಯನ್ನು ಆಚರಿಸುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಮೂಲದ ಕಮಲಾ ಹ್ಯಾರಿಸ್; ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆಯಾದ ಕಥೆ!
ರಾಜ್ಯ ಮತ್ತು ಸರ್ಕಾರದ ಮುಖ್ಯಸ್ಥರು ಪಾಲ್ಗೊಳ್ಳುವ ಅಂತ್ಯಕ್ರಿಯೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಸೆಪ್ಟೆಂಬರ್ 19ರ ಸೋಮವಾರದಂದು ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.


