Homeದಲಿತ್ ಫೈಲ್ಸ್ಮಧ್ಯಪ್ರದೇಶ: ದಲಿತ ಬಾಲಕನನ್ನು ಥಳಿಸಿದ ಜೈನ ಪಂಡಿತ

ಮಧ್ಯಪ್ರದೇಶ: ದಲಿತ ಬಾಲಕನನ್ನು ಥಳಿಸಿದ ಜೈನ ಪಂಡಿತ

- Advertisement -
- Advertisement -

ಮಧ್ಯಪ್ರದೇಶದ ಸಾಗರ್‌ನಲ್ಲಿ ಜೈನ ದೇವಾಲಯದ ಪಂಡಿತರೊಬ್ಬರು 11 ವರ್ಷದ ದಲಿತ ಬಾಲಕನನ್ನು ಥಳಿಸಿರುವ ಘಟನೆ ನಡೆದಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಟ್ವಿಟ್ಟರ್ ಬಳಕೆದಾರರು ಈ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದಲಿತ ಬಾಲಕ ಸಾಗರದ ಜೈನ ದೇವಾಲಯದ ಹೊರಗೆ ನಿಂತಿದ್ದಾಗ ಕಳ್ಳತನದ ಆರೋಪ ಹೊರಿಸಲಾಗಿದೆ. ಪಂಡಿತ್ ರಾಜೇಶ್ ಜೈನ್ ಬಾಲಕನನ್ನು ಥಳಿಸಿ, ನಂತರ ಕಟ್ಟಿಹಾಕಿದ್ದಾರೆ. ಪೂಜೆಯ ತಟ್ಟೆಯಲ್ಲಿದ್ದ ಬಾದಾಮಿಯನ್ನು ತೆಗೆದು ಜೇಬಿನಲ್ಲಿ ಇಟ್ಟುಕೊಂಡಿದ್ದಾಗಿ ರಾಜೇಶ್ ಜೈನ್‌ ಆರೋಪಿಸಿದ್ದಾರೆ.

ನಗರದ ಮೋತಿ ನಗರ ಪೊಲೀಸ್ ಠಾಣೆಯಲ್ಲಿ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದಲಿತ ಮಕ್ಕಳ ಮೇಲೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಉತ್ತರಪ ಪ್ರದೇಶದ ಬಾರಾಬಂಕಿಯ ಟಿಕೈಟ್‌ನಗರದ ಇಚೋಲಿ ಗ್ರಾಮದಲ್ಲಿ 2ನೇ ತರಗತಿಯ ದಲಿತ ವಿದ್ಯಾರ್ಥಿನಿಯ ಮೇಲೆ ಬಿಸಿಯೂಟವನ್ನು ಶಾಲೆಯ ಪ್ರಾಂಶುಪಾಲ ಎಸೆದಿರುವ ಘಟನೆ ನಡೆದಿದೆ.

ಮಗುವಿನ ಮಣಿಕಟ್ಟು ಮತ್ತು ಕೈಗೆ ತೀವ್ರ ಸುಟ್ಟ ಗಾಯಗಳಾಗಿವೆ ಎಂಬ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಬಾರಾಬಂಕಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದರ್ಶ್ ಸಿಂಗ್ ಅವರು ತನಿಖೆಗೆ ಆದೇಶಿಸಿದ್ದಾರೆ. ವಿಕಲಚೇತನ ಬಾಲಕಿ ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ್ದು, ನಂತರ ಜಿಲ್ಲಾಧಿಕಾರಿಯವರು ಬಾರಾಬಂಕಿಯ ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಸಂತೋಷ್ ಪಾಂಡೆ ಅವರಿಗೆ ಸೂಚನೆ ನೀಡಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ಬಾರಾಬಂಕಿಯ ಹೆಚ್ಚುವರಿ ಎಸ್ಪಿ ಪೂರ್ಣೇಂದು ಸಿಂಗ್ ಪ್ರತಿಕ್ರಿಯಿಸಿದ್ದು, ಬಿಎಸ್ಎ ಸಿದ್ಧಪಡಿಸಿದ ವರದಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ನಿರ್ದೇಶನದ ಮೇರೆಗೆ ಪೊಲೀಸರು ಕಾರ್ಯನಿರ್ವಹಿಸುತ್ತಾರೆ ಎಂದಿದ್ದಾರೆ.

ಆಗಸ್ಟ್ 29 ರಂದು ಈ ಘಟನೆ ನಡೆದಿದೆ ಎಂದು ತನಿಖೆ ನಡೆಸುತ್ತಿರುವ ಬಿಎಸ್‌ಎ ಸಂತೋಷ್ ಪಾಂಡೆ ತಿಳಿಸಿದ್ದಾರೆ.

“ನಾವು ಊಟದ ಸಮಯದಲ್ಲಿದ್ದ 800 ವಿದ್ಯಾರ್ಥಿಗಳ ಹೇಳಿಕೆಗಳನ್ನು ತೆಗೆದುಕೊಂಡಿದ್ದೇವೆ. ಅದರ ವಿವರವಾದ ವರದಿಯನ್ನು ಮ್ಯಾಜಿಸ್ಟ್ರೇಟ್‌ಗೆ ಹಸ್ತಾಂತರಿಸಲಾಗುವುದು” ಎಂದು ಪಾಂಡೆ ಹೇಳಿದರು.

ಸೆಪ್ಟೆಂಬರ್ 3 ರಂದು ಮಹಿಳೆಯೊಬ್ಬರು ದೂರು ನೀಡಿದ್ದು, “ಮಧ್ಯಾಹ್ನದ ಊಟವನ್ನು ಬಡಿಸುವಾಗ ಸರ್ಕಾರಿ ಶಾಲೆಯ ಪ್ರಾಂಶುಪಾಲರು ನನ್ನ ಮಗಳ ಕೈಗಳನ್ನು ಸುಟ್ಟುಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ.

ರಾಜಸ್ಥಾನ: ದಲಿತ ಬಾಲಕನ ಶವ ಗಣಿಗಾರಿಕೆಯ ಹೊಂಡದಲ್ಲಿ ಪತ್ತೆ

17 ವರ್ಷದ ದಲಿತ ಬಾಲಕ ನಾಪತ್ತೆಯಾದ ಒಂದು ದಿನದ ನಂತರ ಶವವಾಗಿ ಸಿಕ್ಕಿದ್ದಾನೆ. ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಮಳೆ ನೀರಿನಿಂದ ತುಂಬಿದ ಗಣಿಗಾರಿಕೆಯ ಹೊಂಡದಲ್ಲಿ ಆತನ ಶವ ಸೆಪ್ಟೆಂಬರ್ 9ರಂದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶವವಾಗಿ ಪತ್ತೆಯಾಗಿರುವ ಬಾಲಕನ ಸಹಪಾಠಿಯ ತಂದೆ ಶಾಲಾ ಅಧಿಕಾರಿಗಳಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ. ತನ್ನ ಮಗಳಿಗೆ ಈ ಹುಡುಗ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಶಾಲೆಗೆ ದೂರು ನೀಡಿದ ಬಳಿಕ ಈ ಘಟನೆಯಾಗಿದೆ.

ಶುಕ್ರವಾರ ಶವ ಪತ್ತೆಯಾದ ನಂತರ, ಕುಟುಂಬ ಸದಸ್ಯರು ಆತನ ಶವವನ್ನು ಶಾಲೆಯ ಹೊರಗೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಈ ಬಾಲಕನಿಗೆ ಶಾಲಾ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಸರ್ಕಲ್ ಆಫೀಸರ್, ಬೀವರ್ ಸುಮಿತ್ ಮೆಹ್ರೇದಾ ತಿಳಿಸಿದ್ದಾರೆ.

ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಬಾಲಕನ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸಾಮಾಜಿಕ ನ್ಯಾಯಕ್ಕಾಗಿ :
    ತೊಂದರೆ ಅಂದರೆ, ಜೀವಹಾನಿ, ಮಾನಹಾನಿ, ದೈಹಿಕ ಹಲ್ಲೆ ಮಾಡಿದವರನ್ನು ಒಮ್ಮೆ ಸಾಭಿತಾದರೆ ನಿರ್ಣಯಿಸಿದ ವ್ಯಕ್ತಿ, ಗುಂಪು, ಯಾವುದೇ ಶ್ರೇಣಿಯಲ್ಲಿದ್ದರೂ ಅದೇ ತೆರನಾದ ಶಿಕ್ಷೆಯನ್ನು ಸಾರ್ವಜನಿಕವಾಗಿ ನೀಡದ ಹೊರತು ಈ ವ್ಯವಸ್ಥೆ ಬದಲಾಗದು. ಮಾತ್ರವಲ್ಲ ಯಾವುದೇ ರೀತಿಯ ಹಲ್ಲೆ ನಡೆಸುವ ಮುಂಚೆ ಯೋಚಿಸಲು ಶುರುಮಾಡುತ್ತಾರೆ.

    ಆಗ ಮಾತ್ರ ಬದಲಾವಣೆಗಳನ್ನು ನೋಡಬಹುದೇ ಹೊರತು ಅಲ್ಲಿಯವರೆಗೂ ಇಂತಹ ಅಮಾನವೀಯ ಕೃತ್ಯಗಳು ಜರುಗುತ್ತಲೇ ಇರುತ್ತವೆ.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...