Homeಕರ್ನಾಟಕಸುರತ್ಕಲ್‌ ಟೋಲ್‌ ವಿರೋಧಿ ಹೋರಾಟಗಾರರಿಗೆ ತಡರಾತ್ರಿ ನೋಟಿಸ್‌: ‘ಜೈಲು ಸೇರಿದರೂ ಪ್ರತಿಭಟನೆ ನಿಲ್ಲಲ್ಲ’- ಮುನೀರ್‌ ಎಚ್ಚರಿಕೆ

ಸುರತ್ಕಲ್‌ ಟೋಲ್‌ ವಿರೋಧಿ ಹೋರಾಟಗಾರರಿಗೆ ತಡರಾತ್ರಿ ನೋಟಿಸ್‌: ‘ಜೈಲು ಸೇರಿದರೂ ಪ್ರತಿಭಟನೆ ನಿಲ್ಲಲ್ಲ’- ಮುನೀರ್‌ ಎಚ್ಚರಿಕೆ

ನೋಟಿಸ್‌‌ನಲ್ಲಿ ನಮ್ಮನ್ನು ಏಕವಚನದಲ್ಲಿ ಕರೆಯಲಾಗಿದೆ, ಕ್ರಿಮಿನಲ್ ರೀತಿ ಪದಗಳನ್ನು ಬಳಸಲಾಗಿದೆ: ಮುನೀರ್‌ ಕಾಟಿಪಳ್ಳ

- Advertisement -
- Advertisement -

ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟಗಾರರ ಮನೆಗಳಿಗೆ ಪೊಲೀಸರು ತಡರಾತ್ರಿ ಭೇಟಿ ನೀಡಿ ನೋಟಿಸ್‌ ನೀಡಿರುವ ಘಟನೆ ನಡೆದಿದೆ. ಈ ಕುರಿತು ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಿ.ಕೆ.ಇಮ್ಮಿಯಾಝ್, ಪ್ರತಿಭಾ ಕುಳಾಯಿ, ರಾಘವೇಂದ್ರ ರಾವ್ ಸೇರಿದಂತೆ ಹಲವು ಮುಖಂಡರಿಗೆ ಸುರತ್ಕಲ್ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಈಗಾಗಲೇ ಸಭೆ ನಡೆಸಿ ಹೋರಾಟ ಹಿಂಪಡೆಯುವಂತೆ ಸೂಚಿಸಲಾಗಿತ್ತು. ಆದರೆ, ಅದನ್ನು ಹೋರಾಟ ಸಮಿತಿ ತಿರಸ್ಕರಿಸಿದೆ. ನೋಟಿಸ್‌ ತಲುಪಿದ ಕೂಡಲೇ ಡಿಸಿಪಿ ಅವರ ಕಚೇರಿಗೆ ಭೇಟಿ ನೀಡಿ ಹೋರಾಟ ಮುಂದುವರಿಸುವುದಿಲ್ಲ ಎಂದು ಮುಚ್ಚಳಿಗೆ ಬರೆದು ಕೊಡುವಂತೆ ನೋಟಿಸ್‌ನಲ್ಲಿ ಹೇಳಿರುವುದಾಗಿ ‘ವಾರ್ತಾಭಾರತಿ’ ಉಲ್ಲೇಖಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತಡರಾತ್ರಿ ನೋಟೀಸ್‌ ಕುರಿತು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಮಧ್ಯರಾತ್ರಿ ಪೊಲೀಸರನ್ನು ಹೋರಾಟಗಾರರ ಮನೆಗಳಿಗೆ ಕಳುಹಿಸುತ್ತೀರಾ ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತರೆ? ಮಹಿಳಾ ಹೋರಾಟಗಾರರ ಮನೆಗೂ ಕಾಳರಾತ್ರಿ ‘ಗಂಡಸು’ ಪೊಲೀಸರ ದಂಡು! ಅದಕ್ಕೆಲ್ಲ ಜನ ಹೆದರುವ ಕಾಲ ಮುಗಿದಿದೆ. ತುಳುನಾಡಿನ ಮುಂದೆ ಬೆತ್ತಲಾಗುತ್ತಿದ್ದೀರಿ. ಬಿಜೆಪಿಗರೇ ಎಚ್ಚರ” ಎಂದು ಗುಡುಗಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, “ನನ್ನ ಮನೆಗೆ ನಿನ್ನೆ ತಡರಾತ್ರಿ ಬಂದ ಪೊಲೀಸರ ತಂಡ ಸಮನ್ಸ್ ನೀಡಿದೆ. ಮಂಗಳೂರು ಕಮೀಷನರ್ ಕಚೇರಿಯಿಂದ ಕಳುಹಿಸಿದ ಸಮನ್ಸ್ ನೋಟಿಸ್‌‌ನಲ್ಲಿ ನಮಗೆ ಏಕವಚನ ಬಳಸಲಾಗಿದೆ. ಕ್ರಿಮಿನಲ್ ರೀತಿ ಪದಗಳನ್ನು ಬಳಸಿ ಸಂಬೋಧಿಸಲಾಗಿದೆ. ಇರಲಿ. ಬಿಜೆಪಿ ಪೊಲೀಸರ ನೀತಿಯೇ ಹಾಗಿರಬಹುದು” ಎಂದಿದ್ದಾರೆ.

“ಹೆಚ್ಚು ಕಮ್ಮಿ ಐವತ್ತಕ್ಕೂ ಹೆಚ್ಚು ಜನರಿಗೆ ನೋಟಿಸ್‌ ನೀಡಲಾಗಿದೆ. ಹೋರಾಟಕ್ಕೆ ಸಂಬಂಧ ಪಡದ ಕೆಲವು ಅಮಾಯಕರಿಗೂ ನೋಟಿಸ್‌‌ ಬಂದಿದೆ. ಕ್ರಿಮಿನಲ್‌ಗಳ ರೀತಿ ಮನೆಗಳನ್ನು ಪೊಲೀಸರು ಸುತ್ತುವರಿದಿದ್ದಾರೆ. ನಾವೀಗ (ಹೋರಾಟ ಸಮಿತಿ) ದೃಢ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ಕಾನೂನು ವಿಭಾಗದ ಜವಾಬ್ದಾರಿ ಹೊತ್ತಿರುವ ಜನಪರ ವಕೀಲರ ತಂಡದೊಂದಿಗೆ ಸಭೆ ನಡೆಸಿ ಕೆಲವು ತೀರ್ಮಾನಕ್ಕೆ ಬಂದಿದ್ದೇವೆ” ಎಂದು ತಿಳಿಸಿದ್ದಾರೆ.

“ಯಾವುದೇ ಕಾರಣಕ್ಕೂ ಮುಚ್ಚಳಿಕೆ ಬರೆದುಕೊಡುವುದಿಲ್ಲ. ವಾರಂಟ್ ಹೊರಡಿಸಿ ಬಂಧಿಸುವುದಾದರೆ ತುಳುನಾಡಿನ ಜನ ಸಾಮಾನ್ಯರ ಪರವಾಗಿ ಜೈಲಿಗೆ ಹೋಗಲು ಸಿದ್ದರಾಗುವುದು. ಅಕ್ಟೋಬರ್ 18ರ ಅಕ್ರಮ ಟೋಲ್ ಸ್ಥಗಿತ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ನಾವು ಜೈಲು ಸೇರಿದರೂ ಅಂದು ಹೋರಾಟ ನಡೆಯುತ್ತದೆ. ನೂರಾರು ಸಂಘಟನೆ, ಮುಖಂಡರ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿರುವ ಈ ಮಹತ್ವದ ಹೋರಾಟಕ್ಕೆ ನಾಯಕರುಗಳ ಕೊರತೆ ಇಲ್ಲ. ಸಂಚಾಲಕ ಮುನೀರ್ ಕಾಟಿಪಳ್ಳ ಜೈಲು ಸೇರಿದರೆ ನೂರಾರು ಜನ ಆ ಸ್ಥಾನವನ್ನು ತುಂಬಲು ಸಿದ್ದರಿದ್ದಾರೆ.‌ ನಮ್ಮ ಮುತ್ತಿಗೆ ಪ್ರತಿಭಟನೆ ಅಂದು ನಿಗದಿಯಂತೆ ಶಾಂತಿಯುತವಾಗಿ ನಡೆಯಲಿದೆ. ಯಾರೂ ಪ್ರಚೋದನೆಗೆ ಒಳಗಾಗಬಾರದು” ಎಂದು ಮನವಿ ಮಾಡಿದ್ದಾರೆ.

“ನಮ್ಮ ಮೇಲಿನ ಬಿಜೆಪಿ ಸರಕಾರದ ದಾಳಿಯ ಸಂದರ್ಭದಲ್ಲಿ ನಮ್ಮ ಹೋರಾಟದ ಜೊತೆ ತುಳುನಾಡಿನ ಜನತೆ ನಿಲ್ಲಬೇಕು. ಧ್ವನಿಯನ್ನು ಮತ್ತಷ್ಟು ಎತ್ತರಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಗುಲಾಮಗಿರಿಯ ಸಂಕೇತವಾಗಿರುವ ಟೋಲ್ ಗೇಟ್ ಸುಲಿಗೆ ಮುಂದುವರಿಯಬಾರದು. ಮುಂದುವರಿಯಲು ಅವಕಾಶಕೊಡುವುದಿಲ್ಲ ಎಂದು ಒಕ್ಕೊರಲಿನಿಂದ ಗಟ್ಟಿಯಾಗಿ ಬಿಜೆಪಿ ಶಾಸಕ, ಸಂಸದ ಶಾಸಕರುಗಳಿಗೆ ಹೇಳುವಂತಾಗಬೇಕು” ಎಂದು ಒತ್ತಾಯಿಸಿದ್ದಾರೆ.

“ಯಾವುದೇ ಕಾರಣಕ್ಕೂ ಹೋರಾಟ ಸೋಲುವುದಿಲ್ಲ. ಅಕ್ಟೋಬರ್ 18 ರಂದು ಟೋಲ್ ಸಂಗ್ರಹ ಅಂತ್ಯಗೊಳ್ಳಲೇಬೇಕು. ನಮ್ಮ ಮೇಲೆ ಪೊಲೀಸ್ ದೌರ್ಜನ್ಯ ಹರಿಯಬಿಟ್ಟು ಬಿಜೆಪಿ ಶಾಸಕರುಗಳು ಬೀಗುವುದು ಬೇಡ. ಜನ ಆಕ್ರೋಶಗೊಂಡಿದ್ದಾರೆ. ಅವರು ನಿಮಗೆ ಸರಿಯಾಗಿ ಉತ್ತರಿಸುತ್ತಾರೆ” ಎಂದು ಎಚ್ಚರಿಸಿದ್ದಾರೆ.

ಪೊಲೀಸ್ ಹಾಗೂ ಸರ್ಕಾರದ ನಡೆಯನ್ನು ಖಂಡಿಸಿರುವ ಶಿಕ್ಷಣತಜ್ಞ ಎಂ.ಜಿ.ಹೆಗ್ಡೆ, “ಲೋಕಸಭೆಯಲ್ಲಿ ಇಲಾಖೆಯ ಮಂತ್ರಿಯವರು ಟೋಲ್ ಗೇಟ್ ಮುಚ್ಚಲಾಗುವುದು ಎಂದಿದ್ದರು. ಅದು ಲೋಕಸಭೆಯ ಕಡತದಲ್ಲಿ ದಾಖಲಾಗುತ್ತದೆ. ಅಂದಿನಿಂದಲೇ ಟೋಲ್ ನಿಲ್ಲಬೇಕಿತ್ತು. ರಾಜ್ಯದ ವಿಧಾನ ಪರಿಷತ್ ಹಾಗೂ ವಿಧಾನಸಭೆಯಲ್ಲಿ ರಾಜ್ಯದ ಮಂತ್ರಿಗಳೂ ಟೋಲ್ ಗೇಟ್ ನಿಯಮ ಬಾಹಿರ, ತೆಗೆಯಲಾಗುವುದು ಎಂದು ಹೇಳುತ್ತಾರೆ. ಅದೂ ಕಡತದಲ್ಲಿ ದಾಖಲಾಗುತ್ತದೆ. ಹಾಗಾದರೆ ಈ ದೇಶದಲ್ಲಿ ಲೋಕಸಭೆ, ವಿಧಾನಸಭೆಯಲ್ಲಿ ಘೋಷಿಸಿದ ವಿಷಯಗಳನ್ನು ನಂಬುವಂತಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

“ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜಿಲ್ಲಾಧಿಕಾರಿಗಳೂ ಅದನ್ನು ತೆಗೆಯಲು ಆದೇಶವಾಗಿದೆ ಅನ್ನುತ್ತಾರೆ. ಇಷ್ಟೆಲ್ಲಾ ಆದ ಮೇಲೆ ಟೋಲ್ ಗೇಟ್ ವಸೂಲಿ ನಿಲ್ಲಿಸಿ ಅನ್ನುವ ಹೋರಾಟ ಸಮಿತಿ ಮುಖಂಡರ ಮನೆಗೆ ಮಧ್ಯರಾತ್ರಿ ನೋಟೀಸ್‌‌ ನೀಡುತ್ತಾರೆ” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿರಿ: ಯುಪಿ: ಮುಸ್ಲಿಮರಲ್ಲಿ ಭಯ ಹರಡಿಸಲೆಂದೇ ದುಷ್ಕರ್ಮಿಗಳ ಗುಂಪು ಮುಸ್ಲಿಂ ವ್ಯಕ್ತಿಯನ್ನು ಕೊಂದಿತ್ತು: ‘ದಿ ವೈರ್‌’ ವರದಿ

ತಡರಾತ್ರಿ ನೋಟೀಸ್‌ಗೆ ನಳಿನ್‌ಕುಮಾರ್‌ ಕಟೀಲ್‌ ವಿರೋಧ

ತಡರಾತ್ರಿ ನೀಡಿದ ನೋಟೀಸ್‌ಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಂಸದ ನಳೀನ್‌ಕುಮಾರ್‌ ಕಟೀಲ್‌, “ಸುರತ್ಕಲ್ ಟೋಲ್ ಗೇಟ್ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿ ಹೋರಾಟಗಾರರ ಮನೆಗೆ ರಾತ್ರಿ ತೆರಳಿ ಪೊಲೀಸರು ನೋಟಿಸ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಹಾಗೆ ಒಂದು ವೇಳೆ ಅಧಿಕಾರಿಗಳು ರಾತ್ರಿ ತೆರಳಿ ಹೋರಾಟಗಾರರ ಮನೆಗೆ ತೆರಳಿ ನೋಟಿಸ್‌ ನೀಡಿದರೆ ಅದು ಸರಿಯಲ್ಲ” ಎಂದಿದ್ದಾರೆ.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಂಸದರು, “ಕೆಲವೊಂದು ತಾಂತ್ರಿಕ ಕಾರಣಗಳಿಂದ ಸುರತ್ಕಲ್ ಟೋಲ್ ಗೇಟ್ ತೆರವು ಕಾರ್ಯ ವಿಳಂಬವಾಗಿದೆ. ಈ ಟೋಲ್ ಗೇಟ್ ತೆರವುಗೊಳಿಸುವ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತುಕತೆ ನಡೆದಿದೆ. ಆದರೆ ಟೋಲ್ ಗೇಟ್ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುವ ಯಾವ ಉದ್ದೇಶ ನಮಗಿಲ್ಲ. ಹೋರಾಟಗಾರರ ಹೋರಾಟಕ್ಕೆ ನಮ್ಮ ವಿರೋಧವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...