Homeಕರ್ನಾಟಕಅರಸೀಕೆರೆ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ದುರ್ಮರಣ

ಅರಸೀಕೆರೆ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ದುರ್ಮರಣ

- Advertisement -
- Advertisement -

ಅರಸೀಕೆರೆ ತಾಲ್ಲೂಕಿನ ಬಾಣಾವರ ಬಳಿ (ಶಿವಮೊಗ್ಗ–ಬೆಂಗಳೂರು ರಸ್ತೆ) ಶನಿವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಟ್ಟು 9 ಜನರು ಮೃತಪಟ್ಟಿದ್ದಾರೆ.

ಸಾವಿಗೀಡಾದವರಲ್ಲಿ ನಾಲ್ವರು ಮಹಿಳೆಯರು, ಒಬ್ಬ ಪುರುಷ ಹಾಗೂ ನಾಲ್ವರು ಮಕ್ಕಳು ಸೇರಿದ್ದಾರೆ. ಮೃತರನ್ನು ಹಾಸನ ಜಿಲ್ಲೆಯ ಲೀಲಾವತಿ ರಮೇಶ್‌ (50), ಚೈತ್ರಾ ಶ್ರೀನಿವಾಸ (33), ವಂದನಾ ಗಂಗಣ್ಣ (20), ಭಾರತಿ ದೊಡ್ಡಯ್ಯ (50), ದೊಡ್ಡಯ್ಯ ಪಾಪಣ್ಣ (60), ಸಂಪತ್‌ (10), ಡಿಂಪಿ (12), ತನ್ಮಯಿ (10), ಧ್ರುವ (2) ಎಂದು ಗುರುತಿಸಲಾಗಿದೆ.

ಟೆಂಪೋ ಟ್ರಾವೆಲ್ಲರ್‌ನಲ್ಲಿ 14 ಜನರು ಪ್ರಯಾಣಿಸುತ್ತಿದ್ದು, 9 ಜನರು ಮೃತಪಟ್ಟಿದ್ದಾರೆ. ಉಳಿದ ಐವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಬಸ್ ಚಾಲಕ ಸೇರಿದಂತೆ ಬಸ್‌ನಲ್ಲಿದ್ದ ಐವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹಾಸನದ ಹಿಮ್ಸ್‌ಗೆ ದಾಖಲಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್‌ ತಿಳಿಸಿದ್ದಾರೆ.

ಹಾಲಿನ ಟ್ಯಾಂಕರ್‌ ಚಾಲಕ ಡೈವರ್ಸನ್‌ ಫಲಕವನ್ನು ಗಮನಿಸಿದೇ, ತಪ್ಪು ದಾರಿಯಲ್ಲಿ ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಹಳ್ಳಿಕೆರೆ ಗ್ರಾಮದ ಹದಿನಾಲ್ಕು ಮಂದಿ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ತೆರಳಿ, ಅಲ್ಲಿಂದ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದು ಗ್ರಾಮಕ್ಕೆ ತೆರಳುತ್ತಿದ್ದರು.

ಟಿಟಿ ವಾಹನದಲ್ಲಿ 14 ಮಂದಿ ಧರ್ಮಸ್ಥಳಕ್ಕೆ ತೆರಳಿದ್ದರು. ಮಂಜುನಾಥನಿಗೆ ಹರಕೆ ಸಲ್ಲಿಸಲೆಂದು ಹೋಗಿದ್ದವರು ದರ್ಶನ ಮಾಡಿಕೊಂಡು ಅಲ್ಲಿಂದ ವಾಪಸ್ ಆಗಿದ್ದರು. ಇನ್ನೇನು ಐದಾರು ಕಿಲೋಮೀಟರ್​ನಲ್ಲಿ ಮನೆಗೆ ಸೇರುವ ಮೊದಲೇ ಈ ದುರಂತ ಸಂಭವಿಸಿದೆ. ಲಾರಿ ಬಸ್ ಮಧ್ಯೆ ಸಿಲುಕಿ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಬಾಣಾವರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿರುದ್ಧ ದಿಕ್ಕಿನಲ್ಲಿ ಬಂದ ಟ್ಯಾಂಕರ್ ಟಿಟಿ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಏಕಮುಖ ಸಂಚಾರ ಮಾಡಲಾಗಿತ್ತು. ಆದರೆ ಕಾಮಗಾರಿ ಬೋರ್ಡ್ ಹಾಕಿರಲಿಲ್ಲ. ಪರಿಣಾಮ ಚತುಷ್ಪಥದ ಒನ್ ವೇಯಲ್ಲಿ ಹಾಲಿನ ಟ್ಯಾಂಕರ್ ನುಗ್ಗಿ ಬಂತು. ಎದುರುಗಡೆಯಿಂದ ಟ್ಯಾಂಕರ್ ಬಂದಿರುವುದು ಟಿಟಿ ಚಾಲಕನಿಗೆ ಗೊತ್ತಾಗಲಿಲ್ಲ. ಈ ವೇಳೆ ರಸ್ತೆ ಮೇಲೆ ಕೆಎಸ್ ಆರ್ ಟಿಸಿ ಬಸ್ಸು ಮತ್ತು ಟಿಟಿ ವಾಹನ ಜೊತೆಗೆ ಸಂಚರಿಸುತ್ತಿತ್ತು. ಕೊನೆ ಕ್ಷಣದಲ್ಲಿ ಎದುರಿಗೆ ಬರುತ್ತಿದ್ದ ಟ್ಯಾಂಕರ್ ನೋಡಿದ ತಕ್ಷಣ ಟಿಟಿ ಚಾಲಕ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಕೆಎಸ್ ಆರ್ ಟಿಸಿ ಬಸ್‌ಗೆ ಟಿಟಿ ಡಿಕ್ಕಿಯಾಗಿದೆ. ಬಳಿಕ ಎದುರಿನಿಂದ ಬರುತ್ತಿದ್ದ ಟ್ಯಾಂಕರ್ ಟಿಟಿಗೆ ಡಿಕ್ಕಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂತಾಪ ಸೂಚಿಸಿದ್ದಾರೆ. “ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತರಾಗಿರುವುದು ತೀವ್ರ ದುಃಖದಾಯಕ. ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

 

ಸಾರಿಗೆ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದು, “ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಷ್ಟು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವೆ” ಎಂದಿದ್ದಾರೆ.

ಇದನ್ನೂ ಓದಿರಿ: ಉತ್ತರಖಂಡ್: ಕಮರಿಗೆ ಬಸ್‌ ಉರುಳಿ 25 ಮಂದಿ ದುರ್ಮರಣ

ಗಾಯಾಳುಗಳನ್ನು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನವಾಗಿದೆ ಎಂದು ಹೇಳಲಾಗಿದೆ. ಇಬ್ಬರಿಗೆ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳು ಕೆಎಸ್ಆರ್ ಟಿಸಿ ಬಸ್ ನಲ್ಲಿ ಇದ್ದವರು ಎನ್ನಲಾಗಿದೆ. ಸಾರಿಗೆ ಬಸ್‌‌ ಚಾಲಕನೂ ಗಾಯಗೊಂಡಿದ್ದು, ಹಾಲಿನ ಟ್ಯಾಂಕರ್ ಚಾಲಕ ಘಟನೆ ನಡೆದ ಸ್ಥಳದಿಂದ ಪರಾರಿಯಾಗಿದ್ದನು. ಆದರೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...