Homeಕರ್ನಾಟಕಚಿಕ್ಕಬಳ್ಳಾಪುರ: ಹಾವು ಪ್ರದರ್ಶಿಸಿದ ಜಗ್ಗಿ ವಿರುದ್ಧ ದೂರು; ಕಾನೂನು ಉಲ್ಲಂಘನೆ ಪಟ್ಟಿಗೆ ಮತ್ತೊಂದು ಪ್ರಕರಣ ಸೇರ್ಪಡೆ

ಚಿಕ್ಕಬಳ್ಳಾಪುರ: ಹಾವು ಪ್ರದರ್ಶಿಸಿದ ಜಗ್ಗಿ ವಿರುದ್ಧ ದೂರು; ಕಾನೂನು ಉಲ್ಲಂಘನೆ ಪಟ್ಟಿಗೆ ಮತ್ತೊಂದು ಪ್ರಕರಣ ಸೇರ್ಪಡೆ

- Advertisement -
- Advertisement -

ಅಕ್ಟೋಬರ್ 9ರಂದು ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಶಾ ಫೌಂಡೇಶನ್‌ನ ಜಗ್ಗಿ ವಾಸುದೇವ್ ಹಾವನ್ನು ಪ್ರದರ್ಶಿಸಿದ್ದಾರೆ ಎಂಬ ಆರೋಪದ ಮೇಲೆ ದೂರು ದಾಖಲಿಸಲಾಗಿದೆ.

ಪ್ರಾಣಿ ಹಕ್ಕುಗಳ ಸಂಘಟನೆಯು ದೂರು ನೀಡಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಸೊಸೈಟಿಯ (ಎಸ್‌ಪಿಸಿಎ) ಪೃಥ್ವಿ ರಾಜ್ ಸಿ.ಎನ್.ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಜಗ್ಗಿ ವಾಸುದೇವ್‌ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿ ಅಕ್ರಮವಾಗಿ ರ್‍ಯಾಟ್‌ ಸ್ನೇಕ್‌ ಸೆರೆಹಿಡಿದು ಪ್ರದರ್ಶಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಕಾಯಿದೆಯ ಶೆಡ್ಯೂಲ್-2ರ ಅಡಿಯಲ್ಲಿ ರ್‍ಯಾಟ್‌ ಸ್ನೇಕ್‌ ಸಂರಕ್ಷಣೆ ಕುರಿತು ತಿಳಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮವೊಂದರ ಪ್ರಚಾರಕ್ಕಾಗಿ ಹಾವನ್ನು ಜನರ ಮುಂದೆ, ಪ್ರಜ್ವಲಿಸುವ ದೀಪಗಳ ಅಡಿಯಲ್ಲಿ ಪ್ರದರ್ಶಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಹಾವನ್ನು ಎಲ್ಲಿಂದ ಪಡೆಯಲಾಗಿದೆ ಎಂಬುದು ಪತ್ತೆಯಾಗಿಲ್ಲ ಮತ್ತು ಉರಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕಿದೆ ಎಂದು ಪೃಥ್ವಿ ರಾಜ್ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಾಣಿ ಹಾಗೂ ಪರಿಸರಕ್ಕೆ ಸಂಬಂಧಿಸಿದಂತೆ ಜಗ್ಗಿ ವಾಸುದೇವ್ ಅವರ ಮೇಲೆ ದೂರುಗಳು ದಾಖಲಾಗಿರುವುದು ಇದೇ ಮೊದಲೇನೂ ಅಲ್ಲ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ (ಕೆಎನ್‌ಪಿ) ವ್ಯಾಪ್ತಿಯಲ್ಲಿ ಮುಸ್ಸಂಜೆಯ ನಂತರ ಜೀಪ್ ಸಫಾರಿ ಮಾಡಿ ವನ್ಯಜೀವಿ ಸಂರಕ್ಷಣಾ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಈಶಾ ಫೌಂಡೇಷನ್‌ನ ಜಗ್ಗಿ ವಾಸುದೇವ್ ವಿರುದ್ಧ ಪೊಲೀಸರಿಗೆ ಇತ್ತೀಚೆಗೆ ದೂರು ನೀಡಲಾಗಿತ್ತು.

ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಹಳ್ಳಿಗಳಲ್ಲಿ ವಾಸಿಸುವ ಜನರು ಗೋಲಾಘಾಟ್ ಜಿಲ್ಲೆಯ ಬೊಕಾಖಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮುಸ್ಸಂಜೆಯ ನಂತರ ವಾಹನದ ಹೆಡ್‌ಲೈಟ್ ಆನ್‌ ಮಾಡಿ ಜೀಫ್‌ ಸವಾರಿ ಮಾಡಲಾಗಿದೆ. ಇದು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಉಲ್ಲಂಘನೆಯಾಗಿದೆ ಎಂದು ಉದ್ಯಾನದ ಬಳಿಯ ಮೊರೊಂಗಿಯಾಲ್ ಮತ್ತು ಬಲಿಜನ್ ಆದರ್ಶ್ ಮಾದರಿ ಗ್ರಾಮಗಳ ನಿವಾಸಿಗಳಾದ ಸೋನೇಶ್ವರ ನರಹ್, ಪ್ರಬಿನ್ ಪೆಗು ಆರೋಪಿಸಿದ್ದರು.

ಪ್ರವಾಸಿಗರಿಗೆ ನಿಗದಿತ ಸಮಯ ಮುಗಿದ ನಂತರ, ಉದ್ಯಾನವನದೊಳಗೆ ಪ್ರವೇಶಿಸಿ ಹೆಡ್‌ಲೈಟ್‌ಗಳನ್ನು ಹಾಕಿಕೊಂಡು ಜೀಪ್ ಓಡಿಸುತ್ತಿದ್ದ ಜಗ್ಗಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರುದಾರರು ಒತ್ತಾಯಿಸಿದ್ದರು.

ಈಶಾ ಫೌಂಡೇಷನ್‌ನ ಜಗ್ಗಿ ವಾಸುದೇವ್ ಅವರು ಈ ಹಿಂದೆಯೂ ಪರಿಸರ ಕಾನೂನು ಉಲ್ಲಂಘನೆ ಮಾಡಿದ ಆರೋಪಗಳನ್ನು ಎದುರಿಸಿದ್ದಾರೆ. ಈ ಕುರಿತು ಬಿಬಿಸಿ ಮಾಧ್ಯಮ ಪ್ರಶ್ನಿಸಿದ್ದಾಗ, ಮೈಕ್ ಕಿತ್ತು ಎಸೆದು ಸಂದರ್ಶನವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಘಟನೆ ಕೆಲವು ತಿಂಗಳ ಹಿಂದೆ ನಡೆದಿತ್ತು.

ಕೊಯಮತ್ತೂರು ಜಿಲ್ಲೆಯ ಬೂಲುವಾಪಟ್ಟಿ ಗ್ರಾಮದಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಪೂರ್ವಾನುಮತಿ ಪಡೆದಿಲ್ಲ. ನಿರ್ಮಾಣ ಮುಗಿದ ಸುಮಾರು ಮೂರು ವರ್ಷಗಳ ನಂತರ ಅಗತ್ಯವಿರುವ ಅನುಮತಿಗಳನ್ನು ಕೇಳಲಾಗಿದೆ ಎಂದು 2018ರಲ್ಲಿ ಸದ್ಗುರುಗಳ ಇಶಾ ಫೌಂಡೇಶನ್ ವಿರುದ್ಧ ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌‌ (ಸಿಎಜೆ) ಗಂಭೀರ ಆರೋಪಗಳನ್ನು ಮಾಡಿದ್ದರು.

ಗ್ರಾಮದಲ್ಲಿ 32,856 ಚದರ ಅಡಿ ವಿಸ್ತೀರ್ಣದ ವಿವಿಧ ಕಟ್ಟಡಗಳನ್ನು 1994 ರಿಂದ 2008 ರ ನಡುವೆ ಸೂಕ್ತ ಅನುಮತಿಯೊಂದಿಗೆ ನಿರ್ಮಿಸಲಾಗಿದೆ ಎಂದು ಸಿಎಜಿ ಹೇಳಿದ್ದರು. ಆದರೆ 2005 ಮತ್ತು 2008ರ ನಡುವೆ ಗುಡ್ಡಗಾಡು ಪ್ರದೇಶ ಸಂರಕ್ಷಣಾ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯದೆ ಕಟ್ಟಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದರು. ಈಶಾ ಸಂಸ್ಥೆಯು 2011ರಲ್ಲಿ ನಿರ್ಮಾಣಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಮತ್ತು ಅನುಮೋದನೆ ನೀಡಬೇಕೆಂದು ಅರಣ್ಯ ಇಲಾಖೆಯನ್ನು ಕೋರಿತ್ತು.

ಇದನ್ನೂ ಓದಿರಿ: ಯುಪಿ: ಮುಸ್ಲಿಮರಲ್ಲಿ ಭಯ ಹರಡಿಸಲೆಂದೇ ದುಷ್ಕರ್ಮಿಗಳ ಗುಂಪು ಮುಸ್ಲಿಂ ವ್ಯಕ್ತಿಯನ್ನು ಕೊಂದಿತ್ತು: ‘ದಿ ವೈರ್‌’ ವರದಿ

“ಕಟ್ಟಡಗಳ ನಿರ್ಮಾಣಕ್ಕೆ ಅನುಮತಿಯನ್ನು ಪಡೆದಿಲ್ಲ ಎಂಬ ಆರೋಪದ ಬಗ್ಗೆ ಸದ್ಗುರುಗಳ ಅಭಿಪ್ರಾಯವೇನು?” ಎಂದು ಬಿಬಿಸಿ ಸಂದರ್ಶನದಲ್ಲಿ ಕೇಳಲಾಗಿತ್ತು. ಇದರಿಂದ ತಾಳ್ಮೆ ಕಳೆದುಕೊಂಡ ಸದ್ಗುರು, ‘ಇದನ್ನು ಎಷ್ಟು ಬಾರಿ ಕೇಳುತ್ತೀರಿ?’ ಎಂದಿದ್ದರು.

ಮಾತು ಮುಂದುವರಿಸಲು ಹೊರಟ ಪತ್ರಕರ್ತನನ್ನು ತಡೆದು, “ನೀವು ಸುದ್ದಿ ನೋಡುತ್ತಿದ್ದೀರಾ, ಸರ್ಕಾರಿ ಇಲಾಖೆ ಹೇಳುವುದನ್ನು, ನ್ಯಾಯಾಲಯ ಹೇಳಿದ್ದನ್ನು ನೋಡಿದ್ದೀರಿ? ಅಥವಾ ನೀವು ಅರೆಬೆಂದ ವ್ಯಕ್ತಿಯ ಮಾತನ್ನು ಕೇಳುತ್ತಿದ್ದೀರಾ?” ಎಂದು ಪ್ರಶ್ನೆಗಳನ್ನು ಕೇಳಿದ್ದರು. ಜೊತೆಗೆ ಸಂದರ್ಶನವನ್ನು ಅರ್ಧಕ್ಕೆ ಮೊಟುಕುಗೊಳಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...