Homeಕರ್ನಾಟಕನಾವೇಕೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಕಾಣಲು ಹೋದೆವು?

ನಾವೇಕೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಕಾಣಲು ಹೋದೆವು?

- Advertisement -
- Advertisement -

ನಾನು, ಡಾ. ವಿಜಯಮ್ಮ ’ಭಾರತ್ ಜೋಡೋ’ ಐಕ್ಯತಾ ಯಾತ್ರೆಯ ಮುಂದಾಳತ್ವ ವಹಿಸಿರುವ ರಾಹುಲ್ ಗಾಂಧಿ ನೋಡಲು ಹೋದುದಕ್ಕೆ ಎರಡು ಕಾರಣಗಳಿದ್ದವು. ಒಂದು: ಎಳೆಯ ವಯಸ್ಸಿನಲ್ಲೇ ಅಜ್ಜಿ ಇಂದಿರಾ, ಅಪ್ಪ ರಾಜೀವರನ್ನು ಕಳೆದುಕೊಂಡ ಸಂಕಟವನ್ನು ಎದೆಯಲ್ಲಿರಿಸಿಕೊಂಡು ’ನಕ್ಕ್ಯಾಕೆ ಮರೆಸುವೀ ದುಃಖ’ ಎಂಬಂತೆ, ನಗುತ್ತ ಇಕ್ಕೆಲದ ಜನರತ್ತ ಕೈ ಬೀಸಿ, ಬೀಸುಗಾಲು ಹಾಕುತ್ತಾ ನಡೆಯುತ್ತಿರುವ ರಾಹುಲ್ ಗಾಂಧಿಯನ್ನು ಹತ್ತಿರದಿಂದ ನೋಡಿ ಮಾತಾಡಿಸಬಹುದೆಂಬ ಬಯಕೆ;

ಇನ್ನೊಂದು: ಗಾಂಧಿವಾದಿ ಎಚ್. ಎಸ್. ದೊರೆಸ್ವಾಮಿಯವರು ಭಾಗವಾಗಿದ್ದ ’ಭೂಮಿ ಮತ್ತು ವಸತಿ ವಂಚಿತ’ ನಿರ್ಗತಿಕರ ಹೋರಾಟ ಸಮಿತಿ ವತಿಯಿಂದ ರಾಹುಲ್ ಗಾಂಧಿಯವರಿಗೆ ನಾವು ಒಂದು ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಾ. ವಿಜಯಮ್ಮ ಮತ್ತು ನೀವು ಜೊತೆಗಿರಬೇಕು ಎಂದು ಸಮಿತಿಯ ಕಾರ್ಯಕರ್ತರು ಕೇಳಿಕೊಂಡು ಅಪಾಯಿಂಟ್‌ಮೆಂಟ್ ಪಡೆದುಕೊಂಡಿದ್ದರಾದುದರಿಂದ..

’ಭಾರತ್ ಜೋಡೊ’ ಯಾತ್ರೆಯ ವೇಳಾಪಟ್ಟಿ ಪ್ರಕಾರ, ದಿನಾಂಕ 13.10.2022ರಂದು ಗುರುವಾರ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಯಾತ್ರೆ ನಡೆಯುತ್ತಿದ್ದು ನಾವು ಅಲ್ಲಿಗೆ ಸುಮಾರು 400 ಕಿ.ಮೀ ಹೋಗಬೇಕಾಗಿತ್ತು. ’ಎಂಭತ್ತರ ಗಡಿ ದಾಟಿರುವ ನೀವುಗಳು ಯಾಕೆ ಅಷ್ಟು ದೂರ ಹೋಗುವ ರಿಸ್ಕ್ ತೆಗೆದುಕೊಳ್ಳುವಿರಿ’ ಎಂದು ಕೆಲವರು ಕೇಳಿದ್ದುಂಟು. ಆದರೂ ಹೊರಟಿದ್ದೆವು. 1956 ನವೆಂಬರ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನ ಒಂದು ಮಾತು ಹೇಳಿದ್ದರು: ’ಮನುಷ್ಯನ ಮನಸ್ಸು ಏಕೆ ಕಾಯಿಲೆ ಬೀಳುತ್ತದೆ? ಮರಾಠಿ ಸಂತ ಕವಿ ರಾಮದಾಸ ಹೇಳುತ್ತಾನೆ: ಮನುಷ್ಯನಲ್ಲಿ ಉತ್ಸಾಹವಿಲ್ಲ ಎಂದರೆ ಅದರರ್ಥ ಒಂದೋ, ಆತನ ಮನಸ್ಸು ಅಥವಾ ದೇಹಕ್ಕೆ ಕಾಯಿಲೆಯಾಗಿರಬೇಕು’; ಮನುಷ್ಯನ ಉತ್ಸಾಹವನ್ನು ಹೀರಿಬಿಡುವುದು ಯಾವುದು? ಉತ್ಸಾಹವಿಲ್ಲದಿದ್ದರೆ ಜೀವನವೇ ಗುಲಾಮಗಿರಿಯೆನಿಸಿಸುತ್ತದೆ. ಎಳೆದುಕೊಂಡು ಹೋಗಬೇಕಾದ ಭಾರವಾಗುತ್ತದೆ. ಉತ್ಸಾಹವಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ’ಪ್ರೀತಿ ಇಲ್ಲದೆ ಮೇಲೆ ಹೂವು ಅರಳೀತು ಹೇಗೆ?’ ಆದುದರಿಂದ ಉತ್ಸಾಹದ ಮರುಪೂರಣಕ್ಕಾಗಿ ಎಂಬಂತೆ ನಾವು ಹೊರಟೆವು.

ಗುರುವಾರ ಬೆಳಿಗ್ಗೆ 7 ಗಂಟೆಗೆ ಬೆಂಗಳೂರು ಬಿಟ್ಟೆವು. ನಾನು. ಡಾ. ವಿಜಯಮ್ಮ ಅವರ ಕೇರ್ ಟೇಕರ್ ತಂಗಿ ಪುಷ್ಪಕ್ಕ ಮತ್ತು ಡ್ರೈವರ್ ಕಂ ಎಸ್ಕಾರ್ಟ್ ರಾಜು ನಾಲ್ವರಿದ್ದೆವು ಕಾರಿನಲ್ಲಿ. ತುಮಕೂರು ಹತ್ತಿರದ ನಂಜುಂಡೇಶ್ವರ ಎಂಬ ಹೋಟೆಲಿನಲ್ಲಿ ತಿಂಡಿ ತಿಂದು ಶಿರಾ-ಹಿರಿಯೂರು-ಚಳ್ಳಕೆರೆ ಮಾರ್ಗವಾಗಿ ಮೊಳಕಾಲ್ಮೂರಿನತ್ತ ಹೊರಟೆವು. ಹಿರಿಯೂರಿನಿಂದ ಚಳ್ಳಕೆರೆಯವರೆಗೆ ಜೋಡಿರಸ್ತೆ ಕಾಮಗಾರಿ ನಡೆಯುತ್ತಿದ್ದು ನಮ್ಮ ಕಾರು ನಿಧಾನಗತಿಯಲ್ಲಿ ಚಲಿಸಿತು. ಚಳ್ಳಕೆರೆಯಿಂದ ಮುಂದೆ ರಸ್ತೆ ಸುಗಮ ಪ್ರಯಾಣಕ್ಕೆ ಅರ್ಹವಾಗಿತ್ತು. ಮೊಣಕಾಲ್ಮೂರು ಸಮೀಪ ಹೋದಾಗ ರಾಹುಲ್ ಗಾಂಧಿ ಜೊತೆ ಯಾತ್ರೆಯಲ್ಲಿದ್ದ ದೊಡ್ಡಿಪಾಳ್ಯ ನರಸಿಂಹಮೂರ್ತಿ ಮತ್ತು ’ಭೂಮಿ-ವಸತಿ ಹೋರಾಟ ಸಮಿತಿ’ ಸಂಚಾಲಕರಲ್ಲಿ ಒಬ್ಬರಾದ ಕುಮಾರ್ ಸಮತಳ ಅವರೊಂದಿಗೆ ಸಂಪರ್ಕ ಸಾಧಿಸಿದೆವು. ನೀವು ಇರುವಲ್ಲಿಯೇ ಕೆಲ ಸಮಯ ಇರಿ, ನಮ್ಮ ಕಡೆಯಿಂದ ಕೂರ್ಗಿನ ಆದಿವಾಸಿ ಹೋರಾಟದ ಯುವಕ ಹೇಮಂತನನ್ನು ಕಳಿಸುವುದಾಗಿ ಹೇಳಿದ್ದರು.

ಅದೇ ಪ್ರಕಾರ ಅರ್ಧಗಂಟೆಯೊಳಗೆ ಹೇಮಂತ ಇನ್ನೊಂದು ಕಾರಿನಲ್ಲಿ ಬಂದು ನಮ್ಮನ್ನು ಎದುರುಗೊಂಡರು. ನಮ್ಮ ಕಾರು ಅವರನ್ನು ಹಿಂಬಾಲಿಸಿತು. ಮೊಳಕಾಲ್ಮೂರು ಪಟ್ಟಣ ಸಮೀಪ ಸುಮಾರು ಮೂರು ಕಿ.ಮೀ ಅಂತರದ ಹಾನಗಲ್ ಕ್ರಾಸ್ ಬಳಿ ತುಲುಪಿದೆವು. ಅಲ್ಲಿಗೆ ದೊಡ್ಡಿಪಾಳ್ಯ ಅವರು ಬಂದು ಕೂಡಿಕೊಂಡರು. ಅಷ್ಟರಲ್ಲಿ ಮಧ್ಯಾಹ್ನ 12 ಗಂಟೆ ಆಗಿತ್ತು. ಅಲ್ಲಿದ್ದ ಹೋಟೆಲ್‌ನಲ್ಲಿ ಸಿಕ್ಕಿದ ಊಟ ತಿಂದು ಕೊಂಚ ಹೊತ್ತು ವಿಶ್ರಮಿಸಿದೆವು. ಅಂದು ಚಿತ್ರದುರ್ಗ ಜಿಲ್ಲೆಯಲ್ಲಿ ಸಾಗುತ್ತಿದ್ದ ಭಾರತ್ ಜೋಡೊ ಯಾತ್ರೆ ಬಿ.ಜಿ.ಕೆರೆಯಿಂದ 21 ಕಿ.ಮೀ. ದೂರದ ಮೊಳಕಾಲ್ಮೂರಿಗೆ ಮಧ್ಯಾಹ್ನ 4 ಗಂಟೆಗೆ ಸರಿಯಾಗಿ ಹೊರಡುವ ಏರ್ಪಾಟಾಗಿತ್ತು. ರಾಹುಲ್ ಗಾಂಧಿ ಅವರೊಂದಿಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸ್ವನಿವೃತ್ತಿ ಹೊಂದಿರುವ ಐಎಎಸ್ ಅಧಿಕಾರಿ ಶಶಿಕಾಂತ ಸೆಂಥಿಲ್ ಮತ್ತು ಕನ್ಯಾಕುಮಾರಿಯಿಂದ ಸಾಥ್ ನೀಡುತ್ತಿರುವ ಹಲವಾರು ಜನ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆಂದು ತಿಳಿಯಿತು. ಬಿ.ಜಿ.ಕೆರೆ ಮತ್ತು ಮೊಳಕಾಲ್ಮೂರು ಸಂಪರ್ಕ ರಸ್ತೆಯಲ್ಲಿ ನಾವು ರಾಹುಲ್ ಭೇಟಿ ಮಾಡಬಹುದೆಂದು ನಮ್ಮನ್ನು ಹಾನ್‌ಗಲ್ ಕ್ರಾಸ್‌ನಿಂದ ಗ್ರಾಮಾಂತರ ರಸ್ತೆಗಳಲ್ಲಿ ಸುತ್ತಿಸಿ ನೇರ್ಲಹಳ್ಳಿ ಕ್ರಾಸ್‌ನಲ್ಲಿ ಎಡಕ್ಕೆ ತಿರುಗಿ ಮರಳಹಳ್ಳಿ ಎಂಬಲ್ಲಿ ಇಳಿಸಲಾಯಿತು. ಇನ್ನೂ ಯಾತ್ರೆ ಅಲ್ಲಿಗೆ ಮುಟ್ಟಿರಲಿಲ್ಲ. ನಾವು ಕೆಲ ಸಮಯ ಅಲ್ಲಿ ಕಾದೆವು. ನಾಲ್ಕು ಗಂಟೆ ಸಮೀಪಿಸುತ್ತಿತ್ತು. ರಸ್ತೆ ಬದಿಯಲ್ಲಿ ಕಣ್ಣು ಹಾಯಿಸಿದಷ್ಟು ದೂರ ಶೇಂಗಾ ಮತ್ತು ಹಿಪ್ಪುನೇರಳೆ ಬೆಳೆ ಕಣ್ಣಿಗೆ ಹಬ್ಬವಾಗಿ ಹಸಿರು ಕಂಗೊಳಿಸುತ್ತಿತ್ತು. ಹಿಂದಿನ ದಿನ ಭಾದ್ರಪದ ಮಾಸದ ಮಳೆ ಸುರಿದು ಹವೆ ಹಿತಕರವಾಗಿತ್ತು. ಚಳ್ಳಕೆರೆಯಿಂದ ಮೊಳಕಾಲ್ಮೂರುವರೆಗೂ ಎತ್ತ ನೋಡಿದರೂ ಕಡಲೆಕಾಯಿ ಗಿಡ ಸಮೃದ್ಧ ಬೆಳೆ ಬರುವ ಸೂಚನೆ ಕಾಣುತ್ತಿತ್ತು. ಒಂದು ಗುಲಗಂಜಿ ತೂಕದಷ್ಟೂ ಕೊಬ್ಬಿಲ್ಲದ ಬಡಕಲು ದೇಹದ ರೈತಾಪಿ ಜನರು, ಪೂರ್ಣ ಕುಂಭ ಹೊತ್ತ ಹೆಣ್ಣು ಮಕ್ಕಳು, ಕೋಲೂರಿದ ವೃದ್ಧರು, ಮಕ್ಕಳುಮರಿ ಸೇರುತ್ತಿದ್ದರು. ಅವರ ಖುಷಿಗೆ ಕಾರಣ ಇಂದಿರಾ ಮೊಮ್ಮಗ ರಾಹುಲ್ ಬರುತ್ತಿದ್ದಾರೆ, ಅವರನ್ನೊಮ್ಮೆ ನೋಡಬೇಕೆಂಬ ಬಯಕೆ. ಅವರ ಬಯಕೆ ಬರುವುದರ ಕಣ್ಸನ್ನೆಯೇ? ಗೊತ್ತಿಲ್ಲ. ನಾವೂ ಅವರೊಟ್ಟಿಗೆ ನಿಂತು ಕುಂತು ಕಾಯುತ್ತಿದ್ದೆವು. ಜನಮನದ ಅಭೀಪ್ಸೆ ರಾಹುಲ್ ಅವರನ್ನು ಈ ಪಾದಯಾತ್ರೆಗೆ ಪ್ರೇರೇಪಿಸಿತೇ? ಕಡೆಗೆ ’ಜೋಡೊ’ ಯಾತ್ರೆ ಬರುವ ಸದ್ದುಗದ್ದಲ ದೂರದಿಂದ ಕೇಳಿ ಬಂತು.

ಇದನ್ನೂ ಓದಿ: ಭಾರತ್ ಜೋಡೋ ಜೊತೆಗೆ ದಲಿತರನ್ನೂ ಬೆಸೆಯಬಹುದೇ ಕಾಂಗ್ರೆಸ್ ?

ಆದರೆ ಆ ದಂಡುದಳ ಸೆಕ್ಯೂರಿಟಿ ಪೊಲೀಸ್ ಅವರ ವಾಹನಗಳು ಇತ್ಯಾದಿಗಳ ಮುನ್ನಡೆ ನೋಡಿ ’ರಾಹುಲ್ ಬಂದಾನೋ ಬಾರನೋ ಕಂಡಾನೋ ಕಾಣನೋ! ಎಂಬ ಶಂಕೆ ನಮ್ಮನ್ನು ಕಾಡಲಾರಂಭಿಸಿತು. ನಾವಿರುವಲ್ಲಿಗೆ ದೊಡ್ಡಿಪಾಳ್ಯ ನರಸಿಂಹಮೂರ್ತಿ ಆಗಾಗ ಬಂದು ರಾಹುಲ್, ಸಿದ್ಧರಾಮಯ್ಯ. ಡಿ.ಕೆ. ಶಿವಕುಮಾರ್ ಹತ್ತಿರ ಬಂದಾಗ ನೀವು ಅವರೊಂದಿಗೆ ನಾಲ್ಕು ಹೆಜ್ಜೆ ನಡೆಯುವಂತೆ ಏರ್ಪಾಟು ಮಾಡಲಾಗಿದೆ; ನೀವು ಇನ್ನು ಕೊಂಚ ಮುಂದೆ ಹೋಗಿರಿ ಎಂದು ಹೇಳಿದರು. ನಾವು ಮುಂದೆ ಹೋಗಿ ’ಮರಳಹಳ್ಳಿ’ ಊರಿನ ವಾಟರ್ ಟ್ಯಾಂಕ್ ಬಳಿ ಬಹಳ ಹೊತ್ತು ಕಾದೆವು. ಜನರ ಹೊಳೆ ಹರಿಯುತ್ತಲೇ ಇತ್ತು. ಸಂಜೆ ಐದು ಗಂಟೆ ಸಮೀಪಿಸುತ್ತಿತ್ತು. ಕೆಲವು ಮಂಚೂಣಿ ಪಥಿಕರು ನಮ್ಮನ್ನು ಕಂಡು ನಮಸ್ಕರಿಸಿ ಮುಂದೆ ಹೋಗುತ್ತಿದ್ದರು. ಕ್ಯಾಮರಾ ಹಿಡಿದ ಮುಸ್ತಾಫಾ ಎಂಬ ತರುಣ ಬಂದು ’ನೀವು ರಾಹುಲ್ ನೋಡಲು ಇಷ್ಟು ದೂರ ಬಂದಿದ್ದೀರಿ ಏಕೆ?’ ಎಂದು ಕೇಳಿದ. ’ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುವ ರಾಹುಲ್ ದಾರಿಯುದ್ದಕ್ಕೂ ಜನರ ಕಷ್ಟ ಸುಖ ಏನೆಂಬುದನ್ನು ಕೇಳಿ ಸ್ವತಃ ಅನುಭವ ಪಡೆಯಲು ಹೊರಟಿದ್ದಾರೆ. ಅವರಿಗೆ ಈ ಉತ್ಸಾಹ ಎಲ್ಲಿಂದ ಬಂತು? ಜನಶಕ್ತಿಯೆ ಹರಶಕ್ತಿ ಎಂದು ಹೊರಟಿದ್ದಾರಲ್ಲಾ- ಅವರನ್ನು ಒಮ್ಮೆ ನೋಡುವ ಆಸೆಯಿಂದ ಬಂದಿದ್ದೇವೆ’ ಎಂದೆವು.

ಸ್ಟೀವರ್ಟ್ ಮಿಡ್‌ಫೋರ್ಡ್ ಫ್ರೇಜರ್

ರಾಹುಲ್‌ಗೆ ’ಭಾರತ್ ಜೋಡೋ’ ಯಾತ್ರೆ ಮಾಡಬೇಕೆಂಬ ಇಚ್ಛೆ ಹೇಗೆ ಹುಟ್ಟಿತೋ ಗೊತ್ತಿಲ್ಲ. ಆದರೆ ಅವರನ್ನು ’ನೆಹರು ವಂಶದ ವಾರಸುದಾರ ರಾಜಕುಮಾರ, ಏನೂ ತಿಳಿಯದ ಬಚ್ಚಾ’ ಮುಂತಾಗಿ ಲೇವಡಿ ಮಾಡುವ ಜನರಿಗೆ ಉತ್ತರವೋ ಎಂಬಂತಿದೆ ಅವರ ಈ ಜಾಥಾ! ಅಷ್ಟೇ ಅಲ್ಲ, ಬುದ್ಧ ಗುರು ಏಕಾಂಗಿಯಾಗಿ ಅಂಗುಲಿಮಾಲಾನ ಗುಹಾ ಆವಾಸ ಸ್ಥಾನದತ್ತ ಒಬ್ಬಂಟಿ ಹೆಜ್ಜೆಹಾಕಿದ್ದರು. ಇಂಥ ದುರಿತಕಾಲದಲ್ಲಿ ರಾಹುಲ್ ಭಾರತ್ ಐಕ್ಯತಾ ಯಾತ್ರೆ ಕೈಗೊಂಡಿರುವುದು ನೆನೆದರೆ ’ಮೈಯಲಿ ಮಿಂಚಿನ ಹೊಳೆ ತುಳುಕಾಡಿದ ಅನುಭವ’!

ಹೀಗೆ ನಾನು ಯೋಚಿಸುವಷ್ಟರಲ್ಲಿ ನಮ್ಮ ದೊಡ್ಡಿಪಾಳ್ಯ, ಕುಮಾರ್ ಸಮತಳ ಬಂದು ನಮ್ಮನ್ನು ಇನ್ನು ಮುಂದಿನ ಪಾಯಿಂಟ್‌ಗೆ ಹೋಗಿ ಇರಲು ಹೇಳಿದರು. ಜಾಥಾದ ಬಾಜಾ ಭಜಂತ್ರಿಯೊಂದಿಗೆ ರಾಮಾಯಣದ ಪುರಾಣ ಪುರುಷ ಮರ್‍ಯಾದಾ ಪುರುಷೋತ್ತಮ ರಾಮ, ಸೀತಾ, ಲಕ್ಷ್ಮಣ, ಹನುಮಂತ ವೇಷಧಾರಿಗಳ ಮೆರವಣಿಗೆ ಟ್ರಕ್ಕು ಮುಂತಾಗಿ ಮುಂದೆ ಸಾಗಿದವು!

ಅಗೋ ಅಲ್ಲಿ ಬರುತ್ತಿದೆ ಜಾಥಾ ಎಂದಾಗ ಎದ್ದುನಿಂತೆವು. ಸೆಕ್ಯೂರಿಟಿ ವಾಹನದ ಹಿಂದೆ ಅವರೆಲ್ಲಾ ಬರುತ್ತಿದ್ದಾರೆ ಎಂಬ ಗಡಿಬಿಡಿ ಸದ್ದುಗದ್ದಲ ಜನರ ನೂಕುನುಗ್ಗಲು ಶುರುವಾಯಿತು. ದೇವರ ರಥ ಎಳೆಯುವರಂತೆ ಮಿಣಿ ಹಿಡಿದು ಯಾರನ್ನೂ ರಾಹುಲ್ ಹತ್ತಿರ ಬಿಡದಂತೆ ರಕ್ಷಣಾದಳ ಸಾಗಿಬಂತು. ’ನಾವು ಆ ಹಗ್ಗದ ಒಳಗೆ ಹೋಗಿ ನೋಡಬಹುದು ಎಂದು ಹೇಳಿದರು ನಮ್ಮ ಕಾರ್ಯಕರ್ತರು. ನಾವೂ ಪ್ರಯತ್ನಿಸಿದೆವು. ಆದರೆ ಜಾಥಾ ಮುಂದುವರಿದಂತೆಲ್ಲಾ ಹಿಂದಿನಿಂದ ಭಾರೀ ನೂಕುನುಗ್ಗಲು ಆರಂಭವಾಯಿತು. ವಿಜಯಮ್ಮನವರು ಆ ಜನರ ಕಾಲಡಿ ಸಿಗದ ಹಾಗೆ ಡ್ರೈವರ್ ರಾಜು ಅವರನ್ನು ಅತ್ತಿತ್ತ ನೂಕಿ ವಿಜಯಮ್ಮನವರನ್ನು ರಕ್ಷಿಸಿ ಈಚೆ ಕರೆತಂದರು. ನಾನು ಅವರ ಹಿಂದೆಹಿಂದೆ ಹೊರಗೆ ರಸ್ತೆಬದಿಗೆ ಬಂದೆ. ಪುಷ್ಪಕ್ಕನೂ ಈಚೆ ನುಸುಳಿ ಬಂದು ವಿಜಯಮ್ಮನವರಿಗೆ ಶೈತ್ಯೋಪಚಾರ ಮಾಡಿದರು. ಜನಸಾಗರ ಬಿರುಸಿನಿಂದ ಮುಂದೆ ಸರಿಯಿತು. ದೊಡ್ಡಿಪಾಳ್ಯ, ವಿಕ್ರಂ, ಸಮತಳ, ಹೇಮಂತ ಇವರು ಬಂದು ನಮ್ಮನ್ನು ಕೂಡಿಕೊಂಡರು. ರಾಹುಲ್ ಜೊತೆಗಿದ್ದ ಒಬ್ಬ ರಕ್ಷಣಾ ಕಾರ್ಯಕರ್ತರು ಧಾವಿಸಿಬಂದು ನಮ್ಮ ಯೋಗಕ್ಷೇಮ ವಿಚಾರಿಸಿ ಪಟ್ಟಣದಲ್ಲಿ ರಾಹುಲ್ ಅವರ ಭಾಷಣ ಇದೆ. ಅದು ಮುಗಿದು ಹೊರಡುವಾಗ ನೀವು ಅಲ್ಲಿಗೆ ಬಂದರೆ ಎರಡು ನಿಮಿಷ ಭೇಟಿಮಾಡಬಹುದು ಎಂದು ತಿಳಿಸಿದರು. ಆಯಿತು ಎಂದು ನಾವು ಹಿಂಬಾಲಿಸಿದೆವು. ಆದರೆ ಇಕ್ಕಟ್ಟಿನ ಮಾರ್ಗ. ಕಾರುಗಳು ದಟ್ಟೈಸಿ ನಿಂತಿದ್ದವು. ರೋಡ್‌ಬ್ಲಾಕ್ ತೆರವಾದದ್ದು ರಾಹುಲ್ ಮಾತನಾಡಿ ಸಭೆಯಿಂದ ನಿರ್ಗಮಿಸಿ ಹೋದಮೇಲೆಯೇ, ಅಷ್ಟರಲ್ಲಿ ಏಳೂವರೆ ಸಮಯ ಆಗಿತ್ತು. ಕೋಲೂರಿ ನಡೆವ ಹಿಂದೂ ಮುಸ್ಲಿಮ್ ವೃದ್ಧರು ಸಭೆಯಿಂದ ವಾಪಸ್ ಬರುತ್ತಿದ್ದರು.

ನಾವು ಬಂದದಾರಿಗೆ ಸುಂಕವಿಲ್ಲ ಎಂಬಂತೆ ಬೆಂಗಳೂರಿಗೆ ಹೊರಡಲು ಸಿದ್ಧವಾದೆವು. ದಾರಿಯುದ್ದಕ್ಕೂ 2-3 ಕಿ. ಮೀ.ವರೆಗೆ ರಾಹುಲ್ ನೋಡಲು ಬಂದ ಜನಸಾಗರ ಹರಿಯುತ್ತಿತ್ತು. ಹಾನಗಲ್ ಕ್ರಾಸ್‌ಗೆ ಬಂದಮೇಲೆ ರಾಜಮಾರ್ಗದಲ್ಲಿ ನಮ್ಮ ಕಾರು ಬೆಂಗಳೂರಿನತ್ತ ದೌಡಾಯಿಸಿತು. ಅಭಿಮಾನದ ಹೊಳೆ, ಸುರಿವ ಮಳೆ, ರಸ್ತೆಗಳು ನೀರ ಹೊಳೆ! ಬೆಂಗಳೂರು ಮುಟ್ಟಿದಾಗ ಮಧ್ಯರಾತ್ರಿ ಒಂದೂವರೆ ಗಂಟೆ. ನಾವು ರಾಹುಲ್ ಗಾಂಧಿ ಪ್ರತ್ಯಕ್ಷ ಕಾಣಲಾಗದಿದ್ದರೆ ಏನಂತೆ ಅವರನ್ನು ಕಂಡವರ ಕಣ್ಣಿನಲ್ಲಿ ಅವರ ಪ್ರತಿಬಿಂಬ ನೋಡಿ ಬಂದೆವು! ಕರ್ನಾಟಕಕ್ಕೆ ಜೋಡೊ ಯಾತ್ರೆ ಕಾಲಿಟ್ಟು 15 ದಿನಗಳಾಗುತ್ತಾ ಬಂದಿದೆ.

ಆದರೆ ಅವರನ್ನು ಕಾಣಲು ತವಕಿಸುತ್ತಿರುವ ಜನರ ಉತ್ಸಾಹ ದಿನದಿಂದ ದಿನಕ್ಕೆ ಇಮ್ಮಡಿಸುತ್ತಲೇ ಇದೆ ಎಂಬುದು ಅವರ ಜೊತೆ ಸಾಗುತ್ತಿದ್ದ ದೆಹಲಿಯಿಂದ ಬಂದಿರುವ ಕೆಲವರ ಅನುಭವದ ನುಡಿ!

ಮಹಾತ್ಮ ಗಾಂಧಿ

ರಾಹುಲ್ ಗಾಂಧಿಯವರ ’ಭಾರತ್ ಜೋಡೊ’ ಯಾತ್ರೆಯನ್ನು, ಜನಜಾತ್ರೆಯನ್ನು ಕಣ್ಣಾರೆ ನೋಡಿದಮೇಲೆ ನನಗೆ ಒಂದೆರಡು ಐತಿಹಾಸಿಕ ಸಂಗತಿಗಳು ನೆನಪಾಗುತ್ತಿವೆ. ಅವುಗಳನ್ನಿಲ್ಲಿ ಪ್ರಸ್ತಾಪಿಸುವುದು ಸೂಕ್ತ ಎಂದೆನಿಸುತ್ತಿದೆ. ಹಿಂದೆ ಕೆಲವು ರಾಜಮಹಾರಾಜರು ವೇಷಾಂತರದಲ್ಲಿ ಹೋಗಿ ತಮ್ಮ ಪ್ರಜೆಗಳ ಕಷ್ಟಸುಖ ತಿಳಿದುಕೊಳ್ಳುತ್ತಿದ್ದರೆಂಬುದು. ನಿದರ್ಶನಕ್ಕೆ ವಿಜಯನಗರದ ಅರಸು ಶ್ರೀಕೃಷ್ಣದೇವರಾಯ, ಹಾಗೂ ಮೈಸೂರಿನ ರಣಧೀರ ಕಂಠೀರವ ನರಸಿಂಹರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದವರು ಗುಪ್ತವೇಷದಲ್ಲಿ ರಾತ್ರಿ ವೇಳೆ ಸಂಚರಿಸುತ್ತಾ ಪ್ರಜೆಗಳ ಹಾಗೂ ಅರಮನೆ ಮಂತ್ರಿ ಮಹನೀಯರ ಆಡಳಿತ ವೈಖರಿ, ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ಅರಿತು ಪ್ರಜಾವತ್ಸಲರಾಗಿ ರಾಜ್ಯಭಾರ ಮಾಡುತ್ತಿದ್ದರು ಎಂಬುದಿದೆ.

ಮೊದಲಿಗೆ, ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಖ್ಯಾತಿವೆತ್ತ ಕೊಲ್ಹಾಪುರದ ರಾಜರ್ಷಿ ಶಾಹು ಮಹಾರಾಜರು ಪಡೆದ ಶಿಕ್ಷಣದ ಭಾಗವಾಗಿ ದೇಶಪ್ರವಾಸ ನಡೆದಿತ್ತು. ಸರ್ ಸ್ಟೀವರ್ಟ್ ಮಿಡ್‌ಫೋರ್ಡ್ ಫ್ರೇಜರ್ ಅವರು ಬ್ರಿಟಿಷ್ ಇಂಡಿಯಾ ಸೇವೆಯಲ್ಲಿ ಐ.ಪಿ.ಎಸ್ ಅಧಿಕಾರಿಯಾಗಿದ್ದರು. ಫ್ರೇಜರ್ ಅವರು ಶಾಹುಮಹಾರಾಜರಿಗೆ ಶಿಕ್ಷಣವನ್ನು ಕ್ರಮಬದ್ಧವಾಗಿ ವ್ಯವಸ್ಥೆಗೊಳಿಸಿದ್ದರು. ಶಾಹುರವರು ಪುಸ್ತಕಗಳಿಗಿಂತ ಅವಲೋಕನದಿಂದ ಹೆಚ್ಚು ಕಲಿತರು. ಗುರು ಫ್ರೇಜರ್ ಅವರ ನೇತೃತ್ವದಲ್ಲಿ ಶಾಹುರವರು ಇತರೆ ಮಹಾರಾಜರೊಡನೆ ಭಾರತದಲ್ಲಿ ಮೂರು ಪ್ರವಾಸಗಳಿಗೆ ಹೋಗಿದ್ದರು. ಏಪ್ರಿಲ್ 13. 1894ರಲ್ಲಿ ಶಾಹು ಅವರ ಪಟ್ಟಾಭಿಷೇಕವಾಯಿತು. ಅದಕ್ಕಿಂತ ಮುಂಚೆ ಈ ಪ್ರವಾಸಗಳು ನಡೆದವು. ಅವುಗಳಲ್ಲಿ ಎರಡು ಉತ್ತರಭಾರತಕ್ಕೆ ಮತ್ತು ಒಂದು ಪ್ರವಾಸ ದಕ್ಷಿಣ ಭಾರತಕ್ಕೆ. ಶಾಹುರವರು ಪ್ರವಾಸ ಕಾಲದಲ್ಲಿ ಅಧಿಕಾರಿಗಳನ್ನು ಮತ್ತು ಮಹಾರಾಜರನ್ನು ಭೇಟಿ ಮಾಡಬೇಕಾಗಿತ್ತು. ಪ್ರವಾಸಕಾಲದ ಘಟನೆಗಳು ಶಾಹುರವರ ವ್ಯಕ್ತಿತ್ವದ ರೂಪಣೆಗೆ ಸಹಾಯಕವಾಗುತ್ತಿತ್ತು ಎಂದು ವರದಿಗಳು ಹೇಳುತ್ತವೆ. ದಕ್ಷಿಣ ಭಾರತ ಪ್ರವಾಸವು ಸಿಲೋನನ್ನು ಸಹ ಒಳಗೊಂಡಿತ್ತು. ವಾಪಸ್ಸು ಬರುತ್ತಾ ಮೈಸೂರು, ಬೆಂಗಳೂರು ಸೇರಿದ್ದವು. ಉತ್ತರ ಭಾರತ ಪ್ರವಾಸವು ಮೌಂಟ್ ಅಬು, ಹೈದರಾಬಾದ್ ಮತ್ತು ಕರಾಚಿಗಳನ್ನು ಒಳಗೊಂಡಿತ್ತು. ಫ್ರೇಜರ್ ಅವರಿಗೆ ಭಾರತದ ಇತಿಹಾಸ ಮತ್ತು ಭೂಗೋಳದ ಬಗ್ಗೆ ಒಳ್ಳೆಯ ಗ್ರಹಿಕೆ ಇತ್ತು. ಮಹಾರಾಜರು ಮುಂದೆ ಸಮರ್ಥ ಮತ್ತು ಸಂವೇದನಾಶೀಲವ್ಯಕ್ತಿಯನ್ನಾಗಿ ರೂಪಿಸಲು ಗುರು ಫ್ರೇಜರರು ಪ್ರಾಮಾಣಿಕ ಪ್ರಯತ್ನ ಮಾಡಿದರು. ಅವರು ನಿವೃತ್ತಿ ಹೊಂದಿದ ಮೇಲೂ ಶಾಹುರವರ ಸಂಪರ್ಕದಲ್ಲಿದ್ದರು.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ; ಭಾರತದ ಬಹುತ್ವದ ಉಳಿವಿಗೆ ದಾರಿ ಮಾಡಿಕೊಡಬಲ್ಲುದೇ?

ಫ್ರೇಜರ್ ಅವರಂಥ ಗುರುಗಳ ಶಿಕ್ಷಣ ಹಾಗೂ ಮಾರ್ಗದರ್ಶನ ಸಿಕ್ಕಿದ್ದರಿಂದ ಶಾಹು ಮಹಾರಾಜರು ಕೊಲ್ಹಾಪುರದಂತ ಚಿಕ್ಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಿದರು; ಜನರ ರಾಜ್ಯವಾಗಿ ಬೆಳಗಿಸಿದರು. ದಮನಿತ ದಲಿತ ಸಮುದಾಯದವರು ಅವರನ್ನು ’ನಮ್ಮ ಅಬ್ರಹಾಂ ಲಿಂಕನ್’ ಎಂದು ಹೊಗಳಿದರು. ಅಸ್ಪೃಶ್ಯ ಎಂದು ಪರಿಗಣಿಸಲ್ಪಟ್ಟ ಸಮಾಜದವರು ಅಂದು ಕೈಗೊಂಡ ಮನ್‌ಗಾವ್ ಸಮ್ಮೇಳನದಲ್ಲಿ ಶಾಹು ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕುರಿತು ’ಒಂದು ಕಾಲ ಬರುವುದು, ಇವರು ಇಡೀ ಭಾರತಕ್ಕೆ ನಾಯಕರಾಗುವರು’ ಎಂದು ಭವಿಷ್ಯ ನುಡಿದಿದ್ದರು. ಅದು ಸತ್ಯವಾಯಿತು.

ಎರಡನೆ ನಿದರ್ಶನ ಮಹಾತ್ಮ ಗಾಂಧಿಯವರ ಭಾರತ ದರ್ಶನ ಪ್ರವಾಸ. ಮಹಾತ್ಮರ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆಯವರು. ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿ ಬಂದ ಎಂ.ಕೆ.ಗಾಂಧಿಯು ಒಂದು ಸ್ಥಳದಲ್ಲಿ ನೆಲೆ ನಿಲ್ಲುವುದಕ್ಕೆ ಮುಂಚೆ ಭಾರತವನ್ನೆಲ್ಲ ರೈಲಿನ ಮೂರನೆ ದರ್ಜೆಯಲ್ಲಿ ಪ್ರಯಾಣ ಮಾಡಿ ಆ ತರಗತಿಯವರ ಕಷ್ಟಗಳನ್ನು ತಿಳಿದುಕೊಳ್ಳಬೇಕೆಂದು ಯೋಚನೆ ಮಾಡಿದರು. ಆ ವಿಷಯ ಕುರಿತು ಗೋಖಲೆಯವರೊಂದಿಗೆ ಮಾತನಾಡಿದರು. ಪ್ರಾರಂಭದಲ್ಲಿ ಅವರು ಗಾಂಧಿಯನ್ನು ಹಾಸ್ಯ ಮಾಡಿದರು. ಆದರೆ, ಅವರ ಉದ್ದೇಶ ಏನೆಂದು ತಿಳಿದ ಮೇಲೆ ಸಂತೋಷದಿಂದ ಒಪ್ಪಿದರು ಮತ್ತು ಗಾಂಧಿಯವರ ಪ್ರಯಾಣಕ್ಕೆ ಬೇಕಾದ ವಸ್ತು ಪರಿಕರಗಳನ್ನು ಒದಗಿಸಿ ಜೋಡಿಸಿಕೊಡಲು ತಾವೇ ಮುಂದಾದರು; ರೈಲ್ವೆ ಪ್ಲಾಟ್‌ಫಾರಂವರೆಗೂ ಬಂದು ಬೀಳ್ಕೊಡುವರು. ಹೀಗೆ ಗಾಂಧೀಜಿ 1915ರಿಂದ 1919ರವರೆಗೆ ಅವಿಚ್ಛಿನ್ನವಾಗಿ ರೈಲಿನ ಮೂರನೆ ತರಗತಿಯಲ್ಲಿ ಪ್ರಯಾಣ ಮಾಡಿ ಭಾರತ ದರ್ಶನ ಮಾಡುವರು. ಆಮೇಲೆ ಬಂದು ಬೊಂಬಾಯಿಯಲ್ಲಿ ನೆಲೆಸುವರು. ಆ ಪ್ರವಾಸದ ಎಲ್ಲ ಅನುಭವಗಳನ್ನು ತಮ್ಮ ’ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ’ ಎಂಬ ಪುಸ್ತಕದಲ್ಲಿ ದಾಖಲಿಸುತ್ತಾರೆ. ಆ ತರುವಾಯ ಮೋಹನ್‌ದಾಸ್ ಕರಮಚಂದ್ ಗಾಂಧಿ ಮಹಾತ್ಮ ಗಾಂಧಿ ಆದುದನ್ನು ಮತ್ತು ಹಿಂದುತ್ವವಾದಿ ನಾಥುರಾಮ್ ಗೂಡ್ಸೆ ಹತ್ಯೆ ಮಾಡಿದ್ದೂ, ಜನರು ಅವರನ್ನು ’ರಾಷ್ಟ್ರಪಿತ’ ಎಂದು ಕರೆದದ್ದೂ ಇತ್ಯಾದಿ ಇತಿಹಾಸ ಎಲ್ಲರಿಗೂ ತಿಳಿದ ವಿಚಾರವೇ!

ಡಾ. ಬಿ.ಆರ್ ಅಂಬೇಡ್ಕರ್

ಕೊನೆಯದಾಗಿ, ದೇಶ ಸುತ್ತುವುದರಿಂದ ಬರುವ ಅನುಭವ ನಿಜಕ್ಕೂ ಅವರ್ಣನೀಯ. ರಾಹುಲ್ ಗಾಂಧಿಯವರ ’ಭಾರತ್ ಜೋಡೊ’ ಯಾತ್ರೆಯಿಂದ ದೇಶದ ಸಮುದಾಯಗಳು ಸತ್ಪ್ರೇರಣೆ ಪಡೆಯುತ್ತಾರೆಂಬುದರಲ್ಲಿ ಎರಡು ಮಾತಿಲ್ಲ. ರಾಷ್ಟ್ರಕವಿ ಕುವೆಂಪು ಶತಮಾನದಷ್ಟು ಹಿಂದೆಯೇ ’ಜಯಹೇ ಕರ್ನಾಟಕ ಮಾತೆ’ ನಾಡಗೀತೆಯಲ್ಲಿ ಭಾರತ ’ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಹಾಡಿದರು. ಆದರೆ ಮೂಲಭೂತವಾದಿಗಳು ಹಿಂದೂ ರಾಷ್ಟ್ರ ಮಾಡುವುದಕ್ಕಾಗಿ ನಾಡಿನ ಕೋಮು ಸೌಹಾರ್ದ ಬಳ್ಳಿಯ ಬುಡಕ್ಕೆ ನಂಜಿನ ಬಿಸಿನೀರು ಎರೆಯುತ್ತಿದ್ದಾರೆ. ಜಾತಿ ರಾಜಕೀಯ, ಅಸ್ಪೃಶ್ಯತೆ, ಮತ ಮೌಢ್ಯ, ದೇವರು ದಿಂಡಿರು, ಜ್ಯೋತಿಷ್ಯ, ಭವಿಷ್ಯ ಎಂದು ಜನರಿಗೆ ಮಂಕುಬೂದಿ ಎರಚುವ ಜರತಾರಿ ಜಗದ್ಗುರುಗಳು, ಕೆಲವು ರಾಜಕಾರಣಿಗಳ ದೇಶ ಸೀಳುವ ದ್ವೇಷ ಭಾಷಣಗಳು ಮುಂತಾಗಿ ಹದ್ದುಮೀರುತ್ತಿವೆ. ಆದಾಗ್ಯೂ ಮೀಸಲಾತಿ ಸೌಲಭ್ಯದಿಂದ ಮೇಲೆ ಬಂದ ಶಾಸಕರು ಸಂಸದರೂ ಕೂಡ, ಬಹುಸಂಖ್ಯಾತರಾದವರಿಂದ ತಮ್ಮ ಜಾತಿ ಜನಾಂಗಕ್ಕೆ ಆಗುವ ಅವಮಾನ ದೌರ್ಜನ್ಯಗಳನ್ನು ಪ್ರತಿಭಟಿಸದೆ, ಮೂಗಿಗೆ ಮೀಸಲಾತಿ ಬೆಣ್ಣೆ ಹಚ್ಚುವವರ ಜೊತೆ ಶಾಮೀಲಾಗಿ ಅಧಿಕಾರ ಹಂಚಿಕೊಳ್ಳುತ್ತಿರುವುದು ದುಃಖದ ಸಂಗತಿ; ಆಳುವ ಪಕ್ಷಕ್ಕೆ ತುತ್ತೂರಿ ಊದುತ್ತಿರುವ ವಾಟ್ಸಪ್ ವಟುಗಳು, ಮಾಧ್ಯಮಗಳು; ಇತ್ಯಾದಿಗಳಿಂದ ಗೊಂದಲದ ಗೂಡಾಗುತ್ತಿದೆ ದೇಶ!

’ನಾನು ಎಳೆತಂದಿರುವ ಜಾತ್ಯತೀತತೆಯ ರಥವನ್ನು ಮುಂದುಮುಂದಕ್ಕೆ ಎಳೆಯಿರಿ. ಸಾಧ್ಯವಾಗದಿದ್ದರೆ ನಿಂತಲ್ಲೇ ಇರಲಿ, ಹಿಂದಕ್ಕೆ ಮಾತ್ರ ಬಿಡಬೇಡಿ ತಡೆದುಕೊಳ್ಳಿ’ ಎಂದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಕೊನೆಯ ಸಂದೇಶವನ್ನು ಮರೆತು ಅವರ ಆತ್ಮಕ್ಕೆ ದ್ರೋಹ ಬಗೆಯುತ್ತಿದ್ದಾರೆ-ಸಂವಿಧಾನದಿಂದ ಅನುಕೂಲ ಪಡೆದವರು ಮತ್ತು ವೈದಿಕದ ಕರ್ಮಕಾಂಡವನ್ನು ನಿರಾಕರಿಸಿ ಹೊರಬಂದ ಬಸವಣ್ಣನ ಅನುಯಾಯಿಗಳೂ ಸಹ ಮೂಲಭೂತವಾದಿಗಳ ಕೇಸರೀ ಕೃಪೆಗೆ ಪಾತ್ರರಾಗುತ್ತಿರುವುದು ತೀರ ದುರ್ದೈವ. 1947ರಲ್ಲಿ ದೇಶವನ್ನು ವಿಭಜಿಸಿದರೆ, ಈಗ ಅಮೃತ ಮಹೋತ್ಸವ ಆಚರಣೆಯ ಹೊತ್ತಿನಲ್ಲಿ ಜನರ ಮನಸ್ಸನ್ನೇ ವಿಭಜಿಸಲಾಗುತ್ತಿದೆ. ಇಂಥ ಹೊತ್ತಿನಲ್ಲಿ, ರಾಹುಲ್ ಗಾಂಧಿ ಅವರ ’ಭಾರತ್ ಜೋಡೊ’ ಭಾವೈಕ್ಯತಾ ಯಾತ್ರೆ ಸದ್ದಿಲ್ಲದೆ ದೇಶವನ್ನು ಜೋಡಿಸುವ ಯತ್ನದಲ್ಲಿ ಸಾಗುತ್ತಿರುವುದು ಅರ್ಥವತ್ತಾಗಿದೆ.

ಕಡೆಯದಾಗಿ ಒಂದು ಮಾತು. ದಕ್ಷಿಣೋತ್ತರ ಈಗ ಸಾಗುತ್ತಿರುವ ರಾಹುಲ್ ಅವರ ’ಭಾರತ್ ಜೋಡೊ’ ಪಾದಯಾತ್ರೆಯಂತೆಯೇ, ಪೂರ್ವ ಪಶ್ಚಿಮವಾಗಿಯೂ ಬಂಗಾಳದ ರಾಮಕೃಷ್ಣ ಪರಮ ಹಂಸ, ಸ್ವಾಮಿ ವಿವೇಕಾನಂದರ ಜನ್ಮಭೂಮಿ ದಕ್ಷಿಣೇಶ್ವರದ ಬೇಲೂರು ಮಠದಿಂದ ಮಹಾತ್ಮ ಗಾಂಧಿಯ ಜನ್ಮಭೂಮಿ ಪೋರ್‌ಬಂದರಿನವರೆಗೆ ರಾಹುಲ್ ಅಥವಾ ಪ್ರಿಯಾಂಕಾ ಗಾಂಧಿ ಅವರು ಮುಂದೆಂದಾದರೂ ’ಭಾರತ್ ಜೋಡೋ’ ಯಾತ್ರೆ ಕೈಗೊಂಡರೆ ಒಳ್ಳೆಯದು. ಜನತೆಯ ಆಶೀರ್ವಾದವೇ ಜನಸೇವಕರಿಗೆ ಪರಮೋತ್ತಮ ಸ್ಫೂರ್ತಿ!.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...