Homeಅಂಕಣಗಳುಭಾರತ್ ಜೋಡೋ ಯಾತ್ರೆ; ಭಾರತದ ಬಹುತ್ವದ ಉಳಿವಿಗೆ ದಾರಿ ಮಾಡಿಕೊಡಬಲ್ಲುದೇ?

ಭಾರತ್ ಜೋಡೋ ಯಾತ್ರೆ; ಭಾರತದ ಬಹುತ್ವದ ಉಳಿವಿಗೆ ದಾರಿ ಮಾಡಿಕೊಡಬಲ್ಲುದೇ?

- Advertisement -
- Advertisement -

ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಸಂಘಪರಿವಾರದ ತಂತ್ರಗಾರಿಕೆಯಂತೆ, ಬಿಜೆಪಿಯ ಮುಖಂಡ ಅಡ್ವಾನಿ ನೇತೃತ್ವದಲ್ಲಿ 90ರ ದಶಕದಲ್ಲಿ ನಡೆದ ರಥಯಾತ್ರೆ ಈ ದೇಶವನ್ನು ’ಪ್ರಭಾವಿಸಿದ ಅತಿ ದೊಡ್ಡ’ ರಾಜಕೀಯ ಮೊಬಿಲೈಸೇಶನ್ ಎಂಬುದು ಅತಿಶಯೋಕ್ತಿಯಾಗಿರಲಾರದು. ಆದರೆ, ತಾನು ಬೀರಿದ ಋಣಾತ್ಮಕ ಪ್ರಭಾವಕ್ಕೆ ಮತ್ತು ಈ ದೇಶವನ್ನು ಹಿಂದೆಂದೂ ಕಾಣದ ದುಷ್ಪಪರಿಣಾಮಗಳಿಗೆ ಗುರಿ ಮಾಡಿತು ಎಂಬುದು, ಈ ದೇಶದಲ್ಲಿ ನಡೆದ ಬೇರೆ ಮುಖ್ಯ ರಾಜಕೀಯ ಜನಯಾತ್ರೆ/ಪಾದಯಾತ್ರೆಗಳಿಂದ ಅದನ್ನು ಬೇರ್ಪಡಿಸುವ ವಿಚಾರ. ಕೋಮು ದ್ವೇಷದ ಆಧಾರದಲ್ಲಿ ನಡೆದ ಆ ರಥಯಾತ್ರೆಯ ಫಲವಾಗಿ ನಡೆದ ಬಾಬ್ರಿ ಮಸೀದಿ ಧ್ವಂಸ ಮತ್ತು ನಂತರದ ಘಟನೆಗಳು ಈ ದೇಶದಲ್ಲಿ ನಿರಂತರವಾದ ಕೋಮು ಒಡಕಿಗೆ-ವಿಷಮತೆಗೆ ದಾರಿಮಾಡಿಕೊಟ್ಟವು. ಅಲ್ಲಿಂದ ನಿಧಾನಕ್ಕೆ ಏರುತ್ತಲೇ ಹೋದ ಇಸ್ಲಮಾಫೋಬಿಯ, ಅದರ ನೆಪದಲ್ಲಿ ಜನರ ಮನಸ್ಸಿನಲ್ಲಿ ಬಿತ್ತಿದ ಹಲವು ಬಗೆಯ ದ್ವೇಷ ಭಾವನೆಗಳ ಪರಿಣಾಮವನ್ನು ದೇಶ ಇನ್ನೂ ಮೆಟ್ಟಿ ನಿಲ್ಲಲು ಸಾಧ್ಯವಾಗಿಲ್ಲ. ಈ ದ್ವೇಷದ ಮೆಟ್ಟಿಲುಗಳನ್ನು ಒಂದೊಂದೇ ಏರಿಬಂದ ಮೋದಿ-ಶಾ ಜೋಡಿಯಂತೂ, ಎಲ್ಲ ವೈವಿಧ್ಯತೆಯನ್ನು-ಬಹುತ್ವವನ್ನು ನಾಶಪಡಿಸಿ, ಸಂಘಪರಿವಾರ ಸಿದ್ಧಾಂತದ ಮುಖ್ಯ ಅಂಶವಾಗಿರುವ ಏಕರೂಪತೆಯನ್ನು ಹೇರುವುದಕ್ಕೆ (ಧರ್ಮ-ಭಾಷೆ-ಸಂಸ್ಕೃತಿಯಾದಿಯಾಗಿ), ಈ ದ್ವೇಷದ ಜ್ವರವನ್ನು ವಿಷಮಗೊಳಿಸಿತು. ಈ ಜ್ವರದಲ್ಲಿ ಜನಸಾಮಾನ್ಯರು ನಲುಗಿದಷ್ಟೇ ವಿರೋಧ ಪಕ್ಷಗಳೂ ಬಳಲಿ ಕೃಶವಾದವು. ಜ್ವರದಿಂದ ಬಳಲಿ ಬೆಂಡಾದವರಿಗೆ ಚೈತನ್ಯದ ಸಿಂಚನ ನೀಡುವ ಕೆಲಸಗಳು ಆಮೆ ವೇಗದಲ್ಲಿ, ಅಲ್ಲಲ್ಲಿ ಮಾತ್ರವೇ ಹರಿದು ಹಂಚಿಹೋದಂತೆ ನಡೆಯುತ್ತಿದ್ದವು.

ದೇಶದ ಹಲವೆಡೆ ತನ್ನ ’ಅಸ್ತಿತ್ವ’ವನ್ನು ಇನ್ನೂ ಉಳಿಸಿಕೊಂಡಿರುವ ಕಾಂಗ್ರೆಸ್ ಮತ್ತು ರಾಜ್ಯಗಳ ಮಟ್ಟದಲ್ಲಿ ಹೆಚ್ಚು ಪ್ರಭಾವವಿರುವ ಪಕ್ಷಗಳು (ಪ್ರಾದೇಶಿಕ ಪಕ್ಷ ಎನ್ನುವ ಬಳಕೆ ಸಮರ್ಪಕವಲ್ಲವೆನಿಸಿ) ಕೆಲವೆಡೆ ಒಗ್ಗೂಡಲು ಪ್ರಯತ್ನಪಟ್ಟರೂ, ಅಧಿಕಾರ ಅನುಭವಿಸುವ ದುರಾಸೆಗೋ ಅಥವಾ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರದ ಏಜೆನ್ಸಿಗಳು ಒಡ್ಡುವ ಬೆದರಿಕೆಗೋ, ಆ ಒಗ್ಗೂಡುವಿಕೆ ಬೃಹತ್ತಾದ ಫೋರ್ಸ್ ಆಗಿ ಹೊರಹೊಮ್ಮಲೇ ಇಲ್ಲ. ಇದು ಸಾಧ್ಯವಾಗದೆ ಇದ್ದುದಕ್ಕೆ ಕಾರಣಗಳಲ್ಲಿ ಒಂದು: ಈ ಬಹುತೇಕ ಪಕ್ಷಗಳು ತಾವು ಯಾವ ಭಾರತವನ್ನು, ಯಾವ ಭಾರತದ ಕಲ್ಪನೆಯನ್ನು ಪ್ರತಿನಿಧಿಸುತ್ತಿದ್ದವೋ ಅದನ್ನು ಮರೆತಿದ್ದು! ಎರಡು: ಕಾಂಗ್ರೆಸ್‌ನಂತಹ ಪಕ್ಷಗಳ ಹಲವು ಮುಖಂಡರು (ಆದರಲ್ಲಿಯೂ ಕೇಂದ್ರ ಸರ್ಕಾರದಲ್ಲಿ 2004 ರಿಂದ 2014ರವರೆಗೆ ಅಧಿಕಾರ ನಡೆಸಿದವರು) ಜನಸಂಪರ್ಕದಿಂದ ದೂರವಾಗುತ್ತಲೇ ಬಂದದ್ದು. ಇವೆಲ್ಲವುದರ ಜೊತೆಗೆ ಬಂಡವಾಳಶಾಹಿ ಮಾಧ್ಯಮಗಳ ಸಹಾಯದಿಂದ ಸಂಘಪರಿವಾರ ಮತ್ತು ಬಿಜೆಪಿ ಪಕ್ಷ ರೂಪಿಸಿದ ತಂತ್ರಗಾರಿಕೆಯೂ ಸೇರಿಕೊಂಡು, ಫೇಕ್ ಸುದ್ದಿಜಾಲ ಬೃಹತ್ತಾಗಿ ಬೆಳೆದು ಈ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನೂ ಸೇರಿದಂತೆ ಜನ ಸಾಮಾನ್ಯರನ್ನೂ ಮೋಡಿ ಮಾಡಿತು. ಇದನ್ನು ಸರಿಪಡಿಸಲು ಜನಸಂಪರ್ಕ ಕಾರ್ಯಕ್ರಮಗಳು ನಡೆಯಬೇಕಿದ್ದ ಮಟ್ಟದಲ್ಲಿ ನಡೆಯಲಿಲ್ಲ.

ಈಗ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಪ್ರಾರಂಭವಾಗಿದೆ. ಕಾಂಗ್ರೆಸ್‌ನ ಐಟಿ ಸೆಲ್ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು, ಹೆಚ್ಚು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಸುತ್ತಲೇ ಇದ್ದರೂ, ಯೋಗೇಂದ್ರ ಯಾದವ್‌ರಂತಹ ಸಾಮಾಜಿಕ ಕಾರ್ಯಕರ್ತರನೇಕರು ಈ ಯಾತ್ರೆಯ ಬೆಂಬಲಕ್ಕೆ ನಿಂತಿದ್ದಾರೆ. ಇದು ಕಾಂಗ್ರೆಸ್‌ಅನ್ನು ಎಷ್ಟರಮಟ್ಟಿಗೆ ರಿವೈವ್ ಮಾಡುತ್ತದೆಯೋ, ಆದರೆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು 2019ರಲ್ಲಿ ತೊರೆದಿರುವ ರಾಹುಲ್ ಗಾಂಧಿಯವರಿಗೆ ಇದು ಇಮೇಜ್ ಬೂಸ್ಟರ್ ಆಗಿ ಕೆಲಸ ಮಾಡುವತ್ತಲಂತೂ ನಡೆದಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ಅವರು ಸ್ಪರ್ಧಿಸುವಂತೆ ಅನುವಾಗಲು ಈ ಅಭ್ಯಾಸ ಪ್ರಾರಂಭವಾಗಿದೆಯೇ ಎಂಬ ಸಂದೇಹವೂ ಮೂಡದೆ ಇರದು. ಈ ಅನುಮಾನಗಳಾಚೆಗೆ ಕೆಲವು ಆಶಾವಾದದ ಸಂಗತಿಗಳೂ ಗೋಚರವಾಗುತ್ತವೆ.

ಕಾಂಗ್ರೆಸ್ ಪಕ್ಷವೇ ಇದನ್ನು ಮುನ್ನಡೆಸುತ್ತಿದ್ದರೂ, ರಾಹುಲ್ ಗಾಂಧಿಯವರೇ ಇದರ ಕೇಂದ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರೂ, ಈ ಯಾತ್ರೆ ಬಿಂಬಿಸುತ್ತಿರುವ ಕೆಲವು ಸಂಕೇತಗಳು ಆಶಾದಾಯಕವಾಗಿವೆ. ಮೊದಲಿಗೆ, ಸೆಪ್ಟಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಈ ನಡಿಗೆ 150 ದಿನಗಳ ಕಾಲ 2500 ಕಿಲೋಮೀಟರ್ ಕ್ರಮಿಸಿ ಕಾಶ್ಮೀರವನ್ನು ತಲುಪಲಿದೆ. ಈ ಐದು ತಿಂಗಳಲ್ಲಿ ರಾಹುಲ್ ಗಾಂಧಿಯವರಿಂದ ಹಿಡಿದು ಯಾತ್ರೆಯಲ್ಲಿ ಹೆಜ್ಜೆಹಾಕುವ ಎಲ್ಲ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ, ಭಾರತದ ವಿವಿಧ ಭಾಗಗಳ ಜನಜೀವನ ಮತ್ತು ಸಮಸ್ಯೆಗಳ ಝಲಕ್ ಒಂದು ಮಟ್ಟಕ್ಕಾದರೂ ಲಭಿಸುವುದು ನಿಜ. ಇದನ್ನು ತಿಳಿವಳಿಕೆಯಾಗಿ ಪರಿವರ್ತಿಸಿ ಈ ದೇಶದ ಸಮಗ್ರ ನಾಗರಿಕರ ಅಭ್ಯುದಯದ ರಾಜಕಾರಣಕ್ಕೆ ಅದನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಎರಡನೆಯದಾಗಿ, ಇದು ಕೇವಲ ಕಾಂಗ್ರೆಸ್ ಯಾತ್ರೆ ಮಾತ್ರವಲ್ಲ ಬದಲಿಗೆ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಯಾತ್ರೆ ಎಂದು ರಾಹುಲ್ ಗಾಂಧಿಯವರೇ ಪದೇಪದೇ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಅನ್ಯ ಪಕ್ಷಗಳ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ಈ ನಡಿಗೆಗೆ ಸೆಳೆಯುವ ಯಾವ ಪ್ರಯತ್ನಗಳನ್ನು ಮಾಡಿದೆ ಎಂಬ ಪ್ರಶ್ನೆಗೆ ಭರವಸೆಯ ಬೆಳಕಿನ್ನೂ ಕಾಣಿಸುತ್ತಿಲ್ಲ (ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಯಾತ್ರೆಗೆ ಚಾಲನೆ ನೀಡಿದ್ದನ್ನು ಹೊರತುಪಡಿಸಿ). ಮೂರನೆಯದಾಗಿ ಮತ್ತು ಬಹಳ ಮುಖ್ಯವಾಗಿ ಬಹುತ್ವವನ್ನು ಉಸಿರಾಡಲು ಈ ಯಾತ್ರೆ ತನ್ನ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗ ಪ್ರಚಾರ ಮಾಡಲಾಗುತ್ತಿರುವ ವಿಡಿಯೋಗಳಲ್ಲಿ ರಾಹುಲ್ ಗಾಂಧಿಯವರ ಜೊತೆಗೆ ಇಂಟರ್‌ಪ್ರಿಟರ್ ಒಬ್ಬರು ಕುಳಿತುಕೊಂಡು ತಮಿಳು, ಮಲಯಾಳಂ ಮಾತುಗಳನ್ನು ಅನುವಾದಿಸುವ ಪ್ರಕ್ರಿಯೆಯಾಗಲೀ, ವಿವಿಧ ಜಾತಿ-ಧರ್ಮಗಳ ಸಮುದಾಯದ ಜನರ ಜೊತೆಗೆ ಬೆರೆತು-ಕಲೆತು ಸಾಗುತ್ತಿರುವ ದೃಶ್ಯಗಳಾಗಲೀ, ಖಂಡಿತಾ ಕಾಂಗ್ರೆಸ್ ಕಾರ್ಯಕರ್ತರಿಗೆ ತಮ್ಮ ಪಕ್ಷ ಪ್ರತಿನಿಧಿಸಬೇಕಿದ್ದ ಮೌಲ್ಯಗಳ ಬಗೆಗೆ ದಿಟ್ಟ ಹೇಳಿಕೆಯನ್ನು ನೀಡಿದೆ. ಅದೇ ಸಮಯದಲ್ಲಿ ಹಿಂದಿ ಹೇರಿಕೆ (ಸೆಪ್ಟಂಬರ್ 14ರಂದು ಈ ದೇಶದ ಮೇಲೆ ದಬ್ಬಾಳಿಕೆ ನಡೆಸಿ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿರುವ ಹಿಂದಿ ದಿನಾಚರಣೆ ನೆನಪಿಸಿಕೊಳ್ಳಿ) ಅಥವಾ ಇತ್ತೀಚೆಗೆ ಶಿವಮೊಗ್ಗದ ಗಣೇಶ ವಿಸರ್ಜನೆ ವೇಳೆಯಲ್ಲಿ ಗೋಡ್ಸೆ ಫೋಟೋ ಪ್ರದರ್ಶಿಸಿದ-ಗುಲಬರ್ಗಾದಲ್ಲಿ ಮಸೀದಿ ಮುಂದೆ ಜನಾಂಗೀಯ ನಿರ್ನಾಮದ ಘೋಷಣೆಗಳನ್ನು ಕೂಗಿ ವಿಜೃಂಭಿಸಿದ ಸಂಘ ಪರಿವಾರದ ದ್ವೇಷ ಮತ್ತು ಒಡಕಿನ ಮನಸ್ಥಿತಿಗೆ ವಿವೇಕದ ಉತ್ತರ ನೀಡುವ ಹಾದಿಯಲ್ಲಿ ಮುಂದುವರಿದಿದೆ. ಆದರೆ, ಎಲ್ಲವೂ ಆಶಾವಾದಗಳೇ ಅಲ್ಲ.

ಈ ಯಾತ್ರೆಗೆ ಹಲವು ರೀತಿಯ ವಿರೋಧಗಳು ವ್ಯಕ್ತವಾಗಿವೆ. ಒಂದು, ನಿರೀಕ್ಷಿಸಿದಂತೆ ಸಂಘ ಪರಿವಾರದ ಶಕ್ತಿಗಳಿಂದ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ. ’ಕನ್ಯಾಕುಮಾರಿಯಲ್ಲಿ ವಿವೇಕಾನಂದರಿಗೆ ರಾಹುಲ್ ಗಾಂಧಿ ಗೌರವ ಸಲ್ಲಿಸಲಿಲ್ಲ’ ಎಂಬಂತಹ ಫೇಕ್ ಸುದ್ದಿಗಳಿಂದ ಹಿಡಿದು, ಕಾಂಗ್ರೆಸ್ ಟ್ವಿಟ್ಟರ್ ಹ್ಯಾಂಡಲ್ ಹಂಚಿಕೊಂಡ ಆರ್‌ಎಸ್‌ಎಸ್ ಖಾಕಿ ಚಡ್ಡಿ ಸುಡುವ ಫೋಟೋ ಹಿಡಿದು, ಈ ಯಾತ್ರೆ ದೇಶವನ್ನು ಸುಡುವುದಕ್ಕೆ ಹೊರಟಿದೆ ಎಂಬಂತಹ ತಳಬುಡವಿಲ್ಲದ ಮತ್ತು ದ್ವೇಷ ತುಂಬಿದ ಪ್ರತಿಕ್ರಿಯೆಗಳವರೆಗೆ ತನ್ನ ನಿಜ ಬಣ್ಣವನ್ನು ಸಂಘ ಪರಿವಾರ ಮತ್ತು ಬಿಜೆಪಿ ತೋರಿಸಿದೆ. ಮುಖ್ಯವಾಹಿನಿ ಮಾಧ್ಯಮಗಳ ಉಪೇಕ್ಷೆಯ ನಡುವೆಯೂ, ಪ್ರಾರಂಭವಾದ ಏಳು ದಿನಗಳಲ್ಲಿ ಈ ಯಾತ್ರೆಗೆ ಸಿಕ್ಕಿರುವ ಸ್ಪಂದನೆಗೆ ಬಿಜೆಪಿ ಮತ್ತು ಸಂಘ ಪರಿವಾರ ಮಾಡಿರುವ ಈ ರೀತಿಯ ಆಕ್ರೋಶದ ಮತ್ತು ಅಸತ್ಯದ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಅದಿನ್ನೂ ತಾರಕಕ್ಕೇರುವ ಸಂಭವವಿದೆ.

ಆದರೆ ಕೇರಳದ ಎಡಪಕ್ಷಗಳು ಸೇರಿದಂತೆ ಹಲವು ಪ್ರಜ್ಞಾವಂತರು ಎತ್ತಿರುವ ಕೆಲವು ಕಾಳಜಿಯ ಪ್ರಶ್ನೆಗಳಗೆ (ಎಡಪಕ್ಷಗಳದ್ದು ರಾಜಕೀಯ ಕಾರಣಕ್ಕೆ ಇದ್ದಾಗ್ಯೂ) ಭಾರತ ಜೋಡೋ ಆಯೋಜಕರು ಸಮರ್ಪಕ ಉತ್ತರ ನೀಡಲಾಗದೆ ಹೋಗಿದ್ದಾರೆ. ಅದರಲ್ಲಿ, ಮುಖ್ಯವಾದದ್ದು ದಕ್ಷಿಣದ ರಾಜ್ಯಗಳಲ್ಲಿ ಈ ಯಾತ್ರೆ ಹೆಚ್ಚು ದಿನಗಳನ್ನು ಕಳೆದು, ಗೋ ಮತ್ತು ದ್ವೇಷದ ರಾಜಕೀಯ ವಿಪರೀತವಿರುವ ಉತ್ತರದ ರಾಜ್ಯಗಳಲ್ಲಿ ಕಡಿಮೆ ಸಮಯವೇಕೆ? ಹಿಂದುತ್ವದ ಕೇಂದ್ರ ಸ್ಥಾನವಾಗಿರುವ ಗುಜರಾತ್‌ಗೆ ಪ್ರವೇಶವೇ ಪಡೆಯದಂತೆ, ಮತ್ತು ಹಿಂದುತ್ವದ ಉತ್ತುಂಗದಲ್ಲಿ ಅರಾಜಕತೆಯಿಂದ ಕೂಡಿರುವ ಉತ್ತರಪ್ರದೇಶವನ್ನು ಸವರಿ ಬರುವಂತೆ ಈ ಯಾತ್ರೆಯನ್ನು ಆಯೋಜಿಸಿದ್ದೇಕೆಂಬುದು? ಹಿಂದುತ್ವದ ಅವಿವೇಕ ತಾರಕಕ್ಕೇರಿರುವ ಈ ರಾಜ್ಯಗಳಲ್ಲಿ ಈ ಭಾರತ್ ಜೋಡೋ ಯಾತ್ರೆಯ ಅವಶ್ಯಕತೆ ಹೆಚ್ಚಿತ್ತು. ಇದ್ದುದರಲ್ಲಿ ಉತ್ತಮವಾಗಿರುವ ದಕ್ಷಿಣದ ಸೌಹಾರ್ದತೆ ಮತ್ತು ಕೂಡು ಸಂಸ್ಕೃತಿಯನ್ನು ಉತ್ತರಕ್ಕೆ ಕೊಂಡೊಯ್ಯುತ್ತೇವೆ ಮತ್ತು ಭಾರತವೆಂದರೆ ಉತ್ತರ ರಾಜ್ಯಗಳು ಮಾತ್ರವೆಂಬ ಯಜಮಾನಿಕೆಯನ್ನು ಮುರಿಯುತ್ತೇವೆಂದು ಆಯೋಜಕರು ಉತ್ತರಿಸಬಹುದಾದರೂ, ಕ್ಷೆಭೆಯ ರಾಜ್ಯಗಳಲ್ಲಿನ ಸಮಾಜವನ್ನು ಜೋಡಿಸುವುದು ಇಂದು ಹೆಚ್ಚು ತುರ್ತಿನ ಕೆಲಸವಾಗಿರುವುದಂತೂ ಸತ್ಯ. (ಉತ್ತರ ಪ್ರದೇಶದಲ್ಲಿ ನಡಿಗೆಯನ್ನು ನಾಲ್ಕು ದಿನಗಳ ಕಾಲ ವಿಸ್ತರಿಸುವುದಾಗ ಸೆಪ್ಟಂಬರ್ 14ರಂದು ಆಯೋಜಕರು ಘೋಷಿಸಿದ್ದಾರೆ).

ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿಯೇ ಕಾಂಗ್ರೆಸ್ ಹೊರತುಪಡಿಸಿದ ಕೆಲವು ರಾಜಕೀಯ ಪಕ್ಷಗಳು ಮೈತ್ರಿಕೂಟವನ್ನು ರಚಿಸುವ ಬಗ್ಗೆ ಚುರುಕಾಗಿವೆ. ಅದರಲ್ಲಿ ಮುಖ್ಯವಾಗಿ ಬಿಹಾರದ ಜೆಡಿಯುವಿನ ನಿತೀಶ್ ಕುಮಾರ್, ತೆಲಂಗಾಣದ ಟಿಆರ್‌ಎಸ್‌ನ ಚಂದ್ರಶೇಖರ್ ರಾವ್ ಮತ್ತು ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಮಮತಾ ಬ್ಯಾನರ್ಜಿ ಮುಂಚೂಣಿಯಲ್ಲಿದ್ದಾರೆ. ಇದರ ಜೊತೆಗೆ ಬಿಹಾರದ ಆರ್‌ಜೆಡಿಯ ತೇಜಸ್ವಿ ಯಾದವ್, ಮಹಾರಾಷ್ಟ್ರದ ಎನ್‌ಸಿಪಿಯ ಶರದ್ ಪವಾರ್ ಕೂಡ ಇದ್ದಾರೆ. ಕರ್ನಾಟಕದ ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿಯವರನ್ನು ಹಿಂದೊಮ್ಮೆ ಚಂದ್ರಶೇಖರ್ ರಾವ್ ಅವರೂ, ಇತ್ತೀಚೆಗೆ ನಿತೀಶ್ ಕುಮಾರ್ ಅವರೂ ಭೇಟಿಯಾಗಿ ಹೋಗಿದ್ದಾರೆ. ನಮ್ಮದು ಥರ್ಡ್ ಫ್ರಂಟ್ ಅಲ್ಲ, ಮೇಯ್ನ್ ಫ್ರಂಟ್ ಎಂದು ನಿತೀಶ್ ಕುಮಾರ್ ಇತ್ತೀಚೆಗೆ ಹೇಳಿದ್ದು, ವಿರೋಧ ಪಕ್ಷಗಳು ಒಂದಾದರೆ ಬಿಜೆಪಿಯ ಸೀಟುಗಳನ್ನು ಈಗಿನ ಅರ್ಧಕ್ಕೆ ಇಳಿಸಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಾತ್ರದ ಬಗ್ಗೆ ಕೆಲವರು ವಿರೋಧ (ಚಂದ್ರಶೇಖರ್ ರಾವ್) ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಸಂಶಯ ಅಥವಾ ಎಚ್ಚರಿಕೆಯನ್ನು (ತೇಜಸ್ವಿ ಯಾದವ್) ವ್ಯಕ್ತಪಡಿಸಿದ್ದಾರೆ. ಈ ಮೈತ್ರಿಕೂಟದಲ್ಲಿ ಆರ್‌ಜೆಡಿ ಪಕ್ಷವನ್ನು ಹೊರತುಪಡಿಸಿದರೆ, ಸಂಘ ಪರಿವಾರದ ಕ್ರೂರ ಸಿದ್ಧಾಂತಗಳನ್ನು ಗಟ್ಟಿಯಾಗಿ ವಿರೋಧಿಸಬಲ್ಲ ಧ್ವನಿಗಳು ಕಡಿಮೆ. ಬಿಜೆಪಿಯನ್ನು ರಾಜಕೀಯವಾಗಿ ಮಮತಾ ಮತ್ತು ಚಂದ್ರಶೇಖರ್ ಅಂತಹವರು ವಿರೋಧಿಸಿದರೂ, ದ್ವೇಷದ ಸಿದ್ಧಾಂತವನ್ನು ಮೆಟ್ಟಿನಿಲ್ಲುವ ಕಾರ್ಯಕ್ರಮಗಳು ಇವರ ಬಳಿಯಿಲ್ಲ. ಬ್ರಾಹ್ಮಣ್ಯದ ಪಾರಮ್ಯದ ಮಾತುಗಳನ್ನು ಈ ಇಬ್ಬರೂ ಮುಖಂಡರು ಆಗಾಗ್ಗೆ ಉಚ್ಚರಿಸಿರುವುದು ಕೂಡ ಇದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ತಳೆದಿರುವ (ಕನಿಷ್ಠ ಪಕ್ಷ ಅವರ ಕೆಲವಾದರೂ ಮುಖಂಡರು) ಸಂಘ ಪರಿವಾರ ಪ್ರಣೀತ ದ್ವೇಷವನ್ನು ಕೊನೆಗಾಣಿಸುವ ನಿಲುವಿಗೂ, ಈ ಮೈತ್ರಿಕೂಟದ ಕೇವಲ ರಾಜಕೀಯ ಹೋರಾಟದ ನಿಲುವಿಗೂ ಸಾಕಷ್ಟು ವ್ಯತ್ಯಾಸಗಳಿವೆ.

ಇಂತಹ ವಿರೋಧಾಭಾಸಗಳ ನಡುವೆಯೂ, ಕ್ರಿಟಿಕಲ್ ಎನಿಸಿರುವ ಈ ಕಾಲದೇಶದಲ್ಲಿ, ದ್ವೇಷ ಮತ್ತು ರಾಜಕೀಯ ಧ್ರುವೀಕರಣ ತಾರಕಕ್ಕೇರಿರುವ ಸಮಯದಲ್ಲಿ ಎಲ್ಲಾ ವಿರೋಧ ಪಕ್ಷಗಳೂ ಒಂದಲ್ಲ ಒಂದು ರೀತಿಯಲ್ಲಿ ಪುಟಿದೇಳಲು ಪ್ರಯತ್ನಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ವಿರೋಧವೇ ಇರದೆ ಸರ್ವಾಧಿಕಾರಿ ಧೋರಣೆಗೆ ಅವಕಾಶ ಕೊಡೆವು ಎಂಬ ಸಾಮಾನ್ಯ ನಿಲುವಿನ ಕಾರ್ಯಕ್ರಮದ ಮೇರೆಗೆ ಈ ಎಲ್ಲಾ ಪಕ್ಷಗಳು ಒಗ್ಗೂಡಿ ಕೆಡುಕನ್ನು ಎದುರಿಸಬಲ್ಲವೇ? ಇದಕ್ಕೆ ಭಾರತ್ ಜೋಡೋ ಯಾತ್ರೆ ಅವಕಾಶ ಮಾಡಿಕೊಡಬಲ್ಲದೇ?


ಇದನ್ನೂ ಓದಿ: ನಾವು ಪುಟಿದೆದ್ದು ಬರುತ್ತೇವೆ, ಭಾರತ್ ಜೋಡೋ ಯಾತ್ರೆ ಬಿಜೆಪಿಯನ್ನು ಅಲ್ಲಾಡಿಸಿದೆ: ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...