‘ಕಾಂತಾರ’ ಸಿನಿಮಾದಲ್ಲಿನ ‘ವರಹ ರೂಪಂ’ ಹಾಡಿಗೂ ಮಲಯಾಳಂನ ‘ನವರಸಂ’ ಆಲ್ಬಮ್‌ಗೂ ಸಾಮ್ಯತೆಗಳು ಕಂಡು ಬಂದಿದ್ದು, ಕಾಂತಾರ ಚಿತ್ರತಂಡವು ಟ್ಯೂನ್ ಕದ್ದಿರುವ ಆರೋಪಕ್ಕೆ ಗುರಿಯಾಗಿದೆ.
ಈ ಕುರಿತು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ ‘ಥೈಕ್ಕುಡಂ ಬ್ರಿಡ್ಜ್’ ಕಾನೂನು ಕ್ರಮ ಜರುಗಿಸಲು ನಿರ್ಧರಿಸಿದೆ. ‘ಕಾಂತಾರ’ ಚಿತ್ರದ ‘ವರಹ ರೂಪಂ’ ಹಾಡಿಗೆ ಆಕ್ಷೇಪ ಎತ್ತಿದ್ದು, ಕೃತಿಚೌರ್ಯದ ಆರೋಪ ಮಾಡಿದೆ.
‘ಕಾಂತಾರ’ ಚಿತ್ರತಂಡದಿಂದ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದಿರುವ ‘ಥೈಕ್ಕುಡಮ್ ಬ್ರಿಡ್ಜ್’ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
“ತೈಕ್ಕುಡಂ ಬ್ರಿಡ್ಜ್’ಗೂ ‘ಕಾಂತಾರ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದನ್ನು ನಮ್ಮ ಕೇಳುಗರು ತಿಳಿದುಕೊಳ್ಳಬೇಕು. ನಮ್ಮ ‘ನವರಸಂ’ ಮತ್ತು ಕಾಂತಾರದ ‘ವರಾಹ ರೂಪಂ’ ಹಾಡಿನ ನಡುವೆ ಸ್ಪಷ್ಟ ಹೋಲಿಕೆಗಳು ಕಂಡು ಬಂದಿವೆ. ಆದ್ದರಿಂದ ಇದು ಹಕ್ಕುಸ್ವಾಮ್ಯ ಕಾನೂನುಗಳ ಉಲ್ಲಂಘನೆಯಾಗಿದೆ” ಎಂದು ‘ಥೈಕ್ಕುಡಮ್ ಬ್ರಿಡ್ಜ್’ ತಿಳಿಸಿದೆ.
“ನಮ್ಮ ದೃಷ್ಟಿಕೋದಲ್ಲಿ ‘ಸ್ಫೂರ್ತಿ’ ಮತ್ತು ‘ಚೌರ್ಯ’ ಎರಡೂ ವಿಭಿನ್ನ ಮತ್ತು ನಿರ್ವಿವಾದ. ಆದ್ದರಿಂದ ನಾವು ಇದಕ್ಕೆ ಕಾರಣವಾದ ತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬಯಸುತ್ತೇವೆ” ಎಂದು ಎಚ್ಚರಿಸಿದೆ.
View this post on Instagram
“ಈ ವಿಷಯದಲ್ಲಿ ನಾವು ನಮ್ಮ ಕೇಳುಗರ ಬೆಂಬಲವನ್ನು ಅಪೇಕ್ಷಿಸುತ್ತೇವೆ. ಈ ಬಗ್ಗೆ ಪ್ರಚಾರ ಮಾಡಲು ನಿಮ್ಮನ್ನು ನಾವು ಕೋರುತ್ತೇವೆ. ಅಲ್ಲದೆ, ಸಂಗೀತದ ಹಕ್ಕುಸ್ವಾಮ್ಯವನ್ನು ರಕ್ಷಿಸುವ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಹ ಕಲಾವಿದರನ್ನು ನಾವು ವಿನಂತಿಸುತ್ತೇವೆ” ಎಂದು ತಿಳಿಸಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ‘ಕಾಂತಾರ’ ಸಿನಿಮಾ ಅಭೂತಪೂರ್ವ ಯಶಸ್ಸು ಪಡೆದಿದ್ದು, ಅಜನೀಶ್ ಬಿ.ಲೋಕನಾಥ್ ಸಂಗೀತ ನಿರ್ದೇಶಿಸಿದ್ದಾರೆ. ‘ವರಹ ರೂಪಂ’ ಹಾಗೂ ‘ಸಿಂಗಾರ ಸಿರಿಯೇ’ ಹಾಡಿನ ಟ್ಯೂನ್‌ಗಳ ಮೇಲೆ ಕೃತಿಚೌರ್ಯದ ಆಕ್ಷೇಪಗಳನ್ನು ಪ್ರೇಕ್ಷಕರು ಮಾಡಿದ್ದರು.
‘ಸಿಂಗಾರ ಸಿರಿಯೇ’ ಹಾಡಿಗೂ ‘ಅಜಯ್- ಅತುಲ್’ ಅವರ ‘ಅಪ್ಸರ ಆಲಿ’ ಹಾಡಿಗೂ ಸಾಮ್ಯತೆಯನ್ನು ಪ್ರೇಕ್ಷಕರು ಗುರುತಿಸಿದ್ದರು.
ಇದನ್ನೂ ಓದಿರಿ: ‘ಕಾಂತಾರ’ ದೈವಕ್ಕೂ ‘ಕರ್ಣನ್’ ದೈವಕ್ಕೂ ಎಷ್ಟೊಂದು ವ್ಯತ್ಯಾಸ!
ಈ ಕುರಿತು ಇತ್ತೀಚೆಗೆ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ್ದ ಸಂಗೀತ ನಿರ್ದೇಶಕ ಅಜನೀಶ್ ಬಿ.ಲೋಕನಾಥ್, “ವರಹ ರೂಪಂ ಹಾಡು ರ್‍ಯಾಕ್ ಮ್ಯೂಸಿಕ್ ಶೈಲಿಯದ್ದಾಗಿದೆ. ಆದರೆ ರಾಗ ಸಂಯೋಜನೆ ಸಂಪೂರ್ಣ ಭಿನ್ನವಾಗಿದೆ. ಶೈಲಿ ಹಾಗೂ ರಾಗದ ಛಾಯೆ ಒಂದೇ ರೀತಿ ಇರುವುದರಿಂದ ‘ವರಹಾ ರೂಪಂ’ಗೂ ‘ನವರಸಂ’ಗೂ ಸಾಮ್ಯತೆ ಇದೆ ಅನಿಸುತ್ತದೆ. ಖಂಡಿತವಾಗಿಯೂ ನವರಸಂನಿಂದ ಸ್ಫೂರ್ತಿ ಇದೆ. ರಾಗ ಛಾಯೆ ಹಾಗೂ ಶೈಲಿ ಒಂದೇ ಆಗಿದ್ದರಿಂದ ಹೋಲಿಕೆ ಬರುತ್ತದೆ” ಎಂದಿದ್ದರು.
“ಸಿಂಗಾರ ಸಿರಿಯೇ ಹಾಡಿಗೂ ಅಪ್ಸರ ಅಲಿ ಹಾಡಿಗೂ ಸಂಬಂಧವಿಲ್ಲ. ಕೊರಸ್ ಬರುವ ಕಡೆ ಸಾಮ್ಯತೆ ಇದೆ ಎನಿಸುತ್ತದೆ” ಎಂದು ಸ್ಪಷ್ಪಪಡಿಸಿದ್ದರು.


