Homeಕರ್ನಾಟಕರಾಜೀವ ತಾರಾನಾಥ: ಜಾತ್ಯತೀತ ಪರಂಪರೆಯ ಮಾತು

ರಾಜೀವ ತಾರಾನಾಥ: ಜಾತ್ಯತೀತ ಪರಂಪರೆಯ ಮಾತು

- Advertisement -
- Advertisement -

ರಾಜೀವ ತಾರಾನಾಥರಿಗೆ 90 ವರ್ಷ ತುಂಬಿತು. ಅವರ ಶಿಷ್ಯರೂ ಅಭಿಮಾನಿಗಳು ಸೇರಿ, ಮೈಸೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರಲ್ಲಿ ಅವರು ಮಾಡಿದ ಭಾಷಣದ ಕೆಲವು ಭಾಗಗಳು ಹೀಗಿವೆ: “ನನ್ನ ತಾಯಿಮಾತು, ಮಾತೃಭಾಷೆಯಲ್ಲ, ತಾಯಿನುಡಿ ಕನ್ನಡವಲ್ಲ. ತಮಿಳು. ಆದರೆ ಕನ್ನಡ ನನಗೆ ಮೈಗೂಡಿತು. ಎಷ್ಟೋ ಮಟ್ಟಿಗೆ ಬೇರೆಬೇರೆ ಅಭ್ಯಾಸಗಳನ್ನು ಬೇರೆಬೇರೆ ಪರಂಪರೆಗಳನ್ನು ಇಡೀ ಈ ಉಪಖಂಡದಲ್ಲಿ, ಈ ನಮ್ಮ ಕರ್ನಾಟಕದಲ್ಲಿ ಮಾತ್ರ ಕಾಣಬಹುದು. ಈ ಉಪಖಂಡದ ಎರಡೂ ಅಭಿಜಾತ ಸಂಗೀತಗಳು ಇಲ್ಲಿ ಬದುಕಿವೆ, ಬೆಳೆದಿವೆ, ಇವತ್ತೂ ಇವೆ. ಬೇರೆಬೇರೆ ಭಾಷೆಯವರು ತೆಲುಗು ಮಾತಾಡೋರು, ತಮಿಳು ಮಾತಾಡೋರು ಕೊಂಕಣಿ ಮಾತಾಡೋರು-ಅದು ನನ್ನ ಪಿತೃಭಾಷೆ-ಇವೆಲ್ಲವನ್ನು ಮೈಗೂಡಿಸಿಕೊಂಡ ಕರ್ನಾಟಕ ಇವಾಗ ಇದೆಯಾ? ಸ್ವಲ್ಪ ವಿಚಾರ ಮಾಡಬೇಕು. ಹಾಗೆ ಮಾಡಿದಾಗ ನನಗೆ ಬೇಸರ ಬರತದ. ಈ ಕರ್ನಾಟಕದಲ್ಲಿ ತಮಿಳರಾದ ಮಾಸ್ತಿ, ಪು.ತಿ. ನರಸಿಂಹಾಚಾರ್, ನ ರತ್ನ, ಬಹಳ ಚೆನ್ನಾಗಿ ಬರೆದರು. ಗಿರೀಶ್ ಕಾರ್ನಾಡ್, ಒಬ್ಬ ಕೊಂಕಣಿಗ. ಈ ಪಂಡಿತ ತಾರಾನಾಥ ಕೊಂಕಣೀನೂ ಹೌದು, ಕನ್ನಡಾನೂ ಹೌದು, ಉರ್ದೂನೂ ಹೌದು. ಎಲ್ಲ ಸೇರಿ ಒಂದು ಸೀಕರಣೆಯಾಗಿ ಈ ಕರ್ನಾಟಕದಲ್ಲಿ ನಾವು ಇದ್ದೀವಿ. ಆದರೆ ಇವತ್ತಿನ ದಿವಸ ನಾವು ಬೇವಿನ ರಸ ಕುಡೀತಿದೀವಿ ಅನಸ್ತದ. ಇದು ಹೋಗಬೇಕು. ಮತ್ತ ಆ ಸೀಕರಣೆ ಬರಬೇಕು. ಮತ್ತ ಈ ಸಿಹಿ ಬರಬೇಕು. ಮತ್ತ ನಾವೆಲ್ಲ ಒಟ್ಟಾಗಿ ಬದುಕಬೇಕು.

“ಏನೋ ಒಂದು ಇಮಾರತು ಅದ. ಅದನ್ನು ಹೊಡದ ಕೆಡವಿಬಿಡೋಣ. ಅದರ ಕೆಳಗೆ ಮತ್ತೇನನ್ನೋ ಹುಡುಕೋದು. ಎಲ್ಲಾ ಕಡೆ ಅದೇ ಹುಡಕೋದು. ಏನಾಗಿದೆ ನಮಗೆ? ವಿವೇಚನೆ ಸಹನೆ ವಿವೇಕ ಸೂಕ್ಷ್ಮತೆ ಇವೆಲ್ಲ ಹೋಗಿಬಿಟ್ಟಿವೆ. ನಮ್ಮ ಸಂಗೀತದಲ್ಲಿ ಅವನು ಗುಡೀಗೆ ಹೋಗ್ತಾನೊ ಮಸೀದಿಗೆ ಹೋಗ್ತಾನೊ ಪ್ರಶ್ನೇನೆ ಇಲ್ಲ. ನಾವೆಲ್ಲ ಸಂಗೀತಕ್ಕೆ ಹೋಗತೀವಿ. ಹೋಗೋ ಪ್ರಯತ್ನ ಮಾಡತೀವಿ. ಆ ಸಂಗೀತದಲ್ಲಿ ಬದುಕ್ತೀವಿ. ಸಂಗೀತದಲ್ಲೇ ಸಾಯತೀವಿ. ಬಹಳ ದೊಡ್ಡವರೊಬ್ಬರ ಕತೀ ಹೇಳತೇನಿ. ಖಾನಸಾಹೇಬ್ ಉಸ್ತಾದ್ ಅಬ್ದುಲ್ ಕರೀಂಖಾನ್ ಅಂತ ಹೇಳಿ. ಇಲ್ಲಿ ಆಳುವ ಮಹಾರಾಜರು ಅವರನ್ನ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿದ್ದರು. ಅವರೊಮ್ಮೆ ಮದರಾಸಿನಿಂದ ಪಾಂಡಿಚೇರಿಗೆ ಹೋಗಬೇಕಾದರೆ, ದಾರಿಯೊಳಗೆ ಒಂದು ದೊಡ್ಡ ಜಂಕ್ಷನ್, ವೀಳ್ಳುಪುರಂ ಅಂತ. ಆಗ ಅವರಿಗೆ ಏನೋ ಅನಿಸಿತು. ಬೆಳಗಾನ ಮುಂಚೆ. ಅವರೂ ಅವರ ಶಿಷ್ಯರೂ ಇಳಿದರು. ಪ್ಲಾಟ್‌ಫಾರಂ ಮೇಲೆ ಕೂತ್ಕೊಂಡು, ತಂಬೂರಿ ಶೃತಿ ಮಾಡಕೊಂಡು ಭೈರವಿ ರಾಗ ಹಾಡಲಿಕ್ಕೆ ಶುರುಮಾಡಿದರು. ಅತ್ಲಾಗೆ ಸೂರ್ಯೋದಯ ಆಗತಾ ಇದ್ದಾಗಲೇ ಇಲ್ಲಿ ಇವರ ಪ್ರಾಣ ಹಂಗೇ ಹೋಗಿಬಿಡ್ತು. ಅದಕ್ಕೆ ಪುಣ್ಯಾ ಮಾಡಿರಬೇಕರಿ. ಅವರು ಹೋದೋರು ಮಾತ್ರ ಅಲ್ಲ, ಆ ಒಂದು ಗಳಿಗೆ ಬಗ್ಗೆ ತಿಳಿದವರು, ತಿಳಕೊಳ್ಳೋಕೆ ಬಯಸೋರು, ನೀವು ನಾವು ಎಲ್ಲರೂ ಪುಣ್ಯಾ ಮಾಡಿರಬೇಕು.

“ಸಂಗೀತಕ್ಕೆ ದಿಲ್‌ದಾರತನ, ದೊಡ್ಡಹೃದಯ ಇರಬೇಕು. ನಾವು ಇಂಥಾ ಅಬ್ದುಲ್ ಕರೀಂ ಖಾನಸಾಹೇಬರನ್ನ ನೆನೆಸೊ ಕ್ಷಮತಾ ಕಳಕೊಂಡುಬಿಟ್ಟಿದೀವಿ. ಯಾಕಂದರೆ, ಅವರು ನಮ್ಮ ಜಾತಿಯವರಲ್ಲ. ಆದರೆ ನಾವೆಲ್ಲ ಅವರಲ್ಲಿ ಕಲತೋರು. ಇಲ್ಲಿ ಸೇರಿದ ನಾವೆಲ್ಲರೂ ಅವರಿಂದ ಕಲತೋರು. ಅವರ ಮಕ್ಕಳು ಮೊಮ್ಮಕ್ಕಳು, ಅವರ ಮಾನಸ ಮಕ್ಕಳು ಮಾನಸ ಮೊಮ್ಮಕ್ಕಳಲ್ಲಿ ಕಲಿತವರು. ನನ್ನ ಗುರುಗಳು ಅಲಿ ಅಕಬರಖಾನರು ನನ್ನ ಕಡೆಯಿಂದ ಒಂದು ರೂಪಾಯಿ ತಗೊಂಡೋರಲ್ಲ. ಬೈದರು. ಬೈಯ್ಯಲಿ. ಅವರು ಸಂಗೀತದ ಗುಂಗಿನಲ್ಲಿದ್ದವರು.

“ಇವತ್ತು ಬೆಳಗಿನಿಂದ ನನ್ನ ಮನೆಯೊಳಗೆ ಒಂದು ದೊಡ್ಡ ಪ್ರವಾಹ, ಹೊಳೆ, ಬೆಳಗಿನ ಐದು ಗಂಟೆಯಿಂದ ಶುರುವಾಗಿಬಿಟ್ಟದೆ. ಇವತ್ತು ಮುಂಜಾನೆ ಒಂದು ಅಪರೂಪದ ರಾಗ ನೆನಪಾತು. ಲಲಿತಾಗೌರಿ. ಅದರಲ್ಲಿ ಒಂದು ಬಂದಿಶ್ ಗುರುಗಳು ಕಲಿಸಿದ್ದು ಹೀಂಗ ಬಂತು. ಹಾಡಿದೆ. ನಮ್ಮ ಫಯ್ಯಾಜ್ ಖಾನ್ ನನಗ ಇದು ಬೇಕು ಅಂತ ರೆಕಾರ್ಡ್ ಮಾಡಿಕೊಂಡರು.

“ನನಗ ತೊಂಬತ್ತು ವರ್ಷ. ನಾನು ಏನು ಮಾಡಬೇಕು? ಮಂದಿ ಹೇಳತಾರೆ ‘ನೀವು ಆರಾಮ ಮಾಡ್ರಿ, ದೇವರ ಧ್ಯಾನಾ ಮಾಡತಾ ಕೂಡ್ರಿ’ ಅಂತ. ಆದರೆ ನಮಗೆ ಸಂಗೀತವೇ ದೇವರು. ಅಲಿ ಅಕಬರಖಾನರೇ ದೇವರು. ಅವರೇ ಸಂಗೀತ. ಅಷ್ಟು ಸಾಕು. ಹಾಡ್ತಾ ಹೋಗ್ತೀನಿ.”

ಸುಮಾರು 16 ನಿಮಿಷಗಳ ತಮ್ಮ ಈ ಭಾಷಣವನ್ನು ರಾಜೀವ ತಾರಾನಾಥರು, ಉಸಿರಾಟದ ಸಮಸ್ಯೆಯಿಂದ ಒಂದೊಂದೇ ಪದವನ್ನು ನಿಧಾನವಾಗಿ ನಿಟ್ಟುಸಿರುಬಿಡುವಂತೆ ಮಾತಾಡಿದರು. ಅವರು ಉಪನ್ಯಾಸದಲ್ಲಿ ಮೂರು ಸಂಗತಿಗಳಿವೆ.

ಇದನ್ನೂ ಓದಿ: ಗುಂಡ್ಲುಪೇಟೆ: ದಲಿತ ಮಹಿಳೆಯ ಕೆನ್ನೆಗೆ ಥಳಿಸಿದ ಸಚಿವ ಸೋಮಣ್ಣ

1. ಭಾಷಾ ಸಾಮರಸ್ಯ. ಹಲವು ಭಾಷಿಕರು ಒಂದಾಗಿ ಬಾಳುವ ಕರ್ನಾಟಕ ಕಟ್ಟುವ ಭಾಷಾ ಬಹುತ್ವ ಮತ್ತು ಬಾಂಧವ್ಯಕ್ಕೆ ಬಹುಶಃ ಕರ್ನಾಟಕದಲ್ಲಿ ಹೆಚ್ಚಿನ ಧಕ್ಕೆ ಬಂದಿಲ್ಲ. ಬೇರೆಬೇರೆ ಮನೆಮಾತಿನವರು ಕನ್ನಡದಲ್ಲಿ ಬರೆಯುವುದರ ಬಗ್ಗೆ ಸ್ವಾಗತವಿದೆ. ಮನ್ನಣೆಯಿದೆ. ಅವರ ಮನೆಮಾತಿನ ಕಾರಣಕ್ಕೆ ಅವರ ಬರೆಹಕ್ಕೆ ಅನ್ಯಾಯವಾಗಿದೆ ಎನಿಸುವುದಿಲ್ಲ. ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯ, ವಿಜಯಮ್ಮ (ತೆಲುಗು), ಬೇಂದ್ರೆ, ಶಂಬಾ (ಮರಾಠಿ) ಗಿರೀಶ್, ವಿವೇಕ, ಜಯಂತ್ (ಕೊಂಕಣಿ) ಕಟ್ಪಾಡಿ, ಬೊಳುವಾರು (ಬ್ಯಾರಿ), ರಶೀದ, ಸಾರಾ (ಮಲೆಯಾಳ), ನಿಸಾರ್ ಅಹಮದ್, ಶರೀಫಾ (ಉರ್ದು), ಲಲಿತಾ ನಾಯಕ (ಲಂಬಾಣಿ)-ಹೀಗೆ ಈ ಪಟ್ಟಿಯನ್ನು ಮುಂದುವರಿಸಬಹುದು. ಅಪಾರ ಜನಪ್ರಿಯತೆ ಪಡೆದಿದ್ದ ನಿಸಾರ್, ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಎಂದು ನೋವಿನ ಪದ್ಯ ಬರೆದಿದ್ದು, ಕನ್ನಡ ಲೇಖಕನಾಗಿ ಅನುಭವಿಸಿದ ಪಕ್ಷಪಾತದಿಂದಲ್ಲ. ಮುಸ್ಲಿಮನಾಗಿ ಮತೀಯವಾದಿ ರಾಷ್ಟ್ರೀಯವಾದದ ಕಣ್ಣಲ್ಲಿ ಶಂಕಿತನಾಗಿದ್ದಕ್ಕೆ.

2. ಸಂಗೀತಲೋಕದಲ್ಲಿರುವ ಜಾತ್ಯತೀತ ಪರಂಪರೆ. ಈ ಹೇಳಿಕೆ, ಕರ್ನಾಟಕ ಸಂಗೀತಕ್ಕಿಂತಲೂ ಹಿಂದೂಸ್ತಾನಿ ಸಂಗೀತಕ್ಕೆ ಹೆಚ್ಚು ಅನ್ವಯವಾಗುತ್ತದೆ. ನಮಗೆಲ್ಲ ತಿಳಿದಂತೆ ಮಲ್ಲಿಕಾರ್ಜುನ ಮನ್ಸೂರರು, ತಮ್ಮ ವಿದ್ಯಾಗುರುಗಳಾದ ಬುರ್ಜಿಖಾನ್ ಹಾಗೂ ಮಂಜಿಖಾನ್ ಅವರ ಪುಣ್ಯತಿಥಿಗಳನ್ನು ಕೊನೆಯ ತನಕ ಮಾಡುತ್ತಿದ್ದರು. ಆದರೆ ಭಾರತೀಯ ಸಮಾಜದಲ್ಲಿ ಮತೀಯವಾದವು ಎಲ್ಲ ಕ್ಷೇತ್ರಗಳನ್ನೂ ಪ್ರವೇಶಿಸಿದ್ದರಿಂದ ಈ ಪರಂಪರೆಯಲ್ಲೂ ಬಿರುಕುಗಳಿವೆ. ಮುಸ್ಲಿಮ ಕಲಾವಿದರ ಉಸ್ತಾದ್ ಪರಂಪರೆಯನ್ನು ಬದಿಗೆ ಸರಿಸುವ ವಿಸ್ಮೃತಿಗೆ ತಳ್ಳುವ ಯತ್ನಗಳು ಸೂಕ್ಷ್ಮಸ್ತರದಲ್ಲಿ ನಡೆಯುತ್ತಿವೆ. ಹಿಂದೂಸ್ತಾನಿ ಸಂಗೀತವನ್ನು ಮುಸ್ಲಿಂ ಉಸ್ತಾದರ ಹಿಡಿತದಿಂದ ತಪ್ಪಿಸಬೇಕೆಂದು 20ನೇ ಶತಮಾನದ ಆದಿಯಲ್ಲೇ ಪ್ರಯತ್ನಗಳು ಶುರುವಾಗಿದ್ದವು. ಇದನ್ನು ಪಂಡಿತ್ ಫಲುಸ್ಕರ್ ಹಾಗೂ ಉಸ್ತಾದ್ ಅಬ್ದುಲ್ ಕರೀಂಖಾನರನ್ನು ಇಟ್ಟುಕೊಂಡು ಚರ್ಚೆ ಮಾಡಿರುವ ಸಂಗೀತ ಚಿಂತಕರಾದ ಜಾನಕಿ ಭಾಕ್ಲೆಯವರು ವಿಶ್ಲೇಷಣೆ ಮಾಡಿರುವರು.

ರಾಜೀವ ತಾರಾನಾಥರು ಆದರ್ಶವೆಂದು ಪ್ರತಿಪಾದಿಸುವ ಕಲಾಲೋಕದ ಜಾತ್ಯತೀತತೆಯು, ಆಲೋಚನೆಯಾಗಿ ಹುಟ್ಟಿದದಲ್ಲ. ಅವರ ಸ್ವಂತ ಅನುಭವದಿಂದ ಹುಟ್ಟಿದ್ದು. ಈ ಜಾತ್ಯತೀತ ಕಲಾಸಂಬಂಧವು ರಕ್ತಸಂಬಂಧವಾಗಿ ಮುಂದುವರಿದಿದ್ದೂ ಇದೆ. ರಾಜೀವರ ಗುರು ಅಲಿ ಅಕಬರಖಾನರ ಸೋದರಿ ಅನ್ನಪೂರ್ಣಾದೇವಿ, ಪಂಡಿತ ರವಿಶಂಕರ್ ಅವರ ಜೀವನಸಂಗಾತಿಯಾದರು. ಸ್ವತಃ ರಾಜೀವರ ತಂದೆ ಪಂಡಿತ ತಾರಾನಾಥರು ಬೆಳೆಸಿದ ಸಂಗೀತ ಮತ್ತು ವೈದ್ಯ ಶಿಷ್ಯರಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಇದ್ದರು. ಮುಸ್ಲಿಂ ಧಾರ್ಮಿಕ ಹಿನ್ನೆಲೆಯಿಂದ ಬಂದ, ಕರೀಂಖಾನರು ಭೈರವಿ ರಾಗವನ್ನು ಹಾಡುತ್ತ ಪ್ರಾಣವಿಸರ್ಜನೆ ಮಾಡುವ ಪ್ರಕರಣವು, ಹಿಂದೂಸ್ತಾನಿ ಸಂಗೀತ ಲೋಕದಲ್ಲಿರುವ ಜಾತ್ಯತೀತತೆಗೂ ಆತ್ಯಂತಿಕ ಪ್ರತೀಕವಾಗಿದೆ.

3. ವೃದ್ಧಾಪ್ಯದಲ್ಲಿಯೂ ಸಂಗೀತ ಅಥವಾ ತನ್ನ ಮಾಧ್ಯಮವನ್ನೇ ದೈವವನ್ನಾಗಿ ಭಾವಿಸಿ, ಅನುಸಂಧಾನ ಮಾಡುವ ಕಲಾವಿದರ ಹೊಸಧರ್ಮದ ಕಲ್ಪನೆ. ಕಲಾಧರ್ಮದ ಕಲ್ಪನೆ. ಬರವಣಿಗೆಯ ಲೋಕದಲ್ಲಿಯೂ ಅತ್ಯುತ್ತಮ ಸಾಹಿತ್ಯ ಸೃಷ್ಟಿಮಾಡುವುದನ್ನು ಜೀವನ್ಮರಣ ಪ್ರಶ್ನೆಯಾಗಿಸಿಕೊಂಡ ಲೇಖಕರು ಇದ್ದಾರೆ. ತನಗೆ ಬರವಣಿಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಲೇಖಕರೂ ಇದ್ದಾರೆ. ಆದರೆ ಸಂಗೀತದ ಲೋಕದಲ್ಲಿ ಕಲೆಯ ದೈವೀಕರಣವು, ಬೇರೆ ಬಗೆಯ ಆಧ್ಯಾತ್ಮಿಕ ಆಯಾಮವನ್ನು ಒಳಗೊಂಡಿದೆ. ಇದು ಸೂಫಿ ಕಬೀರಪಂಥ ಒಳಗೊಂಡಂತೆ ಸಂಗೀತವು ಟ್ರಾನ್ಸ್ ಅವಸ್ಥೆಗೆ ಕಲಾವಿದರು ಮತ್ತು ಕೇಳುಗರು ಹೋಗುವ ಸಾಧನೆಯ ಸಂಗತಿಯಾಗಿದೆ. ಹೀಗಾಗಿ, ಸಂಗೀತದಲ್ಲಿ ರಿಯಾಜ್ ಮಾಡಲು ಆಗದೆ ಇರುವುದು ಎಂದರೆ ಅವರಿಗೆ ಮರಣಕ್ಕೆ ಸಮಾನ. ತನ್ನ ಸಾವನ್ನು ಹಾಡುವಾಗಲೇ ಅನುಭವಿಸುವ ಕರೀಂಖಾನರ ಪ್ರಕರಣವು ಇದನ್ನು ಸೂಚಿಸುತ್ತಿದೆ.

ಆತಂಕವೆಂದರೆ, ರಾಜೀವರ ಈ ಆದರ್ಶ ಪ್ರತಿಪಾದನೆ ಮತ್ತು ವರ್ತಮಾನದ ವೈರುಧ್ಯಗಳ ಬಗೆಗಿನ ಸಂಕಟಗಳು, ಯಾವುದೊ ಕಾಲಕ್ಕೆ ಸೇರಿದ, ವರ್ತಮಾನಕ್ಕೆ ಸಲ್ಲದ ಗೊಣಗಾಟದಂತೆ ತೋರುವ ಹಾಗೆ ವಾತಾವರಣ ಬದಲಾಗಿರುವುದು. ಕಲಾಲೋಕದ ಆದರ್ಶದ ದಂತಕತೆಗಳನ್ನು ಕೇಳಿ ತಲೆದೂಗಿ ಚಪ್ಪಾಳೆ ಹೊಡೆದು ಎಂದಿನಂತೆ ಕೆಲವು ಕಲಾವಿದರು, ಕಲೆಯನ್ನು ಜಾತಿ ಮತ್ತು ಧರ್ಮಗಳ ಸಂಕುಚಿತ ಚೌಕಟ್ಟಿನೊಳಗೇ ಮುಂದುವರಿಸುವ ಸಾಧ್ಯತೆಯಿರುವುದು. ಕರ್ನಾಟಕ ಸಂಗೀತದ ಟಿ.ಎಂ. ಕೃಷ್ಣ ಅವರು ಅನುಭವಿಸುತ್ತಿರುವ ಒಂಟಿತನವನ್ನು ಗಮನಿಸಬಹುದು. ಸಂಗೀತ ಲೋಕದಲ್ಲಿರುವ ಬ್ರಾಹ್ಮಣರ ಯಜಮಾನಿಕೆ ಮತ್ತು ಜಾತೀಯತೆಗಳ ವಿರುದ್ಧ ದಿಟ್ಟವಾಗಿ ಮಾತಾಡುತ್ತಿರುವ, ಸಂಗೀತದೊಳಗೆ ಎಲ್ಲ ಧರ್ಮಗಳ ಸಂವೇದನೆಯನ್ನು ಪ್ರವೇಶಗೊಳಿಸುವಂತೆ ಹಾಡುತ್ತಿರುವ, ಮೃದಂಗವನ್ನು ಮಾಡುವ ಕ್ರೈಸ್ತ ಕುಟುಂಬಗಳ ಬಗ್ಗೆ ಗ್ರಂಥವನ್ನು ಬರೆದಿರುವ, ಜನಪದರ ದೇಶಿ ಸಂಗೀತದ ಜತೆ ಮಾರ್ಗ ಸಂಗೀತವನ್ನು ಬೆರೆಸಿನೋಡುವ ಅನುಸಂಧಾನ ಮಾಡುತ್ತಿರುವ ಕೃಷ್ಣ ಅವರಿಗೆ ಕಛೇರಿಗಳು ಸಿಗದಂತೆ, ಸಿಕ್ಕರೆ ಅವನ್ನು ರದ್ದುಗೊಳಿಸುವಂತೆ ಮಾಡಲಾಗುತ್ತಿದೆ. ಆಳುವ ರಾಜಕೀಯ ಪ್ರಭುತ್ವಕ್ಕೆ ವಿಮರ್ಶೆ ಮಾಡಿದ್ದಕ್ಕೆ ಪತ್ರಕರ್ತರನ್ನು ಜೈಲಿಗೆ ಅಟ್ಟಿರುವ, ಸ್ಟ್ಯಾಂಡ್‌ಅಪ್ ಕಮೆಡಿಯನ್ನರನ್ನು ಕಾರ್ಯಕ್ರಮ ಎಲ್ಲೂ ಮಾಡದಂತೆ ನಿಷೇಧ ಹೇರಿರುವ ಸಂಗತಿಗಳು ಇದಕ್ಕೆ ಪೂರಕವಾಗಿವೆ. ಜಾತ್ಯತೀತ ಮುಕ್ತತೆಯನ್ನು ಪ್ರತಿಪಾದಿಸುವ, ಪ್ರಭುತ್ವ ವಿಮರ್ಶಕವಾಗಿರುವ ಕಲಾಲೋಕವು ಎದುರಿಸುತ್ತಿರುವ ಬಿಕ್ಕಟ್ಟು ಕೇವಲ ಮತೀಯವಾದದಿಂದ ಮಾತ್ರ ಅಲ್ಲ. ಆಳುವ ಪ್ರಭುತ್ವದಿಂದ ಕೂಡ. ಯಾಕೆಂದರೆ ಪ್ರಭುತ್ವ ಮತ್ತು ಮತೀಯವಾದ ಎರಡೂ ಏಕೀಭವಿಸಿರುವ ವಿಚಿತ್ರ ಸನ್ನಿವೇಶವಿದು. ಇಂತಹ ಚಾರಿತ್ರಿಕ ಬಿಕ್ಕಟ್ಟಿನಲ್ಲಿ ರಾಜೀವ ತಾರಾನಾಥರ ಭಾಷಣದೊಳಗಿನ ಅಳಲು ಮತ್ತು ಆಶೋತ್ತರಗಳನ್ನು ಗಮನಿಸಬೇಕಾಗಿದೆ. ಕೆರೆಯ ನೀರು ಕಲುಷಿತವಾದರೆ ಅದು ಜಲಚರಗಳನ್ನು ಮಾತ್ರ ಉಸಿರುಗಟ್ಟಿಸುವುದಿಲ್ಲ; ವಿಹರಿಸಲು ಬರುವ ಹಕ್ಕಿಗಳನ್ನೂ, ದಂಡೆಯ ಗಿಡಮರ ಹುಲ್ಲನ್ನೂ ಬಾಧಿಸುತ್ತದೆ. ಸಾಹಿತ್ಯ ಸಂಗೀತ ಸಿನಿಮಾ ರಂಗಭೂಮಿಯನ್ನು ಒಳಗೊಂಡಂತೆ, ಜಾತ್ಯತೀತವಾಗಿರಬೇಕಾದ ಕಲಾಲೋಕದೊಳಗಿನ ನಂಜಿನ ವಾಸ್ತವವನ್ನು ರಾಜೀವರ ಭಾಷಣವು ವಿಷಾದದಿಂದ ಬೆರಳಿಟ್ಟು ತೋರಿಸುತ್ತಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...