“ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರಿಗೆ ಪರಿಶಿಷ್ಟ ಜಾತಿಯ (ಎಸ್‌ಸಿ) ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಇರುವ ಕಾರಣ ದಲಿತರಿಗೆ ಮೀಸಲಾತಿ ನೀಡಲಾಗಿದೆ. ಕ್ರಿಶ್ಚಿಯನ್ ಮತ್ತು ಇಸ್ಲಾಂನಲ್ಲಿ ಅಸ್ಪೃಶ್ಯತೆ ಇಲ್ಲ. ಹೀಗಾಗಿ ಎಸ್‌ಸಿ ಸ್ಥಾನಮಾನ ನೀಡಲಾಗದು” ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ.
ಕ್ರಿಶ್ಚಿಯನ್, ಮುಸ್ಲಿಂ ಧರ್ಮಕ್ಕೆ ಸೇರಿರುವ ದಲಿತರಿಗೂ ಎಸ್‌ಸಿ ಮೀಸಲಾತಿ ನೀಡಬೇಕು ಎಂದು ಸಿಪಿಐಎಲ್ ಎಂಬ ಸ್ವಯಂಸೇವಾ ಸಂಸ್ಥೆ ಸಾರ್ವಜನಿಕ ಅರ್ಜಿ (ಪಿಐಎಲ್) ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಸಂವಿಧಾನದ ವಿಧಿ 341ರ ಪ್ರಕಾರ ಹಿಂದೂ ಧರ್ಮ, ಸಿಖ್ ಧರ್ಮ ಅಥವಾ ಬೌದ್ಧ ಧರ್ಮಕ್ಕಿಂತ ಭಿನ್ನವಾದ ಯಾವುದೇ ಧರ್ಮವನ್ನು ಅನುಸರಿಸುವ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ. ಹಿಂದೂಧರ್ಮವನ್ನು ಮಾತ್ರ ಕೇಂದ್ರೀಕರಿಸಿ ’ಎಸ್‌ಸಿ’ ಎಂದು ವರ್ಗೀಕರಿಸಿದ ಮೂಲ ಆದೇಶವನ್ನು 1956ರಲ್ಲಿ ತಿದ್ದುಪಡಿ ಮಾಡಿ ಸಿಖ್ಖರನ್ನು ಸೇರಿಸಲಾಯಿತು. 1990ರಲ್ಲಿ ಮತ್ತೆ ತಿದ್ದುಪಡಿ ಮಾಡಿ ಬೌದ್ಧರನ್ನೂ ಒಳಗೊಳ್ಳಲಾಯಿತು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, “1950ರ ಸಂವಿಧಾನದ (ಪರಿಶಿಷ್ಟ ಜಾತಿ) ಆದೇಶದ ಪ್ರಕಾರ ಪರಿಶಿಷ್ಟ ಜಾತಿಯ ಜನರು ಹಿಂದೂ, ಸಿಖ್ ಹಾಗೂ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರೆ ಮಾತ್ರ ಅವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬಹುದು. ವಿದೇಶಿ ಧರ್ಮಗಳಾದ ಕ್ರೈಸ್ತ ಮತ್ತು ಇಸ್ಲಾಂಗೆ ಮತಾಂತರವಾದ ದಲಿತರಿಗೆ ಈ ಸ್ಥಾನಮಾನ ಮತ್ತು ಮೀಸಲಾತಿ ನೀಡಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದೆ.
“ಕ್ರೈಸ್ತ ಮತ್ತು ಇಸ್ಲಾಂನಲ್ಲಿ ಅಸ್ಪೃಶ್ಯತೆಯಂತಹ ದಬ್ಬಾಳಿಕೆಗಳು ಇಲ್ಲ ಎಂಬುದನ್ನು 1950ರ ಸಂವಿಧಾನ (ಪರಿಶಿಷ್ಟ ಜಾತಿ) ಆದೇಶವು ಈಗಾಗಲೇ ಸಾಬೀತುಪಡಿಸಿದೆ. ಆ ಎರಡೂ ಧರ್ಮಗಳಲ್ಲಿ ಅಸ್ಪೃಶ್ಯತೆಯಂಥ ಆಚರಣೆಗಳು ಇಲ್ಲ ಎಂಬ ಕಾರಣಕ್ಕೇ ದಲಿತರು ಆ ಧರ್ಮಗಳಿಗೆ ಮತಾಂತರವಾಗಿದ್ದಾರೆ. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಲ್ಲಿ ಅವರು ದೌರ್ಜನ್ಯಕ್ಕೆ ಒಳಗಾಗುತ್ತಿಲ್ಲ. ಹಾಗಾಗಿ, ಅವರು ಪರಿಶಿಷ್ಟ ಜಾತಿ ಸ್ಥಾನಮಾನ ಮತ್ತು ಮೀಸಲಾತಿ ನೀಡಲು ಸಾಧ್ಯವಿಲ್ಲ” ಎಂದು ವಾದಿಸಿದೆ.
“ಹಿಂದೂ ಧರ್ಮದಲ್ಲಿರುವ ದಲಿತರ ಮೇಲೆ ಅಸ್ಪೃಶ್ಯತೆಯಂಥ ದಬ್ಬಾಳಿಕೆ ಮುಂದುವರಿದಿದೆ. ಇಂಥ ಸಮಯದಲ್ಲಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವವರಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ವಿಸ್ತರಿಸಿದರೆ, ಪರಿಶಿಷ್ಟ ಜಾತಿಯ ಜನರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಹಾಗೆ ಮೀಸಲಾತಿ ವಿಸ್ತರಿಸುವುದು 1950ರ ಸಂವಿಧಾನ (ಪರಿಶಿಷ್ಟ ಜಾತಿ) ಆಶಯದ ಉಲ್ಲಂಘನೆಯಾಗುತ್ತದೆ” ಎಂದು ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಬೌದ್ಧರಿಗೆ ಮೀಸಲಾತಿ ನೀಡುವುದನ್ನು ಪ್ರಸ್ತಾಪಿಸಿರುವ ಸರ್ಕಾರ, “ಕೆಲವು ಸಾಮಾಜಿಕ ಆಚರಣೆಗಳ ಕಾರಣದಿಂದ 1956ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕರೆಯ ಮೇರೆಗೆ ಪರಿಶಿಷ್ಟ ಜಾತಿಯ ಜನರು ಬೌದ್ಧ ಧರ್ಮಕ್ಕೆ ಮತಾಂತರವಾದರು. ಹೀಗೆ ಮತಾಂತರ ಆದವರ ಮೂಲ ಜಾತಿ ಯಾವುದು ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಆದರೆ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರವಾದ ದಲಿತರ ಮೂಲ ಜಾತಿ ಪತ್ತೆ ಮಾಡಲು ಸಾಧ್ಯವಿಲ್ಲ” ಎಂದು ತಿಳಿಸಿದೆ.
ಎಸ್‌ಸಿ ಸಮುದಾಯಕ್ಕೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.15ರಷ್ಟು ಮೀಸಲಾತಿ ಮತ್ತು ಎಸ್‌ಟಿ ಸಮುದಾಯಕ್ಕೆ ಶೇಕಡಾ 7.5 ಮೀಸಲಾತಿ, ಒಬಿಸಿಗಳಿಗೆ ಶೇ.27 ಮೀಸಲಾತಿಯನ್ನು ಕೇಂದ್ರ ಸರ್ಕಾರ ನೀಡಿದೆ. ಮುಖ್ಯವಾಗಿ ಕ್ರಿಶ್ಚಿಯನ್ ಅಥವಾ ಇಸ್ಲಾಂಗೆ ಮತಾಂತರಗೊಂಡ ದಲಿತರಿಗೆ ಎಸ್‌ಸಿ ಮೀಸಲಾತಿ ನೀಡಬೇಕೇ ಎಂಬ ಪ್ರಶ್ನೆ ಹಿಂದಿನ ಸರ್ಕಾರಗಳ ಮುಂದೆಯೂ ಬಂದಿತ್ತು.
ಅಕ್ಟೋಬರ್ 2004ರಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಆಗಿನ ಯುಪಿಎ ಸರ್ಕಾರವು, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಸ್ಥಿತಿಯ ಉನ್ನತಿಗೆ ಕ್ರಮ ವಹಿಸಲು ಮುಂದಾಗಿತ್ತು. ಸೂಕ್ತ ಶಿಫಾರಸು ನೀಡುವಂತೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಅವರ ನೇತೃತ್ವದಲ್ಲಿ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವನ್ನು ರಚಿಸಿತ್ತು.
ಮೇ 2007ರಲ್ಲಿ ರಂಗನಾಥ್ ಮಿಶ್ರಾ ಆಯೋಗವು ತನ್ನ ವರದಿಯನ್ನು ಸಲ್ಲಿಸಿತು. ಎಸ್‌ಸಿ ಸ್ಥಾನಮಾನವನ್ನು ಸಂಪೂರ್ಣವಾಗಿ ಧರ್ಮದಿಂದ ಬೇರ್ಪಡಿಸಬೇಕು. ಎಸ್‌ಟಿ ಸ್ಥಾನಮಾನದಂತೆಯೇ ಎಸ್‌ಸಿ ಮೀಸಲಾತಿಯ ಸಮಯದಲ್ಲಿಯೂ ಧರ್ಮ ತಟಸ್ಥವಾಗಿರಬೇಕು ಎಂದು ಶಿಫಾರಸ್ಸು ಮಾಡಿತು. ಶಿಫಾರಸ್ಸುಗಳು ಕ್ಷೇತ್ರ ಅಧ್ಯಯನದಿಂದ ರುಜುವಾತಾಗಿಲ್ಲ ಎಂಬ ಕಾರಣಕ್ಕೆ ಅಂದಿನ ಯುಪಿಎ ಸರಕಾರ ಶಿಫಾರಸ್ಸುಗಳನ್ನು ಅಂಗೀಕರಿಸಿರಲಿಲ್ಲ. ಈಗಿನ ಸರ್ಕಾರವೂ ಇದೇ ವಾದವನ್ನು ಮಂಡಿಸುತ್ತಿದೆ. ಮೋದಿ ನೇತೃತ್ವದ ಸರ್ಕಾರ ಈಗ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿದೆ. ಆಯೋಗವು ಇನ್ನೂ ವರದಿಯನ್ನು ಸಲ್ಲಿಸಿಲ್ಲ. ಅದಕ್ಕೂ ಮುನ್ನವೇ, ಸರ್ಕಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಇದನ್ನೂ ಓದಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೌದ್ಧೇತರ ಧರ್ಮಗಳಿಗೆ ಮತಾಂತರವಾದ ದಲಿತರ ಸಮಸ್ಯೆಗಳು ಮುನ್ನೆಲೆಗೆ ಬಂದಿವೆ. ಕ್ರಿಶ್ಚಿಯನ್, ಮುಸ್ಲಿಂ ಸಮುದಾಯಗಳಿಗೆ ದಲಿತರು ಮತಾಂತರವಾಗುವುದು ಏತಕ್ಕೆ? ಮತಾಂತರದ ಬಳಿಕ ದಲಿತರು ಸಾಮಾಜಿಕ ಶೋಷಣೆಯಿಂದ ಪಾರಾಗುತ್ತಾರಾ? ಅಸ್ಪೃಶ್ಯತೆಯ ನೋವು ಅವರಿಗೆ ಬಾಧಿಸುವುದಿಲ್ಲವೇ? ಧರ್ಮದ ಮುಂದೆ ’ದಲಿತ’ ಎಂಬ ಪದವೂ ಉಳಿದು ಅವರನ್ನು ಸಮಸ್ಯೆಗೆ ದೂಡಿಲ್ಲವೇ? ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ.
ವಿಶಿಷ್ಟ ಸಂಸ್ಕೃತಿಯ ದಲಿತ ಕ್ರಿಶ್ಚಿಯನ್: ಅಲ್ಫೋನ್ಸ್. ಜಿ. ಕೆನಡಿ
’ನ್ಯಾಯಪಥ’ ಪತ್ರಿಕೆಯ ಜೊತೆ ಮಾತನಾಡಿದ ಕರ್ನಾಟಕ ದಲಿತ್ ಕ್ರಿಶ್ಚಿಯನ್ ಫೆಡರೇಷನ್‌ನ ಸಂಚಾಲಕರಾದ ಅಲ್ಫೋನ್ಸ್. ಜಿ. ಕೆನಡಿಯವರು ಕನ್ವರ್ಟ್ ಆದ ಕ್ರಿಶ್ಚಿಯನ್ನರ ಹಿನ್ನೆಲೆ, ಬದುಕಿನ ರೀತಿ, ಅವರು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಬಿಚ್ಚಿಟ್ಟರು.
ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶವನ್ನು ಉದಾಹರಣೆಯಾಗಿ ನೀಡಿದ ಕೆನಡಿಯವರು, “ಈ ಪ್ರದೇಶದಲ್ಲಿ ವಾಸಿಸುವ ಬಹುತೇಕರು ದಲಿತ ಕ್ರಿಶ್ಚಿಯನ್ನರು. ಇವರಿಗೆ ಧರ್ಮ ಅಷ್ಟು ಮುಖ್ಯವೇ ಅಲ್ಲ. ಮದುವೆ ಸಂಬಂಧಗಳನ್ನು ಬೆಳೆಸುವಾಗ ಧರ್ಮವನ್ನು ನೋಡುವುದೇ ಇಲ್ಲ. ಅನೇಕರು ಚರ್ಚ್ ಅಥವಾ ದೇವಾಲಯಕ್ಕೂ ಹೋಗದೆ ಮನೆಯಲ್ಲೇ ಮದುವೆಯಾಗಿಬಿಡುತ್ತಾರೆ. ಇದನ್ನು ನಡುವುಟ್ಟು ಕಲ್ಯಾಣ ಎಂದು ಕರೆದಿದ್ದಾರೆ. ಪುಟ್ಟಮನೆಯಲ್ಲಿನ ಪುಟ್ಟ ದೇವರ ಕೋಣೆಯಲ್ಲಿ ಹಿಂದೂ, ಕ್ರಿಶ್ಚಿಯನ್ ದೇವರ ಫೋಟೋಗಳನ್ನು ಇರಿಸಿರುತ್ತಾರೆ. ಕ್ರಿಸ್ಮಸ್ ಆಚರಿಸುತ್ತಾರೆ, ಗಣೇಶ ಹಬ್ಬವನ್ನೂ ಮಾಡುತ್ತಾರೆ. ಇಲ್ಲಿನ ದಲಿತ ಕ್ರಿಸ್ತರಿಗೆ ಧರ್ಮ ಎಂಬುದು ಸಂತೋಷ ಹಾಗೂ ಸೆಲೆಬ್ರೇಟ್ ಸಂಗತಿಯೇ ಹೊರತು ಬೇರೇನೂ ಅಲ್ಲ ಎಂದು ವಿವರಿಸಿದರು.
“ದಲಿತ ಕ್ರಿಶ್ಚಿಯನ್ನರ ಧರ್ಮ ಮತ್ತು ಬದುಕು ವೈವಿಧ್ಯತೆಯಿಂದ ಕೂಡಿದೆ. ಬೆಂಗಳೂರು ಮಾತ್ರವಲ್ಲ, ಇಡೀ ದೇಶದ ಯಾವುದೇ ಮೂಲೆಯ ಕಂಟೋನ್ಮೆಂಟ್‌ಗೆ ಹೋದರೂ ದಲಿತ ಕ್ರಿಶ್ಚಿಯನ್ನರನ್ನು ಅಲ್ಲಿ ನೋಡಬಹುದು. ಬ್ರಿಟಿಷರು ಮಾಡಿದ್ದ ಮಿಲಿಟರಿ ಕಂಟೋನ್ಮೆಂಟ್‌ಗಳು ದಲಿತ ಕ್ರಿಶ್ಚಿಯನ್ ಸಂಸ್ಕೃತಿಗೆ ನಾಂದಿಹಾಡಿದವು” ಎನ್ನುವ ಕೆನಡಿ, ತಮಿಳುನಾಡಿನಿಂದ ಬೆಂಗಳೂರಿನ ಕಂಟೋನ್ಮೆಂಟ್‌ಗೆ ದಲಿತರು ವಲಸೆ ಬಂದ ಹೃದಯಸ್ಪರ್ಶಿ ಇತಿಹಾಸವನ್ನು ಮೆಲುಕು ಹಾಕಿದರು. “ನೀರಾವರಿರಹಿತ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ವಾಸಿಸುವುದನ್ನು ಗಮನಿಸಬಹುದು. ಬ್ರಿಟಿಷರು ಬೆಂಗಳೂರಿನಲ್ಲಿ ಕಂಟೋನ್ಮೆಂಟ್ ಸ್ಥಾಪಿಸುವಾಗ ಮದ್ರಾಸ್‌ನಿಂದ ಆಗಮಿಸಬೇಕಾಯ್ತು. ತಾವು ಬರುವ ಮಾರ್ಗದಲ್ಲಿ ಬರಪೀಡಿತ ಪ್ರದೇಶದಲ್ಲಿನ ದಲಿತರನ್ನು ನೋಡಿದರು. ದಲಿತರು ಮಡಕೆಯಲ್ಲಿ ಮಾಡುತ್ತಿದ್ದ ದನ ಹಾಗೂ ಹಂದಿ ಮಾಂಸದ ಅಡುಗೆಗೆ ಬ್ರಿಟಿಷರು ಮಾರುಹೋದರು. ತಮ್ಮೊಂದಿಗೆ ಈ ದಲಿತರನ್ನೂ ಕರೆದುಕೊಂಡು ಬಂದರು. ಬ್ರಿಟಿಷರು ಹಾಗೂ ದಲಿತರ ಆಹಾರ ಪದ್ಧತಿ ಒಂದೇ ಆಗಿದ್ದು ಆತ್ಮೀಯತೆ ಬೆಳೆಯಲು ಕಾರಣವಾಯ್ತು. ಈವರೆಗೆ ಊರ ಹೊರಗೆ ಇರುತ್ತಿದ್ದವರನ್ನು ಬ್ರಿಟಿಷರು ಮನೆಯ ಒಳಗೆ ಕರೆದುಕೊಂಡ ವಿದ್ಯಮಾನವು ಭಾರೀ ಪರಿವರ್ತನೆಗಳಿಗೆ ಕಾರಣವಾದವು” ಎನ್ನುತ್ತಾರೆ ಕೆನಡಿ.

“ಹೆಣ್ಣು ಕೊಡುವಾಗ, ತೆಗೆದುಕೊಳ್ಳುವಾಗ ಧರ್ಮ ಇವರಿಗೆ ಮುಖ್ಯವಾಗುವುದೇ ಇಲ್ಲ” ಎಂಬ ಮಾತಿಗೆ ತಮ್ಮ ಸ್ನೇಹಿತರೊಬ್ಬರ ಮನೆಯ ಪ್ರಸಂಗವನ್ನು ಉಲ್ಲೇಖಿಸಿದರು. “ಪಾಲ್ ಜೋಸೆಫ್ ಎಂಬ ನನ್ನ ಹಿರಿಯ ಗೆಳೆಯರಿದ್ದಾರೆ. ಆನೇಕಲ್ ಕಡೆಗೆ ತಮ್ಮ ಮನೆಯ ಮಗಳನ್ನು ಮದುವೆ ಮಾಡಿಕೊಟ್ಟರು. ಹುಡುಗನನ್ನು ನೋಡಲು ಹೋದಾಗ ಅವರು ಕೇಳಿದ್ದೇನು ಗೊತ್ತೆ? ’ನೀವು ದನದ ಮಾಂಸ ತಿನ್ನುತ್ತೀರಾ?’ ಅಂತ ಅಷ್ಟೇ. ನೀವ್ಯಾಕೆ ಈ ರೀತಿ ಲೆಕ್ಕಾಚಾರ ಹಾಕುತ್ತೀರಿ ಎಂದು ಜೋಸೆಫ್ ಅವರಲ್ಲಿ ಕೇಳಿದಾಗ, ’ನನ್ನ ಮಗಳನ್ನು ದನದ ಮಾಂಸ ತಿನ್ನಿಸಿ ಬೆಳೆಸಿದ್ದೇನೆ. ಮದುವೆಯಾದ ಮೇಲೆ ಆಕೆ ಬಾಡಿಲ್ಲದೆ ಬಾಡಬಾರದು’ ಎಂದು ತಿಳಿಸಿದ್ದರು” ಎಂದು ವಿಶಿಷ್ಟಪೂರ್ಣ ಸಂಸ್ಕೃತಿಯನ್ನು ಪರಿಚಯಿಸಿದರು.
“ಬಲವಂತದ ಮತಾಂತರವಾದವರು ಕೇವಲ ಎರಡು ಪರ್ಸೆಂಟ್ ಇರಬಹುದು. ಆದರೆ ಇಲ್ಲಿ ಯಾರು, ಯಾರನ್ನು ಬಲವಂತ ಮಾಡಿ ಹೊರಗೆ ತಳ್ಳಿದ್ದಾರೆಂಬುದೂ ಮುಖ್ಯವಾಗುತ್ತದೆ. ಇಲ್ಲಿಯೇ ಇದ್ದು ನರಕ ಅನುಭವಿಸಿದರೆ ಸರಿ, ಬೇರೆ ಧರ್ಮಕ್ಕೆ ಹೋದರೆ ತಪ್ಪಾಗುತ್ತದೆಯೇ?” ಎಂದು ಪ್ರಶ್ನಿಸಿದರು.
“ದಲಿತರು ಬೇರ್‍ಯಾವುದೇ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬಾರದು ಎನ್ನುವುದೇ ಸಂವಿಧಾನಬಾಹಿರ. ಇದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ. ಯಾವುದೇ ಧರ್ಮಕ್ಕೆ ಹೋದರೂ ಅವರನ್ನು ದಲಿತ ಎಂಬ ಪದದಿಂದ ಗುರುತಿಸುತ್ತಾರೆ. ದಲಿತ ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಮತಗಳು ಚುನಾವಣೆಯಲ್ಲಿ ನಿರ್ಣಾಯಕವಾಗುತ್ತವೆ. ಹೀಗಾಗಿ ಅವರನ್ನು ಎಸ್‌ಸಿಗೆ ಸೇರಿಸಿದರು. ಮೀಸಲಾತಿಯನ್ನು ಪಕ್ಕಕ್ಕಿಟ್ಟು ನೋಡೋಣ. ನಾಗರಿಕ ಹಕ್ಕುಗಳ ರಕ್ಷಣೆ (ಪಿಸಿಆರ್) ಕಾಯ್ದೆ ಕ್ರಿಶ್ಚಿಯನ್, ಮುಸ್ಲಿಂಗೆ ಮತಾಂತರವಾದ ದಲಿತರಿಗೆ ಅನ್ವಯ ಆಗುತ್ತಿಲ್ಲ. ಹಳ್ಳಿಗಳಲ್ಲಿ ಈ ಮತಾಂತರಗೊಂಡ ದಲಿತರ ಮೇಲೆ ಜಾತಿ ದೌರ್ಜನ್ಯಗಳಾದಾಗ ಸೂಕ್ತ ಕಾನೂನಿನ ಅಡಿ ಪ್ರಕರಣ ದಾಖಲಿಸುವುದಿಲ್ಲ ಎಂದು ವಿಷಾದಿಸಿದರು.
ಇದನ್ನೂ ಓದಿ: EWS: ಆರ್ಥಿಕ ದುರ್ಬಲ ವರ್ಗದ ಹೆಸರಿನಲ್ಲಿ ಮೀಸಲಾತಿಯನ್ನೇ ದುರ್ಬಲಗೊಳಿಸುವ ಹುನ್ನಾರ
“ರಂಗನಾಥ ಮಿಶ್ರಾ ವರದಿಯು ಜಾತಿ ಮತ್ತು ಧರ್ಮವನ್ನು ಪ್ರತ್ಯೇಕಿಸಿ ನೋಡಬೇಕು ಎಂದಿದೆ. ಮತಾಂತರವಾದ ತಕ್ಷಣ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬದಲಾವಣೆ ಆಗುವುದಿಲ್ಲ. ಒಂದು ಬಾಡಿಗೆ ಮನೆ ಹುಡುಕಿ ಹೋದರೂ ನಮ್ಮ ಹಿನ್ನೆಲೆಯನ್ನು ಕೆದಕುತ್ತಾರೆ. ನಾನು ಕ್ರಿಶ್ಚಿಯನ್ ಎಂದು ತಿಳಿಸಿದರೆ, ಏನೇನು ತಿನ್ನುತ್ತೀರಾ? ದನ ತಿಂತೀರಾ? ಎಂದು ಪ್ರಶ್ನಿಸುತ್ತಾರೆ. ಒಬ್ಬ ದಲಿತ ಬೆಳಿಗ್ಗೆ ಒಂದು ಧರ್ಮ ಇಷ್ಟಪಡಬಹುದು, ಮಧ್ಯಾಹ್ನ ಮತ್ತೊಂದು ಧರ್ಮಕ್ಕೆ ಸೇರಬಹುದು. ರಾತ್ರಿ ವೇಳೆಗೆ ನನಗೆ ಧರ್ಮವೇ ಬೇಡ ಎನ್ನಬಹುದು. ಆದರೆ ಆತನಿಗೆ ಧಾರ್ಮಿಕ ಸ್ವಾತಂತ್ರ್ಯ ಇರಬೇಕು” ಎಂದು ಪ್ರತಿಪಾದಿಸಿದರು. “ಕಾಕ ಕಾಲೇಲ್ಕರ್ ಆಯೋಗ, ಮಂಡಲ್ ಆಯೋಗ, ರಂಗನಾಥ್ ಮಿಶ್ರಾ ಆಯೋಗ ಕೇಂದ್ರ ಸರ್ಕಾರದ ಮಟ್ಟದಲ್ಲಿ; ನಾಗನಗೌಡ ಆಯೋಗ, ಜಸ್ಟೀಸ್ ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಕಮಿಷನ್, ಜಸ್ಟೀಸ್ ಎಚ್.ಎನ್.ನಾಗಮೋಹನದಾಸ್ ಸಮಿತಿ ವರದಿಗಳು ರಾಜ್ಯ ಮಟ್ಟದಲ್ಲಿ ಮೀಸಲಾತಿ ಸಂಬಂಧ ಚರ್ಚೆಗಳನ್ನು ಮಾಡಿವೆ. ದಲಿತರು ಮತಾಂತರವಾದ ತಕ್ಷಣ ಅಸ್ಪೃಶ್ಯತೆಯಿಂದ ಬಾಧಿತರಾಗುವುದಿಲ್ಲ ಎನ್ನುವವರಿಗೆ ನಮ್ಮ ನೋವುಗಳು ಅರ್ಥವಾಗುವುದಿಲ್ಲ. ನೊಂದವರು ಮಾತ್ರ ನಮ್ಮ ನೋವನ್ನು ಅರ್ಥಮಾಡಿಕೊಳ್ಳಬಲ್ಲರು. ಬೆಂಗಳೂರಿನ ಯಾವುದೇ ಕೊಳಚೆ ಪ್ರದೇಶಕ್ಕೆ ಹೋದರೂ ದಲಿತ ಕ್ರಿಸ್ತರು ಸಿಗುತ್ತಾರೆ. ಅವರ ಪರಿಸ್ಥಿತಿ ಬದಲಾಗಿದೆಯೇ? ಪರಿಶೀಲಿಸಿ. ಕ್ರಿಶ್ಚಿಯನ್ ವಿದ್ಯಾಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರ ಮಕ್ಕಳು ಸೇರುತ್ತಾರೆ. ದಲಿತ ಕ್ರಿಶ್ಚಿಯನ್ ಮಕ್ಕಳಿಗೆ, ದಲಿತ ಮುಸ್ಲಿಂ ಮಕ್ಕಳಿಗೆ ಇಲ್ಲಿ ಸೀಟ್ ಸಿಗುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಮೀಸಲಾತಿ ವಿಚಾರ ಗೊಂದಲಗೊಳಿಸದಿರಿ: ಸಿ.ಎಸ್.ದ್ವಾರಕನಾಥ್
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ನಾಯಕರೂ ಆದ ಸಿ.ಎಸ್.ದ್ವಾರಕನಾಥ್ ಈ ವಿಷಯವಾಗಿ ಪ್ರತಿಕ್ರಿಯಿಸಿ, “ಕರ್ನಾಟಕದಲ್ಲಿ ದಲಿತ ಕ್ರೈಸ್ತರಿಗೆ ಮೀಸಲಾತಿಯನ್ನು ಒಬಿಸಿ ಪಟ್ಟಿಯಲ್ಲಿ ನೀಡಲಾಗಿದೆ. ಕ್ಯಾಟಗರಿ 2ಬಿಯಲ್ಲಿ ಎಲ್ಲ ಮುಸ್ಲಿಮರಿಗೂ ಮೀಸಲಾತಿ ಇದೆ. ಕ್ಯಾಟಗರಿ 1ರಲ್ಲಿ ಮುಸ್ಲಿಂ ಅಲೆಮಾರಿಗಳಿಗೆ ಮೀಸಲಾತಿ ಲಭ್ಯವಿದೆ. ಮೀಸಲಾತಿ ವಿಚಾರವು ಆ ಸಮುದಾಯಗಳು ಹೊಂದಿರುವ ನೋವುಗಳನ್ನು ಆಧರಿಸಿವೆ. ಕ್ರಿಶ್ಚಿಯನ್ನರಾದರೂ, ಮುಸ್ಲಿಮರಾದರೂ ದಲಿತ ಎಂಬ ಗುರುತು ಇದ್ದೇ ಇರುತ್ತದೆ. ಬಿಜೆಪಿ ಸರ್ಕಾರ ಮೀಸಲಾತಿಯ ವಿಚಾರದಲ್ಲಿ ಗೊಂದಲಕಾರಿ ನಿಲುವುಗಳನ್ನು ತಾಳುತ್ತದೆ. ಹೀಗಾಗದೆ ದಲಿತ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು” ಎಂದು ಆಗ್ರಹಿಸಿದರು.
ದ್ವಾರಕನಾಥ್ ಅವರ ಮಾತುಗಳ ಮುಂದುವರಿಕೆಯಾಗಿ ತಮ್ಮ ಅಭಿಪ್ರಾಯಗಳನ್ನು ಲೇಖಕ ’ಸಾಕ್ಯ ಸಮಗಾರ’ ಹಂಚಿಕೊಂಡರು. “ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಸ್ಲಿಮರನ್ನು ಒಬಿಸಿ ಎಂದು ಪರಿಗಣಿಸಲಾಗಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮುಸ್ಲಿಮರು ಸಾಮಾನ್ಯ ವರ್ಗದಲ್ಲಿದ್ದಾರೆ. ಹೀಗಾಗಿ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಈಗಿನ 103ನೇ ಸಂವಿಧಾನದ ತಿದ್ದುಪಡಿಯ ಪ್ರಕಾರ ಆರ್ಥಿಕವಾಗಿ ಹಿಂದುಳಿದ ವರ್ಗದ ಮೀಸಲಾತಿ (ಇಡಬ್ಲ್ಯುಎಸ್) ಅಡಿ ಬರುತ್ತಾರೆ. ಎಸ್‌ಸಿ, ಎಸ್‌ಟಿ, ಒಬಿಸಿಯೇತರ ವರ್ಗವನ್ನು ಇಡಬ್ಲ್ಯುಎಸ್ ಮೀಸಲಾತಿಗೆ ಪರಿಗಣಿಸಿರುವುದನ್ನು ಗಮನಿಸಬಹುದು. ಆದರೆ ಮತಾಂತರವಾದ ದಲಿತರು ಸದಾ ಅನುಭವಿಸುವ ಜಾತಿದೌರ್ಜನ್ಯಗಳನ್ನು ಸರ್ಕಾರ ಪರಿಗಣಿಸಬೇಕು. ಒಂದು ಗ್ರಾಮದಲ್ಲಿ ಬೇರೊಂದು ಧರ್ಮಕ್ಕೆ ಮತಾಂತರವಾದ ದಲಿತನನ್ನು ಅಲ್ಲಿನ ಜಾತಿ ಸಮಾಜ ಹೇಗೆ ನೋಡುತ್ತದೆ? ಆತ ಮತ್ತೊಂದು ಧರ್ಮದವನೆಂದು ತನ್ನ ಮನೆಯೊಳಗೆ ಸೇರಿಸಿಕೊಳ್ಳುವುದಿಲ್ಲ. ಆತ ಈ ಸಮಾಜದ ಕಣ್ಣಿಗೆ ದಲಿತನೇ ಹೊರತು ಕ್ರಿಶ್ಚಿಯನ್ನೂ ಅಲ್ಲ, ಮುಸ್ಲಿಮನೂ ಅಲ್ಲ” ಎಂದು ತಿಳಿಸಿದರು.

“ಮತಾಂತರವಾದ ದಲಿತರ ಮೇಲೆ ದೌರ್ಜನ್ಯಗಳಾಗುತ್ತಿವೆ. ಬೈಬಲ್ ಮತ್ತು ಕುರಾನ್‌ನಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಇಲ್ಲ ಎನ್ನುವ ಕ್ರೈಸ್ತರು ಹಾಗೂ ಮುಸ್ಲಿಮರು ದೇಶದಲ್ಲಿ ಬೇರುಬಿಟ್ಟಿರುವ ತಾರತಮ್ಯವನ್ನು ಒಪ್ಪಿಕೊಳ್ಳಬೇಕು. ಭಾರತೀಯಗೊಂಡ ಈ ಧರ್ಮಗಳಲ್ಲೂ ಜಾತಿ ವ್ಯವಸ್ಥೆ ರೂಪುಗೊಂಡಿದೆ. ಮುಸ್ಲಿಮರಲ್ಲಿನ ಜಾತಿಗಳನ್ನೇ ಉದಾಹರಣೆಯಾಗಿ ನೋಡಿ. ದರ್ಜಿ, ಜೂಲಾಹ, ಫಕೀರ, ರಂಗರಜೆ, ಬ್ಯಾರಿ, ಭಾತಿರ, ಚೆಕ್, ಖುರುಹಾರ್, ದೈಯಿ, ಸವ, ಸುನಿಯ, ಗದ್ದೆ, ಕಾಲ, ಕುಜಾರ, ಲಗರಿ, ಮುಲ್ಲಾ, ನುಲಿಯ, ನಿಶಾರಿ, ಅದಾಲತ್, ಖಾಕೊ, ಬಡಿಯ, ಬಾಟ್, ಚಮಾಲ, ದಫಿತಿ, ದೋಬಿ, ಮುಚಾವ್, ನಗರಬೆ, ನಾಟ್, ಪನವಾರಿಯ, ಮದಾರಿಯ, ತುನಿತ್ಕ, ಬನಾರ್, ಹಲಾಲ್‌ಕೋರಾ, ಹಿರಜ, ಲಾಲ್ ಬೇಗಿ, ಮಂಗತ್, ಮೇಹಲಾರ್- ಹೀಗೆ ಪಟ್ಟಿ ಬೆಳೆಯುತ್ತದೆ. ಭಾರತದಲ್ಲಿನ ಕ್ರೈಸ್ತ ಧರ್ಮದಲ್ಲಿ ಸುಮಾರು 400 ಜಾತಿಗಳಿವೆ ಎಂದು ಹೇಳಲಾಗುತ್ತದೆ. ಈ ಧರ್ಮಗಳು ಜಾತಿ ವ್ಯವಸ್ಥೆಯನ್ನು ಒಳಗೊಂಡು ತಾರತಮ್ಯವನ್ನೂ ತಮ್ಮೊಳಗೆ ಸೇರಿಸಿಕೊಂಡಿವೆ. ಹೀಗಾಗಿ ಮತಾಂತರವಾದ ದಲಿತರಿಗೆ ಅಸ್ಪೃಶ್ಯತೆಯ ನೋವು ಕಾಡದೆ ಇರುವುದಿಲ್ಲ. ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಿಶ್ಚಿಯನ್, ಇಸ್ಲಾಂ ಧರ್ಮಗಳಲ್ಲಿನ ದಲಿತರು ಬರುತ್ತಿಲ್ಲ. ಆದ್ದರಿಂದ ಎಸ್‌ಸಿ ಕೋಟಾವನ್ನು ಕೇಳುತ್ತಿರುವುದು ನ್ಯಾಯೋಚಿತವಾಗಿದೆ” ಎಂಬ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಮತ್ತು ಬಿಜೆಪಿಯ ಎರಡು ನಾಲಗೆ
ಸಂಘಪರಿವಾರದ ಇಬ್ಬಂದಿ ನೀತಿಯನ್ನು ಬೊಟ್ಟು ಮಾಡಿ ತೋರಿಸಿದ ಅವರು, “ಸುಪ್ರೀಂಕೋರ್ಟ್‌ನಲ್ಲಿ ಆರ್‌ಎಸ್‌ಎಸ್ ಪ್ರಣೀತ ಸರ್ಕಾರ ಸಲ್ಲಿಸಿರುವ ಅಫಿಡವಿಟ್ಟಿಗೂ ಇದೇ ಸಂಘಪರಿವಾರ ಹೇಳುವ ತಿರುಚಿದ ಇತಿಹಾಸಕ್ಕೂ ಇರುವ ವ್ಯತ್ಯಾಸಗಳನ್ನು ಗಮನಿಸಬೇಕು. ಭಾರತದಲ್ಲಿ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಸೃಷ್ಟಿಯಾಗಿದ್ದು ಭಾರತಕ್ಕೆ ಕ್ರಿಶ್ಚಿಯನ್ನರು, ಮುಸ್ಲಿಮರು ಆಗಮಿಸಿದ ನಂತರ ಎಂಬ ವಾದವನ್ನು ಆರ್‌ಎಸ್‌ಎಸ್ ಮಾಡುತ್ತದೆ. ಆದರೆ ಅದೇ ಸಂಘಪರಿವಾರದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ಟು ಸಲ್ಲಿಸುತ್ತಾ, ಹಿಂದೂಧರ್ಮದಲ್ಲಿ ಅಸ್ಪೃಶ್ಯತೆ ಇರುವುದರಿಂದ ದಲಿತರಿಗೆ ಎಸ್‌ಸಿ ಮೀಸಲಾತಿ ನೀಡಲಾಗಿದೆ. ಕ್ರಿಶ್ಚಿಯನ್, ಇಸ್ಲಾಂನಲ್ಲಿ ತಾರತಮ್ಯದ ನೋವು ಇಲ್ಲ. ಹೀಗಾಗಿ ಮತಾಂತರವಾದ ದಲಿತರಿಗೆ ಎಸ್‌ಸಿ ಮೀಸಲಾತಿ ನೀಡಲಾಗದು ಎಂದಿದೆ. ಇಲ್ಲಿ ಇವರ ಇಬ್ಬಂದಿತನ ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದು ಎಚ್ಚರಿಸಿದರು.
ದಲಿತ ಕ್ರೈಸ್ತ, ದಲಿತ ಮುಸ್ಲಿಮರನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಒಳಗೆ ತರುವುದರ ಸಂಬಂಧ ಮತ್ತೊಂದು ವಾದವೂ ಇದೆ. ಹಿಂದೂ, ಸಿಖ್, ಬೌದ್ಧರಲ್ಲಿನ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರಕಿಲ್ಲ. ಹೀಗಾಗಿ ಉಳಿದ ಧರ್ಮಗಳಲ್ಲಿನ ದಲಿತರನ್ನು ಇಲ್ಲಿಗೆ ಸೇರಿಸುವಾಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ಆಗ್ರಹಗಳೂ ಇವೆ. ಒಂದೆಡೆ ಪರಿಶಿಷ್ಟ ಜಾತಿ ಮೀಸಲಾತಿಯೂ ಸಿಗದೆ, ಒಬಿಸಿ ವರ್ಗಕ್ಕೂ ಸೇರದೆ ತುಳಿತಕ್ಕೊಳಗಾಗಿರುವ ದಲಿತ ಕ್ರೈಸ್ತ, ಮುಸ್ಲಿಮರಿಗೆ ನ್ಯಾಯ ದೊರಕಿಸಿಕೊಡುವ ಅಗತ್ಯವೂ ಇದೆ. ರಂಗನಾಥ್ ಮಿಶ್ರಾ ಆಯೋಗದ ವರದಿ ಸರಿಯಾಗಿ ಚರ್ಚೆಯಾಗಿಲ್ಲ ಎಂಬ ಆರೋಪಗಳನ್ನು ತಳ್ಳಿಹಾಕುವಂತಿಲ್ಲ. ಹೀಗಿರುವಾಗ ಮತ್ತೊಂದು ಆಯೋಗವನ್ನು ಕೇಂದ್ರ ಸರ್ಕಾರ ರಚಿಸಿದ್ದು ಏತಕ್ಕೆ? ಇದು ಕಾಲಕ್ಷೇಪದ ಭಾಗವೇ? ಅಥವಾ ದಲಿತರ ನಿಜ ಸಮಸ್ಯೆಗಳನ್ನು ಬಗೆಹರಿಸದೆ ಗೊಂದಲಗಳನ್ನು ಸೃಷ್ಟಿಸುವುದು ಇದರ ಉದ್ದೇಶವೇ? ಉತ್ತರಗಳನ್ನು ಕಂಡುಕೊಂಡು ಸಂತ್ರಸ್ತ ಸಮುದಾಯ ಚಳವಳಿಯನ್ನು ರೂಪಿಸಬೇಕಿದೆ.



ಅಷ್ಪೃಷ್ಯತೆ ಉಳಿಸಿಕೊಳ್ಳಲು ಮೀಸಲಾತಿ ಬೇಕೇ.
ಅಥವಾ
ಹೋರ ಧರ್ಮಗಳು ಪ್ರಬಲವಾಗಿ ಮುಂದೆ ವೈದಿಕ ಧರ್ಮಕ್ಕೆ ಹಾಗೂ ಊಳಿಗಮಾನ ಪದ್ದತಿಯನ್ನು ಉಳಿಸಿಕೊಂದವರಿಗೆ ತೊಂದರೆಯಾಗಲಿದೆಯೇ.
ಒಟ್ಟಾರೆ ಹೆಂಗೆ ಬಂದರು ಅಷ್ಪ್ರುಸ್ಯತೆ ಈ ದೇಶದಿಂದ ಮಾಯವಾಗುವುದಿಲ್ಲ