Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಲಘಟಗಿ: ಪ್ರಗತಿಗೆ ಪರಿತಪಿಸುತ್ತಿರುವ ಕ್ಷೇತ್ರಕ್ಕೆ ವಲಸಿಗ ಶಾಸಕರೆ ಶಾಪ!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಲಘಟಗಿ: ಪ್ರಗತಿಗೆ ಪರಿತಪಿಸುತ್ತಿರುವ ಕ್ಷೇತ್ರಕ್ಕೆ ವಲಸಿಗ ಶಾಸಕರೆ ಶಾಪ!

- Advertisement -
- Advertisement -

ಮಲೆನಾಡು-ಅರೆಮಲೆನಾಡು ಮತ್ತು ಬೆಳವಲ ನಾಡುಗಳ ವಿಭಿನ್ನ ಭೌಗೋಳಿಕ ಗುಣಲಕ್ಷಣಗಳ ವಿಧಾನಸಭಾ ಕ್ಷೇತ್ರ ಕಲಘಟಗಿ. ತೀರಾ ಹಳೆಯ ತಾಲೂಕು ಕಲಘಟಗಿ ಮತ್ತು ಐದು ವರ್ಷದ ಹಿಂದೆ ಹೊಸದಾಗಿ ಸೇರ್ಪಡೆಯಾಗಿರುವ ಅಳ್ನಾವರ ತಾಲೂಕು ಇರುವ ಈ ಕ್ಷೇತ್ರದ ಬದುಕು-ಬವಣೆಯಲ್ಲಿ ಮಾತ್ರ ಬದಲಾವಣೆಯಿಲ್ಲ. ಬಡತನ ಮತ್ತು ಹೆಜ್ಜೆಹೆಜ್ಜೆಗೆ ಸಮಸ್ಯೆಗಳೇ ತುಂಬಿರುವ ಈ ಮಣ್ಣಿನ ಮಕ್ಕಳ ಸೀಮೆಗೆ ಯಾರ್‍ಯಾರೋ ಎಲ್ಲೆಲ್ಲಿಂದಲೋ ಬಂದು ದುಡ್ಡು-ಜಾತಿ ಪ್ರಯೋಗಿಸಿ ಶಾಸಕರಾಗಿ ಮೆರೆದು ಮಾಯವಾದರೆ ಹೊರತು ತಮ್ಮನ್ನು ಗೆಲ್ಲಿಸಿದ ನೆಲದ ಋಣ ತೀರಿಸುವ ಕನಿಷ್ಠ ಕರ್ತವ್ಯವನ್ನೂ ನೆರವೇರಿಸಿಲ್ಲ ಎಂಬ ಕೊರಗು ಕ್ಷೇತ್ರದೆಲ್ಲೆಡೆಯಿದೆ! ಕಲಘಟಗಿ ಅಥವಾ ಅಳ್ನಾವರದಲ್ಲಿ ನಿಂತು ಎತ್ತಿಂದೆತ್ತ ಹೊರಳಿ ನೋಡಿದರೂ ಹಿಂದುಳಿದ ಕುಗ್ರಾಮದಂತೆ ಭಾಸವಾಗುತ್ತದೆ ಎಂಬುದು ನಿರ್ವಿವಾದ.

ಇತಿಹಾಸ-ಸಂಸ್ಕೃತಿ

ಉತ್ತರ ಕರ್ನಾಟಕದ ಜವಾರಿ ಕನ್ನಡ ಹಾಗೂ ಮರಾಠಿ ಬಾಷಾ ಸಂಸ್ಕೃತಿಯ ಕಲಘಟಗಿ ಮತ್ತು ಅಳ್ನಾವರ ಲಿಂಗಾಯತ-ಮರಾಠ ಮತ್ತು ಮುಸ್ಲಿಮರ ಪ್ರಾಬಲ್ಯ-ಮೇಲಾಟದ ಪ್ರದೇಶಗಳು; ಕೋಮು ಕ್ರೌರ್ಯ ಹುಬ್ಬಳ್ಳಿ-ಧಾರವಾಡದಷ್ಟು ಇಲ್ಲವಾದರೂ ಜಾತಿ ಜಿದ್ದಾಜಿದ್ದಿ ಜೋರು. ಸಿದ್ದಿ, ಗೌಳಿಯಂಥ ವನವಾಸಿ ಬುಡಕಟ್ಟು ಜನರಿರುವ ಕ್ಷೇತ್ರದಲ್ಲಿ ’ಧಾರವಾಡ ಕನ್ನಡ’ದ ಆರ್ಭಟದ ಮಧ್ಯೆ ಮರಾಠಿ, ಉರ್ದು, ಕೊಂಕಣಿ, ಗೌಳಿ ಭಾಷೆ ಕೇಳಿಬರುತ್ತದೆ. ಮರಾಠರ ಕಾಲದಲ್ಲಿ ಸಾಮಂತರ ಕೇಂದ್ರವಾಗಿದ್ದ ಕಲಘಟಗಿ ಕಲ್ಲು ಮತ್ತು ಕಟ್ಟಿಗೆ ನಾಡು. ಕಲಘಟಗಿಯ ಬೂದನಕೆರೆ ಕಡೆಯಲ್ಲಿ ಕಲ್ಲು ಯಥೇಚ್ಛವಾಗಿ ಸಿಕ್ಕರೆ, ತಂಬೂರು ದಟ್ಟ ಅರಣ್ಯವಿರುವ (ಕಟ್ಟಿಗೆ) ಪಶ್ಚಿಮಘಟ್ಟದ ತಪ್ಪಲು. ಈ ಕಲ್ಲು-ಕಟ್ಟಿಗೆ ’ಕಲಘಟಗಿ’ ಹೆಸರಿನ ವ್ಯುತ್ಪತ್ತಿಯ ಮೂಲವೆಂದು ಸ್ಥಳನಾಮ ಪುರಾಣ ಹೇಳುತ್ತದೆ.

ಕಲ್ಯಾಣಿ ಚಾಲುಕ್ಯರ ಆಡಳಿತಕ್ಕೆ ಒಳಪಟ್ಟಿದ್ದ ಕಲಘಟಗಿ ಇತಿಹಾಸ ಪ್ರಸಿದ್ಧ ಸ್ಥಳ; ಇಲ್ಲಿ ಐದು ಪ್ರಾಚೀನ ಶಾಸನಗಳು ದೊರೆತಿದ್ದು, ಇದರಲ್ಲಿ ಅತಿ ಹಳೆಯದೆಂದರೆ ಚಾಲುಕ್ಯರ ದೊರೆ 6ನೇ ವಿಕ್ರಮಾದಿತ್ಯನ ಕಾಲದ್ದಾಗಿದೆ. ಕಾಡಿನಿಂದ ಆವೃತವಾದ ತಾಲೂಕಿನ ತಂಬೂರು ಎಂಬಲ್ಲಿ ಸುಪ್ರಸಿದ್ಧ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಭವ್ಯ ಶಿವ ದೇವಾಲಯವಿದೆ; ಇದನ್ನು ಬಸವಣ್ಣನ ದೇವಸ್ಥಾನವೆಂದು ಹೇಳಲಾಗುತ್ತಿದ್ದು ಒಳಗೆ ದೊಡ್ಡ ಬಸವಣ್ಣನ ಮೂರ್ತಿಯಿದೆ. ಮಿಶ್ರಕೋಟಿ ಮತ್ತು ಗಲಗಿ ದೊಡ್ಡ ಕೊಳಗಳಿಗೆ ಹೆಸರುವಾಸಿಯಾಗಿದೆ. ಕಲ್ಯಾಣಿ ಚಾಲುಕ್ಯರ ಆಡಳಿತ ಸಮಯದ ಎರಡು ಜೈನ ಬಸದಿಗಳು ಕಲಘಟಗಿಯಲ್ಲಿದೆ; ಪದ್ಮಾಸೀನ ಶಾಂತಿನಾಥ ತೀರ್ಥಂಕರ ಮತ್ತು ಕಾಯಸ್ಥ ಭಂಗಿಯಲ್ಲಿ ನಿಂತ ಪಾರ್ಶ್ವನಾಥ ಮೂರ್ತಿ ಆಕರ್ಷಕವಾಗಿವೆ. 18ನೆ ಶತಮಾನದ ಮುಸ್ಲಿಮ್ ಸಂತ ಶಹೀದ್ ಗೋರಿಯಿಲ್ಲಿದೆ; ಪ್ರತಿ ವರ್ಷ ಉರುಸ್ ನಡೆಯುತ್ತದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಕಲಘಟಗಿ ಜಾತ್ರೆಗೆ ರಾಜ್ಯ-ಹೊರರಾಜ್ಯದ ಲಕ್ಷಾಂತರ ಮಂದಿ ಬರುತ್ತಾರೆ. ಇದು ರಾಜ್ಯದ ಅತಿ ದೊಡ್ಡ ಜಾತ್ರಗಳಲ್ಲಿ ಒಂದೆನಿಸಿದೆ.

ಒಂದು ಕಾಲದಲ್ಲಿ ಕಲಘಟಗಿಯ ಚಿತ್ತಾಕರ್ಷಕ ಮರದ ತೊಟ್ಟಿಲು ಮತ್ತು ಮೂರ್ತಿಗಳು ಖ್ಯಾತಿ ಗಳಿಸಿದ್ದವು. ಸಾಹುಕಾರ್ ಮನೆತನದವರ ಕುಲಕಸುಬಿದು. ಬಣ್ಣಬಣ್ಣದ ಚಿತ್ತಾರಗಳ ತೊಟ್ಟಿಲುಗಳಿಗೆ ಬಹಳ ಬೇಡಿಕೆ ಇತ್ತು. ಈ ಬಣ್ಣವನ್ನು ಸಾಹುಕಾರ್ ಕುಟುಂಬದವರೆ ತಯಾರಿಸುತ್ತಾರೆ. ನೂರಾರು ವರ್ಷದವರೆಗೆ ಈ ಬಣ್ಣ ಮಾಸದಿರುವುದು ವಿಶೇಷವಾಗಿದೆ. ಪ್ರೋತ್ಸಾಹವಿಲ್ಲದೆ ತೊಟ್ಟಿಲುಗಳ ತಯಾರಿಕೆ ಈಗ ಕಡಿಮೆಯಾಗಿದ್ದರೂ ಪ್ರಖ್ಯಾತಿ ಮಾತ್ರ ಮಾಸಿಲ್ಲ! ಮರ ಮತ್ತು ಬಿದಿರಿನ ಪೀಠೋಪಕರಣ ಮತ್ತಿತರ ಸಾಮಾನು ತಯಾರಿಕೆಗೆ ಪ್ರಸಿದ್ಧವಾಗಿರುವ ಅಳ್ನಾವರದ ಪ್ರಾಚೀನ ಹೆಸರು ಅನಿಲ್ಪುರ. ರೈಲ್ವೆ ಜಂಕ್ಷನ್‌ನಿಂದಾಗಿ ಮಹತ್ವ ಪಡೆದಿರುವ ಈ ತಾಲೂಕಲ್ಲಿ ಸಾಮಿಲ್, ಕಟ್ಟಿಕೆ ಕೈಗಾರಿಕೆಗಳಿವೆ.

ಕೃಷಿ-ಕಸುಬ-ಕಾಸು

ಕಲಘಟಗಿ ಮತ್ತು ಅಳ್ನಾವರ ಕೃಷಿ ಪ್ರಧಾನ ತಾಲುಕುಗಳು; ಹೊಲದಲ್ಲಿ ಬೆವರು ಚೆಲ್ಲಿದರಷ್ಟೆ ತುತ್ತಿನ ಚೀಲ ತುಂಬುತ್ತದೆ. ಒಂದಿಷ್ಟು ಕುಟುಂಬಗಳು ಕುಲ ಕಸುಬುಗಳು, ಮರ-ಬಿದಿರಿನ ಸಾಮಾನು ತಯಾರಿಸುವ ಗುಡಿ ಕೈಗಾರಿಕೆ ಮತ್ತು ತರಕಾರಿ-ಹಣ್ಣು-ಹಂಪಲು ಬೆಳೆದು ಬದುಕುಕಟ್ಟಿಕೊಂಡಿವೆ. ಎರಡೂ ತಾಲೂಕಲ್ಲಿ ದುಡಿವ ಕೈಗಳಿಗೆ ಉದ್ಯೋಗ ಕೊಡುವ ಯಾವುದೇ ದೊಡ್ಡ ಕೈಗಾರಿಕೆಯಿಲ್ಲ. ಕಂದುಮಿಶ್ರಿತ ಮಸಾರಿ ಮಣ್ಣಿನ ಕಲಘಟಗಿಯಲ್ಲಿ ಒಂದು ಕಾಲದಲ್ಲಿ ಭತ್ತ ವಿಪುಲವಾಗಿ ಬೆಳೆಯಲಾಗುತ್ತಿತು. ಅಕ್ಕಿ ತಯಾರಿಸುವ ಗಿರಣಿಗಳೂ ಸಾಕಷ್ಟಿದ್ದವು. ರುಚಿಗೆ ಪ್ರಸಿದ್ಧವಾಗಿರುವ ಕಲಘಟಗಿಯ ಅಕ್ಕಿಗೆ ವಿಶೇಷ ಬೇಡಿಕೆಯಿತ್ತು. ಅವಲಕ್ಕಿ-ಚುರಮುರಿ ತಯಾರಿಕೆಗೂ ಕಲಘಟಗಿ ಹೆಸರುವಾಸಿ. ಈಗಿತ್ತಲಾಗಿ ಭತ್ತದ ಗದ್ದೆಗಳನ್ನು ವಾಣಿಜ್ಯ ಬೆಳೆಗಳಾದ ಕಬ್ಬು, ಸೊಯಾಬೀನ್, ಗೋವಿ ಜೋಳ ಆಕ್ರಮಿಸುತ್ತಿದೆ. ಅಳ್ನಾವರದಲ್ಲಿ ಕಬ್ಬು ಹೆಚ್ಚು ಬೆಳೆಯಲಾಗತ್ತಿದೆ; ಗೋವಿನ ಜೋಳ, ಎಣ್ಣೆ ಕಾಳು ಮತ್ತು ಹತ್ತಿ ಇತರ ಬೆಳೆಗಳು. ಎರಡೂ ತಾಲೂಕಿನ ಆರ್ಥಿಕತೆಗೆ ಕೃಷಿಯೇ ಜೀವ-ಜೀವಾಳ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕುಂದಗೋಳ: ಸಮನ್ವಯತೆ-ಸಂಗೀತದ ನೆಲೆವೀಡಲ್ಲಿ ಹಿಂದುಳಿದಿರುವಿಕೆ-ಧರ್ಮಕಾರಣ ಜುಗಲ್‌ಬಂದಿ!

ಕಲಘಟಗಿ-ಅಳ್ನಾವರ ತಾಲೂಕಿನ ಕಬ್ಬು ದೂರದ ಹಳಿಯಾಳ ಸಕ್ಕರೆ ಕಾರ್ಖಾನೆಯನ್ನೆ ಅವಲಂಬಿಸಿದೆ; ಇಲ್ಲವೆ ಮತ್ತೂ ದೂರದ ಬೆಳಗಾವಿ ಜಿಲ್ಲೆಯ ಸಕ್ಕರೆ ಫ್ಯಾಕ್ಟರಿಗಳಿಗೆ ಸಾಗಿಸಬೇಕು. ಸಂಡೂರಿಂದ ವಲಸೆ ಬಂದು ಇಲ್ಲಿಂದ ಎರಡು ಬಾರಿ ಶಾಸಕರಾದ ಸಂತೋಷ್ ಲಾಡ್ ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ಹೇಳಿದ್ದು ಹುಸಿಯಾಗಿದೆ; ಸಕ್ಕರೆ ಕಾರ್ಖಾನೆಗೆಂದು ರೈತರಿಂದ ಅಗ್ಗದಲ್ಲಿ ಭೂಮಿ ಖರೀದಿಸಿ ಲಾಡ್ ಮೋಸ ಮಾಡಿದರೆಂಬ ಸಿಟ್ಟು ಕ್ಷೇತ್ರದಲ್ಲಿದೆ. ನೀರಾವರಿ ಯೋಜನೆಗೆ ಸಾಕಷ್ಟು ಅವಕಾಶವಿದ್ದರೂ ಸ್ಥಳೀಯ ಶಾಸಕ-ಸಂಸದರು ಉದಾಸೀನದಲ್ಲಿದ್ದಾರೆ. ಕಲಘಟಗಿಯ 330 ಕೆರೆಗಳಲ್ಲಿ ಕನಿಷ್ಟ 100 ಕೆರೆಗಳಲ್ಲಾದರೂ ಹೂಳನ್ನು ಯೋಜನಾಬದ್ಧವಾಗಿ ಎತ್ತಿದರೂ ಸಾಕಿತ್ತು; ಸಾವಿರಾರು ಹೊಲಗಳು ಹಸನಾಗುತ್ತಿದ್ದವು. ನೀರಸಾಗರ ಕೆರೆಗೆ ಕಾಳಿ ನೀರು ತಂದರೆ ಸಾವಿರಾರು ಹೆಕ್ಟೇರ್ ಒಣಭೂಮಿ ಹಸಿರಾಗುತಿತ್ತು ಎಂದು ರೈತರು ಹತಾಶೆಯಿಂದ ಹೇಳುವುದು ಕಲಘಟಗಿಯ ದುರಂತವನ್ನು ಬಿಂಬಿಸುತ್ತದೆ.

ಹೊಲವಿದ್ದರೂ ನೀರಿಲ್ಲದಿರುವುದರಿಂದ ಉಳುಮೆ ಮಾಡಲಾಗದೆ ರೈತರು ಗುಳೆ ಹೋಗತ್ತಿದ್ದರೆ, ಯುವಸಮೂಹ ನಗರಗಳ ಕೈಗಾರಿಕೆಗಳಲ್ಲಿ ಕೂಲಿ ಹುಡುಕುವಂತಾಗಿದೆ. ಶಾಸಕ-ಸಂಸದರು ಕೈಗಾರಿಕರಣದ ಬಗ್ಗೆಯೂ ಯೋಚಿಸುವುದಿಲ್ಲಿ ಕೃಷಿ ಉನ್ನತೀಕರಣಕ್ಕೂ ಮುಂದಾಗುತ್ತಿಲ್ಲ. 2018ರ ತನಕದ 40 ವರ್ಷ ಕಲಘಟಗಿಯ ಬೇಕು-ಬೇಡಗಳ ಅರಿವಿಲ್ಲದ ಹೊರಗಿನವರು ಶಾಸಕರಾಗಿದ್ದರು; ಈಗ ಕಲಘಟಗಿಯಲ್ಲೆ ಹುಟ್ಟಿಬೆಳೆದವರು ಎಮ್ಮೆಲ್ಲೆಯಾಗಿದ್ದಾರೆ. ದುರಂತವೆಂದರೆ ಅವರಿಗೂ ಕ್ಷೇತ್ರದ ನಾಡಿಮಿಡಿತ ಅರ್ಥವಾಗುತ್ತಿಲ್ಲ. ಕೇಂದ್ರದಲ್ಲಿ ಪ್ರಭಾವಿ ಮಂತ್ರಿಯಾಗಿರುವ ಸಂಸದ ಪ್ರಹ್ಲಾದ್ ಜೋಶಿ ಮನಸ್ಸು ಮಾಡಿದರೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಕಲಘಟಗಿ ಮತ್ತು ರೈಲ್ವೆ ಜಂಕ್ಷನ್ ಇರುವ ಅಳ್ನಾವರದಲ್ಲಿ ಕೈಗಾರಿಕೆ ಸ್ಥಾಪನೆ ಕಷ್ಟದ ಕೆಲಸವೇನಲ್ಲ; ರಾಜಕೀಯ ನೇತಾರರಿಗೆ ಇಚ್ಛಾಶಕ್ತಿ ಇಲ್ಲದಿರುವುದೇ ಎರಡೂ ತಾಲುಕುಗಳ ದೌರ್ಭಾಗ್ಯಕ್ಕೆ ಮೂಲಕಾರಣವೆಂದು ಹಿರಿಯ ಪತ್ರಕರ್ತರೋಬ್ಬರು ’ನ್ಯಾಯಪಥ’ಕ್ಕೆ ವಿವರಿಸಿದರು.

ಲಿಂಗಾಯತ ’ಮೀಸಲು’ ಕ್ಷೇತ್ರ!

ಕಲಘಟಗಿಯ ಚುನಾವಣಾ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ ಇಲ್ಲಿಂದ ಗೆದ್ದವರೆಲ್ಲ ಈ ಕ್ಷೇತ್ರವನ್ನು, ಶಾಸಕನಾಗಲು ಬೇಕಾದ ನಿರ್ಜೀವ ಭೌಗೋಳಿಕ ಪ್ರದೇಶವೆಂದು ಭಾವಿಸಿರುವಂತೆ ಬಾಸವಾಗುತ್ತದೆ. 1978ರಲ್ಲಿ ಹೊರಗಿನವರು ವೈಯಕ್ತಿಕ ಪ್ರತಿಷ್ಠೆಗಾಗಿ ಎಮ್ಮೆಲ್ಲೆಯಾಗುವ ಏಕೈಕ ಉದ್ದೇಶದಿಂದ ಕಲಘಟಗಿಗೆ ವಲಸೆ ಬರುವ ರಿವಾಜು ಶುರುವಯಿತು; ಅಲ್ಲಿಯ ತನಕ ಸ್ಥಳೀಯರು ಶಾಸಕರಾದರೂ ಕ್ಷೇತ್ರದ ಉದ್ಧಾರಕ್ಕೆ ಅವರ್‍ಯಾರೂ ತಲೆ ಕೆಡಿಸಿಕೊಂಡಂತೆ ಕಾಣಿಸುವುದಿಲ್ಲ ಎಂಬ ಮಾತು ಕೇಳಿಬರುತ್ತದೆ. ಬಹುಸಂಖ್ಯಾತ ಲಿಂಗಾಯತ ಏಕಸ್ವಾಮ್ಯದ ರಾಜಕೀಯ ಅಖಾಡವಿದು. ಪ್ರಮುಖ ಪಕ್ಷಗಳು ಲಿಂಗಾಯತರಿಗೆ ಅವಕಾಶ ಕೊಡುವುದು ಸಾಮಾನ್ಯವಾಗಿತ್ತು. 1957ರಿಂದ 2008ರವರೆಗಿನ 11 ಚುನಾವಣೆಗಳಲ್ಲಿ 1983ರಲ್ಲೊಮ್ಮೆ ಚರ್ಚ್‌ನ ಪಾದ್ರಿಯೊಬ್ಬರು ಅನಿರೀಕ್ಷಿವಾಗಿ ಚುನಾಯಿತರಾದದ್ದು ಬಿಟ್ಟರೆ ಉಳಿದೆಲ್ಲ ಬಾರಿ ಲಿಂಗಾಯತರೆ ಶಾಸಕರಾಗಿದ್ದಾರೆ. 2008ರ ಕ್ಷೇತ್ರಗಳ ಭೌಗೋಳಿಕ ಪರಿಧಿ ಪುನರ್‌ರಚನೆವರೆಗೂ ಕಲಘಟಗಿಯಲ್ಲಿ ಲಿಂಗಾಯತರಿಗೆ ಪೈಪೋಟಿ ಕೊಡುವ ಪ್ರಬಲ ಜಾತಿಯೂ ಇರಲಿಲ್ಲ. ದ್ವಿತೀಯ ಬಹುಸಂಖ್ಯಾತರಾದ ಮುಸ್ಲಿಮರಿಗೆ ರಾಜಕೀಯ ಪ್ರಜ್ಞೆ ಬಂದಿದ್ದು 1994ರ ನಂತರ ಎಂಬ ವಿಶ್ಲೇಷಣೆಗಳು ಕಲಘಟಗಿಯ ರಾಜಕೀಯ ಕಟ್ಟೆಯಲ್ಲಿದೆ.

2007ರ ವಿಧಾನಸಭಾ ಕ್ಷೇತ್ರಗಳ ಡಿಲಿಮಿಟೇಷನ್‌ನಲ್ಲಿ ಕಲಘಟಗಿ ಕ್ಷೇತ್ರದ ಜಾತಿ ಸಮೀಕರಣ ಬದಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಹುಬ್ಬಳ್ಳಿ ತಾಲೂಕಿನ ಹಳ್ಳಿಗಳನ್ನು ಕುಂದಗೋಳಕ್ಕೆ ಸೇರಿಸಿ, ಧಾರವಾಡ ಕ್ಷೇತ್ರದಲ್ಲಿದ್ದ ಅಳ್ನಾವರ ಸೀಮೆಯನ್ನು ಜೋಡಿಸಲಾಗಿದೆ. ಅಳ್ನಾವರ ಭಾಗದಲ್ಲಿ ಮರಾಠರು ಗಣನೀಯವಾಗಿ ಇರುವುದರಿಂದ ಲಿಂಗಾಯತೇತರರು ಸ್ಪರ್ಧೆಯೊಡ್ಡಲು ಸಾಧ್ಯವಾಗುವಂತೆ ಆಖಾಡ ಹದಗೊಂಡಿದೆ. 2008ರಿಂದ ಲಿಂಗಾಯತ-ಮರಾಠ ಮೇಲಾಟ ಶುರುವಾಗಿದೆ. ಕ್ಷೇತ್ರದಲ್ಲಿರುವ ಒಟ್ಟು 1,89,693 ಮತದಾರರಲ್ಲಿ ಲಿಂಗಾಯತರು 60 ಸಾವಿರ, ಮರಾಠರು 30 ಸಾವಿರ, ಮುಸ್ಲಿಮರು 35 ಸಾವಿರ, ಎಸ್ಸಿ-ಎಸ್ಟಿ 50 ಸಾವಿರ ಹಾಗೂ ಕುರುಬ, ಜೈನ, ಕ್ರೈಸ್ತ, ಬ್ರಾಹ್ಮಣ ಮುಂತಾದ ಸಮುದಾಯದ ಮತದಾರರು ಸಣ್ಣ ಸಂಖ್ಯೆಯಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ.

ಮೊದಲ ಚುನಾವಣೆಯಲ್ಲಿ (1957) ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪ್ರತಿರೋಧವೆ ಇರಲಿಲ್ಲ; ಕಾಂಗ್ರೆಸ್‌ನ ಬಿ.ಆರ್.ತಂಬಾಕದ 16,928 ಮತ ಪಡೆದರೆ ಎದುರಾಳಿ ಪಕ್ಷೇತರ ಅಭ್ಯರ್ಥಿ ವಿ.ಎಂ.ಯಾವಗಲ್ ಕೇವಲ 1,842 ಮತ ಸೆಳೆಯಲಷ್ಟೆ ಸಾಧ್ಯವಾಯಿತು. ಕಾಂಗ್ರೆಸ್ ಪರವಾಗಿ ಎದ್ದಿದ್ದ ಭಾವನಾತ್ಮಕ ಬಿರುಗಾಳಿಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ನಿರಾಯಾಸವಾಗಿ ಶಾಸಕನಾದರು. ಆದರೆ 1962ರ ಚುನಾವಣೆ ವೇಳೆಗೆ ಕಾಂಗ್ರೆಸ್‌ಗೆ ಸಮರ್ಥ ಪ್ರತಿಸ್ಪರ್ಧಿ ಪಕ್ಷ (ಎಲ್‌ಎಸ್‌ಎಸ್-ಲೋಕ ಸೇವಕ ಸಂಘ) ತಲೆಯೆತ್ತಿತು. ಕಾಂಗ್ರೆಸ್‌ನ ಎಸ್.ಎಂ.ಹಸ್ಬಿ (13,842) ಮತ್ತು ಎಲ್‌ಎಸ್‌ಎಸ್ ಅಭ್ಯರ್ಥಿ ಬಿ.ಎ.ದೇಸಾಯಿ (12,047) ನಡುವೆ ಕತ್ತುಕತ್ತಿನ ಪೈಪೋಟಿ ನಡೆಯಿತು. ಸಣ್ಣ ಅಂತರದಲ್ಲಿ ಕಾಂಗ್ರೆಸ್ ದಡಸೇರಿತು! 1967ರಲ್ಲಿ ಪಕ್ಷೇತರನಾಗಿ ಸಮರಕ್ಕಿಳಿದಿದ್ದ ಪಿ.ಎಸ್.ಪಾಟೀಲ್ ಭರ್ಜರಿ 20,188 ಓಟು ಗಿಟ್ಟಿಸಿ ಕಾಂಗ್ರೆಸ್‌ನ ಎ.ಎಸ್.ಪಾಟೀಲ್‌ರನ್ನು (12,170) ಮಣಿಸಿ ಶಾಸನಸಭೆ ಪ್ರವೇಶ ಪಡೆದರು.

ವಲಸಿಗರ ಪರ್ವ!

ಕಾಂಗ್ರೆಸ್ 1972ರ ಚುನಾವಣೆಯಲ್ಲಿ ಹೊಸಮುಖ ಜಿ.ಸಿ.ಪಾಟೀಲ್‌ರನ್ನು ಕಣಕ್ಕಿಳಿಸಿತು. ಸಂಸ್ಥಾ ಕಾಂಗ್ರೆಸ್‌ನ ಎಫ್.ಎಸ್.ಪಾಟೀಲ್ 16,259 ಮತ ಪಡೆದು ಪ್ರಬಲ ಸ್ಫರ್ಧೆಕೊಟ್ಟರು. ಕಾಂಗ್ರೆಸ್ ಉಮೇದುವಾರ 2,449 ಮತದಿಂದ ಆಯ್ಕೆಯಾದರು. ವಲಸೆ ಬಂದಿದ್ದ ಎಫ್.ಎಸ್.ಪಾಟೀಲ್ 1978ರ ಇಲೆಕ್ಷನ್‌ನಲ್ಲಿ ಜನತಾ ಪಕ್ಷದಿಂದ ಆಖಾಡಕ್ಕಿಳಿದರು. ಬಹುಸಂಖ್ಯಾತ ಲಿಂಗಾಯತರನ್ನು ಒಲಿಸಿಕೊಂಡ ಪಾಟೀಲ್ (23,789) ಕಾಂಗ್ರೆಸ್‌ನ ದುರ್ಬಲ ಹುರಿಯಾಳು ಸಿ.ಬಿ.ಕುರವತ್ತಿಯವರನ್ನು 6,053 ಮತಗಳಿಂದ ಪರಾಭವಗೊಳಿಸಿ ಶಾಸಕರಾದರು. ಕಲಘಟಗಿಯ ತುಮರಿಕೊಪ್ಪ ಚರ್ಚ್‌ಗೆ ಫಾದರ್ ಆಗಿ ಬಂದಿದ್ದ ಕೇರಳ ಮೂಲದ ಜೇಕಬ್ ಪಲ್ಲಿಪುರತು ಎಲ್ಲ ಸಮುದಾಯದ ಜತೆ ನಿರ್ವಾಜ್ಯವಾಗಿ ಬೆರೆಯುತ್ತಿದ್ದರು. ಗುಡ್ ನ್ಯೂಸ್ ಎಂಬ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಜಾತಿ-ಮತ ನೋಡದೆ ಹಿಂದುಳಿದ ಕಲಘಟಗಿಯ ಸಕಲ ಜನರ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದರು; ನೀರಿನ ಬವಣೆ ಬಾಧಿಸುತ್ತಿದ್ದಾಗ ಕೆರೆಗಳ ಹೂಳು ತೆಗೆಸಿ ಜೀವಜಲ ಪೂರೈಕೆಗೆ ನೆರವಾದರು. ಜನಾನುರಾಗಿಯಾಗಿದ್ದ ಫಾದರ್ ಜೇಕಬ್, ಕಲಘಟಗಿ ಜನರ ಒತ್ತಾಸೆಯಿಂದ 1983ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದರು. ಶಾಸಕ ಪಾಟೀಲ್ ಜನತಾ ಪಕ್ಷ ಬಿಟ್ಟು ಕಾಂಗ್ರೆಸ್ ಕ್ಯಾಂಟಿಡೇಟಾದರು. ಆಂಟಿ-ಇನ್‌ಕಂಬೆನ್ಸ್ ಮತ್ತು ಪಕ್ಷಾಂತರದಿಂದ ತೂಕ ಕಳೆದುಕೊಂಡಿದ್ದ ಪಾಟೀಲ್ ಗೆಲುವಿನ ಹೊಸ್ತಿಲಿಗೆ ಬಂದು ಎಡವಿದರು. ಫಾದರ್ ಜೇಕಬ್ (23,664) ಮತ್ತು ಪಾಟೀಲ್ (23,168) ಮಧ್ಯೆ ನೇರ-ನಿಕಟ ಹಣಾಹಣಿ ನಡೆಯಿತು. ಫಾದರ್ ಜೇಕಬ್ 496 ಮತದಿಂದ ಲಿಂಗಾಯತ ಕ್ಷೇತ್ರದಲ್ಲಿ ಗೆದ್ದು ಅಚ್ಚರಿ ಮೂಡಿಸಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನವಲಗುಂದ: ರೈತ ಬಂಡಾಯದ ನೆಲದಲ್ಲಿ ಜಾತಿ ಪ್ರತಿಷ್ಠೆಯ ಪೈಪೋಟಿ!

ರಾಮಕೃಷ್ಣ ಹೆಗಡೆಯ ಪ್ರಥಮ ಕಾಂಗ್ರೆಸ್ಸೇತರ ಸರಕಾರಕ್ಕೆ ಬೆಂಬಲ ನೀಡಿ ಫಾದರ್ ಜನತಾ ಪಕ್ಷದ ಸಹಸದಸ್ಯನಾಗಿದ್ದರು. ಆದರೂ ಲಿಂಗಾಯತ ಬಾಹುಳ್ಯದ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಫಾದರ್‌ಗೆ ಜನತಾ ಪಕ್ಷ 1985ರಲ್ಲಿ ಟಿಕೆಟ್ ಕೊಡುವ ’ಸಾಹಸ’ ಮಾಡಲಿಲ್ಲ! ’ಸಂಪ್ರದಾಯ’ದಂತೆ ಲಿಂಗಾಯತ ಕೋಮಿನ ಪಿ.ಸಿ.ಸಿದ್ದನಗೌಡರ್‌ಗೆ ಜನತಾ ಪಕ್ಷದ ಅಭ್ಯರ್ಥಿ ಮಾಡಲಾಯಿತು. ಸಿದ್ದನಗೌಡರ್ ಕ್ಷೇತ್ರದ ಉದ್ದಗಲ ಗೊತ್ತಿಲ್ಲದ ಹುಬ್ಬಳ್ಳಿ ಕಡೆಯ ರಫ್ತು ರಾಜಕಾರಣಿಯಾಗಿದ್ದರು. ಸಿದ್ದನಗೌಡರ್ (34,211) ಮತ್ತು ಕಾಂಗ್ರೆಸ್‌ನ ಜಿ.ಸಿ.ಪಾಟೀಲ್ (24,631) ಕಾದಾಟ ಕುತೂಹಲ ಕೆರಳಿಸಿತ್ತು.

ಎಸ್.ಐ.ಚಿಕ್ಕನಗೌಡ

ಆ ನಡುಗಾಲ ಚುನಾವಣೆಯಲ್ಲಿ ಉತ್ತರಕರ್ನಾಟಕದ ಲಿಂಗಾಯತ ನಾಯಕರಾಗಿ ಅವತರಿಸಿದ್ದ ಬ್ರಾಹ್ಮಣ ಸಮುದಾಯದ ಹೆಗಡೆ ಪರ ಎದ್ದಿದ್ದ ಅಲೆಯಲ್ಲಿ ಸಲೀಸಾಗಿ ತೇಲಿದ ಸಿದ್ದನಗೌಡರ್ 9,580 ಮತದಿಂದ ಗೆಲುವು ಸಾಧಿಸಿದರು. 1989ರಲ್ಲಿ ಚತುಷ್ಕೋನ ಸ್ಫಧೆ ಏರ್‍ಪಟ್ಟಿತು. ಆಗ ರೈತ ಸಂಘದ ಸಂಘಟನೆ ಧಾರವಾಡ ಜಿಲ್ಲೆಯಲ್ಲಿ ಶಕ್ತಿಶಾಲಿಯಾಗಿತ್ತು! ಶಾಸಕ ಸಿದ್ದನಗೌಡರ್ ಜನತಾದಳ ವಿಭಜನೆಯಾದಾಗ ಹೆಗಡೆ-ಎಸ್.ಆರ್.ಬೊಮ್ಮಾಯಿ ಬಣದಲ್ಲಿ ಉಳಿದುಕೊಂಡಿದ್ದರು. ಜೆಡಿ ಹುರಿಯಾಳು ಸಿದ್ದನಗೌಡರ್(19,417), ರೈತ ಸಂಘದ ಎಂ.ಎಸ್.ಕಲಗೇರಿ (18,700), ಕಾಂಗ್ರೆಸ್‌ನ ಮನೋರಮಾ ಬುನಿಯನ್ (14,467) ಮತ್ತು ಪಕ್ಷೇತರ ಫಾದರ್ ಜೇಕಬ್ (10,896) ನಾಲ್ಕು ಕಡೆ ನಿಂತು ಕಾದಾಡಿದರು. ಕೇವಲ 717 ಮತದಿಂದ ಸಿದ್ದನಗೌಡರ್ ಗೆದ್ದರು; ರೈತ ಸಂಘ ವಿರೋಚಿತವಾಗಿ ಸೋತಿತು!

ಬಾಬರಿ ಮಸೀದಿ ಪತನ ಮತ್ತು ಹತ್ತಿರದ ಹುಬ್ಬಳ್ಳಿ ಈದ್ಗಾ ಮೈದಾನ ವಿವಾದದ ಅಡ್ಡ ಪರಿಣಾಮದಿಂದಾಗಿ 1994ರ ಚುನಾವಣೆ ಸಂದರ್ಭದಲ್ಲಿ ಕಲಘಟಗಿಯಲ್ಲಿ ಬಿಜೆಪಿ ಚಿಗುರಿಕೊಂಡಿತ್ತು! ರೈತ ಸಂಘದ ಪ್ರಭಾವ ಕಡಿಮೆಯಾಗಿತ್ತು. ಶಾಸಕ ಸಿದ್ದನಗೌಡರ್ ಲಿಂಗಾಯತ ಪ್ರತಿಷ್ಠೆ ರಾಜಕಾರಣ ಕಾಪಾಡಿಕೊಂಡಿದ್ದರು. ಬಂಗಾರಪ್ಪರ ಕೆಸಿಪಿ ಉಗಮ ಹಾಗೂ ಮುಸ್ಲಿಮ್ ನಾಯಕನ ಬಂಡಾಯದಿಂದ ಕಾಂಗ್ರೆಸ್ ಕ್ಷೇತ್ರದಲ್ಲಿ ಹೈರಾಣಾಗಿತ್ತು. ಹೀಗಾಗಿ ಮತಗಳು ಐದಾರು ಪಾಲಾಯಿತು. ಬಿಜೆಪಿ 14,473 ಮತ ಪಡೆದು ಅಸ್ತಿತ್ವ ಪ್ರದರ್ಶಿಸಿತು. ರೈತ ಸಂಘದ ಖೇಷ್ನಾರಾವ್ ಯಾದವ್ 14,718 ಮತ ಪಡೆದರು. 25,392 ಓಟು ಗಿಟ್ಟಿಸಿದ ಜನತಾದಳದ ಸಿದ್ದನಗೌಡರ್ ಮೂರನೆ ಬಾರಿ ಶಾಸಕನಾದರು.

1999ರ ವೇಳೆಗೆ ದೇವೇಗೌಡ-ರಾಮಕೃಷ್ಣ ಹೆಗಡಗಳ ದಾಯಾದಿ ಕಲಹದಲ್ಲಿ ಜನತಾ ಪರಿವಾರ ತೀರಾ ದುರ್ಬಲವಾಗಿತ್ತು; ಶಾಸಕ ಸಿದ್ದನಗೌಡರ್ ಕಾಂಗ್ರೆಸ್ ಸೇರಿ ಆ ಪಕ್ಷದ ಕ್ಯಾಂಡಿಡೇಟಾದರು. ಬಿಜೆಪಿ ಹಣವಂತ ಲಿಂಗಾಯತ ಜಮೀನ್ದಾರ ಐ.ಎಸ್.ಚಿಕ್ಕನಗೌಡ್ರರನ್ನು ಹುಬ್ಬಳ್ಳಿಯಿಂದ ಕಳಿಸಿತು. ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಹುಬ್ಬಳ್ಳಿಯ ಕೆಲವು ಹಳ್ಳಿಗಳಲ್ಲಿನ ಹಲವು ಲಿಂಗಾಯತ ಕುಟುಂಬಗಳ ಮೇಲೆ ಚಿಕ್ಕನಗೌಡ್ರ ಮನೆತನದ ಪ್ರಭಾವವಿತ್ತು. ಹಾಗಂತ ಚಿಕ್ಕನಗೌಡ್ರಿರಿಗೆ ಕ್ಷೇತ್ರದ ಕಷ್ಟ-ಸುಖ ಗೊತ್ತಿತ್ತು ಅಂತೇನಿಲ್ಲ ಎಂಬ ಮಾತು ಕೇಳಿಬರುತ್ತದೆ. ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸಿ ವಿಫಲರಾದ ಬಾಬುಸಾಬ್ ಕಾಶೀಮನವರ್ ಬಂಡೆದ್ದು ಕಣಕ್ಕಿಳಿದರು; ಕಾಂಗ್ರೆಸ್ ಮತಬ್ಯಾಂಕ್ ವಿಭಜನೆಯಾಯಿತು. ಬಾಬುಸಾಬ್ 29,265 ಮತ ಗಳಿಸಿದರೆ, ಸಿದ್ದನಗೌಡರ್ 27,006 ಓಟು ಬಂತು. ಧರ್ಮಕಾರಣ-ಜಾತಿಕಾರಣದಿಂದ 32,977 ಮತ ಸೆಳೆದ ಬಿಜೆಪಿಯ ಚಿಕ್ಕನಗೌಡ್ರ ಎಮ್ಮೆಲ್ಲೆಯಾದರು ಎಂದು ವಿಶ್ಲೇಷಿಸಲಾಗುತ್ತಿದೆ.

2004ಲ್ಲಿ ಹಳೆ ಎದುರಾಳಿಗಳಾದ ಬಿಜೆಪಿಯ ಚಿಕ್ಕನಗೌಡ್ರ (28,065), ಕಾಂಗ್ರೆಸ್‌ನ ಸಿದ್ದನಗೌಡರ್ (26,016) ಮತ್ತು ಈ ಬಾರಿ ಜನತಾ ಪಕ್ಷದ (ಜೆಪಿ) ಹುರಿಯಾಳಾಗಿದ್ದ ಬಾಬುಸಾಬ್ ಕಾಶೀಮನವರ್ (26,107) ನಡುವೆ ತ್ರಿಕೋನ ಕಾಳಗ ನಡೆಯಿತು. ಸಿದ್ದನಗೌಡರ್‌ಗೆ ಮುಸ್ಲಿಮ್ ಮತ ಹೆಚ್ಚು ಪಡೆಯಲಾಗದ್ದು ಬಿಜೆಪಿಯ ಚಿಕ್ಕನಗೌಡ್ರರನ್ನು 1,958 ಮತಗಳ ಸಣ್ಣ ಅಂತರದಿಂದ ಗೆಲ್ಲಿಸಿ ನಿಟ್ಟುಸಿರುಬೀಡವಂತೆ ಮಾಡಿತು ಎಂದು ಅಂದಿನ ರಣರೋಚಕತೆ ಕಂಡವರು ಹೇಳುತ್ತಾರೆ.

ಮರಾಠ ಲಾಡ್ ಲಡಾಯಿ!

ಗಣಿ ಉದ್ಯಮಿ ಸಂತೋಷ್ ಲಾಡ್ 2004ರಲ್ಲಿ ಮರಾಠ ಪ್ರಾಬಲ್ಯದ ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದ ಜೆಡಿಎಸ್ ಶಾಸಕನಾಗಿದ್ದರು. 2007ರಲ್ಲಾದ ವಿಧಾನಸಭಾ ಕ್ಷೇತ್ರಗಳ ಡಿಲಿಮಿಟೇಷನ್ ಸಂದರ್ಭದಲ್ಲಿ ಸಂಡೂರು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಯಿತು. ಹಾಗಾಗಿ ಲಾಡ್ ಬೇರೆ ಸುರಕ್ಷಿತ ಕ್ಷೇತ್ರ ಹುಡುಕಬೇಕಾಗಿ ಬಂತು. ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯಲ್ಲಿ ಕಲಘಟಗಿಗೆ ಮರಾಠರು ಹೆಚ್ಚಿರುವ ಅಳ್ನಾವರ ಸೇರ್‍ಪಡೆ ಮಾಡಲಾಗಿತ್ತು. ವಲಸಿಗರನ್ನು ಪೋಷಿಸುವ ಇತಿಹಾಸ, ಸ್ವಜಾತಿ ಮರಾಠರು ನಿರ್ಣಾಯಕರಾಗಿರುವುದು ಮತ್ತು ಸ್ಥಳೀಯ ಕಾಂಗ್ರೆಸ್‌ನಲ್ಲಿ ಗಟ್ಟಿ ಕ್ಯಾಂಡಿಡೇಟ್ ಇಲ್ಲದಿರವುದು ಹಣವಂತ ಲಾಡ್‌ಗೆ ಕಲಘಟಗಿ ಅನುಕೂಲಕರವಾಗಿ ಕಂಡಿತು. ಟಿಕೆಟ್ ಭರವಸೆಯೊಂದಿಗೆ ಕಾಂಗ್ರೆಸ್ ಸೇರಿದ ಲಾಡ್ ಕ್ಷೇತ್ರ ಹದಮಾಡಿಕೊಳ್ಳತೊಡಗಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಬ್ಬಳ್ಳಿ-ಧಾರವಾಡ ಪೂರ್ವ: ಮುಸ್ಲಿಮರ ಕೈಯಿಂದ ಕ್ಷೇತ್ರ ತಪ್ಪಿಸಿದರೂ ಬಿಜೆಪಿಗೇಕೆ ಗೆಲ್ಲಲಾಗುತ್ತಿಲ್ಲ?!

ಕಲಘಟಗಿಯ ಬಡತನ, ರೈತಾಪಿ ವರ್ಗದ ಅಸಹಾಯಕತೆಗಳನ್ನು ಬಂಡವಾಳ ಮಾಡಿಕೊಂಡ ಲಾಡ್ ಸಂಡೂರಿಂದ ಬರುವಾಗ ಹಿಟಾಚಿ, ಹಣದ ಬ್ಯಾಗ್ ಜತೆ ಬಂದರು; ವೈಯಕ್ತಿಕ ಕಷ್ಟ-ನಷ್ಟಕ್ಕೆ ಹಣ ಹಂಚುತ್ತ, ಹೊಲಗಳನ್ನು ಉಳುಮೆಗೆ ಹದಗೊಳಿಸಲು ಹಿಟಾಚಿಯನ್ನು ಹಲವು ರೈತರಿಗೆ ಪುಕ್ಕಟೆಯಾಗಿ ಕೊಟ್ಟರು; ಯುವಕರ ಕ್ರೀಡೆ-ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕೇಳಿದಷ್ಟು ದೇಣಿಗೆ ನೀಡಿದರು ಎಂದು ಕ್ಷೇತ್ರದ ಜನರು ಹೇಳುತ್ತಾರೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಾಳಾದ ಲಾಡ್ ಅಳ್ನಾವರದಲ್ಲಿ ಸ್ವಜಾತಿ ಮರಾಠರನ್ನು ಸಂಘಟಿಸಿದರು. ಬಂಗಾರಪ್ಪರ ಕೆಸಿಪಿ ಮೂಲಕ ಚುನಾವಣಾ ರಾಜಕಾರಣ ಶುರುಹಚ್ಚಿಕೊಂಡಿದ್ದ ಸ್ಥಳೀಯ ವಕೀಲ ಸಿ.ಎಂ.ನಿಂಬಣ್ಣವರ್‌ರನ್ನು ಬಿಜೆಪಿ ಆಖಾಡಕ್ಕೆ ಇಳಿಸಿತು. ಈ ’ಹಣಾ’ಹಣಿಯಲ್ಲಿ ಲಾಡ್ (49,733) ಬಿಜೆಪಿಯ ನಿಂಬಣ್ಣವರ್ (38,091)ರನ್ನು 11,642 ಮತದಂತರದಿಂದ ಸೋಲಿಸಿದರು.

ಸಂತೋಷ್ ಲಾಡ್

ಕ್ಷೇತ್ರದ ಬೇಕುಬೇಡಗಳ ಯೋಚನೆ-ಯೋಜನೆ ಇಲ್ಲದ ಧನಾಧಾರಿತ ರಾಜಕಾರಣಿ ಲಾಡ್ 2008ರಿಂದ 2013ರ ತನಕದ ತಮ್ಮ ಶಾಸಕತ್ವದ ಅವಧಿಯಲ್ಲಿ ಸಮಷ್ಟಿ ಕೆಲಸ ಮಾಡಲಿಲ್ಲ; ಆದರೆ 2008ರ ಚುನಾವಣೆ ಎದುರಾದಾಗ ಬೋರ್‌ವೆಲ್ ಕೊರೆಯುವ ಯಂತ್ರದೊಂದಿಗೆ ಕ್ಷೇತ್ರದಾದ್ಯಂತ ಅಡ್ಡಾಡಿದ ಲಾಡ್ ರೈತರಿಗೆ ಧಾರಾಳವಾಗಿ ಕೊಳವೆ ಬಾವಿ ನಿರ್ಮಿಸಿಕೊಟ್ಟರು; ಜತೆಗೆ ಮಾಮೂಲಿ ಆಟೂಟ-ಮನರಂಜನೆಗೆ ಕಾಸನ್ನು ಕಣ್ಮುಚ್ಚಿ ಕೊಟ್ಟರು. ಈ ತಂತ್ರಗಾರಿಕೆ ಮುಗ್ಧ ಮತದಾರರ ನಡುವೆ ವರ್ಕ್‌ಔಟ್ ಆಯಿತು. ತತ್ಪರಿಣಾಮವಾಗಿ 2013ರ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಲಾಡ್‌ಗೆ 76,802ರಷ್ಟು ಆಗಾಧ ಮತ ತಂದುಕೊಟ್ಟಿತು ಎಂದು ರಾಜಕೀಯ ವಿಮರ್ಶಕರು ತರ್ಕಿಸುತ್ತಾರೆ. ಯಡಿಯೂರಪ್ಪರ ಕೆಜೆಪಿ ಹುರಿಯಾಳು ನಿಂಬಣ್ಣವರ್‌ರನ್ನು (31,141) ಕಾಂಗ್ರೆಸ್‌ನ ಲಾಡ್ 45,661 ಮತದಂತರದಿಂದ ಮಣಿಸಿ ಮತ್ತೊಮ್ಮೆ ಶಾಸಕನಾದರು; ಸಿದ್ದರಾಮಯ್ಯ ತಮ್ಮ ಈ ನಿಷ್ಠಾವಂತನನ್ನು ಮಂತ್ರಿಯೂ ಮಾಡಿದರು!!

ಎರಡನೆ ಬಾರಿ ಶಾಸಕನಾದಾಗ ಲಾಡ್ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿಬಿಟ್ಟರು; ಹಿಂದುಳಿದ ಹಣೆಪಟ್ಟಿಯ ಕಲಘಟಗಿ-ಅಳ್ನಾವರದ ಅಭಿವೃದ್ಧಿಗೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ; ಆಪ್ತ ಸಹಾಯಕರಿಗೆ ಕ್ಷೇತ್ರ ಬಿಟ್ಟುಕೊಟ್ಟು ಬಳ್ಳಾರಿಯ ತಮ್ಮ ಗಣಿ ದಂಧೆ, ಇನ್ನಿತರ ವ್ಯವಹಾರದಲ್ಲಿ ಮಗ್ನರಾದರು. ಆಪ್ತರ ಅವಾಂತರ ಮಿತಿಮೀರಿತು; ಝೀರೋ ಆಗಿದ್ದ ಆಪ್ತರು ಕಣ್ಣುಕುಕ್ಕುವ ಹಣವಂತರಾದರು! ಜನ ರೋಸತ್ತಿಹೋದರು. ಈಗ ಮೈಲಿಗಟ್ಟಲೆ ಉದ್ದದ ರಾಷ್ಟ್ರಧ್ವಜ ಹಿಡಿದು ಲಕ್ಷಾಂತರ ಮಂದಿಯೊಂದಿಗೆ ತಿರಂಗಾ ರ್‍ಯಾಲಿ ಕೈಗೊಂಡು ಗಿನ್ನಿಸ್ ದಾಖಲೆ ಸೃಷ್ಟಿತ್ತಿರುವ ಲಾಡ್ ಎಮ್ಮೆಲ್ಲೆಯಾಗಿದ್ದಾಗ ಯಾವ ಮಟ್ಟಕ್ಕೆ ಕ್ಷೇತ್ರವನ್ನು ನಿರ್ಲಕ್ಷಿಸಿದ್ದರೆಂದರೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂಥ ರಾಷ್ಟ್ರೀಯ ಮಹತ್ವದ ಕಾರ್ಯಕ್ರಮಕ್ಕೂ ಬರದೆ ಸಂಡೂರಲ್ಲಿ ಫ್ಯಾಶನ್ ಬದುಕಲ್ಲಿ ಮೈಮರೆತಿದ್ದರು ಎಂಬ ಆಕ್ಷೇಪದ ಮಾತುಗಳು ಕೇಳಿಬರುತ್ತವೆ. ಈ ಎಂಟಿ ಇನ್‌ಕಂಬೆನ್ಸ್‌ಯಿಂದಾಗಿ ಲಾಡ್ 2018ರಲ್ಲಿ ಬಿಜೆಪಿಯ ನಿಂಬಣ್ಣವರ್ (83,267) ಕೈಲಿ 24,997 ಮತದಂತರದ ಹೀನಾಯ ಸೋಲು ಅನುಭವಿಸುವಂತಾಯಿತು ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ!

ಕ್ಷೇತ್ರದ ಹಾಡು-ಪಾಡು!!

ಕಲಘಟಗಿ-ಅಳ್ನಾವರದ ಗೋಳು ಹೇಳತೀರದು! ಕೋಟ್ಯಾಂತರ ರೂ. ದೈನಂದಿನ ವಹಿವಾಟಿನ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಕೇವಲ 25 ಕಿ.ಮೀ. ಮತ್ತು ಜಿಲ್ಲಾ ಕೇಂದ್ರ ಧಾರವಾಡದಿಂದ 32 ಕಿ.ಮೀ.ದೂರದಲ್ಲಿ ಕಲಘಟಗಿಯಿದ್ದರೆ, ಅಳ್ನಾವರ ಜಿಲ್ಲಾ ಕೇಂದ್ರ ಧಾರವಾಡದಿಂದ 29 ಕಿಮೀ ಅಂತರದಲ್ಲಿದೆ. ಆದರೆ ಪ್ರಗತಿ-ಅಭಿವೃದ್ಧಿಗೆ ಹಿಡಿದಿರುವ ಗ್ರಹಣ ಮೋಕ್ಷವಾಗುವುದಿರಲಿ, ಅದು ಖಗ್ರಾಸವಾಗುತ್ತಿದೆ! ಧಾರವಾಡದ ದೊಡ್ಡ ಹೋಬಳಿಯಾಗಿದ್ದ ಪಟ್ಟಣ ಪಂಚಾಯತ್ ಮಟ್ಟದ ಅಳ್ನಾವರ ಐದು ವರ್ಷದ ಹಿಂದೆ ತಾಲೂಕೆಂದು ಭಡ್ತಿ ಪಡೆದಿದೆ. ಹಲವು ಅಧ್ಯಯನ ವರದಿ-ಸಮೀಕ್ಷೆಗಳಲ್ಲಿ ತೀರಾ ಹಿಂದುಳಿದ ಪ್ರದೇಶವೆಂದು ಪರಿಗಣಿಸಲ್ಪಟ್ಟಿರುವ ಎರಡು ತಾಲೂಕುಗಳಲ್ಲಿ ಕನಿಷ್ಠ ಮೂಲಸೌಕರ್ಯಗಳಿಗೂ ಬರ! ಕುಡಿಯುವ ನೀರು, ಸಾರಿಗೆ, ಆರೋಗ್ಯ, ಶಿಕ್ಷಣ, ವಸತಿಯಂಥ ಅತಿ ಜರೂರ್ ಅಗತ್ಯಗಳು ಎರಡೂ ತಾಲೂಕಿನ ನಗರ-ಹಳ್ಳಿ ಭಾಗದಲ್ಲಿ ಮರೀಚಿಕೆಯಂತಾಗಿದೆ! ಅಳ್ನಾವರ ಪೂರ್ಣಪ್ರಮಾಣದ ತಾಲೂಕು ಕೇಂದ್ರವಾಗದೆ ಜನಸಾಮಾನ್ಯರು ಪರದಾಡುತ್ತಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಜೋರಾಗಿ ಕೇಳಿಬರುತ್ತಿದೆ.

ಮಹೇಶ್ ಟೆಂಗಿನಕಾಯಿ

ಕಲಘಟಗಿಯ ಮಲೆನಾಡು ಪ್ರದೇಶದಲ್ಲಿ ಸರಿಯಾದ ರಸ್ತೆ ಸಂಪರ್ಕವೂ ಇಲ್ಲ! ಕ್ರೈಸ್ತ ಸಂಸ್ಥೆ ಮತ್ತು ಸರಕಾರದ ತಲಾ ಒಂದೊಂದು ಸಾಮಾನ್ಯ ಪದವಿವರೆಗಿನ ಕಾಲೇಜು ಮತ್ತು ಐಟಿಐ ಕೇಂದ್ರ ಬಿಟ್ಟರೆ ಬೇರ್‍ಯಾವ ಶೈಕ್ಷಣಿಕ ಸೌಲಭ್ಯ ಕಲಘಟಗಿಯಲ್ಲಿ; ಅಳ್ನಾವರದಲ್ಲೂ ಇದೇ ಪಾಡು. ಆರೋಗ್ಯ, ಶಿಕ್ಷಣ, ಖರೀದಿ, ಕೂಲಿ, ಕೃಷಿ ಉತ್ಪನ್ನ ಮಾರಾಟ – ಹೀಗೆ ಪ್ರತಿಯೊಂದಕ್ಕೂ ಹುಬ್ಬಳ್ಳಿ-ಧಾರವಾಡವೆ ಗತಿ! ಕೃಷಿ ಪ್ರಧಾನವಾದ ಕಲಘಟಗಿ-ಅಳ್ನಾವರದಲ್ಲಿ ಆಹಾರ ಸಂಸ್ಕರಣಾ ಘಟಕ-ಸಕ್ಕರೆ ಫ್ಯಾಕ್ಟರಿ ಸ್ಥಾಪನೆಗೆ ಅವಕಾಶವಿದೆ; ಸುಮಾರು 2,000 ಎಕರೆಯಷ್ಟು ವಿಶಾಲವಾದ ಕಲಘಟಗಿಯ ನೀರಸಾಗರ ಕೆರೆ ಸ್ಥಳೀಯರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಇಲ್ಲಿಯ ನೀರು ಮಾಯಾನಗರಿ ಹುಬ್ಬಳ್ಳಿ-ಧಾರವಾಡದ ದಾಹ ತಣಿಸಲು ಒಯ್ಯಲಾಗುತ್ತಿದೆ. ಈಗ ಹುಬ್ಬಳ್ಳಿ-ಧಾರವಾಡಕ್ಕೆ ಮಲಪ್ರಭೆಯ ನೀರು ಬರುತ್ತಿರುವುದರಿಂದ ನೀರಸಾಗರದ ಅವಶ್ಯಕತೆಯಿಲ್ಲ. ಈಗಲಾದರೂ ನೀರಾವರಿಗೆ ಈ ಕೆರೆ ಬಳಸಿಕೊಂಡರೆ ಕಲಘಟಗಿಯ ದೆಸೆಯೆ ಬದಲಾಗುತ್ತದೆ; ಬೇಡ್ತಿ ಹಳ್ಳದಿಂದ ನೀರು ತಂದು 35 ಕೆರೆ ತುಂಬಿಸಿ ಕೃಷಿಗೆ ಬಳಸುವ ಯೋಜನೆ ಆರಂಭವಾಗಿ ಐದು ವರ್ಷ ಕಳೆದರೂ ಮುಗಿಯುತ್ತಿಲ್ಲ. ಕೆರಗಳ ಹೂಳೆತ್ತದೆ, ಒತ್ತವರಿ ತೆರವುಗೊಳಿಸದೆ ಮರಪೂರಣ ಮಾಡಿದರೆ ಪ್ರಯೋಜನವೂ ಇಲ್ಲ ಎಂದು ರೈತ ಮುಂದಾಳು ಒಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು.

ಟಿಕೆಟ್ ತಗಾದೆ

ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗು ಕಾಂಗ್ರೆಸ್‌ನ ಎಮ್ಮೆಲ್ಲೆ ಕನಸುಗಾರರ ಟಿಕೆಟ್ ತಗಾದೆ ದಿನಗಳೆದಂತೆ ಬಿರುಸಾಗುತ್ತಿದೆ. ತಂತಮ್ಮ ಪಕ್ಷದಲ್ಲಿ ಗೆಲ್ಲಬಲ್ಲ ತಾಕತ್ತಿರುವುದು ತಮಗೆ ಮಾತ್ರ ಎಂದು ಬಿಂಬಿಸುವ ನಾನಾ ನಮೂನೆಯ ಕಸರತ್ತಿಗೆ ಹಣ ಹರಿಸಹತ್ತಿದ್ದಾರೆ. ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ್ ಬಗ್ಗೆ ಮತದಾರರಿಗಷ್ಟೇ ಅಲ್ಲ, ಬಿಜೆಪಿ ಕಾರ್ಯರ್ಕರಿಗೂ ಅಸಮಾಧಾನವಿದೆ; ಕ್ಷೇತ್ರದವರೆ ಆಗಿರುವುದರಿಂದ ತಮ್ಮ ಆಶೋತ್ತರಗಳಿಗೆ ಸ್ಪಂದಿಸಬಹುದೆಂದು ಭಾವಿಸಿ ದೊಡ್ಡ ಅಂತರದಲ್ಲಿ ಕಳೆದ ಬಾರಿ ಗೆಲ್ಲಿಸಲಾಗಿದ್ದ ನಿಂಬಣ್ಣವರ್ ನಿರೀಕ್ಷೆಯನ್ನು ಹುಸಿಗೊಳಿಸಿದರೆಂಬ ಸಿಟ್ಟು ಕ್ಷೇತ್ರದಲ್ಲಿ ಮಡುಗಟ್ಟಿದೆ. ಜನರ ಕೈಗೆ ಸಿಗದೆ ಕಾರಿನ ಗ್ಲಾಸ್ ಏರಿಸಿ ಓಡಾಡುವ ನಿಂಬಣ್ಣವರ್‌ಗೆ ಟಿಕೆಟ್ ಕೊಡಕೂಡದೆಂಬ ಕೂಗು ಬಿಜೆಪಿಯಲ್ಲಿದೆ. ಹಾಗಂತ ಚುನಾವಣೆ ಎದುರಿಸುವ ಸಾಮರ್ಥ್ಯದ ಬೇರೆ ಅಭ್ಯರ್ಥಿ ಸ್ಥಳೀಯ ಬಿಜೆಪಿಯಲ್ಲಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಧಾರವಾಡ: ಲಿಂಗಾಯತ ಏಕಸ್ವಾಮ್ಯದ ರಾಜಕಾರಣಕ್ಕೆ ಕೇಸರಿ ಖದರು!

ಟಿಕೆಟ್ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರತಳೆಯುವ ಆರೆಸೆಸ್ ಕಟ್ಟಾಳು-ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ 2018ರಲ್ಲಿ ತಮಗೆ ನಿಷ್ಠನಾದ-ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ಕೊಡಿಸಿದ್ದರು; ನಾಮಪತ್ರ ಕೊಡಲು ಬಂದಿದ್ದ ಟೆಂಗಿನಕಾಯಿಗೆ ಯಡಿಯೂರಪ್ಪ ಅನುಯಾಯಿ ನಿಂಬಣ್ಣವರ್‌ರ ಸಾವಿರಾರು ಬೆಂಬಲಿಗರು ಮುತ್ತಿಗೆ ಹಾಕಿ ವಾಪಸ್ ಕಳಿಸಿದ್ದರು. ಇದರಿಂದ ಬೆಚ್ಚಿಬಿದ್ದ ಬಿಜೆಪಿ ಹೈಕಮಾಂಡ್ ಟೆಂಗಿನಕಾಯಿಯವರನ್ನು ಬದಲಿಸಿ ನಿಂಬಣ್ಣವರ್‌ಗೆ ಆಖಾಡಕ್ಕೆ ಇಳಿಸಿತ್ತು. ಈ ಬಾರಿ ನಿಂಬಣ್ಣವರ್ ಬಣ್ಣಗೆಟ್ಟಿರುವುದರಿಂದ ಮತ್ತೊಂದು ಕೈ ನೋಡುವ ಪ್ರಯತ್ನ ಟೆಂಗಿನಕಾಯಿ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಬಿಜೆಪಿ ಬಿಡಾರದಿಂದ ಹೊರಬರುತ್ತಿವೆ. ಯಡಿಯೂರಪ್ಪರ ಇನ್ನೋರ್ವ ಹಿಂಬಾಲಕ-ಮಾಜಿ ಎಮ್ಮೆಲ್ಸಿ ಮೋಹನ ಲಿಂಬಿಕಾಯಿ, ಮಾಜಿ ಮೇಯರ್ ಶಿವು ಹಿರೇಮಠ್ ಬಿಜೆಪಿಯ ಕಪ್ಪು ಕುದುರೆಯಾಗುವ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಮಾಜಿ ಮಂತ್ರಿ ಸಂತೋಷ್ ಲಾಡ್ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿ ಅಭ್ಯರ್ಥಿ ಆಗುತ್ತಾರೆಂಬ ಕುತೂಹಲಕರ ಊಹಾಪೋಹ ಕ್ಷೇತ್ರದಾದ್ಯಂತ ತರತರದ ಚರ್ಚೆಗೆ ಗ್ರಾಸವಾಗಿದೆ. ಆದರೆ ಬಿಜೆಪಿ ಕ್ಷೇತ್ರದಲ್ಲಿ ದುರ್ಬಲವಾಗಿರುವ ಈ ಸಂದರ್ಭದಲ್ಲಿ ಲಾಡ್ ಬಿಜೆಪಿ ಹೋಗುವುದು ಸಾಧ್ಯವೇ ಇಲ್ಲವೆಂದು ಅವರ ವ್ಯಾವಹಾರಿಕ ರಾಜಕಾರಣ ಬಲ್ಲವರು ಹೇಳುತ್ತಾರೆ. ಸಿದ್ದರಾಮಯ್ಯ ಬೆನ್ನಿಗಿರುವುದರಿಂದ ಲಾಡ್ ಸುಲಭವಾಗಿ ಟಿಕೆಟ್ ತರುತ್ತಾರೆಂದು ಕಾಂಗ್ರೆಸ್‌ನ ಒಂದು ಬಣ ಹೇಳುತ್ತಿದೆ.

ಮತ್ತೊಂದು ಗುಂಪು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ರ ಕೃಪಾಕಟಾಕ್ಷದ ಮಾಜಿ ಎಮ್ಮೆಲ್ಸಿ ನಾಗರಾಜ್ ಛಬ್ಬಿಯೆ ಹುರಿಯಾಳೆಂದು ವಾದಿಸುತ್ತದೆ. ಈ ಬಣದ ಪ್ರಕಾರ ಮರಾಠ ಲಾಡ್‌ಗಿಂತ ಲಿಂಗಾಯತ ಛಬ್ಬಿ ಪ್ರಬಲ ಉಮೇದುವಾರ. ಛಬ್ಬಿ ಕೋವಿಡ್ ಸಂದರ್ಭದ ಸಹಾಯ, ಧಾರ್ಮಿಕ-ಸಾಂಸ್ಕೃತಿ-ರಾಜಕೀಯ ಮತ್ತು ಕ್ರೀಡಾ ಕಾರ್ಯಕ್ರಮಕ್ಕೆಂದು ಈಗಾಗಲೆ ಸಾಕಷ್ಟ್ಟು ಖರ್ಚು ಮಾಡಿ ತಾನೆ ಕ್ಯಾಂಡಿಡೇಟೆಂದು ಬಿಂಬಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಗುಂಪುಗಾರಿಕೆ ಇಲ್ಲದಿದ್ದರೆ ಕಾಂಗ್ರೆಸ್ ಸುಲಭವಾಗಿ ಗೆಲ್ಲುವ ಕ್ಷೇತ್ರ ಕಲಘಟಗಿ-ಅಳ್ನಾವರ ಎಂಬುದು ರಾಜಕೀಯ ವೀಕ್ಷಕರು ಅಭಿಪ್ರಾಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...