ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ನವೆಂಬರ್ ಮೂರನೇ ವಾರದಲ್ಲಿ “ಡಿಜಿಟಲ್ ಡೇಟಾ ಸಂರಕ್ಷಣೆ ಮಸೂದೆ”ಯನ್ನು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕಾಗಿ ಮುಂದಿಟ್ಟಿದೆ. ಮೇಲುನೋಟಕ್ಕೆ, ಐಟಿ ಉದ್ಯಮಿಗಳ ಹಿತ ಕಾಯುವುದಕ್ಕಾಗಿ ಸಿದ್ಧಗೊಂಡಿದೆ ಅನ್ನಿಸುವ ಈ ಕಾಯಿದೆ ಎಲ್ಲಿಂದ ಹೊರಟಿತು ಎಂಬುದನ್ನು ಹಿಂದಿರುಗಿ ನೋಡುವ ಮತ್ತು ಅದರ ಆಧಾರದಲ್ಲಿ ಮುಂದೆ ಅದು ಎಲ್ಲಿಗೆ ತಲುಪಲಿದೆ ಎಂದು ಊಹಿಸಿ ಹೇಳುವ ಪ್ರಯತ್ನ ಇದು.
2017 ಆಗಸ್ಟ್ 24ರಂದು ಭಾರತದ ಸುಪ್ರೀಂ ಕೋರ್ಟಿನ ಒಂಭತ್ತು ಸದಸ್ಯರ ಸಂವಿಧಾನ ಪೀಠವು ಒಂದು ಐತಿಹಾಸಿಕ ತೀರ್ಮಾನ ನೀಡಿತು. ಅದರ ಹಿನ್ನೆಲೆ, ಆಧಾರ್ ಕಾರ್ಡ್ ಯೋಜನೆಯು ಪ್ರಜೆಯ ಖಾಸಗಿತನದಲ್ಲಿ ಸರ್ಕಾರದ ಹಸ್ತಕ್ಷೇಪ ಎಂದು ಮದರಾಸು ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ. ಎಸ್. ಪುಟ್ಟಸ್ವಾಮಿ ಅವರು ಸುಪ್ರೀಂ ಕೋರ್ಟಿಗೆ ದೂರು ನೀಡಿದ್ದಾಗಿತ್ತು. ಈ ಪ್ರಕರಣದಲ್ಲಿ ನೀಡಿದ ಸರ್ವಾನುಮತದ ತೀರ್ಪಿನಲ್ಲಿ, “The right to privacy is protected as an intrinsic part of the right to life and personal liberty under Article 21 and as a part of the freedoms guaranteed by Part III of the Constitution” (ಆರ್ಟಿಕಲ್ 21 ಮತ್ತು ಸಂವಿಧಾನದ ಭಾಗ 3 ಖಾತರಿಪಡಿಸುವ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಭಾಗವಾಗಿಯೇ ಖಾಸಗಿತನದ ಹಕ್ಕಿಗೆ ಕೂಡ ರಕ್ಷಣೆಯಿದೆ) ಎಂದು ಸುಪ್ರೀಂ ಕೋರ್ಟು ಸ್ಪಷ್ಟಪಡಿಸಿತ್ತು. ಜೊತೆಗೇ, Formulation of a regime for data protection is a complex exercise which needs to be undertaken by the State after a careful balancing of the requirements of privacy coupled with other values which the protection of data sub-serves together with the legitimate concerns of the State (ಮಾಹಿತಿ ರಕ್ಷಣೆಗಾಗಿ ಪ್ರಾಧಿಕಾರವನ್ನು ಸ್ಥಾಪಿಸುವುದು ಸಂಕೀರ್ಣವಾದ ಕೆಲಸವಾಗಿದ್ದು ಇದನ್ನು ಪ್ರಭುತ್ವ ಕೈಗೆತ್ತಿಕೊಳ್ಳಬೇಕು; ಈ ಪ್ರಕ್ರಿಯೆಯಲ್ಲಿ ಖಾಸಗಿತನದ ಅಗತ್ಯಗಳ ಜೊತೆಗೆ ಮಾಹಿತಿಯ ಇನ್ನಿತರ ಸಂಗತಿಗಳ ರಕ್ಷಣೆಯ ಸಮತೋಲನ ಸಾಧಿಸುವುದರೊಂದಿಗೆ, ಪ್ರಭುತ್ವದ ನ್ಯಾಯಸಮ್ಮತ ಕಾಳಜಿಗಳನ್ನೂ ಪರಿಗಣನೆಗೆ ತೆಗೆದುಕೊಂಡು ಮಾಡಬೇಕು) ಎಂದು ಹೇಳಿತ್ತು.

ಈ ತೀರ್ಪು ಭಾರತದಲ್ಲಿ ವೈಯಕ್ತಿಕ ಡೇಟಾ ಸಂರಕ್ಷಣೆಯ ಕುರಿತು ಅಧಿಕೃತವಾಗಿ ಚರ್ಚೆ ಆರಂಭಗೊಳ್ಳಲು ಕಾರಣವಾಯಿತು.
ನ್ಯಾ| ಶ್ರೀಕೃಷ್ಣ ಸಮಿತಿ ಸಿದ್ಧಪಡಿಸಿದ ಕರಡು
2018ರ ಜುಲೈ 27ರಂದು ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ನೇತೃತ್ವದ ಪರಿಣತ ಸಮಿತಿಯು ಭಾರತದ ಮೊದಲ ಡೇಟಾ ಸಂರಕ್ಷಣೆ ಮಸೂದೆಯ ಕರಡನ್ನು ಸರ್ಕಾರಕ್ಕೆ ಸಲ್ಲಿಸಿತು. ಆ ಸಮಿತಿಯನ್ನು 2017ರ ಆಗಸ್ಟ್‌ನಲ್ಲಿ ನೇಮಕ ಮಾಡಲಾಗಿತ್ತು. ಅಲ್ಲಿಯತನಕ ಡೇಟಾ ರಕ್ಷಣೆಯೂ ಸೇರಿದಂತೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿ ಇದ್ದ ಏಕೈಕ ಕಾಯಿದೆಯಾದ Information Technology Act, 2000 ಇಂದ ಡೇಟಾ ಸಂರಕ್ಷಣೆಯನ್ನು ಪ್ರತ್ಯೇಕಿಸುವ ಉದ್ದೇಶ ಇದ್ದ ಈ ಸಮಿತಿ, ಆಗಲೇ ಚಾಲ್ತಿಯಲ್ಲಿದ್ದ ಮತ್ತು ಡೇಟಾ ಸಂರಕ್ಷಣೆಗೆ ಸಂಬಂಧಿಸಿದಂತೆ ಗೋಲ್ಡ್ ಸ್ಟಾಂಡರ್ಡ್ ಎಂದು ಈಗಲೂ ಪರಿಗಣಿತವಾಗಿರುವ General Data Protection Regulation (GDPR) ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕಾಯಿದೆಗಳನ್ನು ಪರಿಗಣನೆಗೆ ತೆಗೆದುಕೊಂಡು, ತಮ್ಮ ಕರಡನ್ನು ಸಿದ್ಧಪಡಿಸಿತ್ತು. ವೈಯಕ್ತಿಕ ಡೇಟಾ ಎಂದರೇನು ಎಂಬ ಬಗ್ಗೆ ಬಹುತೇಕ GDPR ವ್ಯಾಖ್ಯಾನವನ್ನೇ ನೀಡಿದ್ದ ಈ ಕಾಯಿದೆ, “Data from which an individual may be identified or identifiable, either directly or indirectly” (ವ್ಯಕ್ತಿಯೊಬ್ಬನನ್ನು ನೇರವಾಗಿ ಅಥವಾ ಪರೋಕ್ಷವಾಗಿ ಗುರುತಿಸುವ ಅಥವಾ ಗುರುತಿಸಬಲ್ಲ ಮಾಹಿತಿ) ಎಂದು ಹೇಳಿತ್ತಲ್ಲದೇ ಆರೋಗ್ಯ, ಆರ್ಥಿಕ ಮತ್ತಿತರ ಡೇಟಾಗಳನ್ನು “ಸೂಕ್ಷ್ಮ ಡೇಟಾ”ಗಳೆಂದು ಪ್ರತ್ಯೇಕಿಸಿತ್ತು. ಈ ಮಸೂದೆಯನ್ನು Personal Data Protection Bill 2018 ಎಂದು ಕರೆಯಲಾಗಿತ್ತು.
ಇದನ್ನೂ ಓದಿ: ಬಿಬಿಎಂಪಿ ಬಳಸಿಕೊಂಡು ಮತದಾರರ ಡೇಟಾ ಕದ್ದ ಬೊಮ್ಮಾಯಿ ಸರ್ಕಾರ: ಕಾಂಗ್ರೆಸ್ ದೂರು
ಜಂಟಿ ಸಂಸದೀಯ ಸಮಿತಿಯ ಶಿಫಾರಸುಗಳು
2019ರ ಡಿಸೆಂಬರ್ 11ರಂದು ಈ ಕರಡು ಮಸೂದೆಯನ್ನು ಲೋಕಸಭೆಯಲ್ಲಿ, ಅಂದಿನ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮಂಡಿಸಿದ ಬಳಿಕ, ಅದನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಯಿತು. ಸಂಸದ ಪಿ ಪಿ ಚೌಧರಿ ನೇತೃತ್ವದ ಈ ಸಮಿತಿ 78 ಸಭೆಗಳನ್ನು ನಡೆಸಿದ ಬಳಿಕ, 2021ರ ಡಿಸೆಂಬರ್ 8ರಂದು ತನ್ನ ವರದಿಯನ್ನು ಸಂಸತ್ತಿನ ಪಟಲದಲ್ಲಿ ಮಂಡಿಸಿತು. ಈ ಸಮಿತಿಯು ವೈಯಕ್ತಿಕ ಡೇಟಾಗಳ ಜೊತೆ ವೈಯಕ್ತಿಕವಲ್ಲದ ಸ್ವರೂಪದ ಡೇಟಾಗಳನ್ನೂ ಇದೇ ಕಾಯಿದೆಯ ಮಡಿಲಿಗೆ ಸೇರಿಸುವ ಶಿಫಾರಸ್ಸು ಮಾಡಿ, “ವೈಯಕ್ತಿಕ ಡೇಟಾ” ಎಂದಿದ್ದನ್ನು ಕೇವಲ “ಡೇಟಾ” ಎಂದು ಬದಲಾಯಿಸಿತಲ್ಲದೇ, ಕಾಯಿದೆಯ ಮೂಲ ಉದ್ದೇಶದ ಕಲಸುಮೇಲೋಗರಕ್ಕೆ ನಾಂದಿ ಹಾಡಿತು. ಅದಕ್ಕೆ ಆ ಸಮಿತಿ ಕಾರಣವನ್ನು ಹೀಗೆ ಕೊಡುತ್ತದೆ: The Bill is dealing with various kinds of data at various levels of security and it is impossible to distinguish between personal and non-personal data, when mass data is collected and transported. So, the committee opines that if privacy is the concern, non-personal data has also to be dealt with the Bill.

ಇದರ ಜೊತೆಗೆ, ಹಾರ್ಡ್ವೇರ್ ಉತ್ಪಾದಕರನ್ನೂ ಈ ಕಾಯಿದೆಯ ವ್ಯಾಪ್ತಿಗೆ ತಂದಿತು ಮಾತ್ರವಲ್ಲದೇ ವಿದೇಶಗಳಲ್ಲಿ ಈಗಾಗಲೇ ಇರುವ ದೇಶಕ್ಕೆ ಸಂಬಂಧಿಸಿದ ಡೇಟಾಗಳ ಒಂದು ಪ್ರತಿ ದೇಶದ ಒಳಗೂ ಇರಿಸಿಕೊಳ್ಳುವ “ಡೇಟಾ ಲೋಕಲೈಸೇಷನ್” ಸಿದ್ಧಾಂತವನ್ನೂ ಸೇರಿಸಿತು. ಇಂತಹ ಹಲವು ಹಸ್ತಕ್ಷೇಪಗಳ ಫಲವಾಗಿ, ಮಸೂದೆ ವೈಯಕ್ತಿಕ ಡೇಟಾ ಸುರಕ್ಷೆ ಮಾಡುವ ಬದಲು ದೇಶದ ಎಲ್ಲ ಡೇಟಾಗಳನ್ನೂ ರಕ್ಷಿಸುವ ಮಹಾಭಾರ ಹೊತ್ತುಕೊಂಡು, Data Protection Act 2021 ಎಂದು ಬದಲಾಯಿತು. 2021 ನವೆಂಬರ್‌ನಲ್ಲಿ ಸಂಸತ್ತು ಜಂಟಿ ಸಂಸದೀಯ ಸಮಿತಿಯ ಈ ವರದಿಯನ್ನು ಅಂಗೀಕರಿಸಿತು.
ಹಠಾತ್ ಹಿಂತೆಗೆದುಕೊಂಡರು!
ಸಂಸತ್ತಿನಲ್ಲಿ ಬಹುಮತ ಹೊಂದಿರುವ ಸರ್ಕಾರ, ಈ ಮಸೂದೆಯನ್ನು ಸುಲಭವಾಗಿ ಅಂಗೀಕರಿಸಿ ಕಾಯಿದೆಯಾಗಿಸಬಹುದಿತ್ತು. ಆದರೆ, ಈ ವರ್ಷ (2022) ಆಗಸ್ಟ್ ಮೂರರಂದು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು, ಡಿಜಿಟಲ್ ಆರ್ಥಿಕತೆಗೆ ಸಮಗ್ರವಾದ ಕಾನೂನಿನ ಚೌಕಟ್ಟೊಂದನ್ನು ರೂಪಿಸುವುದಕ್ಕಾಗಿ ಸರ್ಕಾರ ಈ ಮಸೂದೆಯನ್ನು ಪುನಃ ರಚಿಸಲಿದೆ ಎಂದು ಹೇಳಿ, ಸದನಕ್ಕೆ ಮಂಡನೆಯಾದ ಮಸೂದೆಯನ್ನು ಹಿಂಪಡೆದರು. ಅದಕ್ಕೆ, ಜಂಟಿ ಸಂಸದೀಯ ಸಮಿತಿಯು 81 ತಿದ್ದುಪಡಿಗಳನ್ನು ಮತ್ತು 12 ಶಿಫಾರಸುಗಳನ್ನು ಮಾಡಿರುವುದರಿಂದ, ಸಮಗ್ರವಾಗಿ ಮರುಪರಿಶೀಲನೆ ಅಗತ್ಯ ಎಂದು ಅವರು ಹೇಳಿದ್ದರು. ಹೊಸ ಮಸೂದೆಯಲ್ಲಿ ಡಿಜಿಟಲ್ ಖಾಸಗಿತನದ ಕಾನೂನುಗಳು ಸೇರಿದಂತೆ ಜಾಗತಿಕ ಗುಣಮಟ್ಟದ ಕಾನೂನುಗಳನ್ನು ಸೇರಿಸಿ, ಸಮಕಾಲೀನ ಹಾಗೂ ಭವಿಷ್ಯದ ಸವಾಲುಗಳಿಗೆ ಪರ್ಯಾಪ್ತವೆನ್ನಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭಾರತದ ಡೆಕೇಡ್ (ತಂತ್ರಜ್ಞಾನದ ದಶಕ) ಕಾಣ್ಕೆಗೆ ಅನುಗುಣವಾದಂತಹ ವಿಚಾರಗಳು ಅದರಲ್ಲಿರಲಿವೆ ಎಂದು ಇಲಾಖೆಯ ರಾಜ್ಯ ಸಚಿವ, ಉದ್ಯಮಿ ರಾಜೀವ್ ಚಂದ್ರಶೇಖರ್ ಹೇಳಿಕೆ ನೀಡಿದ್ದರು.
ಹೊಸ ಕಾಯಿದೆ
ಇದಾದಬಳಿಕ ಸರ್ಕಾರ ಈಗ, ನವೆಂಬರ್ ಮೂರನೇ ವಾರದಲ್ಲಿ ಮಸೂದೆಯನ್ನು ಹೊಸದಾಗಿ ರಚಿಸಿ, ಸಾರ್ವಜನಿಕ ಅಭಿಪ್ರಾಯಕ್ಕಾಗಿ ತೆರೆದಿರಿಸಿದೆ. ಡಿಸೆಂಬರ್ 17ರ ತನಕ ಸಾರ್ವಜನಿಕರು ಈ ಮಸೂದೆಗೆ ಸಲಹೆಗಳನ್ನು ನೀಡಬಹುದು ಎಂದಿದೆ. ಗಮನಿಸಬೇಕಾದ ಸಂಗತಿಯೆಂದರೆ, ವೈಯಕ್ತಿಕ ಡೇಟಾಗಳ ಖಾಸಗಿತನಕ್ಕೆಂದು ಸುಪ್ರೀಂ ಕೋರ್ಟಿನ ಸೂಚನೆಯ ಮೇರೆಗೆ ಹೊರಟ ಈ ಮಸೂದೆ, ಎಲ್ಲ ಡೇಟಾಗಳ ಮಸೂದೆ ಎಂಬ ಕಲಸುಮೇಲೋಗರವಾಗಿ, ಈಗ ಕೊನೆಯಲ್ಲಿ Digital Personal Data Protection Bill 2022 ಆಗಿ ಬದಲಾಗಿದೆ. ಇಲ್ಲಿ “ಪರ್ಸನಲ್ ಎಂಬುದಕ್ಕೆ ಅರ್ಥವ್ಯಾಖ್ಯೆಯನ್ನೇ ಬದಲಾಯಿಸಿ, ವ್ಯಕ್ತಿ, ಕಂಪನಿ, ಸರ್ಕಾರ ಎಲ್ಲವನ್ನೂ ಅಲ್ಲಿ ತುರುಕಲಾಗಿದೆ ಮಾತ್ರವಲ್ಲದೇ, ಡೇಟಾ ಎಂಬುದಕ್ಕೆ ತೀರಾ ಅಸ್ಪಷ್ಟವಾದ ವ್ಯಾಖ್ಯೆಯನ್ನು ನೀಡಲಾಗಿದೆ. ಸರ್ಕಾರ ಡೇಟಾಕ್ಕೆ ನೀಡಿರುವ ವ್ಯಾಖ್ಯೆ ಹೀಗಿದೆ: “Representation of information, facts, concepts, opinions or instructions in a manner for communication, interpretation or processing by humans or by automated means.”
ಈ ವ್ಯಾಖ್ಯೆಯಲ್ಲಿ ಸುಪ್ರೀಂಕೋರ್ಟು ಮೂಲದಲ್ಲಿ ಸೂಚಿಸಿದ್ದ, ವ್ಯಕ್ತಿಯ ಖಾಸಗಿತನಕ್ಕೆ ಸಂಬಂಧಿಸಿದ ಡೇಟಾಗಳ ಸಂರಕ್ಷಣೆಯ ಸುಳಿವೇ ಇಲ್ಲ!
ಇದನ್ನೂ ಓದಿ: 100% FDI ಗೆ ಹಾದಿ ಸುಗಮಗೊಳಿಸಲಿರುವ ಹೊಸ ಟೆಲಿಕಾಂ ಮಸೂದೆ; ಮಾರ್ಗದರ್ಶಕ ಮಂಡಳಿ ಸೇರಲಿರುವ TRAI
ಡೇಟಾ ಇನ್ನೊಬ್ಬರ ಜೊತೆ ಹಂಚಿಕೊಳ್ಳಲು “ಒಪ್ಪಿಗೆ”ಯನ್ನು, Consent means any freely given, specific, informed and unambiguous indication of Data Principal’s wishes by which the Data principal, by clear affirmative action, signifies agreement to the processing of his/her personal data for specific purposes ಎಂದು ವ್ಯಾಖ್ಯಾನಿಸಿರುವ ಮಸೂದೆ, ಅದರ ಜೊತೆ ಡೀಮ್ಡ್ ಒಪ್ಪಿಗೆ ಎಂಬ ಹೊಸ ವಿಭಾಗವನ್ನು ಸೇರಿಸುವ ಮೂಲಕ, ವಾಣಿಜ್ಯ ಉದ್ದೇಶಗಳನ್ನು ಹೊಂದಿರುವವರಿಗೆ “Ease of doing business”ನ ಹೊಸ ಮಜಲನ್ನು ತೆರೆದುಕೊಟ್ಟಿದೆ.
ನ್ಯಾ| ಶ್ರೀಕೃಷ್ಣ ಸಮಿತಿಯು ಡೇಟಾ ಪ್ರೊಫೈಲಿಂಗ್ ಅಪಾಯಗಳನ್ನು ಪರಿಗಣಿಸಿತ್ತು. ಆದರೆ, ಹಾಲೀ ಬಂದಿರುವ ಕಾಯಿದೆಯಲ್ಲಿ ಅದನ್ನು ಕೇವಲ ಮಕ್ಕಳಿಗೆ ಸೀಮಿತ ಮಾಡಲಾಗಿದೆ. ಇದರಿಂದಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿ, ತಮ್ಮ ವ್ಯಾವಹಾರಿಕ ಲಾಭಕ್ಕಾಗಿ ಒಳನೋಟಗಳನ್ನು ಪಡೆಯುವ, ತಮ್ಮ ಗ್ರಾಹಕರನ್ನು ಬೆಂಬತ್ತಿ ಅವರ ಮೇಲೆ ಪ್ರಭಾವ ಬೀರುವ, ಅವರನ್ನು ಖರೀದಿಯಂತಹ ಆರ್ಥಿಕ ನಿರ್ಧಾರಗಳಿಗೆ ಸೆಳೆಯುವಹ॒ಲವು ಅನೈತಿಕ ಚಟುವಟಿಕೆಗಳಿಗೆ ಈ ಮಸೂದೆ ಹಾದಿ ತೆರೆದು ಕೊಡಲಿದೆ. ನ್ಯಾ| ಶ್ರೀಕೃಷ್ಣ ಸಮಿತಿ ಹೇಳಿದ್ದ ಸೂಕ್ಷ್ಮ ಸ್ವರೂಪದ ಡೇಟಾಗಳು ಇಲ್ಲಿ ಜಾಗವನ್ನೇ ಪಡೆದಿಲ್ಲ!
ಹಾಗಾಗಿ, ಒಟ್ಟಿನಲ್ಲಿ ದೇಶದ ಪ್ರಜೆಗಳ ಖಾಸಗಿತನದ ಹಿತಾಸಕ್ತಿಗಳನ್ನು ರಕ್ಷಿಸಲೆಂದು ಸುಪ್ರೀಂ ಕೋರ್ಟಿನ ಸಲಹೆಯ ಮೇರೆಗೆ ಶುರುವಾಗಿದ್ದ ಈ ಪ್ರಕ್ರಿಯೆ, ಈಗ ಬೃಹತ್ ಕಾರ್ಪೋರೆಟ್ ಕಂಪನಿಗಳ, ಐಟಿ ಕಂಪನಿಗಳ ಪಾದಸೇವೆಗೆ ಸನ್ನದ್ಧವಾಗಿ ನಿಂತ ಸೇವಕನ ರೂಪ ತಳೆದಿದೆ. ಕಂಪನಿಗಳ ನಿರ್ಲಕ್ಷ್ಯದಿಂದಾಗಿ ಡೇಟಾ ಬ್ರೀಚ್ ಸಂಭವಿಸಿದರೆ, ಕಂಪನಿಗಳಿಗೆ 250ಕೋಟಿ ರೂ.ಗಳ ತನಕ ದಂಡ ವಿಧಿಸುವುದಾಗಿ ಮಸೂದೆ ಹೇಳುತ್ತದೆಯಾದರೂ, ಕಂಪನಿಯ ಸಾಮರ್ಥ್ಯ ನೋಡಿ ದಂಡದ ಪ್ರಮಾಣ ನಿರ್ಧರಿಸುವಂತೆ ಕಿವಿಮಾತು ಹೇಳುತ್ತದೆ. ಆದರೆ, ಈ ಬಗ್ಗೆ ನೀಡಿದ ದೂರು ಸಾಬೀತಾಗದಿದ್ದರೆ, ದೂರುದಾರರಿಗೆ 10,000 ರೂ.ಗಳ ತನಕ ದಂಡ ವಿಧಿಸಲು ಮತ್ತು ದಾವೆಯ ಖರ್ಚು ನೀಡಲು ಹೇಳುತ್ತದೆ. ಇಂತಹ ಸನ್ನಿವೇಶದಲ್ಲಿ ಕಾರ್ಪೋರೆಟ್ ಕಂಪನಿಗಳ ಎದುರು ದಾವೆ ಹೂಡುವ ಬಡಪಾಯಿ ದೂರುದಾರರ ಅವಸ್ಥೆಯನ್ನು ಯಾರಾದರೂ ಸುಲಭವಾಗಿ ಊಹಿಸಿಕೊಳ್ಳಬಹುದು.

ಸರ್ಕಾರದ ಮೂಲಕ ನೇಮಕಗೊಂಡ “ಸ್ವತಂತ್ರ” ಡೇಟಾ ಸುರಕ್ಷಾ ಮಂಡಳಿಯೇ ಈ ದಾವೆಗಳಿಗೆ ನ್ಯಾಯಸ್ಥಾನವಾಗಿದ್ದು, ಅಲ್ಲಿ ನ್ಯಾಯ ಸಿಗದಿದ್ದರೆ ಹೈಕೋರ್ಟಿಗೇ ಹೋಗಬೇಕಾಗುತ್ತದೆ. ಈ ಕುರಿತ ದಾವೆಗಳನ್ನು ಸಣ್ಣ ನ್ಯಾಯಾಲಯದಲ್ಲಿ ಅಥವಾ ನೇರವಾಗಿ ನ್ಯಾಯಾಲಯದಲ್ಲಿ ಹೂಡುವಂತಿಲ್ಲ.
ಎಲ್ಲಕ್ಕಿಂತ ದೊಡ್ಡ ವಿರೋಧಾಭಾಸ ಎಂದರೆ, ದೇಶದಲ್ಲಿ ಅತಿದೊಡ್ಡ ಡೇಟಾ ಫಿಡೂಷರಿ (ಡೇಟಾ ಹೊಂದಿರುವ ಸಂಸ್ಥೆ) ಆಗಿರುವ ಸರ್ಕಾರ, ದೇಶದ ಎಲ್ಲ ಪ್ರಜೆಗಳ ಡೇಟಾವನ್ನು ತಾನು ಹೊಂದಿದ್ದರೂ, ಇಲ್ಲಿ ಮಸೂದೆಯ ವ್ಯಾಖ್ಯಾನಾನುಸಾರ, ತನ್ನ ಸ್ವಂತ ಡೇಟಾ ಸಂರಕ್ಷಣೆ ಕೋರುವ “ವ್ಯಕ್ತಿ” ಆಗಿದೆ! ಸರ್ಕಾರದ ಕತ್ತಿನ ಕೆಳಗೇ ಎಗ್ಗಿಲ್ಲದೆ ನಡೆದಿರುವ ಡೇಟಾ ಕಳ್ಳತನಗಳಿಗೆ ಯಾವುದೇ ನಿಯಂತ್ರಣವನ್ನು ಈ ಮಸೂದೆ ವಿಧಿಸುವ ಸಾಧ್ಯತೆಗಳು ಕಾಣಿಸುತ್ತಿಲ್ಲ.
ಈ ಕಾಯಿದೆ ಯಾವುದಕ್ಕೆಲ್ಲ ಅನ್ವಯ ಆಗುವುದಿಲ್ಲ ಎಂದು ವಿವರಿಸುವಲ್ಲಿ, ಕೇಂದ್ರ ಸರ್ಕಾರವು ಪ್ರಕಟಣೆಗಳ ಮೂಲಕ “ಸಂಶೋಧನೆಗಳಿಗೆ” ಈ ಕಾಯಿದೆಯಿಂದ ವಿನಾಯಿತಿ ನೀಡಬಹುದು ಎಂದಿದೆ. ಆದರೆ, ಸಂಶೋಧನೆಯ ವ್ಯಾಖ್ಯಾನ ಏನೆಂದು ಹೇಳಿಲ್ಲ. ಇಂದು ಮಾರುಕಟ್ಟೆ ಸಂಶೋಧನೆಯ ಹೆಸರಲ್ಲಿ ನಡೆದಿರುವ ಅಧ್ವಾನಗಳನ್ನು ಗಮನಿಸಿದರೆ, ಇವೆಲ್ಲ ಕಾನೂನುಬದ್ಧವಾಗಿಯೇ ಎಲ್ಲಿಗೆ ತಲುಪಲಿವೆಯೋ ಗೊತ್ತಿಲ್ಲ.
ನಷ್ಟ ಯಾರಿಗೆ?
ಸಂಸತ್ತಿನಲ್ಲಿ ಬಹುಮತ ಹೊಂದಿರುವ ಸರ್ಕಾರವು ಈ ಎಲ್ಲ ಅಧ್ವಾನಗಳ ಸಹಿತವಾಗಿಯೇ ಈ ಕಾನೂನನ್ನು ಜಾರಿಗೆ ತರಬಹುದು. ಈ ಕಾನೂನು ಪರಿಣಾಮ ಬೀರಬೇಕಾದುದು ಐಟಿ ಕಂಪನಿಗಳ ಮೇಲೆ. ಅವರು ಅಮೆರಿಕ-ಯುರೋಪಿನಂತಹ ದೇಶಗಳ ಗ್ರಾಹಕರಿಗೆ ಸೇವೆ ನೀಡುವ ಕಂಪನಿಗಳು. ಅಲ್ಲಿ ಸೇವೆ ನೀಡಬೇಕಿದ್ದರೆ, GDPR ಕಂಪ್ಲಯಂಟ್ ಆಗಿರುವುದು ಅನಿವಾರ್ಯ. ಹಾಗಾಗಿ, ದೊಡ್ಡ ಕಂಪನಿಗಳ ಸಾಗರೋತ್ತರ ವ್ಯವಹಾರಗಳ ಮೇಲೆ ಈ ಕಾಯಿದೆಯ ಪರಿಣಾಮ ಹೆಚ್ಚಿರುವುದಿಲ್ಲ. ಆದರೆ, ದೊಡ್ಡ ಜನಸಂಖ್ಯೆ ಇರುವ (ಅರ್ಥಾತ್ ಮಾರುಕಟ್ಟೆ ಸಂಬಂಧಿ ಸಂಶೋಧನೆಗಳಿಗೆ ಬೃಹತ್ ಪ್ರಯೋಗಪಶುಗಳು ಇರುವ) ಭಾರತದ ಒಳಗೆ, ಭಾರತದ ಕಾನೂನನ್ನೇ ಪಾಲಿಸಿದರೆ ಸಾಕಾಗುತ್ತದೆ! ಇಲ್ಲಿಂದ ಸಂಗ್ರಹಿತ ಡೇಟಾ ದೇಶದಿಂದ ಹೊರಹೋಗುವುದಕ್ಕೂ ಹಾದಿಯನ್ನು ಈ ಕಾನೂನು ಸಲೀಸು ಮಾಡಿಕೊಟ್ಟಿದೆ. ಕಾಗದಪತ್ರಗಳಲ್ಲಿ ಎಲ್ಲವೂ ಸಮರ್ಪಕವಾಗಿದೆ, ನಿಯಮಬದ್ಧವಾಗಿದೆ ಎಂದು ತೋರಿಸಿಕೊಂಡುಬಿಟ್ಟರೆ, ಡೇಟಾ ದೇಶದಿಂದ ಹೊರಗೆ ಹೋದ ಬಳಿಕ, ಆ ದೇಶದ ನಿಯಮಗಳ ಪಾಲನೆ ಆಗುತ್ತದೆ. ಹಾಗಾಗಿ, ಇಲ್ಲಿ ನಷ್ಟವೇನಾದರೂ ಆಗುವುದಿದ್ದರೆ, ಅದು ಬಡಪಾಯಿ ಪ್ರಜೆಗೆ ಮಾತ್ರ!
ಇದನ್ನೂ ಓದಿ: ಬೆಂಗಳೂರು ಮತದಾರರ ಮಾಹಿತಿ ಕಳ್ಳತನದಲ್ಲಿ ಬಿಜೆಪಿಯ ನೇರ ಕೈವಾಡ; ಏಜೆಂಟರಿಗೆ ಪಕ್ಷದ ಕಚೇರಿಯಲ್ಲೆ ತರಬೇತಿ!
ಸನ್ನಿವೇಶವನ್ನು ಸರಳವಾಗಿ ವಿವರಿಸಬೇಕೆಂದರೆ, ಇವತ್ತು ಯಾವುದಾದರೂ ಸೋಷಿಯಲ್ ಮೀಡಿಯಾವನ್ನೋ, ಗೂಗಲ್ ಸರ್ಚ್ ಎಂಜಿನನ್ನೋ, ಚಾಟ್‌ಬಾಟ್‌ಅನ್ನು ಬಳಸಿದರೆ, ಆ ಬಳಿಕ ನಿಮಗೆ ಕಾಣಸಿಗುವ ನಿಮ್ಮ ಹುಡುಕಾಟದ ಸಂಗತಿಗೆ ಸಂಬಂಧಿಸಿದ ಜಾಹೀರಾತುಗಳನ್ನು ನೀವು ಗಮನಿಸಿರುತ್ತೀರಿ. ಅವನ್ನೆಲ್ಲ ನಿಮಗೆ ತೋರಿಸಿದರೆ ತೊಂದರೆ ಇಲ್ಲ ಎಂದು ನೀವು ಯಾವತ್ತಾದರೂ ಒಪ್ಪಿಗೆ ಕೊಟ್ಟದ್ದು ನಿಮಗೆ ನೆನಪಿದೆಯೆ? ಭಾರತದಲ್ಲಿ ನಡೆದಿರುವ ಈ ಮಾರ್ಕೆಟಿಂಗ್ ಆಟ ಯುರೋಪಿನಲ್ಲಿ ಅಥವಾ ಡೇಟಾ ಸುರಕ್ಷೆ ಕಾಯಿದೆ ಬಿಗಿಯಾಗಿರುವ ಯಾವುದೇ ದೇಶದಲ್ಲಿ ಇಷ್ಟು ಸಲೀಸಾಗಿ ನಡೆಯುವುದಿಲ್ಲ. ಆದರೆ ಇನ್ನು ಮುಂದೆ, ಈ ಆಟ ದೇಶದೊಳಗೆ ಬಹಳ ಸಲೀಸಾಗಿ, ಕಾನೂನುಬದ್ಧವಾಗಿಯೇ ನಡೆಯಲಿದೆ. ಇಷ್ಟು ಅರ್ಥ ಮಾಡಿಕೊಂಡರೆ, ಈ Digital Personal Data Protection Bill 2022 ಪೂರ್ಣ ಅರ್ಥ ಆದಂತೆ!

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ, ದುಪ್ಪಟ್ಟು, ನಮ್ದೇಕತೆ ಅವರ ಕೆಲವು ಪ್ರಕಟಿತ ಪುಸ್ತಕಗಳು.


