ಚುನಾವಣಾ ಪೂರ್ವದ ಪ್ರಣಾಳಿಕೆಯಲ್ಲಿ ನೀಡಿದ ಬೇಡಿಕೆಯನ್ನು ಕಾಂಗ್ರೆಸ್ ಈಡೇರಿಸಿದ್ದು, ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಕ್ಯಾಬಿನೇಟ್‌ನಲ್ಲಿಯೇ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಕ್ರಮ ಜರುಗಿಸಿದೆ.
‘ವೋಟ್ ಫಾರ್ ಓಪಿಎಸ್’ (ಒಪಿಎಸ್ ಜಾರಿಗೊಳಿಸಿದವರಿಗೆ ವೋಟ್) ಎಂದು ಅಭಿಯಾನ ಮಾಡಿದ್ದ ಸರ್ಕಾರಿ ನೌಕರರು, ‘ಎನ್‌ಪಿಎಸ್’ (ನೂತನ ಪಿಂಚಣಿ ಯೋಜನೆ) ರದ್ದುಗೊಳಿಸುವಂತೆ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಆದರೆ ಸರ್ಕಾರ ಯಾವುದೇ ಕ್ರಮ ಜರುಗಿಸದ ಕಾರಣ ದೊಡ್ಡ ಮಟ್ಟದಲ್ಲಿ ನೌಕರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಅದರ ಗೆಲುವಿಗೂ ಕಾರಣವಾಗಿದ್ದರು.
ಕರ್ನಾಟಕದಲ್ಲಿಯೂ ‘ಓಟ್ ಫಾರ್ ಒಪಿಎಸ್’ ಅಭಿಯಾನವನ್ನು ಕೈಗೊಂಡಿರುವ ಸರ್ಕಾರಿ ನೌಕರರು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾರಿಯಾಗುತ್ತಿರುವ ಒಪಿಎಸ್‌ನತ್ತ ಬೊಟ್ಟು ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರವೂ ಇದೇ ರೀತಿಯ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿರಿ: NPS ಅಥವಾ OPS? ನವ ಉದಾರವಾದಿ ’ಹೊಸ ಪಿಂಚಣಿ ಯೋಜನೆ’ಯಲ್ಲಿ ನಿಜಕ್ಕೂ ಲಾಭವಿದೆಯೇ?
ಒಪಿಎಸ್ ಜಾರಿಗೊಳಿಸುವ ನಿರ್ಧಾರ ಪ್ರಕಟಿಸಿದ ಬಳಿಕ ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮಾತನಾಡಿ, “ಈ ವಿಷಯಕ್ಕೆ ಸಂಬಂಧಿಸಿದಂತೆ ಆಳವಾಗಿ ಅಧ್ಯಯನ ಮಾಡಲಾಗಿದೆ. ಹಣಕಾಸು ಇಲಾಖೆಗಳ ಅಧಿಕಾರಿಗಳು ಒಪಿಎಸ್ ಮರುಸ್ಥಾಪನೆಗೆ ಸಂಬಂಧಿಸಿದಂತೆ ಹಣವನ್ನು ಎತ್ತಿಟ್ಟಿದ್ದಾರೆ. ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗಿದೆ. ಪ್ರಸ್ತುತ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿಯಲ್ಲಿ ಇರುವ ಎಲ್ಲಾ ನೌಕರರು ಒಪಿಎಸ್ ವ್ಯಾಪ್ತಿಗೆ ಒಳಪಡುತ್ತಾರೆ. ಉದ್ಯೋಗಿಗಳೊಂದಿಗೆ ಸಮಾಲೋಚಿಸಿ ಕ್ರಮಗಳನ್ನು ರೂಪಿಸಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
“ನಾವು ಹಳೆಯ ಪಿಂಚಣಿ ಯೋಜನೆಯನ್ನು ವೋಟ್‌ಗಾಗಿ ಮರುಸ್ಥಾಪಿಸುತ್ತಿಲ್ಲ. ಸಾಮಾಜಿಕ ಭದ್ರತೆಯನ್ನು ನೀಡಲು ಮತ್ತು ಹಿಮಾಚಲದ ಅಭಿವೃದ್ಧಿಯ ಇತಿಹಾಸವನ್ನು ಬರೆದ ಉದ್ಯೋಗಿಗಳ ಆತ್ಮಗೌರವವನ್ನು ಕಾಪಾಡಲು ಈ ಕ್ರಮ ಜರುಗಿಸಿದ್ದೇವೆ” ಎಂದು ಹಿಮಾಚಲ ಪ್ರದೇಶ ಸಚಿವಾಲಯದಲ್ಲಿ ನೌಕರರನ್ನು ಉದ್ದೇಶಿಸಿ ಮುಖ್ಯಮಂತ್ರಿ ಸುಖು ಮಾತನಾಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಒಪಿಎಸ್ ಪ್ರಮುಖ ಚುನಾವಣಾ ವಿಷಯವಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಒಪಿಎಸ್ ಮರುಸ್ಥಾಪಿಸುವುದಾಗಿ ಭರವಸೆ ನೀಡಲಾಗಿತ್ತು.
ಹಿಮಾಚಲ ಪ್ರದೇಶ ಸರ್ಕಾರ ಮಹತ್ತರವಾದ ನಿರ್ಧಾರವನ್ನು ಕೈಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ದಯಾನಂದ್ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿದರು. “ಬೇರೆ ಬೇರೆ ರಾಜ್ಯಗಳಲ್ಲಿ ಒಪಿಎಸ್ ಮರುಸ್ಥಾಪಿಸುತ್ತಿರುವುದರಿಂದ ನಮ್ಮ ಹೋರಾಟಕ್ಕೆ ಹೆಚ್ಚಿನ ಬಲ ಬಂದಿದೆ. ಇಲ್ಲಿನ ಸರ್ಕಾರಕ್ಕೆ ನಿರಂತರ ಆಗ್ರಹ ಮಾಡಲಾಗುತ್ತಿದೆ. ಮುಖ್ಯಮಂತ್ರಿಯವರೊಂದಿಗೆ ಮಾತನಾಡಲು ನಿಯೋಗವನ್ನು ಕರೆಸಿಕೊಳ್ಳಲಾಗುತ್ತದೆ ಎಂದು ಸಚಿವ ಸುಧಾಕರ್ ಹೇಳಿದ್ದರು. ಆದರೆ ಈವರೆಗೂ ಮಾತುಕತೆಯ ಪ್ರಕ್ರಿಯೆ ಆರಂಭವಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಯಾವುದೇ ಪಕ್ಷದ ಪರವಾಗಿ ನಾವು ನಿಂತಿಲ್ಲ. ಒಪಿಎಸ್ ಜಾರಿಗೊಳಿಸಿದವರಿಗೆ ನಮ್ಮ ಬೆಂಬಲ ಎಂಬುದು ನಮ್ಮ ಏಕೈಕ ಅಜೆಂಡಾವಾಗಿದೆ. ಸರ್ಕಾರಕ್ಕೆ ಇನ್ನೂ ಸಮಯಾವಕಾಶವಿದೆ. ಸರ್ಕಾರ ಯಾವುದೇ ಪ್ರತಿಕ್ರಿಯೆಯನ್ನು ನೀಡದಿದ್ದರೆ, ನಮ್ಮ ಬೇಡಿಕೆಗೆ ಸ್ಪಂದಿಸುವ ಯಾವುದೇ ಪಕ್ಷಕ್ಕಾದರೂ ನಾವು ಮತ ಚಲಾಯಿಸುತ್ತೇವೆ” ಎಂದು ಪುನರುಚ್ಚರಿಸಿದರು.
ಇದನ್ನೂ ಓದಿರಿ: ಏನಿದು ಎನ್‌ಪಿಎಸ್, ಒಪಿಎಸ್? ಲಕ್ಷಾಂತರ ನೌಕರರ ಆತಂಕವೇನು?
“ಬಿಜೆಪಿ ನೇತೃತ್ವದ ಸರ್ಕಾರ ಕೂಡ ನೌಕರರ ಪರ ಕಾಳಜಿಯನ್ನು ಹೊಂದಿದೆ ಎಂದು ನಾವು ಭಾವಿಸಿದ್ದೇವೆ. ಮಾನವೀಯ ನೆಲೆಗಟ್ಟಿನಲ್ಲಿ ನಮ್ಮ ಆಗ್ರಹವನ್ನು ಪರಿಗಣಿಸಬೇಕು. ಬಜೆಟ್ ಅಧಿವೇಶನದಲ್ಲಿ ಸರ್ಕಾರ ಒಂದು ನಿರ್ಧಾರಕ್ಕೆ ಬರುತ್ತದೆ ಎಂಬ ನಂಬಿಕೆ ಇದೆ. ಅದನ್ನು ಹುಸಿಗೊಳಿಸಿದರೆ ಪರಿಣಾಮ ಎದುರಿಸುತ್ತದೆ” ಎಂದು ಎಚ್ಚರಿಸಿದರು.
“ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿದ್ದ ಒಪಿಎಸ್ ಜಾರಿಗಾಗಿ ಹೋರಾಟ ಈಗ ತಾಲ್ಲೂಕು ಕೇಂದ್ರಗಳಿಗೆ ವರ್ಗಾವಣೆಗೊಂಡಿದೆ. ತಹಸೀಲ್ದಾರ್, ಡಿಸಿ ಕಚೇರಿಗಳ ಎದುರಿಗೆ ಹೋರಾಟ ಮಾಡುತ್ತಿದ್ದೇವೆ, ಮನವಿಗಳನ್ನು ಸಲ್ಲಿಸುತ್ತಿದ್ದೇವೆ. ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷಕ್ಕೂ ಮನವಿಯನ್ನು ಸಲ್ಲಿಸಿ, ತಮ್ಮ ಪ್ರಣಾಳಿಕೆಯಲ್ಲಿ ಒಪಿಎಸ್ ಜಾರಿಯ ಭರವಸೆ ನೀಡಬೇಕೆಂದು ಕೋರುತ್ತಿದ್ದೇವೆ. ಬಜೆಟ್ ಅಧಿವೇಶನದಲ್ಲಿ ಒಪಿಎಸ್ ಹೋರಾಟವನ್ನು ಪರಿಗಣಿಸದಿದ್ದರೆ ನಮ್ಮ ಹೋರಾಟ ತಾಲ್ಲೂಕು ಕೇಂದ್ರದಿಂದ ರಾಜ್ಯ ಮಟ್ಟಕ್ಕೆ ಮತ್ತೆ ವಿಸ್ತರಣೆಯಾಗಲಿದೆ” ಎಂದು ಮಾಹಿತಿ ನೀಡಿದರು.


