HomeಮುಖಪುಟNPS ಅಥವಾ OPS? ನವ ಉದಾರವಾದಿ ’ಹೊಸ ಪಿಂಚಣಿ ಯೋಜನೆ’ಯಲ್ಲಿ ನಿಜಕ್ಕೂ ಲಾಭವಿದೆಯೇ?

NPS ಅಥವಾ OPS? ನವ ಉದಾರವಾದಿ ’ಹೊಸ ಪಿಂಚಣಿ ಯೋಜನೆ’ಯಲ್ಲಿ ನಿಜಕ್ಕೂ ಲಾಭವಿದೆಯೇ?

- Advertisement -
- Advertisement -

ಒಬ್ರು ಆರ್ಮಿ ಆಫೀಸರ್ ಹದಿನೈದು ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿ ರಿಟೈರಾದಾಗ ಅವರಿಗಿದ್ದ ಮೂಲವೇತನ ರೂ.34,300/-. ಈಗಿರೋ NPS (New Pension Scheme) ಪ್ರಕಾರ ಅವರಿಗೆ ಬರ್ತಿರೋ ಪೆನ್ಷನ್ ಕೇವಲ ರೂ.2506/-. ಅದೇ OPS (Old Pension Scheme) ಪ್ರಕಾರ ಆಗಿದ್ರೆ ಅವರಿಗೆ ಬರ್ತಿದ್ದ ಪೆನ್ಷನ್ ರೂ.17,150/-.

ಮತ್ತೊಬ್ಬ ಆರ್ಮಿ ಆಫೀಸರ್ ಹದಿಮೂರು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿ ರಿಟೈರಾದಾಗ ಅವರಿಗೆ ಬರ್ತಿರೋ ಪೆನ್ಷನ್ ಅವರ ಕಡೆಯ ತಿಂಗಳ ಸಂಬಳದ ಶೇ.15ಕ್ಕಿಂತ ಕಡಿಮೆ. ಈ ರೀತಿಯ ಹಲವಾರು ಉದಾಹರಣೆಗಳಿವೆ. NPS ಹೇಗೆ ಪ್ರಾಮಾಣಿಕವಾಗಿ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರು ಘನತೆಯಿಂದ ಬದುಕುವ ಹಕ್ಕನ್ನೂ ಕಿತ್ತುಕೊಳ್ತಿದೆ ಅಂತ ಇವು ನಮ್ಮ ಕಣ್ಣೆದುರು ನಿರೂಪಿಸ್ತಾ ಇವೆ. ಅಂದರೆ, NPS ಅಡಿಯಲ್ಲಿ ಬರುವ ಕೇಂದ್ರ ಸರ್ಕಾರದ 23.43 ಲಕ್ಷ ನೌಕರರು ಮತ್ತು ವಿವಿಧ ರಾಜ್ಯ ಸರ್ಕಾರಗಳ 59.29 ಲಕ್ಷ ನೌಕರರ (ನವೆಂಬರ್ 2022ರ ಅಂಕಿಅಂಶ) ನಿವೃತ್ತ ಬದುಕು ಹೇಗೆ ಅತಂತ್ರವಾಗಲಿದೆ ಅನ್ನೋದನ್ನ ಮೇಲಿನಂತ ಹಲವು ಉದಾಹರಣೆಗಳು ತೋರಿಸ್ತಿವೆ.

ಹಾಗಿದ್ರೆ OPSನಿಂದ ಸರ್ಕಾರಿ ನೌಕರರಿಗೆ ಇದ್ದ ಅನುಕೂಲತೆ ಏನು?

OPS ಅಡಿಯಲ್ಲಿ ಸರ್ಕಾರಿ ನೌಕರರು ನಿವೃತ್ತರಾದಾಗ ಅವರ ಕಡೆಯ ತಿಂಗಳ ಸಂಬಳದ ಅರ್ಧದಷ್ಟು ಸಂಬಳ ತಿಂಗಳ ಪೆನ್ಷನ್ ರೂಪದಲ್ಲಿ ಅವರಿಗೆ ಸಿಗುತ್ತಿತ್ತು. ಹಣದುಬ್ಬರ ಅವಲಂಬಿಸಿ ಪ್ರತಿ ವರ್ಷ ಹೆಚ್ಚಿಸುವ ಡಿ.ಎ ನಿವೃತ್ತ ನೌಕರರಿಗೂ ಅನ್ವಯವಾಗುತ್ತಿತ್ತು. ಇದರಿಂದ, ನಿವೃತ್ತರಾದ ಮೇಲೆ ಯಾರ ಮೇಲೂ ಅವಲಂಬಿತರಾಗದೆ ಘನತೆಯಿಂದ ಬದುಕಲು ಸಾಧ್ಯವಿತ್ತು. ಅಷ್ಟಲ್ಲದೆ, ನಿವೃತ್ತ ನೌಕರರು ನಿಧನರಾದಾಗ ಅವರ ಮನೆಯವರಿಗೆ (ಗಂಡ ಅಥವಾ ಹೆಂಡತಿ) ಅರ್ಧದಷ್ಟು ಪೆನ್ಷನ್ ಸಿಗುತ್ತಿತ್ತು. ಮತ್ತು ನಿವೃತ್ತರಾದ ಮೇಲೆ ಹೀಗೆ ನಿಗದಿತ ಪೆನ್ಷನ್ ಪಡೆಯಲು ನೌಕರರು ತಮ್ಮ ಸೇವೆಯ ಅವಧಿಯಲ್ಲಿ ಯಾವ ಹಣವನ್ನೂ ಪಾವತಿಸಬೇಕಿರಲಿಲ್ಲ. ಅಂದರೆ, ಸರ್ಕಾರವೇ ಪೆನ್ಷನ್‌ಗೆ ಬೇಕಾಗುವ ಹಣವನ್ನು ವ್ಯವಸ್ಥೆ ಮಾಡುವ ಜವಾಬ್ದಾರಿ ಹೊಂದಿತ್ತು.

OPS ಜಾರಿಯ ಹಿಂದೆ ಇದ್ದ ಕಾರಣವೇನು?

ಯಾವುದೇ ದೇಶ ಅಥವಾ ರಾಜ್ಯದಲ್ಲಿ ಇರುವಂತ ಪ್ರಜೆಗಳೆಲ್ಲಾ ನೆಮ್ಮದಿಯ ಬದುಕು ಬದುಕಲು ಅಲ್ಲಿ ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳು, ಮೂಲಭೂತ ಸೇವೆಗಳ ವ್ಯವಸ್ಥೆ ಉತ್ತಮವಾಗಿದ್ರೆ ಮಾತ್ರ ಸಾಧ್ಯ. ಈ ರೀತಿಯ ಅಗತ್ಯ ವ್ಯವಸ್ಥಗಳು ಉತ್ತಮವಾಗಿದ್ರೆ ಇಡೀ ದೇಶ ಸಮಗ್ರವಾಗಿ ಅಭಿವೃದ್ಧಿಯಾಗಲಿಕ್ಕೂ ಸಾಧ್ಯವಾಗ್ತದೆ. ಈ ಅಗತ್ಯ ವ್ಯವಸ್ಥೆಗಳನ್ನು ಉತ್ತಮವಾಗಿ ಜನರಿಗೆ, ತನ್ಮೂಲಕ ಇಡೀ ಸಮಾಜಕ್ಕೆ ತಲುಪಿಸೋ ಜವಾಬ್ದಾರಿ ಹೊತ್ತಿರುವವರು ಪ್ರಾಮಾಣಿಕ ಮತ್ತು ದಕ್ಷ ಸರ್ಕಾರಿ ನೌಕರರು. ಹಾಗಾಗಿ, ಇಡೀ ಸಮಾಜದ ಮೇಲೆ ಸರ್ಕಾರಿ ನೌಕರರ ಋಣ ಒಂದು ಮಟ್ಟಿಗೆ ಇರ್ತದೆ.

ಹೀಗೆ ಇಡೀ ಸಮಾಜ ಸಮಗ್ರವಾಗಿ ಬೆಳೆಯಲು ಕೆಲಸಮಾಡುವ ಸರ್ಕಾರಿ ನೌಕರರಿಗೆ ಅವರು ಘನತೆಯಿಂದ ಬದುಕು ಕಟ್ಟ್ಟಿಕೊಳ್ಳಲು ಆಗುವಷ್ಟು ಸಂಬಳ ಕೊಡುವುದು ಸರ್ಕಾರದ ಕರ್ತವ್ಯ ಮತ್ತು ತನ್ಮೂಲಕ ಇಡೀ ಸಮಾಜದ ಪರೋಕ್ಷ ಜವಾಬ್ದಾರಿಯೂ ಆಗಿರುತ್ತದೆ. ಹಾಗೆಯೇ, ನೌಕರರು ನಿವೃತ್ತರಾದ ನಂತರವೂ ಅವರು ಘನತೆಯಿಂದ ಜೀವನ ನಡೆಸಲು ಅನುವಾಗುವಂತೆ ನಿರ್ದಿಷ್ಟ ಪೆನ್ಷನ್‌ಅನ್ನು ಕೊಡುವುದೂ ಕೂಡ. ಅಲ್ಲದೆ, ನಿಗದಿತ ಪೆನ್ಷನ್ ಪಡೆಯುವುದು ನೌಕರರ ಹಕ್ಕೂ ಹೌದು. ಹೀಗೆ ಸರಿಯಾದ ಸಂಬಳ ಮತ್ತು ನಂತರ ಪೆನ್ಷನ್ ಕೊಡುವುದರ ಮೂಲಕ ಸರ್ಕಾರಿ ನೌಕರರು ಪ್ರಾಮಾಣಿಕತೆಯಿಂದ ಮತ್ತು ದಕ್ಷತೆಯಿಂದ ಕೆಲಸ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ.

ಅಕಸ್ಮಾತ್, ನಿವೃತ್ತಿ ವೇತನದ ಗ್ಯಾರಂಟಿ ಇಲ್ಲದಿದ್ದಲ್ಲಿ ಮುಂದಿನ ಜೀವನದ ಭದ್ರತೆಗೋಸ್ಕರ ಪ್ರಾಮಾಣಿಕ ನೌಕರರೂ ಕೂಡ ಭ್ರಷ್ಟರಾಗಲು ಮುಂದಾಗುವ ಸಾಧ್ಯತೆ ದಟ್ಟವಾಗಿರುತ್ತದೆ. ಪ್ರಾಮಾಣಿಕ ನೌಕರರೂ ಭ್ರಷ್ಟರಾದಾಗ, ಸಮಾಜದ ಹಲವು ವಲಯಗಳ ಸರಿಮಾಡಲಾಗದಷ್ಟು ಕೆಡುತ್ತವೆ. ಈ ಎಲ್ಲಾ ಸಕಾರಣಗಳಿಂದಾಗಿಯೇ 19ನೇ ಶತಮಾನದ ಕೊನೆಯಿಂದಲೇ ಜಗತ್ತಿನ ಹಲವು ದೇಶಗಳು OPSಅನ್ನು ಜಾರಿಮಾಡಲಾರಂಭಿಸಿದವು.

1891ರಲ್ಲಿ ಡೆನ್ಮಾರ್ಕ್, 1898ರಲ್ಲಿ ನ್ಯೂಜಿಲ್ಯಾಂಡ್, 1935ರಲ್ಲಿ ಯುಎಸ್‌ಎ ಸೇರಿದಂತೆ ಹಲವು ದೇಶಗಳು ಪೆನ್ಷನ್ ಸ್ಕೀಮ್ ಜಾರಿಮಾಡಿದ್ದರ ಹಿಂದೆ ಮೇಲ್ಕಾಣಿಸಿದ ಸಕಾರಣಗಳೇ ಇದ್ದವು.

ಹೀಗಿದ್ದಾಗ NPS ಯಾಕೆ ಬಂತು?

ಇಡೀ ಜಗತ್ತನ್ನ ಜಾಗತೀಕರಣ, ಉದಾರೀಕರಣ, ಖಾಸಗೀಕರಣ (LPG – Liberalization, privatization, globalization) ಪ್ರೇರಿತ ಆರ್ಥಿಕ ನೀತಿಗಳು ಆವರಿಸಿಕೊಂಡಂತೆ ಪ್ರಜೆಗಳಿಗೆ ಕೊಡಬೇಕಾದ ಪೆನ್ಷನ್‌ನಂತಹ ಸಾಮಾಜಿಕ ಭದ್ರತೆಯ ಜವಾಬ್ದಾರಿ ಸರ್ಕಾರದ್ದಾಗಿರಬೇಕಾಗಿಲ್ಲ ಮತ್ತು ಎಲ್ಲವನ್ನೂ ಅನಿಯಂತ್ರಿತ ಮಾರುಕಟ್ಟೆಯೇ ನಿರ್ಧರಿಸಬೇಕು ಎನ್ನುವ ಪಾಲಿಸಿಗಳು ಮುಂಚೂಣಿಗೆ ಬರತೊಡಗಿದವು. ಹಾಗೆಯೇ, ಸರ್ಕಾರ ಆದಷ್ಟೂ ತನ್ನ ವೆಚ್ಚವನ್ನು ಕಡಿತಗೊಳಿಸಿಕೊಳ್ಳುವುದು ಅತ್ಯಂತ ಸರಿಯಾದ ಆರ್ಥಿಕ ನೀತಿ (Prudent fiscal policy) ಎನ್ನುವುದು ಮುಂಚೂಣಿಗೆ ಬಂತು. ಈ ಹಿನ್ನೆಲೆಯಲ್ಲಿಯೇ OPS ವ್ಯವಸ್ಥೆ ಸರ್ಕಾರದ ಮೇಲೆ ಭಾರೀ ಆರ್ಥಿಕ ಹೊರೆಯಾಗುವುದೆಂದು ಆಗಿನ ವಾಜಪೇಯಿ ಸರ್ಕಾರ 2004 ರಲ್ಲಿ NPS ಜಾರಿಗೆ ತಂದಿತು.

ಇದನ್ನೂ ಓದಿ: ಏನಿದು ಎನ್‌ಪಿಎಸ್‌, ಒಪಿಎಸ್? ಲಕ್ಷಾಂತರ ನೌಕರರ ಆತಂಕವೇನು?

2006ರ ನಂತರ ನೇಮಕವಾಗುವ ನೌಕರರಿಗೆ ಮಾತ್ರ NPS ಅನ್ವಯ ಎಂಬ ನಿಯಮ ಮಾಡಿದ್ದರಿಂದ ಆಗಾಗಲೇ ಕೆಲಸದಲ್ಲಿದ್ದ ನೌಕರರುಗಳು NPSಗೆ ಯಾವ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ.

NPS ಅಡಿಯಲ್ಲಿ ಪೆನ್ಷನ್ ವ್ಯವಸ್ಥೆ ಹೇಗೆ?

NPS ಅಡಿಯಲ್ಲಿ ಸರ್ಕಾರಿ ನೌಕರರ ಪ್ರತಿ ತಿಂಗಳ ಸಂಬಳದ ಮೂಲವೇತನದಲ್ಲಿ ಶೇ.10ನ್ನು ಪೆನ್ಷನ್ ಕಡೆಗೆ ಕಡಿತ ಮಾಡಲಾಗುತ್ತದೆ (OPSನಲ್ಲಿ ಈ ರೀತಿಯ ಸಂಬಳದ ಕಡಿತ ಇಲ್ಲ.) ಇದಕ್ಕೆ ಸರ್ಕಾರ ಮೂಲವೇತನದ ಶೇ.14ರಷ್ಟು ಹಣವನ್ನು ಪ್ರತಿ ತಿಂಗಳು ಹೂಡಿಕೆ ಮಾಡುತ್ತದೆ.

ಹೀಗೆ ಲಕ್ಷಾಂತರ ನೌಕರರಿಂದ ಜಮೆಯಾದ ಕೋಟ್ಯಂತರ ರೂಪಾಯಿ ಹಣವನ್ನು ಫಂಡ್ ಮ್ಯಾನೇಜರುಗಳ (ಉದಾ: SBI, LIC mutual funds) ಮೂಲಕ ಶೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ. ಶೇರು ಮಾರುಕಟ್ಟೆಯಲ್ಲಿ ತೊಡಗಿಸಿದ ನೌಕರರ (ಸರ್ಕಾರದ್ದೂ ಸೇರಿ) ಒಟ್ಟಾರೆ ಹಣ ಅವರು ನಿವೃತ್ತಿಯಾಗುವ ವೇಳೆಗೆ ಎಷ್ಟು ಬೆಳೆದಿರುತ್ತದೆ ಎಂಬುದನ್ನು ಅವಲಂಬಿಸಿ ನೌಕರರ ಪೆನ್ಷನ್ ಎಷ್ಟು ಎಂಬುದು ನಿರ್ಧರಿತವಾಗುತ್ತದೆ. ಅಂದರೆ, NPS ಅಡಿಯಲ್ಲಿ ಪೆನ್ಷನ್ ಕಡೆಗೆ ನೌಕರರ ಹಣ ಪ್ರತಿ ತಿಂಗಳೂ ಕಡಿತವಾದರೂ ಅವರು ನಿವೃತ್ತಿಯಾದಾಗ ಎಷ್ಟು ಪೆನ್ಷನ್ ಬರುತ್ತದೆ ಎಂಬುದು ನಿಗದಿಯಾಗಿರುವುದಿಲ್ಲ. ಅವರು ನಿವೃತ್ತಿಯಾಗುವಾಗ ಮಾರುಕಟ್ಟೆಯ ಪರಿಸ್ಥಿತಿಯ ಮೇಲೆ ನೌಕರರ ಪೆನ್ಷನ್ ಮೊತ್ತ ನಿಗದಿಯಾಗುತ್ತದೆ.

ಉದಾಹರಣೆಗೆ, ಈಗ ಮಾರುಕಟ್ಟೆ ಇರುವ ಪರಿಸ್ಥಿತಿಯ ಹಿನ್ನೆಲೆಯಲ್ಲು ಲೆಕ್ಕಹಾಕಿದರೆ ನೌಕಕರ ಕಡೆಯ ತಿಂಗಳ ಮೂಲವೇತನದ ಶೇ.30ರಷ್ಟು ಮಾತ್ರ ಪೆನ್ಷನ್ ಸಿಗುವ ಸಾಧ್ಯತೆಯಿದೆ.

ಹಾಗಿದ್ದರೆ NPSನಲ್ಲಿ ಹೆಚ್ಚಿನ ಪೆನ್ಷನ್ ಬರುವ ಸಾಧ್ಯತೆ ಇಲ್ಲವೆ?

NPS ಅಡಿಯಲ್ಲಿ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ರಿಟರ್ನ್ಸ್ ಬರುತ್ತದೆ ಎಂಬುದು ಉದಾರೀಕರಣದ ಪರವಾಗಿರುವ ಆರ್ಥಿಕ ತಜ್ಞರ ವಾದವಾಗಿದೆ. ಉದಾಹರಣೆಗೆ, ಶೇರು ಮಾರುಕಟ್ಟೆಯಲ್ಲಿ ಹಣದ ಬೆಳವಣಿಗೆ ಸರ್ಕಾರೀ ಬಾಂಡ್‌ಗಳಿಗಿಂತ (ಶೇ.6 ಬೆಳವಣಿಗೆ) ಹೆಚ್ಚಿದ್ದು, ಅದು ಅಂದಾಜು ಶೇ.12ರಷ್ಟಿರುತ್ತದೆ. ಹಾಗಾಗಿ, NPS ಅಡಿಯಲ್ಲಿ ನೌಕರರಿಗೆ OPSಗಿಂತ ಹೆಚ್ಚಿನ ಪೆನ್ಷನ್ ಸಿಗುತ್ತದೆ ಎಂಬುದು ಲಿಬರಲ್ ಆರ್ಥಿಕ ತಜ್ಞರ ವಾದ.

ಆದರೆ, ಜಗತ್ತಿನ ಯಾವುದೇ ಶೇರು ಮಾರುಕಟ್ಟೆಯ ಇತಿಹಾಸವನ್ನು ನೋಡಿದರೆ, ಎಂಥಾ ಆರ್ಥಿಕ ತಜ್ಞರಿಗೂ, ಶೇರು ಮಾರುಕಟ್ಟೆ ತಜ್ಞರಿಗೂ ಕೂಡಾ ಮಾರುಕಟ್ಟೆ ಹೀಗೇ ಬೆಳೆಯುತ್ತದೆಂಬುದನ್ನು ಹೇಳಲಾಗಿಲ್ಲ. ಊಹಿಸಲೂ ಆಗಿಲ್ಲ.

ಪ್ರಖ್ಯಾತ ಹೂಡಿಕೆ ತಜ್ಞನಾದ ಟೋನಿ ರಾಬಿನ್ಸ್ “ನಮ್ಮ ಮೂಲಕ ಬಂಡವಾಳ ಹೂಡಿ, ನಾವು ಮಾರ್ಕೆಟ್‌ಅನ್ನೇ ಸೋಲಿಸುತ್ತೇವೆ (ಸಿಕ್ಕಾಬಟ್ಟೆ ಲಾಭ ತರುತ್ತೇವೆ)” ಎಂದು ಹೇಳುವ ಫಂಡ್ ಮ್ಯಾನೇಜರುಗಳ ಭರವಸೆಯ ಮಾತು ಅತ್ಯಂತ ದೊಡ್ಡ ಸುಳ್ಳೆಂದು ತನ್ನ “Money master the game” ಪುಸ್ತಕದಲ್ಲಿ ಹೇಳುತ್ತಾನೆ.

2008ರ ಆರ್ಥಿಕ ಹಿಂಜರಿತದಲ್ಲಿ ಅಮೆರಿಕದ ಮಾರುಕಟ್ಟೆಯಲ್ಲಿ ಹೂಡಿದ್ದ ಸರ್ಕಾರಿ ನೌಕರರ ಪೆನ್ಷನ್ ಹಣ ಮುಳುಗಿಹೋಗಿದ್ದು ನಮ್ಮ ಕಣ್ಣ ಮುಂದೆಯೇ ಇದೆ. ಅಮೆರಿಕದಂತ ಶ್ರೀಮಂತ ದೇಶವೇ ಆ ಹಣವನ್ನು ಮರುಹೊಂದಿಸಲು ಏದುಸಿರು ಬಿಡಬೇಕಾಯಿತು. ಅಂಥಾದ್ದರಲ್ಲಿ, ಭಾರತದಂತ ದೇಶದ ಗತಿಯೇನು ಎಂಬುದನ್ನು ನಾವು ಯೋಚಿಸಬೇಕಿದೆ.

ಒಟ್ಟಾರೆಯಾಗಿ, ಶೇರು ಮಾರುಕಟ್ಟೆಯಲ್ಲಿ ಇಷ್ಟೇ ಲಾಭವಾಗುತ್ತದೆಂದು ಊಹಿಸಲು ಜಗತ್ತಿನ ಅತಿ ಪ್ರಖ್ಯಾತ ತಜ್ಞರಿಗೂ ಸಾಧ್ಯವಾಗಿಲ್ಲ. ಹೀಗಿರುವಾಗ, NPSನಲ್ಲಿ ಹೆಚ್ಚಿನ ಪೆನ್ಷನ್ ಸಿಗುತ್ತದೆಂಬುದು ಖಂಡಿತ ನಂಬಲರ್ಹವಾದುದಲ್ಲ. NPSನಲ್ಲಿ ಕಡಿಮೆ ಪೆನ್ಷನ್ ಸಿಗುವುದಿರಲಿ, ಆರ್ಥಿಕ ಹಿಂಜರಿತದಂಥ ವೇಳೆಯಲ್ಲಿ ಪೂರ್ತಿ ಹಣ ಮುಳುಗಿ ಹೋಗಿ ಒಂದು ಪೈಸೆ ಕೂಡ ಪೆನ್ಷನ್ ಸಿಗದಂಥಾ ಅಪಾಯವನ್ನೂ ತಳ್ಳಿಹಾಕುವಂತಿಲ್ಲ.

ಹೀಗಾಗಿ, ಲಕ್ಷಾಂತರ ನೌಕರರ ಭವಿಷ್ಯವನ್ನೇ ಮಣ್ಣುಪಾಲು ಮಾಡುವ ಅಪಾಯ ಈ NPSನಲ್ಲಿದೆ ಎಂದರೂ ತಪ್ಪಾಗಲಾರದು.

ಹಾಗಿದ್ದರೆ NPSನಿಂದ ಯಾರಿಗೂ ಲಾಭವಿಲ್ಲವೆ?

ಖಂಡಿತಾ ಇದೆ. ಸರ್ಕಾರಿ ನೌಕರರ (ಸರ್ಕಾರದ್ದೂ ಸೇರಿ) ಹಣವನ್ನು ವಿವಿಧ ಕಂಪನಿಗಳ ಶೇರುಗಳಲ್ಲಿ ತೊಡಗಿಸುವ ಫಂಡ್ ಮ್ಯಾನೇಜರುಗಳಿಗೆ ಮಾತ್ರ ಲಾಭ ಇದೆ. ಲಾಭ ನಷ್ಟ ಏನೇ ಆಗಲಿ, ಫಂಡ್ ಮ್ಯಾನೇಜರುಗಳ ಫೀಸು ಮತ್ತು ಶೇರು ಖರೀದಿ-ಮಾರಾಟದ ಕಮಿಷನ್ ಅವರಿಗೆ ಕೊಡಲೇಬೇಕಿರುತ್ತದೆ. ಹಾಗಾಗಿ, ಇಡೀ NPSನಲ್ಲಿ ನಷ್ಟವನ್ನೇ ಅನುಭವಿಸದೆ ಇರುವವರು ಎಂದರೆ ಫಂಡ್ ಮ್ಯಾನೇಜರುಗಳು ಮಾತ್ರ.

ಜೊತೆಗೆ, ಲಾಭ ಮಾತ್ರವೇ ಅಥವಾ ಇಷ್ಟೇ ಲಾಭ ಬರುವಂತೆಯೇ ಹೂಡಿಕೆ ಮಾಡಬೇಕು ಎಂಬ ಯಾವ ಷರತ್ತನ್ನೂ ಅವರಿಗೆ ವಿಧಿಸಲಾಗಿರುವುದಿಲ್ಲ. (ಶೇರ್ ಮಾರ್ಕೆಟ್ ವಿಷಯದಲ್ಲಿ ಅಂತಹ ಷರತ್ತನ್ನು ಹಾಕಲಾಗುವುದೂ ಇಲ್ಲ.)

NPSನಿಂದ OPSಗೆ ವಾಪಸ್ ಹೋಗಲೇನು ತೊಂದರೆ?

OPSಗೆ ವಾಪಸ್ ಹೋಗುವುದು ಸರ್ಕಾರದ ಬೊಕ್ಕಸಕ್ಕೆ ಭಾರೀ ಆರ್ಥಿಕ ಹೊರೆಯಾಗುವುದರಿಂದ ಅದು ಅತ್ಯಂತ ಕೆಟ್ಟ ಆರ್ಥಿಕ ನಿರ್ಧಾರವಾಗುತ್ತದೆಂದು ಖಾಸಗೀಕರಣದ ಪರವಿರುವ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರವೂ ಇದೇ ಕಾರಣಕ್ಕೆ OPS ಮರುಜಾರಿಯ ವಿರುದ್ಧವಿದೆ. ಓಲೈಕೆ ರಾಜಕಾರಣದ ಭಾಗವಾಗಿ OPS ಮರುಜಾರಿಗೊಳಿಸಲು ಕೆಲ ರಾಜ್ಯಗಳು ಮುಂದಾಗಿವೆಯೆಂದು ಕೇಂದ್ರ ಸರ್ಕಾರ ಮತ್ತು ಈ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

OPS ಮರುಜಾರಿಯಿಂದ ನಿಜಕ್ಕೂ ಭಾರೀ ಆರ್ಥಿಕ ಹೊರೆಯಾಗಲಿದೆಯೆ?

ಮೇಲ್ನೋಟಕ್ಕೆ ಇದು ನಿಜವೆನಿಸಿದರೂ, OPSನಿಂದ ಸರ್ಕಾರಿ ನೌಕರರ ಮೇಲೆ ಉಂಟಾಗುವ ಮತ್ತು ಅದರಿಂದ ಒಟ್ಟಾರೆಯಾಗಿ ದೇಶದ ಸಮಗ್ರ ಬೆಳವಣಿಗೆಯಲ್ಲಿ ಉಂಟಾಗುವ ಸಕಾರಾತ್ಮಕ ಬದಲಾವಣೆಯು ಉತ್ಪಾದಿಸುವ ಸಂಪತ್ತು OPS ವೆಚ್ಚಕ್ಕಿಂತಲೂ ಹೆಚ್ಚಾಗಿರುತ್ತದೆ.

ಭ್ರಷ್ಟಾಚಾರವನ್ನು ತಡೆಯುವ ಮೂಲಕ, ಬ್ಯಾಂಕುಗಳ NPA (ನಾನ್ ಪರ್ಫಾಮಿಂಗ್ ಅಸ್ಸೆಟ್ಸ್- ಹತ್ತು ಲಕ್ಷಕೋಟಿಗಿಂತ ಹೆಚ್ಚು) ಸರಿಪಡಿಸುವ ಮೂಲಕ ಸರ್ಕಾರ ಸೋರಿಕೆಯನ್ನು ತಡೆಗಟ್ಟಿದರೆ OPS ತರುವುದು ಕಷ್ಟದ ವಿಷಯವೇ ಅಲ್ಲ.

ಛತ್ತೀಸಗಡ, ರಾಜಸ್ಥಾನ, ಹಿಮಾಚಲ ಪ್ರದೇಶ (ಮಾಡುತ್ತಿದೆ) ಸೇರಿದಂತೆ ಕೆಲ ರಾಜ್ಯಗಳು OPS ಮರುಜಾರಿ ಮಾಡಿ ತೊಂದರೆಗೊಳಗಾಗದೆ ಇರುವುದು OPS ಜಾರಿ ಅಸಾಧ್ಯವೇನಲ್ಲ ಎಂಬುದನ್ನು ತೋರುತ್ತದೆ.

ಇದನ್ನೂ ಓದಿ: ಒಪಿಎಸ್ ಜಾರಿಗೆ ಛತ್ತೀಸ್‌ಗಡ ಕಾಂಗ್ರೆಸ್‌ ಗೌರ್ಮೆಂಟ್ ನಿರ್ಧಾರ; ರಾಜ್ಯದಲ್ಲಿ ಎಚ್ಚೆತ್ತುಕೊಳ್ಳುವುದೇ ಬಿಜೆಪಿ ಸರ್ಕಾರ?

ಇಷ್ಟೆಲ್ಲದರ ಜೊತೆಗೆ, ಪ್ರಜೆಗಳ ಸಾಮಾಜಿಕ ಕಲ್ಯಾಣ, ಸಾಮಾಜಿಕ ಭದ್ರತೆಯ ವಿಷಯ ಬಂದಾಗ ಬೇರೆ ಮೂಲಗಳ ಮೂಲಕ ಹಣ ಸಂಗ್ರಹಿಸಿ ಪ್ರಜೆಗಳ ಹಿತ ಕಾಯುವುದು ಯಾವುದೇ ಜವಾಬ್ದಾರಿಯುತ ಸರ್ಕಾರದ ಮೊದಲ ಕರ್ತವ್ಯವಾಗಿರುತ್ತದೆ. ಈ ಕಾರಣದಿಂದಲೂ OPS ಮರುಜಾರಿ ಅತ್ಯಂತ ಅಗತ್ಯವಾಗಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ, “ಫೆಡರೇಷನ್ ಆಫ್ ಸೆಂಟ್ರಲ್ ಗವರ್ನಮೆಂಟ್ ಎಂಪ್ಲಾಯೀಸ್ ಯೂನಿಯನ್ಸ್” ಕೂಡ OPS ಮರುಜಾರಿ ಮಾಡುವಂತೆ ಕ್ಯಾಬಿನೆಟ್ ಸೆಕ್ರೆಟರಿಗೆ ಪತ್ರ ಬರೆದಿದೆ. ಹಲವಾರು ರಾಜ್ಯಗಳಲ್ಲಿ ನೌಕರರು OPS ಮರುಜಾರಿಗೆ ಆಗ್ರಹಿಸುತ್ತಿದ್ದಾರೆ.

ಮುಖ್ಯವಾಗಿ ಕೇಂದ್ರ ಸರ್ಕಾರ ಇದನ್ನು ಮನಗಂಡು ರಾಜ್ಯಗಳ ಆರ್ಥಿಕ ಸ್ಥಿತಿ ಉತ್ತಮವಾಗುವಂಥ ಕ್ರಮ ಕೈಗೊಂಡು ರಾಜ್ಯಗಳು OPS ಮರುಜಾರಿ ತಕ್ಷಣ ಮಾಡುವಂತೆ ಸಹಕರಿಸಬೇಕಾಗಿದೆ. ತಾನೂ ಕೂಡ ಕೇಂದ್ರ ಸರ್ಕಾರದ ನೌಕರರಿಗೆ ತಕ್ಷಣ OPS ಮರುಜಾರಿ ಮಾಡಬೇಕಿದೆ.

ಡಾ. ಬಿ.ಸಿ. ಬಸವರಾಜು

ಡಾ. ಬಿ.ಸಿ. ಬಸವರಾಜು
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...