ಮಾಜಿ ಸಚಿವ, ದಿವಂಗತ ಅನಂತಕುಮಾರ್ ಅವರ ಪಾಳೆಯದಲ್ಲಿ ಗುರುತಿಸಿಕೊಂಡು, ರಾಜಕೀಯವಾಗಿ ಬೆಳೆದು ಬಂದ ಮೈಸೂರಿನ ಎಸ್.ಎ.ರಾಮದಾಸ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಿದೆ. ಈಗ ಬಂಡಾಯದ ಬಿಸಿ ಬಿಜೆಪಿಗೆ ತಟ್ಟುವ ಸಾಧ್ಯತೆ ದಟ್ಟವಾಗಿದೆ.
ಬಿ.ಎಲ್.ಸಂತೋಷ್ ಆಪ್ತರೆಂದೇ ಹೇಳಲಾದ ಟಿ.ಎಸ್.ಶ್ರೀವತ್ಸ ಅವರಿಗೆ ಈ ಕ್ಷೇತ್ರದಲ್ಲಿ ಟಿಕೆಟ್ ಘೋಷಣೆಯಾಗಿದೆ. ಬಿಜೆಪಿಯ ಕಾರ್ಯಕರ್ತರಾಗಿದ್ದ ಅವರು ಮೊದಲಿಗೆ ವಾರ್ಡ್ ಅಧ್ಯಕ್ಷರಾಗಿ ಪಕ್ಷದಲ್ಲಿ ಗುರುತಿಸಿಕೊಂಡರು. ನಂತರ ಕೃಷ್ಣರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಬಿಜೆಪಿಯಲ್ಲಿ ಕೆಲಸ ಮಾಡಿದ್ದಾರೆ. ಉದ್ಯಮಿಯಾಗಿರುವ ಅವರು ಈಗ ಮೈಸೂರು ನಗರಾಧ್ಯಕ್ಷರಾಗಿದ್ದಾರೆ. ಇಷ್ಟೆಲ್ಲ ಆದರೂ ಶ್ರೀವತ್ಸ ಅವರ ಮುಖಪರಿಚಯ ಅಷ್ಟಾಗಿ ಕ್ಷೇತ್ರದ ಜನಕ್ಕೆ ಇಲ್ಲ ಎನ್ನಲಾಗುತ್ತಿದೆ.
ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಶ್ರೀವತ್ಸ, ಸಂಸದ ಪ್ರತಾಪ ಸಿಂಹ ಸೇರಿದಂತೆ ಅನೇಕರು ರಾಮದಾಸ್ ಭೇಟಿಗಾಗಿ ಮನೆಗೆ ಹೋದರೂ ಅವರೊಂದಿಗೆ ಮಾತುಕತೆ ನಡೆಸಲು ರಾಮದಾಸ್ ನಿರಾಕರಿಸಿದ್ದಾರೆ.
“ಪಕ್ಷದಲ್ಲಿರಬೇಕಾ? ಯಾವ ನಿರ್ಧಾರ ಮಾಡಬೇಕು ಅಂತಾ ನಾಳೆ ಹೇಳುತ್ತೇನೆ. ನಾನು ಯಾರನ್ನೂ ಭೇಟಿ ಮಾಡಲ್ಲ. 30 ವರ್ಷಗಳಿಂದ ತಾಯಿ ಮನೆಯಲ್ಲಿದ್ದೆ. ಈಗ ನನ್ನನ್ನ ಹೊರ ಹಾಕಿದ್ದಾರೆ. ತಾಯಿ ಮನೆಯಲ್ಲಿ ಇರಬೇಕಾ ಬೇಡ್ವಾ ಅಂತಾ ನಾಳೆ ಸಂಜೆ ತಿಳಿಸುತ್ತೇನೆ. ನಾನು ಯಾರನ್ನೂ ಭೇಟಿ ಮಾಡಲ್ಲ. ಯಾರ ಜೊತೆಯೂ ಮಾತುಕತೆ ನಡೆಸಲ್ಲ. ನನ್ನ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಮಾಡ್ತೀನಿ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೈಗೆ ಸಿಗದೆ ತೆರಳಿರುವ ಅವರು ಮನೆಯ ಮತ್ತೊಂದು ಬಾಗಿಲಿನಿಂದ ಹೊರನಡೆದಿರುವುದು ಮತ್ತೊಮ್ಮೆ ಬಿಜೆಪಿಯೊಳಗೆ ಆತಂಕ ಸೃಷ್ಟಿಸಿದೆ.
ಮೈಸೂರು ನಗರದಲ್ಲಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರವು ಅಕ್ಷರಸ್ಥರ ಕ್ಷೇತ್ರವೆಂದೇ ಗುರುತಿಸಲ್ಪಟ್ಟಿದೆ. ನಗರದಲ್ಲಿನ ಉಳಿದ ಮೂರು ಕ್ಷೇತ್ರಗಳಿಗೆ ಹೋಲಿಸಿದರೆ ಹೆಚ್ಚಿನ ಸಾಕ್ಷರರು ಇಲ್ಲಿದ್ದಾರೆ. ಮೈಸೂರು ಅರಮನೆ, ಅಗ್ರಹಾರಗಳು, ದಲಿತ ಕೇರಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಈ ಕ್ಷೇತ್ರದಲ್ಲಿ ಅತಿಹೆಚ್ಚು ಬಾರಿ ಬಿಜೆಪಿ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಆದರೆ ಬಿಜೆಪಿಯನ್ನು ಸೋಲಿಸಿದ ಫಲಿತಾಂಶಗಳೂ ಇಲ್ಲಿ ಹೊರಬಿದ್ದಿವೆ.

ಮೈಸೂರು ಅರಮನೆ, ಇಟ್ಟಿಗೆಗೂಡು, ಅಗ್ರಹಾರ, ಚೆಲುವಾಂಬ ಅಗ್ರಹಾರ, ದೇವಾಂಬ ಅಗ್ರಹಾರ, ಕೃಷ್ಣಮೂರ್ತಿಪುರಂ, ಚಾಮರಾಜಪುರಂ, ಅಶೋಕಪುರಂ, ಸುಣ್ಣದಕೇರಿ, ಸೊಪ್ಪಿನಕೇರಿ, ದೇವರಾಜ ಅರಸು ಕಾಲೋನಿ ಸೇರಿ ಹತ್ತಾರು ಪ್ರದೇಶಗಳಷ್ಟೇ ಅಲ್ಲದೆ ಹೊಸದಾಗಿ ರಚನೆಯಾದ ಶ್ರೀರಾಂಪುರ ಎರಡನೇ ಹಂತ, ಎಸ್‌ಬಿಎಂ ಕಾಲೋನಿ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಪ್ರಸ್ತುತ ಎಸ್.ಎ.ರಾಮದಾಸ್ (ಬಿಜೆಪಿ) ಕ್ಷೇತ್ರದ ಶಾಸಕರಾಗಿದ್ದಾರೆ.
ಸ್ವಾತಂತ್ರ್ಯಾನಂತರ ನಡೆದ ಮೂರು ಚುನಾವಣೆಗಳ ಸಂದರ್ಭದಲ್ಲಿ ’ಮೈಸೂರು ನಗರ’ ಕ್ಷೇತ್ರವಿತ್ತು. ಕೆ.ಎಸ್.ಸೂರ್ಯನಾರಾಯಣ ರಾವ್ ಅವರು ಮೂರು ಬಾರಿ ಇಲ್ಲಿಂದ ಆಯ್ಕೆಯಾಗಿದ್ದರು. 1967ರಲ್ಲಿ ಮೈಸೂರು ನಗರ ಕ್ಷೇತ್ರದಿಂದ ಬೇರ್ಪಡಿಸಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರವನ್ನು ರಚಿಸಲಾಯಿತು. ಅಂದಿನಿಂದ ಈತನಕ ಎಂಟು ಮಂದಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಇದರಲ್ಲಿ ಒಬ್ಬರು ನಾಲ್ಕು ಬಾರಿ, ಇಬ್ಬರು ತಲಾ 2 ಬಾರಿ ಶಾಸಕರಾಗಿ ಗಮನ ಸೆಳೆದಿದ್ದಾರೆ.
ಅತಿಹೆಚ್ಚು ಸಲ ಈ ಕ್ಷೇತ್ರದಲ್ಲಿ ಬ್ರಾಹ್ಮಣ ಅಭ್ಯರ್ಥಿಗಳೇ ಆಯ್ಕೆಯಾಗುತ್ತಾ ಬಂದಿರುವುದು ಮತ್ತೊಂದು ವಿಶೇಷ. ಇದರ ನಡುವೆ ಕುರುಬ ಸಮುದಾಯದ ಎಂ.ಕೆ.ಸೋಮಶೇಖರ್ ಕೂಡ ಪ್ರಬಲ ಪೈಪೋಟಿಯನ್ನು ನೀಡುತ್ತಾ ಎರಡು ಬಾರಿ ಗೆಲುವು ಸಾಧಿಸಿದ್ದಾರೆ.

ಜಾತಿವಾರು ಲೆಕ್ಕದಲ್ಲಿ 55 ಸಾವಿರ ಬ್ರಾಹ್ಮಣ, ಪರಿಶಿಷ್ಟ ಜಾತಿ 40 ಸಾವಿರ, ಲಿಂಗಾಯತ 30 ಸಾವಿರ, ಕುರುಬರು 25 ಸಾವಿರ, ನಾಯಕರು 10 ಸಾವಿರ, ಒಕ್ಕಲಿಗರು 18 ಸಾವಿರ, ಅಲ್ಪಸಂಖ್ಯಾತರು 8 ಸಾವಿರ, ಮರಾಠರು 5 ಸಾವಿರ, ಜೈನರು 5 ಸಾವಿರ, ತಮಿಳರು ಸಾವಿರ ಹಾಗೂ ಇತರ ಸಮುದಾಯಗಳು 3540 ಜನರಿದ್ದಾರೆಂದು ಅಂದಾಜು ಮಾಡಲಾಗಿದೆ. ಲಿಂಗಾಯತ, ಬ್ರಾಹ್ಮಣ ಸಮುದಾಯದ ಎಷ್ಟು ಮಂದಿ ಅಭ್ಯರ್ಥಿಗಳು ಕಣದಲ್ಲಿರುತ್ತಾರೆಂಬುದು ಇಲ್ಲಿನ ಫಲಿತಾಂಶವನ್ನು ನಿರ್ಣಯಿಸುತ್ತದೆ.
ಈವರೆಗೆ ನಡೆದ ಚುನಾವಣೆಗಳನ್ನು ಅವಲೋಕನ ಮಾಡುವುದಾದರೆ, 1967ರಲ್ಲಿ ಪಕ್ಷೇತರ ಅಭ್ಯರ್ಥಿ ಸಾಹುಕಾರ್ ಚನ್ನಯ್ಯ (9041) ಅವರು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಸ್ವಾಮಿಯವರನ್ನು 2,101 ಮತಗಳ ಅಂತರದಲ್ಲಿ ಸೋಲಿಸಿದ್ದರು. 1972ರಲ್ಲಿ ಕಾಂಗ್ರೆಸ್‌ನ ಡಿ.ಸತ್ಯನಾರಾಯಣ (14150) ಅವರು ಭಾರತೀಯ ಜನಸಂಘದ ಎಚ್.ಗಂಗಾಧರನ್ (5994) ಅವರನ್ನು 8,156 ಮತಗಳ ಅಂತರದಲ್ಲಿ ಮಣಿಸಿದರು. 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಎಚ್.ಗಂಗಾಧರನ್ (25091) ಅವರು ಇಂದಿರಾ ಕಾಂಗ್ರೆಸ್‌ನ ಕೆ.ಎಸ್.ಸೂರ್ಯನಾರಾಯಣ ರಾವ್ (15150) ಅವರನ್ನು 9,941 ಮತದಂತರದಿಂದ ಸೋಲಿಸಿದರು. 1983ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಎಚ್.ಗಂಗಾಧರನ್ (21163), ಜನತಾ ಪಕ್ಷದ ಟಿ.ವಿ.ಶ್ರೀನಿವಾಸ ರಾವ್ ಅವರನ್ನು ಸೋಲಿಸಿದರು. 1985ರಲ್ಲಿ ಜನತಾ ಪಾರ್ಟಿಯಿಂದ ಹುರಿಯಾಳಾಗಿದ್ದ ವೇದಾಂತ್ ಹೆಮ್ಮಿಗೆ (20657) ಅವರು ಕಾಂಗ್ರೆಸ್‌ನ ಶ್ರೀಕಾಂತ ಶರ್ಮಾ ಅವರನ್ನು 6,692 ಮತಗಳ ಅಂತರದಲ್ಲಿ ಸೋಲಿಸಿದರು. 1989ರಲ್ಲಿ ಕಾಂಗ್ರೆಸ್‌ನ ಕೆ.ಎನ್.ಸೋಮಸುಂದರಂ (28722) ಜನತಾ ಪಾರ್ಟಿಯ ವೇದಾಂತ ಹೆಮ್ಮಿಗೆಯವರನ್ನು 9,732 ಮತದಂತರದಲ್ಲಿ ಮಣಿಸಿದರು.
1994ರಲ್ಲಿ ಈ ಕ್ಷೇತ್ರಕ್ಕೆ ಎ.ಎಸ್.ರಾಮದಾಸ್ ಅವರ ಪ್ರವೇಶವಾಯಿತು. ಬಿಜೆಪಿ ನಾಯಕ ಅನಂತಕುಮಾರ್ ವಲಯದಲ್ಲಿ ಗುರುತಿಸಿಕೊಂಡು ಬೆಳೆದ ರಾಮದಾಸ್ ಈವರೆಗೆ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಸಚಿವರಾಗಿಯೂ, ಮೈಸೂರು ಜಿಲ್ಲಾ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದಾರೆ. ಎ.ಎಸ್.ರಾಮದಾಸ್ ಅವರು ಅಖಾಡಕ್ಕೆ ಬಂದ ಬಳಿಕ ತಮ್ಮ ಮೊದಲ ಚುನಾವಣೆಯಲ್ಲಿ ಅಂದರೆ 1994ರಲ್ಲಿ ಜನತಾದಳದ ವೇದಾಂತ ಹೆಮ್ಮಿಗೆಯವರನ್ನು ಸೋಲಿಸಿದರು. ಆ ನಂತರದಲ್ಲಿ ನಡೆದ ಚುನಾವಣೆಯಲ್ಲಿ ಎಂ.ಕೆ.ಸೋಮಶೇಖರ್ ಮತ್ತು ರಾಮದಾಸ್ ನಡುವೆ ಪ್ರಬಲ ಪೈಪೋಟಿ ಏರ್ಪಡುತ್ತಾ ಬಂದಿದೆ. ಜನತಾ ದಳ ವಿಭಜನೆಯಾಗಿ ಜನತಾ ದಳ (ಸೆಕ್ಯುಲರ್) ಹುಟ್ಟಿಕೊಂಡ ಬಳಿಕ, 1999ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಕೆ.ಸೋಮಶೇಖರ್ ಕಣಕ್ಕಿಳಿದರು. ಆದರೆ ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ ಅವರು 29,813ಗಳನ್ನು ಪಡೆದು 9,752 ಮತದಂತರದಲ್ಲಿ ಎಂಕೆಎಸ್ ಅವರನ್ನು ಸೋಲಿಸಿದರು. 2004ರಲ್ಲಿ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿಯಾದ ಎಂ.ಕೆ.ಸೋಮಶೇಖರ್ 25,439 ಮತಗಳನ್ನು ಪಡೆದು ರಾಮದಾಸ್ ಅವರನ್ನು 3,394 ಮತಗಳ ಅಂತರದಲ್ಲಿ ಸೋಲಿಸಿದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮುಂಡೇಶ್ವರಿಯಲ್ಲಿ ಜಿಟಿಡಿಯದ್ದೇ ಪಾರಮ್ಯ; ಸಶಕ್ತ ಅಭ್ಯರ್ಥಿಗಳಿಲ್ಲದ ಕಾಂಗ್ರೆಸ್
ಸಿದ್ದರಾಮಯ್ಯನವರ ಅನುಯಾಯಿಯಾದ ಎಂ.ಕೆ.ಸೋಮಶೇಖರ್ ಅವರು ಸಿದ್ದರಾಮಯ್ಯನವರೊಂದಿಗೆ ಕಾಂಗ್ರೆಸ್ ಸೇರಿಕೊಂಡರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ರಾಮದಾಸ್ (63314) ಎದುರು 19,422 ಮತಗಳ ಅಂತರದಲ್ಲಿ ಸೋಲು ಕಂಡರು. 2013ರ ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ಬಿರುಕು ಉಂಟಾಗಿ ಕೆಜೆಪಿ ಹುಟ್ಟಿಕೊಂಡಿತ್ತು. ಯಡಿಯೂರಪ್ಪನವರ ಬಣದಲ್ಲಿ ಗುರುತಿಸಿಕೊಂಡಿದ್ದ ಎಚ್.ವಿ.ರಾಜೀವ್ ಅವರು ಸ್ಪರ್ಧಿಸಿ ಬಿಜೆಪಿಯ ಮತಗಳು ವಿಭಜನೆಯಾಗಲು ಕಾರಣವಾದರು. ಈ ಚುನಾವಣೆಯಲ್ಲಿ 52,611 ಮತಗಳನ್ನು ಪಡೆದ ಎಂಕೆಎಸ್ ಅವರು ರಾಮದಾಸ್ ವಿರುದ್ಧ 6,065 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2018ರ ಚುನಾವಣೆ ವೇಳೆಗೆ ಮತ್ತೆ ಬಿಜೆಪಿ ತೆಕ್ಕೆಗೆ ಸಾಂಪ್ರದಾಯಿಕ ಮತಗಳು ಮರಳಿದ್ದವು. ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ಅವರಿಗೆ ಕಾಂಗ್ರೆಸ್‌ನಲ್ಲಿ ಅನ್ಯಾಯವಾಯಿತು ಎಂಬ ಬೇಸರದಲ್ಲಿದ್ದ ದಲಿತರು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಯನ್ನು ಬೆಂಬಲಿಸಿದರು ಎನ್ನಲಾಗುತ್ತದೆ. ಹೀಗಾಗಿ ರಾಮದಾಸ್ ಅವರು 78,573 ಮತಗಳನ್ನು ಪಡೆದು, 26,347 ಮತಗಳ ಅಂತರದಲ್ಲಿ ಎಂ.ಕೆ.ಸೋಮಶೇಖರ್ ಅವರನ್ನು ಮಣಿಸಿದರು.
ರಾಮದಾಸ್- ಸೋಮಶೇಖರ್ ಹೊರತಾಗಿ ಬೇರೆ ಯಾರೂ ಇಲ್ಲವೇ?
ರಾಮು-ಸೋಮು ನಡುವಿನ ಸ್ಪರ್ಧೆಯನ್ನೇ ಕಳೆದ 30 ವರ್ಷಗಳಿಂದ ಈ ಕ್ಷೇತ್ರ ನೋಡುತ್ತಾ ಬಂದಿತ್ತು. ಹೀಗಾಗಿ ಈ ಚುನಾವಣೆಯಲ್ಲಿ ಹೊಸ ಮುಖಗಳು ಕ್ಷೇತ್ರವನ್ನು ಪ್ರವೇಶಿಸುತ್ತವೆ ಎಂದು ಊಹಿಸಲಾಗಿತ್ತು. ಇತ್ತೀಚಿನ ಚುನಾವಣಾ ಸಮರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಉಂಟಾಗುತ್ತಿದ್ದು ಈ ಎರಡು ಪಕ್ಷಗಳಲ್ಲಿ ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳಿದ್ದರು.

ಅನಂತಕುಮಾರ್ ಅವರು ಕಾಲವಾದ ಮೇಲೆ ರಾಮದಾಸ್ ಅವರಿಗೆ ಶ್ರೀರಕ್ಷೆಯಾಗಿ ನಿಲ್ಲಬಲ್ಲ ರಾಜ್ಯ ನಾಯಕರು ಯಾರೂ ಇಲ್ಲ, ಹೀಗಾಗಿ ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂದೂ ಹೇಳಲಾಗುತ್ತಿತ್ತು. ಆದರೆ ರಾಮದಾಸ್ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಧೇಯರಾಗಿ ಮೊದಲಿನಿಂದಲೂ ನಡೆದುಕೊಂಡುಬಂದಿದ್ದಾರೆ. ಅಲ್ಲದೆ ರಾಮದಾಸ್ ಸಹೋದರ ಉದ್ಯಮಿ ಶ್ರೀಕಾಂತ್ ದಾಸ್ ರಾಷ್ಟ್ರಮಟ್ಟದ ಬಿಜೆಪಿ ನಾಯಕರೊಂದಿಗೆ ವ್ಯವಹರಿಸಬಲ್ಲರು ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಅಂತಿಮವಾಗಿ ರಾಮದಾಸ್ ಅವರಿಗೆ ಟಿಕೆಟ್ ಇಲ್ಲವಾಗಿದೆ.
ಮುಡಾ (ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ) ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲಾಕ್) ಮಾಜಿ ಅಧ್ಯಕ್ಷ ಎನ್.ವಿ.ಫಣೀಶ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಕಾಂಗ್ರೆಸ್‌ನಲ್ಲಿ ಎಂ.ಕೆ.ಸೋಮಶೇಖರ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಪ್ರದೀಪ್‌ಕುಮಾರ್, ಮುಡಾ ಮಾಜಿ ಅಧ್ಯಕ್ಷ ಮೋಹನ್‌ಕುಮಾರ್ ಅವರ ಪುತ್ರ ಎನ್.ಎಂ.ನವೀನ್‌ಕುಮಾರ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಮೈಸೂರು ಭಾಗದಲ್ಲಿ ಲಿಂಗಾಯತರಿಗೆ ಪ್ರಾತಿನಿಧ್ಯ ಇಲ್ಲದ ಕಾರಣ ಎಂ.ಪ್ರದೀಪ್ ಕುಮಾರ್‌ಗೆ ಟಿಕೆಟ್ ನೀಡಬೇಕೆಂಬ ಒತ್ತಡ ಹೇರಲಾಗುತ್ತಿತ್ತು. ಸಾಂಪ್ರದಾಯಿಕ ಎದುರಾಳಿಗಳಾಗಿರುವ ರಾಮದಾಸ್ ಮತ್ತು ಎಂ.ಕೆ.ಸೋಮಶೇಖರ್ ಹೊರತುಪಡಿಸಿಯೂ ಉಭಯ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದರು. ಎಂ.ಕೆ.ಎಸ್.ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಬಾರಿ ರಾಮದಾಸ್ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿದ್ದಾರೆ.
ಮೈಸೂರು ಬಿಜೆಪಿ ನಗರಾಧ್ಯಕ್ಷರಾದ ಶ್ರೀವತ್ಸ ಅವರು ಬಿ.ಎಲ್.ಸಂತೋಷ ಅವರ ಆಪ್ತ ಎಂದೇ ಗುರುತಿಸಿಕೊಂಡಿದ್ದಾರೆ. ಇದರ ನಡುವೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ವಿ.ರಾಜೀವ್ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದರು. ರಾಮದಾಸ್ ಅವರಿಗೆ ಟಿಕೆಟ್ ನೀಡಬಾರದೆಂದು ಇಲ್ಲಿನ ಬ್ರಾಹ್ಮಣರ ಸಂಘ ಒತ್ತಾಯಿಸಿತ್ತು.
ರಾಮದಾಸ್ ವಿರುದ್ಧ ಬ್ರಾಹ್ಮಣರ ಸಂಘ
ಕೆಲವು ದಿನಗಳ ಹಿಂದೆ ಮೈಸೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣರ ಸಂಘದ ಮುಖಂಡರು, “ರಾಮದಾಸ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಬಾರದು. ಮೂರು ಪಕ್ಷಗಳಿಂದಲೂ ಬ್ರಾಹ್ಮಣ ಅಭ್ಯರ್ಥಿಗಳಿಗೇ ಟಿಕೆಟ್ ಕೊಡಬೇಕು” ಎಂದು ಆಗ್ರಹಿಸಿದ್ದರು.
“ಕೆ.ಆರ್.ಕ್ಷೇತ್ರದ ಹಾಲಿ ಶಾಸಕ ರಾಮದಾಸ್ ಅವರು ಬ್ರಾಹ್ಮಣರ ಸಮಸ್ಯೆಗಳಿಗೆ ಸ್ಪಂದಿಸಲು ವಿಫಲರಾಗಿದ್ದಾರೆ. ಬಿಜೆಪಿ ಇವರಿಗೆ ಟಿಕೆಟ್ ನೀಡಿದರೆ ಬ್ರಾಹ್ಮಣರು ಯಾವ ಅಭ್ಯರ್ಥಿಯನ್ನೂ ಬೆಂಬಲಿಸದ ’ನೋಟಾ’ ಮತದಾನ ಮಾಡಲಿದ್ದಾರೆ. ರಾಮದಾಸ್ ಹೊರತುಪಡಿಸಿ ಅರ್ಹರಿಗೆ ಟಿಕೆಟ್ ನೀಡಬೇಕು” ಎಂದು ಒತ್ತಾಯಿಸಿದ್ದರು.
ಇದಕ್ಕೆ ರಾಮದಾಸ್ ಪ್ರತಿಕ್ರಿಯೆ ನೀಡಿ, “ಕೆ.ಆರ್.ಕ್ಷೇತ್ರದಲ್ಲಿ ಕಳೆದ 2-3 ತಿಂಗಳಿಂದ ಕೆಲವರು ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಿ ಸಮಾಜ ಒಡೆಯುವ ಕೆಲಸ ಮಾಡುತ್ತಿರುವುದು ದುರ್ದೈವದ ಸಂಗತಿ. ಬಿಜೆಪಿ ಅಭಿವೃದ್ಧಿಯ ಮಂತ್ರ ಪಠಿಸುತ್ತದೆಯೇ ಹೊರತು, ಅನ್ಯ ವಿಚಾರಗಳತ್ತ ಗಮನ ಹರಿಸುವುದಿಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಸಾಬೀತು ಮಾಡಿದ್ದಾರೆ. ಆ ದಿಕ್ಕಿನಲ್ಲಿ ನಮ್ಮೆಲ್ಲರ ಚಿತ್ತ ಇರಬೇಕು” ಎಂದು ಹೇಳಿಕೆ ನೀಡಿದ್ದರು.
“ಕಳೆದೆರಡು ಚುನಾವಣೆಗಳ ಸಂದರ್ಭದಲ್ಲಿಯೂ ರಾಮದಾಸ್‌ಗೆ ಟಿಕೆಟ್ ನೀಡಬಾರದೆಂಬ ಕೂಗು ಎದ್ದಿತ್ತು. ಆದರೂ ಟಿಕೆಟ್ ಪಡೆದು ರಾಮದಾಸ್ ಗೆಲುವು ಸಾಧಿಸಿದ್ದರು. ಈ ಸಲವೂ ಹಾಗೆಯೇ ಆದರೂ ಆಶ್ಚರ್ಯವಿಲ್ಲ” ಎಂದೇ ಊಹಿಸಲಾಗಿತ್ತು. “ಒಂದು ವೇಳೆ ಬ್ರಾಹ್ಮಣ ಅಭ್ಯರ್ಥಿಗಳು ಇಬ್ಬರು ಅಥವಾ ಮೂವರು ಚುನಾವಣೆಯಲ್ಲಿ ನಿಂತರೆ ಮತ ವಿಭಜನೆಯಾಗಿ ಬಿಜೆಪಿ ಅಭ್ಯರ್ಥಿಗೆ ಸೋಲಾಗಬಹುದು” ಎನ್ನುತ್ತಾರೆ ಸ್ಥಳೀಯರು.
ಪ್ರತಾಪ್ ಸಿಂಹ ವರ್ಸಸ್ ರಾಮದಾಸ್
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮತ್ತು ರಾಮದಾಸ್ ನಡುವೆ ಸಂಬಂಧವೇನೂ ಅಷ್ಟಾಗಿ ಚೆನ್ನಾಗಿಲ್ಲ. ನಾಯಕತ್ವದ ಪೈಪೋಟಿಯೋ, ವೈಯಕ್ತಿಕ ಈರ್ಷ್ಯೆಯೋ ಆಗಾಗ್ಗೆ ಈ ಇಬ್ಬರ ನಡುವೆ ಕಿತ್ತಾಟ ನಡೆಯುತ್ತಿರುವುದನ್ನು ಮೈಸೂರಿನ ಜನತೆ ಗಮನಿಸುತ್ತಿದ್ದಾರೆ.
“ಮೈಸೂರು ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜು ಬಳಿ ನಿರ್ಮಿಸಿರುವ ಬಸ್ ನಿಲ್ದಾಣದ ಮೇಲಿನ ಗುಮ್ಮಟ(ಗುಂಬಜ್)ದ ಮಾದರಿಯ ವಿನ್ಯಾಸವನ್ನು ಕೆಡವುತ್ತೇನೆ” ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. “ಇದು ಗುಂಬಜ್ ಮಾದರಿಯ ಕಟ್ಟಡವಲ್ಲ, ಅರಮನೆ ಶೈಲಿಯ ಕಟ್ಟಡ” ಎಂದು ಈ ಭಾಗದ ಶಾಸಕರಾದ ರಾಮದಾಸ್ ಹೇಳಿಕೆ ನೀಡಿದ್ದರು.

ಇಬ್ಬರ ನಡುವಿನ ಜಟಾಪಟಿ ಇತಿಹಾಸವು ಸುಯೇಜ್ ಫಾರಂ ವಿವಾದದಲ್ಲಿ ಸ್ಫೋಟಗೊಂಡಿತ್ತು. ಎರಡು ವರ್ಷಗಳ ಹಿಂದೆ ಸೂಯೇಜ್ ಫಾರಂ ವಿಚಾರಕ್ಕೆ ಪ್ರತಾಪ್ ಸಿಂಹ ಕೈಹಾಕಿದ್ದಕ್ಕೆ ರಾಮದಾಸ್ ಸಿಡಿಮಿಡಿಗೊಂಡಿದ್ದರು. ತನ್ನ ಕ್ಷೇತ್ರದ ವಿಚಾರದಲ್ಲಿ ಸಂಸದರು ತಲೆಹಾಕುತ್ತಿರುವುದು ಶಾಸಕರಿಗೆ ಇರಸುಮುರುಸು ಉಂಟು ಮಾಡಿತ್ತು.
ಕೆಲವು ತಿಂಗಳ ಹಿಂದೆ ಇಬ್ಬರ ನಡುವೆ ಪೈಪೋಟಿ ಮತ್ತೆ ಮುನ್ನಲೆಗೆ ಬಂದಿತು. ನಗರದಲ್ಲಿ ರಸ್ತೆಗಳನ್ನು ಅಗೆದು ಗ್ಯಾಸ್ ಪೈಪ್‌ಲೈನ್‌ಗಳನ್ನು ಹಾಕುವ ಯೋಜನೆಯನ್ನು ರಾಮದಾಸ್ ಕೆಲವು ತಿಂಗಳ ಹಿಂದಷ್ಟೇ ವಿರೋಧಿಸಿದ್ದರು. ಅದಕ್ಕೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, “ಗ್ಯಾಸ್ ಪೈಪ್‌ಲೈನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲವಿದೆ” ಎಂದಿದ್ದರು.
ಪ್ರಧಾನಿ ಮೋದಿಯವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬರಲಿದ್ದರು. ಇದರಲ್ಲಿ ಮೈಲೇಜ್ ಪಡೆಯುವುದಕ್ಕಾಗಿ ಸಂಸದರು, ಶಾಸಕರು ಪ್ರಯತ್ನಿಸಿದ್ದರು. ಎಷ್ಟು ಜನರನ್ನು ಕಾರ್ಯಕ್ರಮಕ್ಕೆ ಸೇರಿಸಲಾಗುತ್ತದೆ ಎಂಬ ವಿಚಾರವಾಗಿಯೂ ಮಾಧ್ಯಮಗಳೆದುರು ಈ ಇಬ್ಬರು ಬಿಜೆಪಿಗರು ಕಿತಾಪತಿ ಮಾಡಿಕೊಂಡಿದ್ದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನಾಗಮಂಗಲ: ರಾಜಕೀಯ ಜಿದ್ದಾಜಿದ್ದಿನಲ್ಲಿ ಚಲುವರಾಯಸ್ವಾಮಿ ಮೇಲುಗೈ
ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಪ್ರತಾಪ್ ಸಿಂಹ, “ಮೈಸೂರು ಅರಮನೆ ಮೈದಾನದಲ್ಲಿ ಒಬ್ಬರು ಯೋಗ ಮಾಡಬೇಕಾದರೆ 6×6 ಜಾಗ ಬೇಕಾಗುತ್ತದೆ. ಅದರನ್ವಯ ಅರಮನೆ ಮೈದಾನದಲ್ಲಿ ಏಳರಿಂದ ಎಂಟು ಸಾವಿರ ಜನ ಸೇರಬಹುದು” ಎಂದು ಹೇಳಿದ್ದರು. ಸಂಸದರು ಮಾತನಾಡುತ್ತಿರುವಾಗಲೇ ರಾಮದಾಸ್ ಮಾತಿಗೆ ಮುಂದಾಗಿ, “ಕಾರ್ಯಕ್ರಮಕ್ಕೆ ಬರುವುದಾಗಿ ಈಗಾಗಲೇ 15 ಸಾವಿರ ಜನರು ಬುಕ್ ಮಾಡಿದ್ದಾರೆ” ಎಂದಿದ್ದರು. ಅದಕ್ಕೆ ಪ್ರತಾಪ್, “ನಾನು ಮಾತನಾಡುತ್ತಿದ್ದೇನೆ. ರಾಮದಾಸ್ ಅವರು ಸಮಾಧಾನದಿಂದ ಇರಬೇಕು” ಎಂದಿದ್ದು ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು. ನಂತರ ಪ್ರತಿಕ್ರಿಯಿಸಿದ್ದ ರಾಮದಾಸ್, “ಸಂಸದರಿಗೆ ಮಾಹಿತಿ ಇರಲಿಲ್ಲ. ಅದಕ್ಕಾಗಿ ಮಾತನಾಡಿದೆ. ಈಗಾಗಲೇ ನಮಗೆ ಕ್ಲಿಯರೆನ್ಸ್ ಸಿಕ್ಕಿರುವುದು ಸಂಸದರಿಗೆ ಗೊತ್ತಿರಲಿಲ್ಲ. ನಿಮಗೆ ಗೊಂದಲವಾಗಬಾರದು ಎಂದು ಮಾತಿನ ಮಧ್ಯೆ ಸ್ಪಷ್ಟನೆ ನೀಡಿದೆ” ಎಂದು ಸಮರ್ಥಿಸಿಕೊಂಡಿದ್ದರು.
ಇಂತಹ ಕಾಲೆಳೆದಾಟ ಬಿಜೆಪಿ ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ರವಾನಿಸುತ್ತದೆ ಎಂದು ಭಾವಿಸುತ್ತಾರೆ ಕ್ಷೇತ್ರದ ಜನತೆ.
ಮತ ವಿಭಜಿಸುವುದೇ ಜೆಡಿಎಸ್?
ಮತ್ತೊಂದೆಡೆ ಜಾ.ಜದಳದಿಂದ ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಈ ಬಾರಿಯು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಸಜ್ಜನಿಕೆಯ ರಾಜಕಾರಣಿಯೆಂದೂ ಗುರುತಿಸಿಕೊಂಡಿರುವ ಮಲ್ಲೇಶ್ ಪ್ರಬಲ ಲಿಂಗಾಯತ ಸಮುದಾಯದವರು. ಒಂದು ವೇಳೆ ಮಲ್ಲೇಶ್ ಅವರು ಬಿಜೆಪಿಯಿಂದ ಒಂದಿಷ್ಟು ಮತಗಳನ್ನು ಕಸಿದರೂ ಕಾಂಗ್ರೆಸ್‌ಗೆ ವರದಾನವಾಗುತ್ತದೆ ಎಂಬ ಲೆಕ್ಕಾಚಾರಗಳು ಇವೆ.

ಕ್ಷೇತ್ರದಲ್ಲಿ ಎಂ.ಕೆ.ಎಸ್. ತಿರುಗಾಟ
ಕಾಂಗ್ರೆಸ್ ಟಿಕೆಟ್ ಪಡೆದಿರುವ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪಾದಯಾತ್ರೆ ಆರಂಭಿಸಿದ್ದಾರೆ. ಕ್ಷೇತ್ರದ ಪ್ರತಿ ಮನೆಮನೆಗೂ ಭೇಟಿ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿನ ದಲಿತ ಕೇರಿಗಳಿಗೆ ಎಡೆಬಿಡದೆ ಹೋಗುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆ. ಇದು ಎಂಕೆಎಸ್‌ಗೆ ಸಹಾಯ ಮಾಡುವುದೇ ಎಂಬ ಕುತೂಹಲ ಕ್ಷೇತ್ರದಲ್ಲಿದೆ.
ರಾಮದಾಸ್‌ಗಿದೆ ಪ್ರತ್ಯೇಕ ಟೀಮ್
“ರಾಮದಾಸ್ ಅವರ ಪರ ಪ್ರಚಾರ ಮಾಡಲು ಬಿಜೆಪಿಯ ಕಾರ್ಯಕರ್ತರೇ ಬೇಕಿಲ್ಲ. ಅಂದರೆ, ರಾಮದಾಸ್ ತಮ್ಮದೇ ಆದ ಒಂದು ತಂಡವನ್ನು ಕಟ್ಟಿಕೊಂಡಿದ್ದಾರೆ. ರಾಮದಾಸ್ ಪರ ಎಲ್ಲ ರೀತಿಯ ಪ್ರಚಾರವನ್ನು ಆ ತಂಡ ನಿರಂತರವಾಗಿ ಮಾಡುತ್ತಾ ಹೋಗುತ್ತದೆ. ಅವರನ್ನು ಬಿಜೆಪಿ ಕಾರ್ಯಕರ್ತರು ಎನ್ನಲಾಗದು, ಸಂಪೂರ್ಣವಾಗಿ ರಾಮದಾಸ್ ಪರ ಕೆಲಸ ಮಾಡುವವರು ಎನ್ನುತ್ತಾರೆ” ಕ್ಷೇತ್ರವನ್ನು ಬಲ್ಲ ಪರಿಣಿತರು.
“ಯಾವುದೇ ಹಬ್ಬ ಹರಿದಿನವಾದರೂ ಕ್ಷೇತ್ರದ ಪ್ರತಿ ಮನೆಗೂ ಶುಭಾಶಯಗಳನ್ನು ಕಳುಹಿಸುವ ಕೆಲಸವನ್ನು ರಾಮದಾಸ್ ವ್ಯವಸ್ಥಿತವಾಗಿ ಮಾಡುತ್ತಾ ಬಂದಿದ್ದಾರೆ. ಅದರ ಹಿಂದೆ ಈ ತಂಡದ ಅವಿರತ ಕೆಲಸವಿದೆ” ಎನ್ನುತ್ತಾರೆ ರಾಮದಾಸ್ ತಂತ್ರಗಾರಿಕೆಗಳನ್ನು ಬಲ್ಲವರು.
ಬಂಡಾಯದ ಸೂಚನೆ ನೀಡಿರುವ ರಾಮದಾಸ್, ಬಿಜೆಪಿಯನ್ನು ತೊರೆಯುತ್ತಾರೋ ಅಥವಾ ಪಕ್ಷೇತರವಾಗಿ ನಿಲ್ಲುತ್ತಾರೋ ಎಂಬುದು ಸದ್ಯದ ಕುತೂಹಲ. ಒಂದು ವೇಳೆ ರಾಮದಾಸ್ ಬಂಡಾಯವೆದ್ದರೆ ಕ್ಷೇತ್ರದಲ್ಲಿ ಬಿಜೆಪಿ ಒಡೆದ ಮನೆಯಾಗುತ್ತದೆ.



