Homeಚಳವಳಿಲೈಂಗಿಕ ದೌರ್ಜನ್ಯಗಳ ವಿರುದ್ಧ ’ದಂಗೆ’ಯೇಳುವುದು ಅಪರಾಧವೇ?

ಲೈಂಗಿಕ ದೌರ್ಜನ್ಯಗಳ ವಿರುದ್ಧ ’ದಂಗೆ’ಯೇಳುವುದು ಅಪರಾಧವೇ?

- Advertisement -
- Advertisement -

ಕೆನಡಾ ಎಂಬ ದೇಶದಲ್ಲಿ…….

ಐಸ್ ಹಾಕಿ ಕ್ರೀಡೆಗೆ ಮತ್ತು ಕ್ರೀಡಾಭಿಮಾನಕ್ಕೆ ಹೆಸರುವಾಸಿಯಾದ ಕೆನಡಾ ದೇಶದಲ್ಲಿ ಸ್ವಲ್ಪ ಸಮಯದ ಹಿಂದೆ ಅತ್ಯಾಚಾರ, ಸಾಮೂಹಿಕ ಲೈಂಗಿಕ ಹಿಂಸಾಚಾರದ ಪ್ರಕರಣಗಳ ವಿವಾದ ತಲೆದೋರಿತ್ತು; ಅಲ್ಲಿನ ಐಸ್ ಹಾಕಿ ಕ್ರೀಡಾಪಟುಗಳ ಸುತ್ತ ಎದ್ದ ಈ ವಿವಾದಗಳನ್ನು ನಿಭಾಯಿಸುವ ವಿಚಾರದಲ್ಲಿ ಸರಿಯಾದ ಧೋರಣೆ ತೋರಿಲ್ಲವೆಂದು ವ್ಯಕ್ತವಾದ ತೀವ್ರ ವಿರೋಧದ ಕಾರಣಕ್ಕೆ, ಆ ದೇಶದ ಹಾಕಿ ಕ್ರೀಡೆಯ ಅತ್ಯುನ್ನತ ಸಂಸ್ಥೆಯಾದ ’ಹಾಕಿ ಕೆನಡಾ’ ತನ್ನ ಸಿಇಓ ಮತ್ತು ಇಡೀ ಬೋರ್ಡ್‌ಅನ್ನು ಅವರ ಸ್ಥಾನಗಳಿಂದ ಕೆಳಗಿಳಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಹಾಕಿ ಕೆನಡಾ ಸಂಸ್ಥೆಯು, ’ಹೊಸ ನಾಯಕತ್ವ ಮತ್ತು ಸೂಕ್ತ ದೃಷ್ಟಿಕೋನ’ದ ಅಗತ್ಯವನ್ನು ಮನಗಂಡು ಈ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ 18 ವರ್ಷಕ್ಕಿಂತ ಕೆಳಗಿನ ವಯಸ್ಸಿನವರ ಹಾಕಿ ತಂಡದ ಸದಸ್ಯರ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿದ ಆರೋಪ ಕೇಳಿಬಂದಾಗಿನಿಂದ ತೀವ್ರವಾದ ಆಕ್ರೋಶವನ್ನು ಈ ಕ್ರೀಡೆಯ ರಾಷ್ಟ್ರೀಯ ಆಡಳಿತ ಮಂಡಳಿ ಎದುರಿಸಿತ್ತು. ದೂರು ನೀಡಿದವರು ಕ್ರೀಡೆಗೆ ಸಂಬಂಧಿಸಿರದಿದ್ದಾಗ್ಯೂ ಈ ವಿಚಾರದಲ್ಲಿ ತ್ವರಿತವಾದ ನ್ಯಾಯ ದೊರೆಯಬೇಕೆಂಬ ಆಗ್ರಹ ಸಮಾಜದಿಂದ ಬಂತು. ಕಳೆದ 30 ವರ್ಷಗಳಲ್ಲಿ ಇಂತಹ ಘಟನೆಗಳು ಆಗಾಗ್ಗೆ ನಡೆದಿದ್ದವು ಎಂಬ ವಿಷಯ ತಿಳಿದ ಮೇಲಂತೂ ಕೆನಡಾದ ಒಕ್ಕೂಟ ಸರ್ಕಾರ ಈ ಕ್ರೀಡೆಗೆ ನೀಡುತ್ತಿದ್ದ ಅನುದಾನವನ್ನು ಸಂಪೂರ್ಣ ಸ್ಥಗಿತಗೊಳಿಸಿ, ಎಲ್ಲವನ್ನೂ ತುರ್ತಾಗಿ ಸರಿಪಡಿಸಿಕೊಳ್ಳಿ ಎಂಬ ಕಟುವಾದ ಸಂದೇಶ ನೀಡಿತ್ತು. ಅದರಂತೆ ಈಗ ಆ ಸಂಸ್ಥೆಯು ನ್ಯಾಯಯುತವಾದ ರೀತಿಯಲ್ಲಿ ನಡೆದುಕೊಳ್ಳುವ ಭರವಸೆಯನ್ನು ನಾಗರಿಕರಿಗೆ ನೀಡುತ್ತಾ ಹೊಸ ಆಡಳಿತ ಮಂಡಳಿ ರಚಿಸುವ ಪ್ರಯತ್ನಕ್ಕೆ ತೊಡಗಿದೆ.

ಭಾರತ ಎಂಬ ದೇಶದಲ್ಲಿ……….

ದೆಹಲಿಯಲ್ಲಿ ತಮ್ಮ ಮೇಲಿನ ಲೈಂಗಿಕ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ಕುಸ್ತಿಪಟುಗಳು, ಅವರ ಬೆನ್ನಿಗೆ ನಿಂತಿರುವ ಪುರುಷ ಕುಸ್ತಿಪಟುಗಳು ಮತ್ತು ಅವರ ಬೆಂಬಲಿಗರ ಮೇಲೆ ’ದಂಗೆಕೋರರು’ ಮತ್ತು ಶಾಂತಿ-ಸುವ್ಯವಸ್ಥೆ ಕದಡಿದವರು ಎಂಬ ಆರೋಪವನ್ನು ಸರ್ಕಾರ ಹೊರಿಸಿದೆ. ಅತ್ಯಂತ ಕೆಟ್ಟ ರೀತಿಯಲ್ಲಿ ಅವರೊಂದಿಗೆ ನಡೆದುಕೊಂಡಿರುವುದು ಮಾತ್ರವಲ್ಲದೆ, ಪ್ರತಿಭಟನೆಗೆಂದು ಅವರು ಜಂತರ್ ಮಂತರ್ ಬಳಿ ಹಾಕಿಕೊಂಡಿದ್ದ ಟೆಂಟುಗಳನ್ನು ಪೊಲೀಸರು ಒತ್ತಾಯಪೂರ್ವಕವಾಗಿ ತೆರವುಗೊಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಕುಸ್ತಿಪಟುಗಳಿಗೆ ಗುಂಡು ಹೊಡೆಯುವುದಾಗಿ ಹೆದರಿಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿಕೆ ನೀಡಿದ್ದ ಮಹಿಳಾ ಹೋರಾಟಗಾರ್ತಿಯರನ್ನು ಮನೆಗಳಿಂದಲೇ ಬಂಧಿಸಿ ಕರೆದೊಯ್ದಿದ್ದಾರೆ.

ಬ್ರಿಜ್ ಭೂಷಣ್ ಸಿಂಗ್

ಯಾವ ಅಧಿಕಾರ ಸ್ಥಾನದಲ್ಲಿರುವ ವ್ಯಕ್ತಿಯ ಮೇಲೆ ಈ ಆರೋಪಗಳು ಬಂದಿವೆಯೋ, ಆಳುತ್ತಿರುವ ಸರ್ಕಾರದ ಸಂಸದನಾಗಿರುವ ಆ ಬ್ರಿಜ್ ಭೂಷಣ್ ಎಂಬ ವ್ಯಕ್ತಿ ಇಂದಿಗೂ ಸಂಪೂರ್ಣ ಅಧಿಕಾರ ಮತ್ತು ಅದರ ಎಲ್ಲ ಸವಲತ್ತುಗಳನ್ನೂ ಸುಖವಾಗಿ ಅನುಭವಿಸುತ್ತಿದ್ದಾನೆ. ಮತ್ತು ಇದೆಲ್ಲದಕ್ಕೂ ಕಲಶವಿಟ್ಟಂತೆ ಈ ದೇಶದ ಪ್ರಧಾನಿ ತಾನು ತಿರುಗಾಡುವ ರಸ್ತೆಯಿಂದ ಕೆಲವೇ ಕಿಲೋಮೀಟರ್‌ಗಳ ಅಂತರದಲ್ಲಿ ಇಂತಹದ್ದೊಂದು ಮನಕಲಕುವ ಘಟನೆ ನಡೆಯುತ್ತಲೇ ಇಲ್ಲವೇನೋ ಎಂಬಂತೆ ಗಾಢಮೌನವನ್ನು ನಟಿಸುತ್ತಿದ್ದಾರೆ.

ಲೈಂಗಿಕ ಹಿಂಸಾಚಾರವನ್ನು ವಿರೋಧಿಸುವುದರಿಂದ ’ಶಾಂತಿ-ಸುವ್ಯವಸ್ಥೆ’ ಕದಡುತ್ತದೆಂದಾದರೆ………..

ಶೋಷಿತರ, ಸಾಮಾನ್ಯ ಪ್ರಜೆಗಳ ದಮನಗಳು ಪ್ರತಿದಿನದ ವಿದ್ಯಮಾನವಾಗುತ್ತಿರುವಾಗ, ಭಾರತದ ಮಟ್ಟಿಗೆ ಮತ್ತೊಂದು ಕಳಂಕವನ್ನು ತಂದ ದಿನವಾಗಿ 28 ಮೇ ಭಾನುವಾರ ನೆನಪಿನಲ್ಲಿ ಉಳಿಯಲಿದೆ. ಅಂದು, ಒಂದೆಡೆ ಪ್ರಜಾತಂತ್ರದ ಮೂರ್ತರೂಪವಾದ ಸಂಸತ್‌ಭವನವನ್ನು ಸಾಮಂತಶಾಹಿ ಕಾಲದ ರಾಜಮಹಾರಾಜರು ನಡೆಸುತ್ತಿದ್ದ ಯಜ್ಞಯಾಗಗಳನ್ನು ಹೋಲುವಂತೆ ಬ್ರಾಹ್ಮಣರನ್ನು ತುಂಬಿಸಿಕೊಂಡು ಉದ್ಘಾಟನೆಯ ಪ್ರಹಸನ ನಡೆಸುತ್ತಿದ್ದರೆ, ಮತ್ತೊಂದೆಡೆ ಜನತೆಯ ಕೈಯ್ಯಲ್ಲಿರುವ ಪ್ರಜಾತಂತ್ರದ ಮುಖ್ಯ ಸಾಧನವಾದ ಪ್ರತಿಭಟನೆಯ ಹಕ್ಕನ್ನು ರಾಜಾರೋಷವಾಗಿ ಸರ್ಕಾರದ ಯಂತ್ರಾಂಗ ಕಸಿದೊಗೆಯುತ್ತಿರುವುದು ಕಾಣುತ್ತಿತ್ತು. ಮೊದಲೇ ಸರ್ಕಾರದ ಗಮನಕ್ಕೆ ತಂದು ಶಾಂತಿಯುತವಾಗಿ ಸಂಸತ್ ಭವನಕ್ಕೆ ಮೆರವಣಿಗೆ ಹೋಗಲು ಬಯಸಿದ್ದ ಕುಸ್ತಿಪಟುಗಳ ಮೇಲೆ ಕ್ರೂರ ಮೃಗಗಳಂತೆ ಬಿದ್ದು ಎಳೆದಾಡಿದ್ದಷ್ಟೇ ಅಲ್ಲದೆ ದಂಗೆಕೋರರ ಮೇಲೆ ಹೊರಿಸುವ ಅಪರಾಧಗಳನ್ನು ಪ್ರತಿಭಟನಾಕಾರರ ಮೇಲೂ ಹೊರಿಸಲಾಗಿದೆ. ಸುದೀರ್ಘ ಕಾಲ ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳದ ಬಗ್ಗೆ ಬೇರೆಬೇರೆ ರೀತಿಗಳಲ್ಲಿ ನ್ಯಾಯನೀಡುವಂತೆ ಕೇಳುವುದು; ಲೈಂಗಿಕ ಕಿರುಕುಳದ ಆರೋಪಿ, ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್‌ನನ್ನು ಸ್ಥಾನದಿಂದ ಕೆಳಗಿಳಿಸಿ ಬಂಧಿಸುವಂತೆ ಆಗ್ರಹಿಸುವುದು; ಸರ್ಕಾರದ ಕೋರಿಕೆಯ ಮೇರೆಗೆ ಪ್ರತಿಭಟನೆಗಳನ್ನು ಹಿಂಪಡೆದು ನ್ಯಾಯದ ಹಾದಿ ಕಾಯುತ್ತಲೇ ಬಂದ ಕುಸ್ತಿಪಟುಗಳು ಕೊನೆಗೊಮ್ಮೆ ಬೇಸತ್ತು ಬೀದಿಗಿಳಿಯುವುದು ತಪ್ಪೇ? ಅನ್ಯಾಯವನ್ನು ಪ್ರತಿಭಟಿಸುವುದರಿಂದ, ಪ್ರಶ್ನಿಸುವುದರಿಂದ ’ಶಾಂತಿ-ಸುವ್ಯವಸ್ಥೆ’ ಕದಡುತ್ತದೆಂದು ಹೇಳುವುದಾದರೆ ಅದು ಇನ್ನೆಂತಹ ಸುವ್ಯವಸ್ಥೆ? ದೇಶಕ್ಕೆ ಹೆಮ್ಮೆ ತಂದ ಪುತ್ರಿಯರಿಂದು ಕಣ್ಣೀರುಗರೆಯುತ್ತಿದ್ದರೂ ದೇಶ ’ಶಾಂತ’ವಾಗಿರುತ್ತದೆಂದಾದರೆ ಅದಿನ್ನೆಂತಹ ದೇಶ?

ಅತ್ಯಾಚಾರದ ಸುತ್ತಲಿನ ಮಿಥ್ಯೆಗಳಿಗೆ ಮಹಿಳೆಯರೇ ಎಂದಿಗೂ ಬಲಿಪಶುಗಳಾಗಿರಬೇಕೆ?

ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರ, ಕಿರುಕುಳಗಳ ವಿರುದ್ಧ ದನಿಯೆತ್ತುವ ಮಹಿಳೆಯರ ದನಿಯಡಗಿಸಲು ಅನೇಕ ಮಿಥ್ಯೆಗಳನ್ನು ಸಮಾಜ ಸೃಷ್ಟಿಸಿ ಹರಿಬಿಡುತ್ತಲೇ ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಅಪಖ್ಯಾತಿಗೊಳಿಸಲು ಬಳಸುವ ಇಂತಹ ’ಅತ್ಯಾಚಾರ ಪುರಾಣ’ಗಳ ಬಗ್ಗೆ ಸಾರ್ವಜನಿಕರ ತಿಳಿವಳಿಕೆಯನ್ನು ಬದಲಾಯಿಸಲು ಮಹಿಳಾಪರರೂ ಕೂಡಾ ದಶಕಗಳಿಂದ ಸ್ಥಿರವಾಗಿ ಕೆಲಸ ಮಾಡಿದ್ದಾರೆ. ಅತ್ಯಾಚಾರ ಸಂಸ್ಕೃತಿ ಮತ್ತು ಅದರ ವ್ಯವಸ್ಥಿತ ಬೇರುಗಳು ಸಮಾಜದಲ್ಲಿ ಅತ್ಯಂತ ಆಳವಾಗಿ ಇಳಿದಿವೆಯೆಂಬ ಮತ್ತು ಅವನ್ನು ಕೊನೆಗೊಳಿಸುವ ಅಗತ್ಯದ ಬಗ್ಗೆ ಈಗ ವ್ಯಾಪಕವಾದ ಒಮ್ಮತವಿದೆಯಾದರೂ, ಇದು ಕಡುಕಷ್ಟದ ಹಾದಿಯೆಂಬುದು, ಇಂದು ಕುಸ್ತಿಪಟುಗಳಿಗಾಗುತ್ತಿರುವ ಗತಿ ನೋಡಿದಾಗ ಸ್ಪಷ್ಟಗೊಳ್ಳುತ್ತದೆ. ಭಾರತದ ಬ್ರಾಹ್ಮಣೀಯ ಪಿತೃಪ್ರಧಾನ ವ್ಯವಸ್ಥೆ, ಎಲ್ಲಿಯತನಕ ಮಹಿಳೆ ಪುರುಷಪ್ರಧಾನ ಮೌಲ್ಯಗಳಿಗೆ ಅಡಿಯಾಳಾಗಿ, ಅವರಿಚ್ಛೆಗೆ ತಕ್ಕಂತಾಡುವ ತೊಗಲು ಗೊಂಬೆಯಾಗಿರಬಲ್ಲಳೋ ಅಲ್ಲಿಯವರೆಗೆ ಇನ್ನಿಲ್ಲದಂತಹ ರೀತಿಗಳಲ್ಲಿ ಹಾಡಿ ಹೊಗಳುತ್ತದೆ; ಆದರೆ ಅದೇ ಜಾಗದಲ್ಲಿ ಮಹಿಳೆಯರ ಪ್ರಶ್ನಿಸುವ ದನಿ ಕೇಳಿದ್ದೇ ಆದರೆ ಆ ದನಿಯಡಗಿಸಲು ಎಂತಹ ಕ್ರೌರ್ಯವನ್ನು ಬೇಕಾದರೂ ಪ್ರದರ್ಶಿಸುತ್ತದೆ. ಇವಕ್ಕೆಲ್ಲ ಮೂಲದಲ್ಲಿರುವ ಜಾತಿ ಮತ್ತು ಲಿಂಗಾಧಾರಿತವಾದ ಶ್ರೇಣೀಕರಣದ ವ್ಯವಸ್ಥೆಯನ್ನು ಬಿಡಿಸಿ ಸಮಾಜದ ಮುಂದಿಟ್ಟವರು ಡಾ. ಅಂಬೇಡ್ಕರ್‌ರವರು. ಭಾರತದ ಜಾತಿಗಳಲ್ಲಿ ಅಸ್ತಿತ್ವಕ್ಕೆ ತರಲ್ಪಟ್ಟಿರುವ ಬ್ರಾಹ್ಮಣೀಯ ’ಒಳವಿವಾಹ ಪದ್ಧತಿ (ಎಂಡೋಗಮಿ)’ ಒಂದೆಡೆ ಜಾತಿ ವ್ಯವಸ್ಥೆಯನ್ನೂ ಮತ್ತೊಂದೆಡೆ ಪಿತೃಪ್ರಧಾನತೆಯನ್ನೂ ಬಲಗೊಳಿಸುವ ತಂತ್ರವಾಗಿ ಹೇಗೆ ಕೆಲಸ ಮಾಡುತ್ತದೆಂದು ಅವರು ವಿವರಿಸಿದರು. ಅಷ್ಟೇ ಅಲ್ಲದೆ, ಒಳವಿವಾಹದ ಕಟ್ಟಳೆಗಳು ಸಡಿಲಾಗಬಾರದೆಂಬ ಕಾರಣಕ್ಕಾಗಿ ಸೃಷ್ಟಿಯಾಗಿರುವ ಶಿಶುವಿವಾಹ, ವಿಧವಾ ದಹನ, ಸತಿಯಂತಹ ಕ್ರೂರ ಪದ್ಧತಿಗಳಿಗೂ ಒಂದು ತಾರ್ಕಿಕ ಅರ್ಥೈಸುವಿಕೆಯನ್ನು ಬಾಬಾಸಾಹೇಬರು ಕೊಟ್ಟರು. ಇಂದು ನಾವು ಅದರ ಇನ್ನಷ್ಟು ಭಯಂಕರವಾದ ಅನೇಕ ರೂಪಗಳನ್ನು ಕಾಣುತ್ತಿದ್ದೇವೆ.

ದುರಂತದ ಸಂಗತಿಯೆಂದರೆ, ಸಮಾಜದಲ್ಲಿ ಯಾವುದಾದರೊಂದು ಬಗೆಯ ಶಕ್ತಿಯನ್ನು (ಜಾತಿ, ಆಸ್ತಿ, ಗಟ್ಟಿಯಾದ ಹಿನ್ನೆಲೆ ಅಥವಾ ಇನ್ಯಾವುದಾದರೊಂದು) ಹೊಂದಿಲ್ಲದ ತಳಸಮುದಾಯಗಳ ಅಥವಾ ಅತ್ಯಂತ ಕುಗ್ರಾಮಗಳ ಅಥವಾ ಕಡುಬಡತನದ ಕೂಪದಲ್ಲಿರುವ ಅಥವಾ ಸಮಾಜದ ದೃಷ್ಟಿಯಲ್ಲಿ ’ಗೌರವಾರ್ಹ’ರಲ್ಲದ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಮತ್ತು ಹಿಂಸಾಚಾರ ನಡೆದರೆ ಸಮಾಜವೂ ಕೂಡಾ ಕಟುವಾದ ನಿರ್ಲಿಪ್ತತೆಯನ್ನು ಪ್ರದರ್ಶಿಸುವ ಸನ್ನಿವೇಶ ಇನ್ನೂ ಹಾಗೆಯೇ ಇದೆ. ಕಾಲ ಎಷ್ಟೇ ಬದಲಾಗುತ್ತಿದೆಯೆಂದು ಕಾಣುತ್ತಿದ್ದರೂ ಈ ವಿಷಯದಲ್ಲಿ ಯಥಾಸ್ಥಿತಿಯೇ ಮೇಲುಗೈ ಸಾಧಿಸಿದೆ!

ಕ್ರೀಡೆ, ಲಿಂಗಾಧಾರಿತ ತಾರತಮ್ಯ ಮತ್ತು ಲೈಂಗಿಕ ಹಿಂಸಾಚಾರ

ಇಲ್ಲಿ ಚರ್ಚೆಯಾಗುತ್ತಿರುವುದು ಕ್ರೀಡಾಪಟುಗಳ ಕುರಿತಾದ್ದರಿಂದ, ಕ್ರೀಡೆಯ ಸಂದರ್ಭದಲ್ಲಿ ಲಿಂಗಾಧಾರಿತ ತಾರತಮ್ಯ ಮತ್ತು ಲೈಂಗಿಕ ಹಿಂಸಾಚಾರದ ಬಗ್ಗೆ ಸ್ವಲ್ಪ ಮಾತಾಡಲೇಬೇಕಿದೆ. ಮಹಿಳೆಯರು ಕ್ರೀಡೆಗೆ ಪ್ರವೇಶ ದೊರಕಿಸಿಕೊಳ್ಳುವ ಅವಕಾಶಗಳಿಂದ ಹಿಡಿದು, ಅಲ್ಲಿ ಮುಂದುವರಿಯಲು ಬೇಕಿರುವ ಬೆಂಬಲದ ವ್ಯವಸ್ಥೆಯ ತನಕ ಎಲ್ಲ ಕಡೆಗಳಲ್ಲೂ ತಾರತಮ್ಯವನ್ನು ಅನುಭವಿಸುತ್ತಾರೆ ಎಂದು ’ಯುರೋಪಿಯನ್ ದೇಶಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನಾವಕಾಶಗಳ ಸಮಿತಿ’ಯ ವರದಿಯು ಹೇಳುತ್ತದೆ.

ಜ್ವಾಲಾ ಗುಟ್ಟಾ

ಮಹಿಳಾ ಮತ್ತು ಪುರುಷ ಕ್ರೀಡಾಪಟುಗಳಿಗೆ ತರಬೇತಿಯ ಸಮಯದಲ್ಲಿ ನೀಡಲಾಗುವ ಶಿಷ್ಯವೇತನ ಅಥವಾ ವೃತ್ತಿಪರ ಕ್ರೀಡಾಪಟುಗಳ ವೇತನದಲ್ಲೂ ಎಷ್ಟೋ ದೇಶಗಳಲ್ಲಿ ಈಗಲೂ ತಾರತಮ್ಯ ಅಸ್ತಿತ್ವದಲ್ಲಿದೆ. ಸಂದರ್ಶನವೊಂದರಲ್ಲಿ ಭಾರತದ ಪ್ರಖ್ಯಾತ ಆಟಗಾರ್ತಿ ಜ್ವಾಲಾ ಗುಟ್ಟಾ, ಮಹಿಳಾ ಕ್ರೀಡಾಪಟುಗಳು ತೊಡುವ ಉಡುಗೆಯನ್ನೂ ಹೇಗೆ ವಿವಾದಾಸ್ಪದಗೊಳಿಸಲಾಗುತ್ತದೆಂಬ ತಮ್ಮ ಅನುಭವವನ್ನು ನೋವಿನಿಂದ ಹಂಚಿಕೊಂಡಿದ್ದರು.

ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳದ ತೂಗುಕಗತ್ತಿ

ಮಹಿಳಾ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಲೈಂಗಿಕ ಕಿರುಕುಳದ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ. ತರಬೇತಿ ವಿಧಾನಗಳೊಂದಿಗೆ ಪ್ರಶ್ನಾತೀತ ಅನುಸರಣೆ, ಸಾರ್ವಜನಿಕ ಪರಿಶೀಲನೆಯಿಂದ ದೂರವಿರುವ ದೀರ್ಘ ತರಬೇತಿ ಅವಧಿಗಳು ಮತ್ತು ವೈಯಕ್ತಿಕ ಮತ್ತು ಸ್ವತಂತ್ರ ತೀರ್ಮಾನಗಳನ್ನು ನಿರುತ್ಸಾಹಗೊಳಿಸುವ ಆಡಳಿತಾಂಗದಂತಹ ಅಂಶಗಳು ಮಹಿಳಾ ಕ್ರೀಡಾಪಟುಗಳನ್ನು ದುರ್ಬಲರನ್ನಾಗಿ ಮತ್ತು ಅಲ್ಪಸಂಖ್ಯಾತರನ್ನಾಗಿ ಮಾಡುವುದು ಈ ಹೆಚ್ಚಿನ ಅಪಾಯಕ್ಕೆ ಕಾರಣವಾಗಿವೆ. ಇಂತಹ ಬಹಳಷ್ಟು ದೌರ್ಜನ್ಯದ ಪ್ರಕರಣಗಳು ದಾಖಲಾಗುವುದೇ ಇಲ್ಲ, ಇಂಡಿಯನ್ ಎಕ್ಸ್‌ಪ್ರೆಸ್ 2020ರಲ್ಲಿ ಮಾಹಿತಿ ಸಂಗ್ರಹಿಸಿ ನೀಡಿದ ವರದಿಯ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಕೇವಲ 45!

ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ: ಕೇಂದ್ರ ಸರ್ಕಾರದ ನಡೆಯಿಂದ ಹರಿಯಾಣ ಬಿಜೆಪಿ ಘಟಕದಲ್ಲಿ ಅಸಮಾಧಾನ

ಇತ್ತೀಚಿಗಂತೂ ಭಾರತದಲ್ಲಿ ಕ್ರೀಡೆಯಲ್ಲಿರುವ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳಗಳು ಹಿಂದೆಂದಿಗಿಂತಲೂ ಹೆಚ್ಚಾದಂತಿವೆ. ಕಳೆದ ವರ್ಷ ಜೂನ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಹಿಳಾ ಸೈಕ್ಲಿಂಗ್ ಕ್ರೀಡಾಪಟುವೊಬ್ಬರು ತಮ್ಮ ಕೋಚ್ ಮೇಲೆ ಲೈಂಗಿಕ ಕಿರುಕುಳದ ದೂರು ನೀಡಿದರು. ದೂರಿನ ಪ್ರಕಾರ, ತರಬೇತುದಾರ ತನ್ನ ಕೋಣೆಗೆ “ಬಲವಂತವಾಗಿ” ಪ್ರವೇಶಿಸಿದ, ಅವಳಿಗೆ ’ತರಬೇತಿ ನಂತರದ ಮಸಾಜ್’ ನೀಡುವುದಾಗಿ ಸೂಚಿಸಿದ; ಆಕೆಗೆ ಕ್ರೀಡೆಯಲ್ಲಿ ಭವಿಷ್ಯವಿಲ್ಲದ ಕಾರಣ ಅವನ ಜೊತೆ ಮಲಗುವಂತೆ ಮತ್ತು ಅವನ ಹೆಂಡತಿಯಾಗುವಂತೆ ಒತ್ತಾಯಿಸಿದ ಎಂದು ದೂರಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಎರಡೂ ಆರೋಪಗಳನ್ನು ತನಿಖೆ ಮಾಡಲು ಸಮಿತಿಯನ್ನು ರಚಿಸಿವೆ.

ಇದೇ ವರ್ಷದ ಮಾರ್ಚ್‌ನಲ್ಲಿ ಹರ್ಯಾಣದ ಮಾಜಿ ವೇಗದ ಓಟಗಾರ್ತಿ ಮತ್ತು ಈಗ ಕೋಚ್ ಆಗಿರುವ ಮಹಿಳೆಯೊಬ್ಬರು ಆ ರಾಜ್ಯದ ಕ್ರೀಡಾ ಸಚಿವನಾಗಿದ್ದ ಮಾಜಿ ಹಾಕಿ ಆಟಗಾರ ಸಂದೀಪ್ ಸಿಂಗ್ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಯತ್ನದ ಆರೋಪ ಮಾಡಿದ್ದರು. ದೂರು ನೀಡಿ ಸಾಕಷ್ಟು ಸಮಯವಾಗುವ ತನಕ ಮತ್ತು ಸಮಾಜದಲ್ಲಿ ವಿರೋಧ ಪಕ್ಷಗಳಿಂದ ಮತ್ತು ಸಂಘಟನೆಗಳಿಂದ ತೀವ್ರ ವಿರೋಧ ಏಳುವ ತನಕ ಸಚಿವನನ್ನು ಬೆಂಬಲಿಸುವ ವಾತಾವರಣವೇ ಕಾಣುತ್ತಿತ್ತು. ಬಹಳಷ್ಟು ಒತ್ತಡ ಹೆಚ್ಚಿದ ನಂತರ, ಆರೋಪಿ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗಲೂ, ಹರ್ಯಾಣದ ಮುಖ್ಯಮಂತ್ರಿ ಬೇರೆ ಕಾರ್ಯಕ್ರಮವೊಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, “ಯುವ ಕೋಚ್‌ನ ಆರೋಪ ’ವಿಚಿತ್ರ’ವಾಗಿದೆ; ಕೇವಲ ಆರೋಪ ಮಾಡಿಬಿಡುವುದರಿಂದ ಯಾರೂ ದೋಷಿಯಾಗುವುದಿಲ್ಲ” ಎಂದು ಹೇಳಿದ್ದು, ಅಪರಾಧಿಗಳನ್ನೇ ಬೆಂಬಲಿಸುವ ಮನಸ್ಥಿತಿ ಎಷ್ಟು ಆಳವಾಗಿದೆಯೆಂಬುದನ್ನು ತೋರಿಸುತ್ತದೆ.

ಸಂದೀಪ್ ಸಿಂಗ್

ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಕೆನಡಾದ ಪ್ರಕರಣವನ್ನೇ ಇನ್ನಷ್ಟು ಆಳವಾಗಿ ನೋಡಿದರೆ, ಕಳೆದ ಮೇ ತಿಂಗಳಿನಲ್ಲಿ ಲೈಂಗಿಕ ಹಿಂಸೆಯ ಸುದ್ದಿಯು ಮೊದಲ ಬಾರಿಗೆ ಬೆಳಕಿಗೆ ಬಂದಾಗಿನಿಂದ, ಇನ್ನೂ ಹಲವು ಸಾಮೂಹಿಕ ಅತ್ಯಾಚಾರಗಳ ಆಪಾದನೆಗಳು ಹೊರಗಡೆ ಬಂದಿವೆ ಮತ್ತು ಕಳೆದ 30 ವರ್ಷಗಳಲ್ಲಿ ಆಟಗಾರರ ಲೈಂಗಿಕ ದುರ್ನಡತೆಯ ಕಾರಣಕ್ಕೆ ಸುಮಾರು ಎರಡು ಡಜನ್ ದೂರುದಾರರಿಗೆ ಹಲವು ಮಿಲಿಯನ್ ಡಾಲರ್‌ಗಳನ್ನು ಪಾವತಿಸಿದೆ ಎಂದು ಹಾಕಿ ಕೆನಡಾ ಬಹಿರಂಗಪಡಿಸಿದೆ. ಇತ್ತೀಚೆಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಹಣ ನೀಡಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಹಾಕಿ ಕೆನಡಾವು ಎರಡು ಖಾತೆಗಳಲ್ಲಿ ಹಣವನ್ನು ಹೊಂದಿದೆ ಎಂದು ಕೆನಡಾದ ಮಾಧ್ಯಮಗಳು ವರದಿ ಮಾಡಿವೆ.

ಆದರೆ ಭಾರತದ ಪ್ರಕರಣಕ್ಕೂ ಕೆನಡಾದ ಪ್ರಕರಣಕ್ಕೂ ಇರುವ ವ್ಯತ್ಯಾಸ ಇಷ್ಟೇ- ಈ ಎಲ್ಲ ಮಾಹಿತಿ ಬಹಿರಂಗವಾಗುತ್ತಿದ್ದಂತೆ, ಲೈಂಗಿಕ ದೌರ್ಜನ್ಯದ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಲು ದೇಶಾದ್ಯಂತ ಆಟಗಾರರ ನೋಂದಣಿ ಶುಲ್ಕದಿಂದ ಹಣಕಾಸು ಒದಗಿಸಿದ ನಿಧಿಯನ್ನು ಇನ್ನು ಮುಂದೆ ಬಳಸುವುದಿಲ್ಲ ಎಂದು ಹಾಕಿ ಕೆನಡಾ ಹೇಳಿದೆ ಮತ್ತು ಆಡಳಿತದ ಸಂಪೂರ್ಣ ಪರಿಶೀಲನೆಯನ್ನು ಘೋಷಿಸಿದೆ. ಪ್ರಾದೇಶಿಕ ಹಾಕಿ ಮಂಡಳಿಗಳು ಬದಲಾವಣೆ ನಿಚ್ಚಳವಾಗುವವರೆಗೆ ತಾವು ಕೇಂದ್ರೀಯ ಸಂಸ್ಥೆಗೆ ಪಾವತಿಸುತ್ತಿದ್ದ ಶುಲ್ಕವನ್ನು ನಿಲ್ಲಿಸುವುದಾಗಿ ಹೇಳಿವೆ. ನೈಕಿ ಮತ್ತು ಇನ್ನಿತರ ದೊಡ್ಡ ಸ್ಪಾನ್ಸರ್‌ಗಳು ಹಾಕಿ ಕೆನಡಾದೊಂದಿಗೆ ಸಂಬಂಧ ಕಡಿದುಕೊಂಡಿವೆ. ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೊರಬಂದ ತಕ್ಷಣ ಪ್ರಖ್ಯಾತ ಹಾಕಿ ಅಂಕಣಕಾರ ಜಾಕ್ ಟಾಡ್, ಮಾಜಿ ಆಟಗಾರ್ತಿ ಶೆಲ್ಡನ್ ಕೆನ್ಲೇ ಒಳಗೊಂಡಂತೆ ದೊಡ್ಡ ಸಂಖ್ಯೆಯ ಕ್ರೀಡಾತಾರೆಗಳು ನೊಂದವರನ್ನು ಬೆಂಬಲಿಸಿದ್ದಾರೆ. ದೇಶದ ಕ್ರೀಡಾ ಮಂತ್ರಿ, ಸಂಸ್ಥೆಯ ಆಡಳಿತ ಮಂಡಳಿ ಅಧಿಕಾರದಿಂದ ಕೆಳಗಿಳಿದ ಸುದ್ದಿ ಹೊರಬಂದ ತಕ್ಷಣ ’ಇದು ಕೇವಲ ಆರಂಭ ಮಾತ್ರ, ಕ್ರೀಡೆಯಲ್ಲಿ ನಿಜವಾದ ಬದಲಾವಣೆ ತರುವಂತಹ ಹೊಸ ವ್ಯವಸ್ಥೆಯು ರೂಪುಗೊಳ್ಳಬೇಕು’ ಎಂದು ಹೇಳಿಕೆ ನೀಡಿದ್ದಾರೆ.

ಯಾವ ಅಧಿಕಾರಸ್ಥರು ಮಹಿಳೆಯರನ್ನು ಕ್ರೀಡೆಯಲ್ಲಿ ಉತ್ತೇಜಿಸಬೇಕೋ ಅಂತಹವರೇ ಹೆಚ್ಚುಹೆಚ್ಚಾಗಿ ತಮ್ಮ ಅಧಿಕಾರವನ್ನೂ ದುರುಪಯೋಗಪಡಿಸಿಕೊಳ್ಳುತ್ತಾ ದನಿಯೆತ್ತುವ ಕ್ರೀಡಾಪಟುಗಳ ದನಿಯಡಗಿಸುವ ಪ್ರಯತ್ನ ಮಾಡುತ್ತಿರುವುದೊಂದು ದೊಡ್ಡ ದುರಂತ. ಈ ಮಹಿಳೆಯರೂ ಅಕ್ಷರಶಃ ತಮ್ಮ ಈ ಸಾಧನೆಗಳಿಗಾಗಿ ಬೆವರು, ರಕ್ತ ಮತ್ತು ಕಣ್ಣೀರು ಹರಿಸಿದ್ದಾರೆ. ಈಗ, ಅನ್ಯಾಯದ ವಿರುದ್ಧ ದನಿಯೆತ್ತುವಾಗ ಅವರಲ್ಲಿ ಹಲವರಿಗೆ ಪರ್ಯಾಯ ಉದ್ಯೋಗದ ಅಥವಾ ಗಟ್ಟಿಯಾದ ಕುಟುಂಬದ ಆಸರೆಯೂ ಇಲ್ಲ, ಈ ವೃತ್ತಿಯಲ್ಲಿ ಮುಂದೆ ಅವಕಾಶಗಳು ದೊರೆಯುವುದಂತೂ ಶೂನ್ಯದಷ್ಟು ಸಾಧ್ಯತೆಯಿರುವ ಸಂಗತಿಯೆಂಬುದು ’ಮೀ ಟೂ’ ಆಂದೋಲನದ ಸಮಯದಲ್ಲೇ ಗೊತ್ತಾಗಿಬಿಟ್ಟಿದೆ.

ದುಃಖದ ವಿಚಾರವೆಂದರೆ, ಮಹಿಳಾ ಕುಸ್ತಿಪಟುಗಳು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಂತೆ, ಈ ಎಲ್ಲ ಘಟನೆಗಳೂ ಬೃಹತ್ ನೀರ್ಗಲ್ಲೊಂದರ ಕೇವಲ ತುದಿಯಷ್ಟೇ! ಇಂತಹ ಪ್ರಕರಣಗಳನ್ನು ವಿಚಾರಣೆಗೊಳಪಡಿಸಿ ನ್ಯಾಯ ದೊರಕಿಸಲು ರಚನೆಯಾದ ಯಾವ ಸಂಸ್ಥೆಗಳೂ ಅಥವಾ ಸರ್ಕಾರಿ ಯಂತ್ರಾಂಗಗಳೂ ತಮ್ಮ ಕರ್ತವ್ಯ ನಿಭಾಯಿಸದೆ, ಅಪರಾಧಿಗಳ ರಕ್ಷಣೆಗೆ ನಿಂತಿರುವಾಗ, ನೊಂದ ಮಹಿಳೆಯರು ದನಿಯೆತ್ತುವ ಧೈರ್ಯ ಮಾಡುವುದಾದರೂ ಹೇಗೆ?

ಅಷ್ಟಾಗಿಯೂ ದನಿಯೆತ್ತಿದರೆ ಅಂತಹವರು ದಂಗೆಕೋರರು!

ಸರ್ಕಾರದ ನಿರ್ಲಕ್ಷ್ಯ, ನಿರ್ಲಿಪ್ತತೆ ಮತ್ತು ಅನ್ಯಾಯದ ವಿರುದ್ಧ ದನಿಯೆತ್ತುವುದು ತಪ್ಪೇ? ಪರಿಹಾರ ಕಾಣದ ತುತ್ತತುದಿಗೆ ಅವರನ್ನು ತಳ್ಳಿ ಈಗ ಅವರ ಮೇಲೆ ಆರೋಪಗಳ ಸರಮಾಲೆಯನ್ನು ಹೊರಿಸುತ್ತಿರುವ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯ ವಿರುದ್ಧ ದಂಗೆಯೇಳದೆ ಅವರಿಗೆ ಬೇರೆ ದಾರಿ ಏನಿದೆ?

ಮಲ್ಲಿಗೆ ಸಿರಿಮನೆ

ಮಲ್ಲಿಗೆ ಸಿರಿಮನೆ
ಕರ್ನಾಟಕ ಜನಶಕ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...