Homeಕರ್ನಾಟಕನಮ್ಮ ಸಚಿವರಿವರು; ಮತ್ತೆಮತ್ತೆ ಮಂತ್ರಿಯಾಗುವ ಭಾಗ್ಯದ ಎಚ್.ಕೆ.ಪಾಟೀಲ್; ಗದಗಕ್ಕೂ ಭಾಗ್ಯ ಒಲಿಯುವುದೇ?

ನಮ್ಮ ಸಚಿವರಿವರು; ಮತ್ತೆಮತ್ತೆ ಮಂತ್ರಿಯಾಗುವ ಭಾಗ್ಯದ ಎಚ್.ಕೆ.ಪಾಟೀಲ್; ಗದಗಕ್ಕೂ ಭಾಗ್ಯ ಒಲಿಯುವುದೇ?

- Advertisement -
- Advertisement -

ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಹನುಮಂತಗೌಡ ಕೃಷ್ಣೇಗೌಡ ಪಾಟೀಲ್ ಯಾನೆ ಎಚ್.ಕೆ.ಪಾಟೀಲ್ ಯಾನೆ ಎಚ್ಕೆಪಿ ಐದನೆ ಬಾರಿ ರಾಜ್ಯದ ಮಂತ್ರಿಯಾಗಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಆಯಕಟ್ಟಿನ ಸಚಿವ ಸ್ಥಾನಕ್ಕೇರಿರುವ ಎಚ್ಕೆಪಿಯವರಿಗೆ ಸಿದ್ದು ಸರಕಾರ-2ರಲ್ಲಿ ಮಂತ್ರಿಗಿರಿ ಸಿಗಲಾರದೆಂಬ ಚರ್ಚೆ ಸಂಪುಟ ರಚನೆಯ ಕೊನೆಯ ಹಂತದವರೆಗೂ ನಡೆಯುತ್ತಲೇ ಇತ್ತು. ಅವಿಭಜಿತ ಧಾರವಾಡ ಜಿಲ್ಲೆಯ ರಾಜಕಾರಣವನ್ನು ಪ್ರಭಾವಿಸಬಲ್ಲ ವರ್ಚಸ್ವೀ ಮುಂದಾಳೇನಲ್ಲದಿದ್ದರೂ ಬುದ್ಧಿಮತ್ತೆಯ ಕಸರತ್ತಿನಿಂದ ಕೆಪಿಸಿಸಿ-ಎಐಸಿಸಿ ವಲಯದಲ್ಲಿ ಆಶ್ರಯದಾತರನ್ನು ಕಂಡುಕೊಂಡಿರುವ ಎಚ್ಕೆಪಿ ಆ ಬಲದಿಂದಲೆ ಸಚಿವ ಸ್ಥಾನ ಗಿಟ್ಟಿಸಿದ್ದಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಎಂ ಸಿದ್ದು ಜತೆ ಸಮಾನಾಂತರದ ಸಖ್ಯ ಇಟ್ಟುಕೊಂಡಿರುವ ಎಚ್ಕೆಪಿ “ಹಣೆಬರಹ” ಸಂಪುಟ ರಚನೆಯ ಸಂದರ್ಭದ ಕೊನೆಯ ರಾತ್ರಿ ಬೆಳಗಾಗುವುದರಲ್ಲಿ ಬದಲಾಗಿದೆ.

ಗದಗದ “ಹುಲಕೋಟಿ ಹುಲಿ” ಎಂದು ಬಿರುದಾಂಕಿತರಾಗಿದ್ದ ಸಹಕಾರಿ ಧುರೀಣ ಕೆ.ಎಚ್.ಪಾಟೀಲರ ಮಗ ಎಚ್ಕೆಪಿ. 1960-1980ರ ಎರಡು ದಶಕದ ಉತ್ತರ ಕರ್ನಾಟಕದ ರಾಜಕೀಯದ ಕೇಂದ್ರಬಿಂದುವಾಗಿದ್ದ ಕೆ.ಎಚ್.ಪಾಟೀಲ್ ಮಂತ್ರಿ-ಕೆಪಿಸಿಸಿ ಅಧ್ಯಕ್ಷರಾಗುವ ಮೂಲಕ ರಾಜ್ಯ ರಾಜಕಾರಣದ ಮುಖ್ಯಭೂಮಿಕೆಯಲ್ಲೂ ರಾರಾಜಿಸಿದ್ದರು. 1970ರ ದಶಕದಲ್ಲಿ ಅಂದಿನ ಪ್ರಬಲ ಸಿಎಂ ದೇವರಾಜ ಅರಸರಿಗೆ ಸೆಡ್ಡು ಹೊಡೆದು ಸದ್ದು ಮಾಡಿದ್ದ ಕೆ.ಎಚ್.ಪಾಟೀಲ್ ಇಂದಿರಾ ಗಾಂಧಿ ವಿರೋಧಿ ಬಣದ (ರೆಡ್ಡಿ ಕಾಂಗ್ರೆಸ್) ರಾಜ್ಯಾಧ್ಯಕ್ಷರೂ ಆಗಿದ್ದರು. ನಾಮದ ರೆಡ್ಡಿ ಸಮುದಾಯದ ಕೆ.ಎಚ್.ಪಾಟೀಲ್ ಮಹತ್ವಾಕಾಂಕ್ಷೆಯ ಒಳ ಉದ್ದೇಶದಿಂದ ಗದಗದ ಶೈಕ್ಷಣಿಕ, ಸಹಕಾರಿ ವಲಯದಲ್ಲಿ ಒಂದಿಷ್ಟು ವಿದಾಯಕ ಕೆಲಸ-ಕಾರ್ಯ ಮಾಡುತ್ತಾ ಒಂದು ಹಂತದಲ್ಲಿ ಜಾತಿಯನ್ನು ಮೀರಿ ಬೆಳೆದಿದ್ದರು.

ಕೆ.ಎಚ್.ಪಾಟೀಲ್

ಆದರೆ 1978ರ ಚುನಾವಣಾ ಪೂರ್ವದ ರಾಜಕೀಯ ಚದುರಂಗದಲ್ಲಿ ಕೆ.ಎಚ್.ಪಾಟೀಲ್ ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿ ಹೊತ್ತುಕೊಳ್ಳುವಂತಾಯಿತು. ಲಿಂಗಾಯತ ಮೇಲರಿಮೆ ಧಿಕ್ಕರಿಸಿ ರೆಡ್ಡಿ ಸಮುದಾಯದ ಗುರು ಪೀಠ-ಮಠ ಕಟ್ಟಲು ಪ್ರಯತ್ನಿಸಿದ್ದು ಕೆ.ಎಚ್.ಪಾಟೀಲ್ ಅವರಿಗೆ ಚುನಾವಣಾ ರಾಜಕಾರಣದಲ್ಲಿ ಮುಳುವಾಯಿತೆನ್ನಲಾಗುತ್ತಿದೆ. 1978ರ ಅಸೆಂಬ್ಲಿ ಚುನಾವಣೆಯಲ್ಲಿ ಸೋಲನುಭವಿಸಿದ ಕೆ.ಎಚ್.ಪಾಟೀಲ್ 1985ರ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ ಸೇರಿಕೊಂಡು ಶಾಸಕರಾದರು. ಈ ಏಳು ವರ್ಷದ ಅಜ್ಞಾತವಾಸದಲ್ಲಿ ಕೆ.ಎಚ್.ಪಾಟೀಲ್ ತಮ್ಮ ಪುತ್ರ ಎಚ್ಕೆಪಿಗೆ ಕಾಂಗ್ರೆಸ್ ರಾಜಕಾರಣದ ದೀಕ್ಷೆ ಕೊಟ್ಟು ವಿಧಾನಪರಿಷತ್‌ನ ಪದವೀಧರ ಕ್ಷೇತ್ರದ ಅಖಾಡ ಹದ ಮಾಡಿಕೊಳ್ಳುವ ತರಬೇತಿ ನೀಡಿದರೆಂದು ಅಂದಿನ ರಾಜಕೀಯ ಆಟ ಕಂಡವರು ನೆನಪಿಸಿಕೊಳ್ಳುತ್ತಾರೆ.

ಬಿ.ಎಸ್ಸಿ-ಎಲ್‌ಎಲ್‌ಬಿ ಮಾಡಿಕೊಂಡು ಪತ್ರಕರ್ತ ಚಾಕರಿ ಮಾಡಿಕೊಂಡಿದ್ದ ಎಚ್ಕೆಪಿ ಮೊದಲು ಮಾಡಿದ್ದು ಕೈಯಿಂದ ಕಾಸು ಖರ್ಚುಮಾಡುತ್ತ ಪದವೀಧರರನ್ನು ಹುಡುಕಾಡಿ ಮತದಾರ ಪಟ್ಟಿಗೆ ಸೇರಿಸಿದ್ದು. ಎಚ್ಕೆಪಿ ಸಹಾಯದಿಂದ ಪರಿಷತ್ ಮತದಾರರಾಗಿದ್ದ ಪದವೀಧರರು ಸಹಜವಾಗೆ ಎಚ್ಕೆಪಿಗೆ ಋಣಿಯಾಗಿರುತ್ತಿದ್ದರು. ಅಂದಿನ ಅವಿಭಜಿತ ಧಾರವಾಡ ಜಿಲ್ಲೆ (ಇಂದಿನ ದಾರವಾಡ-ಹಾವೇರಿ-ಗದಗ ಜಿಲ್ಲೆಗಳು) ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ನಿರಾಯಾಸವಾಗಿ ಗೆಲ್ಲಲು ಬೇಕಾದಷ್ಟು ಪದವೀಧರ ಮತದಾರರ ನೊಂದಾಯಿಸಿಕೊಂಡಿದ್ದ ಎಚ್ಕೆಪಿ ಜತೆಗೇ ಜನತಾದಳದಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಇದೇ ರೀತಿಯ ತಂತ್ರಗಾರಿಕೆಯಿಂದ ಎಮ್ಮೆಲ್ಸಿಯಾಗುತ್ತಿದ್ದ ಬಸವರಾಜ ಹೊರಟ್ಟಿಯೊಂದಿಗೆ “ಮ್ಯಾಚ್ ಫಿಕ್ಸ್” ಮಾಡಿಕೊಳ್ಳುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ರಹಸ್ಯ. ಈ ಪರಸ್ಪರ ಸಹಕಾರದಿಂದ ಎಚ್ಕೆಪಿ ನಾಲ್ಕು ಸಲ ಎಮ್ಮೆಲ್ಸಿಯಾದರೆ, ಹೊರಟ್ಟಿ ಆರು ಬಾರಿ ಪರಿಷತ್ ಭಾಗ್ಯ ಕಂಡಿದ್ದಾರೆ. ಎಚ್ಕೆಪಿ ಮತ್ತು ಹೊರಟ್ಟಿ ಸ್ವಪಕ್ಷ ಮತ್ತು ವಿಪಕ್ಷದಲ್ಲಿ ತಮಗೆ ಪ್ರತಿಸ್ಪರ್ಧಿಗಳು ತಲೆ ಎತ್ತದಂತೆ ಷಡ್ಯಂತ್ರದ ರಾಜಕಾರಣ ಮಾಡಿದರೆಂಬ ಆರೋಪ ಇಂದಿಗೂ ಕೇಳಿಬರುತ್ತಿದೆ.

1984ರಲ್ಲಿ ವಿಧಾನಪರಿಷತ್ತಿಗೆ ಮೊದಲ ಪ್ರವೇಶ ಪಡೆದ ಎಚ್ಕೆಪಿ, ತಂದೆ ಕೆ.ಎಚ್.ಪಾಟೀಲರ ಕಣ್ಗಾವಲಿನಲ್ಲಿ ಎರಡು ಸಲ ಎಮ್ಮೆಲ್ಸಿಯಾಗಿದ್ದರು. ಸೀಮಿತ ಮತದಾರರ ರಣಾಂಗಣದಲ್ಲಿ ಅಂಗಿ ಕೊಳಕಾಗದ ಸುಲಭದ “ಹೋರಾಟ”ದಲ್ಲಿ ಗೆದ್ದು ಸತತ ಎರಡೂವರೆ ದಶಕಗಳ ಕಾಲ ಪರಿಷತ್ ಸದಸ್ಯರಾಗಿದ್ದ ಎಚ್ಕೆಪಿಯವರಿಗೆ, ಜತೆಜತೆಗೆ ಸಹಕಾರ ಮತ್ತಿತರ ಕ್ಷೇತ್ರದಲ್ಲಿ ಸ್ಥಾನ-ಮಾನವೂ ಪ್ರಾಪ್ತವಾಯಿತು; ಕಾಂಗ್ರೆಸ್ ವಲಯದ ಚಿಂತನ ಚಿಲುಮೆಯಲ್ಲೂ ತಮ್ಮ ಭೌದ್ಧಿಕ ಕೌಶಲ್ಯದಿಂದ ಗುರುತಿಸಿಕೊಂಡರು. ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಅಧ್ಯಯನ ವರದಿ ತಯಾರಿಸಿದರು; ಲೇಖನಗಳನ್ನು ಬರೆದರು. ತನ್ಮೂಲಕ ಕಾಂಗ್ರೆಸ್ ಮುಂಚೂಣಿ ನಾಯಕರಾಗಿ ಹೊರಹೊಮ್ಮಿದ ಎಚ್ಕೆಪಿಯವರಿಗೆ ಮಂತ್ರಿ ವರ ಪ್ರಥಮವಾಗಿ ಪ್ರಧಾನವಾಗಿದ್ದು ವೀರಪ್ಪ ಮೊಯ್ಲಿಯವರ ಪರ್ವದಲ್ಲಿ. ಅಂದು ಜವಳಿ ಖಾತೆಯ ಸಹಾಯಕ ಮಂತ್ರಿಯಾಗಿದ್ದ ಎಚ್ಕೆಪಿಯವರಿಗೆ 1994ರಲ್ಲಿ ಜನತಾ ಪರಿವಾರದ ಸರಕಾರ ಬಂದಾಗ ಕ್ಯಾಬಿನೆಟ್ ದರ್ಜೆಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಪಟ್ಟ ಕಟ್ಟಲಾಯಿತು.

ಬಸವರಾಜ ಹೊರಟ್ಟಿ

ಎಸ್‌ಎಂ ಕೃಷ್ಣ ಸರಕಾರದಲ್ಲಿ ಮಹತ್ವದ ಜಲ ಸಂಪನ್ಮೂಲ ಮತ್ತು ಕೃಷಿ ಇಲಾಖೆಗಳನ್ನು ನಿಭಾಯಿಸಿದ್ದ ಎಚ್ಕೆಪಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಕಾನೂನು-ಸಂಸದೀಯ ವ್ಯವಹಾರಗಳ ಮಂತ್ರಿಯಾಗಿದ್ದರು; ಜೆಡಿಎಸ್ ಯಜಮಾನ ಕುಮಾರಸ್ವಾಮಿ ಬಿಜೆಪಿ ಸಂಗಮಾಡಿ ಮುಖ್ಯಮಂತ್ರಿಯಾದಾಗ ಎಚ್ಕೆಪಿ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಪ್ರತಿಷ್ಠಾಪಿತರಾದರು. ಆದರೆ 2008ರ ಚುನಾವಣೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಕೇಸರಿ ತಂತ್ರಗಾರಿಕೆ ಎದುರಿಸಲಾಗದೆ ಎಚ್ಕೆಪಿ ಸೋತರು. ಅದೇ ವರ್ಷ ಜರುಗಿದ ಅಸೆಂಬ್ಲಿ ಚುನಾವಣೆಗೆ ತವರು ಕ್ಷೇತ್ರ ಗದಗದಿಂದ ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಯಿತು. ಕೆ.ಎಚ್.ಪಾಟೀಲರ ನಂತರ ಸತತ ಮೂರು ಬಾರಿ ಶಾಸಕನಾಗಿದ್ದ ದಾಯಾದಿ ಸಹೋದರ ಡಿ.ಆರ್.ಪಾಟೀಲರನ್ನು “ಕಡ್ಡಾಯ ನಿವೃತ್ತಿ” ಮಾಡಿಸಿ ಎಚ್ಕೆಪಿ ತಾವೇ ಅಖಾಡಕ್ಕೆ ಧುಮುಕಿದರು. ಎಚ್ಕೆಪಿಯವರಿಗೆ ಅಣ್ಣ ಡಿ.ಆರ್.ಪಾಟೀಲರಂತೆ ಜನಸಂಪರ್ಕವಿರಲಿಲ್ಲ; ಜತೆಗೆ ಬಹುಸಂಖ್ಯಾತ ಪಂಚಮಸಾಲಿ ಲಿಂಗಾಯತ ಪಂಗಡದ ಬಿಜೆಪಿ ಅಭ್ಯರ್ಥಿ ಶ್ರೀಶೈಲಪ್ಪ ಬಿದರೂರು ಎದುರಾಳಿ ಎಚ್ಕೆಪಿ ಲಿಂಗಾಯತರಲ್ಲ ಎಂಬ ಅಸ್ತ್ರ ಬಳಸಿದರು. ಹಾಗಾಗಿ ಎಚ್ಕೆಪಿ ಅಸೆಂಬ್ಲಿಯನ್ನು ಮುಂಬಾಗಿಲ ಮೂಲಕ ಪ್ರವೇಶಿಸುವ ಪ್ರಪ್ರಥಮ ಪ್ರಯತ್ನದಲ್ಲೇ ಎಡವಬೇಕಾಯಿತು ಎಂದು ಅಂದಿನ ಕಾಳಗ ಕಂಡವರು ಹೇಳುತ್ತಾರೆ.

ಇದನ್ನೂ ಓದಿ: ನಮ್ಮ ಸಚಿವರಿವರು; ಎರಡನೇ ಬಾರಿಗೆ ಮಂತ್ರಿ ಖಾತೆ ತೆರೆದ ವೀರಶೈವ ಲಿಂಗಾಯತ ಪ್ರಭಾವಿ ನಾಯಕ ಈಶ್ವರ್ ಖಂಡ್ರೆ

ಆನಂತರ ಬಹುಸಂಖ್ಯಾತ ಲಿಂಗಾಯತರ ವಿಶ್ವಾಸ ಗಳಿಸುವ ತಂತ್ರಗಾರಿಕೆಯನ್ನು ಎಚ್ಕೆಪಿ ತುಂಬ ನಾಜೂಕಾಗಿ ಮಾಡಿದರು; ಅಪ್ಪನಿಂದ ಬಂದಿದ್ದ ಲಿಂಗಾಯತ ವಿರೋಧಿ ಎಂಬ ಇಮೇಜ್‌ನಿಂದ ಹೊರಬರಲು ಪ್ರಯತ್ನಿಸಿದರು. ಉತ್ತರ ಕರ್ನಾಟಕದ ರೆಡ್ಡಿ ಸಮುದಾಯದ ಪ್ರತಿಷ್ಠೆಯ ಮುಂದಾಳಾಗಿ ಹೊರಹೊಮ್ಮಿದ್ದ ಎಚ್ಕೆಪಿಯವರಿಗೆ ಈ ಭಾಗದ ರೆಡ್ಡಿಗಳು ಲಿಂಗಾಯತರೊಂದಿಗೆ ಗುರುತಿಸಿಕೊಳ್ಳುವ ತುಡಿತದಲ್ಲಿರುವುದು ವರವಾಯಿತು. 2013ರ ವಿಧಾನಸಭಾ ಹಣಾಹಣಿಯಲ್ಲಿ ಎಚ್ಕೆಪಿ ಜಯಗಳಿಸಿದರಷ್ಟೇ ಅಲ್ಲ, ಸಿದ್ದು ಸರಕಾರ-1ರಲ್ಲಿ ತೂಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಮಂತ್ರಿಯೂ ಆದರು. ಗ್ರಾಮೀಣ ಭಾಗದ ಪ್ರಗತಿಯ ಹೊಣೆಯ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದ ಎಚ್ಕೆಪಿ ಸತತ ನಾಲ್ಕು ವರ್ಷ ಕೇಂದ್ರ ಸರಕಾರ ಕೊಡುವ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಪ್ರಶಸ್ತಿಗೆ ಭಾಜನರಾಗಿದ್ದರು. ಈಗ ಕರ್ನಾಟಕ ಕಾಂಗ್ರೆಸ್‌ನ ಮುಂಚೂಣಿ ಮುತ್ಸದ್ಧಿಯಾಗಿರುವ 69ರ ಹರೆಯದ ಹಿರಿಯ ಮತ್ತೆ ಸಿದ್ದು ಸರಕಾರ-2ರಲ್ಲಿ ಸಚಿವರಾಗಿದ್ದಾರೆ.

ಎಚ್ಕೆಪಿ ಕಳೆದ ಮೂರು ದಶಕದಿಂದ ಮತ್ತೆಮತ್ತೆ ಮಂತ್ರಿ ಆಗುತ್ತಿದ್ದಾರೆ; ವಿರೋಧ ಪಕ್ಷದ ನಾಯಕನಂಥ ಆಯಕಟ್ಟಿನ ಪೀಠವೇರಿ ಇಳಿದಿದ್ದಾರೆ. ಈ ಮೂವ್ವತ್ತು ವರ್ಷದಲ್ಲಿ ಎಚ್ಕೆಪಿಯ ರಾಜಕೀಯ ಜೀವನದ ಭಾಗ್ಯದ ಬಾಗಿಲು ತೆರೆದುಕೊಂಡೇ ಇದೆ. ಆದರೆ ಎಚ್ಕೆಪಿ ಈಗ ಪ್ರತಿನಿಧಿಸುತ್ತಿರುವ ಗದಗ ಅಥವಾ ಹಿಂದೆ ಪ್ರತಿನಿಧಿಸಿದ್ದ ಅವಿಭಜಿತ ಧಾರವಾಡ ಜಿಲ್ಲೆಗೆ ಅಥವಾ ಉತ್ತರ ಕರ್ನಾಟಕಕ್ಕೆ ಅವರ ಕೊಡುಗೆ ನಿರೀಕ್ಷೆಯ ಪ್ರಮಾಣದಲ್ಲಿ ಇಲ್ಲವೆಂಬ ಬೇಸರ ಆ ಭಾಗದ ಜನಮಾನಸದಲ್ಲಿದೆ. ಜಲಸಂಪನ್ಮೂಲ ಮಂತ್ರಿಯಾಗಿದ್ದಾಗಲೂ ಎಚ್ಕೆಪಿ ಉತ್ತರ ಕರ್ನಾಟಕ ಮತ್ತು ಗದಗಕ್ಕೆ ಬೇಕಾದ ನೀರಾವರಿ ಯೋಜನೆ ಅನುಷ್ಠಾನ-ಮಂಜೂರಿಗೆ ಗಂಭೀರ ಪ್ರಯತ್ನ ಮಾಡಲಿಲ್ಲವೆನ್ನಲಾಗಿದೆ. ಗದಗಕ್ಕೆ ಇವತ್ತಿಗೂ ಕುಡಿಯುವ ನೀರಿನ ಯೋಜನೆ ಮೃಗಜಲದಂತಾಗಿದೆ. ನೇಕಾರರ ತವರಿನಂತಿರವ ಗದಗದಲ್ಲಿ ನೇಕಾರಿಕೆ ಕಾರಿಡಾರ್ ಶುರುಮಾಡುವ ಆಸೆ ಮೂಡಿಸಲಾಗಿತ್ತು; ಆದರದು ಕೈಗೂಡಿಲ್ಲವೆಂದು ನೊಂದ ನೇಕಾರರು ಹೇಳುತ್ತಾರೆ. ಗದಗ ಜಿಲ್ಲೆಯಲ್ಲಿ ಬದುಕು ಕಟ್ಟಿಕೊಳ್ಳಲಾಗದೆ ಲಂಬಾಣಿ ಮುಂತಾದ ತಳ ಸಮುದಾಯದ ಮಂದಿ ಗೋವಾ-ಉಡುಪಿ-ದಕ್ಷಿಣ ಕನ್ನಡದತ್ತ ಗುಳೆ ಹೋಗುತ್ತಿದ್ದಾರೆ.

ಡಿ.ಆರ್.ಪಾಟೀಲ

ಕೈಗಾರಿಕೆ, ನೀರಾವರಿಗೆ ಮೊದಲ ಪ್ರಾಶಸ್ತ್ಯ ಕೊಟ್ಟು ಉದ್ಯೋಗ ಸೃಷ್ಟಿಸುವ ಮೂಲಕ ಜನರ ಬದುಕನ್ನು ಸಹ್ಯಗೊಳಿಸುವ ದೂರದರ್ಶಿತ್ವದ ನಾಯಕನಿಗಾಗಿ ಗದಗ ಜಿಲ್ಲೆ ಹಂಬಲಿಸುತ್ತಿದೆ. ಗದಗ ಜಿಲ್ಲೆ ರಚನೆಯಾಗಿ ಎರಡೂವರೆ ದಶಕ ಉರುಳಿದರೂ ಅದಿನ್ನೂ ದೊಡ್ಡ ಹಳ್ಳಿಯಂತಿದೆ; ಮೆಡಿಕಲ್ ಕಾಲೇಜು ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಂಥ ಸರ್ಕಾರಿ ಸ್ಥಾವರ ಬಿಟ್ಟರೆ ಮೂಲಸೌಕರ್ಯಗಳಿಗಿನ್ನೂ ಜನರು ಪರದಾಡಬೇಕಾಗಿದೆ. ಐವ್ವತ್ತೈದು ವರ್ಷಗಳ ರಾಜಕಾರಣದಲ್ಲಿ ಗದಗಿನ ಪಾಟೀಲ್ ಪರಿವಾರದ ಕುಡಿಗಳು ಹುಲಕೋಟಿಗಷ್ಟೇ ಹುಲಿಗಳಾದರೇ ಹೊರತು ಜಿಲ್ಲೆಯ ಉಳಿದೆಡೆ ಹೆಜ್ಜೆಗುರುತು ಮೂಡಿಸಲಿಲ್ಲ. ಬಹುಶಃ ರಾಜಕಾರಣದ ಕೊನೆಯ ಹಂತದಲ್ಲಿರುವ ಎಚ್ಕೆಪಿ ಈಗಲಾದರೂ ದಿಲ್ಲಿ-ಬೆಂಗಳೂರಿನ ಪವರ್ ಪಾಲಿಟಿಕ್ಸ್ ಗುಂಗಿಂದ ಹೊರಬಂದು ಜನರ ಆಸೆ-ಅನಿಸಿಕೆ-ಆಕಾಂಕ್ಷೆಗಳಿಗೆ ಸ್ಪಂದಿಸಬೇಕಾಗಿದೆ ಎಂಬ ಮಾತು ಸಾಮಾನ್ಯವಾಗಿದೆ.

ಎಚ್ಕೆಪಿ ತಾವೀಗ ಪಡೆದಿರುವ ಕಾನೂನು ಇಲಾಖೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಜರೂರಿದೆ; ಹಿಂದುತ್ವದ ಪ್ರಯೋಗ ಶಾಲೆ ಎನ್ನಲಾಗಿರುವ ಕರಾವಳಿಯಲ್ಲಾ ಅನೈತಿಕ ಪೊಲೀಸ್‌ಗಿರಿಯಿಂದ ಮಾನವ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ; ಹಿಂದುತ್ವದ ವಾಟ್ಸ್ ಅಪ್ ಯೂನಿವರ್ಸಿಟಿಗಳ ಹಾವಳಿ ಈ ನೆಲದ ಕಾನೂನಿಗೆ ಸವಾಲಾಗಿದೆ. ಕರಾವಳಿಯ ಕರಾಳ ಮತಾಂಧತೆ ಉಳಿದೆಡೆ ಹಬ್ಬಬಾರದೆಂದಿದ್ದರೆ ದಕ್ಷಿಣ ಕನ್ನಡದ ಧರ್ಮೋನ್ಮಾದಕ್ಕೆ ಕಡಿವಾಣ ಹಾಕಬೇಕಿದೆ. ಇವೆಲ್ಲವನ್ನೂ ಎಚ್ಕೆಪಿಯವರು ಗಂಭೀರವಾಗಿ ಪರಿಗಣಿಸಿ ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಲು ಶ್ರಮಿಸಬೇಕಿದೆ. ಹೆಚ್ಚುವರಿಯಾಗಿ ನಿಭಾಯಿಸಬೇಕಿರುವ ಪ್ರವಾಸೋದ್ಯಮ ಖಾತೆಯೂ ಪ್ರಮುಖವಾಗಿದ್ದು, ರಾಜ್ಯದೆಲ್ಲೆಡೆ ಶಾಂತಿ ನೆಲೆಸುವಂತೆ ಮಾಡಿ ಕರ್ನಾಟಕವನ್ನು ಪ್ರವಾಸೋದ್ಯಮದ ಹಾಟ್‌ಸ್ಪಾಟ್ ಮಾಡುವ ಹೊಣೆಯೂ ಅವರ ಮೇಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...