ಮಣಿಪುರವು ಜನಾಂಗೀಯ ದ್ವೇಷದ ಜ್ವಾಲೆಯಲ್ಲಿ ಬೇಯುತ್ತಿದೆ. ಇಂತಹ ಈ ಸಂದರ್ಭದಲ್ಲಿ ಒಂದು ಜನಾಂಗ ನಿಷೇಧ ಹೇರಿದ್ದ ಹಿಂದಿ ಸಿನಿಮಾವನ್ನು ಇನ್ನೊಂದು ಜನಾಂಗದವರು ಪ್ರದರ್ಶಿಸಿದ್ದಾರೆ. ಮಣಿಪುರದಲ್ಲಿ ಸುಮಾರು 23 ವರ್ಷಗಳ ಬಳಿಕ ಹಿಂದಿ ಸಿನಿಮಾವೊಂದು ಪ್ರದರ್ಶನ ಕಂಡಿದೆ.
ಮೈತಿ ಸಮುದಾಯದವರು ಮಣಿಪುರದಲ್ಲಿ ಹಿಂದಿ ಸಿನಿಮಾಗೆ ನಿಷೇಧ ಹೇರಿದ್ದರು. ಆದರೆ ಇದೀಗ ಕುಕಿ ಸಮುದಾಯದವರು ‘ಉರಿ: ದಿ ಸರ್ಜಿಕಲ್ ಸ್ಟೈಕ್’ ಸಿನಿಮಾವನ್ನು ಚುರ್ಚಾಂದಪುರದ ರೆಂಗ್ ಎಂಬಲ್ಲಿ ತೆರೆದ ಸಿನಿಮಾ ಮಂದಿರದಲ್ಲಿ ಪ್ರದರ್ಶಿಸಿದ್ದಾರೆ. ಚಿತ್ರ ವೀಕ್ಷಣೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು.
ಮಣಿಪುರದಲ್ಲಿ ಹಿಂದಿ ಸಿನಿಮಾ ಪ್ರದರ್ಶನಕ್ಕೆ ಮೈತಿ ಹಾಗೂ ನಾಗಗಳ ಸಂಘಟನೆಯಾದ ‘ರೆವೆಲ್ಯೂಷನರಿ ಪೀಪಲ್ಸ್ ಫ್ರೆಂಟ್’ ನಿಷೇಧ ಹೇರಿತ್ತು. ಹಿಂದಿ ಸಿನಿಮಾ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ 2000ನೇ ಇಸವಿಯ ಸೆಪ್ಟೆಂಬರ್‌ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಕುಕಿ ಸಮುದಾಯದ ಸಂಘಟನೆಯಾದ ‘ಮಾರ್ ವಿದ್ಯಾರ್ಥಿ ಒಕ್ಕೂಟ’ವು ಮಂಗಳವಾರ ಸಿನಿಮಾ ಪ್ರದರ್ಶನವನ್ನು ಆಯೋಜಿಸಿತ್ತು. 23ವರ್ಷಗಳ ಹಿಂದೆ ರೆವೆಲ್ಯೂಷನರಿ ಪೀಪಲ್ಸ್ ಫ್ರೆಂಟ್ ತೆಗೆದುಕೊಂಡ ನಿರ್ಧಾರಕ್ಕೆ ವಿರುದ್ಧವಾಗಿ ಈ ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿತ್ತು.
ಈ ಬಗ್ಗೆ ಕುಕಿ ಜನಾಂಗದ ಬೆಂಬಲಿತ ಸಂಘಟನೆ ‘ಇಂಡಿಜೀನಿಯಸ್ ಟ್ರೈಬಲ್ ಲೀಸರ್ಡ್ ಫೋರಂ’ನ ವಕ್ತಾರ ಗಿಂಜಾ ವುಲಾಜೋಂಗ್ ಮಾತನಾಡಿದ್ದು, ”ನಮ್ಮಊರಿನಲ್ಲಿ ಹಿಂದಿ ಸಿನಿಮಾ ಪ್ರದರ್ಶನವಾಗಿ ಎರಡು ದಶಕಗಳು ಕಳೆದಿದ್ದವು. ಸುಮಾರು ವರ್ಷಗಳಿಂದ ಮೈತಿಗಳು ಹಿಂದಿ ಸಿನಿಮಾಗೆ ನಿಷೇಧ ಹೇರಿದ್ದರು. ಮೈತೇಯಿ ಗುಂಪುಗಳ ದೇಶ ವಿರೋಧಿ ನೀತಿಗಳನ್ನು ಧಿಕ್ಕರಿಸುವ ಹಾಗೂ ದೇಶದ ಮೇಲೆ ನಮ್ಮ ಪ್ರೀತಿಯನ್ನು ತೋರಿಸುವ ಸಲುವಾಗಿ ಸಿನಿಮಾ ಪ್ರದರ್ಶನ ಮಾಡಿದ್ದೇವೆ” ಎಂದು ಹೇಳಿದ್ದಾರೆ.
ರಾಜ್ಯ ರಾಜಧಾನಿ ಇಂಫಾಲದಿಂದ 63 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದ್ದು, ಸಿನಿಮಾ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಡಲಾಯಿತು.
ಮಣಿಪುರದಲ್ಲಿ ಮೇ 3 ರಿಂದ ಆರಂಭವಾದ ಜನಾಂಗೀಯ ಸಂಘರ್ಷದಲ್ಲಿ ಈವರೆಗೂ 180ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 60 ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ: ಮಣಿಪುರ, ಹರಿಯಾಣದಂತೆ ದೇಶದೆಲ್ಲೆಡೆ ಸಂಘರ್ಷ ಮುಂದುವರಿದರೆ ಭಾರತ ಹೇಗೆ ವಿಶ್ವಗುರುವಾಗುತ್ತದೆ?: ಕೇಜ್ರಿವಾಲ್


