ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಅನರ್ಹರಾಗಿದ್ದ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್‌ನಲ್ಲಿ ಬಿಗ್ ರಿಲೀಫ್ ಸಿಕ್ಕಿದ್ದು, ಹೈಕೋರ್ಟ್ ನೀಡಿದ್ದ ಅನರ್ಹತೆ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ ಅವರ ನೇತೃತ್ವದ ಪೀಠ ಪ್ರಜ್ವಲ್ ರೇವಣ್ಣ ಅನರ್ಹತೆಗೆ ತಡೆ ನೀಡಿ ಆದೇಶ ನೀಡಿದೆ.
ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಶಾಸಕ ಎ. ಮಂಜು, ದೇವರಾಜೇಗೌಡ ಅವರು ಪ್ರಜ್ವಲ್ ಆಯ್ಕೆ ಪ್ರಶ್ನಿಸಿ ಹೈಕೋರ್ಟ್ ಗೆ ಮೊರೆ ಹೋಗಿದ್ದರು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸೆ.1ರಂದು ಪ್ರಜ್ವಲ್ ರೇವಣ್ಣಗೆ ಸಂಸದ ಸ್ಥಾನದಿಂದ ಅನರ್ಹರನ್ನಾಗಿ ಮಾಡಿ ಆದೇಶಿಸಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಎ.ಮಂಜು ಅವರನ್ನು 1.4 ಲಕ್ಷ ಮತಗಳಿಂದ ಸೋಲಿಸಿದ್ದರು. ಹಾಸನ ಕ್ಷೇತ್ರದ ಮತದಾರರೂ ಆಗಿರುವ ವಕೀಲ ಜಿ.ದೇವರಾಜೇಗೌಡ ಮತ್ತು ಪರಾಜಿತ ಅಭ್ಯರ್ಥಿ ಎ.ಮಂಜು ಅವರು ಪ್ರಜ್ವಲ್ ಆಯ್ಕೆ ಪ್ರಶ್ನಿಸಿ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣಪತ್ರದಲ್ಲಿ ಆಸ್ತಿ ವಿವರಗಳ ಬಗ್ಗೆ ಪ್ರಜ್ವಲ್ ರೇವಣ್ಣ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಇದನ್ನು ಓದಿ: ಹೊಸ ಸಂಸತ್‌ಗೆ ಹೋದರೆ ಹೊಸದೇನೂ ಆಗುವುದಿಲ್ಲ: ಮಲ್ಲಿಕಾರ್ಜುನ್ ಖರ್ಗೆ


