ಸಿಖ್ ಪ್ರತ್ಯೇಕತವಾದಿ ನಾಯಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ ಬಗ್ಗೆ ಕೆನಡಾ ಆರೋಪಿಸಿತ್ತು. ಇದರಿಂದ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು. ಇದಾದ ಕೆಲವೇ ತಿಂಗಳಲ್ಲಿ ಅಮೆರಿಕಾದಲ್ಲಿ ಇನ್ನೋರ್ವ ಸಿಖ್ ಪ್ರತ್ಯೇಕತವಾದಿ ನಾಯಕ ಪನ್ನೂನ್ ಹತ್ಯೆ ಸಂಚು ಆರೋಪ ಕೂಡ ಭಾರತದ ಮೇಲೆ ಹೊರಿಸಲಾಗಿತ್ತು. ಇದೀಗ ಭಾರತದ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ.
ಬ್ರಿಟನ್‌ನಲ್ಲಿ ನೆಲೆಸಿರುವ ಖಲಿಸ್ತಾನ್ ಪರ ಹೋರಾಟಗಾರ ಅವತಾರ್ ಸಿಂಗ್ ಖಾಂಡಾ ಜೂನ್‌ನಲ್ಲಿ ಮೃತಪಟ್ಟಿದ್ದಾರೆ. ಆದರೆ ಅವತಾರ್ ಸಿಂಗ್ ಖಾಂಡಾ ಅವರು ತನ್ನ ಸಾವಿಗೆ ಕೆಲವೇ ತಿಂಗಳುಗಳ ಮೊದಲು, ಭಾರತೀಯ ಪೊಲೀಸರು ನನಗೆ ಕಿರುಕುಳ ನೀಡಿದ್ದಾರೆ. ಪಂಜಾಬ್‌ನಲ್ಲಿರುವ ತಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಅವತಾರ್ ಸಿಂಗ್ ಖಾಂಡಾ ಪ್ರತ್ಯೇಕತಾವಾದಿ ಸಿದ್ಧಾಂತದೊಂದಿಗೆ ಯುಕೆಯಲ್ಲಿ ಸಿಖ್ ಯುವಕರನ್ನು ತೀವ್ರಗಾಮಿಗಳಾನ್ನಾಗಿಸುತ್ತಿದ್ದಾರೆ ಎಂದು ಭಾರತೀಯ ತನಿಖಾ ಏಜೆನ್ಸಿಗಳು ಖಾಂಡಾ ವಿರುದ್ಧ ಆರೋಪಿಸಿದೆ. ಖಲಿಸ್ತಾನಿ ಪರ ಗುಂಪುಗಳ ಪ್ರತಿಭಟನೆಯ ಸಂದರ್ಭದಲ್ಲಿ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಅವತಾರ್ ಸಿಂಗ್ ಖಾಂಡಾ ಓರ್ವನಾಗಿದ್ದ ಎನ್ನಲಾಗಿದೆ.
ಗಾರ್ಡಿಯನ್‌ನ ಪ್ರಕಾರ, ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವತಾರ್ ಸಿಂಗ್ ಖಾಂಡಾ ಯುಕೆಯ ಬರ್ಮಿಂಗ್ಹ್ಯಾಮ್‌ನಲ್ಲಿರುವ ಆಸ್ಪತ್ರೆಗೆ ದಾಖಲಾದ 4 ದಿನಗಳಲ್ಲಿ ಅಂದರೆ ಜೂ.15 ರಂದು ನಿಧನರಾಗಿದ್ದರು. ಅವನ ಸಹವರ್ತಿಗಳು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.
ಈ ಬಗ್ಗೆ ದಿ ಗಾರ್ಡಿಯನ್ ವರದಿಗಳು ಬ್ರಿಟನ್ ಪೊಲೀಸರು ಈ ವಿಚಾರಕ್ಕೆ ಸಂಬಂಧಿಸಿ ಪತ್ರಿಕಾ ಮಾಧ್ಯಮಕ್ಕೆ ನೀಡುವ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ ಮತ್ತು ಈ ವಿಷಯವನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗಿದೆ ಎಂದು ಹೇಳಿದೆ. ಆದರೆ ಖಾಂಡಾ ಅವರ ಸ್ನೇಹಿತರು, ಸಿಖ್ ಕಾರ್ಯಕರ್ತರು ಮತ್ತು ಕುಟುಂಬದ ಸದಸ್ಯರಿಗೆ ತನಿಖೆಯ ಬಗ್ಗೆ ಸಮಾಧಾನವಿರಲಿಲ್ಲ.
ಖಾಂಡಾ ಅವರ ಮರಣದ ಸಂಭವಿಸಿದ ಕೆಲವೇ ದಿನಗಳಲ್ಲಿ ವ್ಯಾಂಕೋವರ್‌ನಲ್ಲಿ ಕೆನಡಾದ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆ ನಡೆದಿದೆ. ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಭಾರತ ಸರ್ಕಾರ ಎದುರಿಸುತ್ತಿದೆ. ಇದಲ್ಲದೆ ಅಮೆರಿಕಾದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಭಾರತ ವಿಫಲವಾದ ಸಂಚನ್ನು ರೂಪಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಉನ್ನತ ಮಟ್ಟದ ತನಿಖೆಗೆ ಸಮಿತಿ ಕೂಡ ಭಾರತ ರಚಿಸಿದೆ.
ದಿ ಗಾರ್ಡಿಯನ್‌ನ ಪ್ರಕಾರ, ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಸಾವಿನ ತನಿಖೆ ನಡೆಸಿದ್ದರು ಎಂಬ ಅಧಿಕೃತ ಹೇಳಿಕೆಗಳಿಗೆ ಖಂಡಾ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ವಿರೋಧಿಸಿದ್ದಾರೆ. ಪೊಲೀಸರು ಅವರ ಮರಣದ ನಂತರ ಸ್ನೇಹಿತರು ಮತ್ತು ಕುಟುಂಬದವರಿಂದ ಹೇಳಿಕೆಗಳನ್ನು ತೆಗೆದುಕೊಳ್ಳಲಿಲ್ಲ, ಅವರು ಕೆಲಸ ಮಾಡುವಲ್ಲಿ ಸಹೋದ್ಯೋಗಿಗಳೊಂದಿಗೆ ಮಾತನಾಡಲಿಲ್ಲ, ಅವರ ನಿವಾಸಕ್ಕೆ ಭೇಟಿ ನೀಡಲಿಲ್ಲ ಅಥವಾ ಅವರಿಗೆ ಬಂದ ಬೆದರಿಕೆಗಳ ಬಗ್ಗೆ ತನಿಖೆ ನಡೆಸಿಲ್ಲ ಎಂದು ಹೇಳಿದ್ದಾರೆ.
ಪಂಜಾಬ್ ಪೊಲೀಸರು ಖಂಡಾ ಅವರನ್ನು ಸಿಖ್ ಪ್ರತ್ಯೇಕತಾವಾದಿ, ವಾರಿಸ್ ಪಂಜಾಬ್ ನಾಯಕ ಅಮೃತಪಾಲ್ ಸಿಂಗ್‌ನ ಆಪ್ತ ಎಂದು ಹೇಳಿಕೊಂಡಿದ್ದಾರೆ. ಆತನ ಕುಟುಂಬ ಈ ಸಂಬಂಧವನ್ನು ನಿರಾಕರಿಸಿದೆ. ಅಮೃತಪಾಲ್ ಸಿಂಗ್ ಪರಾರಿಯಾಗಿರುವಾಗ ಖಾಂಡಾ ಅವರ ತಾಯಿ ಮತ್ತು ಸಹೋದರಿಯನ್ನು ಪಂಜಾಬ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಪೋಲಿಸ್ ಠಾಣೆಯಲ್ಲಿ ಯುಕೆಯಲ್ಲಿರುವ ಖಾಂಡಾಗೆ ಕರೆ ಮಾಡಲು ತನ್ನ ಫೋನ್‌ನ್ನು ಬಳಸಿದ್ದಾರೆ. ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಖಾಂಡಾ ಸಹೋದರಿ ಆರೋಪಿಸಿದ್ದಾರೆ.
ಖಂಡಾ ಅವರು ಏಪ್ರಿಲ್‌ನಲ್ಲಿ ತಮ್ಮ ವೈಯಕ್ತಿಕ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಭಾರತೀಯ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ. ವಿವಿಧ ಪೊಲೀಸ್ ಠಾಣೆಗಳಿಂದ ನನಗೆ ಕರೆಗಳು ಬರುತ್ತಿವೆ ಮತ್ತು ಅವರು ಅಮೃತಪಾಲ್ ಸಿಂಗ್ ಎಲ್ಲಿದ್ದಾರೆ? ಎಂದು ಪ್ರಶ್ನಿಸುತ್ತಿದ್ದಾರೆ ಎಂದು ವೀಡಿಯೊದಲ್ಲಿ ಹೇಳಿದ್ದರು.
ಇದನ್ನು ಓದಿ: ಮಾಜಿ ಶಾಸಕ ಮುಖ್ತಾರ್ ಹತ್ಯೆಗೆ ಸಂಚು? ಯುಪಿ ಜೈಲಿನಿಂದ ಸ್ಥಳಾಂತರಿಸುವಂತೆ ಸುಪ್ರೀಂ ಮೊರೆ


